ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ಲಲನೆ, ಮದಿರಾಕ್ಷಿ..

ನಿಚ್ಚಂ ಪೊಸತು

ಆನಂದ್ ಋಗ್ವೇದಿ

ಪ್ರಿಯ ಲಲನೆ, ಮದಿರಾಕ್ಷಿ:

ಇಳೆಗಾಣದ ಪೊಸತೊಂದು ಹರುಷವ
ಪೊತ್ತು ಬರಿತಿದೆಯಂತೀ ಎಲರು
ಬೀಸಿ ಬಹ ನವ ಹರುಷ ಬಡಗದ್ದೋ?
ಮೂಡಣ, ಪಡುವಣದ್ದೋ ಎಂಬ ಚರ್ಚೆ
ಇದಲ್ತು, ಕಲ್ತುದ ಮರೆವ ಮೈಮರೆವ
ವ್ಯಾಕರಣವೋಲ್ ಈ ಕಾರ್ಯ ಕಾರಣ!!

ಕಾವ್ಯಕ್ಕೂ ಕಾರಣವೇ!? ಗಿಡ ಮುಡಿದ
ಪೂವ ಪಕಳೆಗಳ ಪರಾಗ ಕಾಯುವುದೂ
ವಿರಹವಲ್ತೆ? ವಿಹಂಗಮ ವಿಹರಿಸುವ ದುಂಬಿ ಮೇಣ್
ಮಧುಕರ ಬಲ್ಲುದಲ್ಲದೇ ನಾಳದಾಳದ ಮಕರಂದ?

ಬೀಸಿದ ತಂಬೆಲರ ತಬ್ಬಿ ತುಯ್ಯುವ ಮುಂಗುರುಳ
ನೀಳ ನಾಸಿಕದಂದ ತುಂಬು ಗಲ್ಲದಳವ
ಆಳದಾಳದ ಗಹ್ವರ ಬಾಯವೊಲ್ ಕಾಣ್ವ ಕಂಠೋಷ್ಟ್ಯ
ತುಟಿ ರಂಗಿನ ನಡುವೆ ಮಿನುಗುಪ ದಂತ ಪಂಕ್ತಿಯ ಜೊನ್ನ!

ಬಾನ ಸಜ್ಜದ ಮಹಾ ಮಜ್ಜನದ ರಂಗ ಮಂಚದೊಳ್
ಎಸೆವ ಮಾಟ ಮೈಯ ಹೂಟ ಜವನಿಕೆಯ ಬೇಟ
ಆಟವೆಲ್ಲಾ ಮರೆವವೇ? ಮತ್ತೆ ಬೀಸಿದ
ಗಾಳಿಯೊಲ್ ಪರಿಚಯವ ಪರಿಕಿಸಿ ಪನ್ನೀರ ಬಸಿವವೆ!?

ನಿತ್ಯ ಮೂಡುವ ದಿನಮಣಿ ಮುಗಿಲಂಗಳದಲ್ಲಿ ನಲಿವ
ಬಿದಿಗೆಯ ಎಳೆವೆರೆ ಎಲ್ಲೂ ಹೋಗದೇ ಇದ್ದಲ್ಲೇ ಲುಪ್ತ ಸಂ-
ವತ್ಸರವೇ ಮತ್ತೆ ಮಡಿಕೆಯೊಳಗಿಂದ ಗಮಿಸಿ ಘಮ
ಘಮಿಸಿ ಧಾವಿಸಿ ಆವರಿಸುವ ನಿನ್ನಂತೆಯೇ

ನಿಚ್ಚಂ ಪೊಸತು!!

‍ಲೇಖಕರು avadhi

8 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading