ಪ್ರವಾಹ ಅಂದ್ರೆ ನಮಗಿಷ್ಟ..

ನೂತನ ದೋಶೆಟ್ಟಿ
ಈ ಗಾದೆಗಳನ್ನು ಗಮನಿಸಿ.
೧)  ಉರಿಯುವ ಮನೆಯ ಗಳ ಎಳೆದರು.
೨)  ಆಗೋ ಪೂಜೆ ಆಗುತ್ತಿರಲಿ, ಊದೋ ಶಂಖ ಊದಿ ಬಿಡೋಣ.
೩)  ಅಜ್ಜಿಗೆ ಅರಿವೆಯ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ.
ಈ ಮೂರು ಗಾದೆಗಳು ಕರ್ನಾಟಕದ ಪ್ರವಾಹದ ಹಿನ್ನೆಲೆಯಲ್ಲಿ ಕನ್ನಡ ಟಿವಿ ಸುದ್ದಿ ವಾಹಿನಿಗಳ ವರ್ತನೆಗೆ ತಾಳೆ ಆಗುತ್ತಿವೆಯಲ್ಲವೆ?
ಮೊದಲ ಗಾದೆ – ಮನೆಯೊಂದು ಹೊತ್ತಿ ಉರಿಯುತ್ತಿರುವಾಗ ಇನ್ನೂ ಹೊತ್ತದೇ ಇರುವ ಗಳವನ್ನು ತನ್ನ ಮನೆಗೆ ಇರಲಿ ಎಂದು ಒಬ್ಬ ಭೂಪ ಎಳೆದುಕೊಂಡನಂತೆ.

ಇನ್ನು ಎರಡು ಹಾಗೂ ಮೂರನೇ ಗಾದೆಗಳಂತೂ ಅವರಿಗೇ ಹೇಳಿ ಮಾಡಿಸಿದಂತಿದೆ. ಅಗಾಧ ಪ್ರಮಾಣದ ನೀರು, ಮನೆ-ಮಾರು,ಜನ-ಜಾನುವಾರುಗಳು ಕೊಚ್ಚಿಕೊಂಡು ಹೋಗುತ್ತಿರುವಾಗ ಇವರಿಗೆ ತಮ್ಮ ಶಂಖ ಊದಿಬಿಡುವ ಹುಮ್ಮಸ್ಸು. ಯಾವ ನೋವು-ದುಃಖದ ಸುಳಿವಿಲ್ಲದೇ, ಮಾನವೀಯತೆಯ ನೆರಳೂ ಇಲ್ಲದೆ, ಏರು ಸ್ವರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಯ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುವ ಹೃದಯಹೀನ ವಾಹಿನಿಗಳ ವರದಿಗಾರರು, ಆಂಕರ್‌ಗಳು ಮಾಧ್ಯಮಗಳಿಗೆ ಇರಬೇಕಾದ ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಂಡು ಮಾತಾಡುತ್ತಾರೆ.
ಅಜ್ಜಿಗೆ ಅರಿವೆಯ ಚಿಂತೆ; ಮೊಮ್ಮಗಳಿಗೆ ಕಜ್ಜಾಯದ ಚಿಂತೆ- ಉಟ್ಟ ಬಟ್ಟೆಯಲ್ಲಿ ಮನೆ-ಮಾರು ತೊರೆದು ೫-೬ ದಿವಸಗಳ ಕಾಲ ಎದೆ ಮಟ್ಟದ ನೀರಿನಲ್ಲಿ ದಿನ-ರಾತ್ರಿಗಳ ಪರಿವೆಯಿಲ್ಲದೇ ಸಮಯವನ್ನು ಕಳೆದ ಸಂತ್ರಸ್ತರ ನಡುವೆ ನಿಂತು ಈ ವರದಿಗಾರರು ಆಂಕರ್ ಗಳು, ಜರಿದು ಬಿದ್ದು ಎಲ್ಲವನ್ನೂ ಆಪೋಶನ ತೆಗೆದುಕೊಂಡ ಗುಡ್ಡವನ್ನು ‘ಗುಡ್ಡದ ಭೂತ’ ಎಂದು ಪತ್ತೆದಾರಿ ಶೈಲಿಯಲ್ಲಿ ಕುತೂಹಲ ಹುಟ್ಟಿಸುವಂತೆ ಮಾತಾಡುವುದು ಅಸಹ್ಯ ಹುಟ್ಟಿಸುತ್ತದೆ.
ಇಂಥ ಮಾಧ್ಯಮಗಳ ಯಾವ ಗೊಡವೆಯೂ ಇರದ ಕಾಲದಲ್ಲೇ ನಮ್ಮ ಜನಪದರು ‘ನದೀನೇ ನೋಡದೇ ಇರೋರು ಸಮುದ್ರ ವರ್ಣನೆ ಮಾಡಿದ ಹಾಗೆ’ ಎಂಬ ಗಾದೆ ಮಾಡಿದ್ದಾರೆ. ಬೆಂಗಳೂರಂಥ ಶಹರದಲ್ಲಿ ಏಸಿ ರೂಮಿನಲ್ಲಿ ಕುಳಿತು ಪ್ರವಾಹದ ಬಗ್ಗೆ ಗುಟುರು ಹಾಕುವ ಈ ವಾಹಿನಿಗಳಿಗೆ ನದಿಯೆಂದರೆ ವಾರದ ಕೊನೆಯ ರೆಸಾರ್ಟಿನ ಮೋಜು ಮಾತ್ರವೇ? ದುಡ್ಡು ಕೊಟ್ಟು ಎಲ್ಲ ಸುಖವನ್ನೂ ಕೊಳ್ಳಬಹುದು ಎಂಬ ಭ್ರಮೆ ಹುಟ್ಟಿಸುವ ವಾತಾವರಣದಲ್ಲಿರುವ ಅವರು ನೀರಿನ ಪಾವಿತ್ರ್ಯವನ್ನಾಗಲೀ, ರೌದ್ರತೆಯನ್ನಾಗಲಿ ಅರಿಯದವರು. ಸಂತ್ರಸ್ತರ ಕಣ್ಣೀರಲ್ಲಿ ಟಿಆರ್‌ಪಿಯನ್ನು ಲೆಕ್ಕಿಸುವ ಈ ಮಂದಿಯ ಗಣಿತ ಜನತೆಗೆ ಹೊಸದೇನಲ್ಲ.
ಸರ್ಕಾರದ ಅಳಿವಿ ಉಳಿವುಗಳ ರೋಚಕತೆಯನ್ನು ಜೊಲ್ಲು ಸುರಿಸುತ್ತ ತಿಂಗಳುಗಟ್ಟಲೇ ಚಪ್ಪರಿಸಿ ಜನರಿಂದ ಛೀ..ಥೂ.. ಎನ್ನಿಸಿಕಂಡರೂ ಮುಂದೇನು ಎಂದು ಬಾಯಿ ಬಿಟ್ಟು ಕಾಯುತ್ತ ಕೂತವರಗೆ ಪ್ರವಾಹ, ಸಂತ್ರಸ್ತರ ಪರಿಸ್ಥಿತಿ ಬೋನಸ್ ಆಗಿ ಬಂದದ್ದು ವಿಧಿಯ ವಿಪರ್ಯಾಸ !
ಪಿ. ಸಾಯಿನಾಥ ಅವರು ‘ ಬರ ಅಂದ್ರೆ ನಂಗಿಷ್ಟ’  ಕೃತಿ ಬರೆದು ಬರದಲ್ಲಿ ಮೈ ಕಾಯಿಸಿಕೊಳ್ಳುವ ರಾಜಕೀಯ ಹಾಗೂ ಮಾಧ್ಯಮ ವ್ಯವಸ್ಥೆಯ ಬಗ್ಗೆ ಹೇಳಿದ್ದಾರೆ. ಇದೀಗ ಪ್ರವಾಹವೂ ಇವರಿಗೆ ಇಷ್ಟವೇ ಎಂಬುದನ್ನು ಇವರು ಲಜ್ಜೆಯಿಲ್ಲದೇ ಸಾಬೀತು ಪಡಿಸಿದ್ದಾರೆ.
 
 
 

‍ಲೇಖಕರು AdminS

August 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: