ಮಲಗಿದ್ದಾಳವಳು ನೋಯುತ್ತ..
– ಜಿ ಪಿ ಬಸವರಾಜು

ಈ ಕಪ್ಪ ಕಪ್ಪನೆ ಕರಾಳ ಕೊಳದಿಂದೆದ್ದು
ರಪ್ಪನೆ ಅಪ್ಪಳಿಸಿ, ಮುಖಮೋರೆ ನೋಡದೆ
ಬಡಿದು, ಮರೆಯಾಗಿದೆ ಕಾಣದ ಪೆಡಂಭೂತ
ಕಾಣದಿದರ ರೂಪ ಕುರೂಪ, ಚುಚ್ಚಿ ಬಗೆದ
ಹಲ್ಲುಗಳು, ಚೂಪಾದ ನಖಗಳು, ಎಲ್ಲ ಮರೆಯಾಗಿವೆ
ಮನುಷ್ಯನೊ, ಮೃಗವೋ, ಮುಖರಹಿತ ಮಾಯಾವಿಯೊ
ತಿಳಿಯದಾಗಿದೆ, ಶಾಂತವಾಗಿದೆ ಈಗ ಕರಾಳ ಕೊಳ
.
ಈಗದರ ಬಿಂಬ ಇಲ್ಲಿ, ಈ ಘೋರ ಪಾತಕದಲ್ಲಿ
ಕುಣಿಯುತ್ತಿದೆ; ಅದು ಬೆತ್ತಲೆ ಸಿಗಿದ ಈ ದೇಹದಲ್ಲಿ ಚಿಮ್ಮುತ್ತಿದೆ
ನೆತ್ತರು, ಅದರ ಉಗುರ ಗುರುತಿನ ಗಾಯಗಳ ಜ್ವಲಿಸುತ್ತಿವೆ
ಕಾಮೋತ್ಸವದ ವಿಕೃತ ಕ್ರೀಡೆಗೆ ನಡುಗಿದ ನೆಲವೀಗ ತತ್ತರಿಸಿ
ಮೌನವಾಗಿದೆ, ನೆಲದೆದೆಯ ಸದ್ದೂ ಕೇಳುತ್ತಿಲ್ಲ, ಅದು ಸ್ತಬ್ಧ
.
ಚಲಿಸುವುದಿಲ್ಲ ಈ ಜಗ, ಈ ಸೂರ್ಯ ಚಂದ್ರ ನಕ್ಷತ್ರಗಳು,
ಸುಟ್ಟು ಕರುಕಾಗಿದೆ ಬೆಳಕಿನ ಮುಖ, ಕತ್ತಲೆಯ ಆಳದಿಂದೆದ್ದು
ಬರುತ್ತಿರುವ ನರಳು, ಯಾವ ತಾಯಿ, ಯಾವ ಹೆಣ್ಣು, ಯಾವ
ಅಬಲೆ, ತೋರುತ್ತಿಲ್ಲ ಮುಖ, ಮಾತಿಲ್ಲದೆ ಮೌನವ ಸೀಳಿದ ನೋವು
ಚಾಚುತ್ತಿದೆ ಭೂಮಿಯುದ್ದಕ್ಕೆ, ಆಕಾಶದೆತ್ತರಕ್ಕೆ, ತಳವಿರದ ಪಾತಾಳಕ್ಕೆ
.
ಸುಟ್ಟವನೆ, ಸುಡುಮುಖದವನೆ, ಕೆಟ್ಟವನೆ, ಕೆಡುಗಾಲದ ಬುದ್ಧಿಯವನೆ
ನಿನ್ನೆಲ್ಲ ಅಟ್ಟಹಾಸವೆಲ್ಲ ಅಡಗಿದೆ ಕೊಳದಾಳದಲ್ಲಿ, ಕತ್ತಲೆಯ ಗರ್ಭದಲ್ಲಿ,
ಬಾ ಇಲ್ಲಿ ಬೆಳಕಿಗೆ, ನೋಡುತ್ತೇವೆ ನಿನ್ನ ಮುಖವ, ಅದರಂದ ಚಂದವ
2
ಇರಬಹುದೆ ಅದು ನಮ್ಮ ನಿಮ್ಮೊಳಗೆ-ಹೊರಗೆ ಮುಖ ಮರೆಮಾಚಿ
ಕರುಣೆ ಇಲ್ಲದ ಕಣ್ಣಿನಾಳದ ಕ್ರೌರ್ಯ ಹೊಮ್ಮಿಸಿದ ಜ್ವಾಲಾಮುಖಿಯಲ್ಲಿ
ಸುಟ್ಟವೆಷ್ಟು ದೇಹ, ನಲುಗಿದವೆಷ್ಟು ಕೋಮಲ ಭಾವ, ಹೊಸಕಿ ಹೋದವೆಷ್ಟು
ಜೀವ; ಆ ಕ್ರೌರ್ಯಕ್ಕೂ ಒಂದು ಕನ್ನಡಿಯ ಕೊಡಿ, ನೋಡಿಕೊಳ್ಳಲಿ ಅದು
ತನ್ನ ಮುಖವ, ತಿದ್ದಿಕೊಳ್ಳಲಿ ಓರೆಕೋರೆಗಳ, ಕಳೆದುಕೊಳ್ಳಲಿ ಕೋರೆ ದಾಡಿಗಳ
ಬಳಿದುಕೊಳ್ಳಲಿ ಹೊಸ ರಂಗು, ತುಂಬಿಕೊಳ್ಳಲಿ ಹೊಸ ರಾಗ, ನಮ್ಮ ನಿಮ್ಮಂತೆ
ಬರಲಿ ಬೆಳಕಿಗೆ, ನಾಚಿಕೊಳ್ಳಲಿ ಕುರೂಪಕ್ಕೆ, ಕ್ರೌರ್ಯಕ್ಕೆ, ನಿರ್ದಯ ಬೀಭತ್ಸಕ್ಕೆ
3
ಮೌನವಾಗಿ ಮಲಗಿದ್ದಾಳವಳು ಭೂಮಿಯ ಹಾಗೆ, ಎಲ್ಲವನ್ನು ಸಹಿಸಿ, ಕಣ್ಮುಚ್ಚಿ
ಬಾಯ್ಮುಚ್ಚಿ, ಅವಳೆದ್ದರೆ ನಡುಗುವುದು ಭೂಮಿ, ಸ್ಫೋಟಿಸುವುದು ಜ್ವಾಲಾಮುಖಿ
ತಲ್ಲಣಿಸುತ್ತವೆ ಮೂರು ಲೋಕ, ಕಡಲುಗಳೆದ್ದು ಕುಣಿಯುವವು, ದಿಕ್ಕುದಿಕ್ಕಿಗೆ ಜಲ
ಪ್ರಳಯ, ಅಗ್ನಿ ಪ್ರಳಯ, ವಾಯು ಪ್ರಳಯ, ಪ್ರಳಯ ಕನ್ಯೆ ಅವಳು ಜಗದ ಚೈತನ್ಯ







0 Comments