ಕಿರಣ ಭಟ್ ಕಂಡಂತೆ ‘ಕಾಯ’

ಕಿರಣ ಭಟ್

ಕಾಯ
ನಿರ್ದೇಶನ: ವೀಣಾ ಬಸವರಾಜಯ್ಯ
ಸಂಗೀತ: ಮುರಳಿಮೋಹನ ಗೌಡ
ಪ್ರಸ್ತುತಿ:
ಲಕ್ಷ್ಮಿ ಚಂದ್ರಶೇಖರ್
ದೀಪ್ತಿ ನಾಗೇಂದ್ರ
ಅನಘ ಕಶ್ಯಪ್
ಪ್ರಿಯಾಂಕಾ ಚಂದ್ರಶೇಖರ್
ಶ್ರೀಪ್ರಿಯಾ

‘ಎನ್ನನೇಕೆ ನೋಡುವಿರಿ?’
ಉಟ್ಟ ಬಟ್ಟೆಯನ್ನೂ ಬಿಚ್ಚಿ, ಎಲ್ಲವನ್ನೂ ತೊರೆದು ನಡೆದ ಅಕ್ಕ ಮಹಾದೇವಿ ತನ್ನನ್ನು ದಿಟ್ಟಿಸುತ್ತಿದ್ದವರನ್ನು ಕೇಳುವ ದಿಟ್ಟ ಪ್ರಶ್ನೆಯಿದು.
ಇಂಥದೊಂದು ಪ್ರಶ್ನೆಯೊಂದಿಗೆ ಶುರುವಾಗ್ತದೆ ‘ಕಾಯ’ ಸ್ವಲ್ಪ ಅಧಿಕ ಅವಧಿಯದಾಯಿತೇನೋ ಎನ್ನುವ ಹಮ್ಮಿಂಗ್ ನ ಜೊತೆ ಜೊತೆಯಲ್ಲೇ ಹೊನ್ನ ಬಣ್ಣದ ಮಾರುದ್ದದ ಜಡೆ ಜಾರಿಸುತ್ತ ರಂಗದೆದುರಿನ ಮೆಟ್ಟಿಲಿಳಿಯುವ ನಾಲ್ವರು ಹೆಣ್ಣು ಮಕ್ಕಳು, ನಿಧಾನವಾಗಿ ರಂಗವೇರುತ್ತಲೇ ತಮ್ಮನ್ನು ಆವಾಹಿಸಿಕೊಳ್ಳುವ ರೀತಿಯೇ ಅದ್ಭುತ.

ಅಕ್ಕನ ದಿಟ್ಟ ಪ್ರಶ್ನೆಯನ್ನು ಸಮಕಾಲೀನಗೊಳಿಸಿಕೊಳ್ಳುತ್ತಲೇ ಗಟ್ಟಿಯಾದ ಧ್ವನಿಯೊಂದಿಗೆ, ಅಷ್ಟೇ ದಿಟ್ಟವಾದ ದೈಹಿಕ ಚಲನೆಗಳೊಂದಿಗೆ ಪ್ರಸ್ತುತಪಡಿಸುವ ರೀತಿಯೇ ಈ ರಂಗಪ್ರಯೋಗವನ್ನು ಛಕ್ಕಂತ ಎಬ್ಬಿಸಿಬಿಡುತ್ತದೆ.

‘ಮೊಲೆ ಬಿದ್ದು, ಮುಡಿ ಸಡಲಿ, ಗಲ್ಲ ಬತ್ತಿ,
ತೋಳು ಕಂದಿದವಳ ಎನ್ನನೇಕೆ ನೋಡುವಿರಿ ಓ ಅಣ್ಣಗಳಿರಾ?’
ಹೆಣ್ಣಿನ ಶರೀರವನ್ನು ನೋಡುವ ದೃಷ್ಟಿ ಅಂದಿಗೂ ಇಂದಿಗೂ ಅದೇ. ಅದಿಂದಿಗೂ ಬದಲಾಗಿಲ್ಲ.
ಪ್ರಯೋಗದ ಪ್ರಾರಂಭದಲ್ಲೇ ಇಂಥದೊಂದು ವಚನವನ್ನೆತ್ತಿಕೊಳ್ಳುವದರ ಮೂಲಕ ಇಡಿಯ ಪ್ರಯೋಗಕ್ಕೊಂದು ಪ್ರಸ್ತುತತೆಯ ಪ್ರವೇಶ ನೀಡುವ ಪ್ರಯತ್ನವನ್ನು ನಿರ್ದೇಶಕಿ ಮಾಡುತ್ತಾರೆ.
ಹೀಗೆ ಸಾಗುತ್ತಲೇ…

ಅಸಾಧ್ಯ ಕಸುವಿನ ಈ ಕಲಾವಿದೆಯರು ಜೊತೆ ಜೊತೆಗೇ ಗಂಭೀರವಾದ, ಶಾಂತ ಧಾರೆಯಂಥ ಲಕ್ಷ್ಮಿ ಚಂದ್ರಶೇಖರ್ ರನ್ನ ಸೇರಿಕೊಳ್ಳುತ್ತ ಅಕ್ಕನ ಪ್ರಪಂಚವನ್ನ ಪರಿಚಯಿಸುವ ಪರಿ ನಿಜಕ್ಕೂ ವಿಶಿಷ್ಟವೇ.

ಇದು, ಕನ್ನಡದ ಮೊದಲ ಸ್ರೀ ಪರ ಕವಿ ಎನಿಸಿಕೊಂಡಿರುವ ಅಕ್ಕಮಹಾದೇವಿಯ ವಚನಗಳ ದೃಶ್ಯರೂಪ. ಅಕ್ಕನ ಕೆಲವು ವಚನಗಳನ್ನ ಶರೀರ, ಶಾರೀರ, ಸಂಗೀತಗಳೊಂದಿಗೆ ರಂಗದ ಮೇಲೆ ತರುವ ಪ್ರಯತ್ನ.

ಅಕ್ಕಮಹಾದೇವಿ ಬದುಕಿನುದ್ದಕ್ಕೂ ಕಂಡ ಕಷ್ಟಗಳನ್ನ, ಅವುಗಳನ್ನೆದುರಿಸಿದ ರೀತಿಯನ್ನ, ಯೋಗ, ಸಮಕಾಲೀನ ನೃತ್ಯ, ಶರೀರ ಭಾಷೆಯ ನೆಲೆಗಟ್ಟಿನ ಮೇಲೆ ಕಟ್ಟುವ ಕ್ರಿಯೆಯಿದು. ಒಬ್ಬರು, ಇಬ್ಬರು, ನಾಲ್ವರು, ಐವರು ಹೀಗೆ ಬೇರೆ ಬೇರೆ ಗುಂಪು ಸಾಧ್ಯತೆಗಳನ್ನ ಬಳಸಿಕೊಳ್ಳುವ ನಿರ್ದೇಶಕಿ, ಸರಳವಾದ, ರಂಗದ ಮೇಲಿಂದಲೇ ಬರುವ ಆಲಾಪ ದ ನೆರವಿನೊಂದಿಗೆ, ವಚನದ ಸಾಲುಗಳನ್ನು ಪುನಃ ಪುನಃ ಹೇಳುವಲ್ಲಿ, ಸಾಲುಗಳನ್ನ ಅಲ್ಲಲ್ಲಿ ತುಂಡರಿಸಿ, ಆಂಗಿಕಕ್ಕೆ ಅನುವು ಮಾಡಿಕೊಡುವಲ್ಲಿಯೂ ಪ್ರಯೋಗಶೀಲತೆ ತೋರುತ್ತಾರೆ.
ಗುಂಪು ದೃಶ್ಯಗಳಲ್ಲಿನ ಕೊರಿಯೋಗ್ರಫಿ ಹಲವು ಬಾರಿ ‘ ವಾಹ್’ ಎನಿಸುವಂತಿದೆ.

ಒಂದೆರಡು ಬಾರಿಯಂತೂ ಕಟ್ಡಿಗೆಯ ಕ್ಯಾನ್ವಾಸ್ ಮೇಲಿನ ಮೈಬಣ್ಣದ ಸುಂದರ ಚಿತ್ರದಂತೆ ಕಾಣುತ್ತದೆ.
( ರಂಗಶಂಕರ ದ ಪ್ರಯೋಗ: ಕಟ್ಟಿಗೆಯ ಹಾಸು ಮತ್ತು ಮೈಬಣ್ಣದ ಕಾಸ್ಟ್ಯೂಂ)
ಹೆಚ್ಚಿನವರೆಲ್ಲ ಅಕ್ಕ ನ ಚಿತ್ರಗಳನ್ನು ನೋಡಿದ್ದು ಮುಚ್ಚಿದ ನೀಳ ಕೇಶರಾಶಿಯಲ್ಲೇ. ಹಾಗಾಗಿಯೇ ‘ಅಕ್ಕ’ ಎಂದಾಗ ನೆನಪಾಗೋದು ಆಕೆಯ ಸುತ್ತ ಇಳಿಬಿದ್ದ ನೀಳ ಕೂದಲೇ.
ಇಲ್ಲಿಯೂ…….

ಪಾತ್ರಧಾರಿಗಳ ತಲೆಗೂದಲನ್ನೇ ಮಾರುದ್ದದ ಹೊನ್ನಿನ ಜಡೆಯಾಗಿಸುವದರೊಂದಿಗೆ ಪ್ರಯೋಗದುದ್ದಕ್ಕೂ ಅದನ್ನೇ ಪರಿಕರವಾಗಿಸಿಕೊಂಡಿದ್ದು ನಿಜಕ್ಕೂ ಜಾಣತನ. ಕೂಡಿಸುವದಕ್ಕೂ, ಬೇರ್ಪಡಿಸುವದಕ್ಕೂ, ಚದುರಿಸುವದಕ್ಕೂ, ಗುಂಪುಕಟ್ಟುವದಕ್ಕೂ, ಪ್ರೀತಿಗೂ, ಜಗಳಕ್ಕೂ, ಯುದ್ಧಕ್ಕೂ ಬಳಕೆಯಾಗುವ ‘ ಕಾಯ’ ದ ಭಾಗವೇ ಆಗಿರುವ ಈ ಪರಿಕರ ಸುಂದರವಾದ ವಿನ್ಯಾಸಗಳನ್ನು ಸೃಷ್ಟಿಸುವಲ್ಲೂ ನೆರವಾಗಿದೆ.

ರಂಗದ ಮೇಲಿನ ಚಲನೆಗಳು ಬರಿಯ ವಚನಗಳ ಅಭಿನಯದ ಭಾಗವಾಗದೇ ಭಾವಗಳ ವಿಸ್ತಾರವಾಗುವದೂ ಪ್ರಯೋಗದ ಹೆಚ್ಚುಗಾರಿಕೆ.
ಹೀಗೆ, ಈ ಪ್ರಯೋಗ ಒಂದೆಡೆಗೆ ಅಕ್ಕನ‌ ಆಧ್ಯಾತ್ಮದ ಕಂಪು ಹರಡುತ್ತಲೇ ಇನ್ನೊಂದೆಡೆ ಹೆಣ್ಣಿನ ಅಸ್ಮಿತೆಯ ಧ್ವನಿಯೂ ಆಗುತ್ತದೆ.

‘ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಜಗವೆಲ್ಲ ಹೆಣ್ಣು ನೋಡಾ ಅಯ್ಯ’
ಇಷ್ಟಾಗಿಯೂ, ಕಾಲದಿಂದಲೂ ನಮ್ಮೊಳಗೆ ಸೇರಿ ಹೋಗಿರುವ, ಮತ್ತೆ ಮತ್ತೆ ನೆನಪಾಗುವ ಸಾಲುಗಳ ಕೆಲವು ವಚನಗಳ ಪ್ರಸ್ತುತಿಯನ್ನ ಇನ್ನಷ್ಟು ಸರಳಗೊಳಿಸಬಹುದಿತ್ತೇನೋ ಎನಿಸದಿರದು.

‍ಲೇಖಕರು avadhi

April 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: