ಮೌನ
-ಕೆ ಎನ್ ಲಾವಣ್ಯ ಪ್ರಭಾ
ಹಗಲಲ್ಲಿ ಪ್ರತಿಕ್ಷಣ
ಒಬ್ಬರಿಗೊಬ್ಬರು
ಮಿಡಿದ ಹೃದಯಗಳು
ಇರುಳಲ್ಲಿ ಬಿಕ್ಕಿ
ಹನಿದ ಕಣ್ಣ ಕಂಬನಿಗೆ
ತೊಯ್ದ ಕೆನ್ನೆ
ಇಬ್ಬರದ್ದೆಂದು ತಿಳಿಸುತ್ತಲೇ
ನೆನಪು ಗಾಢವಾದಾಗಲೆಲ್ಲಾ
ಆತಂಕದಲ್ಲಿ ಮಂಕಾಗಿ ಕೂತದ್ದು
ಒಬ್ಬರೊಳಗೊಬ್ಬರ ನೆನಪಲ್ಲಿ
ಕವಿತೆ ನೇಯ್ದದ್ದು ಇಬ್ಬರೂ
ಎಂಬ ಸಂಗತಿ
ಸಂವಹಿಸುತ್ತದೆ
ಸಂಭಾಷಣೆಯೇ ಇರದ
ಫೋನಿನಲ್ಲಿರುವ
ಹೆಸರುಗಳನ್ನು ಪದೆ ಪದೆ
ಪರಸ್ಪರ
ನೋಡಿ ನಿಟ್ಟುಸಿರಿಟ್ಟದ್ದೂ
ಮನಗಾಣಿಸಿ
ಒಂದಾದರೂ ಸಣ್ಣ ಸಂದೇಶ
ಮಿಂಚಬಹುದೇನೋ
ಒಂದೆಡೆಯಿಂದ ಮತ್ತೊಂದೆಡೆಗೆ
ಎಂದು ಪರಸ್ಪರ
ತೀವ್ರ ತುಡಿಯುತ್ತಾ ಕಾಯ್ದು
ಹತಾಷೆಗೊಂಡಿದ್ದನ್ನು
ಇಬ್ಬರಿಗೂ ರವಾನಿಸುತ್ತದೆ
ಉಡುವ ಸೀರೆ
ತೊಡುವ ಶರ್ಟಿನ
ಬಣ್ಣ ಪರಸ್ಪರ ಮೆಚ್ಚಿದ್ದೆಂದು
ನೆನಪಿಸುತ್ತಲೇ
ಭೇಟಿಯಾದ ವ್ಯಕ್ತಿಗಳಲ್ಲೆಲ್ಲಾ
ಆಕೆ ಅವನನ್ನು
ಆತ ಅವಳನ್ನು
ಹುಡುಕಿ ದಣಿದದ್ದನ್ನು
ಇಬ್ಬರಿಗೂ ಬಿತ್ತರಿಸುತ್ತದೆ
ಅಚಾನಕ್ ಭೇಟಿಯಾದರೆ
ಇಬ್ಬರ ಕಣ್ಣುಗಳು ಕಲೆತು
ಪ್ರೀತಿಯಲ್ಲಿ ಲೋಕ
ಮರೆಯುವುದನ್ನು
ಅಥವಾ
ಸಡಗರದ ಗಡಿಬಿಡಿಯ
ಅವಾಂತರದೊಳಗೆ
ಮುಖ ಮರೆಸಿ
ಕಾಣೆಯಾಗುವುದನ್ನು ಕಲ್ಪಿಸಿ
ಭರವಸೆಯ ಶಾಖಕ್ಕೆ
ಒಳಗೊಳಗೆ ಬೆಚ್ಚಗಾಗಿ
ಇಬ್ಬರೂ ನಾಚಿದ್ದನ್ನೂ
ಜಾಹೀರುಗೊಳಿಸುತ್ತದೆ
ಮಾತಿಲ್ಲದೆಯೂ
ಭೇಟಿಯಿಲ್ಲದೆಯೂ
ಇಬ್ಬರೂ ಇದ್ದೆಡೆಯಲ್ಲಿಯೇ
ಪರಸ್ಪರ ಅರಿತು ಬೆರೆತು
ಒಂದಾಗುವ ಕ್ಷಣಕ್ಕೆ
ಕಾದು ಬೆಂದು ನೊಂದು
ದಿನದಿನಕ್ಕೂ ಮಾಗಿ ಬಾಗಿ
ಚಂದ ಬದುಕ ಅಣಿಗೊಳಿಸಿ
ಭೇಟಿಯ ದಿನಾಂಕವನ್ನು
ನಿಗದಿ ಪಡಿಸಿ
ನಿರುಮ್ಮಳ ನಕ್ಕು
ಭಂಡ ಧೈರ್ಯ ತಾಳಿದ್ದನ್ನು
ಖಚಿತ ಪಡಿಸುತ್ತದೆ
ನಮ್ಮಿಬ್ಬರ ನಡುವೆಯೂ
ಹರಿದಾಡುತ್ತಿದೆ ಮೌನ..
ಜುಳಜುಳನೆ ಹರಿವ
ಝರಿಯಾಗಿ ತೊರೆಯಾಗಿ
ನದಿಯಾಗಿ
ಪ್ರೇಮ ಪ್ರವಾಹವಾಗಿ…
ಆಲಿಸಬಹುದು
ಪರಸ್ಪರ
ಒಬ್ಬರೆದೆಗೊಬ್ಬರು
ಕಿವಿಗೊಟ್ಟರೆ
ಮೌನ
ಮಾತಾಡುವುದನ್ನು.






0 Comments