ಹಿರಿಯ ಪತ್ರಕರ್ತರಾದ ಎಚ್ ಎನ್ ಆನಂದ ಅವರ ಕೃತಿ ‘ರಿವರ್ಸ್ ಲಂಚ’ ಇದೇ ತಿಂಗಳ 28 ರಂದು ಬಿಡುಗಡೆಯಾಗುತ್ತಿದೆ.
ತೇಜು ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕೃತಿಗೆ ನಮ್ಮ ಹೆಮ್ಮೆಯ ವಿಮರ್ಶಕ, ಭಾಷಣಕಾರರಾದ ಪ್ರೊ ಎಂ ಕೃಷ್ಣೇಗೌಡರು ಬರೆದಿರುವ ಮುನ್ನುಡಿ ಇಲ್ಲಿದೆ-
ಚುರುಮುರಿ ಚಪ್ಪರಿಸುವ ಮೊದಲಿಗೆ…

ಪ್ರೊ. ಎಂ. ಕೃಷ್ಣೇಗೌಡ
*
ಚುರುಮುರಿ ಗೊತ್ತಲ್ವಾ ನಿಮಗೆ? ತಿಂದಿದ್ದೀರಾ?
ಏನ್ ಪ್ರಶ್ನೆ ಅಂತ ಕೇಳ್ತೀರಿ? ಈ ಕಾಲದಲ್ಲಿ ಚುರುಮುರಿ ಗೊತ್ತಿಲ್ಲ, ಅದನ್ನ ನಾನು ತಿಂದಿಲ್ಲ ಅನ್ನೋರು ಯಾರಿದ್ದಾರೆ?
ಹಲ್ಲಿಲ್ಲದವರು ಕಡಲೆ ತಿನ್ನೋಕಾಗಲ್ಲ, ಆದರೆ ಚುರುಮುರಿ ಚಪ್ಪರಿಸಬಹುದು. ಸ್ಟಾರ್ ಹೋಟೆಲ್ಗಳಲ್ಲಿ ಸಿಗಲ್ಲ ಅದು. ಎಲ್ಲೆಲ್ಲೋ ಒಂದೊಂದು ಕಡೆ ಸಣ್ಣ ಸಣ್ಣ ಅಂಗಡಿಗಳಲ್ಲಿ ಸಿಗಬಹುದು. ಆದರೆ ರಸ್ತೆ ಬದಿ ಕೈಗಾಡಿಗಳಲ್ಲಿ ಸಿಗೋ ಚುರುಮುರಿನೇ ಚುರುಮುರಿ. ಅದರಲ್ಲೂ ಆ ಚುರುಮುರಿ ಮಾಡುವವನ ಕೈಚಳಕ ನೋಡಬೇಕು, ಅದೂ ಒಂದು ಚಂದ. ಗಾಡಿಯ ಮೇಲೆ ಎರಡು ಕಡೆ ಗಾಜು ಹಾಕಿರೋ ತಗಡಿನ ಡಬ್ಬದಲ್ಲಿ ಗರ್ಮಾ ಗರಂ ಪುರಿ. ಅಲ್ಲೊಂದಿಷ್ಟು ಕ್ಯಾರೆಟ್ ಗಳು. ಅವನ್ನ ನಿಮ್ಮೆದುರಿಗೇ ಒಂದು ತುರಿಮಣೆಯ ಮೇಲೆ ಗರಾ ಗರಾ ತುರೀತಾನೆ. ಸಿಪ್ಪೆ ಬಿಡಿಸಿಟ್ಟಿರುವ ಈರುಳ್ಳಿ ತಕ್ಕೊಂಡು ಚಕಾಚಕಾ ಕತ್ತರಿಸ್ತಾನೆ. ಆಮೇಲೆ ಶೀಸೆಗಳಲ್ಲಿ ಎಂತೆಂಥವೋ ನಾಲ್ಕೈದು ದ್ರಾವಣ, ಪುಡಿಗಳು, ಒಂದು ಡಬ್ಬದಲ್ಲಿ ಕಾಂಗ್ರೆಸ್ ಕಡ್ಲೇಕಾಯಿ ಬೀಜ, ( ನೀವು ಬಿಜೆಪಿ, ಜೆಡಿಎಸ್ ಯಾವುದೇ ಆಗಿದ್ದರೂ ಅಲ್ಲಿ ಹಾಕುವುದು ಕಾಂಗ್ರೆಸ್ ಕಡ್ಲೇಕಾಯಿ ಬೀಜಾನೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಅನ್ನೋ ಬಿಜೆಪಿ ಯವರಿಗೆ ಚುರುಮುರಿಯನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ.)
ಈಗ ಚುರುಮುರಿಯವನ ಹತ್ತಿರ ಹೋಗಿ “ನಾಲ್ಕು ಚುರುಮುರಿ!” ಅನ್ನಿ. ಈಗ ಶುರು ಅವನ ಪ್ರತಿಭಾ ಪ್ರದರ್ಶನ. ಒಂದು ಸ್ಟೀಲ್ ಬೋಸಿಯ ಒಳಕ್ಕೆ ಆ ಪುರಿ ಡಬ್ಬದಿಂದ ನಾಲ್ಕು ಪಾವಿನಷ್ಟು ಪುರಿಯನ್ನು ಅಳೆದು ಹಾಕುತ್ತಾನೆ. ಅದಕ್ಕೆ ಕ್ಯಾರೆಟ್ ತುರಿ, ಉತ್ತರಿಸಿದ ಈರುಳ್ಳಿ ಹಾಕಿ ಒಂದು ಅಡುಗೆಮನೆ ಚಮಚದಿಂದ ಗಂಟೆಗೆ ನೂರಿನ್ನೂರು ಕಿಲೋಮೀಟರುಗಳ ವೇಗದಲ್ಲಿ ಗರಗರಗರ ತಿರುಗಿಸುತ್ತಾನೆ. ಆಮೇಲೆ ಆ ಶೀಸೆಗಳಲ್ಲಿರುವ ತರಾವರಿ ದ್ರಾವಣ ಪುಡಿಗಳನ್ನು ವಿವಿಧ ಹಸ್ತ ಮುದ್ರೆಗಳಿಂದ ಚಿಮುಕಿಸುತ್ತಾನೆ. ನಿಮಗೆ ಖಾರ ಜಾಸ್ತಿ ಬೇಕು ಅಂದರೆ ಇನ್ನೊಂದೈದಾರು ತೊಟ್ಟು ಹಸಿರು ದ್ರಾವಣವನ್ನು ಹನಿಸುತ್ತಾನೆ. ಚುರುಮುರಿಯ ರುಚಿ ನಾಲಗೆ ಚುರುಕ್ ಅನ್ನಬೇಕಾದರೆ ಅಷ್ಟು ಸಾಕು. ರುಚಿ ಬ್ರಹ್ಮ ರಂಧ್ರವನ್ನು ತಲುಪಬೇಕೆಂದರೆ ಇನ್ನೊಂದು ನಾಲ್ಕು ಹನಿ ಹಾಕಿಸಿಕೊಳ್ಳಬೇಕು.

ಆಮೇಲೆ ಕೈಯಳತೆಯಲ್ಲಿ ಒಂದಿಷ್ಟು ಉಪ್ಪು ಹಾಕಿ, ಹಿಡಿತುಂಬಾ ತೆಗೆದುಕೊಂಡಂತೆ ನಟಿಸಿ ಅದರ ಕಾಲುಭಾಗದಷ್ಟು ಕಾಂಗ್ರೆಸ್ ಕಡಲೆಬೀಜ ಹಾಕುತ್ತಾನೆ. ಅಂತೂ ಎಲ್ಲಾ ಬಿದ್ದ ಮೇಲೆ ಕೊನೆಗೇ ಕಾಂಗ್ರೆಸ್ ಬೀಳೋದು! ಅಪಾರ್ಥ ಮಾಡಿಕೊಳ್ಳಬೇಡಿ, ನಾನು ಕಾಂಗ್ರೆಸ್ ಕಡಲೆ ಬೀಜದ ಬಗ್ಗೆ ಹೇಳ್ತಾ ಇದ್ದೀನಿ. ನಾನು ಇಷ್ಟು ದೀರ್ಘವಾಗಿ ಬರೆದು ಹೇಳಿದ ಈ ಕ್ರಿಯೆ ಅಲ್ಲಿ ಚಕಾ ಚಕ್ ಅಂತ ಒಂದೆರಡು ಚಿಟಿಕೆ ಹಾರಿಸುವುದರಲ್ಲಿ ಮುಗಿದುಹೋಗಿರುತ್ತದೆ. ಇದನ್ನು ನೋಡುತ್ತಾ ನಿಂತಿರುವ ನಿಮ್ಮ ಬಾಯಲ್ಲಿ ಚಿಳ್ ಅಂತ ಕಿತ್ತುಕೊಂಡಿರುವ ನೀರು ತುಟಿ ಮೀರಿ ಸುರಿಯುವ ಮೊದಲು ಮತ್ತೆ ಅದೇ ನೂರಿನ್ನೂರು ಕಿಲೋ ಮೀಟರ್ ಗಳ ವೇಗದಲ್ಲಿ ಆ ಚಮಚದಿಂದ ಗರಗಾರಾ ತಿರುಗಿಸಿ ಶಂಕಾಕಾರದಲ್ಲಿ ಸುತ್ತಿಟ್ಟಿರುವ ಕಾಗದದ ಕಪ್ಪುಗಳಿಗೆ ಸಮಾನವಾಗಿ ಹಂಚಿ ತುಂಬಿ ನಿಮಗೆ ಕೊಡುತ್ತಾನೆ.
ಚುರುಮುರಿಯನ್ನು ನೀವು ಅಲ್ಲೇ ತಿನ್ನಬೇಕು. ಮನೆಗೆ ಹೋಗಿ ತಿನ್ನೋಣ ಅಂದ್ರೆ ಮೆತ್ತಗಾಗಿರುತ್ತೆ. ರಸ್ತೆಬದಿಯಲ್ಲಿ ತಯಾರಾದ ಚುರುಮುರಿಯನ್ನು ರಸ್ತೆಬದಿಯಲ್ಲೇ ತಿನ್ನಬೇಕು. ಆ ರಸ್ತೆಯ ಧೂಳು, ಸುತ್ತಮುತ್ತ ಓಡಾಡುವ ಲಾರಿ, ಆಟೋ, ಕ್ಯಾಬುಗಳ ಡೀಸೆಲ್ ಹೊಗೆ ಇದೆಲ್ಲಾ ಸೇರಿದಾಗಲೇ ಆ ರಸ್ತೆ ಚುರುಮುರಿಗೆ ಒಂದು ವಿಶೇಷ ರುಚಿ ಸ್ವಾದ ಪ್ರಾಪ್ತಿಯಾಗೋದು.
ಕ್ಷಮಿಸಿ, ನಾನಿವತ್ತು ಬರೆಯೋದಕ್ಕೆ ಹೊರಟದ್ದು ಆ ಚುರುಮುರಿಯ ಬಗ್ಗೆ ಅಲ್ಲ. ಮಾತು ಎತ್ತೆತ್ತಲೋ ಹೋಯಿತು. ಆದರೂ ಬರೆದದ್ದು ತೀರಾ ತಪ್ಪಲ್ಲ ಅಂದುಕೊಂಡಿದ್ದೀನಿ. ಇದನ್ನು ಓದುವಾಗ ಈ ಪುಸ್ತಕದ ನೇಮು, ಕಾನ್ಸೆಪ್ಟು, ಕಂಟೆಂಟುಗಳನ್ನು ಈ ಬರವಣಿಗೆ ಎಲ್ಲೋ ಹೇಗೋ ಧ್ವನಿಸುವುದು ನಿಮ್ಮ ಅನುಭವಕ್ಕೆ ಬರಬಹುದು. ಇರಲಿ, ಈಗ ವಿಷಯಕ್ಕೆ ಬರುತ್ತೇನೆ.
ನಮ್ಮ ಪ್ರೀತಿಯ ಲೇಖಕ ಆನಂದ ಅವರು ಈ ಉಪ್ಪು ಹುಳಿ ಒಗರು ಖಾರದ ಲವಾಜಮೆಗಳನ್ನು ಗರಾಗರ ತಿರುಗಿಸಿ ಹದವಾಗಿ ಮಿಶ್ರಣ ಮಾಡಿ ಈ ತಾಜಾ ತಾಜಾ ಚುರುಮುರಿಯನ್ನು ಓದುಗರಿಗೆ ನೀಡಿದ್ದಾರೆ. ನಮ್ಮ ‘ಅಪರಂಜಿ’ ಮಾಸಪತ್ರಿಕೆಯಲ್ಲಿ ದ ನಂ ಆ ಅನ್ನುವ ಹೆಸರಿನಲ್ಲಿ ತುಂತುರು ಎಂಬುದೊಂದು ಸೊಗಸಾದ ಅಂಕಣ ಬರೆಯುತ್ತಾರೆ. ನನಗಂತೂ ಅಪರಂಜಿ ಕೈಗೆ ಬಂದ ಕೂಡಲೇ ಮೊದಲು ಓದುವುದೇ ಈ ತುಂತುರು ಕಾಲಂ. ನಾನು ಇದನ್ನು ಅಪರಂಜಿಯ ಇನ್ನೊಂದಿಬ್ಬರು ಓದುಗ ಮಿತ್ರರೊಂದಿಗೆ ಹೇಳಿದಾಗ ಅವರು, “ನಾವು ತಾನೇ ಇನ್ನೇನು? ನಾವೂ ಅದನ್ನೇ ಮೊದಲು ಓದೋದು ” ಅಂದರು. ತುಂತುರಿನಲ್ಲಿ ಅವರು ಚಿಮುಕಿಸುವ ಒಂದೊಂದೂ ಮಾತುಗಳು ಅಹ್! ಬ್ರಿಲಿಯಂಟ್! ಅನ್ನಿಸುತ್ತವೆ. ಹೌದು, ನಿಜಕ್ಕೂ ಬ್ರಿಲಿಯಂಟ್! ನಿಜವಾಗಿಯೂ ಆನಂದ!!

ನಿರಂತರವಾಗಿ ತುಂತುರು ಓದುವವರಿಗೆ ಆನಂದರ ದೃಷ್ಟಿಕೋಣ, ಕ್ಷಮಿಸಿ ದೃಷ್ಟಿಕೋನ ಎಂಥದು? ಅವರ ಗ್ರಹಿಕೆ, ಅಭಿರುಚಿ, ಅಭಿವ್ಯಕ್ತಿ ಕ್ರಮ ಎಂಥದು ಎಂಬ ಒಂದು ಅಂದಾಜು ಸಿಗುತ್ತದೆ. ಇಂದಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳನ್ನು ಒಂದಿಷ್ಟು ವಾರೆಯಾಗಿ ನೋಡಿ ವಕ್ರವಾಗಿ ಹೇಳುವುದರಲ್ಲಿ ಅವರಿಗೊಂದು ಮಜಾ ಸಿಗುತ್ತದೆ. ( ವಕ್ರವಾಗಿ ಅಂದೆ ಅಂತ ನೀವೂ ನಿಮ್ಮ ಮುಖ ವಕ್ರ ಮಾಡಿಕೊಳ್ಳಬೇಡಿ. ವಕ್ರಕ್ಕೆ ಸೌಂದರ್ಯ ಎಂಬರ್ಥವೂ ಇದೆ.)
ಏನು ಗೊತ್ತಾ? ಈವತ್ತು ನಮ್ಮ ಸಾಮಾಜಿಕ ಮತ್ತು ರಾಜಕೀಯ ಅಡಾವುಡಿ ಅಪಸವ್ಯಗಳ ಬಗ್ಗೆ ಸೂಕ್ಷ್ಮ ಸಂವೇದನೆಯುಳ್ಳ ಯಾರಿಗೇ ಆದರೂ ಒಂದು ಬೇಸರ ಅಸಮಾಧಾನ, ಅತೃಪ್ತಿ, ಇದ್ದೇ ಇರುತ್ತದೆ. ಕೆಲವರಿಗೆ ಅದು ಸಿಟ್ಟು ಅನ್ನುವಷ್ಟಿರಬಹುದು. ಅದನ್ನು ಹೊರಹಾಕುವುದು ಹೇಗೆ? ಬಹುಶಃ ವ್ಯಂಗ್ಯ ಅದಕ್ಕೊಂದು ಒಳ್ಳೆಯ ಮಾರ್ಗ. ಇನ್ಯಾರಿಗೋ ಚರ್ಮ ದಪ್ಪವಿದ್ದರೆ ಆ ವ್ಯಂಗ್ಯ ತಾಕದಿರಬಹುದು ನಿಜ, ಆದರೆ ತಾಕುವವರಿಗೆ ತಾಕುತ್ತದೆ. ನಮ್ಮ ರಾಜಕಾರಣಿಗಳ ಮಾತು, ನಡೆವಳಿಕೆ, ಕೀರ್ತಿಶನಿ ಹಿಡಿದವರ ವಿವಿಧ ವಿನೋದಾವಳಿಗಳು, ನಮ್ಮ ಮಿಡ್ಲ್ ಕ್ಲಾಸ್ ಮಂದಿಯ ಪರದಾಟ ಪಡಿಪಾಟಲುಗಳು ಇವೆಲ್ಲದರ ಕಡೆಗೆ ವಾರೆನೋಟ ಬೀರಿರುವ ಆನಂದ ಅವರು ತಮಗೆ ಈಗಾಗಲೇ ಸಿದ್ಧಿಸುವ ಅದೇ ಬ್ರಿಲಿಯಂಟ್ ಶೈಲಿಯಲ್ಲಿ ನಿರೂಪಿಸಿದ್ದಾರೆ.
ಇಲ್ಲಿಯ ಲೇಖನಗಳು ‘ಪ್ರಜಾವಾಣಿ’ಯ ಅದೇ ಹೆಸರಿನ ಅಂಕಣಕ್ಕಾಗಿ ಬರೆದಂಥವು. ಹಾಗಂತ ಸಂತೆ ಹೊತ್ತಿಗೆ ನೇಯ್ದಂಥವು ಅಂತ ಉದಾಸೀನ ಮಾಡುವಂತಿಲ್ಲ. ಆನಂದ ನಾವು ಓದಿ ಚಪ್ಪರಿಸುವಂಥಾ ಬರಹಗಳನ್ನು ಬರೆದಿದ್ದಾರೆ. ಕಾಂಪ್ಲಿಮೆಂಟರಿ ಕಾಪಿ ಓದುವವರಷ್ಟೇ ಅಲ್ಲದೆ ಕೊಂಡು ಓದುವವರಿಗೂ ಇಲ್ಲಿನ ಲೇಖನಗಳ ರುಚಿ ಆಸ್ವಾದ್ಯವಾಗಿದೆ. ಇವನ್ನು ಒಂದು ಕಡೆಯಿಂದ ಆರಂಭಿಸಿ ಒಂದೇ ಬಾರಿಗೆ ಓದಬೇಕೆಂದೇನೂ ಇಲ್ಲ. ಪುಸ್ತಕ ತೆರೆದಾಗ ಯಾವ ಪುಟ ಎದುರಾಗುತ್ತದೆಯೋ ಅದನ್ನೇ ಓದಿ. ಮತ್ತೆ ಮತ್ತೆ ನಿಮಗಿಷ್ಟ ಬಂದಾಗ ಓದಿ. ಅಲ್ಲಲ್ಲಿ ಕೆಲವು ಆಲೋಚನೆಯ ನಿಲ್ದಾಣಗಳು ಸಿಗುತ್ತವೆ. ಅಲ್ಲೊಂದಿಷ್ಟು ನಿಂತು ಆಲೋಚಿಸಿ ಮತ್ತೆ ಮುಂದುವರಿಯಿರಿ.
ಅಯ್ಯೋ ದೇವ್ರೆ! ನಾನೇ ಜಾಸ್ತಿ ಕೊರೆದುಬಿಟ್ಟೆ ಅಂತ ಕಾಣಿಸುತ್ತೆ. ಸಧ್ಯಕ್ಕಿಷ್ಟು ಸಾಕು. ಪುಟತೆರೆದು ಓದುತ್ತಾ ಹೋಗಿ. ನಾನು ಪಂಚ ಗ್ಯಾರಂಟಿ, ಗಿಂಚ ಗ್ಯಾರಂಟಿ ಕೊಡಲಾರೆ. ಒಂದೇ ಗ್ಯಾರಂಟಿ – ಪುಸ್ತಕ ನಿಮಗೆ ಖುಷಿ ಕೊಡುತ್ತದೆ.
ಇನ್ನು ಇಂಥದೊಂದು ಚಂದದ ಪುಸ್ತಕಕ್ಕೆ ನನ್ನಿಂದ ಮುನ್ನುಡಿಸಿಕೊಂಡು ನನ್ನನ್ನು ಗೌರವಿಸಿದ ಲೇಖಕ ಆನಂದ ಅವರಿಗೆ ಆತ್ಮೀಯ ಕೃತಜ್ಞತೆಗಳನ್ನು ಹೇಳುತ್ತಾ ವಿರಮಿಸುತ್ತೇನೆ.
ಇನ್ನು ಓದುತ್ತಾ ಹೋಗಿ. ನಿಮಗೆ ಸುಖಪ್ರಯಾಣವಾಗಲಿ






0 Comments