ಪ್ರೇಮ ರಾಜಕಾರಣದ ಕನಸು ಬಿತ್ತು!?

ಕಳೆದ ಐದು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ದೇಶವನ್ನು ಆಳಿದ ನರೇಂದ್ರ ದಾಮೋದರ ಮೋದಿ ಅವರು ರಾಜಕೀಯ ನಡೆ, ಆಡಳಿತ ವೈಖರಿ ಕುರಿತಾದ ಎಲ್ಲಾ ಟೀಕೆಗಳಿಗೆ ಉತ್ತರವೇನೋ ಎಂಬಂತೆ ಅವರಿಗೆ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಪ್ಪಲೇಬೇಕಾಗಿದೆ.

ಈ ನಡುವೆ ಇವಿಎಂ ಸರಿಯಿಲ್ಲ ಎಂಬ ಅನುಮಾನಗಳಿಗೆ ಯಾವುದೇ ಬೆಲೆಯಿಲ್ಲ. ಈ ಬಗ್ಗೆ ಮಾತನಾಡಿದರೆ ಸೋತವನಿಗೆ ಒಂದು ಪಿಳ್ಳೆ ನೆವ ಎಂಬ ಟೀಕೆಗೆ ಗುರಿಯಾಗದೆ ಇರಲಾಗದು. ಅದೆಲ್ಲವೂ ಈಗ ನಿಷ್ಪ್ರಯೋಜಕ ಎಂಬಂತೆ ಜನಮತ ತಳ್ಳಿಹಾಕಿದೆ.

ರಾಜಕಾರಣದ ಎರಡನೇ ಅಂಕದಲ್ಲೀಗ ಪಕ್ಷಕ್ಕೂ ಮಿಗಿಲಾಗಿ ಮೋದಿ ಎಂಬ ಶಕ್ತಿಯೊಂದು ದೈತ್ಯರೂಪವಾಗಿ ಬೆಳೆದು ನಿಂತಿದೆ. ಇದೊಂದು ಸರ್ವಾಧಿಕಾರದ ಮುನ್ಸೂಚನೆಯೇ ಎಂದು ಹೇಳುವುದು ಈ ಹೊತ್ತಿನಲ್ಲಿ ದೇಶದ್ರೋಹದ ಗಂಭೀರ ಕ್ರಮಕ್ಕೆ ತುತ್ತಾಗಿಬಿಡಬಹುದು. ಗುಜರಾತ್ ಗಲಭೆಯಿಂದ ಮೊದಲುಗೊಂಡು ಇವತ್ತಿನವರೆಗೂ ಬೆಂಕಿಬೂದಿಯಲ್ಲಿ ಅಗ್ನಿಪರೀಕ್ಷೆಗೊಳಪಟ್ಟು ಪವಿತ್ರಗೊಂಡಂತೆ ನರೇಂದ್ರ ಮೋದಿ ಅವರು ಬೆಳೆದು ನಿಂತಿದ್ದಾರೆ.

ಈ ಹಾದಿಯ ಸಾಗುವಿಕೆಯಲ್ಲಿ ಆರ್.ಎಸ್.ಎಸ್, ಬಿಜೆಪಿ ಈಗ ಮೋದಿ ಮುಂದೆ ಶರಣಾಗಿ ವ್ಯಕ್ತಿ ನಾಯಕತ್ವಕ್ಕೆ ತಲೆಬಾಗಿದೆಯಾ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ಚುನಾವಣೆ ನಡೆಯುತ್ತಿರುವ ಕಾಲಕ್ಕೆ ಮೋದಿ ಯುಗವೊಂದು ಮಾಸಿದ್ದು ಅವರ ಸ್ಥಾನಕ್ಕೆ ನಿತಿನ್ ಗಡ್ಕರಿ ಎಂಬ ಸಂಘನಿಷ್ಟನನ್ನು ಪ್ರತಿಷ್ಠಾಪಿಸುವ ಮಾತುಗಳು ಕೇಳಿ ಬರುತ್ತಿತ್ತಾದರೂ ಅದೆಲ್ಲವೂ ಜೋಳ್ಳು ಎಂಬಂತೆ ಮೋದಿ ಪುಟಿದು ಬಂದಿದ್ದಾರೆ. ಸಂಘಪರಿವಾರಕ್ಕೆ ಮತ್ತು ಬಿಜೆಪಿ ಗೆ ಮೋದಿಯೇ ಪರ‍್ಯಾಯ ಎಂಬಷ್ಟರ ಮಟ್ಟಿಗೆ ಎಲ್ಲವೂ ನಡೆದು ಹೋಗಿದೆ.

ನರೇಂದ್ರ ಮೋದಿ ಅವರು ಅಭೂತಪೂರ್ವ ಗೆಲುವನ್ನು ಸಾಧಿಸಿದ ಮೇಲೆ ಅವರೀಗ ಈ ದೇಶದ ಆತ್ಮ, ನಿಜ ಧರ್ಮವಾಗಿರುವ ಸಂವಿಧಾನದ ಮುಖಪುಟದ ಚಿತ್ರದ ಮೇಲೆ ಹಣೆಯೊತ್ತಿ ನಮಿಸುವ ಮೂಲಕ ಕಳೆದ ಐದು ವರ್ಷಗಳ ಕಾಲ ಸಂವಿಧಾನ ಕುರಿತೇ ಇದ್ದ ಆತಂಕ, ಚರ್ಚೆ, ಟೀಕೆಗಳಿಗೆ ತಿಲಾಂಜಲಿ ಇಡುವಂತೆಯೇನೊ ಸಂವಿಧಾನವೇ ಅಂತಿಮ, ಶ್ರೇಷ್ಟ ಎಂಬುದನ್ನು ಒಪ್ಪಿದ್ದೇನೆ ಎಂಬ ಸೂಚನೆಯನ್ನು ಕೊಡುವಂತಿತ್ತು.

ಒಂದು ಹೆಜ್ಜೆ ಮುಂದು ಎಂಬಂತೆ ಪವಿತ್ರ ರಂಜಾನ್ ಮಾಸದ ಈ ಸಂದರ್ಭದಲ್ಲಿ ಮಹಮ್ಮದ್ ಪೈಗಂಬರ್ ಅವರ ಧರ್ಮ, ಕರುಣೆ, ತ್ಯಾಗವನ್ನು ಕೊಂಡಾಡಿದ್ದಾರೆ. ದೇಶದಲ್ಲಿ ಶಾಂತಿ, ಸದ್ಭಾವನೆ ತುಂಬಲಿ ಎಂದು ಆಶಿಸಿದ್ದಾರೆ. (ಇದನ್ನು ತುಷ್ಟೀಕರಣ ರಾಜಕಾರಣದ ಅಂಗಳದಲ್ಲಿರಿಸಿ ನೋಡುವುದು ಪೊರೆಕಣ್ಣಿನ ದೃಷ್ಟಿಯಾದೀತು.)

ಮೋದಿ ಅವರ ಮೇಲಿನ ಮಾತುಗಳನ್ನು ಕೇಳಿದಾಗ ಭಾರತದ ರಾಜಕಾರಣ ಒಂದು ಅಂಕ ಮುಗಿಸಿ ಮಗ್ಗಲು ಹೊರಳಿದ ಈ ಹೊತ್ತಿನಲ್ಲಿ ದ್ವೇಷದ ರಾಜಕಾರಣ, ಪ್ರೇಮದ ರಾಜಕಾರಣವಾಗಿ ಮೈದಳೆಯುತ್ತಿದೆಯೇನೋ ಎಂಬ ಭರವಸೆಯೊಂದು ಮೂಡಿದರೆ ತಪ್ಪೇನು ಇಲ್ಲ.

ಮೋದಿ ಅವರ ನಡೆಯನ್ನು ಅಷ್ಟು ಸುಲಭವಾಗಿ ನಂಬುವಂತಿಲ್ಲ. ಅವರದ್ದು ಮಾರ್ಜಾಲ ನಡೆ. ಇನ್ನೂ ಈ ದೇಶದ ಸ್ಥಿತಿ ಮುಗಿದೇ ಹೋಯಿತು, ಬಹುತ್ವದ ದೇಶವೊಂದು ಕೋಮುವಾದಿ ಧ್ರುವೀಕರಣಗೊಂಡಂತಾಗಿಬಿಟ್ಟಿತ್ತು ಎಂಬ ಮಾತುಗಳು ಕೇಳಿಬಂದರೂ ನಾವಿನ್ನೂ ಕಾದು ನೋಡುವ ಸ್ಥಿತಿಯ ಕಾಲಕ್ಕೆ ಒಗ್ಗಿಕೊಳ್ಳಬೇಕಿದೆ.

ಅದಕ್ಕೆ ಕಾರಣ ಈ ದೇಶದ ಪರಂಪರೆಯೊಂದು ನಮ್ಮ ಕಣ್ಣ ಮುಂದೆ ಇದೆ. ರಣ ಹಂತಕ ಅಂಗುಲಿಮಾಲ ಬುದ್ಧನೆದುರು ಬಿಕ್ಕುವಾಗಿ ನಿಂತದ್ದು, ದರೋಡೆಕೋರ ವಾಲ್ಮೀಕಿ ಶ್ರೇಷ್ಠ ಮಹರ್ಷಿಯಾಗಿದ್ದು, ಸಾಮ್ರಾಟನಾದ ಅಶೋಕ ಚಕ್ರವರ್ತಿ ಯುದ್ಧಕಣದಲ್ಲೇ ಹಿಂಸೆಯನ್ನು ತೊರೆದು ನಡೆದದ್ದು ನಮ್ಮೊಳಗೆ ಒಂದು ದಾರ್ಶನಿಕ ಹಾದಿಯನ್ನು ಬಿಟ್ಟುಹೋಗಿರುವಾಗ ನರೇಂದ್ರ ಮೋದಿ ಅವರಲ್ಲಿನ ಈ ಬದಲಾವಣೆ ಆಶ್ಚರ್ಯ ತಂದರೂ ಸದ್ಯಕ್ಕೆ ಅನುಮಾನಿಸುವುದು ಬೇಡ.

ಮನುಷ್ಯ ಜನ್ಮಜಾತ ಪ್ರೇಮಮಹಿ, ಆತ ಅಧಿಕಾರ, ಸಂಪತ್ತು, ಮೋಹಗಳ ಬಲೆಗೆ ಸಿಕ್ಕು ಕಾಲಾನಂತರದಲ್ಲಿ ದುಷ್ಟನಾಗಿ, ಭ್ರಷ್ಟನಾಗಿ ಬೆಳೆಯುತ್ತಾನೆ. ಅದು ಅತಿರೇಕದ ತುದಿಗೆ ತಲುಪಿದಾಗ ತನ್ನೊಳಗೆ ವೈರಾಗ್ಯ ಮೂಡಬಹುದು. ಮನುಷ್ಯ ತನ್ನ ಪಾಪಗಳಿಗೆ ಪಶ್ಚಾತಾಪಪಟ್ಟಾಗ ಆತ ಮರುಹುಟ್ಟುತ್ತಾನೆ. ಮೋದಿ ಅವರು ಕೇದಾರದ ಗುಹೆಯಲ್ಲಿ ಕುಳಿತು ಧ್ಯಾನಿಸಿದ್ದನ್ನು ಇಂತಹುದ್ದೆ ಪಶ್ಚಾತಾಪದ ನಡೆಯೆಂದು ಕಂಡರೆ ತಪ್ಪೇನು?

ಇದೇ ಮೋದಿಯ ಸಂಪುಟದ ಸಚಿವರುಗಳು ಸಂವಿಧಾನವನ್ನು ಬದಲಾಯಿಸುತ್ತೇವೆ . ಅದಕ್ಕಾಗಿಯೇ ನಾವು ಬಂದಿರುವುದು ಎಂದು ಆಡಿದ್ದರು, ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಾಗಾಂಧಿ ಅವರನ್ನು ದೇಶದ್ರೋಹಿಗಳು ಎಂಬಂತೆ ಲೇವಡಿ ಮಾಡಿದ್ದರು. ಗಾಂಧಿ ಕೊಂದವನನ್ನು ದೇಶಭಕ್ತನಂತೆ ಕೊಂಡಾಡಿದ್ದರು. ಇದಕ್ಕಾಗಿ ವ್ಯಾಪಕ ಖಂಡನೆ, ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದರೂ ಅಂತಿಮವಾಗಿ ಈ ಮಾತುಗಳನ್ನು ಆಡಿದವರೂ ಭರ್ಜರಿ ಗೆಲುವು ಸಾಧಿಸಿದ್ದು ಒಂದು ವಿಪರ್ಯಾಸವೇ ಸರಿ.

ಕೇವಲ ರಾಷ್ಟ್ರೀಯವಾದ, ಹಿಂದುತ್ವ, ದೇಶ ಭಕ್ತಿಯಂತಹ ಭಾವನಾತ್ಮಕ ಸಂಗತಿಗಳೆನ್ನೆ ಮುಂದು ಮಾಡಿ ಅಧಿಕಾರಕ್ಕೆ ಉಳಿಸಿಕೊಂಡಿರುವ ಮೋದಿ ಅವರು ಇನ್ನಾದರೂ ಈ ದೇಶದ ನೈಜ ಸಮಸ್ಯೆಗಳಾದ ನಿರುದ್ಯೋಗ, ಶಿಕ್ಷಣ, ಅರೋಗ್ಯ, ಬಡತನ ಕುರಿತಾಗಿ ಕಾರ್ಯೋನ್ಮುಖರಾಗಲಿ.

ಈ ದೇಶದ ಜನಸಮುದಾಯದಲ್ಲಿ ಸಂವಿಧಾನ ಕುರಿತು ಇದ್ದ ಆತಂಕವನ್ನು ನಿವಾರಿಸಲೆಂದೆ ಮೋದಿ ಅವರು ಸಂವಿಧಾನದಕ್ಕೆ ಹಣೆಯೊತ್ತಿ ನಮಸ್ಕರಿಸಿರಬಹುದಾ? ಇದೊಂದು ರಾಜಕೀಯ ತಂತ್ರವಾಗಿರದೆ ಹೋದಲ್ಲಿ ಅದೊಂದು ಗುಣಾತ್ಮಕ ಬದಲಾವಣೆಯೇ ಆಗುತ್ತದೆ. ಉಗ್ರ ಹಿಂದುತ್ವವಾದ ಮೂಸೆಯಲ್ಲಿ ಬೆಳೆದು ನಿಂತ ಈ ನಾಯಕ ಇದೀಗ ಮೃದು ಹಿಂದುತ್ವದ ಧೋರಣೆಗೆ ಒಗ್ಗಿಕೊಂಡರಾ ?

ಅದನ್ನು ಈಗಲೆ ಹೇಳಲು ಆಗುವುದಿಲ್ಲ. ರಾಜಕೀಯ ಒಳ-ಹೊರಗುಗಳನ್ನು ಅರಿತಿರುವ, ಪಟ್ಟುಗಳನ್ನು ಕಲಿತಿರುವ ನಿಷ್ಣಾತ ಮೋದಿ ಹೊಸತೊಂದು ಆಟ ಹೂಡಿದ್ದಾರಾ ಎಂಬುದನ್ನು ಈಗಲೆ ಊಹಿಸುವುದು ಕಷ್ಟ. ಆದರೆ ಮೋದಿ ಅವರಲ್ಲಿ ಕಾಣುತ್ತಿರುವ ಅಥವಾ ಅವರು ವ್ಯಕ್ತಪಡಿಸುತ್ತಿರುವ ಬದಲಾವಣೆ ನಿಜವಾಗಲಿ.

ಈ ದೇಶದ ಬಹುತ್ವವನ್ನು ಕಾಯ್ದುಕೊಳ್ಳುವ ರಾಜಕೀಯ ತಿಳಿವು ಎಲ್ಲಾ ಕಾಲಕ್ಕೂ ಮುಖ್ಯ. ಕೇವಲ ಆರ್ಥಿಕ, ರಾಜಕೀಯ ಸಂಗತಿಗಳಷ್ಟೆ ಅಭಿವೃದ್ದಿಯಾಗದು, ಸಾಮಾಜಿಕ, ಸಾಂಸ್ಕೃತಿಕ, ಸಾಮರಸ್ಯದ ನೆಲೆಯನ್ನು ಕಾಯ್ದುಕೊಳ್ಳುವುದು ಬಹುಮುಖ್ಯವಾಗುತ್ತದೆ. ಅದು ಸಾಧ್ಯವಾದಾಗ ಮಾತ್ರ ಸಮಗ್ರ ಭಾರತವನ್ನು ಕಾಣಲು ಸಾಧ್ಯ. ಕೇಡಿಲ್ಲದ , ಒಡಕಿಲ್ಲದ ಜನಾಡಳಿತವೊಂದನ್ನು ಈ ಬಹುತ್ವದ ದೇಶ ಕಾಣಲಿ. ಮೋದಿ ನುಡಿದಂತೆ ನಡೆಯಲಿ.

ನುಡಿಯಬಹುದು ಅದ್ವೈತವನೊಂದು ಕೋಟಿ ವೇಳೆ,
ಒಮ್ಮೆ ನಡೆಯಬಹುದೆ ನಿರ್ಧಾರವಾಗಿ ಸದ್ಭಕ್ತಿ ಸದಾಚಾರವ?
ನುಡಿದಂತೆ ನಡೆವ, ನಡೆದಂತೆ ನುಡಿವ
ಸದ್ಭಕ್ತಿ ಸದಾಚಾರಯುಕ್ತ ಮಹಾತ್ಮರ ಪಾದವ ಹಿಡಿದು

ಬದುಕಿಸಯ್ಯಾ ಪ್ರಭುವೆ, ಕಪಿಲಸಿದ್ದ ಮಲ್ಲಿಕಾರ್ಜುನಾ!

‍ಲೇಖಕರು avadhi

May 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: