’ಪ್ರಾದೇಶಿಕ ಪಕ್ಷಗಳು ಈ ಸಮಸ್ಯೆಗಳನ್ನು ಬಗೆಹರಿಸಬಹುದೆ?’ ಜಿ ಪಿ ಬಸವರಾಜು ಕೇಳ್ತಾರೆ


ಜಿ ಪಿ ಬಸವರಾಜು

ನೂರಕ್ಕೆ ನೂರರಷ್ಟು ಅಕ್ಷರವಂತರನ್ನು ಪಡೆದ ಕೇರಳದಲ್ಲಿ ಯಾವುದೇ ಚುನಾವಣೆ ನಡೆದರೂ ಮತದಾನದ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆದಿರುವ ಮತದಾನದ ಪ್ರಮಾಣ ಶೇ 74. ಕೇರಳದ ಉತ್ತರ ತುದಿಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಅಲ್ಲಿ ಶೇ 78 ರಷ್ಟು ಮತದಾನ ನಡೆದಿದೆ. ಇದಕ್ಕೆ ಕಾರಣವೂ ಇದೆ. ಇದು ಕರ್ನಾಟಕದ ಗಡಿಜಿಲ್ಲೆ. ಹಾಗೆಂದು ಹೇಳಿದರೆ ಕಾಸರಗೋಡು ಕನ್ನಡಿಗರಿಗೆ ತುಂಬ ನೋವಾಗುತ್ತದೆ. ಯಾಕೆಂದರೆ ಅವರು ಈಗಲೂ ತಮ್ಮನ್ನು ಕರ್ನಾಟಕದವರೆಂದೇ ಭಾವಿಸಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆಯಾದ ದಿನದಿಂದಲೂ ತಾವು ಕರ್ನಾಟಕದವರೇ ಎಂದು ಭಾವಿಸಿರುವ ಈ ಭಾಗದ ಕನ್ನಡಿಗರು, ಇವತ್ತಿಗೂ ತಮ್ಮ ಹೋರಾಟದ ಕಿಚ್ಚನ್ನು ಉಳಿಸಿಕೊಂಡೇ ಬಂದವರು. ಮಹಾಜನ ಆಯೋಗದ ವರದಿ ಇನ್ನೂ ಜಾರಿಯಾಗಬೇಕಾದ ಅಗತ್ಯವನ್ನು ಉಳಿಸಿಕೊಂಡೇ ಇದೇ ಎಂದು ಅವರು ಭಾವಿಸುತ್ತಾರೆ. ‘ಇದು ಮುಗಿದ ಅಧ್ಯಾಯ’ ಎಂದು ಯಾರೇ ಹೇಳಿದರೂ ಕಾಸರಗೋಡು ಕನ್ನಡಿಗರಿಗೆ ನೋವಾಗುತ್ತದೆ, ಇಲ್ಲವೇ ಸಿಟ್ಟು ನೆತ್ತಿಗೇರುತ್ತದೆ.
1957 ರಲ್ಲಿ ಎಂ. ಉಮೇಶರಾವ್ ಕರ್ನಾಟಕ ಸಮಿತಿಯ ಅಭ್ಯರ್ಥಿಯಾಗಿ ಕೇರಳ ವಿಧಾನ ಸಭೆಗೆ ಈ ಭಾಗದಿಂದ ಅವಿರೋಧವಾಗಿ ಆಯ್ಕೆಯಾದದ್ದು ಕಾಸರಗೋಡು ಕನ್ನಡಿಗರೆಲ್ಲ ಒಂದು ಎಂಬ ಭಾವನಾತ್ಮಕ ಕಾರಣಕ್ಕಾಗಿಯೇ. ಮುಂದೆ 1960 ಮತ್ತು 1965ರಲ್ಲಿ ಈ ಜಾಗವನ್ನು ತುಂಬಿದವರು ಕಳ್ಳಿಗೆ ಮಹಾಬಲ ಭಂಡಾರಿ. 1967 ರಲ್ಲಿ ಮಂಜೇಶ್ವರದಿಂದ ಕಳ್ಳಿಗೆ ಮತ್ತು ಕಾಸರಗೋಡಿನಿಂದ ಕುಣಿ ಕುಳ್ಳಾಯ ಅವರು ಆಯ್ಕೆಯಾದದ್ದೂ ಕನ್ನಡದ ಧ್ವನಿಯಾಗಿಯೇ. ನ್ಯಾಯಬದ್ಧವಾಗಿ ತಾವು ಇರಬೇಕಾದದ್ದು ಕರ್ನಾಟಕದಲ್ಲಿಯೇ ಹೊರತು ಕೇರಳದಲ್ಲಿ ಅಲ್ಲ ಎಂಬ ಭಾವನೆ ಇಲ್ಲಿಯ ಕನ್ನಡಿಗರನ್ನು ಒಂದು ಶಕ್ತಿಯಾಗಿ ಹಿಡಿದಿಟ್ಟಿದೆ. ಈ ಭಾವನಾತ್ಮಕ ಅಂಶ ಇನ್ನೆಷ್ಟು ಕಾಲ ಉಳಿದುಕೊಳ್ಳುವುದೋ ಹೇಳುವುದು ಕಷ್ಟ.
ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಭಾಗವಾಗಿದ್ದ ಈ ಕಾಸರಗೋಡು ಕರ್ನಾಟಕಕ್ಕೆ ಸೇರುವ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಆದರೆ ಅನೇಕ ತಂತ್ರಗಳ ಮತ್ತು ರಾಜಕೀಯ ಹುನ್ನಾರಗಳ ಪರಿಣಾಮವಾಗಿ ಕಾಸರಗೋಡು ಕರ್ನಾಟಕದ ಕೈಬಿಟ್ಟು ಹೋಯಿತು. ಇದೊಂದು ನೋವಾಗಿ, ಒಳಗುದಿಯಾಗಿ, ಮರೆಯಲಾಗದ ಗಾಯವಾಗಿ ಈ ಭಾಗದ ಕನ್ನಡಿಗರಲ್ಲಿ ಉಳಿದುಕೊಂಡುಬಿಟ್ಟಿದೆ. ಈ ಗಾಯವನ್ನು ಎಂದೋ ಮಾಯುವಂತೆ ಮಾಡಬಹುದಾಗಿತ್ತು. ಆದರೆ ಕೇರಳ ಮತ್ತು ಕರ್ನಾಟಕ ಸರ್ಕಾರಗಳ ನಡೆ ಅಂಥದನ್ನು ಮಾಡಲಿಲ್ಲ. ಗಡಿನಾಡ ಕನ್ನಡಿಗರು ಎಂಬ ಪಟ್ಟವನ್ನು ಇವರಿಗೆ ಕಟ್ಟಿದ ಕರ್ನಾಟಕ ಸಣ್ಣ ಪುಟ್ಟ ಸವಲತ್ತುಗಳನ್ನು ಆಗಾಗ ಕೊಡುವುದರ ಮೂಲಕ ಇವರ ಮೂಗಿಗೆ ತುಪ್ಪ ಸವರುತ್ತದೆಯೇ ಹೊರತು, ನಿಜವಾದ ನೋವು ಎಲ್ಲಿದೆ, ಇದಕ್ಕೇನು ಪರಿಹಾರ ಎಂದು ಗಂಭೀರವಾಗಿ ಚಿಂತಿಸುವುದಿಲ್ಲ.
ಅತ್ತ ಕೇರಳ ಸರ್ಕಾರವೂ ಇವರನ್ನು ತನ್ನವರೆಂದು ನೋಡುವ ಉದಾರತೆಯನ್ನು ತೋರಿಸುತ್ತಿಲ್ಲ. ಕೇರಳ ಮಾತ್ರವಲ್ಲ, ಯಾವುದೇ ಗಡಿಭಾಗದಲ್ಲಿರುವ ಕನ್ನಡಿಗರಿಗೆ ಇಂಥ ಸಮಸ್ಯೆಗಳಿರುತ್ತವೆ. ಕನ್ನಡಿಗರಾಗಿ ಇವರು ಕರ್ನಾಟಕದ ಜೊತೆ ಬದುಕುವಂತಿದ್ದರೆ, ಈ ರೀತಿಯ ಸಮಸ್ಯೆಗಳು ಇರುವುದಿಲ್ಲ. ಆದರೆ ಇನ್ನೊಂದು ರಾಜ್ಯಕ್ಕೆ ಸೇರಿದ ಕೂಡಲೇ ಗಡಿನಾಡ ಕನ್ನಡಿಗರು ಭಾಷಾ ಅಲ್ಪಸಂಖ್ಯಾತರಾಗುತ್ತಾರೆ. ಭಾಷಾ ಅಲ್ಪಸಂಖ್ಯತರಿಗೆ ಸಂವಿಧಾನ ನೀಡಿರುವ ಹಕ್ಕುಗಳೇನೋ ಇವೆ. ಆದರೆ ಇವುಗಳ ಜಾರಿಯಲ್ಲಿ ಪ್ರಾಮಾಣಿಕ ನಡೆ ಇರುವುದಿಲ್ಲ. ಇದನ್ನು ಪ್ರಶ್ನಿಸುವಂತೆಯೂ ಇರುವುದಿಲ್ಲ.
ಕಾಸರಗೋಡು ಕೇರಳದಲ್ಲಿರುವ ಕಾರಣ ಅಲ್ಲಿನ ಕನ್ನಡಿಗರು ರಾಜ್ಯಭಾಷೆಯಾದ ಮಲೆಯಾಳಂನ ಯಜಮಾನಿಕೆಯನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಉದ್ಯೋಗ, ಶಿಕ್ಷಣ, ಆಡಳಿತ, ವ್ಯವಹಾರ ಹೀಗೆ ಎಲ್ಲೆಲ್ಲಿಯೂ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಇವರನ್ನು ನೊಡಲಾಗುತ್ತದೆ. ಈಗ ಆಗಿರುವುದು ಮತ್ತು ಆಗುತ್ತಿರುವುದೂ ಇದೇ. ಕನ್ನಡ ಶಾಲೆಗಳು ನಿಧಾನಕ್ಕೆ ಈ ಭಾಗದಲ್ಲಿ ಕಣ್ಮುಚ್ಚುತ್ತಿವೆ; ಕನ್ನಡ ಪಠ್ಯಗಳ ಸ್ಥಿತಿಯೂ ಉತ್ತಮವಾಗಿಲ್ಲ. ಸಕಾಲದಲ್ಲಿ ಕನ್ನಡ ಪಠ್ಯಪುಸ್ತಕಗಳ ಪೂರೈಕೆಯೂ ಆಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳು, ಲೋಕಸೇವಾ ಆಯೋಗ ಇತ್ಯಾದಿ ಬಗೆಯ ಪರೀಕ್ಷೆಗಳು ಕನ್ನಡದಲ್ಲಿ ನಡೆಯುವ ಅವಕಾಶವಿದ್ದರೂ ಮಲೆಯಾಳಂನಲ್ಲಿ ಉತ್ತರ ಬರೆಯುವ ಅವಕಾಶವನ್ನು ಒದಗಿಸಿಕೊಡುತ್ತವೆ; ಕನ್ನಡವನ್ನು ಕಡೆಗಣಿಸುತ್ತವೆ.

ಈ ಭಾಗದಲ್ಲಿ ಚಾಲ್ತಿಯಲ್ಲಿರುವ ಸರ್ಕಾರೀ ಆಡಳಿತದ ಭಾಷೆ ಕನ್ನಡವನ್ನು ಗೌರವಿಸುವುದಿಲ್ಲ. ಕನ್ನಡಗೊತ್ತಿರುವವರು ಇಂಥ ಕಡೆಗಳಲ್ಲಿ ಸರ್ಕಾರಿ ಸೇವೆಯಲ್ಲಿರಬೇಕು ಎಂಬುದು ತತ್ವ ಮಾತ್ರ. ಮಲೆಯಾಳಿಗಳು ಈ ಸೇವಾ ಜಾಗಕ್ಕೆ ಬಂದರೆ ಅವರು ಕನ್ನಡವನ್ನು ಕಲಿಯಬೇಕಾಗುತ್ತದೆ. ಆದರೆ ಇಲ್ಲಿಗೆ ಬರುವ ಮಲೆಯಾಳಿಗಳು ಕನ್ನಡ ಕಲಿಯುವುದಿಲ್ಲ. ಸರ್ಕಾರ ಅದನ್ನೇನೂ ಕಡ್ಡಾಯ ಮಾಡುವುದಿಲ್ಲ. ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆಯೂ ಇರುವುದಿಲ್ಲ. ವೃತ್ತಿ ಶಿಕ್ಷಣದಲ್ಲಿಯೂ ಇದೇ ರೀತಿಯ ಅನ್ಯಾಯ ನಡೆಯುತ್ತದೆ. ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಇಂಥ ಪರಿಸ್ಥಿತಿಯನ್ನು ಗಮನಿಸುವುದೇ ಇಲ್ಲ. ಪಕ್ಷ ಯಾವುದೇ ಇರಲಿ, ಆಡಳಿತ ನಡೆಸುವವರಿಗೆ ಇಂಥ ಸಂಗತಿಗಳ ಬಗ್ಗೆ ಕಾಳಜಿ ಕಡಿಮೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮೊಸಳೆ ಕಣ್ಣೀರನ್ನು ಎಲ್ಲ ಪಕ್ಷಗಳೂ ಸುರಿಸುತ್ತವೆ. ನಿಜವಾದ ಕಾಳಜಿಯನ್ನು ಯಾರೂ ತೋರಿಸುವುದಿಲ್ಲ. ಗಡಿನಾಡಲ್ಲಿರುವ ಬಹುಪಾಲು ಜನರ ಈ ನೋವುಗಳು ಇದೇ ಮಾದರಿಯಲ್ಲಿರುತ್ತವೆ.
ಹಾಗಾದರೆ ಇಂಥ ಸಮಸ್ಯೆಗಳಿಗೆ ಪರಿಹಾರವೇನು? ಜನರೇ ಪರಿಹಾರವನ್ನು ಚಿಂತಿಸಬೇಕು. ಪ್ರಾದೇಶಿಕ ಆಶಯಗಳನ್ನು ಗುರಿಯಾಗಿಟ್ಟುಕೊಂಡ, ಪ್ರಾದೇಶಿಕ ಸಮಸ್ಯೆಗಳನ್ನು ಪರಹರಿಸುವಲ್ಲಿ ಕಾಳಜಿತೋರುವ ಪಕ್ಷಗಳನ್ನು ಜನ ಹುಟ್ಟುಹಾಕಬೇಕು. ಇದು ಹೊಸದೇನೂ ಅಲ್ಲ. ತಮಿಳುನಾಡು ಇಂಥ ಪ್ರಯೋಗಗಳನ್ನು ಮಾಡಿದೆ. ಇವತ್ತಿಗೂ ಅಲ್ಲಿ ರಾಷ್ಟ್ರೀಯ ಪಕ್ಷಗಳ ಅಬ್ಬರ ಕಡಿಮೆ. ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸಿ ಅಲ್ಲಿ ರಾಜಕೀಯ ದಾಳಗಳನ್ನು ಉರುಳಿಸಲು ಬರುವುದಿಲ್ಲ. ಈ ಕಾರಣಕ್ಕಾಗಿಯೇ ತಮಿಳ್ ನಾಡು ತನ್ನ ಹಿಡಿತವನ್ನು ಕೇಂದ್ರದಲ್ಲಿ ಇಟ್ಟುಕೊಂಡಿದೆ. ಪ್ರಾದೇಶಿಕ ಆಶಯಗಳಿಗೆ ಧಕ್ಕೆಬಂದ ಕೂಡಲೇ ಈ ಪಕ್ಷಗಳು ಸಿಡಿದೇಳುತ್ತವೆ. ಕೇಂದ್ರ ಸರ್ಕಾರವನ್ನು ಬಗ್ಗಿಸುವ ಹಂತಕ್ಕೂ ಹೋಗುತ್ತವೆ. ತಮ್ಮ ಭಾಷೆ, ಸಂಸ್ಕೃತಿ, ನೆಲ, ಜಲ, ಸ್ಥಳೀಯ ಸಮಸ್ಯೆಗಳು ಎದುರಾದಾಗ ಅವನ್ನು ಪ್ರಾದೇಶಿಕ ಪಕ್ಷಗಳು ಗಮನಿಸಲೇ ಬೇಕಾಗುತ್ತದೆ. ಇಲ್ಲವಾದರೆ ಅಂಥ ಪಕ್ಷಗಳು ರಾಜಕೀಯವಾಗಿ ಉಸಿರಾಡುವುದೇ ಕಷ್ಟವಾಗುತ್ತದೆ.
ತಮಿಳ್ ನಾಡಿನಲ್ಲಿ ಆಗಿರುವುದು ಇದೇ. ಈ ಪ್ರಯೋಗವನ್ನು ಆಂದ್ರಪ್ರದೇಶದಲ್ಲಿ ಸಿನಿಮಾ ನಟ ಎನ್ಟಿಆರ್ ಯಶಸ್ವಿಯಾಗಿ ಮಾಡಿ ತೋರಿಸಿದರು. ಈಗಲೂ ಆಂಧ್ರದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿಯೇ ಇವೆ. ಈ ಬಾರಿಯ ಚುನಾವಣೆಯಲ್ಲಂತೂ ಅಲ್ಲಿ ರಾಷ್ಟ್ರೀಯ ಪಕ್ಷಗಳೇ ಮಂಕಾಗಿವೆ. ಒಡಿಶ್ಶದಲ್ಲಂತೂ ಬಿಜು ಜನತಾದಳದ್ದೇ ಪ್ರಾಬಲ್ಯ. ಪಂಜಾಬ್ ನಲ್ಲಿ ಅಕಾಲಿಗಳನ್ನು ಪೂರ್ಣವಾಗಿ ಕಡೆಗಣಿಸಲು ಬರುವುದೇ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿ ತಮ್ಮ ರಾಜ್ಯಕ್ಕೆ ಒಂದಿಷ್ಟು ಅನ್ಯಾಯವಾದರೂ ಸಿಡಿದೇಳುತ್ತಾರೆ. ಕರ್ನಾಟಕದಲ್ಲಿ ಮಾತ್ರ ಪ್ರಾದೇಶಿಕ ಪಕ್ಷಗಳು ಅಂಥ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳು ಇದ್ದರೆ ಗಡಿನಾಡ ಜನರ ನೋವು, ಸಂಕಷ್ಟಗಳು ಅರ್ಥವಾಗುತ್ತವೆ. ಅವರ ಸಮಸ್ಯೆಗಳ ಪರಿಹಾರವೂ ಕಷ್ಟವಾಗಲಾರದು.
ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆ ಹೆಚ್ಚುವುದು ಅತ್ಯಗತ್ಯ. ಇಲ್ಲವಾದರೆ ರಾಷ್ಟ್ರೀಯ ಪಕ್ಷಗಳು ಮನಬಂದಂತೆ ನಡೆದುಕೊಳ್ಳಲು ಆರಂಭಿಸುತ್ತವೆ. ಈ ಪಕ್ಷಗಳ ಮೇಲೆ ನಿಯಂತ್ರಣವೇ ಇಲ್ಲವಾಗುತ್ತದೆ. ವಿಕೇಂದ್ರೀಕರಣ ಎನ್ನುವುದು ಎಲ್ಲ ದೃಷ್ಟಿಯಿಂದಲೂ ಹಿತಕರವಾದದ್ದೇ. ರಾಜಕೀಯ ಚಿಂತನೆ ಹೆಚ್ಚು ಅರ್ಥವನ್ನು ಪಡೆದುಕೊಳ್ಳಬೇಕಾದರೆ, ರಾಜಕೀಯ ಪಕ್ಷಗಳು ಹೆಚ್ಚು ಪ್ರಜಾಸತ್ತಾತ್ಮಕವಾಗಿ ಕೆಲಸಮಾಡಬೇಕಾದರೆ ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಬೇಕು.
ಗಡಿಭಾಗದ ಜನರೆಂದರೆ ಅಲ್ಲಿ ಹಲವು ಭಾಷೆಗಳು, ಹಲವು ಸಂಸ್ಕೃತಿಗಳು ಜೀವಂತವಾಗಿರುತ್ತವೆ. ಅಲ್ಲಿ ಸಹಬಾಳ್ವೆ ಎನ್ನುವುದು ಅನಿವಾರ್ಯವಾಗಿರುತ್ತದೆ. ಕಾಸರಗೋಡನ್ನು ನೋಡಿದರೂ ಇದು ಸ್ಪಷ್ಟವಾಗುತ್ತದೆ. ಈ ಭಾಗದಲ್ಲಿ ಕನ್ನಡವಲ್ಲದೆ ಕೊಂಕಣಿ, ತುಳು, ಹವ್ಯಕ, ಮಲಯಾಳ, ಕರಾಡ ಇತ್ಯಾದಿ ಭಾಷೆಗಳಿವೆ; ಈ ಭಾಷೆಗಳಿಗೆ ಅನುಗುಣವಾಗಿ ಅನೇಕ ಸಂಸ್ಕೃತಿಗಳೂ ಇಲ್ಲಿ ಜೀವಂತವಾಗಿವೆ. ಈ ನಿಜವನ್ನು ಸರ್ಕಾರಗಳು ಅರಿಯಬೇಕು ಮತ್ತು ಗೌರವಿಸಬೇಕು. ಭಾಷೆ, ಸಂಸ್ಕೃತಿ, ಸಮುದಾಯಗಳ ವಿಷಯದಲ್ಲಿ ಸಣ್ಣದು, ದೊಡ್ಡದು ಎಂಬ ಭೇದ ಇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಮುಖ್ಯ. ಇವುಗಳನ್ನು ಗೌರವಿಸಬೇಕಾದದ್ದು ಸರ್ಕಾರದ ಹೊಣೆ. ಇಲ್ಲವಾದರೆ ಗಡಿ ಭಾಗದ ಜನ ನಿರಂತರ ನೋವನ್ನು ಅನುಭವಿಸುತ್ತ ನವೆಯಬೇಕಾಗುತ್ತದೆ. ಇಂಥ ಪರಿಸ್ಥಿತಿ ಯಾವುದೇ ಸಮಾಜಕ್ಕೂ ಒಳಿತನ್ನು ಮಾಡುವುದಿಲ್ಲ. ಯಾವುದೇ ಸರ್ಕಾರಕ್ಕೂ ಗೌರವ ತರುವುದಿಲ್ಲ.
 

‍ಲೇಖಕರು avadhi

April 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. M.A.Sriranga

    ಬಸವರಾಜ್ ಅವರಿಗೆ– ಕಾಸರಗೋಡಿನ ಕನ್ನಡಿಗರಿಗೆ ಕೇರಳ ಸರ್ಕಾರದ ಮಲತಾಯಿ ಧೋರಣೆಯಿಂದ ಆಗುತ್ತಿರುವ ನೋವಿಗೆ,ಅನ್ಯಾಯಕ್ಕೆ ನಮಗೆ ದುಃಖವಾಗುವುದು ಸಹಜ. ಇದರಲ್ಲಿ ಎರಡು ಮಾತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ” ರಾಜಕೀಯವಾಗಿ “ಅಸ್ತಿತ್ವಕ್ಕೆ ಬರುವುದು, ರಾಷ್ಟ್ರೀಯ ಪಕ್ಷಗಳ ಮೇಲೆ ಪ್ರಭಾವ ಬೀರುವುದು ಸ್ವಲ್ಪ ಕಷ್ಟವೇ. ಏಕೆಂದರೆ ಕರ್ನಾಟಕದ ಮುಂದುವರಿದ ಜಿಲ್ಲೆಗಳಲ್ಲಿ (ಹುಬ್ಬಳ್ಳಿ-ಧಾರವಾಡ , ಮಂಗಳೂರು, ಬೆಳಗಾವಿ, ಮೈಸೂರು) ಭಾರತದ ಸರಿ ಸುಮಾರು ಎಲ್ಲಾ ರಾಜ್ಯಗಳ ಜನರು ಸಣ್ಣಪುಟ್ಟ ಕೆಲಸಗಳಿಂದ ಹಿಡಿದು white -collar ಹುದ್ದೆಗಳ ತನಕ ವಾಸವಾಗಿದ್ದಾರೆ. ಇನ್ನು ಬೆಂಗಳೂರಂತೂ ಮೆಟ್ರೋ ಪಾಲಿಟಿನ್ ಸಿಟಿ ಆಗಿದೆ; ಮಿನಿ ಭಾರತವೇ ಆಗಿ ಹೋಗಿದೆ. ಕನ್ನಡಿಗರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಹೊರಟರೆ ನಮ್ಮವರೇ ನಮ್ಮ ಕಾಲೆಳೆಯುತ್ತಾರೆ. ಇನ್ನೊಂದು ಕಡೆಯಿಂದ ಇದರ ಪರಿಣಾಮ ಇತರ ರಾಜ್ಯಗಳಲ್ಲಿ ನೆಲೆಸಿರುವ ನಮ್ಮ ಕನ್ನಡಿಗರ ಮೇಲೆ ಆಗುತ್ತದೆ. ಇನ್ನು ರಾಜ್ಯದಲ್ಲಿ ನಮ್ಮನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷಗಳಿಗೆ ಅಲ್ಪ ಸ್ವಲ್ಪ ಮಾತ್ರ ಇದು “ಕೇವಲ ಕನ್ನಡಿಗರಿಗೆ” ಎಂದು ಸ್ವಾತಂತ್ರ್ಯವಹಿಸಿ ಮಾಡಬಹುದಾದ ಕೆಲಸವಿದೆ ಅಷ್ಟೇ. ಏಕೆಂದರೆ ಅವರು ದಿಲ್ಲಿಯ ಕೇಂದ್ರ ಸರ್ಕಾರವನ್ನು ಎದುರು ಹಾಕಿಕೊಳ್ಳುವ ಹಾಗಿಲ್ಲವಲ್ಲ!! ಒಂದುವೇಳೆ ಸ್ವಾಂತಂತ್ರ್ಯ ಬಂದ ಹೊಸತರಲ್ಲೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬಂದು ಅಧಿಕಾರಗಳಿಸಿದ್ದರೆ ಮತ್ತು ಅದು ಈಗಲೂ ಮುಂದುವರೆದುಕೊಂಡು ಬಂದಿದ್ದರೆ ಕೇಂದ್ರದಲ್ಲಿ ನಮಗೂ ಒಂದು voice ಇರುತ್ತಿತ್ತು. ಅದಾಗಲಿಲ್ಲ. ಹೀಗಾಗಿ ನಾವೀಗ his masters voice ಆಗಿಹೊಗಿದ್ದೇವೆ. ಕಾಸರಗೋಡಿಗೆ ನಾವು ಪಟ್ಟು ಹಿಡಿದರೆ ಬೆಳಗಾಂ ಅನ್ನು ಕೈ ಬಿಡಬೇಕಾಗುತ್ತದಲ್ಲ. ಮಹಾರಾಷ್ಟ್ರದವರು ಬಿಡುತ್ತಾರೆಯೇ? ಈ ಧರ್ಮ ಸಂಕಟವೂ ಒಂದಿದೆ –ಎಂ ಎ ಶ್ರೀರಂಗ ಬೆಂಗಳೂರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: