ಪ್ರೇಮ ಕವಿಯ ಕಾಲ್ಪನಿಕ ಸಂದರ್ಶನ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಏನೇನೋ ತಯಾರಿಗಳಾದ ನಂತರ ಪ್ರೇಮ ಕವಿಯ ಮನೆಯ ಬಾಲ್ಕನಿಯಲ್ಲಿ ಕುಳಿತು ಸಂದರ್ಶನ ಶುರು ಮಾಡಿದೆ.‌ ಸುಮಾರು ಆರೇಳು ದಶಕಗಳ ಕಾಲ ತಮ್ಮ ಪ್ರೇಮ ಕಾವ್ಯದ ಮೂಲಕ ಲಕ್ಷಾಂತರ ಹೃದಯಗಳ ಸೇತುವೆಯಾಗಿದ್ದ ಕವಿಯ ಮುಂದೆ ಕೂತವನಿಗೆ ಒಂದು ಕ್ಷಣ ತಬ್ಬಿಬ್ಬಾಯಿತು. ಆದರೂ ಪ್ರಶ್ನೆಗಳನ್ನು ಕೇಳಲೇಬೇಕಿತ್ತು. ಕೇಳುತ್ತಾ ಹೋದೆ. ಅವರು ಉತ್ತರಿಸುತ್ತಾ ಹೋದರು. 
*     *     *    * 

‘ಪ್ರೇಮ ಕವಿಗೆ ನಮಸ್ಕಾರ’ ಎಂದೆ.
‘ಕವಿಗೆ ನಮಸ್ಕಾರ ಎಂದರೆ ಸಾಕು.‌ ಪ್ರೇಮವಿಲ್ಲದವನು ಕವಿ ಹೇಗಾಗುತ್ತಾನೆ?’ ಎಂಬ ದೃಢವಾದ ಉತ್ತರ ಬಂತು.
‘ಪ್ರೆಮವಿಲ್ಲದ ಬಾಳು ಚಂದ್ರನಿಲ್ಲದ ರಾತ್ರಿಯಂತೆ’ ಎನ್ನುತ್ತಾರಲ್ಲ ನಿಜವೆ ? 
‘ರಾತ್ರಿ ಆಕಾಶ ನೋಡೋರಿಗೆ ಮಾತ್ರ ಈ ಮಾತು ಅರ್ಥ ಆಗೋದು. ಕತ್ತಲು ಅಂದ್ರ ಮನೆಯೊಳಗೆ ಪ್ರೇಮಿಸೋದು ಅಂದುಕೊಂಡೋರಿಗೆ ಆಕಾಶದಾಗ ಚಂದ್ರ ಇದ್ರೇನು? ಇಂದ್ರ ಇದ್ರೇನು ಅಲ್ವ?’ 
‘ನಿಮ್ಮದೇ ಕೆಲವು ಪ್ರೇಮ ಕವನದ ಸಾಲುಗಳ ಬಗ್ಗೆ ಮಾತಾಡೋಣವೆ?’ 
‘ಒಂದು ಪದ್ಯವನ್ನು ಅತೀ ಕೆಟ್ಟದಾಗಿ ವಿವರಿಸೋನು ಯಾರು ಗೊತ್ತಾ?’ 
‘ಯಾರು ಸರ್?’ 
‘ಆ‌ ಪದ್ಯ ಬರೆದ ಕವಿ. ಅವನಿಂದಲೇ ಆ ಪದ್ಯದ ವಿವರಣೆ ಕೇಳಲು ಹೋಗಬಾರದು’ 
‘ಆದ್ರೂ, ಕವಿ ಏನು ಯೋಚಿಸಿ ಬರೆದಿರುತ್ತಾನೆ ಎಂದು ತಿಳಿಯೋದು ಕೂಡ ಮುಖ್ಯ ಅಲ್ವಾ?’ 
‘ಆಯ್ತು . ಕೇಳಿ’ 
‘ನಲ್ಲೆ ನಿನ್ನ ನೋಟ ಮಲ್ಲೆ ಹೂವ ತೋಟ’ 
‘ಅಯ್ಯೋ ಇದು ನಿಜಕ್ಕೂ ಪ್ರಾಸಕ್ಕೆ ಬಿದ್ದು ತ್ರಾಸದಲ್ಲೇ ಬರೆದದ್ದು…’
ಇಬ್ಬರೂ ನಕ್ಕೆವು…

‘ಗೆಳತಿ, ಅಮೃತ ಶಿಲೆಗಳಿಂದ ತಾಜ್ ಮಹಲ್ ಕಟ್ಟುವ ಶಕ್ತಿ ನನಗಿಲ್ಲ ಆದರೆ… ನಿನ್ನ ನೆನಪುಗಳಲ್ಲಿ ನಾನು ಕಳೆವ ಕ್ಷಣಗಳನ್ನು ಕೂಡಿಸಿದರೆ ನೆನಪಿನ ಮಹಲ್ ಒಂದು ಇದಕ್ಕಿಂತ ಮಜಭೂತಾಗಿ ನಿಲ್ಲಬಲ್ಲದು ನೋಡು’ 
‘ಏನಿದು ನೆನಪಿನ ಹಂಗು ಸರ್?’ 
‘ಹೌದು ನೋಡಿ. ಮನುಷ್ಯನಿಗೆ  ನೆನಪು ಅನ್ನೋದು ಒಂದಿಲ್ದಿದ್ರೆ ಭಾಳ ಕೃತಘ್ನನಾಗ್ಬಿಡ್ತಿದ್ದ. ದ್ವೇಷ ಮಾಡೋಕೆ ನೆನಪು ಇಲ್ಲದಿದ್ರೂ ನಡೆಯುತ್ತೆ.‌ ಆದರೆ ಪ್ರೀತ್ಸೋಕೆ ಮಾತ್ರ ನೆನಪು ಭಾಳ ಮುಖ್ಯ ಇರುತ್ತೆ. ಅವನಿಗೆ ಅವಳ ನೆನಪು, ಅವಳಿಗೆ ಅವನ ನೆನಪು ಇವು ಒಂಥರಾ ವೈಟಮಿನ್ ಕ್ಯಾಪ್ಸೂಲ್ ಗಳಿದ್ದಂಗೆ’
‘ಹೌದು ಸರ್. ನೆನಪೇ ನಮ್ಮನ್ನು ಜೀವಂತಿಕೆಯಿಂದಿಡುವ‌ ಮುಲಾಮು ‘ಅಂದಹಾಗೆ ಈ ಪದ್ಯ ಏಕೆ ಸರ್? 
‘ನಲ್ಲೆ ನಿನಗೆ ನನ್ನ ಹೃದಯವನ್ನಂತೂ ಕೊಟ್ಟಿದ್ದೇನೆ ಅದನ್ನು ಖೈದಿಯಾಗಿಸಬೇಡ ನೀನು ಕೊಟ್ಟ ಹೃದಯವನ್ನು ನಾನಂತೂ ಬಂಧಿಸಿಟ್ಟಿಲ್ಲ’ 
‘ಹೌದಲ್ವಾ? ನೀವು ದೇವಾಲಯಗಳ ಆಧಾರಸ್ತಂಭಗಳನ್ನು ನೋಡಿಲ್ಲವೆ? ಅವು ಪರಸ್ಪರ ದೂರದಲ್ಲಿಲ್ಲವೆ? ಹಾಗಿರುವುದಕ್ಕೇ ಅವು ಕಟ್ಟಡವನ್ನು ಗಟ್ಟಿಯಾಗಿ ನಿಲ್ಲಿಸಿಲ್ಲವೆ?’ 
‘ಅರ್ಥವಾಯಿತು ಸರ್’ ಸಂಜೆ ಹೊತ್ತು ಮಳೆ ಬಂತೆಂದರೆ ಸಾಕು ಅನೇಕ ಕವಿಗಳು ಹುಟ್ಟಿಕೊಳ್ಳುತ್ತಾರೆ. ನೀವು ಈ ಸಾಲುಗಳನ್ನು ಬರೆಯುವಾಗ ಮಳೆ ಬರುತ್ತಿರಲಿಲ್ಲವೆ?: 

‘ಕೈಯಲ್ಲಿ ಕಾಫಿ ಇದೆ, ಹೊರಗೆ ಮಳೆ ಸುರೀತಿದೆಮನಸಲ್ಲಿ ಆಸೆ ಇದೆಜೊತೆಯಲ್ಲಿ ನೀನಿಲ್ಲವೇ?
ಇಳಿ ಸಂಜೆಯಲಿಮನೆ ಸೇರಿದ ಪ್ರೇಮಿಗಳು ನಿರುದ್ಯೋಗಿ ಪದವೀಧರರಂತೆ .
ಸೂರ್ಯನ ವಂಚಿಸಿಚಂದ್ರನ ಅಣಕಿಸಿ ಮುಸ್ಸಂಜೆಯ ಮತ್ತಲ್ಲಿ ಕಳೆದ್ಹೋಗಬೇಕು ಪ್ರಣಯಿಗಳು.
ಇನ್ನೊಂದು ಸಂಜೆಯಲಿ ನನ್ನನು ನಿರುದ್ಯೋಗಿಮಾಡಿ ಹೋದರೆ ಹುಷಾರ್’
‘ಮಳೆ ಬಂದಾಗಲೇ ಮಳೆ ಬಗ್ಗೆ ಬರೆಯುವವನು ತಾತ್ಕಾಲಿಕ ಪ್ರೇಮಿ. ಪ್ರೇಮಿಯ ನೆನೆದು ಮಳೆ ಬರಿಸಿಕೊಳ್ಳುವವನು ನಿತ್ಯ ಪ್ರೇಮಿ ಅನ್ನೋದು ನನ್ನ ಅಭಿಪ್ರಾಯ’ 
‘ವ್ಹಾವ್ ಸರ್! ಕವಿಗಳು ಬರಗಾಲದಲ್ಲೂ ಮಳೆ ತರಿಸಬಲ್ಲರು ಅಂದಂಗಾಯ್ತು’ 
‘ಇಲ್ಲಿಲ್ಲ, ಮಳೆ ತರಿಸಿಕೊಳ್ಳಬಲ್ಲರು‌ ಅಷ್ಟೆ’ 
ಮತ್ತೆ ಇಬ್ಬರೂ ನಕ್ಕೆವು…

‘ಪ್ರೇಮಕವಿಗಳು ವಿರಹದ ಕವನಗಳನ್ನೂ ತುಂಬಾ ಚೆನ್ನಾಗಿ ಬರೀತಾರಲ್ವಾ ಸರ್? ನಿಮ್ಮ ಕವನವೊಂದರ ಈ ಸಾಲುಗಳನ್ನೇ ನೋಡೋಣ’ 
‘ನಾನು ನಿನ್ನೊಡನೆ ನಡೆದಾಡಿದ ತಾಣಗಳಲ್ಲಿ ನಿನ್ನ ಮೈ ವಾಸನೆ ಅರಸುತ್ತಿದ್ದೇನೆ ನೀನು ಬರುವುದಿಲ್ಲ ಎಂಬ ಖಚಿತತೆಯಿದ್ದರೂ ನಾನಲ್ಲಿಗೆ ಯಾಂತ್ರಿಕವಾಗಿ ಬರುತ್ತೇನೆ. ನಾವು ಕೂರುತ್ತಿದ್ದ ಪಾರ್ಕಿನ ಮೂಲೆಯಲ್ಲಿ ಮಾರುದ್ದ ಹುಲ್ಲು ಬೆಳೆದು ಕೊಯ್ಲಿಗೆ ಬಂದಿದೆ .
ದೇವರಾಣೆ ಹೇಳುತ್ತೇನೆ ನೀನು ಆಗ ಕೊಟ್ಟಿದ್ದ ಪ್ರೀತಿಯನ್ನುಮತ್ತೆ ಯಾರಾದರೂ ಕೊಟ್ಟಾರು
ಈಗ ಕೊಡುತ್ತಿರುವ ಯಾತನೆಯಿದೆಯೆಲ್ಲಾ…!’
‘ಹೌದು ಕಣ್ರಿ. ನಿಜವಾಗಲೂ ಪ್ರೇಮ ವಿರಹ ಮತ್ತು ನಿರಾಸೆಯಲ್ಲೇ ಖುಷಿ ಕೊಡುತ್ತೆ. ಬೇಕಾದರೆ ಈ ಸಾಲುಗಳನ್ನು ಗಮನಿಸಿ’ 
ಏನಿಲ್ಲವೆಂದರೂ ದಿನ ಕಳೆಯುತ್ತದೆ ನೀನಿಲ್ಲವೆಂದರೂ ಸಮಯ ನಿಲ್ಲುವುದಿಲ್ಲ ಆದರೆ?  ನಿನ್ನ ನೆನಪು ಇಲ್ಲದ ಒಂದರೆಗಳಿಗೆ ಕೂಡ ನನ್ನಿಂದ ತಪ್ಪಿಸಿಕೊಳ್ಳದು ಹುಡುಗಿ.
****

ಗೆಳತಿ, ಕಳೆದ ಯುಗಾದಿಯೊಂದಿಗೆ ನೀನು ನನ್ನೊಡನೆ ಇದ್ದೆ. ಸಿಹಿಯಾದ ಬೆಲ್ಲದಂತೆ. ಆದರೆ ಈ ಯುಗಾದಿಗೆ ನನ್ನೊಂದಿಗಿರುವುದು ನಿನ್ನ ನೆನಪೆಂಬ ಬೇವು ಮಾತ್ರ.
***

ಗೆಳತಿ, ಅದೊಂದು ಪ್ರಶ್ನೆ ಕೇಳಲೇಬೇಡ ‘ನನಗೊಂದು ಬದುಕು ಕೊಡುತ್ತೀಯೇನೋ?’ ಎಂದು ಪ್ರಮಾಣ ಮಾಡಿ ಹೇಳ್ತೇನೆ ಈ ಬದುಕು ನನಗೆ ಅಂತ ಏನೇನು ಕೊಡ್ತದೋ ಅದೆಲ್ಲವನ್ನೂ ವಂಚನೆಯಿಲ್ಲದೆ ನಿನಗೂ ಕೊಡುತ್ತೇನೆ 
*****

‘ಸರ್, ಏಕಕಾಲಕ್ಕೆ ಕವಿಯೊಬ್ಬ ಪ್ರೇಮಿಯೂ, ವಿರಹಿಯೂ ಆಗಿರಲು ಹೇಗೆ ಸಾಧ್ಯ?’
‘ನೋಡಿ, ಎಲ್ಲಾ ಪ್ರೇಮಿಗಳೂ ವಿರಹಿಗಳೇ ಎಲ್ಲಾ ವಿರಹಿಗಳೂ ಚಿರಪ್ರೇಮಿಗಳೇ ಆಗಿರುತ್ತಾರೆ’ 
‘ಹಾಗಾದರೆ ನೀವು ಈಗ ಪ್ರೇಮಿಯೋ? ವಿರಹಿಯೋ ಸರ್?’ 
‘ಸದಾ ಪ್ರೇಮಿಯಾಗಿರಲು ಹಂಬಲಿಸುವ ವಿರಹಿ ನಾನು’ 
‘ನೀವು ತಪ್ಪು ತಿಳಿಯೋಲ್ಲ ಅಂದ್ರೆ ನಿಮ್ಮ ಇಂಥ ಸಹಸ್ರಾರು ಪ್ರೇಮ ಕವಿತೆಗಳ ಹಿಂದಿರುವ ನಿಮ್ಮ ಪ್ರೇಮಿಯನ್ನೊಮ್ಮೆ ನೋಡಬಹುದೆ? ಅವರನ್ನು ಹೊರಗೆ ಕರೆಯಬಹುದೆ ಸರ್? ಇಂಥ ಗಾಢ ಕವಿತೆಗಳ ಹುಟ್ಟಿನ ಹಿಂದಿರುವ ಆ ಸ್ಪೂರ್ತಿಯ ಚಿಲುಮೆಯನ್ನೊಮ್ಮೆ ನೋಡುವಾಸೆ’ ಎಂದು ತುಂಟತನದಿಂದ ಕವಿಯಲ್ಲಿ ಭಿನ್ನವಿಸಿಕೊಂಡೆ. 
‘ನಾನಿನ್ನೂ ನನ್ನ ಪ್ರೇಮಿಯನ್ನು ಹುಡುಕಿತ್ತಿದ್ದೇನೆ. ಅವಳು ಸಿಕ್ಕ ಮೇಲೆ ನಿಮಗೆ ಖಂಡಿತಾ ಹೇಳಿ ಕಳುಹಿಸುತ್ತೇನೆ. ‘ಅಷ್ಟೇ ತುಂಟತನದಿಂದ ಹೇಳಿದರು ಆ ಪ್ರೇಮ ಕವಿ.
ನೋಟ್ ಮಾಡಿಕೊಂಡಿದ್ದ ಮತ್ಯಾವ ಪ್ರಶ್ನೆಗಳನ್ನು ಅವರಿಗೆ ಕೇಳದೆ ಅಲ್ಲಿಂದ ಹೊರಟೆ. 
‘ಸದಾ ಪ್ರೇಮಿಯಾಗಿರಲು ಹಂಬಲಿಸುತ್ತಿರುವ ವಿರಹಿ ನಾನು’ ಎಂಬ ಅವರ ಮಾತು ನನ್ನೊಳಗೆ ಇನ್ನೂ ಪ್ರತಿಧ್ವಿನಿಸುತ್ತಲೇ ಇತ್ತು. ಇದೆ. 

March 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: