ಫಾತಿಮಾ ರಲಿಯಾ
—-
ಹಾಳೆಯಿಂದ ಎದ್ದು ಬಂದ
ಸುಡು ಸುಡು ರೊಟ್ಟಿಯಂಥಾ
ಕವಿತೆ
ನನ್ನೊಂದಿಗೆ ಮಾತಿಗಿಳಿದಿತ್ತು
ಯಾವ ರೈತ ಬೆಳೆದ
ಅಕ್ಕಿಯ ರೊಟ್ಟಿಯೋ!
ಯಾವ ಕಾವಲಿಯ ಒಡಲ ಸಿಟ್ಟೋ!
ಯಾವ ಮಹಾ ತಾಯಿಯ ಕಣ್ಣೀರೋ!
ರೊಟ್ಟಿ ಅಲ್ಲಲ್ಲಿ ತುಸು ನಲುಗಿದಂತೆ
ಕಾಣುತ್ತಿತ್ತು
ಹಾಳೆಯಿಂದ ಅಂಗೈಗೆ
ಅಲ್ಲಿಂದ ಹೃದಯಕ್ಕೆ
ಹೃದಯದಿಂದ ಮೆದುಳಿಗೆ
ಹೋದಲ್ಲೆಲ್ಲಾ ಗೀರು ಗಾಯ
ಮೇಲೊಂದಿಷ್ಟು ಉಪ್ಪು ಸುರಿದ ಭಾವ
ಗಾಯದ ಮೇಲೆ ಕೈ ಇಟ್ಟರೆ
ಕವಿತೆ ರಚ್ಚೆ ಹಿಡಿಯುತ್ತಿತ್ತು
ಎತ್ತಿಕೋ ಎಂದು
ಥೇಟು ಮಗಳಂತೆ!

ನಾನೋ? ಪುಕ್ಕಲಿ
ಕೈ ಸುಟ್ಟರೆ? ಬೆಂದರೆ?
ಚರ್ಮ ಕಿತ್ತು ಬಂದರೆ?
ಹೆಗಲನ್ನೇ ಬಂದೂಕಾಗಿಸಿಕೊಂಡರೆ?
ಎಷ್ಟೊಂದು ಅಂಜಿಕೆಗಳು!
ನನ್ನ ಪುಕ್ಕಲುತನವ ನೋಡಿ
ಕಡುವಿಷಾದ ಮೈವೆತ್ತಿದಂತೆ
ದಿಗ್ಭ್ರಾಂತ ಕವಿತೆ
ನೆತ್ತಿಯ ಮೇಲೆ ಪಟಪಟನೆ
ರೆಕ್ಕೆ ಬಡಿದು ಹಾರಿತು ದಿಗಂತದತ್ತ
ಚಿಟ್ಟೆಯಂತೆ
ಗುಬ್ಬಚ್ಚಿಯಂತೆ
ಹದ್ದಿನಂತೆ
ಈಗ ಎಷ್ಟೊಂದು ಆಕಾರಗಳು
ರೊಟ್ಟಿಯಂಥಾ ಕವಿತೆಗೆ






0 Comments