ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ನ ಬಾಲ್ಯ, ಯೌವನ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

11

ಹಾಜಿ ಮುರಾದ್ ಟಿಫ್ಲಿಸ್‍ನಲ್ಲಿದ್ದ ಐದನೆಯ ದಿನ ವೈಸ್ರಾಯ್‍ನ ಏಡ್ ಡಿ ಕ್ಯಾಂಪ್ ಲೋರಿಸ್ ಮೆಲಿಕೋವ್‍ ಒಡೆಯನ ಅಜ್ಞೆಯಂತೆ ಹಾಜಿ ಮುರಾದ್‍ನನ್ನು ನೋಡಲು ಬಂದ. 

ಹಾಜಿ ಮುರಾದ್ ತನ್ನ ಮಾಮೂಲು ರಾಯಭಾರ ಚಾತುರ್ಯದಲ್ಲಿ, ಎದೆಯ ಮೇಲೆ ಕೈ ಇರಿಸಿಕೊಂಡು, ತಲೆ ಬಾಗಿಸಿ, ‘ನಾನು ತಮ್ಮ ಸೇವೆಗೆ ಸಿದ್ದ, ಸರ್ದಾರ್, ಅಪ್ಪಣೆ ಮಾಡಿ,’ ಅನ್ನುತ್ತ ಲೋರಿಸ್ ಮೆಲಿಕೋವ್‍ನನ್ನು ಸ್ನೇಹದಿಂದ ನೋಡಿದ. 

ಮೇಜಿನ ಪಕ್ಕದಲ್ಲಿದ್ದ ಆರಾಮ ಕುರ್ಚಿಯಲ್ಲಿ ಲೋರಿಸ್ ಮೆಲಿಕೋವ್‍ ಕುಳಿತ. ಅವನೆದುರಿಗೆ ತಗ್ಗು ದಿವಾನ್‍ ಮೇಲೆ ಹಾಜಿ ಮುರಾದ್ ಕುಳಿತ. ಮೊಳಕಾಲ ಮೇಲೆ ಕೈಗಳನ್ನಿರಿಸಿ, ತಲೆ ಬಾಗಿಸಿ ಅವನು ಹೇಳುವ ಮಾತು ಕೇಳಿಸಿಕೊಂಡ. 

ತಾರ್ತರ್ ಭಾಷೆಯನ್ನು ಸರಾಗವಾಗಿ ಆಡುತ್ತಿದ್ದ ಲೋರಿಸ್ ಮೆಲಿಕೋವ್‍, ‘ಪ್ರಿನ್ಸ್ ಅವರಿಗೆ ಹಾಜಿ ಮುರಾದ್‍ನ ಬದುಕು ತಿಳಿದಿದ್ದರೂ ಅವನ ಇಡೀ ಕಥೆಯನ್ನು ಅವನ ಬಾಯಿಂದಲೇ ಕೇಳಲು ಬಯಸಿದ್ದಾರೆ. ‘ನೀನು ನನಗೆ ಹೇಳು, ನಾನು ಅದನ್ನು ಬರೆದುಕೊಂಡು, ರಶಿಯನ್‍ಗೆ ಅನುವಾದ ಮಾಡುತ್ತೇನೆ, ಪ್ರಿನ್ಸ್ ಅದನ್ನು ಚಕ್ರವರ್ತಿಯವರಿಗೆ ಕಳಿಸುತ್ತಾರೆ,’ ಎಂದ.

ಹಾಜಿ ಮುರಾದ್ ಸ್ವಲ್ಪ ಹೊತ್ತು ಸುಮ್ಮನಿದ್ದ (ಬೇರೆಯವರ ಮಾತಿಗೆ ಅವನೆಂದೂ ಅಡ್ಡಿ ಮಾಡುತ್ತಿರಲಿಲ್ಲ. ಅವರು ಹೇಳಬೇಕಾದ್ದೆಲ್ಲ ಮುಗಿಯಿತೋ ಅಥವ ಇನ್ನೂ ಸ್ವಲ್ಪ ಇದೆಯೋ ಎಂದು ಕಾದು ನೋಡುತ್ತಿದ್ದ). ಆಮೇಲೆ ಅವನು ತಲೆ ಎತ್ತಿ, ತಲೆಯ ಕ್ಯಾಪನ್ನು ಹಿಂದೆ ಸರಿಸಿ ಮಗುವಿನ ನಗುವಿನಂಥ ನಗುವನ್ನು ನಕ್ಕ. ಆ ನಗು ಮೇರಿ ವ್ಯಾಸಿಲಿಯೇವ್ನಾಳನ್ನು ಸೆರೆಹಿಡಿದಿತ್ತು. 

‘ಖಂಡಿತ ಹೇಳುತ್ತೇನೆ,’ ಅಂದ. ತನ್ನ ಕಥೆಯನ್ನು ಚಕ್ರವರ್ತಿ ಓದುತ್ತಾನೆಂದು ಅವನಿಗೆ ಹೆಮ್ಮೆಯಾಗಿತ್ತು.

‘ನೀನೇ ನನಗೆ ಹೇಳಬೇಕು, (ಟಾರ್ಟರ್ ಭಾಷೆಯಲ್ಲಿ ಯಾರೂ ಯಾರನ್ನೂ ‘ನೀವು’ ಎಂದು ಕರೆಯುತ್ತಿರಲಿಲ್ಲ) ಎಲ್ಲಾನೂ ಮೊದಲಿಂದ…ಸರಿಯಾಗಿ,’ ಅಂದ ಲೋರಿಸ್ ಮೆಲಿಕೋವ್‍ ಜೇಬಿನಿಂದ ಟಿಪ್ಪಣಿಯ ಪುಸ್ತಕ ತೆಗೆದು ಸಿದ್ಧನಾದ. 

‘ಹೇಳಬಲ್ಲೆ, ಎಷ್ಟೊಂದಿದೆಯಲ್ಲ ಹೇಳುವುದಕ್ಕೆ! ಎಷ್ಟೊಂದೆಲ್ಲ ನಡೆಯಿತು!’ ಅಂದ ಹಾಜಿ ಮುರಾದ್.

‘ಒಂದೇ ದಿನದಲ್ಲಿ ಹೇಳುವುದಕ್ಕೆ ಆಗದಿದ್ದರೆ ಇನ್ನೊಂದು ದಿನ ಹೇಳಿ ಮುಗಿಸಬಹುದು,’ ಅಂದ ಲೋರಿಸ್-ಮೆಲಿಕೋವ್ 

‘ಮೊದಲಿನಿಂದ ಶುರು ಮಾಡಲಾ?’

‘ಹ್ಞೂಂ, ಮೊದಲಿನಿಂದ…ಎಲ್ಲಿ ಹುಟ್ಟಿದೆ, ಎಲ್ಲಿ ಬದುಕಿದೆ ಎಲ್ಲಾ.’

ಹಾಜಿ ಮುರಾದ್‍ನ ತಲೆ ಬಾಗಿತು. ಬಹಳ ಹೊತ್ತು ಹಾಗೇ ಕೂತಿದ್ದ. ಆಮೇಲೆ ದಿವಾನ್ ಪಕ್ಕದಲ್ಲಿದ್ದ ಕೋಲು ಎತ್ತಿಕೊಂಡ. ಕಠಾರಿಯ ಕೆಳಗಿನಿಂದ ಪುಟ್ಟದೊಂದು ಚಾಕು ತೆಗೆದ. ಅದಕ್ಕೆ ಆನೆಯ ದಂತದ ಹಿಡಿಕೆ ಇತ್ತು. ಆ ಹಿಡಿಕೆಯಲ್ಲಿ ಬಂಗಾರದ ರೇಕುಗಳ ಚಿತ್ತಾರವಿತ್ತು. ಚಾಕು ಮೊನಚಾಗಿತ್ತು. ಚಾಕುವಿನಲ್ಲಿ ಕೋಲನ್ನು ಹೆರೆಯುತ್ತ ಮಾತೂ ಆಡುವುದಕ್ಕೆ ಶುರು ಮಾಡಿದ. 

‘ಬರೆದುಕೋ: ಹುಟ್ಟಿದ್ದು ತ್ಸೆಲ್‍ಮೆಸ್ ಎಂಬ ಸಣ್ಣ ಔಲ್‍ನಲ್ಲಿ. ಬೆಟ್ಟದ ಜನ ಹೇಳುವ ಹಾಗೆ ಅದು ‘ಕತ್ತೆಯ ತಲೆಯ ಗಾತ್ರದ ಊರು.’ ಅಲ್ಲಿಂದ ತೋಪಿನ ಎರಡು ಗುಂಡು ಹಾರುವಷ್ಟು ದೂರದಲ್ಲಿ ಖುನ್‍ಝಾಕ್ ಇದೆ. ಅದು ಖಾನ್‍ಗಳ ಊರು. ನಮ್ಮ ಮನೆತನಕ್ಕೂ ಅವರಿಗೂ ಬಹಳ ಹತ್ತಿರದ ಸಂಬಂಧ. ನಮ್ಮಣ್ಣ ಉಸ್ಮಾನ್ ಹುಟ್ಟಿದಾಗ ನಮ್ಮಮ್ಮ ದೊಡ್ಡ ಖಾನ್‍ಗೆ, ಅಂದರೆ ಅಬು ನುತ್ಸಲ್ ಖಾನ್‍ಗೆ ಕೂಡ ಹಾಲುಣಿಸಿ ಬೆಳೆಸಿದಳು. ಆಮೇಲೆ ಖಾನ್‍ನ ಎರಡನೆಯ ಮಗ, ಉಮ್ಮಾ ಖಾನ್‍ನನ್ನೂ ಬೆಳೆಸಿದಳು. ಆದರೆ, ನನ್ನ ಎರಡನೆಯ ಅಣ್ಣ ಅಹ್ಮದ್ ತೀರಿಹೋದ. ನಾನು ಹುಟ್ಟಿದಾಗ ಖಾನ್‍ನ ಹೆಂಡತಿಗೆ ಗಂಡು ಮಗು ಹುಟ್ಟಿತು. ಅವನ ಹೆಸರು ಬುಲಾಚ್‍ ಖಾನ್. ಆ ಮಗುವಿಗೆ ಹಾಲೂಡಿಸುವುದಕ್ಕೆ ನಮ್ಮಮ್ಮ ಹೋಗಲಿಲ್ಲ. ಹೋಗು ಅಂತ ನಮ್ಮಪ್ಪ ಆಜ್ಞೆ ಮಾಡಿದ, ಆದರೂ ಹೋಗಲಿಲ್ಲ ನಮ್ಮಮ್ಮ. ‘ನಾನು ಮತ್ತೆ ನನ್ನ ಮಗನನ್ನ ಕಳಕೊಳ್ಳಲ್ಲ, ನಾನು ಆ ಮಗುವಿಗೆ ಹಾಲು ಕೊಡುವುದಕ್ಕೆ ಹೋಗಲ್ಲ,’ ಅಂದಳು. ನಮ್ಮಪ್ಪನಿಗೆ ಸಿಟ್ಟು ಜಾಸ್ತಿ. ಕಠಾರಿಯಲ್ಲಿ ಅವಳಿಗೆ ತಿವಿಯುವುದಕ್ಕೆ ಹೋದ. ಕೊಂದೇ ಬಿಡುತ್ತಿದ್ದ. ಮನೆಯವರು ಅವಳನ್ನು ಕಾಪಾಡಿದರು. ಅಂದರೆ, ನಮ್ಮಮ್ಮ ನನ್ನ ಕೈ ಬಿಡಲಿಲ್ಲ. ಆಮೇಲೆ ಒಂದು ಹಾಡು ಕಟ್ಟಿದ್ದಳು ನನ್ನ ಮೇಲೆ….ಅದನ್ನ ಹೇಳುವುದು ಬೇಕಾಗಿಲ್ಲ.’

ಹಾಜಿ ಮುರಾದ್ ತಲೆ ಕೊಡವಿ, ‘ಸರಿ, ನಮ್ಮಮ್ಮ ದಾದಿ ಕೆಲಸಕ್ಕೆ ಹೋಗಲಿಲ್ಲ. ಖಾನ್‍ನ ಹೆಂಡತಿ ಬೇರೆ ದಾದಿಯನ್ನು ನೋಡಿಕೊಂಡಳು. ಆದರೂ ನಮ್ಮಮ್ಮನ ಮೇಲೆ ಪ್ರೀತಿ ಇತ್ತು. ನಾವು ಮಕ್ಕಳಾಗಿದ್ದಾಗ ನಮ್ಮಮ್ಮ ನಮ್ಮನ್ನೆಲ್ಲ ಖಾನ್‍ಶಾ ಅರಮನೆಗೆ ಕರಕೊಂಡು ಹೋಗುತ್ತಿದ್ದಳು. ಅವಳ ಮಕ್ಕಳ ಜೊತೆ ಆಡುತ್ತಿದ್ದೆವು. ಅವಳಿಗೂ ನಮ್ಮ ಮೇಲೆ ಪ್ರೀತಿ ಇತ್ತು. 

‘ಮೂವರು ಖಾನ್ಗಳಿದ್ದರು: ನಮ್ಮಣ್ಣ ಉಸ್ಮಾನ್‍ನ ಜೊತೆ ಹಾಲು ಹಂಚಿಕೊಂಡು ಬೆಳೆದ ಅಬುನತ್ಸಲ್ ಖಾನ್,  ನನ್ನ ಸಹೋದರ ಸಮಾನನಾದ ಉಮ್ಮಾ ಖಾನ್, ಕೊನೆಯವನು ಬುಲಾಚ್‍ ಖಾನ್. ಅವನನ್ನು ಶಮೀಲ್ ಬೆ.ಟ್ಟದ ಮೇಲಿಂದ ಎಸೆದು ಸಾಯಿಸುವುದಕ್ಕೆ ನೋಡಿದ. ಅದು ನಡೆದದ್ದು ಎಷ್ಟೋ ವರ್ಷ ಕಳೆದ ಮೇಲೆ.

‘ಮುರೀದ್‍ಗಳು ನಮ್ಮ ಔಲ್‍ಗಳಿಗೆ ಬರುವುದಕ್ಕೆ ಶುರು ಮಾಡಿದಾಗ ನನಗೆ ಸುಮಾರು ಹದಿನಾರು ವರ್ಷ. ಮರದ ಕುಡುಗತ್ತಿಯಲ್ಲಿ ಕಲ್ಲುಗಳನ್ನು ಬಡಿಯುತ್ತ ‘ಮುಸಲ್ಮಾನರೇ ಘಸಾವತ್ ಎಂದು ಚೀರುತ್ತಿದ್ದರು. ಚೆಚೆನ್ ಜನಗಳು ಮುರೀದಿಸಮ್‍ಗೆ ಸೇರಿದರು, ಅವರ್ ಸಮುದಾಯದವರೂ ಅದಕ್ಕೆ ಒಲಿಯುತ್ತಿದ್ದರು. ಆಗ ನಾನು ಖಾನ್‍ಗಳ ಸಹೋದರನ ಹಾಗೆ ಅರಮನೆಯಲ್ಲಿದ್ದೆ. ನನಗಿಷ್ಟಬಂದ ಹಾಗೆ ಮಾಡಬಹುದಾಗಿತ್ತು. ಸಾಹುಕಾರನಾದೆ. ನನ್ನ ಹತ್ತಿರ ಕುದುರೆ, ಆಯುಧ, ದುಡ್ಡು ಇದ್ದವು. ಯಾವ ಜವಾಬ್ದಾರಿ ಇರದೆ ಖುಷಿಯಾಗಿ ಬದುಕುತ್ತಿದ್ದೆ. ಇಮಾಮ್ ಕಾಝೀ ಮುಲ್ಲಾನ ಕೊಲೆ ಆಗುವವರೆಗೆ, ಅವನ ಜಾಗಕ್ಕೆ ಹಮ್ಜಾದ್‍ ಬರುವವರೆಗೆ ಹೀಗೇ ಇದ್ದೆ. ಹಮ್ಜಾದ್‍ ತನ್ನ ದೂತರನ್ನು ಖಾನ್‍ಗಳ ಬಳಿಗೆ ಕಳಿಸಿದ, ಅವರು ಘಸಾವತ್‍ಗೆ ಸೇರದಿದ್ದರೆ ಖುನ್‍ಝಾಕ್‍ ಊರನ್ನು ಅನ್ನು ನಾಶಮಾಡುತ್ತೇನೆ ಎಂದ..

‘ಅದು ಯೋಚನೆ ಮಾಡಬೇಕಾದ ವಿಚಾರ. ಖಾನ್‍ಗಳಿಗೆ ರಶಿಯನ್ನರ ಭಯವಿತ್ತು, ಹಾಗೇ ಪವಿತ್ರ ಯುದ್ಧಕ್ಕೆ ಸೇರುವುದಕ್ಕೂ ಅಂಜುತ್ತಿದ್ದರು. ಮುದುಕಿ ಖಾನುಮ್ ನನ್ನನ್ನೂ ಅವಳ ಎರಡನೆಯ ಮಗ ಉಮ್ಮಾ ಖಾನ್‍ನನ್ನೂ ಟಿಫ್ಲಿಸ್‍ ಕಳಿಸಿದಳು. ಯಾಕೆ ಅಂದರೆ, ನಮಗೆ ಹಮ್ಜಾದ್‍ನಿಂದ ರಕ್ಷಣೆ ಕೊಡಿ ಎಂದು ರಶಿಯನ್ನರನ್ನು ಕೇಳುವುದಕ್ಕೆ. ಆಗ ಟಿಫ್ಲಿಸ್‍ನಲ್ಲಿ ಬ್ಯಾರನ್ ರೋಸೆನ್ ಕಮಾಂಡರ್ ಇನ್ ಛೀಫ್ ಆಗಿದ್ದ. ಅವನು ನನ್ನನ್ನಾಗಲೀ ಉಮ್ಮಾ ಖಾನ್‍ನನ್ನಾಗಲೀ ಭೇಟಿ ಮಾಡಲೇ ಇಲ್ಲ. ನಮಗೆ ಸಹಾಯಮಾಡುತ್ತೇನೆಂದು ಮಾತು ಕೊಟ್ಟ,  ಏನೂ ಮಾಡಲಿಲ್ಲ. ಅವನ ಅಧಿಕಾರಿಗಳು ಕುದುರೆ ಏರಿಕೊಂಡು ನಮ್ಮೂರಿಗೆ ಬಂದರು, ಉಮ್ಮಾ ಖಾನ್ ಜೊತೆಯಲ್ಲಿ ಇಸ್ಪೀಟು ಆಡಿದರು, ಅಷ್ಟೇ. ಅವನಿಗೆ ಚೆನ್ನಾಗಿ ಕುಡಿಸಿದರು, ಹೋಗಬಾರದ ಕೆಟ್ಟ ಜಾಗಕ್ಕೆಲ್ಲ ಕರೆದುಕೊಂಡು ಹೋದರು. ಅವನು ಇಸ್ಪೀಟು ಆಟದಲ್ಲಿ ತನ್ನ ಆಸ್ತಿಯನ್ನೆಲ್ಲ ಕಳೆದುಕೊಂಡ. ಗೂಳಿಯ ಥರ ಗಟ್ಟಿಗ ಅವನು. ಸಿಂಹದ ಹಾಗೆ ಧೈರ್ಯ ಅವನಿಗೆ. ಮನಸ್ಸು ಮಾತ್ರ ನೀರಿನ ಹಾಗೆ ದುರ್ಬಲ. ಅವನನ್ನು ನಾನು ಬಲವಂತವಾಗಿ ಎದ್ದು ಬರುವ ಹಾಗೆ ಮಾಡದಿದ್ದರೆ ಅವನ ಸ್ವಂತದ ಕೊನೆಯ ಕುದುರೆಯನ್ನೂ ಕಠಾರಿಯನ್ನೂ ಸೋತುಬಿಡುತ್ತಿದ್ದ. 

‘ಟಿಫ್ಲಿಸ್‍ಗೆ ಭೇಟಿಕೊಟ್ಟ ಮೇಲೆ ನನ್ನ ವಿಚಾರ ಬದಲಾದವು. ಮುದುಕಿ ಖಾನುಮ್‍ಳನ್ನು ಖಾನ್‍ಗಳನ್ನೂ ಘಜಾವತ್‍ಗೆ ಸೇರುವ ಹಾಗೆ ಪುಸಲಾಯಿಸಿದೆ.’

‘ನಿಮ್ಮ ಮನಸ್ಸು ಬದಲಾಗಿದ್ದು ಯಾಕೆ, ರಶಿಯನ್ನರನ್ನು ಕಂಡು ಖುಷಿಯಾಗಲಿಲ್ಲವಾ? ಲೋರಿಸ್ ಮೆಲಿಕೋವ್‍ ಕೇಳಿದ. 

ಹಾಜಿ ಮುರಾದ್ ಸುಮ್ಮನಿದ್ದ. 

‘ಇಲ್ಲ, ನನಗೆ ಖುಷಿಯಾಗಲಿಲ್ಲ,’ ಗಟ್ಟಿ ನಿರ್ಧಾರದ ದನಿಯಲ್ಲಿ ಹೇಳಿದ. ‘ಅಲ್ಲದೆ ಘಜಾವತ್‍ ಸೇರುವುದಕ್ಕೆ ಇನ್ನೊಂದು ಕಾರಣವಿತ್ತು,’ ಅಂದ. 

‘ಏನದು, ಕಾರಣ?’ 

‘ಏನಂದರೆ, ತ್ಸೆಲ್‍ಮೆಸ್ ಹತ್ತಿರ ನಾನೂ ಜೊತೆಗೆ ಖಾನ್ ಹೋಗುತ್ತಿದ್ದಾಗ ಮೂವರು ಮುರೀದ್‍ಗಳು ಎದುರಾದರು. ಇಬ್ಬರು ತಪ್ಪಿಸಿಕೊಂಡರು, ಒಬ್ಬನನ್ನು ನಾನು ಪಿಸ್ತೂಲಿನಿಂದ ಶೂಟ್ ಮಾಡಿದೆ. ಅವನ ಆಯುಧಗಳನ್ನು ತೆಗೆದುಕೊಳ್ಳಲು ಹತ್ತಿರ ಹೋದಾಗ ಅವನಿಗಿನ್ನೂ ಜೀವವಿತ್ತು. ನನ್ನನ್ನು ನೋಡಿ ಹೇಳಿದ—‘ನೀನು ನನ್ನನ್ನು ಕೊಂದೆ…ನನಗೆ ಸಂತೋಷ. ನೀನು ಮುಸ್ಲಿಂ, ಯುವಕ, ಗಟ್ಟಿಯಾಗಿದ್ದೀಯ. ಘಸಾವತ್‍ಗೆ ಸೇರಿಕೋ! ಇದು ದೇವರ ಇಚ್ಛ!’ ಅಂದ.’ 

‘ನೀನು ಸೇರಿದೆಯಾ?’

‘ಇಲ್ಲ. ಯೋಚನೆ ಶುರುವಾಯಿತು. ಹಮ್ಜಾದ್‍ ಒಮ್ಮೆ ಖುನ್‍ಝಕಾವರೆಗೂ ಬಂದಿದ್ದಾಗ ನಮ್ಮ ಹಿರೀಕರನ್ನು ಅವನ ಬಳಿಗೆ ಕಳಿಸಿ, ನಾವು  ಘಸಾವತ್‍ಗೆ ಸೇರುತ್ತೇವೆ, ಅದಕ್ಕೆ ಮೊದಲು ಅವನು ವಿದ್ವಾಂಸ ಇಮಾಮ್‍ರನ್ನು ಕಳಿಸಿ ನಮಗೆ ಆ ಬಗ್ಗೆ ವಿವರ ತಿಳಿಸಬೇಕು ಎಂದು ಸುದ್ದಿ ಕಳಿಸಿದೆವು. ಹಮ್ಜಾದ್‍ ನಮ್ಮ ಹಿರೀಕರ ತಲೆ ಬೋಳಿಸಿ, ಮೂಗು ಚುಚ್ಚಿಸಿ, ಮೂಗಿಗೆ ರೊಟ್ಟಿಗಳನ್ನು ನೇತು ಹಾಕಿ ವಾಪಸ್ಸು ಕಳಿಸಿದ. 

‘ಹಿರೀಕರು ಸುದ್ದಿ ತಂದರು. ಹಮ್ಜಾದ್‍ ನಮಗೆ ಘಸಾವತ್‍ ಬೋಧಿಸಲು ಶೇಖ್ ಒಬ್ಬರನ್ನು ಕಳಿಸುವುದಕ್ಕೆ ಒಪ್ಪಿದ್ದಾನೆ, ಅದಕ್ಕೆ ಬದಲಾಗಿ ಖಾನ್‍ಶಾ ತನ್ನ ಕಿರಿಯ ಮಗ ಬುಲಾಚ್‍ ಖಾನ್‍ನನ್ನು ಒತ್ತೆಯಾಳಾಗಿ ಕಳಿಸಬೇಕು ಅಂದರು. ಹಮ್ಜಾದ್‍ ಅವನಿಗೆ ಒಳ್ಳೆಯ ಸ್ವಾಗತ ನೀಡಿದ. ಇನ್ನಿಬ್ಬರು ದೊಡ್ಡ ಅಣ್ಣಂದಿರನ್ನೂ ಕಳಿಸಬೇಕೆಂದು ಹೇಳಿಕಳಿಸಿದ. ನಮ್ಮಪ್ಪ ನಿಮ್ಮಪ್ಪನ ಸೇವೆ ಮಾಡಿದ್ದ ಹಾಗೇ ನಾನು ಕೂಡ ಖಾನ್ ಮನೆತನದ ಸೇವೆ ಮಾಡುತ್ತೇನೆ, ಖಾನ್ ನನಗೆ ತಂದೆ ಸಮಾನ ಎಂದು ಹೇಳಿದ್ದ.  ಖಾನ್‍ಶಾಗಳ ಮನಸ್ಸು ದುರ್ಬಲ, ಅವಳು ಪೆದ್ದಿ, ಕುಟಿಲ ಹೆಂಗಸು. ಸರಿಯಾದ ನಿಯಂತ್ರಣವಿರದಿದ್ದರೆ ಎಲ್ಲ ಹೆಂಗಸರೂ ಹೀಗೆಯೇ. ಇಬ್ಬರು ಗಂಡು ಮಕ್ಕಳನ್ನೂ ಕಳಿಸುವುದಕ್ಕೆ ಅಂಜಿದಳು. ಉಮ್ಮಾ ಖಾನ್ ಒಬ್ಬನನ್ನೇ ಕಳಿಸಿದಳು. ಜೊತೆಯಲ್ಲಿ ನಾನೂ ಹೋಗಿದ್ದೆ.  ಆ ಊರಿಗೆ ಇನ್ನೂ ಒಂದು ಮೈಲು ದೂರವಿರುವಾಗಲೇ ಮುರೀದರು ನಮಗೆದುರಾದರು. ಅವರು ಹಾಡಿದರು, ಗುಂಡು ಹಾರಿಸಿದರು, ನಮ್ಮ ಸುತ್ತ ಕುದುರೆಗಳನ್ನು ಕುಣಿಸಿದರು. ನಾವು ಸಮೀಪವಾದಾಗ ಹಮ್ಜಾದ್‍ ಟೆಂಟಿನಿಂದಾಚೆಗೆ ಬಂದ. ಉಮ್ಮಾಖಾನ್‍ ನ ಕುದುರೆಯ ರಿಕಾಪು ಹಿಡಿದು ಖಾನ್‍ನನ್ನು ಸ್ವಾಗತಿಸುವ ಹಾಗೆಯೇ ಸ್ವಾಗತಿಸಿದ. 

‘ನಾನು ನಿಮ್ಮ ಮನೆಗೆ ಕೆಡುಕು ಮಾಡಿಲ್ಲ, ಮಾಡುವುದೂ ಇಲ್ಲ. ಘಸಾವತ್‍ಗೆ ಜನರನ್ನು ಕೂಡಿಸುವುದಕ್ಕೆ ಅಡ್ಡಿ ಮಾಡಬೇಡ. ನಮ್ಮಪ್ಪ ನಿಮ್ಮ ಮನೆತನದ ಸೇವೆ ಮಾಡಿದ ಹಾಗೆಯೇ ನಾನೂ ಸೇವೆ ಮಾಡುತ್ತೇನೆ. ನಿಮ್ಮ ಮನೆಯಲ್ಲಿರುವುದಕ್ಕೆ ಅವಕಾಶ ಕೊಡು, ಅಗತ್ಯ ಬಿದ್ದರೆ ಸಲಹೆ ಸೂಚನೆ ಕೊಡುತ್ತೇನೆ, ನೀನು ನಿನ್ನಿಷ್ಟ ಬಂದ ಹಾಗೆ ಮಾಡಬಹುದು!’ ಅಂದ. 

ವಿಧರ್ಮಿಗಳ ವಿರುದ್ಧ ನಡೆಸುವ ಧರ್ಮಯುದ್ಧ: ಇದನ್ನು ಹೇಳಲು ಈಗ ಪಶ್ಚಿಮ ದೇಶಗಳಲ್ಲಿ ಜಿಹಾದ್ ಎಂಬ ಅರಾಬಿಕ್ ಪದ ಬಳಕೆಯಾಗುತ್ತಿದೆ. ಬೆಟ್ಟಗಾಡುಗಳ ಸಮುದಾಯಕ್ಕೆ ಜಿಹಾದ್ ನಡೆಸುವ ಪ್ರೇರಣೆಯನ್ನು 1785ರಲ್ಲಿ ಶೇಖ್ ಮನ್ಸೂರ್ ಎಂಬಾತ ನೀಡಿದ. ಆ ವರ್ಷ ರಶಿಯದ ಸಾಮ್ರಾಜ್ಞಿ ಕ್ಯಾತರೀನ್ ದಿ ಗ್ರೇಟ್ ಜಾರ್ಜಿಯಾ ಪ್ರಾಂತದ ಮೇಲೆ ರಶಿಯನ್ ಪ್ರಭುತ್ವದ ಅಧಿಕಾರವಿದೆ ಎಂದು ಘೋಷಿಸಿದ್ದಳು. ಹಾಗಾಗಿ ಬೆಟ್ಟಗಾಡುಗಳ ಮುಸ್ಲಿಂ ಸಮುದಾಯ ಕ್ರಿಶ್ಚಿಯನ್ನರೇ ಮುಖ್ಯವಾಗಿದ್ದ ರಶಿಯದ ವಿರುದ್ಧ ಧರ್ಮಯುದ್ಧದಲ್ಲಿ ತೊಡಗಿತ್ತು. 

‘ಉಮ್ಮಾ ಖಾನ್‍ಗೆ ಮಾತು ಸಲೀಸಾಗಿ ಹೊರಡುತ್ತಿರಲಿಲ್ಲ. ಏನು ಉತ್ತರ ಹೇಳಬೇಕೆಂದು ಅವನಿಗೆ ತಿಳಿಯಲಿಲ್ಲ. ಸುಮ್ಮನೆ ಇದ್ದುಬಿಟ್ಟ. ಆಗ ನಾನು, ‘ಹಾಗಾದರೆ ಹಮ್ಜಾದ್‍ ಖುನ್‍ಝಾಕ್‍ಗೆ ಬರಲಿ, ಖಾನ್‍ಶಾ ಮತ್ತು ಖಾನ್ ಮನೆಯವರು ಅವನನ್ನು ಗೌರವದಿಂದ ಬರಮಾಡಿಕೊಳ್ಳುತ್ತಾರೆ…’ ಎಂದು ಹೇಳುವುದಕ್ಕೆ ಹೋದೆ. ನಾನು ಮಾತು ಮುಗಿಸಲು ಅವಕಾಶವನ್ನೇ ಕೊಡಲಿಲ್ಲ. ಆ ಕ್ಷಣದಲ್ಲಿ ನಾನು ಶಮೀಲ್‍ನನ್ನು ಮೊದಲು ನೋಡಿದೆ. ಅವನು ಇಮಾಮ್‍ನ ಪಕ್ಕದಲ್ಲಿದ್ದ. ‘ನಿನ್ನನ್ನು ಯಾರೂ ಕೇಳಲಿಲ್ಲ. ಕೇಳಿದ್ದು ಖಾನ್ ಅವರನ್ನ!’ ಎಂದ. 

‘ನಾನು ಸುಮ್ಮನಾದೆ. ಹಮ್ಜಾದ್‍ ಉಮ್ಮಾ ಖಾನ್‍ನನ್ನು ತನ್ನ ಟೆಂಟಿಗೆ ಕರೆದುಕೊಂಡು ಹೋದ. ಆಮೇಲೆ ಹಮ್ಜಾದ್‍ ನನ್ನನ್ನು ಕರೆದು ತನ್ನ ಸುದ್ದಿ ದೂತರ ಜೊತೆಯಲ್ಲಿ ಖುನ್‍ಝಾಕ್‍ಗೆ ಹೋಗು ಅಂದ. ನಾನು ಹೋದೆ. ಈ ದೂತರು ನಿಮ್ಮ ದೊಡ್ಡ ಮಗನನ್ನೂ ಖಾನ್‍ಶಾ ಹಮ್ಜಾದ್‍ ಬಳಿಗೆ ಕಳಿಸಬೇಕೆಂದು ಪುಸಲಾಯಿಸುವುದಕ್ಕೆ ತೊಡಗಿದರು. ನನಗೆ ಇದರಲ್ಲೇನೋ ದ್ರೋಹ ಕಂಡಿತು. ಆದರೂ ಹೆಂಗಸರ ತಲೆಯಲ್ಲಿರುವ ಬುದ್ಧಿ ಮಾತ್ರ ಕೋಳಿ ಮೊಟ್ಟೆಯ ಮೇಲೆ ಕೂದಲು ಎಷ್ಟಿರುತ್ತದೋ ಅಷ್ಟೇ. ಮಗ ಹೋಗಬೇಕು ಅಂದಳು. ಅಬು ಖಾನ್‍ಗೆ ಹೋಗಲು ಇಷ್ಟವಿರಲಿಲ್ಲ. ಆಗ ಅವಳು, ‘ನನಗೆ ಗೊತ್ತು, ನಿನಗೆ ಭಯ!’ ಅಂದಳು. ಎಲ್ಲಿ ಕಚ್ಚಿದರೆ ನೋವಾಗುತ್ತದೆ ಅನ್ನುವುದು ಜೇನು ಹುಳಕ್ಕೆ ಗೊತ್ತಿರುವ ಹಾಗೆ ಯಾವ ಮಾತಾಡಿದರೆ ಮನಸ್ಸು ನೋಯುತ್ತದೆ ಅನ್ನುವುದು ಅವಳಿಗೆ ಗೊತ್ತಿತ್ತು.  ಅಬು ಖಾನ್‍ ಮುಖ ಕೆಂಪಾಯಿತು. ಅವಳ ಜೊತೆ ಮತ್ತೆ ಮಾತಾಡಲೇ ಇಲ್ಲ. ಕುದುರೆಗೆ ಕಡಿವಾಣ ಹಾಕಿ, ಜೀನು ಹಾಕಿ ಎಂದು ಆಜ್ಞೆ ಮಾಡಿದ. ಅವನ ಜೊತೆಯಲ್ಲಿ ನಾನೂ ಹೋದೆ. 

‘ಹಮ್ಜಾದ್‍ ನಮಗೆ ತೋರಿ ಗೌರವ ಅವನು ಉಮ್ಮಾ ಖಾನ್‍ಗೆ ತೋರಿಸಿದ್ದಕ್ಕಿಂತ ಮಿಗಿಲಾಗಿತ್ತು. ಅವನೇ ಸ್ವತಃ ಬೆಟ್ಟ ಇಳಿದು ನಮ್ಮನ್ನು ಎದುರುಗೊಳ್ಳಲು ಬಂದ. ಅವನ ಜೊತೆಯಲ್ಲಿ ಬಾವುಟ ಹಿಡಿದ ಕುದುರೆ ಸವಾರರ ಪಡೆಯೇ ಇತ್ತು. ಅವರೂ ಹಾಡುತ್ತ, ಆಕಾಶಕ್ಕೆ ಗುಂಡು ಹಾರಿಸುತ್ತ, ಕುದುರೆಗಳನ್ನು ಕುಣಿಸುತ್ತ ಬರುತ್ತಿದ್ದರು. 

‘ನಾವು ಪಾಳೆಯ ತಲುಪಿದಾಗ ಹಮ್ಜಾದ್‍  ಖಾನ್‍ನನ್ನು ಕರೆದುಕೊಂಡು ಗುಡಾರದೊಳಕ್ಕೆ ಹೋದ. ನಾನು ಕುದುರೆಗಳ ಜೊತೆ ಉಳಿದೆ.

‘ನಾನು ಒಂದಷ್ಟು ಬೆಟ್ಟ ಇಳಿಯುವ ಹೊತ್ತಿಗೆ ಹಮ್ಜಾದ್‍ನ ಗುಡಾರದಿಂದ ಗುಂಡು ಹಾರಿಸಿದ ಸದ್ದು ಕೇಳಿಸಿತು. ಓಡಿ ಹೋಗಿ ನೋಡಿದೆ. ಉಮ್ಮಾ ಖಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಅಬು ಖಾನ್ ಮುರೀದ್‍ಗಳ ಜೊತೆ ಹೋರಾಡುತ್ತಿದ್ದ. ಒಂದು ಕೆನ್ನೆ ಕತ್ತರಿಸಿ ಹೋಗಿತ್ತು. ಅದನ್ನು ಒಂದು ಕೈಯಲ್ಲಿ ಒತ್ತಿ ಹಿಡಿದು ಹೋರಾಡುತ್ತಿದ್ದ. ಹತ್ತಿರ ಬಂದವರನ್ನೆಲ್ಲ ಕಠಾರಿಯಿಂದ ತಿವಿಯುತ್ತಿದ್ದ. ಅವನು ಹಮ್ಜಾದ್‍ನ ತಮ್ಮನನ್ನು ಹೊಡೆದು ಬೀಳಿಸಿದ. ಇನ್ನೊಬ್ಬ ಮನುಷ್ಯನನ್ನು ತಿವಿಯುವುದರಲ್ಲಿದ್ದ. ಅಷ್ಟರಲ್ಲಿ ಮುರೀದ್‍ ಹಾರಿಸಿದ ಗುಂಡು ತಾಗಿ ಅವನು ಬಿದ್ದ.’

ಹಾಜಿ ಮುರಾದ್ ಮಾತು ನಿಲ್ಲಿಸಿದ. ಬಿಸಿಲಲ್ಲಿ ಬೆಂದಿದ್ದ ಮುಖ ಕಡುಕೆಂಪಿಗೆ ತಿರುಗಿತು. ಕಣ್ಣಿಗೆ ನೆತ್ತರುಕೆಂಬಣ್ಣ ಬಂದಿತ್ತು.

‘ನನಗೆ ಭಯವಾಯಿತು. ಓಡಿ ಹೋದೆ.’

‘ನಿಜವಾಗಲೂ?…ನಿನಗೆ ಯಾವತ್ತೂ ಭಯ ಆಗೇ ಇಲ್ಲ ಅಂದುಕೊಂಡಿದ್ದೆ…’ ಅಂದ ಲೋರಿಸ್‍-ಮೆಲಿಕೋವ್‍.

‘ಅವತ್ತೇ ಕೊನೆ. ಮತ್ತೆಂದೂ ಭಯವಾಗಲಿಲ್ಲ…ಅವತ್ತು ನನಗಾದ ನಾಚಿಕೆಯನ್ನು ನೆನಪಿಟ್ಟುಕೊಂಡೆ. ಅದು ನೆನಪಾದಾಗ ನನಗೆ ಯಾವ ಭಯವೂ ಇರುತ್ತಿರಲಿಲ್ಲ!’

| ಮುಂದುವರೆಯುವುದು |

‍ಲೇಖಕರು Admin

December 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: