ಪ್ರೀತಿಯು ಅದೊಂದು ಬೀಜವಾದರೆ
ಅನು : ಲಕ್ಷ್ಮೀಕಾಂತ ಇಟ್ನಾಳ
(ಮೂಲ : ಬಸು ಭಟ್ಟಾಚಾರ್ಯ)
ಅದೊಂದು ರೀತಿಯ ಬೀಜವಿದು ಪ್ರೀತಿ
ಒಮ್ಮುಖವಾಗದು ಅದರ ನೀತಿ
ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ
ಒಬ್ಬಂಟಿ ಬದುಕಲು ಸಾಧ್ಯವಾಗದು ಅದಕೆ
ಬದುಕಿದರೆ ಇಬ್ಬರಲ್ಲೂ,
ಸತ್ತರೆ ಕೂಡಿಯೇ ಸಾಯುತ್ತವೆ
ಹರಿವ ಝರಿಯಿದು ಪ್ರೀತಿ
ದಂಡೆಗಳ ಕಟ್ಟಳೆಗಳ ಕೆರೆಯಲ್ಲವಿದು,
ದಂಡೆ ಕಾಣದ ಸಾಗರವೂ ಅಲ್ಲವಿದು,
ತೊರೆಯ ಬುಗ್ಗೆಯಿದು ಅಷ್ಟೆ , ಹರಿಯುತ್ತಿಹುದು

ನದಿಯ ಹಾಗೆ ಏರುವುದು, ಇಳಿಯುವುದು,
ಮಟ್ಟಗಳೆಲ್ಲವೂ ಒಂದೇ ಪರಿ-ಸರಿ, ಪ್ರೀತಿಯಲ್ಲಿ
ನೀರ ಗುಣವೇ ಅದು, ಕೆಳಮುಖ ಪಯಣ
ಕೆಳಗಿಂದ ಮತ್ತೆ ಊಧ್ರ್ವಕ್ಕೆ, ಏರುತ್ತದೆ ಮೇಲಕ್ಕೆ
ಮೋಡವಾಗಿ ಆಕಾಶದಲ್ಲಿ ಹರಿಯುತ್ತದೆ
ಬೀಸುಗಾಳಿಯ ತುಂಟಾಟಕೆ ಗುಡುಗುತ್ತ
ಹನಿ ಹನಿ ಬಿಂದುವಾಗಿ ಕರಗುತ್ತದೆ
ಪ್ರೀತಿಯಿದು ಆದೇಶಕ್ಕೆ ತಲೆಬಾಗುವ ಸೂತ್ರ ಬಂಧಿಯಲ್ಲ
ಮಂದಿರದ ಆರತಿಯಲ್ಲ, ಪೂಜೆಯಲ್ಲ
ಗಳಿಕೆ, ಲಾಭದಾಸೆಯೂ ಅಲ್ಲ,
ಲಾಭ ಹಾನಿಗಳ ಲೆಖ್ಖ ಅಲ್ಲವೇ ಅಲ್ಲ
ಘೋಷಣೆ, ಉಪಕಾರ ಊಹೂಂ, ಯಾವ ಯುದ್ಧದ ಗೆಲುವೂ ಅಲ್ಲ
ಕೌಶಲ್ಯ, ಬಕ್ಷೀಸು, ಪರಂಪರೆಯ ರೀತಿ ರಿವಾಜುಗಳಲ್ಲ
ಕರುಣೆಯಲ್ಲ, ದಾನವಲ್ಲ
ಇದೊಂದು ಬಿತ್ತುವ ಬೀಜವೂ ಅಲ್ಲ
ಪರಿಮಳವಿದು, ಪರಿಮಳದ ಪರಿಚಯವೂ ಅಲ್ಲ
ನೋವು, ಆಶ್ವಾಸನೆ, ವಿಶ್ವಾಸ, ಉನ್ಮಾದದ,
ಜಾಗೃತ ಸಂಚಲನೆಯ, ಸ್ಪರ್ಶದ ಸ್ಪಂದನೆಯ
ಗರ್ಭದೊಳು ಕಟ್ಟುವುದು
ಈ
ಪ್ರೀತಿ,
ಬಿಡಿಸದ ಬಂಧವಿದು, ಸಂಬಂಧವಿದು
ಎರಡು ಜೀವಗಳ, ಎರಡು ಆತ್ಮಗಳ ಕುರುಹಿದು,
ಹುಟ್ಟುವುದು, ಬೆಳೆಯುವುದು,
ಆದರೆ ಮುಪ್ಪಾಗದು
ಈ
ಪ್ರೀತಿ
ಮಣ್ಣೊಳಾವಿರ್ಭಿತ ನೋವೊಂದರ ತಣ್ಣನೆಯ ಕಾವಿನಡಿಯಲ್ಲಿ
ಪಾಲನೆ, ಪೋಷಣೆಯ ನವಿರು ಫಲದ ಕಟಾವದು
ಹಂಚಲಾಗದು,
ಹಂಚುವುದು ಹೇಗೆ, ಅದನ್ನು?
ಮಣ್ಣು, ನೀರು, ಮತ್ತೆ ಗಾಳಿ, ತುಸು ಬೆಳಕು ಹಾಗೂ ಅಂಧಕಾರ ತುಸು
ಬೀಜದ ಕಣ್ಣಲ್ಲಿ ಹಣಿಕಿಕ್ಕಲು,
ಸಸಿಯಿದು ಕತ್ತನ್ನು ಮೇಲೆತ್ತಿ
ಮುಖ ಮೂಗು ದೃಷ್ಟಿಗಳ ತೋರುವುದು
ಚಿಗುರು ಸಸಿಯ ಎಲೆ ಎಲೆಗಳಲ್ಲೂ
ಕೆಲ ಪ್ರಶ್ನೆಗಳಿವೆ, ಹಲ ಉತ್ತರಗಳೂ!
ಯಾವ ಮಣ್ಣಿನ ಗರ್ಭವಾಗಿತ್ತೋ!
ಯಾವ ಋತುವದು, ಪಾಲಿಸಿ ಪೋಷಿಸಿತೋ
ಮತ್ತೆಲ್ಲಿ ದಿನಕರನೊಂದಿಗೆ ಸರಸವಾಡಿತೊ
ಯಾವ ರೆಂಬೆಗಳು ನಾಚಿ ಮುದುರಿದವೋ
ಹೀಗೊಮ್ಮೆ ಮೂಡಿಬಿಟ್ಟಿತು ಅದು,
ಪ್ರೀತಿ!
ಎಲೆಗಳ ಕೆಲ ಮುಖಗಳು ತಲೆಯೆತ್ತಿ ನೋಡುತ್ತಿವೆ
ಆಕಾಶದಲ್ಲಿ ಜೋಡಿಸಿದ ಆಸನಗಳಂತೆ
ಕೆಲ ನೇತಾಡುತಿಹವು, ಉದಾಸವೆನಿಸಿದರೂ ಕೆಲವು
ರೆಂಬೆಗಳ ನರಗಳಲ್ಲಿ ಹರಿವ ಜಲದೊಂದಿಗೆ ಸಂಬಂಧ ಹೊಂದಿಹವು
ಮಣ್ಣಿನಡಿಯಲ್ಲಿ ಬೀಜವೊಂದಕ್ಕೆ ವಿಳಾಸ ಕೇಳುವವು
ನಾವು ನೀವಾಗೆವು,
ಆದರೆ ಕೇಳುವವು,
ನೀವು ನಮ್ಮಿಂದ, ಇಲ್ಲವೆ ನಾವು ನಿಮ್ಮಿಂದ!
ಪ್ರೀತಿಯು, ಅದೊಂದು ಬೀಜವಾದರೆ,
ಅದು ಪ್ರಶ್ನೆಯೂ ಹೌದು
ಉತ್ತರವೂ ಹೌದು!






ತುಂಬ ಚೆನ್ನಾಗಿದೆ.
very very nice…
dhanyavada sir, mmshaikh ji
ಧನ್ಯವಾದಗಳು ಡಾ. ಶಿವಾನಂದ ಕುಬಸದ ಜಿ.
ಪ್ಯಾರ ವೋ ಬೀಜ ಹೈ, ಕವನವನ್ನು ಗುಲ್ಜಾರರು ಆಸ್ಥಾದಲ್ಲಿ ವಾಚಿಸಿದ್ದು ಅದರ ಕೊಂಡಿ ಇಲ್ಲಿದೆ,
https://www.youtube.com/watch?v=_Pak7A0165g