ಗಂಡಿಗುಡ್ಡ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಮಾಯೆಯ ತಾಪ ಒಂದು ಕಡೆ ಜಗತ್ತಿನ ಹದಿಹರೆಯದ ವಯೋಮಾನದವರನ್ನು ತಾಕುತ್ತಿದ್ದರೆ; ಧರ್ಮಕ್ರೌರ್ಯ ಮತ್ತೊಂದು ಕಡೆ ವಿಪರೀತವೆನಿಸುವ ಭ್ರಮೆಗಳ ಹುಚ್ಚನ್ನು ಹೆಚ್ಚಿಸುತ್ತಿದೆ. ಕಲಿಯುವವರು, ಕಲಿಸುವವರ ನಡುವೆ ಬರುವ ಗಾಂಧಿ ಬುದ್ಧ, ಬಸವರನ್ನು ಕೂಡ ಅನರ್ಥದ ಲಾಂಚನಗಳಿಗೆ ಬೆಸೆಯುವ ವಿಕೃತರ ಗುಂಪು ಕೂಡ ಹೆಚ್ಚಾಗುತ್ತಿರುವುದು ದುರಂತ…

ಮೀಡಿಯಾಗಳು ಆಳುವವರ ಆಳುಗಳಾಗಿವೆ. ಒಳಿತು-ಕೆಡುಕುಗಳ ನಡುವಿನ ವ್ಯತ್ಯಾಸ ಯುವ ಸಮುದಾಯದ ಅರಿವಿಗೆ ಬಾರದಂತೆ ಧರ್ಮ, ಬಾಂಬುಗಳನ್ನು ಬಿಂಬಿಸುತ್ತಿರುವಾಗ ಪ್ರಕೃತಿ ತನ್ನಷ್ಟಕ್ಕೆ ತಾನೇ ಅದರ ವೈಪರೀತ್ಯಗಳನ್ನು ಕಾಣಿಸುತ್ತಲೇ ಮನುಕುಲವನ್ನು ಎಚ್ಚರಿಸುತ್ತ ಅಚಲವಾದ ಪ್ರಭೆಯನ್ನು ಕೂಡ ಕಾಯ್ದುಕೊಂಡಿದೆ.

ನನ್ನ ಊರು ಬೇಸಾಯಕ್ಕೆ ಜೀವ ಹೊದಿಸಿ ತುಂಬು ಬದುಕು ಕಟ್ಟಿಕೊಂಡ ಕಾಲ ನಿಧಾನಕ್ಕೆ ಅವಸಾನಗೊಂಡು ರಾಜಕೀಯ ಪಲ್ಲಟಗಳು ಕಾಣಿಸತೊಡಗಿದವು. ದಮನಿತರು ತಮಗಿದ್ದ ಅಲ್ಪ ಕೃಷಿ ಭೂಮಿಗೆ ತರುಲತೆಗಳ ಹಸಿರುಡಿಸಿ ನೆಲ ಧ್ಯಾನ ಮಾಡಿ ಮುಂದೆ ಬಂದರೆ ಉಳ್ಳವರು ಹಳೆಯ ತುಂಬು ಪರಂಪರೆಯನ್ನು ನೀಗಿಕೊಂಡು ಪ್ರತಿಷ್ಠೆಯ ನಿರರ್ಥಕ ಜಾಡು ಹಿಡಿದು ಅವಸಾನಗಳ ಕಡೆ ಮುಖ ಮಾಡುತ್ತಿರುವುದು ಊರ ಪ್ರಭೆಯನ್ನು ಹಿಂಗಿಸಿದೆ. ಏನೆಲ್ಲ ಸ್ಥಿತ್ಯಂತರಗಳ ನಡುವೆಯು ಊರಿನ ಸುತ್ತ ಇರುವ ಗುಡ್ಡಗಳು ಮಾತ್ರ ನಿಸರ್ಗದ ಪ್ರಖರ ಚೆಲುವಿಗೆ ಸಾಕ್ಷಿಯಾಗಿ ನಿಂತಿವೆ.

ಒಂದೊಂದು ಗುಡ್ಡವೂ ಒಂದೊಂದು ಚರಿತ್ರೆಯನ್ನು ದಾಖಲಿಸುವ ಮೂಲಕ ಪರಿಸರ ಪ್ರಿಯರನ್ನು ಸೆಳೆಯುತ್ತವೆ. ಊರಿನಿಂದ ನಡೆದೇ ಹೋಗುವಷ್ಟು ಸಮೀಪವಿರುವ ‘ಗಂಡೀಗುಡ್ಡ’ ಮೈತುಂಬ ನುಣುಪಾದ ಹಸಿರು ಕಲ್ಲುಗಳನ್ನು ಹೊದ್ದು ವಿಶೇಷವೆನಿಸಿದೆ. ಉದ್ಯಮಿಗಳ ಸುಡುಗಣ್ಣು ಇಲ್ಲಿಯವರೆವಿಗೂ ಹಾದು ದೊಡ್ಡ ದೊಡ್ಡ ಕಲ್ಲುಗಳನ್ನು ಅಗೆದು ಸಾಗಿಸಿ ಮೇಲ್ಪದರ ಕ್ಷೀಣಿಸಿ ಗುಡ್ಡ ಕರಗಿ ಎತ್ತರ ಗಾತ್ರ ಎರಡನ್ನೂ ಕಳೆದುಕೊಂಡಿದೆ. ಬೇಸಿಗೆ ಬಂತೆಂದರೆ ದನಕುರಿಯವರು ಒಣಗಿದ ಬಾದೆ ಹುಲ್ಲಿಗೆ ಪಾವಕ ತಗುಲಿಸಿ ಗುಡ್ಡದ ಹಸಿರು ಬೂದಿಯಾಗಿಬಿಡುತ್ತದೆ. ಸ್ಥಳೀಯರನ್ನು ಕೇಳಿದರೆ ಬ್ಯಾಸಿಗ್ನಗೆ ಬೆಂಕಿ ಕಾಣ್ಸಿರೆ ಮುಂಗಾರ್ನಗೆ ಸಿಗ್ರುತ್ತೆ ಬಾದೆಬುಡ. ಈ ಸಿಗ್ರು ಕುರಿಮ್ಯಾಕಿಗೆ ಒಳ್ಳೇ ಮೇವು ಕಣ್ರವ್ವ!!

ಇಲ್ದಿದ್ರೆ ಮೇವಿಲ್ದೆ ಪಡ್ಪಾಟ್ಲು ಬೀಳ್ಬೇಕಾಗುತ್ತೆ ಹೇಳ್ತಾರೆ. ಫೆಬ್ರವರಿ ತಿಂಗಳ ಅಂತ್ಯಕ್ಕೆ ನನ್ನ ಊರಿನ ಗುಡ್ಡಗಳ ತುಂಬೆಲ್ಲ ಅಪೂರ್ವ ಗಮಲೊತ್ತ ಸುಮಗಳು ಅರಳಿ ನಿಲ್ಲುತ್ತವೆ. ಕಳೆದ ಹದಿನೈದು ದಿನಗಳ ಹಿಂದೆ ಕವಿಗಳು, ಚಿಂತಕರು ಆದ ಶ್ರೀಯುತ ನಟರಾಜ್ ಬೂದಾಳ್ ಸರ್ ಹಾಗೂ ಅವರ ಪತ್ನಿ ಲತಾ ಬೂದಾಳ್ ಅವರ ಕುಟುಂಬದ ಜೊತೆ ಗಂಡೀಗುಡ್ಡಕ್ಕೆ ಚಾರಣವಿತ್ತು. ಅನಂತವೆನಿಸಿ ಬಿಡುವಷ್ಟು ಪರಿಸರದ ಒಡಲನ್ನು ಧ್ಯಾನಿಸುವ ಮನಸು ಇವರದು.

ಫೆಬ್ರವರಿ ಮಾಸದಲ್ಲಿ ಅರಳಿ ಒಂದು ವಾರದವರೆಗೆ ಇರುವ ‘ಜಾಲ್ಗಿರಿ ಹೂಗಳು’ ಈ ಗುಡ್ಡಕ್ಕೆ ಮೆರುಗು. ಕೋಮಲವಾದ ಹೂಗಳು ಅತ್ತ ಎಲೆ ಉದುರಿದ ತರುಗಳ ತುಂಬಾ ಬಿರಿದು ಸುಗಂಧ ಬೀರುತ್ತವೆ. ಇಡೀ ಗುಡ್ಡವೇ ಬೆಳ್ಳಗೆ ಬೆಳಗುತ್ತದೆ. ಮೆದುವಾದ ಸಣ್ಣ ಹೂಗಳಿವು. ನಾವು ಕಿರಿಯರಿದ್ದಾಗ ತಲೆ ತುಂಬ ಗೊಂಚಲು ಮುಡಿದು ಮೂಸುತ್ತಾ ಮುದಗೊಳ್ಳುವುದೇ ಹಿಗ್ಗು. ‘ನೀ ಸೃಷ್ಟಿಸಲಾಗದ ಚೆಲುವಿಗೆ ನಿನ್ನಿಂದೇತಕೆ ಸಾವು’ ಅನ್ನೋ ಕುವೆಂಪು ಅವರ ಕಾವ್ಯದ ಸಾಲೊಂದನ್ನು ಓದಿದ ಮೇಲೆ ಬೇರೆಯದೇ ಎಚ್ಚರ ಮೂಡಿತೆನ್ನಬೇಕು.

ನಡೆದಲ್ಲೆಲ್ಲ ನೂರಾರು ಮರಗಳು, ಗುಡ್ಡದ ತುಂಬಾ ಗಮಲಿನ ಸಮೀರ. ಅಬ್ಬಾ! ಸಹಜ ಪರಿಮಳದ ವಲಯದಲ್ಲಿಯೇ ಬದುಕಿಬಿಡಬೇಕೆಂಬ ಅಮಲು. ಗಮಲಿನ ಸೆಳೆತಕ್ಕೆ ಕೈ ನೀಡಿ ಜೊತೆಯಲ್ಲಿದ್ದವರು ಕಿತ್ತ ಗೊಂಚಲೊಂದನ್ನು ಬೊಗಸೆಯಲ್ಲಿಡಿದು ನಾಸಿಕಕ್ಕೆ ತುಂಬಿಕೊಳ್ಳುವ ಉಮೇದು ‘ಎನಿತು ನವಿರಾಗಿಹವು ದಳಗಳು ಹಸುಳೆ ಕಾಣುವ ಕನಸೊಲು’ ಕವಿತೆಯ ಸಾಲು ಹೂಬುಡದಲ್ಲಿ ನಿಂತು ಗುನುಗಿದಂತೆ!! ಅನೇಕ ರಮಣೀಯ ಪುಳಕಗಳ ಅನುಭೂತಿ ದಕ್ಕಲು ಜಾಲ್ಗಿರಿಯ ಕೂಟಕ್ಕಿಳಿಯಬೇಕು.

ಹಿರಿಯ ಮರಗಳ ತುಂಬಾ ಬೆಳಗಿದ ಕಿರಿಯ ಮರಗಳ ತುಂಬಾ ಓಲಾಡುವ ಮರಮರದ ಅಡಿಯಲ್ಲೂ ನಿಂತು ನಲಿಯಲು ಪ್ರೇರೇಪಿಸುವ ಹೂಗಳು. ಗುಡ್ಡಕ್ಕೆ ಗುಡ್ಡ ಬೆಸೆದುಕೊಂಡಂತೆ ಗಂಡೀಗುಡ್ಡದ ಬೇರು ರಾಮದೇವರ ಗುಡ್ಡ, ಮುಂಗಾರು ಗುಡ್ಡ, ದಾಸರ ಗುಡ್ಡ, ಹೊನ್ನುಕಿತ್ತ ಮಲ್ಡಿ, ಕೃಷ್ಣನ ಕಲ್ಗುಡ್ಡ ಹೀಗೆ ಹಲವು… ಎಲ್ಲಾ ಗುಡ್ಡಗಳು ಜಾಲ್ಗಿರಿಯ ಗಂಧದಲ್ಲಿ ಸೋಜಿಗದಿಂದ ರಮ್ಯಗೊಂಡಂತೆ ಕಾಣುತ್ತವೆ. ಗಂಡೀಗುಡ್ಡದ ನಡುವೆಯೇ ಒಂದಿಷ್ಟು ಉದ್ದ ಬಯಲನ್ನು ಬಿಟ್ಟು ಮತ್ತೊಂದು ಗುಡ್ಡವಿದೆ. ಇವೆರಡೂ ಗುಡ್ಡಗಳ ನಡುವೆ ಗಂಡೀಕೆರೆ ನಿರ್ಮಾಣವಾಗಿದೆ. ತಟನಿಯಂತೆ ಉದ್ದಕ್ಕೆ ಕಾಣುವ ಕೆರೆಯ ಸೌಂದರ್ಯವನ್ನು ಎದುರೇ ಕಣ್ತುಂಬಿಕೊಳ್ಳಬೇಕು.

ಶಿವರಾತ್ರಿಯು ಸಮೀಪವಿರುವ ಕಾಲವಾದ್ದರಿಂದ ಅಲ್ಲಲ್ಲಿ ಕೆಂಪಗೆ ಮುತ್ತುಗದ ಹೂಗಳು ಅರಳಿ ಪ್ರತಿಬಿಂಬ ಕೆರೆಯ ನೀರಲ್ಲಿ ರಂಗು ತುಂಬಿರುತ್ತದೆ. ಸಿನಿಮಾದವರ ಕಣ್ಣಿಗೇನಾದರೂ ಇಂಥಾ ಸ್ಥಳಗಳು ಕಂಡರೆ ಜನ ಸಂಚಾರ ಹೆಚ್ಚಿ ಅಪಾಯಗಳಾಗುವ ಸಂಭವವಿದೆ. ಮನುಷ್ಯ ಕಾಲಿಟ್ಟ ಜಾಗಗಳು ನರಳಿ ಬಿಡುತ್ತವೆ. ಪರಿಸರ ಜಾಗೃತಿಗಾಗಿ ಎಷ್ಟು ಎಚ್ಚರದ ಚಟುವಟಿಕೆಗಳು ನಡೆದರೂ ಮನುಕುಲದ ಐಲುಗಳಿಂದ ನಿಸರ್ಗವನ್ನು ಕಾಯ್ದುಕೊಳ್ಳಲಾಗದ ದುರಂತದ ಕಡೆಗಿನವರು ನಾವು ಎಂಬ ಪಶ್ಚಾತ್ತಾಪ ಅಷ್ಟೇ.

ಗಂಡೀಗುಡ್ಡದ ಕೆರೆ ತುಂಬಿಕೋಡಿ ಬಿದ್ದರೆ ನನ್ನೂರಿನ ದೊಡ್ಡಳ್ಳ ಹರಿದು ಮುಂದಿನೂರ ಕೆರೆ ತುಂಬುವುದು. ಮಳೆಗಾಲ ಹುಟ್ಟಿದ ಕೂಡಲೇ ಊರಿನೆಲ್ಲ ಮನಸುಗಳು ದೇನಿಸುವುದು ಕೆರೆ ತುಂಬಿ ಕೋಡಿ ಬೀಳಲೆಂದು. ಇತ್ತೀಚಿನ ಮಳೆಗಾಲ ಬರಡು ಎನಿಸುವಷ್ಟು ಸಪ್ಪೆ ನಮ್ಮ ಭಾಗದಲ್ಲಿ. ಹಿಂದೆಲ್ಲಾ ಕಡು ಬೇಸಿಗೆಯಲ್ಲೂ ತುಂಬಿ ಹರಿಯುತ್ತಿದ್ದ ಹಳ್ಳ ಇಪ್ಪತ್ತು ವರ್ಷಗಳಿಂದ ಈಚೆಗೆ ಹೆಚ್ಚು ಕಡಿಮೆ ನಿಂತೇಹೋದಂಗಾಗಿದೆ.

ಊರ ಜನವೆಲ್ಲ ಮಳೆ ಹೋಗಿ ನೆಲ ಮರ್ತು ಮುಗ್ಲು ಸೇರ್ತು. ಹಳ್ಳರ್ದಿದ್ರೆ ಸುತ್ಮುತ್ಲು ಬಾವಿಗಳು ಬೋರ್ಗಳು ಒಂದಿಷ್ಟು ಹದ್ವಾಗ್ತಿದ್ವು ಅಂತ ನರಳ್ತಾರೆ. ಪ್ರಜ್ಞೆ ಸತ್ತವರು ಮಾಡಿದ ಮರಳಿನ ಲೂಟಿ ಸುತ್ತಲಿನ ಕಿರು ಕಾಂತಾರದ ಮೇಲಿನ ಹಲ್ಲೆ ಇಷ್ಟು ಅನಾಹುತಗಳಿಗೆ ದಾರಿಯಾಗಿದೆ. ಭಾರತದಂತಹ ದೇಶದ ಒಳಗೆ ರಾಜಕಾರಣವೊಂದು ಹಸನಾದರೆ ಕಾನೂನುಗಳು ಶುದ್ಧವಾಗಿ ಎಲ್ಲಾ ಪ್ರಮಾದಗಳಿಗೂ ತೆರೆ ಎಳೆಯಬಹು…

ಇದು ಕನಸಿನ ಕನಸಷ್ಟೆ. ಗಂಡೀಕೆರೆ ಕೋಡಿಬೀಳದಿದ್ದರೂ ತನ್ನ ಎಡಬಲದ ಗುಡ್ಡಗಳ ನೀರನ್ನು ಬಸಿದುಕೊಂಡು ಬೇಸಿಗೆಯಲ್ಲಿ ಕೂಡ ತುಂಬಿ ನಿಂತಿದೆ. ಗಂಡೀಗುಡ್ಡದ ತುಂಬಾ ಹಿಂದೆ ಯಾರೋ ವಣಿಕ ಅಗೆಸಿದ ಹಸಿರುಕಲ್ಲುಗಳ ಸಣ್ಣ ಒಡಕುಗಳು ಜೋಡಿಸಿದಂತೆ ಬಿದ್ದಿವೆ. ಕೆಲವುಕಡೆ ದೊಡ್ಡ ಹಸಿರು ಕಲ್ಲುಗಳು ಜೋಡಿಸಿದಂತೆಯೇ ಸೆಳೆಯುತ್ತವೆ. ಅತಿ ಬೆಲೆಯುಳ್ಳ ಈ ಸುಂದರ ಬಂಡೆ ಚೂರಾಗಿ ಹಣಮೋಹಿಗಳ ಪಾಲಾಗಿದೆ. ಅಲ್ಲಲ್ಲಿ ಗೋದಿ ಉರಗಗಳು ಪರೆಬಿಟ್ಟದ್ದು ಕಾಣುತ್ತದೆ.

ಗುಡ್ಡದ ತುಂಬಾ ಜಾಲ್ಗಿರಿಗೆ ಜೊತೆಯಾದಂತೆ ತೂಬ್ರೆ, ಮರಡಿ, ಕಮ್ಬ್ರ, ಕಾಡ್ಬಿಕ್ಕೆ, ಮುತ್ಗ, ಹೀಗೆ ಹತ್ತು ಹಲವು ಪ್ರಭೇದದ ದ್ರುಮಗಳು ಬೆಳೆದು ನಿಂತಿವೆ. ಅಂಚಿಂಕಡ್ಡಿ ಹುಲ್ಲಂತು ಪೊದೆಯಂತೆ ದಟ್ಟವಾಗಿದೆ. ದಪ್ಪನೆಯ ಕೆಂಪು ಮಿಡತೆಗಳ ನೆಗೆತವಂತು ಹೇರಳ. ಪ್ರತೀವರ್ಷ ಬೇಸಿಗೆಯ ಆರಂಭಕ್ಕೆ ಈ ಗುಡ್ಡಗಳನ್ನು ತಾಕಬೇಕು. ಜಾಲ್ಗಿರಿಯ ಪರಿಮಳದಲ್ಲಿ ಮುಳುಗಿ ತಣ್ಣಗೆ ಸುಖಿಸಬೇಕು. ಮಧುರವಾಗಿ ಕೂಗುವ ಸಣ್ಣಕ್ಕಿಗಳ ಕಲರವಕ್ಕೆ ಕಿವಿಗೊಡಬೇಕು.

‘ಕಾಡೇನ್ ಮಂಜೇ ಬಿಸಿಲೇರ್ದೊಡೆ ಅಳಿವುದಕೆ’ (ಕುವೆಂಪು).

March 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: