ಪ್ರೀತಿ ಪದಗಳ ಪಯಣ

 

 

ಸುಧಾ ಆಡುಕಳ

 

 

 

 

 

ಪಯಣಕ್ಕೆ ಮುನ್ನ…

ಎರಡು ವರ್ಷಗಳಿಂದ ನಿರಂತರವಾಗಿ ನನ್ನಿಂದ ಬರೆಸಿಕೊಳ್ಳುತ್ತಿರುವ ಈ ಪ್ರೀತಿಯ ಹನಿಗಳೇ ನನ್ನ ಇತ್ತೀಚಿನ ಅಭಿವ್ಯಕ್ತಿಯ ಮಾಧ್ಯಮವೆನಿಸುವಷ್ಟು ಅವುಗಳೊಳಗೆ ಸೇರಿಹೋಗಿರುವೆ. ಸಾವಿರದ ಹತ್ತಿರಕ್ಕೆ ಪಯಣಸುತ್ತಿರುವ ಹನಿಗಳ ಈ ಜಾಡಿನಲ್ಲಿ ನೀವೂ ಒಮ್ಮೆ ಪಯಣಿಸಿ, ಪ್ರೀತಿ ಪರಿಮಳವ ಆಘ್ರಾಣಿಸಿ.

ಪ್ರೀತಿಗೆ…

ನಾನೂ ಹಾಗೇ ಅಂದುಕೊಂಡಿದ್ದೆ

ಎಲ್ಲರಂತೆ, ಪ್ರೀತಿಗೆ ಇಬ್ಬರ ಒಲವು

ಬೇಕೆಂದು, ಈಗ ಸಾರಿ ಹೇಳಬಲ್ಲೆ

ಒಂಟಿಯಾನದಲ್ಲೂ ಪ್ರೀತಿ ಬದುಕಬಲ್ಲುದೆಂದು

 

ಆಕಾಶಕ್ಕೆ ಕೈಚಾಚಿದೆ, ಸಿಗಲಿಲ್ಲ ಚಂದ್ರ

ನಿನ್ನ ಕಿರುಬೆರಳಲ್ಲಿ ಬೆರಳಿಟ್ಟು ನಡೆದೆ

ಚಂದ್ರನೂ ನಮ್ಮೊಂದಿಗೆ ನಡೆಯುತ್ತಿದ್ದ!

 

ತುಂಬಾ ತಡವಾಯ್ತು ನಿನ್ನ ಆಗಮನ

ಕಲ್ಲಾಗಿದ್ದಳವಳು ನೀ ಸ್ಪರ್ಶಿಸುವಾಗವಳನ್ನ!

 

ಜೋಳಿಗೆಯ ಹೆಗಲಿಗೇರಿಸಿ ತಿರುಗುವ ಗೆಳೆಯಾ,

ನಿನ್ನ ಜೋಳಿಗೆಯ ಶೋಧಿಸದೇ ವರ್ಷವೆಷ್ಟಾಯ್ತು ಹೇಳು?

ಎಲ್ಲದರ ಅಡಿಯಲ್ಲಿ ಇರಬಹುದು ನನ್ನ ಪ್ರೀತಿ

ಒಮ್ಮೆ ಬಿಡುವು ಮಾಡಿ ಮಾತಾಡಿಸು!

 

ನಾವು ಸುಮ್ಮನೆ ಸೇರಿದೆವು

ಮತ್ತುಕಾರಣವಿಲ್ಲದೇ ನಕ್ಕೆವು

ಆ ನಗುವು ನಮ್ಮೊಳಗಿನ

ನೋವನ್ನು ಅಣಕಿಸುತ್ತಿತ್ತು

ಮತ್ತು ಅದೇ ಆಗಬೇಕಾಗಿತ್ತು!

 

ನಾವು ನಮ್ಮ ನಡುವೆ

ಒಂದು ಗೆರೆ ಎಳೆದೆವು

ಮತ್ತು ಅದನ್ನು ಪ್ರೀತಿಯಿಂದ

ಗೌರವಿಸಿದೆವು, ಆ ಗೆರೆ ಎಷ್ಟು

ತಣ್ಣಗೆ ಮಲಗಿತ್ತು ಮತ್ತು

ನಮ್ಮನ್ನು ಸದ್ದಿಲ್ಲದೇ ಪೊರೆಯಿತು

 

ನಾವು ನಮ್ಮ ಪ್ರೀತಿಯನ್ನು

ಅನಿವಾರ್ಯವಾಗಿ ಉರಿಸಿದೆವು

ಬೂದಿಯನ್ನು ಗೊಬ್ಬರವಾಗಿಸಿ

ಗಿಡಗಳನ್ನು ಬೆಳೆಸಿದೆವು, ಮತ್ತೀಗ

ನಮ್ಮೆದುರು ನಗುವ ಹೂ ರಾಶಿ!

 

ಪ್ರೀತಿಯ ಬೆಟ್ಟವೇರುವ ಕುದುರೆಯನ್ನು

ನಾನೆಲ್ಲಿಂದ ತರಲಿ?

ಅಕ್ಷರಗಳ ತೇರನ್ನೇರಿ ಹೊರಟಿರುವೆ

ನಿನ್ನ ಸೇರುವ ಹಠದಲ್ಲಿ

 

ಕನಸಲ್ಲಿ ಬಂದ ದೇವರಲ್ಲಿ

ಏನು ಬೇಡುವುದು?

ಜಗದ ಚೆಲುವನ್ನೊಂದು

ಬೊಗಸೆ ತುಂಬ ನೀಡೆಂದೆ

ಎಚ್ಚರಗೊಂಡಾಗ ಬೊಗಸೆಯಲ್ಲಿ

ನಿನ್ನ ಮೊಗವಿತ್ತು!

 

ಏನು ಉಡುಗೊರೆಯ ತಂದೆ ನನಗೆ?

ಮುತ್ತು, ರತ್ನ, ಉಡುಗೆ, ತೊಡುಗೆ…..

ಏನೂ ಬೇಕಿಲ್ಲ, ತರದಿರಬೇಡ ಮತ್ತೆ

ಪುಸ್ತಕ, ಒಂದು ಭರವಸೆಯ ನಗೆ!

 

ನನ್ನ ಗೋರಿಯ ಮೇಲೆ

ಒಂದು ಹೂವನ್ನಿಡು, ಮತ್ತು ಹೇಳು

ನಾನಿವಳ ಪ್ರೀತಿಸುವುದು

ಹೂವಿನಷ್ಟೇ ಸತ್ಯ, ಸ್ವರ್ಗ

ತಾನೇ ತಾನಾಗಿ ತೆರೆದುಕೊಳ್ಳುವುದು!

 

ತೆರೆದುಕೊಂಡಿದೆ ಕಿಟಕಿ

ಇಣುಕುತ್ತಿದ್ದಾನೆ ಚಂದ್ರ!

ನಿದಿರೆ ಬಾರದ ಇರುಳು

ಒಂದೇ ಚಂದಿರನಡಿಯಲ್ಲಿ ನಾವು

ದೂರವಾದರೂ,  ಎಷ್ಟೊಂದು ಹತ್ತಿರ!

 

ಓಲೆ ಕಳಿಸಿದ್ದೇನೆ

ಉರಿವ ಸೂರ್ಯನ ಕೂಡೆ

ಉರಿದುಹೋದೀತೆಂಬ ಭಯ ಬೇಡ

ಉರಿದ ಬೂದಿಯ ಮೇಲೆ

ಅರಳಿ ನಿಂತ ಹೂವು

ನನ್ನ ಪ್ರೇಮದ ಕವನ

ಕೀಳದೇ ಓದಿಕೊ ಅದನ

 

ನಾನು ನನ್ನ ಹೃದಯವನ್ನು ಒತ್ತೆಯಿಟ್ಟಿದ್ದೇನೆ

ಮತ್ತದು ನಿನ್ನಲ್ಲೆಯೇ ಇದೆ

ಬೇರೆ ವಸ್ತುಗಳಂತೆ ಎಸೆಯದಿರು ದೂರ

ಜೀವವಿದೆ ಮತ್ತು ನಿನ್ನ ಹೆಸರನ್ನೇ ಮಿಡಿಯುತ್ತದೆ!

 

ಕಳೆದು ಹೋದಾಗಲೆಲ್ಲ

ಹುಡುಕಿ ತರುವಿಯೇಕೆ ನನ್ನ?

ಕಳೆದುಹೋಗುವುದರಲ್ಲೂ

ಒಂದು ಸುಖವಿದೆ!

 

ಮನದ ಕನ್ನಡಿ ತುಂಬಾ

ಎಂದೂ ನಿನ್ನದೇ ಬಿಂಬ

ಒಂದಿನಿತೂ ಕೊಳೆಯಿಲ್ಲದಂತೆ

ಒರೆಸಿಡುತ್ತೇನೆ ಸದಾ

 

ನೀ ಖಾಲಿಯಾಗಿಸಿ ಹೋದ

ಗಳಿಗೆಗಳನ್ನು ಪ್ರೀತಿ

ಪದಗಳ ಪೋಣಿಸಿ

ತುಂಬಿಕೊಳ್ಳುತ್ತೇನೆ ನಾನು

 

ಕೈಗೇ ಸಿಗದವನ

ಎದೆಯೊಳಗೆ ಇಳಿಸಿಕೊಳ್ಳುವುದು ಹೇಗೆ?

ಕೇಳಿದೆ ಅಕ್ಕನ

ಇನ್ನಷ್ಟು ಪ್ರೀತಿಸುವುದು

ಎಂದು ನಕ್ಕಳು

 

 

‍ಲೇಖಕರು avadhi

December 23, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: