ಪ್ರಿಡ್ಜಲಿಟ್ಟ ಬಕ್ರೀದ್ ಮಾಂಸದಿಂದ
ಒಂದೋ ಎರಡೋ ತುಂಡು ಕೊಡಿ
ಹಸಿದ ನಾಲಗೆಗೆ ಸ್ವಲ್ಪ ಸವರಬೇಕು
ಹಚ್ಚಿದಷ್ಟೂ ಹಣತೆಗಳ ನಡುವಿಂದ
ಒಂದೊ ಎರಡೋ ಎತ್ತಿ ಕೊಡಿ
ಬೆಳಕು ಕಾಣದ ಮನೆಗೆ ಹಚ್ಚಬೇಕು
ಶಿಲುಬೆಯೆದುರು ಸುರಿದ ರಾಶಿಯಿಂದ
ಒಂದೊ ಎರಡೋ ಹೂವು ಕೊಡಿ
ಬಾಲಾಶ್ರಮದ ಹುಡುಗಿಗೆ ಮುಡಿಸಬೇಕು
ಮಂದಿರ ಮಸೀದಿ ಇಗರ್ಜಿಯಲಂಕರಿಸಿದ
ಬೀಟೆ ಮರದ ಒಂದೊಂದು ತುಂಡು ಕೊಡಿ
ಸೋರುತಿರುವ ವಿಧವೆಯ ಸೂರು ಸರಿಪಡಿಸಬೇಕು
ಕಟ್ಟೆ ಸರ್ಕಲ್ ಫಲಕಗಳಿಗೆ ಬಳಿದ
ಹಸಿರು ಕೇಸರಿ ಬಣ್ಣದಿಂದ ಸ್ವಲ್ಪ ಕೊಡಿ
ಅನಾಥರ ಕರಿ ಹಿಡಿದ ಗೋಡೆಗೆ ಬಳಿಯಬೇಕು.
ಬಣ್ಣ ಬಣ್ಣದ ಬಾವುಟಗಳ ಬಟ್ಟೆಯಿಂದ
ಒಂದೊಂದು ಅಂಗುಲ ಕೊಡಿ
ಹರಿದ ಬಟ್ಟೆ ತೊಟ್ಟ ಹುಡುಗನಿಗೆ ಕೊಡಬೇಕು.
ತೊಟ್ಟಿಗೆಸೆವ ಅನ್ನ ತಿಂಡಿಯನ್ನ ಇಲ್ಲಿ ಕೊಡಿ
ಅಪೌಷ್ಟಿಕತೆಯಿಂದ ಸಾಯ ಹೊರಟ
ನಮ್ಮ ತಂಗಿ ತಮ್ಮನಿಗೆ ಕೊಡಬೇಕು.
ಗಹಗಹಿಸಿ ನಗುವ ಪಾರ್ಟಿ ಸಂಭ್ರಮದಿಂದ
ಒಂದೋ ಎರಡೋ ನಗುವ ಕೊಡಿ
ವೃಧ್ದಾಶ್ರಮದ ನಮ್ಮ ಅಜ್ಜಿಯಂದಿರಿಗೆ ನೀಡಬೇಕು
ಕತ್ತಿ ತಲವಾರು ತ್ರಿಶೂಲಗಳಿಂದ
ಹರಿತ ಭಾಗಗಳನ್ನು ಕಿತ್ತು ಕೊಡಿ
ರೈತನ ಮೊಂಡು ನೇಗಿಲ ತುದಿಗೆ ಅಂಟಿಸಬೇಕು
ಧರ್ಮ ಪ್ರವಚನಕ್ಕೆ ಕಟ್ಟಿದ ಸ್ಟೇಜು ಮೈಕನ್ನು
ಒಂದೆರಡು ನಿಮಿಷಕ್ಕೆ ಕಡ ಕೊಡಿ
ಇದೆಲ್ಲವನ್ನು ಸ್ವಲ್ಪ ಜೋರಾಗಿ ಹೇಳಬೇಕು.
ಭಾರತ ಬದಲಾಯಿಸಬೇಕು…






ಬಹಳ ಅರ್ಥಪೂರ್ಣವಾಗಿದೆ…
Super…. ಭಾರತ ಬದಲಾಯಿಸಬೇಕು
shafiji, kavite bahala channagide.