ಪ್ರಸನ್ನ ಸಂತೇಕಡೂರು ಓದಿದ ‘ಉಸಿರೇ ಗಾಳಿಯಾದಾಗ…’

ಕಾಯಗುಣವಳಿದು ಮಾಯಾ ಜ್ಯೋತಿಯು ವಾಯುವ ಕೂಡುವ ಮುನ್ನ

ಪ್ರಸನ್ನ ಸಂತೇಕಡೂರು

ಇತ್ತೀಚೆಗೆ ಫೇಸ್ಬುಕ್ ನಲ್ಲಿ ಕುಸುಮಬಾಲೆಯವರು ಒಂದು ಚಿತ್ರವನ್ನು ಹಂಚಿಕೊಂಡಿದ್ದರು. ಅದು ಒಬ್ಬ ವ್ಯಕ್ತಿ ಸತ್ತು ಹೋದನು ಎಂಬುದನ್ನು ಕನ್ನಡದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೇಗೆಲ್ಲಾ ಹೇಳಬಹುದು ಎಂಬುದಾಗಿತ್ತು. ಸತ್ತು ಹೋದನು, ಮರಣ ಹೊಂದಿದನು, ಹತ ನಾದನು, ಕಾಲವಾದನು, ದೇವರ ಪಾದ ಸೇರಿದನು, ವೈಕುಂಠ ವಾಸಿಯಾದನು, ಲಿಂಗೈಕ್ಯನಾದನು, ಶಿವಗಣನಾದನು, ಇತ್ತೀಚೆಗೆ ಹೋಗೆ ಹಾಕಿಸಿಕೊಂಡನು, ಗೊಟಕ್ಕಂದನು, ಮೇಲೆ ಹೋದನು ಈ ರೀತಿ ಬೇರೆ ಬೇರೆ ರೀತಿಯಲ್ಲಿ ಹೇಳಬಹುದು.

ನಾನು ಇಲ್ಲಿ ಎರಡು ಮಾತುಗಳನ್ನು ಹೇಳಲು ಹೊರಟಿರುವ ಆತ್ಮ ಚರಿತ್ರೆಯ ಹೆಸರು ‘ಉಸಿರೇ ಗಾಳಿಯಾದಾಗ…’ ಇದು ಆಂಗ್ಲ ಭಾಷೆಯಲ್ಲಿ ‘When Breath Becomes Air’ ಎಂಬ ಶೀರ್ಷಿಕೆಯಲ್ಲಿ ವಿಶ್ವದಾದ್ಯಂತ ಅಪಾರ ಜನ ಮನ್ನಣೆ ಪಡೆದಿರುವ ಪುಸ್ತಕ. ಇದರ ಮೂಲ ಲೇಖಕ ಡಾ. ಪೌಲ್ ಕಲಾನಿಧಿಯವರು. ಇದರ ಕನ್ನಡ ಅನುವಾದವನ್ನು ತುಂಬಾ ಅದ್ಭುತವಾಗಿ ಇದು ಕನ್ನಡದ್ದೇ ಕೃತಿ ಎಂಬುವಷ್ಟರ ಮಟ್ಟಿಗೆ ಭಾಷಾಂತರ ಮಾಡಿರುವವರು ಸ್ವತಃ ಲೇಖಕರಾಗಿರುವ ತುಂಬಾ ಪ್ರತಿಭಾಶಾಲಿಗಳು ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾನವ ಶಾಸ್ತ್ರದ ಸಹ ಪ್ರಾಧ್ಯಾಪಕರಾಗಿರುವ ಡಾ. ಡಿ. ಸಿ. ನಂಜುಂಡ ಅವರು.

ಪೌಲ್ ಕಲಾನಿಧಿಯವರು ನಮ್ಮ ಭಾರತೀಯ ತಮಿಳು ಮತ್ತು ತೆಲುಗು ಮೂಲದವರು. ಅಮೆರಿಕಾದಲ್ಲಿ ಜನಿಸಿದ್ದ ಡಾ. ಪೌಲ್ ಕಲಾನಿಧಿಯವರು ಸಾಹಿತ್ಯ ಮತ್ತು ವೈದ್ಯಕೀಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ನರವಿಜ್ಞಾನದ ಸರ್ಜನ್ ಆಗಿದ್ದ ಅವರು ತಮಗೆ ದುಸ್ವಪ್ನದಂತೆ ಬಂದೊದಗಿದ್ದ ಶ್ವಾಶಕೋಶದ ಕ್ಯಾನ್ಸರ್ ವಿರುದ್ಧ ಹೋರಾಡಿ ಮರಣ ಹೊಂದಿದ ನೋವಿನ ಕತೆ. ಸ್ವತಃ ಕ್ಯಾನ್ಸರ್ ರೋಗಿಗಳನ್ನು ನೋಡುತ್ತಿದ್ದ ಅವರಿಗೆ ತಾವೇ ಕ್ಯಾನ್ಸರ್ ರೋಗಿ ಎಂದು ತಿಳಿದಾಗ ಬದುಕು ತನ್ನ ಇನ್ನೊಂದು ಕರಾಳ ಮುಖವನ್ನು ತೋರಿಸಿತ್ತು.

ಸಾಹಿತ್ಯವನ್ನು ಶಾಸ್ತ್ರೀಯವಾಗಿ ಓದಿಕೊಂಡಿದ್ದ ಅವರು ತಾವು ಬದುಕಿರುವಾಗಲೇ ತಮ್ಮ ಬದುಕಿನ ನೋವಿನ ಕತೆಯನ್ನು ತಾವೇ ಬರೆದಿಡಲು ಆರಂಭಿಸಿದರು. ತಮ್ಮ ಕ್ಯಾನ್ಸರ್ ಕೊನೆಯ ಹಂತದಲ್ಲಿರುವಾಗ ಅವರಿಗೆ ವಿಷಯ ತಿಳಿಯುತ್ತದೆ. ಅವರು ಎದೆಗುಂದುವುದಿಲ್ಲ. ತಲೆ ಮೇಲೆ ಕೈಹೊತ್ತು ಕೂರುವುದಿಲ್ಲ. ಅವರ ಪತ್ನಿ ಲೂಸಿ ಕೂಡ ಸ್ವತಃ ವೈದ್ಯೆ. ಅವರ ವೈವಾಹಿಕ ಜೀವನ ಬದುಕಿನ ಹಲವು ಒತ್ತಡಗಳ ಕಾರಣಗಳಿಂದ ಮುರಿದು ಬೀಳುವ ಹಂತಕ್ಕೆ ಬಂದು ತಲುಪಿರುತ್ತದೆ. ಪತಿಯ ಕ್ಯಾನ್ಸರ್ ವಿಚಾರ ತಿಳಿದ ಲೂಸಿ, ಪೌಲ್ ರ ಕೈ ಬಿಡುವುದಿಲ್ಲ. ಅವರ ಹಾರೈಕೆಗೆ ಮುಂದಾಗುತ್ತಾರೆ. ಒಟ್ಟಿಗೆ ಬಾಳಲು ದಂಪತಿಗಳು ನಿರ್ಧರಿಸುತ್ತಾರೆ.

ಈ ಕೃತಿಯಲ್ಲಿ ಪೌಲ್ ಕ್ಯಾನ್ಸರ್ ರೋಗಿಯಾಗಿ ಸಾವಿನ ಹಿಂದಿನ ದಿನದವರೆಗೂ ತಾವು ನಡೆಸಿದ ಯುದ್ದೋಪಾದಿಯ ಅವಿರತ ಹೋರಾಟವನ್ನು ಕಾಣಬಹುದು. ಅವರು ಪಡೆದ ಚಿಕಿತ್ಸೆ ಮತ್ತು ಗಳಿಸಿದ ಅನನ್ಯ ಅನುಭವ ಹಾಗೂ ಅವರು ಬದುಕಿದ ಅಲ್ಪಾಯುಷ್ಯದ ಅರ್ಥಪೂರ್ಣ ಜೀವನವನ್ನು ಕೌತುಕವಾಗಿ ಬರೆದಿದ್ದಾರೆ. ಇದರ ಆಂಗ್ಲ ಭಾಷೆಯ ಮೂಲ ಕೃತಿಗೆ ಮುನ್ನುಡಿಯನ್ನು ಡಾ. ಅಬ್ರಹಾಂ ವರ್ಗಿಸ್ ಅವರು ಬರೆದಿದ್ದಾರೆ. ಡಾ. ನಂಜುಂಡ ಅವರು ಅನುವಾದಿಸಿರುವ ಕನ್ನಡ ಕೃತಿಗೆ ಮಂಜುನಾಥ ಡಿ. ಎಸ್. ಮತ್ತು ‘ಬದುಕು ಬದಲಿಸಿದ ಆಸ್ಟಿಯೋ ಸಾರ್ಕೋಮಾ’ ಖ್ಯಾತಿಯ ಶ್ರುತಿ. ಬಿ. ಎಸ್. ಅವರು ಬರೆದಿರುತ್ತಾರೆ.

ಕ್ಯಾನ್ಸರ್ ಕುರಿತು ಜಗತ್ತಿನಲ್ಲಿ ಹಲವಾರು ಕೃತಿಗಳು ಬಂದಿವೆ. ಅವುಗಳಲ್ಲಿ ಲಿಯೋ ಟಾಲ್ ಸ್ಟಾಯ್ ಮಹರ್ಷಿಯ ‘The Death of Ivan Ilyich’, ಅಲೆಕ್ಸಾಂಡರ್ ಸೋಲೆನಿಷ್ಠೆಯಿನ್ Cancer Ward, ಬಿ.ಎಸ್. ಜಾನ್ಸನ್ ಅವರ The Unfortunates ಮತ್ತು ಥಾಮಸ್ ನಗೆಲ್ ಅವರ Mind and Cosmos. ತುಂಬಾ ಜನಪ್ರಿಯ ಕೃತಿಗಳು. ಇನ್ನು ಕನ್ನಡದ ಲೇಖಕರಾದ ರಾವ್ ಬಹದ್ದೂರ್, ಬಿ. ಪುಟ್ಟಸ್ವಾಮಯ್ಯ, ಎಚ್. ತಿಪ್ಪೇರುದ್ರಸ್ವಾಮಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ಸೋತವರು. ಅನುಪಮಾ ನಿರಂಜನ್ ಅವರ ಕ್ಯಾನ್ಸರ್ ವಿರುದ್ಧ ಹೋರಾಟ ಹೆಮ್ಮೆಪಡುವಂತದ್ದು.

ಇತ್ತೀಚಿನ ಭಾರತಿ ಬಿ.ವಿ. ಯವರ ಸಾಸಿವೆ ತಂದವಳು ಕೃತಿ ಮತ್ತು ಶ್ರುತಿ ಅವರ ಬದುಕು ಬದಲಿಸಿದ ಆಸ್ಟಿಯೋ ಸಾರ್ಕೋಮಾ ನಾವೆಲ್ಲರೂ ಹೆಮ್ಮೆ ಪಡಬೇಕಾದ ಮತ್ತು ಹಲವರ ಬದುಕಿಗೆ ಸ್ಫೂರ್ತಿಯಾಗಿರುವ ಕೃತಿಗಳು. ಆದರೆ, ಪೌಲ್ ಅವರ ಕೃತಿ ಭಿನ್ನವಾಗಿ ನಿಲ್ಲುವುದು ಅವರೇ ಕ್ಯಾನ್ಸರ್ ವೈದ್ಯರಾಗಿ ಮತ್ತು ಕ್ಯಾನ್ಸರ್ ರೋಗಿಯಾಗಿ ಅವರ ನಿಲುವನ್ನು ಜಗತ್ತಿನ ಸಾವಿರಾರು ಜನರಿಗೆ ಸ್ಪೂರ್ತಿದಾಯಕವಾಗಿ ಬರೆದಿರುವುದರಿಂದ. ಪೌಲ್ ಅವರು ಬದುಕಿದ್ದು ಕೇವಲ ಮೂವತ್ತೆಂಟು ವರ್ಷ. ಈಗ ಈ ಕೃತಿಯೂ ಜಗತ್ತಿನ ನಲವತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿದೆ. ಜಗದ್ವಿಖ್ಯಾತ ಪುಲಿಟ್ಜರ್ ಪ್ರಶಸ್ತಿಯ ಕೊನೆಯ ಸುತ್ತಿಗೂ ಆಯ್ಕೆಯಾಗಿತ್ತು. ಖ್ಯಾತ ವಿಮರ್ಶಕ ವಿಜಯ ಶಂಕರ್ ಅವರು ಈ ಕೃತಿಯ ಬಗ್ಗೆ ಬರೆದಿದ್ದರು ಎಂದು ನೆನಪು. ಇದರ ಜೊತೆಗೆ ಖ್ಯಾತ ಲೇಖಕ ವಸುಧೇಂದ್ರ ಅವರು ವಿಜಯ ಕರ್ನಾಟಕದಲ್ಲಿ ಬರೆದಿದ್ದ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಸಾವಿನ ಕಣ್ಣಿನಲ್ಲಿ ಅಧ್ಯಾತ್ಮ
-ವಸುಧೇಂದ್ರ

ನಾನು ಇತ್ತೀಚೆಗೆ ಓದಿದ, ನನ್ನನ್ನು ತುಂಬಾ ಕಲಕಿದ ಪುಸ್ತಕ ಪೌಲ್‌ ಕಲಾನಿಧಿ ಅವರು ಬರೆದ ‘ವೆನ್‌ ಬ್ರೀದ್‌ ಬಿಕಮ್ಸ್‌ ಏರ್‌’. ಪೌಲ್‌ ಕಲಾನಿಧಿ ಭಾರತೀಯ ತಮಿಳು ಮೂಲದ, ಅಮೆರಿಕದಲ್ಲಿ ನೆಲೆಸಿರುವ ದೊಡ್ಡ ನ್ಯೂರೋ ಸರ್ಜನ್‌. ಅವನಿಗೆ ಕ್ಯಾನ್ಸರ್‌ ಬಂದುಬಿಡುತ್ತದೆ. ಸಾವಿನ ಕೊನೆಯ ಹಂತಗಳಲ್ಲಿ ಬದುಕನ್ನು ನೋಡುವ ದೃಷ್ಟಿ ಹೇಗೆ ಬದಲಾಗುತ್ತದೆ ಎಂಬುದನ್ನು ಹೇಳುತ್ತ ಹೋಗಿದ್ದಾನೆ. ಅದು ಅಪೂರ್ಣ ಪುಸ್ತಕ; ಅವನ ಸಾವಿನ ನಂತರ ಅವನ ಹೆಂಡತಿ ಅದನ್ನು ಪೂರ್ಣಗೊಳಿಸಿದ್ದಾಳೆ.

ಸಾವಿನ ಹಂತದಲ್ಲಿ ಮನುಷ್ಯ ಹೇಗೆ ಯೋಚಿಸುತ್ತಾನೆ ಅನ್ನುವುದು ಎಲ್ಲ ಕಾಲದ ವಿಶಿಷ್ಟ ಸಬ್ಜೆಕ್ಟ್. ಟಾಲ್‌ಸ್ಟಾಯ್‌ನ ‘ಡೆತ್‌ ಆಫ್‌ ಇವಾನ್‌ ಇಲ್ಯಿಚ್‌’ ಮುಂತಾದವೆಲ್ಲ ಅಂಥ ಕತೆಯೇ. ಆದರೆ ಅವೆಲ್ಲ ಕತೆಗಾರರು ಬರೆದದ್ದು. ಆದರೆ ಪೌಲ್‌ ಕಲಾನಿಧಿ ಕತೆಗಾರನಲ್ಲ; ಆತ ಡಾಕ್ಟರ್‌ ಅಷ್ಟೇ. ಸಾವು ಬಂದು ಎದುರು ನಿಂತಾಗ ಆತನ ಹೊಡೆದಾಟ, ಅದನ್ನು ಸ್ವೀಕರಿಸಿದ ರೀತಿ ಇದೆಲ್ಲ ಆತ ಬರೆದ ರೀತಿ ಎಷ್ಟು ಅದ್ಭುತವಾಗಿದೆ ಎಂದರೆ, ನನ್ನನ್ನು ಈಗಲೂ ಅದು ಹಾಂಟ್‌ ಮಾಡುತ್ತಿದೆ.

ಮನಸ್ಸು ಮಾಡಿ- ಎಲ್ಲ ಬದಲಾಗುತ್ತದೆ ಅನ್ನುವ ವ್ಯಕ್ತಿತ್ವ ವಿಕಸನದ ಮಾತೆಲ್ಲ ಇಂಥ ಅನುಭವಗಳ ಮುಂದೆ ಸಂಪೂರ್ಣ ಸೋಲುತ್ತದೆ; ಮನಸ್ಸು ಹೇಗೇ ಇದ್ದರೂ ವಾಸ್ತವ ಬದಲಾಗುವುದಿಲ್ಲ. ಬದುಕಿನ ಸಾರ್ಥಕ ಕ್ಷಣಗಳನ್ನು ಆತ ಕಾಣಲು ಬಯಸುವುದು ಒಂದು ಮಗುವನ್ನು ಸೃಷ್ಟಿಸುವ ಮೂಲಕ. ಆತ ಕೀಮೋಥೆರಪಿಗೆ ಮುನ್ನ ಸ್ಪರ್ಮ್‌ ಸ್ಟೋರ್‌ ಮಾಡಿಸಿಟ್ಟುಕೊಂಡು, ಅದರ ಮೂಲಕ ಮಗುವನ್ನು ಪಡೆದು, ಮಗುವನ್ನು ತೆಕ್ಕೆಯಲ್ಲಿ ಅಪ್ಪಿಕೊಂಡು ‘ದಿಸ್‌ ಈಸ್‌ ದ ಮೋಸ್ಟ್‌ ಬ್ಯೂಟಿಫುಲ್‌ ಮೊಮೆಂಟ್‌ ಆಫ್‌ ಮೈ ಲೈಫ್‌’ ಅನ್ನುತ್ತಾನೆ. ‘ಮುಂದೊಂದು ದಿನ ಈ ಮಗು, ನನ್ನ ತಂದೆಗೆ ನಾನು ಅತ್ಯಂತ ಸಂತೋಷದ ಕ್ಷಣವನ್ನು ಕೊಟ್ಟೆ ಎಂದು ನೆನಪಿಟ್ಟುಕೊಂಡರೆ ಸಾಕು’ ಎನ್ನುತ್ತಾನೆ. ತಾಯಿ ಮಾಡಿಕೊಟ್ಟ ದೋಸೆ- ಚಟ್ನಿಯಲ್ಲಿ ಜಗತ್ತಿನ ಬೇರೆಲ್ಲ ಸುಖಗಳನ್ನೂ ನಿವಾಳಿಸಿ ಎಸೆಯುತ್ತಾನೆ ಆತ. ಬದುಕಿನ ಬಗ್ಗೆ ಇಷ್ಟೊಂದು ಗಂಭೀರವಾಗಿ ಬರೆಯುವ ಪುಸ್ತಕಗಳು ಅಪರೂಪ. ನಮ್ಮನ್ನು ಬದುಕಿನಿಂದ ಸಾವಿನ ಮೂಲಕ ಆತ ಅಧ್ಯಾತ್ಮಕ್ಕೆ ಒಯ್ಯುತ್ತಾನೆ. ಎಲ್ಲರೂ ಇದನ್ನು ಓದಬೇಕು ಅಂತ ನಂಗೆ ಆಸೆ.

ಈ ಕೃತಿಯ ಬಗ್ಗೆ ಇಷ್ಟೆಲ್ಲಾ ಹೇಳಿದ ಮೇಲೆ ಇದರ ಶೀರ್ಷಿಕೆಯ ಬಗ್ಗೆ ಹೇಳಲೇ ಬೇಕು. ಇದರಲ್ಲಿ ಪೌಲ್ ಒಂದೆಡೆ ಬರೆಯುತ್ತಾರೆ. ಇದನ್ನು ನಂಜುಂಡ ಅವರು ಹೇಳುತ್ತಾರೆ. ‘ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಸಾಯಲೇ ಬೇಕು ಎನ್ನುವ ಆಧಾರದ ಮೇಲೆ ಹೇಳುವುದಾದರೆ ಪ್ರತಿ ಜೀವಿಯು ಸಾಯುವ ಮುನ್ನ ಒಂದು ಘನತೆ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಬೇಕು’ ಇದನ್ನು ಇದೆ ಅರ್ಥದಲ್ಲಿಯೇ ಅಲ್ಲಮ ಪ್ರಭುವು ಹನ್ನೆರಡನೇ ಶತಮಾನದಲ್ಲಿಯೇ ತುಂಬಾ ಅದ್ಭುತವಾಗಿ ಹೇಳಿದ್ದಾನೆ. ಆ ವಚನವನ್ನು ಸಂಪೂರ್ಣವಾಗಿ ಇಲ್ಲಿ ಕೊಡುತ್ತಿದ್ದೇನೆ.

ಎಣ್ಣೆ ಬೇರೆ ಬತ್ತಿ ಬೇರೆ:ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು ಮಿಗದಿರಬಾರದು
ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.

ಇಲ್ಲಿ ಅಲ್ಲಮ ಪ್ರಭುವು ಪ್ರತಿ ಜೀವಿಯು ಸಾಯುವ ಮುನ್ನ ಒಂದು ಘನತೆ ಮತ್ತು ಅರ್ಥಪೂರ್ಣ ಉನ್ನತ ಜೀವನವನ್ನು ನಡೆಸಬೇಕು ಎಂದು ಹೇಳುವುದನ್ನು ನಾವು ಕಾಣಬಹುದು. ಇದನ್ನು ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ ಎಂದು ಹೇಳುತ್ತಾನೆ. ಅಂದರೆ ನಮ್ಮ ದೇಹ ಸತ್ತು ಅಳಿದು ಹೋಗುವುದಕ್ಕಿಂತ ಮುಂಚೆ ಮಾಯಾಜ್ಯೋತಿ (ಜೀವಾತ್ಮ) ಗಾಳಿಯಲ್ಲಿ ಲೀನವಾಗುವುದಕ್ಕಿಂತ ಮುಂಚೆ ಎಂಬ ಅರ್ಥ ಬರುತ್ತದೆ. ಈ ಕೃತಿಯ ಶೀರ್ಷಿಕೆಯು ಇದನ್ನೇ ಹೇಳುವುದು.

ಇನ್ನು ಅಕ್ಕನ ಒಂದು ವಚನವು ಇದೆ ಅರ್ಥವನ್ನು ಕೊಡುತ್ತದೆ.
ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ

ಆಕಾಶ ಆಕಾಶವ ಕೂಡದ ಮುನ್ನ ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ? ಇಲ್ಲಿ ಕೂಡ ನಮ್ಮ ದೇಹವು ಪಂಚಭೂತಗಳಿಂದ ಮಾಡಲ್ಪಟ್ಟಿದ್ದು ಅದು ಪಂಚಭೂತಗಳಲ್ಲಿ ಲೀನವಾಗುವುದಕ್ಕಿಂತ ಮುಂಚೆ ದೇವರಲ್ಲಿ ನಂಬಿಕೆ ಇಟ್ಟು ಉನ್ನತವಾಗಿ ಬಾಳಿ ಎಂದು ಹೇಳುವುದನ್ನು ಕಾಣಬಹುದು. ಇಲ್ಲಿ ಒಂದು ಜೀವ ಸಾಯುವುದನ್ನು ‘ಮಾಯಾಜ್ಯೋತಿ ವಾಯುವ ಕೂಡುವ ಮುನ್ನ’ ಎಂದು ಅತೀ ಸುಂದರವಾಗಿ ವರ್ಣಿಸಲು ಬಹುದು ಎಂದು ಅಲ್ಲಮ ಎಂಬ ಮಹಾಕವಿ ತೋರಿಸಿದ್ದಾನೆ. ಅದೇ ವಾಕ್ಯವೇ ‘ಉಸಿರೇ ಗಾಳಿಯಾದಾಗ…’ ಅಥವಾ ‘when breath becomes air’ ಆಗುತ್ತದೆ. ಇಂತಹ ಒಂದು ಅದ್ಭುತವಾದ ಕೃತಿಯನ್ನು ಕನ್ನಡಿಗರ ಮುಂದೆ ಕನ್ನಡಲ್ಲಿಯೇ ಅನುವಾದಿಸಿಟ್ಟರುವ ಡಾ. ಡಿ. ಸಿ. ನಂಜುಂಡ ಅವರನ್ನು ಮತ್ತೊಮ್ಮೆ ಅಭಿನಂದಿಸಲೇಬೇಕು.

‍ಲೇಖಕರು Admin

October 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: