ಚೀ ಜ ರಾಜೀವ
ಪ್ರಿಯ ಅಜ್ಜಯ್ಯ,
ನಿನ್ನದೇ ವಯಸ್ಸಿನ
ನನ್ನ ಮುತ್ತಜ್ಜ
ಯುವಕನಾಗಿದ್ದ
ಕಾಲದಲ್ಲಿ
ನೀನು ನಮ್ಮೂರಿಗೆ
ಬಂದಿದ್ದೆಯಂತೆ
ಊರ ಗೌಡರ ಬಳಿ
ಧವಸ ಧಾನ್ಯ ಬೇಡಲು
ಆಗ ನನ್ನ ಮುತ್ತಜ್ಜ
ಪಾದಮುಟ್ಟಿ
ನಮಿಸಿದಾಗ,
ಆತನ ಕಿವಿಯಲ್ಲಿ
ನೀ ಉಸುರಿದೆಯಂತೆ –
ನಿನ್ನಂತೆ ಮಕ್ಕಳು
ಬಡಗಿಯಾಗುವುದು ಬೇಡ
ಅವರನ್ನು ಓದಲು
ಮಠಕ್ಕೆ ಕಳುಹಿಸು ಎಂದು!
ನೀವಲ್ಲವೇ ಸಮಾಜವಾದಿ ?
ಮೂಡಲ ಸೀಮೆಯ ಮಠಕ್ಕೆ
ಕಳುಹಿಸಲು ಆತನಿಗೆಲ್ಲಿಯ ಶಕ್ತಿ ?
ಗೌಡರಿಗೆ ಇನಿತೂ ಗೊತ್ತಾಗದಂತೆ
ನೀ ಮುತ್ತಜ್ಜನಲ್ಲಿ ಬಿತ್ತಿದ್ದ
ಶಿಕ್ಷಣದ ಬೀಜ
ಮೊಳಕೆಯಾಗಲೇ ಇಲ್ಲ
ಕನಸು ಕಾಣುತಲೇ ನಿರ್ಗಮಿಸಿದ !
ಮುಂದೆ, ಎರಡನೇ ಬಾರಿ
ನೀ ಮತ್ತೆ ನನ್ನೂರಿಗೆ ಬಂದೆ

ಈ ಬಾರಿ ನನ್ನಜ್ಜನದು ಪಾದಪೂಜೆ
ಮಳೆ ಬೆಳೆಯ ಮಾತಿನ ನಡುವೆಯೇ
ನೀ ಮತ್ತೆ ಪಿಸುಗುಟ್ಟಿದೆಯಂತೆ –
ನಿಮ್ಮಪ್ಪ ನಿನ್ನನ್ನು ಓದಿಸಲಿಲ್ಲ
ನೀನಾದರೂ ಮಕ್ಕಳನ್ನು
ಮಠಕ್ಕೆ ಕಳುಹಿಸಿ
ಓದೇ ಬಿಡುಗಡೆಯ ಹಾದಿ
ಎಂದೆಯಂತೆ.. !
ನೀನಲ್ಲವೇ ಅಂಬೇಡ್ಕರ್ ವಾದಿ ?
ಅನ್ನ ಆಶ್ರಯ ಅರಿವು ನೀಡಿದ
ತ್ರಿ ದಾಸೋಹಿ ನೀನು
ನಿನ್ನದೇ ಮಠ ಪರಂಪರೆ
ಅನುಸರಿಸುತಿರುವ
ಸಿರಿಗೆರೆ, ಸುತ್ತೂರು ಮಠದ
ದಾರಿಯಲ್ಲಿ ಬೆಳಕು ಕಂಡವರು
ನಾವು .
ಅದೊಂದು ದಿನ ಮತ್ತೆ
ನನ್ನೂರಿಗೆ ಬಂದಿದ್ದೆ
ನನ್ನಪ್ಪನನು
ಹರಸಿ ಆಶೀರ್ವದಿಸಿ
ಸಮಾಜಕ್ಕಾಗಿ, ದೇಶಕ್ಕಾಗಿ
ಆತನ ಮುಂದೆಯೇ
ಜೋಳಿಗೆ ಒಡ್ಡಿದ್ದೆ
ಬೇಡುವ ಕೈಗಳನು
ನೀಡುವ ಕೈಗಳಾಗಿಸಿದ
ನೀನಲ್ಲವೇ ನಿಜದ ಕರುಣಾಳು






ತುಂಬಾ ಚಂದದ
Beautiful Lines from a beautiful soul. One song being sung by million hearts.
Thank u sir…