ಪ್ರಪಂಚದ ಕೊನೆಯ ರಾತ್ರಿ..

ರೇ ಬ್ರ್ಯಾಡ್ಬುರಿ

ಕನ್ನಡಕ್ಕೆ: ಪಾಲಹಳ್ಳಿ ವಿಶ್ವನಾಥ್

‘ಈ ರಾತ್ರಿಯೇ ಪ್ರಪಂಚ ಕೊನೆಯಾಗುತ್ತದೆ ಎಂದು ತಿಳಿದರೆ ಏನು ಮಾಡುತ್ತೀಯಾ?’
‘ನಾನು ಏನು ಮಾಡತೀನಿ ಅಂತ ಕೇಳ್ತಾ ಇದ್ದೀರ? ನಿಜವಾಗಲೂ?’
‘ಹೌದು, ನಿಜವಾಗಲೂ’
‘ನಾನು ಅದರ ವಿಷಯ ಯೋಚಿಸೇ ಇಲ್ಲ.’
ಅಡುಗೆ ಮನೆಯಿಂದ ಎರಡು ಲೋಟ ಕಾಫಿ ತಂದು ಮೇಜಿನ ಮೇಲೆ ಇಟ್ಟು ಪಕ್ಕ ಕುಳಿತಳು. ಒಳ್ಳೆಯ ವಾಸನೆಯ ಕಾಫಿ. ಚೆನ್ನಾಗಿದೆ ಎಂದು ವರಾಂಡದತ್ತ ನೋಡಿದ. ಅವರ ಎರಡು ಹೆಣ್ಣು ಮಕ್ಕಳೂ ವರಾಂಡದಲ್ಲಿ ಏನೋ ಆಟ ಆಡಿಕೊಳ್ಳುತ್ತಿದ್ದರು.

‘ಯೋಚಿಸುವ ಸಮಯ ಬಂದಿದೆ’
‘ನಿಜವಾಗಿಯೂ?’ ಎಂದು ಹೆಂಡತಿ ಕೇಳಿದಳು
‘ಹೌದು ‘ ಎಂದು ತಲೆಯಾಡಿಸಿದ
‘ಏನು ಯುದ್ಧವೇ?’
‘ಇಲ್ಲ’
‘ಏನಾದರೂ ಬಾಂಬಾ? ‘
‘ಇಲ್ಲ’
‘ಸಾಂಕ್ರಾಮಿಕ ರೋಗವೇ?’
‘ಇಲ್ಲ’
‘ಮತ್ತೆ?
‘ಅವು ಯಾವುದೂ ಅಲ್ಲ ! ಎಲ್ಲೋ ಒಂದು ಪುಸ್ತಕ ಕೊನೆಯಾಗುವಂತೆ ಅಂತ ಹೇಳಬಹುದೇನೋ ಅಷ್ಟೇ ‘ಕಾಫಿ ಹೀರುತ್ತಾ ದೂರ ಎಲ್ಲೋ ನೋಡುತ್ತಾ ಉತ್ತರಿಸಿದ.

‘ನನಗೆ ಅರ್ಥ ಆಗ್ತಾ ಇಲ್ಲ’
‘ನನಗೂನೂ ಪೂರ್ತಿ ಗೊತ್ತಾಗಿಲ್ಲ. ಏನೋ ಒಂದು ತರಹ ಅನಿಸಿಕೆ. ಭಯಾನೂ ಇದೆ. ಭಯಾನೂ ಇಲ್ಲ. ಆದರೂ ಏನೋ ಶಾಂತಿ ಇದೆ ‘ಆಟ ಆಡುತ್ತಿದ್ದ ಮಕ್ಕಳತ್ತ ನೋಡಿದ.

‘ನಿನಗೆ ಹೇಳಲಿಲ್ಲ. 4 ದಿನಗಳ ಹಿಂದೆ ಒಂದು ಕನಸು. ಯಾರೋ ಹೇಳ್ತಾ ಇದ್ದಾರೆ. ಈ ಕನಸಿನಲ್ಲಿ. ಭೂಮೀಲಿ ಎಲ್ಲಾ ಮುಗಿದು ಹೋಗುತ್ತೆ ಅಂತ. ಧ್ವನಿ ಯಾರದೋ ಗೊತ್ತಿಲ್ಲ. ಮೊದಲು ನಾನು ಇದರ ವಿಷಯ ಹೆಚ್ಚು ಯೋಚಿಸಲಿಲ್ಲ. ಆಫೀಸಿಗೆ ಹೋದೆ. ಅಲ್ಲೇ ಓಡಾಡ್ತಿದ್ದಾಗ ಶ್ರೀನಿವಾಸ ಬಂದ . ಏ, ನಿನ್ನೆ ನನಗೆ ಒಂದು ಕನಸು ಬಿತ್ತು ಅಂದ ನನ್ನದೇ ಇರಬೇಕು ಅನ್ನಿಸಿತು. ಇದೇನಾ ಅಂತ ಕೇಳೋಣ ಅಂತಿದ್ದೆ. ಆದರೆ ಅವನೇ ಹೇಳಿಬಿಟ್ಟ,’
‘ಇದೇ ಕನಸು ಅವನಿಗೂ’

‘ಹೌದು, ಅದನ್ನೇ ನಾನು ಅವನಿಗೆ ಹೇಳಿದೆ. ಅವನಿಗೆ ಆಶ್ಚರ್ಯವಾಗಲಿಲ್ಲ. ಏನೋ ನಿಶ್ಚಿಂತೆ ಕಾಣಿಸಿತು ಅವನ ಮುಖದಲ್ಲಿ. ನನಗೂ ಅದೇ ತರಹ ಅನ್ನಿಸಲು ಶುರುವಾಯಿತು. ಹಾಗೇ ಆಫೀಸಿನಲ್ಲಿ ಓಡಾಡಿದೆವು. ಎಲ್ಲರೂ ಎಲ್ಲೆಲ್ಲೋ ನೋಡುತಿದ್ದರು. ಕೆಲವರನ್ನು ಕೇಳಿದಾಗ.. ‘
‘ಅವರಿಗೂ ಅದೇ ಕನಸು ಬಿದ್ದಿತ್ತು?’
‘ಹೌದು. ಅದೇ ಕನಸು. ಯಾವ ವ್ಯತ್ಯಾಸವೂ ಇಲ್ಲ.’
‘ನಿಮಗೆ ಅದರಲ್ಲಿ ನಂಬಿಕೆ ಇದೆಯೆ?’
‘ಹೌದು. ಸಂಪೂರ್ಣ!’
‘ಯಾವಾಗ ಇದು ಮುಗಿಯುತ್ತೆ? ಅಂದರೆ ಪ್ರಪಂಚದ ಕೊನೆ ಯಾವಾಗ’
‘ಇಂದು ರಾತ್ರಿ. ನಾಳೆ ಬೆಳಗಾಗುವ ಮುಂಚೆ. ಭೂಮಿ ತಿರುಗುತ್ತಾ ರಾತ್ರಿ ಕಳೆಯುತ್ತಾ ಬೇರೆ ಬೇರೆ ಜಾಗಗಳಲ್ಲಿ ಜೀವನ ಕೊನೆಯಾಗುತ್ತೆ. ಒಟ್ಟಿನಲ್ಲಿ ಎಲ್ಲ ಕೊನೆಯಾಗಲು 24 ಗಂಟೆ ಬೇಕಾಗುತ್ತೆ.’

ಇಬ್ಬರೂ ಕಾಫಿ ಕುಡಿಯದೆ ದೂರ ನೋಡುತ್ತ ಹಾಗೇ ಸುಮ್ಮನೆ ಕುಳಿತರು. ನಂತರ ಒಬ್ಬರನ್ನೊಬ್ಬರು ನೊಡುತ್ತ ಮತ್ತೆ ಕಾಫಿ ಕುಡಿಯಲು ಶುರುಮಾಡಿದರು.
‘ಅಲ್ಲ, ನಮಗೆ ಏಕೆ ಈ ಗತಿ ? ನಾವೇನು ಮಾಡಿದ್ದೆವು?’
ʻಆ ತರಹ ಏನೂ ಇಲ್ಲ. ಒಟ್ಟಿನಲ್ಲಿ ಎಲ್ಲಾ ಸರಿ ಹೋಗಲಿಲ್ಲ, ಅಷ್ಟೆ. ಅದಿರಲಿ ನಿನಗೆ?’
‘ಹೌದು. ನನಗೂ ಬಿತ್ತು. ಅಕ್ಕ ಪಕ್ಕದ ಮನೆ ಹೆಂಗಸರೆಲ್ಲಾ ಇದೇ ಮಾತಾಡ್ಕೊತಿದಾರೆ.’
ಮೇಜಿನ ಮೇಲೆ ಇದ್ದ ದಿನ ಪತ್ರಿಕೆಯನ್ನು ತೆಗೆದುಕೊಂಡು ‘ಇವತ್ತಿನ ಪೇಪರ್ನಲ್ಲಿ ಏನೂ ಇಲ್ಲ’ ಎಂದಳು
‘ಎಲ್ಲರಿಗೂ ಗೋತ್ತಾಗಿಬಿಟ್ಟಿದೆಯೆಲ್ಲ! ಪೇಪರಿನಲ್ಲಿ ಹಾಕಿ ಏನು ಪ್ರಯೋಜನ?.’ ಹೊರಗೆ ಆಡುತ್ತಿದ್ದ ಮಕ್ಕಳತ್ತ ನೋಡಿದ ‘ನಿನಗೆ ಭಯ ಆಗ್ತಿದೆಯಾ?’

‘ಇಲ್ಲ !ಮಕ್ಕಳ ವಿಷಯದಲ್ಲೂ ಇಲ್ಲ! ನಾನು ಬಹಳ ಹೆದರಿಕೊಂಡಿರ್ತೀನಿ ಅಂತ ಅಂದುಕೊಂಡಿದ್ದೆ. ಆದರೆ ಅಂತಹದ್ದು ಏನೂ ಇಲ್ಲ!’
‘ವಿಜ್ನಾನಿಗಳೆಲ್ಲ ಹೇಳ್ತಾರಲ್ವ, ಮನುಷ್ಯ ಯಾವಾಗಲೂ ತನ್ನನ್ನ ರಕ್ಷಿಸಿಕೋತಾನೆ ಅಂತ ಎಲ್ಲಿ ಹೋಯಿತೋ ಅ ಭಾವನೆ ?’
ʻಗೊತ್ತಿಲ್ಲ. ಎಲ್ಲ ಆಗಬೇಕಾದ್ದು ಆಗ್ತಿದೆ. ಆದ್ದರಿಂದ ಅಂತಹ ಕೆರಳಿಸೋದು ಏನೂ ಇಲ್ಲ! ನಾವು ಬದುಕಿದ ರೀತಿಯಿಂದ ಇನ್ನೇನು ನಿರೀಕ್ಷಸಲಾಗುತ್ತೆ?

‘ನಾವೇನು ಅಷ್ಟು ಕೆಡಕು ಮಾಡಿದೆವಾ?’
‘ಇಲ್ಲ, ಆದರೆ ಅಂತಹ ಒಳ್ಳೇದೂ ಏನೂ ಮಾಡಿಲ್ಲವಲ್ಲಾ! ಒಟ್ಟಿನಲ್ಲಿ ಎಲ್ಲರು ಸೇರಿದರೆ ಹೇಳಬಾರದ ಎಷ್ಟೋ ಕೆಲಸಗಳನ್ನು ಮಾಡಿದ್ದೀವಿ ಅಲ್ಲವಾ?
ಮಕ್ಕಳು ನಗುತ್ತಾ ಒಳ ಬಂದು ಮತ್ತೆ ಹೊರಹೋದರು.
‘ಇಂತಹ ಸಮಯದಲ್ಲಿ ಜನ ಬೀದೀಲೆಲ್ಲ ಕಿರುಚಾಡಿಕೊಂಡು ಓಡಾಡ್ತಿರ್ತಾರೆ ಅಂದುಕೊಂಡಿದ್ದೆ.’
‘ಇಲ್ಲ,ಇಷ್ಟೇನೇ ! ಕಿರುಚೋದು ಏನಿಲ್ಲ’
‘ನೀನು ಮತ್ತು ಈ ಹುಡ್ಗೀರು. ಇದು ಬಿಟ್ಟು ನನಗೆ ಇನ್ನೇನೂ ಬೆಕಿಲ್ಲ. ನಿಮ್ಮನ್ನು ಬಿಟ್ಟು ಕೆಲಸವಾಗಲೀ ಬೇರೆ ಊರುಗಳಾಗಲೀ ನನಗೇನೂ ಬೇಕಿಲ್ಲ. ಹೌದು ಬಿಸಿಲಿದ್ದಾಗ ಕುಡಿಯೋಕೆ ತಣ್ಣೀರು, ಒಳ್ಳೆ ನಿದ್ರೆ. ಈ ತರಹ ಪುಟ್ಟ ಪುಟ್ಟ ಆಸೆಗಳು ಅಷ್ಟೇ ! ಆದರೂ ಇಂತಹ ಸ್ಥಿತಿಯಲ್ಲಿ ನಾವು ಹೀಗೆ ಕೂತ್ಕೊಂಡು ಈ ತರಹ ಮಾತಾಡೋಕೆ ಹೇಗೆ ಆಗ್ತಿದೆ?’
‘ಏಕೆ ಅಂದರೆ ಬೇರೇನೂ ಮಾಡೋ ಸ್ಥಿತೀಲಿ ನಾವಿಲ್ಲ’
‘ಹೌದು. ಇದ್ದಿದ್ದರೆ ಮಾಡ್ತಾ ಇದ್ದೆವೋ ಏನೋ ! ಚರಿತ್ರೇಲೇ ಇದು ಮೊದಲ ಬಾರಿ ಇರಬೇಕು. ಎಲ್ಲಾರಿಗೂ ಈ ರಾತ್ರಿ ನಾವು ಏನು ಮಾಡ್ತಾ ಇರ್ತೀವಿ ಅಂತ ಅನಿಸ್ತಿರೋದು’
‘ರಾತ್ರಿ ಉಳಿದಿರುವ ಕೆಲವು ಗಂಟೆಗಳಲ್ಲಿ ಜನ ಏನು ಮಾಡ್ತಿರ್ತಾರೋ?’
‘ರೇಡಿಯೊ ಕೇಳ್ತಾರೆ, ಟಿವಿ ನೋಡ್ತಾರೆ, ಸಿನೆಮಾಗೆ ಹೋಗ್ತಾರೆ, ಮಕ್ಕಳನ್ನ ಮಲಗಿಸ್ತಾರೆ, ಮಲಕ್ಕೋತಾರೆ. ದಿನಾ ತರಹಾನೆ’
‘ದಿನಾ ತರಹಾನೇ ! ಒಂದು ರೀತಿಯ ಹೆಮ್ಮೆ ಆಗುತ್ತೆ ಅಲ್ಲವಾ?’
‘ನಾವೇನು ಅಷ್ಟೇನೂ ಕೆಟ್ಟವರಲ್ಲ’.
ಇನ್ನು ಸ್ವಲ್ಪ ಕಾಫಿ ಕುಡೀತಾ ಕೇಳಿದ ‘ಅಲ್ಲಾ, ಈ ರಾತ್ರೀನೆ ಯಾಕೆ ಇದು? ಅಲ್ಲ, ಹತ್ತು ವರ್ಷಗಳ ಹಿಂದೆ ಆಗಬಹುದಿತ್ತು. ಅಥವಾ 500 ವರ್ಷಗಳ ಹಿಂದೆ ಆಗಬಹುದಿತ್ತು.’

‘ಪ್ರಾಯಶಃ ಯಾವತ್ತೂ ಫೆಬ್ರವರಿ 30 ಬಂದಿರಲಿಲ್ಲ ಅಲ್ವಾ! ಹಿಂದೆ ಯಾವತ್ತೂ ಹೀಗೆ ಇರಲಿಲ್ಲ. ಒಟ್ಟಿನಲ್ಲಿ ಈವತ್ತು ಆಗ್ಬೇಕು ಅಂತ ಇತ್ತು. ಆಗುತ್ತೆ. ಅಷ್ಟೆ ’
‘ಆಕಾಶದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಾಂಬರುಗಳು ಓಡಾಡ್ತಾನೆ ಇರುತ್ತವೆ.
‘ಅದೂ ಒಂದು ಕಾರಣ ಅನ್ನಿ’
‘ಸರಿ, ‘ಎಂದು ಊಟ ಮಾಡಿ ಪಾತ್ರೆಗಳನ್ನು ತೊಳೆದು ಕ್ರಮವಾಗಿ ಜೋಡಿಸಿಟ್ಟು. ಮೇಲೆ ಎಂಟೂವರೆಗೆ ಮಕ್ಕಳನ್ನೂ ಮಲಗಿಸಿ ಕೋಣೆಯ ದೀಪವನ್ನು ಆರಿಸಿದರು. ಆದರೆ ಕೋಣೆಯ ಬಾಗಿಲನ್ನು ಸ್ವಲ್ಪ ತೆರೆದಿಟ್ಟರು.
‘ಮಕ್ಕಳಿಗೆ ಯಾರಾದರೂ ಏನಾದರೂ ಹೇಳಿದಾರಾ? ‘
‘ಇಲ್ಲ ! ಇದ್ದಿದ್ದರೆ ಅವು ನಮ್ಮನ್ನು ಕೇಳ್ತಾ ಇದ್ದವು ಅಲ್ವಾ?
ಇಬ್ಬರೂ ಮತ್ತ ಪತ್ರಿಕೆ ಓದಿದರು. ಸ್ವಲ್ಪ ಟಿವಿ ನೋಡಿದರು. ಹಾಗೇ ಸ್ವಲ್ಪ ಸಂಗೀತ ಕೇಳಿದರು. ಗಂಟೆ ಹತ್ತಾಯಿತು, ಹನ್ನೊಂದಾಯಿತು. ಗಡಿಯಾರದ ಮುಳ್ಳು ಮುಂದೆ ಮುಂದೆ ಚಲಿಸುತ್ತಿತ್ತು.

‘ಸರಿ’ ಎಂದು ಇಬ್ಬರೂ ತಬ್ಬಿಕೊಂಡು. ಹಾಗೇ ಬಹಳ ಹೊತ್ತು ನಿಂತಿದ್ದರು
‘ಜೀವನ ನಮ್ಮಿಬ್ಬರನ್ನೂ ಚೆನ್ನಾಗಿಯೇ ನೋಡಿಕೊಂಡಿತಲ್ಲವೆ ‘ಎಂದ
ಅವಳೂ ತಲೆತೂಗಿದಳು
‘ಅಳಬೇಕು ಅನ್ನಿಸುತ್ತಾ’
‘ಅಂತದ್ದೇನಿಲ್ಲ’ ಎಂದಳು
ಎಲ್ಲ ಕಡೆ ಹೋಗಿ ದೀಪಗಳನ್ನು ಆರಿಸಿದರು. ಹೊರಗಿನ ಬಾಗಿಲುಗಳನ್ನು ಮುಚ್ಚಿದರು.

‘ಸ್ವಲ್ಪ ಸುಸ್ತಾಗಿದೆ’ ಎಂದ ಅವಳೂ ಹೌದು ಎಂದಳು. ಮಲಗಲು ತಯಾರಾದರು. ಅಷ್ಟರಲ್ಲಿ ಅವಳು ‘ಒಂದು ನಿಮಿಶ. ಅಡಿಗೆ ಮನೆಯಲ್ಲಿ ನೀರು ಪೂರ್ತಿ ನಿಲ್ಲಿಸಿಲ್ಲ ಅಂತ ಕಾಣುತ್ತೆ’ ಎಂದು ಹೋಗಿಬಂದಳು. ಅವನಿಗೆ ನಗಬೇಕೆನಿಸಿತು. ಜೋರಾಗಿ ನಕ್ಕ. ಅವಳೂ ನಕ್ಕಳು. ಸರಿ, ಮಲಗೋಣವೇ ಎಂದು ಇಬ್ಬರೂ ತಬ್ಬಿಕೊಂಡು ಮಲಗಿದರು.

(ಖ್ಯಾತ ವೈಜ್ನಾನಿಕ ಕಲ್ಪನಾ ಸಾಹಿತ್ಯಕಾರ ರೇ ಬ್ರ್ಯಾಡ್ಬುರಿ ಯವರ 1951ರ ಕಥೆಯ ಭಾವಾನುವಾದ)

‍ಲೇಖಕರು Admin

August 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: