ಪ್ರದೀಪ ಆರ್ ಎನ್ ನೋಡಿದ ಸಿನಿಮಾ 19.20.21…

ಪ್ರದೀಪ ಆರ್ ಎನ್

ಈ ಹಿಂದೆ  ನಿರ್ದೇಶಕ ಮನ್ಸೂರೆ ಅವರ Act1978  ನೋಡಿ ನಾನು ಬಹಳಷ್ಟು ಮೆಚ್ಚಿದ ಕನ್ನಡ ಸಿನಿಮಾಗಳಲ್ಲಿ ಒಂದು. ಇದನ್ನು ಕುರಿತು ಒಂದಷ್ಟು ಬರೆದಿದ್ದೆ ಕೂಡ. ಕರೋನಾ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳಲ್ಲಿ ತಮಿಳು ಹಾಗೂ ಮಲೆಯಾಳಂ ಸಿನಿಮಾಗಳೆ ಹೆಚ್ಚು. ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಮಾಡುವ ಮೂಲಕ ಅಲ್ಲಿನ ಚಿತ್ರತಂಡಗಳು ಹೆಚ್ಚು ಪ್ರಚಾರಗಿಟ್ಟಿಸಿಕೊಂಡಿದ್ದವು. ತಮಿಳಿನ “ಜೈಭೀಮ್” ಮಲೆಯಾಳಂನ “ಜನ-ಗಣ-ಮನ” ಇನ್ನೂ ಮುಂತಾದ ಸಿನಿಮಾಗಳು ಬಂದವು.

ಕೇವಲ ಮನರಂಜನೆಯೇ ವಸ್ತುವಾಗಿರಿಸಿಕೊಂಡು ಸಿನಿಮಾ ಕಲೆಯನ್ನು ಉದ್ಯಮವಾಗಿ ಮಾತ್ರ ನೋಡುವ ನಿರ್ದೇಶಕರು ನಿರ್ಮಾಪಕರು ಇರುವ ಈ ಸಂದರ್ಭದಲ್ಲಿ; ಸಿನಿಮಾವನ್ನು ಒಂದು ಸಮಾಜದಲ್ಲಿನ ಹಲವಾರು ಸಮಸ್ಯೆಗಳನ್ನು ಪರಿಚಯಿಸುವ ಒಂದು ಅಭಿವ್ಯಕ್ತಿ ಕಲಾ ಮಾಧ್ಯಮವಾಗಿ ಮಾಡಿದ ಕನ್ನಡ ಹೊಸತಲೆಮಾರಿನ ನಿರ್ದೇಶಕರಲ್ಲಿ ಮನ್ಸೂರೆ ಕೂಡ ಒಬ್ಬರು. ಇತ್ತೀಚೆಗೆ ಆದಿವಾಸಿಗಳ ಮೇಲೆ ಪ್ರಭುತ್ವ ನಡೆಸುತ್ತಿರುವ ದೌರ್ಜನ್ಯದ ಕುರಿತು ಬಂದ ಸಿನಿಮಾಗಳಲ್ಲಿ 19.20.21 ಸಿನಿಮಾ ವಿಶೇಷವಾದ್ದು. ಬಹಳ ಹಿಂದೆ ಮರಾಠಿಯ ಲಕ್ಷಣ್ ಗಾಯಕ್ ವಾಡ್ ಅವರ “ಉಚಾಲ್ಯ” ಎಂಬ ಆತ್ಮಕಥೆಯಲ್ಲಿ ಕ್ರಿಮಿನಲ್ ಟ್ರೈಬಲ್ ಆಕ್ಟ್ ಅಡಿಯಲ್ಲಿ ಅಲ್ಲಿನ ಆದಿವಾಸಿ ಜನಸಾಮಾನ್ಯರನ್ನು ಬಂಧಿಸಿ ಚಿತ್ರಹಿಂಸೆ ನೀಡುತ್ತಿದ್ದ ಪೋಲಿಸ್ ವ್ಯವಸ್ಥೆಯ ಚಿತ್ರಣ ನೀಡಿದ್ದಾರೆ. ಈಗ ಹೊಸ ಕಾಯ್ದೆಗಳು ಬಂಧಿವೆ. ಯು.ಎ.(ಪಿ).ಎ. ಕಾಯ್ದೆಗಳು ದುರ್ಬಳಕೆ ಆಗುತ್ತಿರುವುದೆ ಹೆಚ್ಚು.

 ವಿಠಲ್ ಮಲೆಕುಡಿಯ ಎಂಬ ಒಬ್ಬ ಆದಿವಾಸಿ ಸಮುದಾಯದ ಯುವಕನನ್ನು ನಕ್ಸಲ್ ಜೊತೆ ಸಂಬಂಧ ಹೊಂದಿದ್ದಾನೆಂದು 2012ರಲ್ಲಿ ಬಂಧಿಸಲಾಯಿತು. ಒಂಭತ್ತು ವರ್ಷಗಳ ಕಾಲ ಆತನ ತೀರ್ಪನ್ನು ನ್ಯಾಯಾಲಯ ನಡೆಸಿ ಆತನನ್ನು ನಿರಪರಾಧಿ ಎಂದು ಘೋಷಿಸಲಾಯಿತು. ಆದಿವಾಸಿ ಸಮುದಾಯಕ್ಕೆ ಸೇರಿದ ಈ ಯುವಕ ತನ್ನ ಸಮುದಾಯದ  ಮೊದಲ ಪದವಿದರ.(ಎಂ.ಎ.ಪತ್ರಿಕೋದ್ಯಮ, ಮಂಗಳೂರು ವಿ.ವಿ.)

ಈತನ‌ ಕಥೆಯನ್ನೇ 19.20.21 ಸಿನಿಮಾದ ವಸ್ತುವಾಗಿರಿಸಿಕೊಂಡು ಚಿತ್ರ ನಿರ್ಮಿಸಲಾಗಿದೆ. ಸಿನಿಮಾದ ಶೀರ್ಷಿಕೆ ನೋಡಿ ಇದು ಯಾವುದೊ ದಿನಾಂಕ ಇರಬೇಕು ಎನಿಸುತ್ತದೆ. ‌ಸಿನಿಮಾ ಸಾಗುತ್ತಿದ್ದಂತೆ ಅನ್ನಿಸಿದ್ದು ಇದು ಬಂಧನಕ್ಕೊಳಗಾದ ಮಂಜು(ವಿಠಲ್ ನ ಪಾತ್ರಧಾರಿ)ವಿನ ತೀರ್ಪು ಬಂದ ದಿನವಿರಬಹುದು ಎನಿಸುತ್ತಿತ್ತು. ಆದರೆ ಸಿನಿಮಾದ ಕೊನೆಯಲ್ಲಿ ಈ ಶೀರ್ಷಿಕೆಯ ಅರ್ಥ ತಿಳಿದು ಬರುತ್ತದೆ. ಅದು ನಮ್ಮ ಸಂವಿಧಾನ ಮೂರು ಪ್ರಮುಖ ವಿಧಿಗಳೆಂದು. ಆರ್ಟಿಕಲ್ 19, 20 & 21 ಎಂಬುದು ಅದರ ಅರ್ಥ. ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಬರುವ ಈ ಮೂರು ಆರ್ಟಿಕಲ್ಸ್ ಗಳು ಭಾರತದ ಪ್ರತಿಯೊಬ್ಬ ಪ್ರಜೆಯ ಜೀವನಕ್ಕೆ ಅವಶ್ಯವಾಗಿರುವ ಅಂಶಗಳು.

ಆರ್ಟಿಕಲ್ 19 ನಮ್ಮ ಅಭಿವ್ಯಕ್ತಿ ಸ್ವತಂತ್ರವನ್ನು, ಆರ್ಟಿಕಲ್ 20 ಒಬ್ಬ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚುಬಾರಿ ವಿಚಾರಣೆಗೆ ಒಳಪಡಿಸಬಾರದು ಹಾಗೂ ಅರಾಧದ ಅಪಾಧಿತ ವ್ಯಕ್ತಿಯನ್ನು ತನ್ನ ವಿರುದ್ಧ ಸಾಕ್ಷಿಯಾಗಿರಲು ಒತ್ತಾಯ ಮಾಡಬಾರದು ಎಂದು. ಮತ್ತೆ ಆರ್ಟಿಕಲ್ 21 ಜೀವಿಸುವ ಹಕ್ಕು ಅಂದರೆ ವ್ಯಕ್ತಿಯೊಬ್ಬ ಗೌರವಯುತವಾಗಿ ವೈಯಕ್ತಿಕ ಸ್ವತಂತ್ರ ಹೊಂದುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಆದರೆ ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳನ್ನು ಅಭಿವೃದ್ಧಿ (SEZ) ಹೆಸರಿನಲ್ಲಿ ಅವರನ್ನು ಕಾಡಿನಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಅವರನ್ನು ಕಾಡಿನಿಂದ ನಾಡಿನ ನಾಗರಿಕ ಸಮಾಜಕ್ಕೆ ತರುವುದಾಗಿ ಸರ್ಕಾರ ಹೇಳುತ್ತಿವೆ. ಅಂದರೆ ಅವರ ಪ್ರಕಾರ ಕಾಡಿನಲ್ಲಿ ವಾಸಿಸುವ ಆದಿವಾಸಿಗಳು ಅನಾಗರಿಕರು. ಮೂಲಭೂತ ಅವಶ್ಯಕತೆಗಳಾದ ವಸತಿ, ಬಟ್ಟೆ, ಆಹಾರ ಹಾಗೂ ಶಿಕ್ಷಣವು ಅವರಿಗೆ ದೊರಕದಂತೆ ಮಾಡಿ ಅವರ ಅಸ್ಮಿತೆಯೇ ಇಲ್ಲದಂತೆ ಮಾಡಲಾಗಿತ್ತಿದೆ. ಅದನ್ನು ಕೇಳುವ ನಾಗರಿಕ ಸಮಾಜ ಮೌನವಾಗಿಯೇ ಇದೆ. ಪ್ರಜಾಪ್ರಭುತ್ವದ ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ಮತ್ತೊಂದು ನಾಲ್ಕನೇ ಆಧಾರ ಸ್ತಂಭವೆಂದರೆ ಅದು ಮಾಧ್ಯಮ ವಲಯವಾಗಿದೆ. ಈ ನಾಲ್ಕು ಅಂಗಗಳು ಸರಿಯಾಗಿ ಕಾರ್ಯ ನಿರತವಹಿಸಿದಾಗ ಮಾತ್ರ ಡೆಮಾಕ್ರಸಿ ಯಶಸ್ಸು ಕಾಣುತ್ತದೆ.

19.20.21 ಸಿನಿಮಾದಲ್ಲಿ ಆದಿವಾಸಿಗಳ ಮೇಲೆ ಪ್ರಭುತ್ವ ಹಾಗೂ ಪೋಲಿಸ್ ವ್ಯವಸ್ಥೆ ನಡೆಸುತ್ತಿರುವ ದೌರ್ಜನ್ಯ ಕುರಿತು ಸೂಕ್ಷವಾಗಿ ತೋರಿಸಲಾಗಿದೆ. ತಮ್ಮ ಸಮುದಾಯದ‌ ಜನರಿಗಾಗಿ ಮೂಲಭೂತ ಸೌಲಭ್ಯಗಳನ್ನು ಕೇಳಿದ ಮಂಜು ಎಂಬ ವಿದ್ಯಾವಂತ ಯುವಕ‌ನನ್ನು ಪೋಲಿಸರು ನಕ್ಸಲ್ ಎಂದು ಬಂಧಿಸುತ್ತಾರೆ. ಆತನ ಕುಟುಂಬದ ಹಾಗೂ ನೆರೆಯವರ ಮೇಲೆ ನಿರಂತರ ದಬ್ಬಾಳಿಕೆ ನಡೆಸಿ ಕ್ರೌರ್ಯ ಮೆರೆವ ವ್ಯವಸ್ಥೆಯನ್ನು ಸಿನಿಮಾದುದ್ದಕ್ಕೂ ನೋಡಬಹುದು. ಈ ನಕ್ಸಲ್ ಯಾಕೆ ಹುಟ್ಟುಕೊಂಡಿತು ಎಂದು ನಾವು ನೋಡಿದಾಗ. ಇದರಲ್ಲಿ ಹೆಚ್ಚು ಭಾಗವಹಿಸುತ್ತಿರುವವರು ವಿದ್ಯಾವಂತ ಯುವಕ/ಯುವತಿಯರೆ ಆಗಿದ್ದಾರೆ. ಕಾರಣ ನಿರುದ್ಯೋಗ, ಭ್ರಷ್ಟಾಚಾರ, ಅನಕ್ಷರತೆ, ಮೂಲಭೂತ ಸೌಕರ್ಯಗಳ ಕೊರತೆಯು ಅವರನ್ನು ನಕ್ಸಲ್ ಚಟುವಟಿಕೆಯ ಕಡೆ ಹೆಚ್ಚು ತೊಡಗುವಂತೆ ಮಾಡುತ್ತಿದೆ. ಮಧುದಂಡವತೆಯವರು ತಮ್ಮ “ಮಾರ್ಕ್ಸ್ ಅಂಡ್ ಗಾಂಧಿ” ಪುಸ್ತಕದಲ್ಲಿ “ಅಗತ್ಯಗಳಿಗನುಗುಣವಾಗಿ ವಿತರಣಾ ತತ್ವವು ಪರಿಪಾಲಿಸಲ್ಪಟ್ಟರೆ, ಕಳ್ಳತನವು ಒಂದು ನೈತಿಕ ಅಪರಾಧವೆಂದು ಬೋಧಿಸಲು ಮುಂದಾಗುವ ನೈತಿಕ ವಾದಿಗಳು ಜನರ ಮಧ್ಯೆ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ” ಎಂದು ಏಂಜೆಲ್ಸ್ ವಾದದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅದೇ ಮಾತು ಇಲ್ಲಿ ಮಂಜು ತನ್ನ ಸಮುದಾಯದ ಜನರಿಗಾಗಿ ಮೂಲಭೂತ ಸೌಕರ್ಯಗಳನ್ನು ಕೇಳಿದ್ದಕ್ಕೆ ಆತನಿಗೆ ನಕ್ಸಲ್ ಪಟ್ಟ ಕಟ್ಟಿದ ಸಂಗತಿ ನಮಗೆ ಅಪಹಾಸ್ಯವಾಗಿಯೇ ಕಾಣುತ್ತದೆ. “ಶಿಕ್ಷಣ ಎಂಬುದು ಹುಲಿನಂತೆ ಅದನ್ನು ಕುಡಿದವರು ಗರ್ಜಿಸಲೇ ಬೇಕು” ಎಂಬ ಅಂಬೇಡ್ಕರ್ ಮಾತಿನಂತೆ ಇಲ್ಲಿ ವಿದ್ಯಾವಂತ ಮಂಜು ತನ್ನ ಹಕ್ಕನ್ನು ಪ್ರಭುತ್ವಕ್ಕೆ ಕೇಳುವ ಧೈರ್ಯ ಮಾಡುತ್ತಾನೆ. ತನ್ನ ಹಕ್ಕನ್ನು ಕೇಳುವುದು, ಪಡೆಯುವುದು ಸಂವಿಧಾನ ಆತನಿಗೆ ಕೊಟ್ಟ ಮೂಲಭೂತ ಹಕ್ಕು. ತಮ್ಮ ಸಮುದಾಯದಲ್ಲಿ ಹೆಚ್ಚು ಓಟುಗಳಿಲ್ಲ ಎಂಬ ಕಾರಣಕ್ಕಾಗಿ ನಾವು ಸೌಲಭ್ಯ ವಂಚಿತರಾಗಿದ್ದೆವೆ. ನಮಗೆ ಅಸ್ಮಿತೆಯೇ ಇಲ್ಲದಂತಾಗಿದೆ ಎಂದು ಆತ ಮಾಧ್ಯಮದ ಮುಂದೆ ಹೇಳಿಕೊಳ್ಳುತ್ತಾನೆ. ಆತನ ಮೇಲೆ UA(P)A act(Unlawful activities (prevention) act)(ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವ) ಕಾಯ್ದೆ) ಹಾಕಿ ಬಂಧಿಸಲಾಗುತ್ತದೆ. ಹೇಗೆ ಸಂವಿಧಾನವನ್ನು, ಕಾನೂನನ್ನು ಪ್ರಭುತ್ವ ತಮ್ಮ ಬೇಳೆಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತದೆ ಎಂಬುದು ಈ‌ ಸಿನಿಮಾದಲ್ಲಿ ನೋಡಬಹುದಾಗಿದೆ.

“ಧರ್ಮೋ ರಕ್ಷಿತಿ ರಕ್ಷಿತಃ” ಇದು ಆ ಕಾಲಕ್ಕಾಯಿತು. ಈಗ ಕಾಲ ಬದಲಾಗಿದೆ “ಸಂವಿಧಾನ ರಕ್ಷಿತಿ ರಕ್ಷಿತಃ” ನಮ್ಮೆಲ್ಲರ ಮೂಲಮಂತ್ರವಾಗಬೇಕಾಗಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಿನಿಮಾದಲ್ಲಿ ಮತ್ತೆಮತ್ತೆ ಕಾಣುವ ಪ್ರತಿಮೆಗಳೆಂದರೆ ಅಂಬೇಡ್ಕರ್ ಹಾಗೂ ಭಗತ್‌‌ ಸಿಂಗ್‌‌ ಚಿತ್ರಪಟ, ಕವಿ ಸಿದ್ದಲಿಂಗಯ್ಯ ಅವರ “ಯಾರಿಗೆ ಬಂದು 47ರ ಸ್ವಾತಂತ್ರ್ಯ” ಎಂಬ ಕ್ರಾಂತಿಗೀತೆ, ದೇವನೂರರ “ಒಡಲಾಳ” ಪುಸ್ತಕ, “ಭಗತ್ ಸಿಂಗ್” ಜೀವನ ಚರಿತ್ರೆಯ ಪುಸ್ತಕ ಜೊತೆಗೆ ಕಮ್ಯುನಿಸ್ಟ್ ಹಾಗೂ ನಕ್ಸಲ್ ಚಿಂತನೆಯ ಸಾಲುಗಳುಳ್ಳ ಪುಸ್ತಕ. ಸ್ವತಂತ್ರ ಭಾರತದ ಸಾಮಾನ್ಯ ಪ್ರಜೆಯ ಸ್ಥಿತಿ ಹೇಗಿದೆ ಎಂದರೆ ಅದು ಪೂರ್ಣಚಂದ್ರ ತೇಜಸ್ವಿ ತೆರೆದಿಟ್ಟ “ತಬರನ ಕತೆ” ಯಂತೆ ಇದೆ.

ಪೋಲಿಸರು ಮಂಜುವಿನ ಮನೆ ಹಾಗೂ ಹಾಸ್ಟೆಲ್ ರೂಮಿನಲ್ಲಿ ಜಪ್ತಿಮಾಡಿದ ವಸ್ತುಗಳಲ್ಲಿ ಭಗತ್ ಸಿಂಗ್ ಕುರಿತ ಪುಸ್ತಕವು ಒಂದು. ಆ ಪುಸ್ತಕ ಹೊಂದಿರುವ ಕಾರಣ ಈತನಿಗೆ ನಕ್ಸಲ್ ಜೊತೆ ಸಂಪರ್ಕ ಇದೆ ಎಂದು ಪೋಲಿಸರು ಕೇಸುದಾಖಲಿಸಿ ಅವನನ್ನು ಬಂಧಿಸುತ್ತಾರೆ. ಇದನ್ನು ನೋಡಿದಾಗ ನನಗೆ ನೆನಪಾಗಿದ್ದು ಭೀಮಾ ಕೊರೆಗಾವ್ ಚಳುವಳಿಗೆ ಸಂಬಂಧಿಸಿದ ಒಂದು ಪ್ರಕರಣ. ಈ ಚಳುವಳಿಗೆ ಸಂಬಂಧಿಸಿದ ಅಪಾಧಿತನ ಮನೆಯನ್ನು ಪೋಲಿಸರು ಪರಿಶೀಲಿಸಿದಾಗ ಓದುವ ಕೋಣೆಯಲ್ಲಿ ಅವರಿಗೆ ರಷ್ಯಾದ ಜಗದ್ವಿಖ್ಯಾತ ಕಾದಂಬರಿಕಾರ ಲಿಯೋ ಟಾಲ್ಸ್ಟಾಯ್ ನ “war and peace” ಕಾದಂಬರಿ ಸಿಗುತ್ತದೆ.

ಪುಸ್ತಕದ ಶೀರ್ಷಿಕೆಯೇ ಈ ರೀತಿ ಇರುವುದರಿಂದ ಈತ ಯುದ್ಧಾಪರಾಧಿ (ಯುದ್ಧ ಪ್ರಚೋದಕ) ಎಂದು ಬಂಧಿಸಿ ಕೋರ್ಟಿನಲ್ಲೂ ಕೂಡ ಆ ಪುಸ್ತಕ‌ ನಿನ್ನ ಬಳಿ ಹೇಗೆ ಬಂತು, ಯಾಕೆ ಇಟ್ಟುಕೊಂಡಿರುವೆ ಎಂದು ಟಾಲ್ಸ್ಟಾಯ್ ಹೆಸರನ್ನೇ ಕೇಳಿರದ ಹಾಗೂ ಆ ಕೃತಿಯನ್ನು ಎಂದೂ ಓದಿರದ ನ್ಯಾಯಾಧೀಶರು ಅದನ್ನು ಅನುಮಾನದಿಂದಲೇ ಪ್ರಶ್ನಿಸುತ್ತಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ನಾವೆಲ್ಲಾ ಓದಿದ್ದೆವೆ. ಆದರೆ ವಾಸ್ತವವಾಗಿ ಟಾಲ್ಸ್ಟಾಯ್ “ವಾರ್ ಅಂಡ್ ಪೀಸ್” ಯುದ್ಧ ವಿರೋಧಿ ಕೃತಿಯಾಗಿದೆ ಎಂಬುದು ಅದನ್ನು ಓದಿದವರಿಗೆ ಮಾತ್ರ ಗೊತ್ತಿರುವ ಸತ್ಯವಾಗಿದೆ. ಅದೇ ರೀತಿ ಇಲ್ಲಿ ಭಗತ್ ಸಿಂಗ್‌ ಪುಸ್ತಕದಲ್ಲು ನಡೆಯುತ್ತದೆ ಅಲ್ಲವೆ. ಭಗತ್ ಸಿಂಗ್ ತನ್ನ ಬಳಿ ಆಯುಧ ಹೊಂದಿದ್ದು ಬಿಳಿಯರನ್ನು ಎದುರಿಸಲು ಹಾಗೂ ತನ್ನ ಆತ್ಮರಕ್ಷಣೆಗಾಗಿಯೇ ಹೊರತು ಕೊಲ್ಲುವುದಕ್ಕಲ್ಲ. ಅಮಾಯಕ ಜನರನ್ನು ಬ್ರಿಟಿಷ್ ಅಧಿಕಾರಿ ಡೈಯರ್ ನೂರಾರು ಜನರ ಮೇಲೆ ಮನಬಂದಂತೆ ಗುಂಡಾರಿಸಿ ಹತ್ಯೆಮಾಡಿದ್ದು ಭಗತ್ ಸಿಂಗ್ ರಂತ ಹಲವಾರು ಯುವಕರ ರಕ್ತ ಕುದಿಯುವಂತೆ ಮಾಡುತ್ತದೆ. 

ಮಂಜುವಿನ ತೀರ್ಪು ಹಲವು ವರ್ಷಗಳು ನಡೆಯುತ್ತದೆ, ಕೊನೆಗೆ ಮಂಜು ಹಾಗೂ ಆತನ ತಂದೆಗೆ ನ್ಯಾಯ ಸಿಗುತ್ತದೆ. ಚಿತ್ರದ ಕೊನೆಯಲ್ಲಿ ಮಂಜುವನ್ನು ಬಂಧಿಸಿ ವಿಚಾರಣೆ ಮಾಡಿದ್ದ ಪೋಲಿಸ್ ಅಧಿಕಾರಿಯ ಮೊಮ್ಮೊಗಳಿಗೆ ಮಂಜುಪರ ವಕೀಲ ಉಡುಗೋರೆಯಾಗಿ ಒಂದು ಪುಸ್ತಕ ನೀಡುತ್ತಾರೆ. ಅದು ಯಾವುದೋ ಧರ್ಮಗ್ರಂಥವಲ್ಲ, ಕಾದಂಬರಿ-ಕಥೆಯೂ‌ ಅಲ್ಲ. ಅದು ನಮ್ಮ ಭಾರತಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ “ಸಂವಿಧಾನ” ಪುಸ್ತಕವಾಗಿತ್ತು.‌ ಸಿನಿಮಾದಲ್ಲಿ ಸಂವಿಧಾನ ಪುಸ್ತಕ ಕೊಟ್ಟಿದ್ದು ಈ ಪುಟ್ಟ ಹುಡುಗಿಗೆ ಆದರೂ ಅದು ಚಿತ್ರ ನೋಡುತ್ತಿದ್ದ ನಮ್ಮೆಲ್ಲರಿಗೆ ಎಂಬುದನ್ನು‌ ನಾವು ಮರೆಯುವಾಗಿಲ್ಲ. ನಮ್ಮೆಲ್ಲರ ಪವಿತ್ರ ಗ್ರಂಥ ಈ ಸಂವಿಧಾನ. ಇನ್ನೊಂದು ವಿಚಾರವೆಂದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವಲ್ಲಿ ಮಾಧ್ಯಮದ ಪಾತ್ರ ಬಹಳ ಮುಖ್ಯವಾದ್ದು. ವಿಠಲ್ ಮಲೆಕುಡಿಯನಿಗೆ ನಕ್ಸಲ್ ಪಟ್ಟ ಕಟ್ಟಿದ್ದರ ಪರಿಣಾಮ ಆತನಿಗೆ ಯಾರೂ ಉದ್ಯೋಗ ನೀಡದಿದ್ದಾಗ, ಜರ್ನಲಿಸಂ ವಿದ್ಯಾರ್ಥಿಯಾದ ಆತನಿಗೆ ಆಸರೆಯಾಗಿದ್ದು ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿ. ಪ್ರಜಾವಾಣಿ ನಾನು ಹೈಸ್ಕೂಲ್ ಹಂತದಿಂದಲೂ ಓದುತ್ತಿರುವ ಪತ್ರಿಕೆ. ಸಾಮಾಜಿಕ ಸಮಸ್ಯೆಗಳನ್ನು ಧೈರ್ಯವಾಗಿ ಪ್ರಕಟಿಸಿ ನಮ್ಮನ್ನೆಲ್ಲ ಎಚ್ಚರಿಸುತ್ತಿರುವ ಹಾಗೂ ನಾನು ಪ್ರೀತಿಯಿಂದ ಓದುವ ಪತ್ರಿಕೆ. 

ಒಟ್ಟಾರೆಯಾಗಿ ಈ ಸಿನಿಮಾ ಸಂವಿಧಾನದ ಆಶಯ ಹಾಗೂ ಅಂಬೇಡ್ಕರ್ ಚಿಂತನೆಯ ಸಾರವನ್ನು ಹೀರಿ ರೂಪುಗೊಂಡಿದೆ ಎನ್ನಬಹುದು. 19.20.21 ನಂತಹ ಅದ್ಭುತ ಸಿನಿಮಾವನ್ನು ಕನ್ನಡಕ್ಕೆ ಹಾಗೂ ಇಡೀ ಭಾರತಕ್ಕೆ ಕೊಟ್ಟ ಮನ್ಸೂರೆ ಚಿತ್ರತಂಟಕ್ಕೆ ನನ್ನ ಕೃತಜ್ಞತೆಗಳು. ಇದು ನಿಜವಾದ ಪಾನ್ ಇಂಡಿಯಾ ಸಿನಿಮಾ…

‍ಲೇಖಕರು avadhi

March 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: