ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..

ಪ್ರೀತಿ ನಾಗರಾಜ

ಮೊನ್ನೆ ಧಾರವಾಡ ಸಮೀಪ ನಡೆದ ಅಪಘಾತದಲ್ಲಿ ದಾವಣಗೆರೆಯ ನನ್ನ ಹಲವು ಸ್ನೇಹಿತೆಯರು/ಸಂಬಂಧಿಗಳು, ಮಕ್ಕಳು ಅವರ ಜೊತೆ ಡ್ರೈವರ್ ಮತ್ತು ಕ್ಲೀನರ್ ಜೀವ ಕಳೆದುಕೊಂಡರು. ಅದರ ಬಗ್ಗೆ ದಾವಣಗೆರೆಯ ಪ್ರಮುಖ ದಿನಪತ್ರಿಕೆಯಾದ ಜನತಾವಾಣಿಗೆ ಈ ಲೇಖನ ಬರೆದಿದ್ದೆ. ನಿಮ್ಮೆಲ್ಲರ ಅವಗಾಹನೆಗೆ.

ಅವರೆಲ್ಲರೂ ಅಮ್ಮಂದಿರು. ಇರುವಷ್ಟು ವರ್ಷವೂ ಮಕ್ಕಳನ್ನು, ಸಂಸಾರವನ್ನು, ಸಂಬಂಧಗಳನ್ನು ತಮ್ಮ ವೃತ್ತಿಯನ್ನು, ತಮ್ಮ ಜವಾಬ್ದಾರಿಗಳನ್ನು ಜತನದಿಂದ ನಿಭಾಯಿಸಿಕೊಂಡು ಇದ್ದವರು. ಪ್ರೊಫೆಸರ್-ವೈದ್ಯೆ, ಆಸ್ಪತ್ರೆಯ ಜವಾಬ್ದಾರಿ ಹೊತ್ತವರು, ಮನೆಯ ಆಗು-ಹೋಗುಗಳಲ್ಲಿ ವ್ಯವಹಾರದ ವಿಷಯಗಳಲ್ಲಿ ತಮ್ಮ ಸಾಮರ್ಥ್ಯಾನುಸಾರ ಭಾಗವಹಿಸುತ್ತಾ ಮಕ್ಕಳನ್ನು ಮನೆಯವರನ್ನು ಜೋಪಾನ ಮಾಡುತ್ತಾ ‘ಹುಷಾರ’ ‘ಹುಷಾರು’ ಎನ್ನುತ್ತಲೇ ತಮ್ಮ ಪ್ರಯಾಣ ಮುಗಿಸಿಬಿಟ್ಟರು. ಹೋದವರಲ್ಲಿ ಭವಿಷ್ಯದ ಭರವಸೆ, ಕನಸು ಹೊತ್ತಿದ್ದ ಇಬ್ಬರು ಹದಿ ವಯಸ್ಸಿನ ಮಕ್ಕಳೂ ಇದ್ದರು.

ಸಂಕ್ರಾಂತಿಯ ಮಾರನೇ ದಿನ ನಸುಕಿನ ಜಾವದಲ್ಲಿ ಗೋವಾಕ್ಕೆ ಹೊರಟಿದ್ದ ನನ್ನ ಊರಿನ ಅಕ್ಕಂದಿರು, ಆ ಇಬ್ಬರು ಕನಸುಗಣ್ಣಿನ ಕಂದಮ್ಮಗಳು ಮತ್ತೆ ಬರಲಿಲ್ಲ. ಅವರೊಂದಿಗೆ ದಿನಗಳನ್ನು ಕಳೆದು ಬೊಗಸೆಯಷ್ಟು ನೆನಪುಗಳನ್ನು ಒಟ್ಟು ಮಾಡಿಕೊಂಡು ಬರಲು ಹೊರಟಿದ್ದ ಇನ್ನೊಬ್ಬ ಗೆಳತಿ ಕೂಡ ಮೊನ್ನೆ ತನ್ನ ಸ್ನೇಹಿತೆಯರನ್ನು ಇನ್ನೊಂದು ಲೋಕದಲ್ಲಿ ಕೂಡಿಕೊಂಡಳು. ಇವಿಷ್ಟೂ ಸಾವುಗಳು ಎಲ್ಲೆಲ್ಲೋ ಬದುಕುತ್ತಿರುವ ನಮ್ಮನ್ನು ಕಲಕಿಬಿಟ್ಟಿವೆ.

ಇವರಲ್ಲಿ ಎಷ್ಟೋ ಜನರೊಂದಿಗೆ ನಮ್ಮ ವೈಯಕ್ತಿಕ ಸಂಪರ್ಕ ಇಲ್ಲದೆ ಇದ್ದರೂ ಊರಿಗೆ ಬಂದು ಅಲ್ಲಿ ಇಲ್ಲಿ ಓಡಾಡುವಾಗ ಎಲ್ಲರ ಪರಿಚಿತ ಮುಖ, ನೆನಪಿನ ನಗು ಎಲ್ಲಾರೂ ಅಲ್ಲಲ್ಲೇ ಸಂತೋಷವಾಗಿ ಬದುಕಿದ್ದಾರೆ, ಮಕ್ಕಳು ಸಂಸಾರ, ವೃತ್ತಿ, ಎಲ್ಲವನ್ನೂ ಏಕಸೂತ್ರದಲ್ಲಿ ಮುನ್ನಡೆಸುತ್ತಾ ಇದ್ದಾರೆ ಎನ್ನುವ ಒಂದು ನೆಮ್ಮದಿಯ ಆಲೋಚನೆ ನಮ್ಮೆಲ್ಲರ ಎದೆಯಲ್ಲಿ ಗುಪ್ತಗಾಮಿನಿಯ ಹಾಗೆ ಹರಿಯುತ್ತಾ ಇತ್ತು.

ಅವರ ಮಕ್ಕಳು ನನ್ನ ಮಕ್ಕಳ ವಾರಗೆಯವರು, ಅಥವಾ ಅವರಿಗಿಂತ ಅಷ್ಟು ವರ್ಷ ದೊಡ್ಡವರು ಇಲ್ಲವೇ ಇಷ್ಟು ವರ್ಷ ಚಿಕ್ಕವರು…ನಾವೆಲ್ಲಾ ಒಂದೇ ಶಾಲೆಗೆ ಹೋಗಿದ್ದೆವು, ಆ ಮಿಸ್ ಇದ್ದರು, ಈ ಸರ್ ಇದ್ದರು, ಮುಂದೆ ಕಾಲೇಜು ಕೂಡ ಒಂದೇ! ಊರಿಗೆ ಇದ್ದ ಒಂದೇ ಕಾಲೇಜಿನಲ್ಲೇ ನಮ್ಮೆಲ್ಲರ ನೆನಪಿನ ಪಾಲೂ ಇರುವುದು.

ಎಳ್ಳು ಬೆಲ್ಲ ತಿಂದು ಬಾಯಿ ಸಿಹಿ ಇನ್ನೂ ಆರಿರದ ಬೆಳಂಜಾವದಲ್ಲಿ ಅವರೆಲ್ಲರೂ ಇಲ್ಲವಾದಾಗ ಆದ ಆಘಾತ ವರ್ಣಿಸಲು ಅಸಾಧ್ಯ. ಬೆಳಗ್ಗೆ ಸುದ್ದಿ ಅಷ್ಟಿಷ್ಟು ಅಸ್ಪಷ್ಟವಾಗಿ ತಿಳಿದಾಗಿನಿಂದ ಹಿಡಿದು, ಯಾರ್ಯಾರಿದ್ದರಂತೆ, ಅವರಲ್ಲಿ ನಮ್ಮ ಸ್ನೇಹಿತೆಯರ ಅಕ್ಕಂದಿರು ಹೇಗಿದ್ದಾರಂತೆ? ಮಕ್ಕಳು? ಆಸ್ಪತ್ರೆಗೆ ಸೇರಿಸಿದ್ದಾರಾ? ಕಂಡೀಷನ್ ಹೇಗಿದೆಯಂತೆ? ಅಯ್ಯೋ ದೇವರೆ! ಹೇಗಾದರೂ ಮಾಡಿ ಈ ಸುದ್ದಿಯೇ ಸುಳ್ಳು ಎನ್ನುವಂತೆ ಮಾಡಿ ಅವರೆಲ್ಲರನ್ನೂ ಗೋವಾ ಮುಟ್ಟಿಸಿಬಿಡಪ್ಪ…ಅಥವಾ ಟ್ರಿಪ್ ಕ್ಯಾನ್ಸಲ್ ಮಾಡಿ ಮನೆಗೆ ಬಂದರು ಎನ್ನುವಂತೆ ಮಾಡಪ್ಪ ಎನ್ನುವ ಸಂಕಟದ ಯೋಚನೆಗಳು.

ಬೆಳಗ್ಗೆ ಹೀಗೆ ಶುರುವಾದ ಆತಂಕದ ಫೋನ್ ಕಾಲ್ ಗಳು ಸಂಜೆಯ ಹೊತ್ತಿಗೆ ಯಾರ್ಯಾರ ಬಾಡಿ ಮನೆಗೆ ಬಂತಂತೆ? ಅಂತ ಕೇಳುತ್ತಾ ಸಂಕಟದ ಮುಂದುವರಿಕೆಯಾಗಿ ಉಳಿದುಬಿಟ್ಟೆವು. ಅವಳು ಆಸ್ಪತ್ರೆಯಂತೆ, ಇವಳು ಕಷ್ಟವಂತೆ, ಅವಳದ್ದು ಸರ್ಜರಿ ಫಿಕ್ಸ್ ಆಯ್ತಂತೆ….ಅಂತೆ ಅಂತೆ…

ಬೆಳ್ಳಂಬೆಳಗ್ಗೆ ಇದ್ದ ಒಂದು ಬಗೆಯ ಸಂಕಟ ಎಳೆ ಸಂಜೆಯೆ ಹೊತ್ತಿಗೆ ಆಗಲೇ ಒಪ್ಪಲೇಬೇಕಾದ ದುರ್ಭರ ಸತ್ಯವಾಗಿಬಿಟ್ಟಿತ್ತು. ಅದರ ಬೆನ್ನ ಹಿಂದೆಯೇ ಶುರುವಾದ ಇನ್ನೊಂದು ಆಲೋಚನೆ – ಗೋವಾಕ್ಕೆ ಹೆಣ್ಣು ಮಕ್ಕಳು ಹೊರಟ ಬಗ್ಗೆ ಊರಿನವರು ಏನನ್ನುತ್ತಿದ್ದಾರೆ? ಇನ್ನು ಹೋದವರ ಮನೆಯವರು ಎಷ್ಟು ಜನಕ್ಕೆ ಜೀವಮಾನವಿಡೀ ಉತ್ತರ ಕೊಡುತ್ತಾ ಬದುಕಬೇಕೋ! ಎಲ್ಲಕ್ಕಿಂತ ಮುಖ್ಯ ಗಂಡ-ಹೆಂಡತಿ ಜಗಳಕ್ಕೂ ಮನೆಯ ಬಾಗಿಲಿಗೆ ಕಿವಿಯಿಟ್ಟು ನಿಲ್ಲುವ ‘ಬ್ರೇಕಿಂಗ್ ನ್ಯೂಸ್’ ಮಾಧ್ಯಮ ಇನ್ನೆಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೋ ಎಂದು.

‘ನೋಡೇ ಬೇಕಾರೆ, ಇನ್ಮೇಲೆ ಇನ್ನೊಂದು ಮೂರ್ ವರ್ಷನಾರಾ ನಮ್ ಹುಡಿಗ್ಯಾರು ಹೊರಗ ಹೊಕ್ಕಿವಿ ಅಂತ ಮಾತಾಡಲಾರದಂಗ ಆಕ್ಕತಿ’ ಅಂತ ಸ್ನೇಹಿತೆ ಆತಂಕದಿಂದಲೇ ಹೇಳಿದಳು. ಅವಳು ಹೇಳಿದ್ದು ಸುಳ್ಳೇನಲ್ಲ. ಆ ಆಲೋಚನೆ ನನಗೂ ಬಂದಿತ್ತು. ನಮ್ಮ ಊರಿನ ಹೆಣ್ಣು ಮಕ್ಕಳು ತಮ್ಮ ಪಾಲಿನ ಸಂತೋಷವನ್ನು, ಸ್ನೇಹಿತೆಯರೊಂದಿಗೆ ಸಮಯ ಕಳೆಯುವಾಗ ಸಿಗುವ ನಗುವನ್ನು ಮತ್ತೆ ಬಾಚಿಕೊಂಡು ಬದುಕಲು ವರ್ಷಗಳೇ ಬೇಕಾಗಬಹುದು ಅನ್ನಿಸಿತು.

ಗಾಯ ಆಗಿ ಉಳಿದವರ ಚೇತರಿಕೆ ಒಂದು ಸವಾಲಾದರೆ, ಅವರ ಕುಟುಂಬದ ಸದಸ್ಯರಿಗೆ ಆಗುವ ಶಾಕ್, ತಾಯಂದಿರನ್ನು ಕಳೆದುಕೊಂಡ ಮಕ್ಕಳಿಗೆ ಹುಟ್ಟುವ ಅಭದ್ರತಾ ಭಾವ, ಹೆಂಡತಿಯನ್ನು ಕಳೆದುಕೊಂಡ ಗಂಡಂದಿರ ಕಣ್ಣ ಮುಂದೆ ನಿಂತಿರುವ ಅರೆಬರೆ ಜೀವನಕ್ಕೆ ಮತ್ತೆ ಶಕ್ತಿ ಹೇಗೆ ತುಂಬಬೇಕು ಎನ್ನುವ ಬೃಹತ್ ಪ್ರಶ್ನೆ. ತನ್ನ ಹೆಂಡತಿ ಇದ್ದರೆ ತಾವು ನಿಭಾಯಿಸಬೇಕಾದ ಕೆಲಸಗಳು, ಜವಾಬ್ದಾರಿಗಳು, ಹೊಣೆಗಳು, ತಮ್ಮದೇ ಆರೋಗ್ಯದ ಕಾಳಜಿ ಎಲ್ಲವನ್ನೂ ನಡೆಸುತ್ತಿದ್ದಳಲ್ಲವೇ? ತನ್ನ ಸಂಬಂಧಿಗಳ, ಅಪ್ಪ ಅಮ್ಮಂದಿರ-ಅತ್ತೆ ಮಾವಂದಿರ ಅವಶ್ಯಕತೆಗಳು ಎಲ್ಲವೂ ಆಟೋ ಪೈಲಟ್ ನಲ್ಲಿ ನಡೆದುಹೋಗುತ್ತಿತ್ತು. ಈಗ ಎಲ್ಲವೂ ಕಳಚಿಬಿದ್ದಿದೆ. ಆಗಾಗ ಆಡುತ್ತಿದ್ದ ಜಗಳ ಕೂಡ ನೆನಪಾಗಿ ಚುಚ್ಚುತ್ತಿದೆ.

ಮಕ್ಕಳಿಗೆ ತಾವು ಅಮ್ಮನ ಮಾತು ಕೇಳದೆ ಇದ್ದ ಎಲ್ಲಾ ಸಂದರ್ಭಗಳೂ ನೆನಪಾಗಿ ಕಣ್ಣು ತುಂಬಿ ಬರುತ್ತವೆ. ಅಮ್ಮ ಇದ್ದಿದ್ದರೆ ಮತ್ತೂ ಹಾಗೇ ಇರುತ್ತಿದ್ದೆವು, ಹಾಗೆ ಇರುವುದು ನಮ್ಮ ಹಕ್ಕೂ ಕೂಡ, ಹಟ ಮಾಡದಿದ್ದರೆ, ಇದ್ದಕ್ಕಿದ್ದ ಹಾಗೆ ಮಾತು ಕೇಳಲು ಶುರು ಮಾಡಿ ಬಿಟ್ಟರೆ ನಾವು ಮಕ್ಕಳು ಅಂತ ಅವರಿಗೆ ಅನ್ನಿಸಲಿಕ್ಕೆ ಸಾಧ್ಯವೇ ಇಲ್ಲ ಅಂತ ಯಾವಾಗಲೋ ಮಾಡಿದ ತಮಾಷೆ ಕೂಡ ಎದೆಯಲ್ಲಿ ಗಿಲ್ಟ್ ತುಂಬಿಸುತ್ತಿದೆ. ಇನ್ನು ತೀರಿ ಹೋದವರ ವಯಸ್ಸಾದ ಅಪ್ಪ ಅಮ್ಮಂದಿರ ದುಃಖವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವುದು ಕೂಡ ಸಾಗರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಯತ್ನಿಸಿದ ಹಾಗೆ. ಮಗಳ/ಸೊಸೆಯ-ಮೊಮ್ಮಗಳ ಜಾಗದಲ್ಲಿ ಇರುವುದು ಬರೀ ದೊಡ್ಡ ಶೂನ್ಯ. ಅದರಲ್ಲಿ ನೋವು, ಕಣ್ಣೀರು, ಕತ್ತಲೆ ಮತ್ತೆ ಪ್ರಶ್ನೆಗಳೇ ತುಂಬಿವೆ. ಇವ್ಯಾವಕ್ಕೂ ಸಮಯ ಉತ್ತರ ನೀಡುವುದಿಲ್ಲ.

ಇದೆಲ್ಲಾ ಉಂಟು ಮಾಡುತ್ತಿರುವ ಸಂಕಟ ಒಂದು ಕಡೆಯಾದರೆ ತೀರಿ ಹೋದ ಹೆಣ್ಣು ಮಕ್ಕಳ ಬಗ್ಗೆ ಏಳುತ್ತಿರುವ ಊಹಾಪೋಹದ ಕಲ್ಪನೆಗಳು ಮನಸ್ಸನ್ನು ಒಡೆದು ಚೂರು ಮಾಡುತ್ತಿವೆ.

ಪ್ರಶ್ನೆ: ‘ಅವರು ಗೋವಾಗೆ ಯಾಕೆ ಹೋಗ್ಬೇಕಿತ್ತು?’ (ಈ ಪ್ರಶ್ನೆಗೆ ಇರುವ ಆಯಾಮಗಳನ್ನು ಯಾರೂ ವಿವರಿಸಬೇಕಿಲ್ಲ)

ಉತ್ತರ: ಯಾಕೆ ಅನ್ನುವ ಪ್ರಶ್ನೆಯೇ ಅಸಂಬದ್ಧ. ಜೀವನ ಇಡೀ ಮಕ್ಕಳು ಸಂಸಾರ ಅಂತ ನಡೆಸಿದವರಿಗೆ ತಮ್ಮ ಇಷ್ಟದ ಹಾಗೆ ವರ್ಷದ ನಾಲ್ಕು ದಿನ ಕೂಡ ಕಳೆಯಲು ಸಾಧ್ಯವಿಲ್ಲ ಅನ್ನುವುದಾದರೆ ನಾವೆಂಥಾ ಜನ? ಅವರು ಯಾಕೆ ಹೋದರು ಅನ್ನುವುದು ಪ್ರಶ್ನೆ ಅಲ್ಲ. ಹೆಣ್ಣು ಮಕ್ಕಳು ಅನ್ನುವುದಕ್ಕೆ ಮಾತ್ರ ಇಲ್ಲಿ ಆಕ್ಷೇಪ ಇರುವಂತೆ ಕಾಣುತ್ತದೆ.

ಪ್ಲೇನ್ ಕ್ರಾಶ್ ಆಗಿ ನೂರಾರು ಜನ ಸಾಯುತ್ತಾರೆ. ಹಾಗಂತ ನಮ್ಮ ಊರಿನ ಗಂಡಸರು ಥಾಯ್ ಲ್ಯಾಂಡ್ ಟ್ರಿಪ್ ಹೋಗುವುದನ್ನ ಬಿಟ್ಟಿದ್ದಾರಾ? ಹಾಗೆ ನೋಡಿದರೆ ರಸ್ತೆ ಅಪಘಾತಗಳಲ್ಲಿ ಎಷ್ಟು ಜನ ಗಂಡಸರು ಸಾಯುತ್ತಾರೆ, ಆದರೆ ಅಂಥಾ ಘಟನೆ ಎಂದೂ ಅವರ ಜೀವನದ ಬಗೆಗಿನ ಪ್ರಶ್ನೆ ಆಗುವುದಾಗಲೀ ಅಥವಾ ಅದರಿಂದ ಇನ್ನೊಂದು ಗಂಡಸಿನ ಸ್ವಾತಂತ್ರ್ಯ ಹರಣ ಆಗುವ ಸಾಧ್ಯತೆ ಆಗಲೀ ಇರುವುದಿಲ್ಲ. ಆದರೆ ಅತ್ಯಂತ ಜವಾಬ್ದಾರಿಯ ಅಮ್ಮಂದಿರ ಬಗ್ಗೆ, ಯಾವುದೇ ಹೆಣ್ಣು ಮಗುವಿನ ಬಗ್ಗೆ ಮಾತಾಡುವುದು ಗಲೀಜು ಮನೋಭಾವ ಅಂತ ನಮ್ಮ ಕಲಿತ ಜನಕ್ಕೆ ತುರ್ತಾಗಿ ಅನ್ನಿಸಬೇಕಿದೆ. ನಾವು ಹೀಗೆ ಮಾತಾಡಿದರೆ ನಮ್ಮ ಸಣ್ಣ ಮನಸ್ಸಿನ ದೊಡ್ಡ ಕೊರತೆಗಳೇ ಕಾಣಿಸುತ್ತವೆ ಅಂತ ಗೊತ್ತಾಗಬೇಕು.

ಪ್ರಶ್ನೆ: ‘ಅವರು ಸಂಕ್ರಾಂತಿ ಮಾರನೇ ದಿನವೇ ಯಾಕೆ ಹೋಗ್ಬೇಕಿತ್ತು?’

ಉತ್ತರ: ಯಾಕೆ ಅಂದರೆ ಆ ದಿನ ಅವರಿಗೆ ಪ್ಲಾನ್ ಮಾಡಿಕೊಳ್ಳಲು ಅನುಕೂಲವಾಗಿತ್ತು. ಅವತ್ತು ಸಾವಿರಾರು ಜನ ಲಕ್ಷಾಂತರ ಜನ ಭೂಮಿಯ ಎಷ್ಟೆಲ್ಲಾ ರಸ್ತೆಗಳ ಮೇಲೆ ಓಡಾಡಿದಾರೆ. ಬಹುತೇಕ ಎಲ್ಲರೂ ತಂತಮ್ಮ ಮನೆ/ಗುರಿ ಸೇರಿದರು. ನಮ್ಮ ಹೆಣ್ಣು ಮಕ್ಕಳಿದ್ದ ಬಸ್ ಅಪಘಾತ ಆಗಲಿಕ್ಕೆ ಸಾವಿರಾರು ಕಾರಣ ಇರಬೇಕು. ರಸ್ತೆ ಸುರಕ್ಷತಾ ಕ್ರಮ ಅಥವಾ ಚಾಲಕನ ನಿದ್ದೆಯ ಕೊರತೆಯಿಂದಾಗಿ ಕಣ್ಣಿಗೆ ಕಣ್ಣು ಹತ್ತಿರಬಹುದು, ಅಥವಾ ಟಿಪ್ಪರ್ ಚಾಲಕನಿಗೆ ಬಸ್ಸಿನ ಹಾರ್ನೇ ಕೇಳದೆ ಹೋಗಿದ್ದು – ಏನಾದರೂ ಇದ್ದೀತು. ಇದನ್ನೊಂದು ‘ಬೇಕಂತಲೇ ಮಾಡಿದ ಉದ್ಧಟತನ’ ಅನ್ನುವ ಹಾಗೆ ಮಾತನಾಡಬಾರದು.

ನಾವು ಭಾರತೀಯರು ತುಂಬಾ ಫ್ಲೆಕ್ಸಿಬಲ್ ಜನ. ಅನುಕೂಲ ಇದ್ದಾಗ ಪಂಚಾಗವನ್ನೂ/ಮುಹೂರ್ತವನ್ನೂ ತುರ್ತು ಇದ್ದಾಗ ವಿಜ್ಞಾನವನ್ನೂ/ತರ್ಕವನ್ನೂ ನಂಬುವಂಥವರು. ಎರಡೂ ತಪ್ಪಲ್ಲ. ಆದರೆ ಏನೋ ಒಂದು ಘಟಿಸಿದಾಗ ಮಾತ್ರ ಅದನ್ನೊಂದು ‘ನಿಯಮ’ ಅಥವಾ ‘ನೀತಿ ಪಾಠ’ ಎನ್ನುವಂತೆ ಮಾತನಾಡುವುದು ಸೂಕ್ತವಲ್ಲ.

ಹೊರಟವರು ಹೋದರು. ಅವರ ಮನೆಯವರ ನೋವು ನಿರಂತರ. ಹೋದವರಿಗೂ ಹೋಗಬೇಕೆಂಬ ಗುರಿ ಇರಲಿಲ್ಲ. ಅತ್ಯಂತ ದುರಂತದ ಸಾವು ಇವು. ಎಲ್ಲರೂ ಸಮುದ್ರದ ನೊರೆಯಲ್ಲಿ ಕಾಲು ಇಳಿಬಿಟ್ಟುಕೊಂಡು ಖುಷಿಯಾಗಿ ‘ನಾಳೆ ತಿಂಡಿ ಏನಮ್ಮ’ ಎನ್ನುವ ಪ್ರಶ್ನೆಯನ್ನು ಸ್ವಲ್ಪ ದಿನವಾದರೂ ಎದುರಿಸದೆ, ಬೇಕಾದದ್ದು ಆರ್ಡರ್ ಮಾಡಿ ಸೂರ್ಯಾಸ್ತ/ಸೂರ್ಯೋದಯ ನೋಡುತ್ತಾ ಸೆಲ್ಫಿಗಳನ್ನು ತೆಗೆದುಕೊಂಡು ತಂದು ಮನೆಯಲ್ಲಿ ಎಲ್ಲರಿಗೂ ತೋರಿಸಿ…ಒಳಗೊಳಗೇ ಪುಳಕಗೊಳ್ಳುತ್ತಾ ಮತ್ತೊಂದು ಟ್ರಿಪ್ ಕನಸು ಕಾಣುತ್ತಾ ಇರುತ್ತಿದ್ದರೇನೋ.

ಹೋದ ಹೆಣ್ಣುಮಕ್ಕಳ ಬಗ್ಗೆ ಇಲ್ಲಸಲ್ಲದ ಮಾತು, ಇರುವ ಹೆಣ್ಣು ಮಕ್ಕಳ ಸಂತೋಷ ಕಸಿಯುವಷ್ಟು ಕೆಟ್ಟ ಉದಾಹರಣೆಗಳನ್ನು ಕೊಡುತ್ತಾ ಮತ್ತೆ ಅಂಧಕಾರದತ್ತ, ಸಂವೇದನಾ ರಹಿತ ನಡವಳಿಕೆಯತ್ತ ಹೋಗಬಾರದು. ದುಃಖದಲ್ಲಿ ಮುಳುಗಿರುವ ಮನೆಯವರಿಗೆ ಇನ್ನು ಬೇಕಾದಷ್ಟು ಸಲಹೆಗಳು, ಮನೆಯ ದಿಕ್ಕಿನ ಬಗ್ಗೆ, ಇನ್ಯಾವುದೋ ದುಷ್ಟ ಶಕ್ತಿಯ ಬಗ್ಗೆ ಧಾರಾಳವಾಗಿ ಹರಿದು ಬರಬಹುದು.

ಹದಿಮೂರು ವರ್ಷಗಳ ಹಿಂದೆ ನನ್ನ ಅಕ್ಕ ತನ್ನ ಎಳೆಯ ಮಗಳನ್ನು ಬಿಟ್ಟು ಇದ್ದಕ್ಕಿದ್ದ ಹಾಗೆ ಕ್ಯಾನ್ಸರ್ ರೋಗಕ್ಕೆ ಬಲಿಯಾದಳು. ಆಗ ಯಾರೊ ಅಪ್ಪಾಜಿಯ (ನನ್ನ ಅಪ್ಪ ಧರಾಮ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ ಜಿ ನಾಗರಾಜ್/ ಬಿಜಿಎನ್) ಹಿತೈಷಿಗಳು ಮನೆಯ ದಿಕ್ಕಿನ ಬಗ್ಗೆ ಹೇಳಿ ಇದನ್ನ ಬದಲಾಯಿಸಿ ಸರ್ ಅಂತ ಸಲಹೆ ಕೊಟ್ಟರು.

ಮಗಳನ್ನು ಕಳೆದುಕೊಂಡ ಅಂಥಾ ದುರ್ಭರ ದಿನಗಳಲ್ಲೂ ಅಪ್ಪಾಜಿ ಮತ್ತು ಅಮ್ಮನ ಮಾತು, ನಂಬಿಕೆಗಳು ಶಿಫ಼್ಟ್ ಆಗಿರಲಿಲ್ಲ. ‘ನೀ ಹೇಳತೀ ಅಂತ ಕೇಳತಿನಪ್ಪ. ತಪ್ಪೇನಿಲ್ಲ. ಆದರೆ ನನಗ ಏನನಸತತಿ ಗೊತ್ತಾ? ಈವತ್ತು ಅಕಿ ಇಲ್ಲ ಅಂತ ದಿಕ್ಕು ದೆಸೆ ಅಂತಿವಿ. ಇಷ್ಟು ವರ್ಷ ಇದೇ ಮನೆಯಾಗೇ ಬಾಳಿದ್ಲಲ್ಲಪ? ಆವಾಗ ಎಲ್ಲಾದೂ ಹಿಂಗೇ ಇತ್ತಲ? ಹೋಗಲಿ ಬಿಡು ಅಕಿ ಇಷ್ಟೇ ದಿವ್ಸ ಪಡಕಂಬಂದಿದ್ದು ಅಂತ ಸುಮ್ಮನಾಗನ’ ಅಂದರು. ಈ ಸಂದರ್ಭದಲ್ಲಿ ಅವರಿಬ್ಬರ ಒಂದು ಮನೋಬಲ ಒಬ್ಬಂಟಿ ಮಗಳಾಗಿ ಉಳಿದಿದ್ದ ನನಗೆ ಎಂಥಾ ದಿಕ್ಕು ತೋರಿತು ಎನ್ನುವುದನ್ನು ಮಾತಿನಲ್ಲಿ ಹೇಳಲಾರೆ.

ನಮ್ಮ ಸುತ್ತಲಿನ ಮನಸ್ಸುಗಳನ್ನು ಪಕ್ವ ಮಾಡುವತ್ತ ನಮ್ಮ ಪ್ರಯತ್ನ ಇರಬೇಕೇ ವಿನಃ ಒಂದು ದುರ್ಘಟನೆಗೆ ಕಾದು ಕೂತವರ ಹಾಗೆ ಎಲ್ಲವನ್ನೂ ನಮ್ಮ ಮಾತಿನಿಂದ ಧ್ವಂಸ ಮಾಡುವುದು ಬೇಡ. ಇದು ಕಳಕಳಿಯ ಮನವಿ ಮತ್ತು ಹಿಂದಿರುಗದಿರುವಷ್ಟು ನಮ್ಮಿಂದ ದೂರ ಹೋದವರಿಗೆ, ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಾವು ಸಲ್ಲಿಸಬಹುದಾದ ಗೌರವ.

ಸರ್ಕಾರ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಕೈ ತೊಳೆದುಕೊಂಡು ಬಿಟ್ಟಿತು. ರಸ್ತೆ ಅಪಘಾತಕ್ಕೆ ಪರಿಹಾರ ಘೋಷಣೆ ಕೂಡ ಮಾಡಲಿಲ್ಲ. ಅಮ್ಮಂದಿರು-ಮಕ್ಕಳ ಸಾವಿಗೆ ಜೊತೆಯಾಗಿ ಡ್ರೈವರ್ ಮತ್ತು ಕ್ಲೀನರ್ ಕೂಡ ಹೋಗಿಬಿಟ್ಟರು. ಅವರ ಸಂಸಾರಗಳು ಅತಂತ್ರವಾಗಿವೆ. ಅದರ ಬಗ್ಗೆ ಕೂಡ ಸರ್ಕಾರ ಗಮನ ಹರಿಸುವಂತೆ ಆಗಬೇಕಿದೆ.

‍ಲೇಖಕರು Avadhi

January 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶೋಭ H S

    ಹೆಣ್ಣು ಮಕ್ಕಳು ಸ್ವತಂತ್ರವಾಗಿ ಎಲ್ಲಿಗೂ ಹೋಗಬಾರದು ಎನ್ನುವ ಕಲ್ಪನೆಯ ಹಿಂದೆ ಪುರುಷ ಪ್ರಾಧಾನ್ಯತೆ ಮಾತ್ರ ಕಾಣತ್ತದೆ.ಆಕೆಗೂ ಒಂದು ಮನಸ್ಸಿದೆ ಎನ್ನುವುದು ಯಾರಿಗೂ ಕಾಣುವುದಿಲ್ಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: