ಪ್ರೀತಿಯ ಕಾಳನು ಹಂಚಿದರು..

42

ಪ್ರೀತಿಯ ಕಾಳನು ಹಂಚುವ

ಅಣ್ಣನ ಮಕ್ಕಳ ನಾಟಕಗಳು

ಅಣ್ಣನ ಬಹುತೇಕ ಮಕ್ಕಳ ನಾಟಕಗಳು-ಸುಮಾರು ೨೫ ರಷ್ಟು ಮಕ್ಕಳ ನಾಟಕಗಳನ್ನು- ಅವನು ಮಾಸ್ತರನಿರುವಾಗಲೇ ಬರೆದು ಆಡಿಸಿದ್ದು.

ಆತ ಮಾಸ್ತರನಾಗಿರುವ ಕಾಲಕ್ಕೆ ಒಳ್ಳೆಯ ಮಕ್ಕಳ ನಾಟಕಗಳ ಬರವಣಿಗೆ ಕಡಿಮೆ ಇತ್ತು. ಸಾಮಾನ್ಯವಾಗಿ ದೊಡ್ಡವರಿಗಾಗಿ ಬರೆದ ನಾಟಕವನ್ನೇ ಸಣ್ಣ ಮಕ್ಕಳಿಗೂ ಆಡಿಸುತ್ತಿದ್ದರು. ಮಕ್ಕಳು ತಮ್ಮ ಅನುಭವದಿಂದ ತೀರಾ ಹೊರತಾದ ನಾಟಕಗಳನ್ನು ಮಾಸ್ತರರು ಹೇಳಿಕೊಟ್ಟಂತೆ ಅಭಿನಯಿಸುತ್ತಿದ್ದರು. ಗುಂಡಣ್ಣನ ನಾಟಕವನ್ನು ದೊಡ್ಡವರು ಆಡಿದರೆ ದೊಡ್ಡವರ ನಾಟಕ, ವಿದ್ಯಾರ್ಥಿಗಳು ಆಡಿದರೆ ಅದು ಮಕ್ಕಳ ನಾಟಕ ಎನ್ನುವಂತಿತ್ತು.

ಮಕ್ಕಳ ನಾಟಕಗಳ ಆಶಯವಂತೂ ಕೇಳಬಾರದು. ಸನಾತನ ಮೌಲ್ಯಗಳನ್ನೇ ಅದರಲ್ಲಿ ಸಾರಾಸಗಟು ತುಂಬುತ್ತಿದ್ದರು. ಹಲವರ ದೃಷ್ಟಿಯಿಂದ ಬಾಲಕರೆಂದರೆ ಕುಬ್ಜ ಮನುಷ್ಯರು ಅಷ್ಟೇ ಎನ್ನುವ ಕಾಲದಲ್ಲಿ ಅಣ್ಣ ಮಕ್ಕಳ ನಾಟಕ ರಚನೆಗೆ ತೊಡಗಿದ್ದು, ಹಲವು ಬಾರಿ ಪ್ರಾಣಿ ಪಕ್ಷಿಗಳ ಕತೆಯನ್ನೇ ಎತ್ತಿಕೊಂಡು ಈ ಕಾಲಕ್ಕೆ ಅಗತ್ಯವಾದ ಮೌಲ್ಯಗಳನ್ನು ಅದರಲ್ಲಿ ಸೇರಿಸುತ್ತಿದ್ದ. ಸಾಂಪ್ರದಾಯಿಕವಾದ ರಚನೆಯನ್ನೇ ಬದಲಿಸಿ ಮಕ್ಕಳ ನಾಟಕದಲ್ಲಿ ಸಂವಿಧಾನಾತ್ಮಕ ಆಶಯ ಹೇಳುವ ಹೊಸ ಮಾರ್ಗವನ್ನೇ ಹುಟ್ಟು ಹಾಕಿದ.

“ಮಕ್ಕಳ ರಂಗ ಭೂಮಿಯ ಚಹರೆ ಇನ್ನೂ ಸ್ಪಷ್ಟವಾಗುತ್ತಿದ್ದ ಕಾಲದಲ್ಲಿಯೇ ಅವರು ಇಂದು ನಾವು ಯಾವುದನ್ನು ಮಕ್ಕಳ ರಂಗಭೂಮಿಯ ಗಂಭೀರ ಪ್ರಯೋಗ ಅನ್ನುತ್ತಿದ್ದೇವೆಯೋ ಅಂತಹ ಮಾದರಿಯನ್ನು ರಚಿಸಿದರು, ಪ್ರಯೋಗಿಸಿದರು. ಆರ್. ವಿ. ಮಕ್ಕಳ ನಾಟಕಗಳನ್ನು ಚೆಂದಕ್ಕಾಗಿ ಬರೆದವರಲ್ಲ; ನಿರ್ದಿಷ್ಟ ಆಶಯಗಳು ಅದರ ಬೆನ್ನ ಹಿಂದೆಯೇ ಇರುತ್ತದೆ.” ಎಂದು ಅಣ್ಣನ ಹಲವು ನಾಟಕಗಳನ್ನು ರಂಗಕ್ಕೆ ತಂದ ಶ್ರೀಪಾದ ಭಟ್ಟ ಅವರ ಮಾತನ್ನು ಇಲ್ಲಿ ಉಲ್ಲೇಖಿಸಬಹುದು.

“ಮಕ್ಕಳ ನಾಟಕ ಚಿಕ್ಕದಾಗಿರಬೇಕು. ಸಂಭಾಷಣೆ ಚುರುಕಾಗಿರಬೇಕು. ನಟನೆಗೆ ಅನುಕೂಲಕರವಾಗಿರಬೇಕು. ಹೆಚ್ಚು ಮಕ್ಕಳು ಭಾಗವಹಿಸುವಂತಿರಬೇಕು. ಈಗ ರಚನೆಯಲ್ಲಿ ಸುಲಭ ತಾಂತ್ರಿಕ ಸೌಲಭ್ಯವಿರಬೇಕು, ಕಥೆ ಇರಬೇಕು, ರಸಭಾವಗಳು ವಯಸ್ಸಿಗೆ ತಕ್ಕದ್ದಿರಬೇಕು. ಕೊನೆಗೆ ನಾಟಕ ಶೈಕ್ಷಣಿಕವು ಇರಬೇಕು ಎಂಬುದು ಮುಖ್ಯ” ಎಂದು ಅಣ್ಣ ‘ಬೆಳಕಿನ ಕಡೆಗೆ’ ನಾಟಕ ಸಂಕಲನದಲ್ಲಿ ಹೇಳಿಕೊಂಡಿದ್ದಾನೆ.

ಮೊದಲ ನಾಟಕದಿಂದ ಪ್ರಾರಂಭ ಆಗಿ ಕೊನೆಯ ನಾಟಕದವರೆಗೂ ಇದೇ ಮಾನದಂಡವನ್ನು ಇಟ್ಟುಕೊಂಡಿದ್ದ ಆತ. ಆತನ ನಾಟಕದ ಮೊದಲ ಓದುಗ ನಾನೇ ಆಗಿದ್ದೆ.

ಆತನ ಮೊದಲ ಮಕ್ಕಳ ನಾಟಕ ಸಂಕಲನ ‘ಅಪ್ಪಿಕೋ ಮತ್ತೆರಡು ನಾಟಕಗಳು’. ಇದು ಬಂಡಾಯ ಪ್ರಕಾಶನ ಪ್ರಾರಂಭದ ವರ್ಷದ್ದು ಅಂದುಕೊಂಡಿದ್ದೇನೆ. ಮೊದಲು ನಾನು ಆತನ ನಾಟಕ ನೋಡಿದ್ದು ಕೆರೆಕೋಣ ಶಾಲೆಯಲ್ಲಿ. ಅದು ‘ಅಪ್ಪಿಕೋ’ ನಾಟಕ. ಉತ್ತರ ಕನ್ನಡದಲ್ಲಿ ನಡೆದ ಅಪ್ಪಿಕೋ ಚಳುವಳಿಯ ಹಿನ್ನೆಲೆಯಲ್ಲಿ ಕಾಡನ್ನು ಉಳಿಸುವ ಸಂದೇಶ ಹೇಳುವಂತಹುದು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ನಾಟಕ ಅದು. ಮಕ್ಕಳೇ ಈ ಚಳುವಳಿಗೆ ಇಳಿಯುವ ವಸ್ತುವುಳ್ಳದ್ದು. ನಂತರ ನರಿಯ ಜಾಣ್ಮೆ, ಉಪ್ಪಿನ ಸತ್ಯಾಗ್ರಹವೆಂಬ ಆಟ… ಇವೆಲ್ಲವನ್ನು ಅಣ್ಣ ಮಾಸ್ತರ ಆಗಿರುವ ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣ, ಸಾಲ್ಕೋಡು, ಮುಡಾರೆ ಮತ್ತು ಚಿಕ್ಕನಕೋಡು ಶಾಲೆಗಳಲ್ಲಿ ಈ ನಾಟಕ ಆಡಿಸಿದ್ದು ನೆನಪಿದೆ.

ಎಲ್ಲೇ ನಾಟಕ ಆದ್ರೂ ಅದಕ್ಕೆ ಬೇಕಾದ ಮುಖವಾಡ, ಡ್ರಾಯಿಂಗ್ ಮಾಡ್ಕೊಡೋರು ಮೊದಮೊದ್ಲು ಎ.ಕೆ. ಶೇಟ್‌ರು. ಆಮೇಲೆ ಅಪ್ಪಚ್ಚಿ (ಬಿ. ವಿ. ಭಂಡಾರಿ) ಮತ್ತು ಅವರ ಮಗ ಹರೀಶ. ನಾಟಕದ ದಿನ ಮೇಕಪ್ ಕೂಡ ಇವರೇ ಮಾಡುತ್ತಿದ್ದರು. ಸಿಂಹ ಮತ್ತು ಮೊಲದ ನಾಟಕದಲ್ಲಿ ಸಿಂಹನ ಪಾತ್ರದ ಮೇಕಪ್ಪಿಗೆ ಸಿಂಹವೇಷದಾರಿ ಸಾಲ್ಕೋಡು ಹನುಮಂತನೇ ಬಂದಿದ್ದ. ಹರೀಶನ ಚಂಡೆ. ನಮಗಂತೂ ಕೆರೆಕೋಣ, ಮುಡಾಲೆ ಶಾಲೆ ಗ್ಯಾದರಿಂಗ್ ಅಂದ್ರೆ ಖುಷಿಯೋ ಖುಷಿ. ಅದರಲ್ಲಿ ಅಣ್ಣ ಬರೆದ ನಾಟಕ ಇದ್ದೇ ಇರ‍್ತಿತ್ತು. ಈ ದಿನಕ್ಕಾಗಿ ಮಕ್ಕಳು ಕಾಯ್ತಿದ್ದರು.

ನರಿಯ ಜಾಣ್ಮೆ, ಬೆಕ್ಕು ಮತ್ತು ರೊಟ್ಟಿ ನಾಟಕವನ್ನು ಮುಡಾರೆ ಶಾಲೆಯಲ್ಲಿ ಮೊದಲು ಆಡಿಸಿದ್ದು. ಅದಕ್ಕೆ ಡ್ರಾಯಿಂಗ್ ಶೀಟಿನಲ್ಲಿ ಮುಖವಾಡ ಮಾಡಿಕೊಟ್ಟಿದ್ದು ಹರೀಶ. ಬಾಲ್ಯದಿಂದ ಆತ ನನ್ನ ಪಕ್ಕಾ ದೋಸ್ತ ಆಗಿದ್ದ. ಆತ ಈಗ ಹಿರೇಬೈಲಿನಲ್ಲಿ ಜಮೀನು ಮಾಡಿಕೊಂಡು ಇರುತ್ತಾನೆ. ಸ್ವಲ್ಪ ಆಲಸಿ ಆಗಿರುವುದರಿಂದ ಮತ್ತು ಕಡಿಮೆ ಕಲಿತಿದ್ದೇನೆ ಅನ್ನುವ ಕೀಳರಿಮೆ (ಹಾಗೆ ಕೀಳರಿಮೆ ಪಡುವ ಯಾವ ಲಕ್ಷಣವೂ ಅವನಲ್ಲಿ ಇರಲಿಲ್ಲ. ಈಗಲೂ ಒಳ್ಳೆಯ ಕಲಾವಿದ ಆತ.) ಇದರಿಂದಾಗಿ ಅವನಿಗೆ ಬರುವ ಕಲೆಯನ್ನು ಆತ ಮುಂದುವರಿಸಲಿಲ್ಲ. ಅಪ್ಪಚ್ಚಿ ಹಲವು ನಾಟಕಗಳಿಗೆ ಮುಖವಾಡ ತಯಾರಿಕೆಗೆ ಅವನಿಗೆ ಸಹಾಯ ಮಾಡುತ್ತಿದ್ದರು.

‘ಉಪ್ಪಿನ ಸತ್ಯಾಗ್ರಹ’ ಎಂಬ ಆಟ ಮತ್ತು ‘ಅಪ್ಪಿಕೋ’ ನಾಟಕ ಮಾಡಿಸಿದ್ದು ಕೆರೆಕೋಣ ಶಾಲೆಯಲ್ಲಿ. ಮೆರವಣಿಗೆ ಹೋಗಲು ಬೇಕು ಅಂತ ಸ್ಟೇಜನ್ನೇ ಅಣ್ಣ ರಿಪೇರಿ ಮಾಡಿಸಿದ್ದ. ದೊಡ್ಡ ಸ್ಟೇಜಿನ ಎದುರು ಅದಕ್ಕೆ ಹೊಂದಿಕೊಂಡು ೧ ಫೀಟ್ ಎತ್ತರಕ್ಕೆ ಕಲ್ಲು ಕಟ್ಟಿ, ಮಣ್ಣು ತುಂಬಲಾಗಿತ್ತು. ಅಂದು ಎರಡು ಸ್ಟೆಪ್ಪಿನ ಸ್ಟೇಜ್. ಹಾಗೆಯೇ ಪೋಲೀಸ್ ಪಾರ್ಟಿಗೆ ಮಾಡಿಸಿದ ಡ್ರೆಸ್ ಒಂದೆರಡು ಈಗಲೂ ಇದೆ. ಬ್ರಿಟೀಶರ ಕಾಲದ ಪೋಲೀಸ್ ಡ್ರೆಸ್ ತರಹದ್ದು; ಆತ ಖಾಕಿ ಬಟ್ಟೆಯಿಂದ ಮಾಡಿಸಿದ್ದ. ಆದರೆ ಆತ ನಾಟಕಕ್ಕೆ ಬರೆದ ಹಾಡು ಮಾತ್ರ ಸರಿಯಾದ ಟ್ಯೂನ್ ಹಾಕುವವರು ಇರಲಿಲ್ಲ. ಊರ ಸುತ್ತಮುತ್ತಲೂ ಅಲ್ಪ ಸ್ವಲ್ಪ ಹಾಡುವವರನ್ನೇ ಬಳಸಿಕೊಳ್ಳುತ್ತಿದ್ದ. ನಾಟಕ ರಚನೆಯೂ ಅವನದೆ. ನಿರ್ದೇಶನವೂ ಅವನದೆ. ಆದರೆ ಹಾಡುವವರು ಮಾತ್ರ ಬೇರೆ. ಯಾಕೆಂದರೆ ಅವನಿಗೆ ಹಾಡಲು ಬರುತ್ತಿರಲಿಲ್ಲ. ನಂತರ ಶ್ರೀಪಾದ ಭಟ್‌ನ ಪ್ರವೇಶದ ನಂತರ ಹಾಡುಗಳೆಲ್ಲ ರಂಗು ಪಡೆದವು.

ಪ್ರಾರಂಭದಲ್ಲಿ ಅಣ್ಣನ ನಾಟಕಗಳು ಅವನ ಶಾಲೆಗೆ ಮಾತ್ರ ಸೀಮಿತ ಆಗಿತ್ತು. ಅವನ ಶಾಲೆಯಲ್ಲಿ ಈ ನಾಟಕ ನೋಡಿದ ಕೆಲವು ಶಿಕ್ಷಕರು ಅವರ ಶಾಲೆಯಲ್ಲಿಯೂ ಈ ನಾಟಕವನ್ನು ಅಪರೂಪಕ್ಕೆ ಮಾಡಿಸಿದ್ದಿದೆ. ಆದರೆ ಈ ನಾಟಕಕ್ಕೆ ಒಂದು ಮಾನ್ಯತೆ ಬಂದಿದ್ದು ರಂಗ ಸಂಗ ಶಿರಸಿ ಇವರು ಅಣ್ಣನ ನಾಟಕ ಎತ್ತಿಕೊಂಡು ಪ್ರದರ್ಶಿಸಲು ಪ್ರಾರಂಭಿಸಿದ ಮೇಲೆ.

‘ಬೆಳಕಿನ ಕಡೆಗೆ’ ಪುಸ್ತಕದಲ್ಲಿ ಅಣ್ಣ “ಇಲ್ಲಿಯ ಹೆಚ್ಚಿನ ನಾಟಕಗಳೆಲ್ಲ ನಾನು ಮಾಸ್ತರಿಕೆಯಲ್ಲಿರುವಾಗಲೇ ಬರೆದು ವಿದ್ಯಾರ್ಥಿಗಳಿಂದ ಆಡಿಸಿದ್ದು. ಇನ್ನು ಕೆಲವು ಸಿರ್ಸಿಯ ರಂಗಸಂಗದ ಕಿರಣ ಭಟ್ಟ ಮತ್ತು ಅವರ ಸಂಗಡಿಗರಿಗಾಗಿ ಬರೆದದ್ದು. ನನ್ನ ಹೆಚ್ಚಿನ ಈ ಎಲ್ಲಾ ನಾಟಕಗಳನ್ನು ನನಗಿಂತ ಹೆಚ್ಚಾಗಿ ರಂಗ ಸಂಗದವರೇ ನಿರ್ದೇಶಿಸಿ ಆಡಿಸಿದ್ದಾರೆ.” ಎಂದು ನೆನಪಿಸಿದ್ದಾನೆ ಕೂಡ. ಆಗ ಶಿರಸಿಯಲ್ಲಿ “ರಂಗ ಸಂಗ” ಎನ್ನುವ ಹವ್ಯಾಸಿ ನಾಟಕ ತಂಡ ಇತ್ತು. ಮುಖ್ಯವಾಗಿ ಶಾಲೆಯ ವಿದ್ಯಾರ್ಥಿಗಳನ್ನು ಕೇಂದ್ರವನ್ನಾಗಿಸಿಕೊಂಡು ಶಾಲೆ ಶಾಲೆಗೆ ಹೋಗಿ ನಾಟಕ ಆಡುತ್ತಿದ್ದರು. ೧೯೮೭ ರಲ್ಲಿ ‘ನರಿಯ ಜಾಣ್ಮೆ’ ಮತ್ತು ‘ಬೆಕ್ಕು ಮತ್ತು ರೊಟ್ಟಿ’ ನಾಟಕವನ್ನು ಕಿರಣ ನಿರ್ದೇಶಿಸಿದ್ದ. ರಂಗಸಂಗದಲ್ಲಿ ಕಿರಣ, ಚಂದ್ರು ಉಡುಪಿ, ವಿ.ಎಂ.ಹೆಗಡೆ, ಜಿ.ಎಮ್. ಹೆಗಡೆ, ಕುಮುನದನ್, ಸುರೇಶ, ಜಗದೀಶ ಭಂಡಾರಿ… ಹೀಗೆ ಒಂದು ದೊಡ್ಡ ಗುಂಪೇ ಇತ್ತು.

ಮತ್ತೆ ಅಣ್ಣನ ನಾಟಕಕ್ಕೆ ಹೊಸ ರೂಪ ಕೊಟ್ಟಿದ್ದು ಶ್ರೀಪಾದ. ಅತನೂ ರಂಗಸಂಗದ ಜೊತೆಗೇ ಇದ್ದ. ಆಮೇಲೆ ಆತ ಹೊನ್ನಾವರ ತಾಲೂಕಿಗೆ ವರ್ಗವಾಗಿ ಬಂದ ಮೇಲೆ ಕೆಲವು ವರ್ಷ ಅಣ್ಣ ಮಾಸ್ತರನಾಗಿರುವ ಚಿಕ್ಕನಕೋಡು ಶಾಲೆಯಲ್ಲಿಯೇ ಮಾಸ್ತರನಾಗಿ ಇದ್ದ. ಆಗ ಇಬ್ಬರ ದೋಸ್ತಿಗೆ ಹೊಸ ರೂಪ ಬಂತು. ಅಣ್ಣನ ಹಲವು ನಾಟಕವನ್ನು ಆತ ಆಡಿಸಿದ. ಆತ ಆಡಿಸಿದ ಮೊದಲ ನಾಟಕ “ಸತ್ಯಾಗ್ರಹವೆಂಬ ಆಟ” ಎಂದು ಆತ ನೆನಪಿಸಿಕೊಳ್ಳುತ್ತಾನೆ.

ಮೊದಲು ಶಿರಸಿಯಲ್ಲಿ, ನಂತರ ಕುಮಟಾದಲ್ಲಿ ಮಕ್ಕಳ ಶಿಬಿರ ನಡೆಸಲಾಗುತ್ತಿತ್ತು. ಈಗ ಅದು ಸಹಯಾನದಲ್ಲಿ ನಡೆಯುತ್ತಿದೆ. ಇಲ್ಲಿ ಮಕ್ಕಳ ನಾಟಕಗಳನ್ನು ಆಡಿಸುವಾಗ ಹಲವು ಬಾರಿ ಅಣ್ಣನಿಂದ ಬರೆಸಿಕೊಂಡಿದ್ದಿದೆ.

ಒಂದು ಬಾರಿ ‘ಅಣ್ಣನನ್ನೇ’ ಮುಖ್ಯ ಕೇಂದ್ರವನ್ನಾಗಿಸಿಕೊಂಡು (ಆತನ ‘ಬೆಳಕು’ ಮತ್ತು ‘ಬುದ್ದ’ನ) ಶಿಬಿರನ್ನು ಸಂಯೋಜಿಸಿದ್ದರು. ನಂತರ ಚಿಂತನ ಉತ್ತರಕನ್ನಡ ಪ್ರಾರಂಭ ಆಯ್ತು. ಅಣ್ಣನೇ ಅಧ್ಯಕ್ಷನಾಗಿರುವ ಭಾರತ ಜ್ಞಾನ ವಿಜ್ಞಾನ ಸಮಿತಿ (BGVS) ಅಡಿಯಲ್ಲಿ ‘ಚಿಣ್ಣರ ಮೇಳ’ ನಡೆಯಿತು. ಅದರಲ್ಲಿ ನಾಟಕದ ಕಾರ್ನರ್ ಒಂದಿತ್ತು. ಶಿಕ್ಷಣದ ಭಾಗವಾಗಿ ನಾಟಕವನ್ನು ಬಳಸಿಕೊಳ್ಳುವುದು ಹೇಗೆ ಎಂದು ರಾಜ್ಯಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ್ದು ಇಲ್ಲಿಯೇ ಎನ್ನುವ ನೆನಪು ನನ್ನದು. ಅದರಲ್ಲಿ ಅಣ್ಣನ ಹಲವು ನಾಟಕಗಳು ಪ್ರದರ್ಶನಗೊಂಡವು.

೨೦೦೩ ರಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ ಹುಟ್ಟಿಕೊಂಡಿತು. ಅದರಡಿ ಪಾಠ ನಾಟಕ ರೆಪರ್ಟರಿ ಪ್ರಾರಂಭ ಆಯಿತು. ಅಲ್ಲಿಗಾಗಿ ಅಣ್ಣನಿಂದ ‘ಜಾಣ ಕೋಳಿ’ ಸಿದ್ಧವಾಯಿತು. ‘ಬೆಳಕು ಹಂಚುವ ಬಾಲಕ’, ‘ಒಂದೇ ಬಣ್ಣದ ಹಕ್ಕಿಗಳು’, ‘ಪ್ರೀತಿಯ ಕಾಳು’, ‘ಈದ್ಗಾ..’ ಹೀಗೆ ಆತನ ಹಲವು ನಾಟಕಗಳು ‘ಚಿಂತನ ರಂಗ ಅಧ್ಯಯನ ಕೇಂದ್ರ’ದ ರೆಪರ್ಟರಿಯ ಭಾಗವಾಗಿ ಸಿದ್ಧವಾದವು.

ರೆಪರ್ಟರಿಯ ಎಲ್ಲಾ ನಾಟಕವನ್ನು ನಿರ್ದೇಶಿಸಿದ್ದು ಶ್ರೀಪಾದ ಭಟ್ ಮತ್ತು ಕಿರಣ ಭಟ್. ಸಂಗೀತ ನಿರ್ದೇಶನ ಶ್ರೀಪಾದನದು. ಹಲವು ನಾಟಕದ ಕಾಸ್ಟ್ಯೂಮ್ಸ್ ಮತ್ತು ಪ್ರೊಪರ್ಟಿ ರೆಡಿ ಮಾಡಿದ್ದು ದಾಮು, ಚಂದ್ರು; ನಟರಾಗಿ ದಾಮೋದರ ನಾಯ್ಕ, ಶ್ರೀನಿವಾಸ ನಾಯ್ಕ ( ಸೀನ ಎಷ್ಟು ಒಳ್ಳೆಯ ಕೋಳಿ ಪಾರ್ಟಿ ಮಾಡಿದ್ದನೆಂದರೆ ಆತನಿಗೆ ಈಗಲೂ ನಾವು ಕೋಳಿ ಸೀನ ಅಂತಲೇ ಕರೆಯುತ್ತೇವೆ). ಆರ್. ಕೆ ಶಿವಕುಮಾರ, ನಹುಶ, ರಾಧಾ, ಪ್ರಶಾಂತ ಭಂಡಾರಿ, ಸಂತೋಷ ಸಂಕೊಳ್ಳಿ, ವಿದ್ಯಾಧರ ಕಡತೋಕ, ಗೋಪಾಲ ಹಳ್ಳೇರ, ಚಾಂದ್ರಾಣಿ ಮಂಜ, ಐ ಕೆ. ಅನಿಲ, ನೇತ್ರಾವತಿ, ಹಿರಿಯರಾದ ಅನಂತ ನಾಯ್ಕ ಮಾಸ್ತಿ ಗೌಡ…. ಹೀಗೆ ಅದ್ಭುತ ಕಲಾವಿದರ ತಂಡವೇ ಇತ್ತು.

ಅವರಲ್ಲಿ ಬಹುತೇಕರು ಇಂದೂ ರಂಗಭೂಮಿಯ ಜೊತೆಗೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಣ್ಣ ನಾಟಕ ನಾಡಿನಲ್ಲಿ ಪ್ರಾಮುಖ್ಯತೆ ಪಡೆದಿರುವುದರ ಹಿಂದೆ ಇವರೆಲ್ಲರ ಪರಿಶ್ರಮ ಇದ್ದೇ ಇದೆ. ಶಿವಕುಮಾರ, ಆರ್. ಕೆ. ಸಂತೋಷ ಸಂಕೊಳ್ಳಿ, ಸೀನ, ನಾರಾಯಣ ಭಾಗ್ವತ್ ಮುಂತಾದವರು ಕೂಡ ಅಣ್ಣನ ನಾಟಕ ನಿರ್ದೇಶಿಸಿದ್ದಾರೆ. ರಾಜ್ಯ ಮಟ್ಟದ ಬಹುಮಾನವನ್ನು ಪಡೆದಿದ್ದಾರೆ.

ಶ್ರೀಪಾದ ನಮ್ಮ ತಂಡಕ್ಕಲ್ಲದೆ ರಾಜ್ಯ ವಿವಿಧ ಪ್ರದೇಶದಲ್ಲಿ ಶಿಬಿರ, ನಾಟಕ ಮಾಡಿಸಲು ಪ್ರಾರಂಭ ಮಾಡಿದ ಮೇಲೆ ಅವನೊಂದಿಗೆ ಅಣ್ಣನ ನಾಟಕವೂ ಅವನ ಸಂಗಾತಿಯಾಗಿ ರಾಜ್ಯ ತಿರುಗಿತು. ‘ಪ್ರೀತಿಯ ಕಾಳು’ ನಾಟಕವಂತೂ ಅವನ ಕೈಯಿಂದ ರಾಜ್ಯದಲ್ಲಿ ಹೆಸರು ಮಾಡಿತು. ಹೊಸಪೇಟೆಯ ಭಾವೈಕ್ಯತಾ ವೇದಿಕೆಯ ಪಿ. ಅಬ್ದುಲ್ಲಾ ಆತನ ಹಲವು ನಾಟಕವನ್ನು ಆಡಿಸಿದ್ದಾರೆ. ಶೇಷಗಿರಿ ಕಲಾ ತಂಡ, ಹೂವಿನ ಹಡಗಲಿ, ಕುಂದಾಪುರ ಹೀಗೆ ರಾಜ್ಯದಾದ್ಯಂತ ಕನಿಷ್ಟ ಸಾವಿರಾರು ಪ್ರಯೋಗಗಳು ನಡೆದಿವೆ.

ಕಳೆದ ೭ ವರ್ಷಗಳಿಂದ ಕುಪ್ಪಳ್ಳಿಯಲ್ಲಿ ‘ಮಳೆ ಬಿಲ್ಲು’ ಮಕ್ಕಳ ಶಿಬಿರ ನಡೆಸುತ್ತಿರುವ ಸ್ಪಂದನ ಸಾಗರದ ಎಂ.ವಿ. ಪ್ರತಿಭಾ ಕಳೆದ ಎರಡು ವರ್ಷಗಳಿಂದ (ಹಿಂದೆ ಕುವೆಂಪು ಅವರ ನಾಟಕವನ್ನು ಮಾತ್ರ ಶಿಬಿರದಲ್ಲಿ ಅಡಿಸುತ್ತಿದ್ದರು.) ಅಣ್ಣ ನಾಟಕವನ್ನು ಮಕ್ಕಳಿಗೆ ಆಡಿಸುತ್ತಿದ್ದಾರೆ. ಕಳೆದ ಬಾರಿ ಪ್ರೀತಿಯ ಕಾಳು ನಾಟಕ ಮತ್ತು ಈ ವರ್ಷ ‘ನಾನು ಗಾಂಧಿ ಆಗ್ತೇನೆ’ ನಾಟಕ ಆಡಿಸುತ್ತಿರುವುದು ಸಂತೋಷದ ಸಂಗತಿ.

‘ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ’ ಪುಸ್ತಕ ಪ್ರಕಟ ಆಗಿದ್ದು ಬಂಡಾಯ ಪ್ರಕಾಶನದಿಂದ. ೧೯೯೬ ರಲ್ಲಿ ಅಣ್ಣನ ಆತ್ಮೀಯ ಗೆಳೆಯರಾದ ವಿಷ್ಣು ನಾಯ್ಕ ಅವರು ೧೩ ನಾಟಕಗಳನ್ನು ಉಳ್ಳ ‘ಬೆಳಕಿನ ಕಡೆಗೆ’ ನಾಟಕ ಪುಸ್ತಕ ಪ್ರಕಟಿಸಿದರು. ಅನಂತರ ಬಿಡಿ ಬಿಡಿಯಾಗಿ ಹಲವು ಪುಸ್ತಕವನ್ನು ಬಂಡಾಯ ಪ್ರಕಾಶನದಡಿ ಮುದ್ರಿಸಲಾಯಿತು.

ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವಾಗ ಅಣ್ಣನ ಮಕ್ಕಳ ನಾಟಕಗಳನ್ನು ಪ್ರಕಟಿಸುತ್ತೇನೆ, ಸಂಗ್ರಹಿಸಿ ಕೊಡಿ ಎಂದು ಅವರೇ ಫೋನಾಯಿಸಿ ಹೇಳಿದಾಗ ಖುಷಿ ಆಯ್ತು. ಆತನ ಸುಮಾರು ೧೮ ಮಕ್ಕಳ ನಾಟಕಗಳನ್ನು ಸಂಗ್ರಹಿಸಿ ಕೊಟ್ಟೆ. ‘ಪ್ರೀತಿಯ ಕಾಳು’ ಎನ್ನುವ ಹೆಸರಿನಲ್ಲಿ ಅದು ಪ್ರಕಟವಾಗಿ ರಾಜ್ಯದಾದ್ಯಂತ ಸಂಚರಿಸಿತು. ಹಲವು ನಾಟಕಗಳಿಗೆ ಮುಖ ಪುಟ, ಒಳಚಿತ್ರ ಮಾಡಿಕೊಟ್ಟವರು ಸತೀಶ ಯಲ್ಲಾಪುರ. ಒಂದು ಪುಸ್ತಕಕ್ಕೆ ಮೋಹನ ಸೋನಾ ಅವರು.

ಅಣ್ಣ ಕನ್ನಡ ಶಾಲೆಯ ಮಾಸ್ತರ ಆಗಿರದೆ ಬೇರೆ ದೊಡ್ಡ ಹುದ್ದೆಯಲ್ಲಿದ್ದಿದ್ದರೆ, ಗ್ರಾಮೀಣ ಭಾಗದಲ್ಲಲ್ಲದೆ ಬೆಂಗಳೂರು, ಮೈಸೂರು ಕೇಂದ್ರದಲ್ಲಿ ವಾಸಿಸಿದ್ದರೆ ಬಹುಶಃ ಮಕ್ಕಳ ನಾಟಕಕಾರನೆಂದು, ಮಕ್ಕಳ ಲೇಖಕನೆಂದು ದೊಡ್ಡ ಹೆಸರಾಗಿ ಸಾಹಿತ್ಯ ಚರಿತ್ರೆಯಲ್ಲಿ ಸೇರುತ್ತಿದ್ದನೇನೋ? (ಅವನಿಗೆ ಈ ಕಾರಣಕ್ಕಾಗಿ ಪ್ರಶಸ್ತಿ, ಫಲಕ ಬರಲಿಲ್ಲವೆಂದು ಬೇಸರದಿಂದ ಈ ಮೇಲಿನ ಮಾತು ಬರೆದಿದ್ದಲ್ಲ. ಅಷ್ಟು ದೊಡ್ಡ ಪ್ರಮಾಣದಲ್ಲಿ ಆತನ ಪುಸ್ತಕ ಮಾರಾಟ ಆಗಿದೆ; ನಾಟಕ ರಂಗದಲ್ಲಿ ಆಡುವ ಮೂಲಕ ಅವನನ್ನು ಗುರುತಿಸಿದ್ದಾರೆನ್ನುವ ಹೆಮ್ಮೆ ಇದೆ. ಆದರೆ ಒಂದು ಸಾಂಸ್ಕೃತಿಕ ರಾಜಕಾರಣದ ಕುರಿತು ಗಮನ ಹರಿಸಲು ಹೇಳಿದೆ ಅಷ್ಟೆ.)

ಹೀಗೆ ಅಣ್ಣನ ಮಕ್ಕಳ ನಾಟಕಕ್ಕೂ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರಕ್ಕೂ ಇರುವ ಅವಿನಾಭಾವ ಸಂಬಂಧವೇ ಅಣ್ಣನನ್ನು, ಚಿಂತನವನ್ನೂ ಪರಸ್ಪರ ಪ್ರೇರೇಪಿಸಿದೆ, ಪೋಷಿಸಿದೆ. ಅದಕ್ಕಿಂತ ಹೆಚ್ಚಾಗಿ ಆತ ನಾಟಕ ಬರೆದು ಕೊಟ್ಟ ಮೇಲೂ ಹಲವು ಭಾಗವನ್ನು ಕಿತ್ತು ಹಾಕಿ ಹೊಸದಾಗಿ ಬರೆಸಿದೆ. ಆತ ಒಂದಿನಿತೂ ಬೇಸರ ಮಾಡಿಕೊಳ್ಳದೆ ತಿದ್ದಿ ಬರೆದುಕೊಟ್ಟಿದ್ದಾನೆ. ಹಾಗಾಗಿ ಚಿಂತನ ರಂಗ ಅಧ್ಯಯನ ಕೇಂದ್ರ ಆತನ ನಾಟಕದ ‘ಮೊದಲ ಓದು’ ಮತ್ತು ‘ಮೊದಲ ವಿಮರ್ಶೆ’ ಎರಡನ್ನೂ ಪ್ರೀತಿಯಿಂದ ಮಾಡಿದೆ.

ಅಣ್ಣ ಪ್ರೀತಿಯಿಂದ ಇವರಿಗೆ ತಲೆ ಬಾಗಿದ್ದಾನೆ. ಯಾಕೆಂದರೆ ಆತನಿಗೆ ತಾನೊಬ್ಬ ಲೇಖಕ ಎನ್ನುವ ಪ್ರತಿಷ್ಠೆ ಗಿರಿ ಮುಖ್ಯವಾಗಿರಲಿಲ್ಲ. ತನ್ನ ಆಶಯ ತಾನು ಪ್ರೀತಿಸುವ ಮಕ್ಕಳಿಗೆ ತಲುಪುವುದು ಮುಖ್ಯವಾಗಿತ್ತು. ಹೊಸ ತಲೆಮಾರಿಗೆ ಪ್ರೀತಿಯ ಕಾಳನ್ನು ಹಂಚಲು ಹೊರಡುವುದು ಆತನಿಗೆ ಮುಖ್ಯವಾಗಿತ್ತು.

*****
“ಬೆಳಕು” ಆರ್.ವಿ. ಯವರ ಅನೇಕ ನಾಟಕಗಳಲ್ಲಿ ಕಂಡು ಬರುವ ಇನ್ನೊಂದು ಮಹತ್ವದ ಅಂಶ. ಕೆಲವೊಮ್ಮೆ ನಾಟಕದ ಒಳ ಹರಿವಾಗಿ ಹರಿದು ಬರುವ ‘ಬೆಳಕು’ ಹಲವು ಬಾರಿ ನಾಟಕದ ಪ್ರಧಾನ ಆಶಯವಾಗಿಯೂ ಬೆಳಗುತ್ತದೆ. ಮಕ್ಕಳು ಬೆಳಕಿನ ಕಡೆಗೆ ಸಾಗಬೇಕೆನ್ನುವುದು ಅವರ ಹಂಬಲ ಕೂಡ’
– ಕಿರಣ ಭಟ್

“ಆರ್.ವಿ. ಯವರ ನಾಟಕದಲ್ಲಿಯ ಚಳುವಳಿಗಳಲ್ಲಿ ಮುಂಚೂಣಿಯಲ್ಲಿರುವವರೆಲ್ಲ ಹೆಣ್ಣು ಮಕ್ಕಳೆ ಆಗಿದ್ದಾರೆ. ಗಂಡಸರ ಚಿನ್ನದ ವ್ಯಾಮೋಹವನ್ನು ಮೀರಿ ಪ್ರೀತಿಯನ್ನು ಚಿಗುರೊಡೆಸಲು ಹೆಣ್ಣು ಮಕ್ಕಳೇ ಕಾರಣರಾಗುತ್ತಾರೆ. ಆರ್.ವಿ. ಯವರ ಪ್ರೊಪಾಗಂಡಾ (Pಡಿoಠಿಚಿgಚಿಟಿಜಚಿ) ಸಹ ಇದೆ. ಪರಿಧಿಯಲ್ಲಿರುವವರನ್ನು ಕೇಂದ್ರಕ್ಕೆ ತರುವುದು. ‘ಪಾತು ಸಾತುವಿಗೂ ಓದು ಕಲಿಸುವುದು’
– ಶ್ರೀಪಾದ ಭಟ್.

“ಮಕ್ಕಳ ಮನಸ್ಸನ್ನು ಅಗತ್ಯಗಳನ್ನು ಭಂಡಾರಿಯವರು ಸಾಮಾನ್ಯವಾಗಿ ಮರೆಯುವುದಿಲ್ಲ. ಹಾಡು, ಕುಣಿತ, ಆಟಗಳಿಗೆ ಸಾಕಷ್ಟು ಅವಕಾಶ ನೀಡಿ, ಚುಟುಕ ಸಂಭಾಷಣೆ, ಚುರುಕಾದ ಓಟ, ನಿರಂತರ ಕ್ರಿಯೆ ಇರುವಂತೆ ನೋಡಿಕೊಂಡು, ಸರಳ ರಂಗ ತಂತ್ರಗಳನ್ನು ಬಳಸಿಕೊಂಡು ಸಂಕೀರ್ಣ ಜಗತ್ತನ್ನು ಪ್ರತಿಬಿಂಬಿಸಿದ್ದಾರೆ. ಈ ನಾಟಕಗಳಲ್ಲಿ ಸಸ್ಯ, ಪ್ರಾಣಿ, ಪಕ್ಷಿ, ಭೂಮಿ, ಮನುಷ್ಯ ಎಲ್ಲಾ ಪಾತ್ರಗಳಾಗಿ ಬಂದು ಮಕ್ಕಳ ಮುಗ್ಧತೆ, ಕುತೂಹಲ, ಆದರ್ಶಗಳ ಹಂಬಲಗಳಿಗೆ ನೀರೆರೆಯುತ್ತವೆ.”
– ಎಂ. ಜಿ. ಹೆಗಡೆ.

“ಶಾಲೆಯಲ್ಲಿ ಬೋರಾಗುವ, ಅರ್ಥವಾಗದ ಅಂಬೇಡ್ಕರ್ ಹಾಗೂ ಗಾಂಧೀಜಿ ಆರ್.ವಿ. ಭಂಡಾರಿಯವರ ನಾಟಕದಲ್ಲಿ ಬಹಳ ಸುಂದರವಾಗಿ ಚಿತ್ರಿತವಾಗುತ್ತದೆ. ಈ ನಾಟಕಗಳಲ್ಲಿ ಬರುವ ರೇಖಾ ಚಿತ್ರಗಳು ಇಡೀ ನಾಟಕವನ್ನೇ ಹೇಳುತ್ತದೆ. ಈ ನಾಟಕಗಳ ಪ್ರತಿ ಶಬ್ದವೂ ಪ್ರಭಾವಶಾಲಿಯಾಗಿದ್ದು, ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ.”
– ಶೀತಲ ಭಟ್ಟ (೪ನೇ ತರಗತಿಯಲ್ಲಿದ್ದಾಗ ಬರೆದದ್ದು)

‍ಲೇಖಕರು avadhi

May 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. jampannaashihal

    ಪ್ರೀತಿಯ ಕಾಳನು ಹಂಚಿದರು‌ ಆರ್ ವಿ ಭಂಡಾರಿಯವರ ಮಕ್ಕಳ ನಾಟಕಗಳ ಲೇಖನ ಸೊಗಸಾಗಿದೆ , ಸರಕಾರದ ಗಮನಕ್ಕೆ ಬಂದಿದ್ದು ಅವರ ನಾಟಕಗಳು ಪ್ರಕಟವಾಗಿ ಹಂಚಲ್ಪಟ್ಟಿದ್ದು ಸಮಾಧಾನದ ಸಂಗತಿ. ವಿಠ್ಠಲ ಭಂಡಾರಿ ಅವರ ಬರವಣಿಗೆಯೂ ಸರಳ ಆಕರ್ಷಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: