
ಜಯಶ್ರೀ ಸುಕಾಲೆ
ಹಾಗೆ ಸುಮ್ಮನೆ
ವಿಶಾಲ ವಿಶ್ವದಲಿ ಹಾಗೆ ಸುಮ್ಮನೆ
ಕನವರಿಸುವ ಜೀವಗಳು ಬಿಮ್ಮನೆ.
ಪ್ರೇಯಸಿಯ ಮಿಲನದ ಸಂಭ್ರಮದಲಿ
ಭಿಕ್ಷುಕನ ನೋಡುತ್ತ ಆತ ದಾರಿಯಲಿ
ಸಾಗುತ್ತಾ ವೇಗದಿ ಉದ್ಯಾನವನದಲಿ
ಕಾದು ಕುಳಿತ ಆಕೆ ಬರುವ ಕನಸಲಿ.
ಕುಳಿತು ಹೂಗುಚ್ಛ ಹಿಡಿದು ಕೈಯಲಿ
ಸಾಕಾಗಿ ಹೋಯಿತು ಎಷ್ಟು ಕಾಯಲಿ
ಹೊಳೆಯಿತು ಆಗ ನೊಂದ ಮನದಲಿ
ಮೊಗವು ಅರಳಿತು ಯೋಚನೆಯಲಿ.

ಸರಸರನೆ ನಡೆದ, ಬಂದ ದಾರಿಯಲಿ
ರಸ್ತೆಬದಿಯಲಿ ಕುಳಿತ ಭಿಕ್ಷುಕನಲಿ
ಹಾಸಿದ ಕರವಸ್ತ್ರ ಅಲ್ಲಿ ಮೌನದಲಿ
ಹೂಗಳನೆಲ್ಲ ಮಾರಾಟಕ್ಕೆ ನೀಡುತಲಿ.
ಹಸಿವಿನ ತೊಳಲಾಟಕ್ಕೆ ಮಣಿಯುತ್ತ
ನಿರಂತರ ಭಿಕ್ಷಾಟನೆಗೆ ಇಳಿಯುತ್ತ
ಬರುವ ಹೋಗುವವರ ಕೈಗಳತ್ತ
ದುಡಿಯದೆ ದುಡ್ಡಿಗೆ ಹಾತೊರೆಯುತ್ತ.
ಕೈಚಾಚಿ ಕುಳಿತವನಿಗೆ ಕಾಯಕದತ್ತ
ದುಡಿದು ತಿನ್ನಬೇಕೆಂಬ ಕ್ರಮದತ್ತ
ಮಾತಿಲ್ಲದೆ ಕ್ರಿಯೆಗೆ ತೊಡಗಿಸುತ
ತನ್ನೊಳಗಿನ ದುಃಖವ ಅದಮುತ್ತ.

ಪ್ರೇಮದ ಕಾತರದಲಿ ಬೆಂದವರು
ಹಸಿವಿನ ಆತುರದಲಿ ನಿಂದವರು.
ಒಬ್ಬರನೊಬ್ಬರು ಸರಿ ಬಲ್ಲವರು.
ಭಿಕ್ಷೆಯ ಅವಮಾನವ ಅರಿವರು.
ಕಾಯಕದ ಮಹಿಮೆಯ ತಿಳಿಸಿದರು.
ಜೀವನದಲಿ ಉತ್ಸಾಹ ತುಂಬಿದರು.
ಅಂತಃಕರಣದ ಧಾರೆಯ ಹರಿಸಿದರು.
ಮಾನವೀಯತೆಯ ಪಾಠ ಕಲಿಸಿದರು.






ಶರಣು
ಏನ ಹೇಳಲಿ ಮುಗುದೆ ಬಿಮ್ಮನೆ
ಕಾಣುತಿಹೆ ಎಲ್ಲೆಲ್ಲೂ ನಿನ್ನ ಪ್ರತಿರೂಪನೆ
ನಿನ್ನ ಮನದಿಂಗಿತ ನಾನೇನ ಬಲ್ಲೆನೆ
ಸಂಭ್ರಮವೆಲ್ಲಿಹುದು ಬೆರೆಯದೆ ಹಾಗೇನೆ
ನೀನಲ್ಲಿ ನಾನಿಲ್ಲಿ ಇದು ಸತ್ಯವಲ್ಲವೇನೆ
ಮಿಲನವಿಲ್ಲದೆಯೆ ಬರೆದೆ ಕವಿತೆ ಹಂಗೇನೆ
ಈ ನಿನ್ನ ಪ್ರಣಯದ ಮಾತ ನಾನೊಲ್ಲೆನೆ
ಬಂದೂ ಬಾರದೇ ಹೋದೆ ನೀ ಸುಮ್ಮನೆ
ಬಿಮ್ಮನದ ಮಾತುಗಳ ನಾನೊಲ್ಲೆನೆ
ಕಾಡುವೆ ನನ್ನ ನೀ ಹಿಂಗೇನೆ????????
ಶರಣು _ಶರಣಾರ್ಥಿ