‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..

ಮಮತಾ ಅರಸೀಕೆರೆ

**

ಆನಂದ್ ನನಗೆ ಪರಿಚಯವಾಗಿ, ಸ್ನೇಹವಾಗಿ 16 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವನ ಯಶಸ್ಸು, ವೈಫಲ್ಯ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದೇನೆ. ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಅವನ ನಿಧನಾನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳನ್ನೂ ನೋಡಿದೆ. ಅವನ ಕುಡಿತ ಮತ್ತು ಬೇಜವಾಬ್ದಾರಿ ಕುರಿತು ಅತಿಯಾದ ಅಭಿಪ್ರಾಯ ಕಂಡೆ.

ಅವು ಅವನ ಕುರಿತ ಕಾಳಜಿಯದ್ದಾಗಿದ್ದವು. ಅದನ್ನು ಅರ್ಥಮಾಡಿಕೊಂಡೆ. ಆ ಅಭಿಪ್ರಾಯಗಳನ್ನು ಬಹಳ ಮಂದಿ ಲೇಖಕರು ಅವನು ಬದುಕಿದ್ದಾಗಲೂ ಹೇಳಿದ್ದರು ಅನ್ನೋದು ನಿಜ. ಸುಧಾರಿಸಲೂ ಕೂಡ ಪ್ರಯತ್ನ ಪಟ್ಟಿದ್ದರು. ಸಾಧ್ಯವಾಗದೇ ಕೋಪಿಸಿಕೊಂಡು ಅಂತರ ಕಾಯ್ದುಕೊಳ್ಳಲು ಯತ್ನಿಸಿದರು. ಆದರೂ ಅವನ ಉಡದ ಹಿಡಿತದಂತಹ ಸ್ನೇಹದಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಅಪ್ಪಟ ಮನುಷ್ಯ ಪ್ರೇಮದ ಗುಣದ ಆತ ಸತತವಾಗಿ ಗೆಳೆತನ ಹಾಗೂ ಮನುಷ್ಯರ ಸಂಪರ್ಕದಲ್ಲಿರಲು ಬಯಸುತ್ತಿದ್ದ.

ಹೀಗಾಗಿ ಅವನ ಸಂಪರ್ಕದ ಕೊಂಡಿಗಳು ಅವನ ಎಲ್ಲಾ ಅವಗುಣಗಳನ್ನು ತೊಡೆದು ಮಾಮೂಲಿ ಮನುಷ್ಯರಂತೆ ‘ಬದುಕಿಸಲು’, ಹೌದು ಬದುಕಿಸಲು ತೀವ್ರ ಪ್ರಯತ್ನ ಪಟ್ಟಿದ್ದರು. ಅವ ಲೇಖಕನಾಗಿದ್ದಕ್ಕಿಂತ ಹೆಚ್ಚಾಗಿ, ಸಾಹಿತ್ಯದ ಜೊತೆಜೊತೆಗೆ ನಿರಂತರ ಸ್ನೇಹ ಬಯಸಿ ಕೂಡ ಕರೆ ಮಾಡುವುದು ಹೆಚ್ಚಿತ್ತು. ಅವನಿಗೆ ಸಾಮಾನ್ಯವಾಗಿ ಸಾಹಿತ್ಯ ಕ್ಷೇತ್ರದ ಬಹಳಷ್ಟು ಲೇಖಕರ, ಲೇಖಕಿಯರೊಂದಿಗೆ ಸಂಪರ್ಕವಿತ್ತು. ಒಡನಾಟವಿತ್ತು. ಸಮಯ ಹೇಗೆ ಹೊಂದಿಸುತ್ತಿದ್ದನೊ, ಸ್ನೇಹಮಯಿ ಆತ ಎಲ್ಲರೊಂದಿಗೂ ಫೋನಿನಲ್ಲಿ ಮಾತನಾಡುತ್ತಿದ್ದ.

ಕವಿಯಾಗಿದ್ದ. ಅನುವಾದಕನಾಗಿದ್ದ. ಬಹಳಷ್ಟು ಓದಿಕೊಂಡಿದ್ದ. ತೆಲುಗಿನಿಂದ ಚಂದ ಅನುವಾದ ಮಾಡುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಅವನಿಗೆ ಬಹಳಷ್ಟು ಮಾನ ಸನ್ಮಾನಗಳು ದಕ್ಕಿದ್ದವು. ತಾನು ಮುನ್ನಡೆಯಲ್ಲಿರಲು ಪ್ರಯತ್ನಪಟ್ಟಂತೆಯೇ, ತನ್ನ ಜೊತೆಗಿನ ಬರಹಗಾರರನ್ನೂ ಕೂಡ ಮುಂಚೂಣಿಗೆ ತರಲು ಯತ್ನಿಸುತ್ತಿದ್ದ. ಯುವ ಬರಹಗಾರರನ್ನು, ಆರಂಭದ ಹಂತದ ಲೇಖಕರನ್ನು ಆತ ಪತ್ರಿಕೆಗಳಿಗೆ, ಈಗಾಗಲೇ ತನಗೆ ಪರಿಚಯವಿದ್ದ ಲೇಖಕರಿಗೆ, ವಿವಿಧ ಸಂಘಸಂಸ್ಥೆಗಳು, ಬರಹ, ಅವಕಾಶ ಹಾಗೂ ಮನ್ನಣೆ ಇದ್ದಂತಹ ಅನೇಕ ಸಾಧ್ಯತೆಗಳ ಕಡೆ ಪರಿಚಯಿಸುತ್ತಿದ್ದ.

ಕೊಂಚ ಸೋಮಾರಿತನ ಕಂಡರೆ ತೀವ್ರವಾಗಿ ಮುನ್ನುಗ್ಗುವಂತೆ ಪ್ರೇರೇಪಿಸುತ್ತಿದ್ದ. ಸಾಕಷ್ಟು ಪ್ರಯಾಣಿಸುತ್ತಿದ್ದ. ಅವನ ವೈಯಕ್ತಿಕತೆಯ ಕುರಿತು ಯಾರಿಗೆ ಎಷ್ಟರ ಮಟ್ಟಿಗೆ ಗೊತ್ತಿದೆಯೋ ಏನೊ, ಇಲ್ಲಿ ದಾಖಲಿಸಬಾರದೇನೊ ಆದರೆ ಸಾಮಾನ್ಯವಾಗಿ ಎಲ್ಲರೂ ಹೇಳುತ್ತಿರುವಂತೆ ಅವನ ತೀವ್ರ ಕುಡಿತದ ಮನಃಸ್ಥಿತಿಗೂ ಕಾರಣವಿದೆ. ಹೌದು ಅವ ದಿನದ ಎಲ್ಲಾ ಸಮಯದಲ್ಲೂ, ವರ್ಷದ ಎಲ್ಲಾ ದಿನಗಳಲ್ಲೂ ಮದಿರೆಯ ದಾಸನಾಗಿದ್ದ. ಕೊಂಚ ಬೇಜವಾಬ್ದಾರಿಯೂ ಮೈಗೂಡಿಕೊಂಡು ಬಿಟ್ಟಿತ್ತು. ತೀವ್ರ ಬೇಸರದಿಂದ ಇರುತ್ತಿದ್ದ. ಅವನ ಆ ಕಾರಣವನ್ನು ಅವ ಬಹಳಷ್ಟು ಮಂದಿಗೆ ಹೇಳಿಕೊಂಡಿದ್ದ ಕೂಡ. ಅದೇನೂ ಬಚ್ಚಿಡುವ ವಿಷಯವೇನಲ್ಲ. ಎಲ್ಲರ ಬದುಕಿನಲ್ಲೂ ಹಾದುಹೋಗುವ ಸಹಜ ಅವಸ್ಥೆ. ಯಾವಾಗ ಏನು ಯಾಕೆ ಎಲ್ಲಾ ವಿಚಾರ ಬೇಡ. ಆದರೆ ಅವ ಪ್ರೇಮ ವೈಫಲ್ಯಕ್ಕೆ ಈಡಾಗಿ ತೀವ್ರವಾಗಿ ಖಿನ್ನತೆಗೊಳಗಾಗಿದ್ದ. ಅವನ ಪ್ರೇಮ ಹಾಗೂ ವೈಫಲ್ಯವನ್ನು ನಾನು ಪ್ರತ್ಯಕ್ಷ ಕಂಡಿದ್ದೆ. ಅವನ ಪ್ರೇಮಕ್ಕೆ ಹೇಗೆ ಕಾರಣವಿದೆಯೋ ವೈಫಲ್ಯಕ್ಕೂ ಕಾರಣವಿತ್ತು. ಅವ ಅದೆಂತಹ ಅಗಾಧ ಪ್ರೇಮಿ ಎಂದರೆ ಆ ವೈಫಲ್ಯದ ಪರಿಣಾಮವನ್ನು ಅವನಿಂದ ಮರೆಯಲಾಗಲೇ ಇಲ್ಲ.

ಪದೇ ಪದೇ ಫೋನ್ ಮಾಡಿ ಹೇಳುವಾಗ ನನಗೆ ಕರುಳು ಕದಡಿಹೋಗುತ್ತಿತ್ತು. ಸಮಾಧಾನಿಸಿ, ವಿವೇಕದ ಮಾತು ಹೇಳಿ ಹೇಳಿ ಸಾಕಾಗಿ ಸೋತು, ಫೋನ್ ಮಾಡಲೇ ಬೇಡ ಅಂದುಬಿಟ್ಟಿದ್ದೆ. ಆದರೆ ಕರುಳು ಕೇಳುತ್ತದೆಯೇ, ಅವನ ಗೋಳು ನೋಡಲಾರದೆ ಪುನಃ ನಾನೇ ಮಾತನಾಡಿ ಸಮಾಧಾನಿಸುತ್ತಿದ್ದೆ. ನಂತರ ನನ್ನದೇ ಸಮಸ್ಯೆ, ಬದುಕಿನ ಪಲ್ಲಟಗಳಿಂದ ಫೋನ್ ಕರೆಗಳು ಕೆಲವು ತಿಂಗಳುಗಳ ಕಾಲ ನಿಂತೇ ಹೋಗಿದ್ದವು. ನನ್ನ ಫೋನ್ ನಂಬರ್ ಬದಲಾಯಿಸಿತ್ತು. ಅದು ಹೇಗೊ ಎಲ್ಲಿಂದಲೊ ಪಡೆದುಕೊಂಡು ಮತ್ತೆ ಫೋನ್ ಮಾಡುತ್ತಿದ್ದ. ಆದರೆ ಈಗ ಪ್ರೇಮದ ಗೋಳಿನ ಕತೆಗಳು ಕಡಿಮೆಯಾಗಿದ್ದವು. ಕುಡಿತ ಮಾತ್ರ ವಿಪರೀತವಾಗಿತ್ತು. ಆತನಿಗೆ ಹಣದ ಅಗತ್ಯ ಕೂಡ ಅದೇ ಕಾರಣಕ್ಕೆ ಬೇಕಾಗುತ್ತದೆ ಅಂತ ಆತನನ್ನು ತಿಳಿದವರು ಹೇಳಿದ್ದರು.

“ನಿನಗೆ ನೀನೇ ಶತ್ರುವಾಗ್ತಿದೀಯ, ನೀನು ಅಪಾರ ಪ್ರತಿಭಾವಂತ, ಬರೆಯುವುದನ್ನು ಮುಂದುವರೆಸು. ದಯಮಾಡಿ ಸುಧಾರಿಸಿಕೊ” ಅಂತ ಹೇಳುವಷ್ಟು ಹೇಳಿಹೇಳಿ ಸೋತರೂ ಆತ “ಏ ಹೋಗ್ಲಿ ಬಿಡೆ , ಸರಿಹೋಗುತ್ತದೆ ಬಿಡು. ನೀನು ಕೂಡ ಬರಿತಿದೀಯ, ಬರಿ. ನಿನ್ನ ಬಗ್ಗೆ ಅವರ ಹತ್ರ ಇವರ ಹತ್ರ ಹೇಳಿದ್ದೀನಿ. ನೋಡು ಯಾವ್ಯಾವ್ದೊ ಅವಕಾಶಗಳಿವೆ ಅಪ್ಲೈ ಮಾಡು ಅನ್ನುತ್ತಾ ಮಾತಿನ ಜಾಡು ತಿರುಗಿಸುತ್ತಿದ್ದ. ಅದೆಷ್ಟು ಕಡೆ ಅವನಿಗೆ ಕೆಲಸ ಸಿಕ್ಕಿತ್ತು. ಏನೇನೊ ಕಾರಣಗಳಿಗೆ ಬಿಟ್ಟು ಹಾಕಿ ಮತ್ತೊಂದು ಕಡೆ ಸೇರಲು ಹೋಗ್ತಿದ್ದ. ಮನಸ್ಸನ್ನುಜೀವಂತವಾಗಿಟ್ಟುಕೊಳ್ಳಲು ಅಸಾಧ್ಯವಾಗ್ತಿತ್ತೊ ಏನೊ, ಪಾಪ ಸದಾ ಚಡಪಡಿಕೆಯ ಜೀವ. ಅಲೆದಾಟದ ಮಾನಸಿಕ ಸ್ಥಿತಿ. ಏನೊ ಒಂದನ್ನು ಅರಸುತ್ತಿರುವಂತೆ, ತಾಕಲೆಂದು ತಡಕಾಡುವಂತೆ ಹೊಯ್ದಾಡುತ್ತಿದ್ದ. ಸದಾ ಚಟುವಟಿಕೆಯಿಂದ ಇದ್ದರೆ ಮಾತ್ರ ಲವಲವಿಕೆಯಿಂದ ಇರುತ್ತಿದ್ದ. ಅವನಿಗೆ ತಂಗಿ, ತಮ್ಮ, ಅಮ್ಮ ಇದ್ದರು. ತಂಗಿಯ ಮದುವೆ ಬಗ್ಗೆ, ತಮ್ಮನ ಓದಿನ ಬಗ್ಗೆ ಹಂಚಿಕೊಂಡಿದ್ದ. ಅವರು ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತರಲ್ಲ. ಸ್ವತಃ ಆನಂದನಿಗೂ ವಿದ್ಯಾಭ್ಯಾಸ ಮುಂದುವರೆಸಲು ಆರ್ಥಿಕ ಕೊರತೆಯಿತ್ತು. ಹೇಗೊ ವಿದ್ಯಾಭ್ಯಾಸ ಮುಗಿಸಿದ್ದ.

ತಮ್ಮ ತಂಗಿಯರ ಕುರಿತು ಪ್ರೀತಿಯಿಟ್ಟುಕೊಂಡಿದ್ದ. ಅಮ್ಮ ಅಂದರೆ ಅವನಿಗೆ ವಿಪರೀತ ಅಕ್ಕರೆ. ಅವನ ಅಮ್ಮನಿಗೆ ಫೋನ್ ಕೊಟ್ಟು ನನ್ನೊಂದಿಗೆ ಮಾತನಾಡಿಸುತ್ತಿದ್ದ. ಒಂದಷ್ಟು ಕಾಲ ಫೋನಿಗೆ ಸಿಗದೇ ದೂರವಿದ್ದರೆ ಅವನ ಅಮ್ಮನಿಂದ ಫೋನ್ ಮಾಡಿಸಿಬಿಡುತ್ತಿದ್ದ. ಅವನ ಅಮ್ಮ , ಊರಲ್ಲಿ ಜಾತ್ರೆ ಬಾರಮ್ಮ ಅಂತಲೊ, ಹಬ್ಬಕ್ಕೆ ಬಂದುಹೋಗಮ್ಮ ಅಂತಲೊ ಕರೆಯುತ್ತಿದ್ದರು. ಅವನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ನಾನು ಅವನ ಅಮ್ಮನೊಂದಿಗೆ ಹೇಳತೊಡಗಿದರೆ, ಅವರು ಸಹ ಕಳವಳಕ್ಕೀಡಾಗುತ್ತಿದ್ದರು. ನೀನಾದರೂ ಹೇಳಮ್ಮ , ಅನ್ನುತ್ತಿದ್ದರು. ಅವನ ಅಪ್ಪಟ ಮನುಷ್ಯ ಮನೋಭೂಮಿಕೆಯ ವರ್ತನೆಗೆ ಎಂತವರೂ ಕರಗಬೇಕು, ಅವನ ಭವಿಷ್ಯ, ಆರೋಗ್ಯ, ಸುಸ್ಥಿರ ಬದುಕಿನ ಬಗ್ಗೆ ಕಾಳಜಿಯಿಂದಲೇ ಅವನ ಅಸ್ತವ್ಯಸ್ತ ಬದುಕಿನ ಬಗ್ಗೆ ಕೋಪಗೊಂಡು ಸ್ನೇಹಿತರು ಬುದ್ದಿ ಹೇಳುತ್ತಿದ್ದುದಾಗಿತ್ತು. ಆತ ನನಗೆ ಬೆಂಗಳೂರಿನಲ್ಲಿ ಪರಿಚಯವಾದದ್ದು . ಕೋಲಾರದ ಬಳಿಯ ಆದಿಮಕ್ಕೆ ಬರುವಂತೆ ಒತ್ತಾಯಿಸಿದ್ದ .ಅಲ್ಲಿ ಹೆಚ್ಚು ಪರಿಚಯವಾದ. ಆದಿಮದ ಬಗ್ಗೆ ಅಕ್ಕರೆಯಿತ್ತು. ಆತನ ಅಕ್ಷರಗಳು ಬಲು ಮುದ್ದಾಗಿದ್ದವು. ಒಮ್ಮೆ ಪತ್ರವೊಂದನ್ನು ಬರೆದಿದ್ದ. ತೆರೆದು ನೋಡಿದರೆ ಸ್ವಂತದ್ದೇ ಕವಿತೆಯಿತ್ತು. ಕೈ ಬರಹದಲ್ಲಿ ದುಂಡಗೆ ಬರೆದು ಚೆಂದದ ಕವಿತೆಯನ್ನು ಕಳಿಸಿದ್ದ.

ಇನ್ನು ಅವ ಕವಿತೆಯನ್ನು ಕಳವು ಮಾಡುತ್ತಾನೆಂಬ‌ ಮಾತಿನ ಬಗ್ಗೆ ಹೇಳುವುದಾದರೆ, ಒಮ್ಮೆ ಕವಿಯೊಬ್ಬರು, “ಅವನ ಕವನ ಸಂಕಲನದಲ್ಲಿ ನನ್ನ ಕವಿತೆಗಳ ಪ್ರಭಾವದಿಂದ ಬರೆದ ಕವಿತೆಗಳಿವೆ ಕಣಮ್ಮ, ಸಾಲುಗಳು ಅಲ್ಲಲ್ಲಿ ವಿಭಿನ್ನವಿವೆ” ಎಂದು ಹೇಳುತ್ತಾ ಮುಗುಳ್ನಕ್ಕಿದ್ದರು. ಅವರೇನೂ ಆರೋಪ ಮಾಡಿ ಆ ಮಾತು ಹೇಳಿರಲಿಲ್ಲ. ನಾನು ಆಗ ಕವಿಯ ಹೆಸರನ್ನು ಹೇಳದೆ, ಬೇರಾವುದೊ ರೀತಿಯಲ್ಲಿ ಆ ಮಾತನ್ನು ಪ್ರಸ್ತಾಪಿಸಿದಾಗ ಪ್ರಭಾವ ಸಹಜ ಅಲ್ವ ಅಂದಿದ್ದ. ಇನ್ನು ಸುಳ್ಳು ಕೂಡ ಹೇಳುತ್ತಿದ್ದನೆಂದು ಕೆಲವರ ಅಭಿಪ್ರಾಯ. ಸಾಹಿತ್ಯವೊ, ವೈಯಕ್ತಿಕ ಬದುಕೊ ಯಾವುದರ ಕುರಿತು ಮಾತನಾಡುವಾಗ ಅರ್ಧ ಮಾತುಗಳು ಸಹಜತೆಯಿಂದಲೇ ಕೂಡಿತ್ತು. ಮಾತು ಆಡುತ್ತಲೇ ಆಡುತ್ತಲೇ ಕೊಂಚ ಉತ್ಪ್ರೇಕ್ಷೆ ಆರಂಭವಾಗ್ತಿತ್ತು. ನಾನು ತಮಾಷೆ ಮಾಡುತ್ತಲೇ ಕಾಲೆಳೆದುಬಿಡುತ್ತಿದ್ದೆ. ‘ಏ ನಿಜ ಹೇಳು’ ಅನ್ನುತ್ತಿದ್ದೆ. ಆತ ಸ್ವಭಾವದಲ್ಲೇನೂ ಬದಲಾವಣೆಯಿರುತ್ತಿರಲಿಲ್ಲ. ತೀರಾ‌ ತಣ್ಣಗೆ ವಿಷಯ ಹೇಳಿ, “ಏ ಇರಲಿ ಬಿಡೆ” ಅನ್ನುತ್ತಾ ಮಾತು ನಿಲ್ಲಿಸುತ್ತಿದ್ದ. ಕೋಪಗೊಂಡದ್ದನ್ನು, ಸಿಟ್ಟುಗೊಂಡದ್ದನ್ನು, ಯಾರ ಬಗ್ಗೆಯಾದರೂ ಅನ್ಯ ನುಡಿಗಳನ್ನು ಹೇಳಿದ್ದನ್ನು ನಾನು ಯಾವತ್ತೂ ಕೇಳಿಸಿಕೊಂಡಿಲ್ಲ. ಯಾರ ಬಗ್ಗೆಯೂ ದೂರುಗಳಿರಲಿಲ್ಲ. ಕೆಲವೊಂದು ಅವಸ್ಥೆಗಳಿಂದ ಹೊರಬಂದಿದ್ದರೆ, ಕೆಲವೊಂದು ವ್ಯಸನಗಳಿಂದ ದೂರವಿದ್ದಿದ್ದರೆ ಅವ ಸಹಜವಾಗಿರುತ್ತಿದ್ದ ಅನ್ನೋದು ಮಾತ್ರ ನಿಜ.

ಇತ್ತೀಚೆಗೆ ಗುಲ್ಬರ್ಗದಲ್ಲಿ ಪಿ.ಎಚ್.ಡಿ. ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಸಮಾಧಾನವಾಗಿತ್ತು. ನನ್ನ ಕವಿತೆಗಳು, ಬರಹ ಪ್ರಕಟವಾದರೆ ಅದನ್ನು ನೋಡಿ ಕರೆ ಮಾಡಿ ಹೇಳಿ ಸಂತಸಪಡುತ್ತಿದ್ದ. ಪುಸ್ತಕ ಕಳಿಸೇ, ಹೊಸ ಪುಸ್ತಕ ಯಾವಾಗ ಕೇಳುತ್ತಿದ್ದ. “ನಿನ್ನ ಕವನಸಂಕಲನ ಗುಲ್ಬರ್ಗ ವಿವಿ ಯ ಲೈಬ್ರರಿಲಿ ನೋಡಿದೆ” ಅಂತ ಇತ್ತೀಚೆಗೆ ಕರೆ ಮಾಡಿ ಹೇಳಿದ್ದೆ ಕೊನೆಯ ಮಾತು. ವ್ಯಸನಗಳು, ಕೆಟ್ಟಗುಣಗಳು, ದೌರ್ಬಲ್ಯ ಎಲ್ಲವೂ ನಾನೂ ಸೇರಿದಂತೆ ಎಲ್ಲಾ ಮನುಷ್ಯರಲ್ಲೂ ಸಹಜ. ಅದನ್ನು ವೈಭವೀಕರಿಸಬಾರದು. ಆದರೆ ಅದೇ ವ್ಯಸನಗಳು ಬದುಕನ್ನು ಬಲಿ ಪಡೆಯಬಾರದಲ್ಲವೆ. ವೈಯಕ್ತಿಕ ಅಭಿವೃದ್ಧಿಗೆ ತೊಡಕಾಗಬಾರದಲ್ಲವೆ. ಜೀವವನ್ನೇ ಕಸಿಯುವ ಕರಾಳ ಹಸ್ತವಾಗಬಾರದಲ್ಲವೆ? ಎಲ್ಲರಿಗೂ ಆತನೊಂದಿಗೆ ಒಂದೇ ಕೋರಿಕೆಯಿತ್ತು ಮದ್ಯ ವ್ಯಸನದಿಂದ ದೂರವಿರು. ಅಷ್ಟೆ.

ಆತನ ಹಿತೈಷಿಗಳು ಆತನ ಕಾಳಜಿ ಬಗ್ಗೆ ಆಸಕ್ತಿ ವಹಿಸಿಯೇ ಪದೇ ಪದೇ ಹೇಳಿದ ಮಾತಾಗಿತ್ತದು. ಇರಲಿ “ಆನಂದ್ ಈ ಸಮಯದಲ್ಲಿ ನಿನ್ನೊಂದಿಗೆ ಮಾತನಾಡಿದ ಎಲ್ಲಾ ಮಾತುಗಳು ನೆನಪಾಗುತ್ತಿವೆ. ನಿನ್ನ ಒದ್ದಾಟ, ಚಡಪಡಿಕೆ, ಖುಷಿ, ಸಂಭ್ರಮ, ಹೋರಾಟ, ಹೊಯ್ದಾಟ ಎಲ್ಲವೂ ಸ್ಮರಣೆಯ ಕೋಶದೊಳಗೆ ಹಾರಾಡುತ್ತಿವೆ. ನಿನ್ನ ಮೇಲೆ ಎಲ್ಲರಿಗೂ ಪ್ರೀತಿಯಿತ್ತು. ಅಂತಃಕರಣವಿತ್ತು. ಹಾಗಾಗಿಯೇ ಇವತ್ತು ತುಸು ಹುಸಿ ಕೋಪಗೊಂಡು ಬರೆದರು. ಕ್ಷಮಿಸು ನಾನೂ ಸಹ ಅದೇ ಪ್ರೀತಿಯಿಂದ ಬರೆದೆ. ಇನ್ನಷ್ಟು ಕಾಲ ನೀನಿರಬೇಕಿತ್ತು.”

ಅಂತಿಮ ನಮನಗಳು ಗೆಳೆಯ..

ನೋವಿನೊಂದಿಗೆ ವಿದಾಯ..

‍ಲೇಖಕರು Admin MM

May 23, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಿಂಗರಾಜ ಸೊಟ್ಟಪ್ಪನವರ

    ಆನಂದ ಕುರಿತು ಬರೆದ ಎಲ್ಲರ ಬರಹಗಳನ್ನು ಓದಿರುವೆ.ನೀವು ಬರೆದದ್ದು ತೀರಾ ಸಹಜವಾಗಿದೆ.ಆತ ಯಾರ ಬಗ್ಗೆಯೂ ಕೆಟ್ಟದು ಮಾತನಾಡಿದವನೇ ಅಲ್ಲ. ಆತ ನನ್ನನ್ನು ಯಾವ ಪರಿ ಆವರಿಸಿಕೊಂಡಿದ್ದಾನೆಂದರೆ.. ಅವನ ಕುರಿತ ಬರಹ ಓದದೇ ಮುಂದೆ ಹೋಗಲಾಗುವದಿಲ್ಲ.ಅದು ಪುಣ್ಯದ ಜೀವ.ಅಷ್ಟೇ ವಿಶ್ವಾಸಿಕ ಮನುಷ್ಯ.ಮಾತಿನಲ್ಲಿ ಉತ್ಪ್ರೇಕ್ಷೆ ಇತ್ತೇ ಹೊರತು ಅವನು ಹೇಳುವದು ನಿಜವೂ ಆಗಿರುತಿದ್ದವು.ಯಾರು ಯಾರನ್ನು ಕಾಂಟಾಕ್ಟ್ ಮಾಡಿದ್ದೇನೆ ಅನ್ನುತ್ತಿದ್ದನೋ ಅವರೆಲ್ಲರನ್ನು ಭೇಟಿಯಾದವನೇ ಅವನು. ಅವನು ಬರೆದ ಪುಸ್ತಕಗಳ ಪ್ರತಿಗಳೇ ಅವನಲ್ಲಿ ಇರಲಿಲ್ಲ.. ಬಹಳ ಜನರಿಗೆ ಪ್ರೋತ್ಸಾಹ ಕೊಟ್ಟಿದ್ದಾನೆ ಹುರಿದುಂಬಿಸಿದ್ದಾನೆ.. ಅವಕಾಶ ಕೊಡಿಸಿದ್ದಾನೆ.. ದೊಡ್ಡ ಬರಹಗಾರ ಪ್ರಕಾಶಕರಿಗೆ ಪರಿಚಯಿಸಿದ್ದಾನೆ.ರಾಜ್ಯದ ಎಲ್ಲ ಕಡೆಗೂ ಅವನ ಗೆಳೆಯರಿದ್ದರು.ಬೈದವರಿಗೂ ಅವನು ಫೋನ್ ಮಾಡಿ ಗೆಳೆತನ ಸಾಧಿಸುತಿದ್ದ ಪ್ರೇಮ ಮಯಿ ಅವನು.ನನ್ನ ಪುಸ್ತಕ ಬರಲು ಎಷ್ಟು ಮುತುವರ್ಜಿ ವಹಿಸಿದ್ದ.ಇಲ್ಲದಿದ್ದರೆ ಇನ್ನೂ ನನ್ನ ಮೊದಲ ಪುಸ್ತಕವೂ ಬರುತ್ತಿರಲಿಲ್ಲವೇನೋ.ಅವನಿಗೆ ಏನೂ ಮಾಡಲಾಗಲಿಲ್ಲ.. ಕನಿಷ್ಠ ಉಳಿಸಿಕೊಳ್ಳಲು ಆಗಲಿಲ್ಲವೆಂಬ ಸಂಕಟ ಜೀವ ತಿನ್ನುತ್ತಿದೆ.

    ನೀವು ಎಷ್ಟಾದರೂ ಬುದ್ಧಿ ಹೇಳಿ ಕೆಲ ಸಮಯವಾದರೂ ಸಾಂತ್ವನ ನೀಡಿ ಆ ನೊಂದ ಜೀವಕ್ಕೆ ತುಸು ನಲಿವು ನೀಡಿದ್ದೀರಿ.ತಮಗೆ ಧನ್ಯವಾದಗಳು

    ಪ್ರತಿಕ್ರಿಯೆ
  2. ಸಚಿನ್‌ಕುಮಾರ ಹಿರೇಮಠ

    ನನಗೆ ಲಕ್ಕೂರು ಆನಂದ ಬಗ್ಗೆ ಅಷ್ಟು ಗೊತ್ತಿಲ್ಲ.. ಆದರೆ ಒಬ್ಬ ಬರೆಹಗಾರ, ಸಾಹಿತಿ ಹೀಗೆ ವಿನಾಕಾರಣ ವ್ಯಸನಕ್ಕೆ ಬೀಳುವುದು ನನಗೆ ಸರಿ ಅನ್ನಿಸುವುದಿಲ್ಲ.. ವ್ಯಸನಗಳನ್ನು ಜೀವಕ್ಕೆ ಎರವಾಗುವಷ್ಟು ರೀತಿಯಲ್ಲಿ ಪ್ರೀತಿಸುತ್ತಾರೆಂದರೆ ಆತ ಎಷ್ಟು ಬರೆದರೇನು ಬಿಟ್ಟರೇನು? ಅವರ ಸಾವಿನ ನಂತರವೇ ನನಗೆ ಅವರ ಕವಿತೆಗಳನ್ನು ಓದುವ ಅವಕಾಶ ಸಿಕ್ಕಿತು. ಆದರೂ ಹೀಗಾಗಬಾರದಿತ್ತು ಎನ್ನದೇ ಬೇರೇನೂ ಅನ್ನಲಾಗುವುದಿಲ್ಲ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: