ಪ್ರಾರ್ಥನೆ ಬೇಡ್ವೇ ಪಂಕಜಾ..

pratibha nandakumar signature

ಗುಬ್ಬಿ ವೀರಣ್ಣ ಶತಮಾನೋತ್ಸವ. ರವೀಂದ್ರ ಕಲಾಕ್ಷೇತ್ರದಲ್ಲಿ. ಉದ್ಘಾಟನೆ ರಾಜಕುಮಾರ್ . ಕಾಂಪೇರಿಂಗ್ ನಾನು!

ಸಂಭ್ರಮದಲ್ಲಿ ನಡುಗುತ್ತಾ ಎಲ್ಲರನ್ನೂ ವೇದಿಕೆಗೆ ಆಹ್ವಾನಿಸಿದೆ.

ಮೊದಲಿಗೇ ಸ್ವಾಗತ ಭಾಷಣ ಅನೌನ್ಸ್ ಮಾಡಿದೆ.

ರಾಜಕುಮಾರ್ ಅವರು ಎದ್ದು ಬಂದು ಅತೀ ಮೃದುವಾಗಿ ” ಅದಕ್ಕೆ ಮೊದಲು ಪ್ರಾರ್ಥನೆ ಬೇಡವೇ? ” ಅಂದು ಪಕ್ಕದಲ್ಲಿ ಮುಂದಿನ ಕಾರ್ಯಕ್ರಮಕ್ಕೆ ಸಿದ್ದರಾಗಿ ಕೂತಿದ್ದ ಲೆಗ್ ಹಾರ್ಮೋನಿಯಂ ಅವರ ಹತ್ತಿರ ಹೋಗಿ ತಮ್ಮ ಶ್ರುತಿ ಹೇಳಿ ಗುಬ್ಬಿ ಕಂಪನಿಯ ಪ್ರಾರ್ಥನಾ ಗೀತೆ ಸುಶ್ರಾವ್ಯವಾಗಿ ಹಾಡಿದರು.

ನಾನು ಪಕ್ಕದಲ್ಲೇ ಉಸಿರಾಡೋದನ್ನೂ ಮರೆತು ನೋಡಿ ಕೇಳಿ ತಣಿದೆ. ಮುಗಿದಾಗ ಇಡೀ ಸಭಾಂಗಣ ಚಪ್ಪಾಳೆ ಸಿಳ್ಳೆಯಲ್ಲಿ ಮುಳುಗಿಹೋಯಿತು

b u geetha3

ಬಿ ಯು ಗೀತಾ 

ನನ್ನ ಅಕ್ಕನ ಮಗನ ಉಪನಯನಕ್ಕೆ ಮುನ್ನ, ೨೦-೨೨ ವರ್ಷಗಳ ಹಿಂದೆ ತಿರುಪತಿ ಗೆ ನಾವೆಲ್ಲಾ ಹೋಗಿದೆವು. ದರ್ಶನ ಆಗಿ ಅಲ್ಲಿಯೇ ಒಳಾಂಗಣದಲ್ಲಿ ಕುಳಿತುಕೊಂಡಿದೆವು.

ನೋಡು ನೋಡುತ್ತಿರುವಂತೆಯೇ ನಮ್ಮ ಕಣ್ಣ ಮುಂದೆ ಡಾ|| ರಾಜಕುಮಾರ ಆವರು ಪ್ರದಕ್ಷಿಣೆ ಹಾಕುತ್ತಿದ್ದರು., ಅದೂ ಒಂಟಿಯಾಗಿ.

ದೇವಸ್ಥಾನದಲ್ಲಿ ಮಾತಾಡಿಸಬಾರದು ಎಂದು ಸುಮ್ಮನೆ ಕುಳಿತೆವು. ನಮ್ಮ ಅರಿವಿಗೆ ಬರುವ ಮುನ್ನವೇ ನಮ್ಮ ಸೋದರತ್ತೆ ಗುಡು ಗುಡು ಅಣ್ಣಾವರ ಬಳಿ ಹೋಗಿ, ಕೈಮುಗಿದು ಮಾತನಾಡಿಸಲಾರಂಭಿಸಿದರು. ನಮ್ಮತ್ತ ಬೇರೆ ಕೈತೋರಿಸಿದರು.

ಅವರು ನಮ್ಮತ್ತ ತಿರುಗಿ ಮುಗುಳ್ನಕ್ಕರು. ಸರಿ. ನಾವೆಲ್ಲಾ ಅವರ ಬಳಿ ಓಡಿದೆವು.

ನಮ್ಮ ಸೋದರತ್ತೆ ನಮ್ಮ ಕುಟುಂಬದ ಇಡೀ ಪುರಾಣ , ನಾವು ಬಂದ ಉದ್ದೇಶ ಇತ್ಯಾದಿ ಇತ್ಯಾದಿ ಹೇಳಿದರೂ ನಗುತ್ತಾ ಅತ್ಯಂತ ಆಸಕ್ತಿಯಿಂದ ಕೇಳಿಸಿಕೊಂಡ ಸಹೃದಯೀ ರಾಜ್ ಅವರನ್ನು ಅಭಿಮಾನಿಸದೆ ಇರಲಾಗುತ್ತದಯೇ?

ಸುಂದರ ರೂಪು , ಉತ್ತಮ ಅಭಿನಯ ಅಷ್ಟೇ ಅವರನ್ನು ಈ ಮಟ್ಟಕ್ಕೆ ಏರಿಸಲಿಲ್ಲ. ಅವರ ಸಾಟಿಯಿಲ್ಲದ ವ್ಯಕ್ತಿತ್ವ ಅವರ ಅಪಾರ ಜನಪ್ರಿಯತೆ ಗೆ ಕಾರಣ.

b v bharati

ಬಿ ವಿ ಭಾರತಿ 

ಹಿಂದೊಮ್ಮೆ ಬರೆದಿದ್ದೆ. ಆದರೂ ಅಣ್ಣಾವ್ರ ಬಗ್ಗೆ ಮತ್ತೆ ಬರೆಯ ಬೇಕೆನ್ನಿಸುತ್ತಿದೆ …

ಗಂಧದಗುಡಿ ಶೂಟಿಂಗ್ ನಮ್ಮ ಕಬಿನಿಯ ಹತ್ತಿರದ ಕಾರಾಪುರದಲ್ಲಿ ನಡೆಯುತ್ತಿತ್ತು. ಆ ಸುದ್ದಿ ಕಿವಿಗೆ ಬಿದ್ದ ದಿನದಿಂದ ಅಲ್ಲಿಗೆ ಹೋಗಿ ಶೂಟಿಂಗ್ ನೋಡಬೇಕೆನ್ನುವ ಮಹದಾಸೆ. ಒಂದು ದಿನ ನಮ್ಮ ಕಾಲೋನಿಯ ಸುನಂದಾ ಆಂಟಿ ನಮ್ಮನ್ನೆಲ್ಲ ಶೂಟಿಂಗ್ ಸ್ಥಳಕ್ಕೆ ಬರುತ್ತೀರಾ ಅಂತ ಕೇಳಿದಾಗ ‘ಇದು ಕೇಳೋ ಪ್ರಶ್ನೆಯಾ’ ಅನ್ನುವಂತೆ ಸಿದ್ಧವಾಗಿದ್ದೆವು.

ಕಾರಾಪುರದ ಹತ್ತಿರದ ಮಸಾಲೆಬೆಟ್ಟದಲ್ಲಿ ಶೂಟಿಂಗ್ ಅಂತ ನಮ್ಮ ಡ್ರೈವರ್ ಅಲ್ಲಿಗೆ ಕರೆದೊಯ್ದ.
ನಾವು ಹೋಗುವಷ್ಟರಲ್ಲಿ ನಡು ಮಧ್ಯಾಹ್ನ. ಮಸಾಲೆಬೆಟ್ಟದ ಮೇಲಿನ ಭವ್ಯ ಮನೆಯೊಂದನ್ನು ಕಂಡು ನಾವು ಬೆರಗಾಗುತ್ತ ಅತ್ತ ಓಡಿದೆವು. ಸೆಕ್ಯುರಿಟಿ ಮನುಷ್ಯ ನಮ್ಮನ್ನು ಕಂಡು ಗಾಭರಿಯಿಂದ ಅಲ್ಲೇ ತಡೆದ. ನಮ್ಮ ಸುನಂದಾ ಆಂಟಿಗೆ ಸಿಟ್ಟು ಬಂದು ‘ಅದ್ಯಾಕ್ರಿ ನಾವು ಹೋಗಬಾರ್ದು’ ಅಂತ ಜಗಳಕ್ಕೆ ನಿಂತಾಗ ಶೂಟಿಂಗ್ ತಂಡದವರು ಬಂದು ‘ಅದು ರಟ್ಟಿನ ಮನೆ’ ಅಂದಾಗ ಮೂಗಿನ ಮೇಲೆ ಬೆರಳಿಟ್ಟು ಕೊಂಡಿದ್ದೆವು!

f0828bc79d028d11345010c4d3214a46‘ರಾಜ್ ಕುಮಾರ್ ಅವರನ್ನು ಕರಿ. ನಾವು ಅವರಿಗೋಸ್ಕರ ಬಂದಿದೀವಿ’ ಅಂತ ಆಂಟಿ ಅಧಿಕಾರಯುತವಾಗಿ ಹೇಳಿದಾಗ ‘ಅವರು ಊಟಕ್ಕೆ ಹೋಗಿದಾರೆ’ ಅಂದ. ಥು ಬಂದಿರೋ ಘಳಿಗೆಯೇ ಸರಿಯಿಲ್ಲ ಅಂತ ಶಪಿಸಿಕೊಂಡೆವು.

ಸರಿ ಮನೆಯ ಸುತ್ತಲಾದರೂ ಸುತ್ತೋಣ ಅಂತ ಸುತ್ತಿದ್ದಾಯ್ತು. ರಾಜ್ ಕುಮಾರ್ ನ ನೋಡುವ ಭಾಗ್ಯವಿಲ್ಲ ಅಂತ ಬೇಜಾರಿನಿಂದ IB ಗೆ ಊಟಕ್ಕೆ ಹೊರಟೆವು. ನಮ್ಮ PWD ಗೆ ಸೇರಿದ ಐಬಿ ಆದ್ದರಿಂದ ನಮಗೆ ಅಲ್ಲಿ ತುಂಬ ಬಳಕೆಯಿತ್ತು. ಆರಾಮವಾಗಿ ಇಳಿದು ಹೊರಟವರು ಶಾಕ್ ನಿಂದ ನಿಂತು ಬಿಟ್ಟೆವು .. ಎದುರಿಗೆ ರಾ .. ಜ್ … ಕು .. ಮಾ ..ರ್ !!!! ಹುಂ, ಸಾಕ್ಷಾತ್ ರಾಜ್ ಕುಮಾರ್!!!!!!!!!!!

ಮೊದಲಿಗೆ ಚೇತರಿಸಿಕೊಂಡ ಸುನಂದಾ ಆಂಟಿ ಅಣ್ಣಾವ್ರ ಹತ್ತಿರ ಓಡಿದರು. ನಾವೂ ಹಿಂಬಾಲಿಸಿದೆವು. ನಾನಾಗ ತುಂಬ ನಾಚಿಕೆಯ ಪ್ರಾಣಿ. ಜೊತೆಗೆ ರಾಜ್ ಕುಮಾರ್ – ಭಾರತಿ ಜೋಡಿ ತುಂಬ ಪಾಪ್ಯುಲರ್ ಆಗಿದ್ದರಿಂದ ನನ್ನನ್ನು ಎಲ್ಲರೂ ‘ರಾಜ್ ಕುಮಾರ್’ ಅಂತ ರೇಗಿಸ್ತಿದ್ದರು. ಹಾಗಾಗಿ ಅವರನ್ನು ಕಂಡಾಗ ನಾನು ನಾಚಿಕೊಂಡು ನಿಂತೆ.

ಅಣ್ಣಾವ್ರು ಶೂಟಿಂಗಿಗೆ ಹೊರಟಿದ್ದರು. ಆದರೂ ನಮ್ಮ ಜೊತೆ ಸಮಾಧಾನವಾಗಿ ಒಂದಿಷ್ಟು ಹೊತ್ತು ಮಾತಾಡಿದರು. ನಮ್ಮ ಹೆಸರೆಲ್ಲ ಕೇಳಿಕೊಂಡರು. ನನ್ನ ಹೆಸರು ಕೇಳಿದಾಗ ನಾನು ನುಲಿಯುತ್ತ ‘ಭಾರತಿ’ ಅಂದಿದ್ದೆ! ಅವರು ನನ್ನ ನಾಚಿಕೆ ಕಂಡು ಜೋರಾಗಿ ನಕ್ಕಿದ್ದರು. ನಮ್ಮೆಲ್ಲರ ಜೊತೆ ಅದೆಷ್ಟು ಸರಳವಾಗಿ ಬೆರೆತರೆಂದರೆ ನಮಗಂತೂ ಅದು ಕನಸೇನೋ ಅನ್ನಿಸಲು ಶುರುವಾಗಿತ್ತು.

ಆ ನಂತರ ಅವರ ಜೊತೆ ನಿಂತು ಒಂದು ಫೋಟೋ ತೆಗೆಸಿಕೊಂಡಿದ್ದೆವು. ಈಗ ಅದು ಸುನಂದಾ ಆಂಟಿಯ ಹತ್ತಿರ ಇರಬಹುದೇನೋ…
ಕಲ್ಪನಾ ಕೂಡ ಅಲ್ಲಿದ್ದರು. ಆದರೆ ಅವರು ನಮ್ಮ ಜೊತೆ ಹೆಚ್ಚು ಮಾತಾಡಲಿಲ್ಲ, ಬೆರೆಯಲೂ ಇಲ್ಲ.
ಅಣ್ಣಾವ್ರು ಮಾತ್ರ ಜನ್ಮದ ಪರಿಚಯವೇನೋ ಅನ್ನುವಂತೆ ನಮ್ಮೊಡನೆ ಮಾತಾಡಿ ಹೊರಟರು.

ಆ ನಂತರ ನಾವೂ ಅವರ ಹಿಂದೆಯೇ ಮತ್ತೆ ಶೂಟಿಂಗ್ ಸ್ಪಾಟಿಗೆ ಹೋದೆವು. ರಟ್ಟಿನ ಮನೆಯೊಳಗೆ ಇಣುಕುವ ಛಾನ್ಸ್ ಕೂಡ ಸಿಕ್ಕಿತು. ಮಲ್ಲಿಗೆ ಹೂವಿನ ಮೇಲೆ ನಡೆದಂತೆ ಮೃದುಲ ಪಾದವೂರಿ ಆ ಮನೆಯೊಳಗೆಲ್ಲ ಓಡಾಡಿದ್ದೆವು. ಅವತ್ತು ‘ಎಲ್ಲೂ ಹೋಗೋಲ್ಲ ಮಾಮ ಎಲ್ಲೂ ಹೋಗಲ್ಲ’ ಹಾಡಿನ ಚಿತ್ರೀಕರಣವಿತ್ತು. ಎಲ್ಲರೂ ಅದನ್ನು ಸ್ವಲ್ಪ ಹೊತ್ತು ನೋಡಿ ಆ ನಂತರ ಹೊರಟವರು

ಆ ನಂತರ ಸಿಕ್ಕಸಿಕ್ಕವರಲ್ಲೆಲ್ಲ ಅದದನ್ನೇ ಕೊರೆದು ಕೊರೆದು ಇಟ್ಟಿದ್ದೆವು.

mohan varnekar

ಮೋಹನ್ ವರ್ಣೇಕರ್ 

13087763_1141928515851463_3495284733676402733_nಡಾ.ರಾಜಕುಮಾರ್ ಹೇಳಿದರು – ‘ನಿಮ್ಮ ಈ ಕಲೆ ಜೀವಂತವಾಗಿದೆ!’

ಅಂದು 28-4-1986.

ಗೆಳೆಯನ ತಂಗಿಯ ಮದುವೆಗೆ ಹೋದಾಗ ಬ್ಯಾಗಿನಲ್ಲಿ ಅಂದಷ್ಟೇ ಮುಗಿಸಿದ ಅಣ್ಣಾವ್ರ ಚುಕ್ಕಿಚಿತ್ರ ಇತ್ತು. ನನ್ನ ಸುಯೋಗಕ್ಕೆ ಅಲ್ಲಿ ಅವರೂ ಬಂದಿರಬೇಕೆ!

ಮತ್ತೊಬ್ಬ ಗೆಳೆಯ ಅವರಿಗೆ ಪರಿಚಯಿಸಿದ. ಚುಕ್ಕಿಚಿತ್ರ ತೋರಿಸಿ ವಿವರಿಸಿದೆ.

ಅಚ್ಚರಿಯಿಂದ ತದೇಕಚಿತ್ತರಾಗಿ ನೋಡಿ ಬಳಿಕ ಪಕ್ಕದಲ್ಲಿದ್ದ ಮಡದಿಗೆ ತೋರಿಸಿ ‘ನೋಡು ಬರೇ ಚುಕ್ಕಿಗಳಲ್ಲಿ ಚಿತ್ರ ಮಾಡಿದ್ದಾರೆ. ಚೆನ್ನಾಗಿದೆಯಲ್ವಾ?’ ಎಂದರು. ಪಾರ್ವತಮ್ಮನವರು ಮೆಚ್ಚಿ ತಲೆಯಾಡಿಸಿದರು.’

ಸರ್,ನಿಮ್ಮ ಹಸ್ತಾಕ್ಷರ ಬೇಕು’ ಎಂದೆ. ಸಹಿ ಮಾಡಿ ‘ನನ್ನ ಅನಿಸಿಕೆ ಬರಿಲಾ?’ ಎಂದರು. ಬೇರೆ ಹಾಳೆ ಇರಲಿಲ್ಲ. ‘ಇದರ ಮೇಲೇ ಬರೀರಿ ಸರ್’ ಎಂದೆ.

‘ನಿಮ್ಮ ಈ ಕಲೆ ಜೀವಂತವಾಗಿದೆ’ ಎಂದು ಬರೆದು ನನ್ನ ಕೈಗಿತ್ತರು.

ಅಬ್ಬ, ಎಂತಹ ಸರಳತೆ ಮತ್ತು ಸಜ್ಜನಿಕೆ. ಆಮೇಲೆ ಈ ಚಿತ್ರವನ್ನು ಖರೀದಿಸಲು ಅನೇಕರು ಅಲ್ಲೇ ಮುಂದೆಬಂದರು.

ಊಹುಂ, ಯಾರಿಗೂ ಕೊಡಲಿಲ್ಲ. ಈಗ ನನಗದು ಅಮೂಲ್ಯ ಸ್ವತ್ತಾಗಿತ್ತು.

gopal wajapeyiಗೋಪಾಲ ವಾಜಪೇಯಿ 

ಡಾ. ರಾಜ್ ಕುಮಾರ್ !
ಎಲ್ಲರ ಹಾಗೆಯೇ ನನ್ನ ಮನದಲ್ಲಿಯೂ ಮನೆ ಮಾಡಿ ಕೂತ ಮುದದ ಮೂರ್ತಿ. ನಾನಿನ್ನೂ ಪಿ.ಯೂ. ಓದುತ್ತಿರುವಾಗಲೇ ನಿರ್ದೇಶಕನಾಗುವ ಕನಸು ಹೊತ್ತವ. ಆಗ ನಮಗೆ ಬಸವರಾಜ ಕಟ್ಟೀಮನಿಯವರ ‘ಮಾಡಿ ಮಾಡಿದವರು’ ಪಠ್ಯವಾಗಿತ್ತು.
ನನಗೆ ತಿಳಿದಂತೆ ಮನದಲ್ಲೇ ಅದರ ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡು ಕೂತಿದ್ದೆ. ಡಾ. ರಾಜ್ ಮತ್ತು ಕಲ್ಪನಾ ಅದರ ನಾಯಕ-ನಾಯಕಿಯರು…
ಹೂಂ, ಹುಚ್ಚು ಖೋಡಿ ಮನಸು…

ಈ ಜೀವಮಾನಡಲ್ಲೊಮ್ಮೆ ರಾಜಣ್ಣ ಅವರನ್ನು, ಅವರ ಸಮೀಪವೇ ನಿಂತು ನೋಡಬೇಕು;
ಇದು ನನ್ನ ಆಗಿನ ಮಹದಾಸೆ. ನಾನೋ ಉತ್ತರ ಕರ್ನಾಟಕದ ಹಳ್ಳಿಯವ. ಅವರೋ ಮದ್ರಾಸು ವಾಸಿ. ಅದು ಸಾಧ್ಯವಾಗದ ಮಾತು ಎಂದುಕೊಂಡು ನಿರಾಶನಾದದ್ದೂ ಇದೆ.
ಆದರೆ ಅದು ಸಾಧ್ಯವಾಗಿಬಿಟ್ಟಾಗಿನ ಆ ಸಂಭ್ರಮದ ಕ್ಷಣವನ್ನು ನಾನೆಂದೆಂದಿಗೂ ಮೆಲುಕು ಹಾಕುತ್ತಿರುತ್ತೇನೆ.

4d5bc4e452d7064781085498b2e90f90ಅದು 1971. ನನಗಿನ್ನೂ ಇಪ್ಪತ್ತು ವರ್ಷ. ಬೆಂಗಳೂರಲ್ಲಿದ್ದೆ. ನಮ್ಮ ಸೋದರಮಾವನ ಮನೆಗೆ ಸುದೂರದಲ್ಲೇ ಸುಪ್ರಸಿದ್ಧ ‘ಲಾಲ್ ಬಾಗ್.’. ಅಲ್ಲಿ ಒಂದಿಲ್ಲೊಂದು ಚಿತ್ರದ ಶೂಟಿಂಗ್ ಇದ್ದೆ ಇರುತ್ತಿತ್ತು. ಅಷ್ಟೇ ಬಿಗುವಾದ ಕಾವಲೂ ಇರುತ್ತಿತ್ತು. ಅಂಥದರಲ್ಲಿ, ಒಮ್ಮೆ ನಾನಲ್ಲಿಗೆ ಹೋದ ಸಂದರ್ಭದಲ್ಲಿ ಗಾಜಿನ ಮನೆಯ ಬಳಿಯೇ ನನ್ನ ಆರಾಧ್ಯ ಮೂರ್ತಿ ರಾಜ್ ! ಅವರೊಂದಿಗೆ ಭಾರತಿ ! ‘ಕುಲಗೌರವ’ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಸೂಟ್ ಬೂಟ್ ಧರಿಸಿದ ಸುಂದರ ಪುರುಷ ರಾಜ್ ಜತೆ ಚೆಲುವಿನ ಖಣಿ ಭಾರತಿ ! ನಾನು ನನಗರಿವಿಲ್ಲದಂತೆ ಹಾಗೆ ಮೈಮರೆತು ನೋಡುತ್ತಲೇ ಇದ್ದಾಗ ಬೆನ್ನ ಮೇಲೊಂದು ಭಾರೀ ಪೆಟ್ಟು. ಆಗ ವಿರಾಮದಲ್ಲಿದ್ದ ರಾಜಣ್ಣ ”ಛೀ, ಹಾಗೆಲ್ಲ ಹೊಡೀಬಾರ್ದೂರೀ… ನೋಡಲಿ ಬಿಡಿ…” ಅಂತ ಮತ್ತೆ ಹಾಡಿಗೆ ತುಟಿ ಚಲನೆ ಮಾಡತೊಡಗಿದರು.

ಮುಂದೊಂದು ದಿನ ಪತ್ರಿಕೆಯಲ್ಲಿ ‘ಮೈಸೂರು ರಾಜ್ಯ ಲಾಟರಿ ವಿಶೇಷ ಡ್ರಾ’ ವರನಟ ರಾಜದ್ ಕುಮಾರ ಅವರಿಂದ ಅಂತ ಒಂದು ಸುದ್ದಿ. ಅದು ಬೆಳಿಗ್ಗೆ ಹತ್ತೂವರೆಗೆ, ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ. ನಾನು ತಿಂಡಿ-ಗಿಂಡಿ ಅಂತ ಕೂಡದೇ ಓಡಿದೆ. ಅಲ್ಲಾಗಲೇ ನೂರಾರು ಜನ ಸೇರಿದ್ದರು. ನನ್ನು ಜನರ ಮಧ್ಯೆ ನುಸುಳಿಕೊಂಡು ತೀರ ಮುಂದೆ, ‘ಡ್ರಾ’ ಮಾಡುವಲ್ಲಿ ಹೋಗಿ ನಿಂತೆ.

‘ಕುಲಗೌರವ’ ಚಿತ್ರದ ಶೂಟಿಂಗ್ ಕಬ್ಬನ್ ಪಾರ್ಕಿನಲ್ಲಿ.ನಡೆದಿತ್ತು. ಹತ್ತೂವರೆಗೆ ಸರಿಯಾಗಿ ಅಣ್ಣಾವ್ರು ಅದೇ ಮೇಕಪ್, ಅದೇ ಡ್ರೆಸ್ಸು, ಅದೇ ನಗೆಯೊಂದಿಗೆ ಬಂದರು. ಬಂದವರೇ ಅಲ್ಲಿದ್ದ ಐದಾರು ಯಂತ್ರಗಳಿಂದ ಒಂದೊಂದು ನಂಬರ್ ತೆಗೆತೆಗೆದು ಒಬ್ಬರ ಕೈಲಿ ಕೊಡುತ್ತಿದ್ದರು. ಆ ಸಂದರ್ಭದಲ್ಲಿ ನಾನು ಒಮ್ಮೆ ರಾಜ್ ಹಸ್ತಸ್ಪರ್ಶವನ್ನೂ ಮಾಡಿಬಿಟ್ಟೆ… ! ಆಹಾ, ಅದೆಂಥ ರೋಮಾಂಚನ !

ನಾಲ್ಕಾರು ತಿಂಗಳುಗಳು ಉರುಳಿರಬೇಕು ಕಲಾ ಕೇಸರಿ ಉದಯ ಕುಮಾರ್ ಅವರ ನೂರನೆಯ ಚಿತ್ರ (?) ಬಿಡುಗಡೆಯಾದ ಸಂದರ್ಭ. ನಟಸಮ್ರಾಟನನ್ನು ಆನೆಯ ಮೇಲೆ ಕೂರಿಸಿ, ಬೆಂಗಳೂರಿನ ಟೌನ್ ಹಾಲ್ ತನಕ ಮೆರವಣಿಗೆಯಲ್ಲಿ ಕರೆತಂದು, ನಂತರ ಅದ್ದೂರಿ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು. ನಾನು ಎಂದಿನಂತೆ ವೇದಿಕೆಗೆ ನುಗ್ಗಿ ಹುಲಿಯ ಹಿಂದೆಯೇ ನಿಂತಿದ್ದೆ. ಆಗಿನ ಎಲ್ಲ ನಟ ನಟಿಯರೂ ಉದಯ ಕುಮಾರ್ ಅವರನ್ನು ಅಭಿನಂದಿಸಿದರು. ಹಿರಿಯರಾದ ಗುಬ್ಬಿ ವೀರಣ್ಣ ಮತ್ತು ಬಿ. ಜಯಮ್ಮ ದಂಪತಿ ಇಬ್ಬರೂ ತಮ್ಮ ಮನೆಯ ಹುಡುಗನನ್ನು ಮನದುಂಬಿ ಹರಸಿದ್ದರು. ಅಂದು ಪಾರ್ವತಮ್ಮನವರೊಂದಿಗೆ ರಾಜ್ ವೇದಿಕೆಗೆ ಬಂದಾಗ ಉದಯ ಕುಮಾರ್ ಅವರು ಅಕ್ಷರಶಃ ಬಿಕ್ಕಿ ಬಿಕ್ಕಿ ಅತ್ತರು. ಆ ಸಂದರ್ಭದಲ್ಲಿ ಮತ್ತೆ ಅಣ್ಣಾವ್ರನ್ನು ಹತ್ತಿರದಿಂದ ನೋಡುವ ಸೌಭಾಗ್ಯ.

1992ರ ವೇಳೆಗಾಗಲೇ ನಾನು ಒಂದೆರಡು ಚಿತ್ರಗಳಿಗೆ ಸಂಭಾಷಣೆ ಬರೆದಾಗಿತ್ತು. ಹುಬ್ಬಳ್ಳಿಯಲ್ಲಿ ‘ಆಕಸ್ಮಿಕ’ ಚಿತ್ರೀಕರಣ. ಗೆಳೆಯ ನಾಗಾಭರಣ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ನನ್ನನ್ನು ಜತೆಗಿರು ಎಂದಿದ್ದ. ಆಗ ಮತ್ತೊಮ್ಮೆ ಅಣ್ಣಾವ್ರ ಸಮೆಪ ದರ್ಶನಯೋಗ ! ನಾಗಾಭರಣ ನನ್ನನ್ನು ಅವರಿಗೆ ಪರಿಚಯಿಸಿದ. ಆಗ ನೋಡಬೇಕಿತ್ತು ಅವರ ಹಿಗ್ಗಿದ ಕಣ್ಣುಗಳನ್ನು..,

‍ಲೇಖಕರು admin

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: