
ಆನಂದ್ ಋಗ್ವೇದಿ
ಎದೆಯ ದುಡಿ ಬಡಿತ
ಮನದ ಮಿಡುಕು ಮಿಡಿತ
ಕರುಳ ಕಳವಳ ಕುದಿತ
ತಣಿಯಲಿ ಈ
ಹೆಗಲೆಣೆಯಲಿ
ಒರಗು ಹೆಗಲಿಗೆ
ಬಿಕ್ಕು
ಈ ಎದೆಯ ಬಯಲಿಗೆ
ಸಿಕ್ಕುಗಳ ಸಿಲುಕಿನಲ್ಲಿ
ಬಿಡಿಸಲಾಗದ ಬಂಧದಲ್ಲಿ
ಮುದುಡದಿರಲಿ ಮುದ್ದು ಮುಗುಳು
ಮರುಳೇ, ಮತ್ತೆ ದುಃಖಿಸಿ ಬಿಕ್ಕದಿರು
ಮರಳಿ ಹೆಕ್ಕದಿರು ಉರುಳಿಹೋದ ಮಾತುಗಳ
ಮಾತುಗಳಿಗೆ ದಕ್ಕದು ಈ ಭಾವ
ಸಂಭವ
ವಿವರಿಸಲಾಗದು ಆತ್ಮದ ಅನಂಗ ಸಂಗ
ಜಗದ ಜಾಡುಗಳಲ್ಲಿ ಹೆಜ್ಜೆ ಮೂಡಿಸದ ಈ ಹಾದಿಯ ಹಾಡು
ಅನಾದಿ ಕಾಲದಿಂದಲೂ ಶಪಿತೆಯರ ಪಾಡು
ಎದೆಯ ಹಾಡ ಹಾದರವೆಂಬ ಈ
ಜಗಕೆ ಮನಸ ಜಾರುವಿಕೆಯೂ ಸಹಜವಲ್ಲದ ಗಹನ!
ಅನುದಿನದ ಅಗ್ನಿ ಪರೀಕ್ಷೆಯಲ್ಲಿ ಸರತಿ ನಿಂತಿದ್ದಾರೆ ಸೀತೆಯರು, ತಮ್ಮದಲ್ಲದ ತಪ್ಪಿಗಾಗಿ ಕೊರಳ ಕೊಟ್ಟ ರೇಣುಕೆಯರು.
ಹೊಸ ಹಗಲು
ಹೊಸ ಭಾಷ್ಯ
ಹೊಸ ಕನಸು ಸಾಧ್ಯವೇ ಎಂಬ ಕನಲುವಿಕೆ ಬೇಡ
ಚಲನೆ ಸಂಚಲನೆ ಈ ಜಗದ ನಿಯಮ





ತಮ್ಮದಲ್ಲದ ತಪ್ಪಿಗಾಗಿ ಕೊರಳ ಕೊಟ್ಟ ರೇಣುಕೆಯರು…..ಕವಿತೆಗೆ ಸಾಟಿಯಿಲ್ಲ ಸರ್