ಪ ಸ ಕುಮಾರ್ ರ ಚಿತ್ರಗಳ ಪ್ರಯೋಗಕ್ಕೀಗ 25 ವಸಂತ!..

ಸಂಕೇತ್‍ ಗುರುದತ್

‘ವಿಶ್ವ ಕಲಾ ದಿನ’ದ ಪ್ರಯುಕ್ತ ಲೇಖನ:
ಪ.ಸ. ಕುಮಾರ್‌ರ ಎಡಗೈ ಚಿತ್ರಗಳ ಪ್ರಯೋಗಕ್ಕೀಗ 25 ವಸಂತ!
ಇಂದು ‘ವರ್ಲ್ಡ್‌ ಆರ್ಟ್ ಡೇ’, ‘ವಿಶ್ವ ಕಲಾದಿನ’ ಎಂದು ಆಚರಿಸುತ್ತಿದ್ದಾರೆ. ಜಗತ್ತು ಕಂಡ ಶ್ರೇಷ್ಠ ಕಲಾಕಾರ ಲಿಯೋನಾರ್ಡೋ ಡಾ ವಿಂಚಿಯ ಹುಟ್ಟಿದದಿನವನ್ನೇ ಈ `ವಿಶ್ವ ಕಲಾ ದಿನ’ವೆಂದು ಯುನೆಸ್ಕೋ ತೀರ್ಮಾನಿಸಿದೆ. ಅಂತಾರಾಷ್ಟ್ರೀಯ ಕಲಾ ಸಂಘಟನೆಯ ತೀರ್ಮಾನದಂತೆ ಈ ಆಚರಣೆಯನ್ನು ಮೊದಲ ಬಾರಿಗೆ 2012ರ ಏಪ್ರಿಲ್ 15ರಂದು ಜಾರಿಗೆ ತರಲಾಯಿತು. ದಶಕ ಮುಗಿಸಿ ಹನ್ನೊಂದನೇ ವರ್ಷಕ್ಕೆ ಕಾಲಿಟ್ಟಿದ್ದೀವಿ.

ಈ ‘ವಿಶ್ವ ಕಲಾ ದಿನ’ದ ಪ್ರಯುಕ್ತ ನಾಡಿನ ಹೆಸರಾಂತ ಪ.ಸ. ಕುಮಾರ್ ಅವರ ಸಾಧನೆಯ ಬಗ್ಗೆ ತಿಳಿಸಬೇಕೆನಿಸಿದೆ. ಇವರ ಕಲಾಕೃತಿಗಳನ್ನು ಹಾಗೂ ಡ್ರಾಯಿಂಗ್‍ಗಳನ್ನು ನೋಡಿದವರಿಗೆ ಅವರ ವಿಶೇಷ ಪ್ರಯೋಗವಾದ ಎಡಗೈ ಚಿತ್ರಗಳ ಬಗ್ಗೆ ಇಲ್ಲಿ ಹಂಚಿಕೊಂಡಿದ್ದೀನಿ.

ಈ ಹಿಂದೆ ನಾಡಿನ ಖ್ಯಾತ ಬರಹಗಾರರಾದ ತಿರು ಶ್ರೀಧರ್ ಅವರು ಪ.ಸ. ಕುಮಾರ್ ಅವರ ಎಡಗೈ ಚಿತ್ರಗಳ ಹುಟ್ಟು ಹಾಗೂ ಅವುಗಳ ರಚನೆ ಹಾಗೂ ಪ್ರಯೋಗಗಳ ಬಗ್ಗೆ ಬರೆದಿದ್ದರು. ಅದರ ಮುಂದಿನ ಭಾಗ ಇದಾಗಿದೆ!

ಮಾಮೂಲಾಗಿ ಬಲಗೈ ಅಥವಾ ಎಡಗೈನಲ್ಲಿ ಚಿತ್ರ ಬರೆಯುವುದು ವಾಡಿಕೆ. ಆದರೆ ನಮ್ಮ ನಾಡಿನ ಹಿರಿಯ ಚಿತ್ರ ಕಲಾವಿದರಾದ ಪ.ಸ. ಕುಮಾರ್‌ ಅವರು ಎರಡೂ ಕೈಗಳಲ್ಲೂ ರೇಖಾಚಿತ್ರಗಳನ್ನು ಬರೆಯುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದಾರೆ. ಹೀಗೆ ಎಡಗೈನಲ್ಲಿ ರೇಖಾಚಿತ್ರ ಬರೆಯಲು ಸಂಕಲ್ಪಿಸಿದ ಹಾಗೂ ಸಾಧಿಸಿದ ಕಾರ್ಯವೀಗ 25ನೇ ವರ್ಷಕ್ಕೆ ಕಾಲಿಟ್ಟಿದೆ! ಹಾಗಾಗಿ ಈ ವರ್ಷ ಈ ಎಡಗೈ ಸಾಧನೆಯು ರಜತ ಮಹೋತ್ಸವ ಆಚರಿಸಿಕೊಳ್ಳಬೇಕಿದೆ! ಬಹುಶಃ ಈ ಕಲಾವಿದರೇ ಇದನ್ನು ಲೆಕ್ಕವಿರಿಸದೇ ಇರಬಹುದು. ಆದರೆ ಈ ಸಾಧನೆಯ ಹಿಂದೆ ಒಂದು ದುರಂತ ಕತೆಯೂ ಅಡಗಿದೆ. ‘ಮನಸ್ಸಿದ್ದರೆ ಮಾರ್ಗ’ ಎನ್ನುವುದನ್ನು ಈ ಕಲಾವಿದರ ರೋಚಕ ಕತೆಯು ತೆರೆದಿಡುತ್ತದೆ.

ಈಗ ಬಲಗೈ ಹಾಗೂ ಎಡಗೈ ಎರಡರಲ್ಲೂ ಚಿತ್ರಗಳನ್ನು ಬರೆಯುತ್ತಿದ್ದಾರೆ. ಒಂದು ಅಪಘಾತವು ಕುಮಾರ್ ಅವರ ಚಿತ್ರರಚನಾ ಬದುಕನ್ನೇ ಬದಲಿಸಿತು. ಬಲಗೈಗೆ ತೊಂದರೆಯಾಗಿದ್ದೇ ಎಡಗೈನಲ್ಲಿ ಚಿತ್ರ ಬರೆಯಲು ಸ್ಫೂರ್ತಿಯಾಯ್ತು. ಅದನ್ನು ಸಾಧಿಸಿದ್ದೂ ಆಯ್ತು. ಕುಮಾರ್ ಅವರಿಗೆ ನೋವಲ್ಲೂ ನಲಿವು ಸಿಕ್ಕಿತ್ತು.

ಬಹುಶಃ ಹೀಗೆ ಎರಡೂ ಕೈಯಲ್ಲೂ ಚಿತ್ರ ಬರೆಯುವ ಚಿತ್ರಕಲಾವಿದರು ಅಪರೂಪ ಎನಿಸುತ್ತದೆ. ಹುಟ್ಟಿದಾರಭ್ಯ ಎಡಗೈನಲ್ಲೇ ಬರೆಯುವ ಕಲಾವಿದರು ಸಿಗಬಹುದು. ಆದರೆ ಹುಟ್ಟಿದಾರಭ್ಯ ಬಲಗೈನಲ್ಲಿ ಬರೆಯುವವರು ಮತ್ತೆ ಎಡಗೈನಲ್ಲಿ ಅಭ್ಯಾಸಿಸಿ ಯಶ ಕಂಡವರು ಅಪರೂಪವಿರಬಹುದು!

ಹೀಗೆ ಎಡಗೈನಲ್ಲಿ ರಚಿಸಿದ್ದ ಚಿತ್ರಗಳ ಬಗ್ಗೆ ಕುಮಾರ್ ಹೀಗೆ ಹೇಳುತ್ತಾರೆ, ‘ಬಲಗೈನಲ್ಲಿ ಚಿತ್ರಿಸಿದ ಚಿತ್ರಗಳಿಗಿಂತ ಈ ಎಡಗೈನಲ್ಲಿ ಚಿತ್ರಿಸಿದ ಚಿತ್ರಗಳು ಸ್ವಲ್ಪ ಭಿನ್ನವಾಗಿರುತ್ತವೆ. ಒಂದೇ ತರಹದ ಚಿತ್ರಗಳಿಂದ ಹೊರಗೆ ಬಂದು ತಮ್ಮದೇ ಆದ ಒಂದು ರೀತಿಯ ಸ್ವಂತಿಕೆಯನ್ನು ಇವು ರೂಪಿಸಿಕೊಂಡಿವೆ. ನನ್ನದೇ ಶೈಲಿಯಿಂದ ಹೊರಗೆ ಬಂದ ಕೃತಿಗಳಿವು! ನನ್ನ ಕಲಾ ಬಳಗದ ಸ್ನೇಹಿತರು ಹಾಗೂ ನನ್ನ ಚಿತ್ರಗಳ ನೋಡುತ್ತಾ ಬಂದವರು ಈ ಭಿನ್ನಶೈಲಿಯನ್ನು ಮೆಚ್ಚಿದರು. ಅಲ್ಲದೇ ನನಗೂ ಅವರ ಮಾತು ಸರಿ ಎನಿಸಿತು. ಈಗಲೂ ನಾನು ಎಡಗೈ ಹಾಗೂ ಬಲಗೈ ಎರಡರಲ್ಲೂ ರೇಖಾಚಿತ್ರಗಳನ್ನು ಬರೆಯುತ್ತಾ ಬಂದಿದ್ದೇನೆ. ಈವರೆಗೂ ಸರಿಸುಮಾರು 150ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಎಡಗೈನಲ್ಲಿಯೇ ಬರೆದಿದ್ದಾರೆ. ಒಂದಿಷ್ಟು ವರ್ಷಗಳು ಹೆಚ್ಚು ಅಭ್ಯಾಸಿಸಿರಲಿಲ್ಲ ಎನ್ನುವುದನ್ನು ಬಿಟ್ಟರೆ ರಚನೆಯು ನಿರಂತರ ನಡೆದಿದೆ. ಈ ಎಡಗೈನ ರೇಖಾಚಿತ್ರಗಳನ್ನೆಲ್ಲಾ ಒಗ್ಗೂಡಿಸಿ ಪುಸ್ತಕ ತರುವ ಉದ್ದೇಶವೂ ಇದೆ’ ಎನ್ನುತ್ತಾರೆ.

ಇಲ್ಲಿಯವರೆಗೂ ರೇಖಾಚಿತ್ರಗಳನ್ನಷ್ಟೇ ಮಾಡಿದ್ದಾರೆ. ಆದರೆ ಪೇಂಟಿಂಗ್ ಮಾಡಲು ಪ್ರಯತ್ನಿಸಿಲ್ಲ. ಅದನ್ನು ಮಾಡಬಹುದೆಂದು ಕೂಡ ಆಲೋಚಿಸಿಲ್ಲ. ಅದಕ್ಕೆ ಕಾರಣ ಕೊಡುತ್ತ ಕುಮಾರ್ ಅವರು ಹೀಗೆನ್ನುತ್ತಾರೆ, ‘ಎಡಗೈನಲ್ಲಿ ಚಿತ್ರ ಬರೆಯುವ ಹಂತದಲ್ಲಿ ಕೆಲವೊಮ್ಮೆ ಕೈ ಹಾಗೇ ಇದ್ದಕ್ಕಿದ್ದಂತೆ ನಿಂತು ಬಿಡುತ್ತೆ. ಮುಂದೆ ಎತ್ತ ಸಾಗಬೇಕು, ಏನು ಬರೆಯಬೇಕು ಎಂದು ಕೈ ಪ್ರಶ್ನೆ ಮಾಡುತ್ತೆ! ಎಡದ ಗುಣವೇ ಬೇರೆ, ಬಲದ ಗುಣವೇ ಬೇರೆ! ಇವೆರಡರಲ್ಲಿಯೂ ಚಿತ್ರ ಬರೆಯುವ ಗುಣಗಳೇ ಬೇರೆ ಬೇರೆ! ಹಾಗಾಗಿ ಪೇಂಟಿಂಗ್ ಕಷ್ಟವಾಗಬಹುದೇನೋ, ಪ್ರಯತ್ನಿಸಿ ನೋಡೋಣಾ!’

ಹೀಗೆ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ ನಿರಂತರ ಅಭ್ಯಾಸ ಮಾಡಿದ್ದು ಈಗ ಸಾಧನೆಯಾಗಿದೆ!

ಇಲ್ಲಿ ಪ.ಸ.ಕುಮಾರ್ ಅವರ ಎಡಗೈ ಚಿತ್ರಗಳನ್ನು ಹಂಚಲಾಗಿದೆ. ಅವುಗಳಲ್ಲಿನ ಸಂಯೋಜನೆ, ರೇಖಾ ಲಾಲಿತ್ಯ ಹಾಗೂ ಪ.ಸ. ಅವರದ್ದೇ ಶೈಲಿಯನ್ನು ಈ ಚಿತ್ರಗಳಲ್ಲಿ ನೋಡಬಹುದಾಗಿದೆ.

‍ಲೇಖಕರು avadhi

April 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: