ಪ್ರಸಾದ ಶೆಣೈ ಆರ್ ಕೆ
ಒಂದು ಬೆಳಗು ಬೇಗನೆದ್ದು ಉದುರುತ್ತಿರುವ ಇಬ್ಬನಿಯ ಸದ್ದನ್ನೊಮ್ಮೆ ಆಲಿಸುತ್ತಾ ಕೂತುಬಿಡಿ
ಸೂರ್ಯ ಮೂಡುವ ಮೊದಲು ದಿಗಂತ ಬಿರಿಯುದನ್ನೊಮ್ಮೆ ನೋಡಿ ಬಿಡಿ, ನೀವು ತುಂಬಿಕೊಳ್ಳುತ್ತೀರಿ
ಸೂರ್ಯನ ಹೊಂಗಿರಣಗಳು ಇಬ್ಬನಿಗಳಿಗೆ ಮುತ್ತು ಕೊಡುವುದನ್ನು,ಕೊಡುವುದನ್ನು, ಮತ್ತದು ಹೊಳೆಯುತ್ತ ನಾಚಿ ನೀರಾಗುವುದನ್ನು ಚೂರು ನೋಡಿ ಬಿಡಿ ಸಾಕು, ನೀವು ಬೆಳಕಾಗಿಬಿಡುತ್ತೀರಿ.
ನೀವು ಕಾಲಿಡುವ ನೆಲದಲ್ಲಿ ಇರುವೆಯ ಸಾಲೊಂದು ಉದ್ದಕ್ಕೆ ಬೆಳೆದು ಸಹಬಾಳ್ವೆಯೇ ನೋಡು ನಮ್ಮ ಸಂಬಂಧದ ಗುಟ್ಟು ಅಂತೇನೋ ಹೇಳುತ್ತಿದೆ. ಕೇಳಿ ಕೇಳಿ ಒಮ್ಮೆ ಕೇಳಿ, ನೀವು ಅರಳಿಬಿಡುತ್ತೀರಿ.
ನೀಲ ಬಾಂದಳವೀಗ ಶುಭ್ರಾತಿಶುಭ್ರವಾಗಿದೆ
ಅಲ್ಲೊಂದು ಹದ್ದು ಅಚಲತೆಯಿಂದ ಹಾರಿ ಭೂಮಿಯನ್ನೇ ಧ್ಯಾನಿಸುತ್ತಿದೆ.ಎತ್ತರಕ್ಕೇರಿದರೂ ಭೂಮಿಯನ್ನು ಮರೆಯದ ಆ ಹದ್ದು, ನಾವು ಎತ್ತರಕ್ಕೇರಿದಾಗ ನಮಗೆ ಪಾಠವಾಗುತ್ತದೆ.
ಆ ಹದ್ದನ್ನೊಮ್ಮೆ ನೋಡಿ, ತುಂಬಿಕೊಳ್ಳುತ್ತೀರಿ.
ದಾರಿಯಲ್ಲಿ ನಡಕೊಂಡು ಹೋಗುವಾಗ ಇಂದಾದರೂ ಒಮ್ಮೆ ಆಚೀಚೆ ನೋಡಿ ಬಿಡಿ. ಪುಟ್ಟ ಪೋರ ಶಾಲೆಗೆ ಹೋಗಲು ಹಠ ಹಿಡಿಯುದನ್ನು ಕಣ್ಣರಳಿಸಿ ನೋಡಿ, ಬಾಲ್ಯ ಸಿಗುತ್ತದೆ.
ಅವಳು ಕಿಟಕಿ ಸಂದಿನಲ್ಲಿ ನಿಂತು ಅವನನ್ನೇ ತುಂಬಿಕೊಂಡು ಸ್ವರ್ಗವಾಗುವುದನ್ನು ನೋಡಿ, ಯೌವ್ವನ ಸಿಗುತ್ತದೆ. ಖಂಡಿತಾ ಅರಳಿಯೇ ಬಿಡುತ್ತೀರಿ

ಇಷ್ಟು ವರುಷವಾದರೂ ಹೊಸಪ್ರೇಮ ಸಿಕ್ಕಂತೆ, ಅಜ್ಜಿಯೊಬ್ಬಳು ಅಜ್ಜನ ಭುಜವಿಡಿದು ರಸ್ತೆ ದಾಟಿಸೋದನ್ನು ನೋಡಿ, ಪ್ರೇಮ ದಿನ ಕಳೆದಂತೆ ಹೊಚ್ಚಹೊಸತಾಗುವ ಪರಿಗೆ ನೀವು ಹೊಳೆದು ಬಿಡುತ್ತೀರಿ.
ಕ್ಷಣ ಕ್ಷಣವೂ ಮೂಡುವ ಬದುಕಿನ ಸದ್ದುಗಳನ್ನು ಪ್ರೀತಿಯಿಂದ ಕೇಳಿ, ಕುಕ್ಕರ್ರು ಕೂಗುವುದು, ಯಾರೋ ನಗುವುದು, ಮತ್ಯಾರೋ ಅಳುವುದು, ಹಕ್ಕಿ, ರೈಲು, ಬಸ್ಸು, ವಿಮಾನ, ಮಳೆ, ಕೈಬಳೆ, ಅಡುಗೆ ಮನೆಗಳ ಸದ್ದಗಳನ್ನೊಮ್ಮೆ ಕೇಳಿ,ಅವೆಲ್ಲಾ ಸದ್ದುಗಳು ಕಳೆದು ಕೊನೆಗೆ ಮೌನ ಆವರಿಸುವುದನ್ನು ಸುಮ್ಮನೇ ಕೇಳಿ
ನೀವಾಗ ಸದ್ದಾಗುತ್ತೀರಿ, ಮೌನವೂ ಆಗುತ್ತೀರಿ.
ಅಪರೂಪಕ್ಕೊಮ್ಮೆ ಬೇಳೆಕಾಳು ತರಕಾರಿಗಳ ಜೊತೆ ಕಳೆದುಹೋಗಿ ಅಡುಗೆ ಮಾಡಿ, ಎಲ್ಲವೂ ಒಂದಾಗಿ ಪಾಕವಾಗುವುದನ್ನು ನೋಡಿ, ನೀವೆ ಮಾಡಿದ ಅಡುಗೆ ಹೀರಿಬಿಡಿ, ಖಂಡಿತ ನೀವು
ತುಂಬಿಕೊಳ್ಳುತ್ತೀರಿ.
ಇರುಳಲಿ ಸುರಿವ ನಕ್ಷತ್ರಗಳನ್ನು ತುಂಬಿಕೊಳ್ಳಿ, ವಿಮಾನ ಬೆಳಕು ಸೂಸುತ್ತ ಮೈಲು ಮೈಲುಗಳಾಚೆಗೆ ನೂರು ಕನಸುಗಳನ್ನು ಅದೆಲ್ಲಿಗೋ ದಾಟಿಸೋದನ್ನು ನೋಡಿ. ವಿಮಾನ ದಿಂಗಂತದಲ್ಲಿ ಕರಗಿದ ಮೇಲೆ ಕತ್ತಲನ್ನೇ ನೋಡುತ್ತ ಸ್ವಲ್ಪ ತಣ್ಣಗೇ ಕೂತುಬಿಡಿ. ನೀವು ಶಾಂತವಾಗುತ್ತೀರಿ, ಖಾಲಿಯಾಗುತ್ತೀರಿ,ಮತ್ತೆ ಮತ್ತೆ ಅರಳುತ್ತೀರಿ, ಹೊಳೆಯುತ್ತೀರಿ.






0 Comments