
ಮೂಲ : ಮಾಯಾ ಎಂಜಿಲೊ

ಕನ್ನಡಕ್ಕೆ : ಪ್ರಮೋದ ಮುತಾಲಿಕ
1. ಒಬ್ಬಂಟಿ
ಯೋಚಿಸುತ್ತಿದ್ದೆ ಮಲಗಿಕೊಂಡು
ನಿನ್ನೆ ರಾತ್ರಿ ಒಬ್ಬಳೇ
ನನ್ನಾತ್ಮಕ್ಕೆ ಹುಡುಕಲು ಆಸರೆಯೊಂದನು.
ನೀರಿಗೆ ಬಾಯಾರಿಕೆ ಇರದಲ್ಲಿ
ರೊಟ್ಟಿಯ ತುಂಡು ಕಲ್ಲಾಗಿರದಲ್ಲಿ.
ಹೊಳೆಯಿತೊಂದು ಸಂಗತಿ
ನಂಗೊತ್ತು, ನನ್ನ ಯೋಚನೆ ತಪ್ಪಲ್ಲ :
ಇರಬಾರದು ಯಾರೂ ಯಾವ
ಕಾರಣಕ್ಕೂ ಒಬ್ಬಂಟಿಯಾಗಿ ಇಲ್ಲಿ.

ಒಬ್ಬಂಟಿಯಾಗಿ, ಪೂರ್ತಿ
ಒಬ್ಬಂಟಿಯಾಗಿ ಯಾರೂ
ಇಲ್ಲಿರಲು ಸಾಧ್ಯವೇ ಇಲ್ಲ!
ಇದ್ದಾರೆ ಕೋಟ್ಯಾಧಿಪತಿಗಳಿಲ್ಲಿ
ಇರುವ ಹಣವನ್ನು ವ್ಯಯಿಸಲಾರದವರು,
ಓಡಾಡುತ್ತಿದ್ದಾರೆ ಅವರ ಹೆಂಡಂದಿರು
ಅಳುವ ದೆವ್ವಗಳಂತೆ. ಹಾಡುತ್ತಿದ್ದಾರೆ
ಮಕ್ಕಳು ಖೇದಕರ ಹಾಡುಗಳ.
ಇದ್ದಾರೆ ಅವರಿಗೆ ದುಂದು ವೈದ್ಯರು
ಗುಣಪಡಿಸಲು ಕಲ್ಲು ಹೃದಯಗಳ.
ಆದರೆ, ಒಬ್ಬಂಟಿಯಾಗಿ
ಪೂರ್ತಿ ಒಬ್ಬಂಟಿಯಾಗಿ ಯಾರೂ
ಇಲ್ಲಿರಲು ಸಾಧ್ಯವೇ ಇಲ್ಲ.

ಕೇಳಿದರೆ ನನ್ನನ್ನು ಲಕ್ಷ ಗೊಟ್ಟು
ಹೇಳುವೆ ನನಗೆ ಗೊತ್ತಿರುವದನು.
ಬಿರುಗಾಳಿಯ ಮೋಡಗಳು ಕಲೆಯುತ್ತಿವೆ
ಅಪ್ಪಳಿಸಲು ಕ್ಷಣಾರ್ಧದಿ
ಬಳಲುತ್ತಿದೆ ಮನುಕುಲ ಸಂಕಷ್ಟಗಳ
ಭಾರದಿ, ಕೇಳಿಸುತ್ತಿದೆ ನನಗವರ ಕೂಗು.
ಯಾರೂ ಒಬ್ಬಂಟಿಯಾಗಿ
ಇರಲು ಸಾಧ್ಯವೇ ಇಲ್ಲ.
2. ಧರ್ಮ ಗುರುಗಳಿಗೊಂದು ಮನವಿ
ಕಳಿಸಬೇಡಿ ನನ್ನನ್ನ ನಾ
ಸತ್ತಮೇಲೆ ಗುರುಗಳೆ, ಆಕಾಶದಲ್ಲಿನ
ಜನನಿಬಿಡ ವಸತಿಯೊಂದಕ್ಕೆ.
ಚಿರತೆಯಂಥ ಬೆಕ್ಕುಗಳನ್ನ
ಇಲಿಗಳೇ ತಿಂದುಹಾಕುವ ಸ್ಥಳಕ್ಕೆ.
ಭಾನುವಾರದ ತಿಂಡಿ
ಮರಳು ಮಾಂಸಗಳಿರುವೆಡೆಗೆ.

ನೋಡಿದ್ದೇನೆ ನಾ ಅಂಥ ಇಲಿಗಳು
ಕೊಲ್ಲುವದನು, ನೋಡಿದ್ದೇನೆ ನಾ
ಮರಳು ಪರ್ವತವಾಗುವದನು.
ಬೇಕು ನನಗೆ ನಿಮ್ಮಿಂದ
ಬೇರೆ ತರಹದ ಭಾನುವಾರ.
ಗುರುಗಳೇ ತೋರಿಸಬೇಡಿ
ಆಸೆ ನನಗೆ ಬಂಗಾರದ ಬೀದಿಗಳ
ಹರಿವ ಹಾಲಿನ ಹೊಳೆಗಳ.
ತ್ಯಜಿಸಿದೆ ಹಾಲನ್ನು ನಾಲ್ಕು
ವರ್ಷಕ್ಕೇ ನಾನು. ನನಗೇಕೆ
ಬೇಕು ಬಂಗಾರ ಸತ್ತ ಮೇಲೆ?

ಇರುವವು ನನ್ನ ಕನಸಿನ
ಸ್ವರ್ಗದಲಿ ಕುಟುಂಬಗಳು
ಪ್ರೀತಿ ವಿಶ್ವಾಸದಿ. ಆಗಂತುಕರೂ
ಹತ್ತಿರದವರೇ, ಇರುವದು ಸಂಗೀತ
ಎಲ್ಲೆಲ್ಲೂ. ಇರುವದು ಮಾಗುವ ಋತು.
ನೀಡಿ ಗುರುಗಳೆ ನನಗೆ ಇಂಥ
ವಸತಿಯೊಂದನ್ನ ನಾ ಸತ್ತ ಮೇಲೆ.
ಇನ್ನೇನೂ ಬೇಡ ನನಗೆ!






0 Comments