ಪ್ರದೀಪ ಆರ್ ಎನ್ ಕಂಡಂತೆ ‘ದಕ್ಲಕಥಾ ದೇವಿಕಾವ್ಯ’

ಪ್ರದೀಪ ಆರ್ ಎನ್

ಎರಡು ವರ್ಷಗಳ ಹಿಂದಷ್ಟೆ ನಿಧನರಾದ ಕೆ.ಬಿ.ಸಿದ್ದಯ್ಯ (೧೯೫೪-೨೦೧೯)ನವರು ಮೂಲತಃ ಮಾಗಡಿ ತಾಲೂಕಿನವರು. ಅದೇ ರೀತಿ ದಲಿತ ಕವಿ ಎಂದೇ ಪ್ರಸಿದ್ಧರಾದ ಸಿದ್ದಲಿಂಗಯ್ಯ (೧೯೫೪-೨೦೨೧)ನವರು ಸಹ ಇದೇ ಮಾಗಡಿ ತಾಲೂಕಿನವರು. ಅವರು ಕಳೆದ ವರ್ಷವಷ್ಟೆ ನಿಧನರಾದರು. ಒಂದೇ ತಾಲೂಕಿನಿಂದ ಬಂದ ಈ ಇಬ್ಬರು ದೈತ್ಯ ಪ್ರತಿಭೆಗಳು ಹುಟ್ಟಿದ್ದ ವರ್ಷವೂ ಕೂಡ ಒಂದೇ.(೧೯೫೪)

ಸಿದ್ದಲಿಂಗಯ್ಯ ಎಂದ ತಕ್ಷಣ ನಮಗೆ ನೆನಪಾಗುವುದು ೭೦ರ ದಶಕದಲ್ಲಿ ಸಂಚಲನ ಮೂಡಿಸಿದ ಅವರ “ಹೊಲೆಮಾದಿಗರ ಹಾಡು” ಕವಿತಾ ಸಂಕಲನ, ಅದೇ ರೀತಿ ಕೆ.ಬಿ.ಸಿದ್ದಯ್ಯನವರು ಹೆಸರು “ದಕ್ಲಕಥಾ ದೇವಿಕಾವ್ಯ” ದಿಂದ ಹೆಚ್ಚು ಪ್ರಸಿದ್ಧವಾಗಿದೆ. ಅವರ ಮತ್ತೊಂದು ಪ್ರಸಿದ್ಧ ಕಾವ್ಯ “ಬಕಾಲ”. (ಇಂಗ್ಲಿಷಿನಲ್ಲಿ ರಚಿತವಾದ ಮುಲ್ಕ್ ರಾಜ್ ಆನಂದರ ” ಅನ್ಟಚಬಲ್” ಕಾದಂಬರಿಯ ನಾಯಕನ ಹೆಸರು “ಬಾಕ” ಎಂದು) ಈ ಇಬ್ಬರ ಕೊಡುಗೆ ಕನ್ನಡ‌ ದಲಿತ ಸಾಹಿತ್ಯದಲ್ಲಿ ಅಜರಾಮರ.

ಮಲೆಮಹಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಕಾವ್ಯದ ಲಯದಲ್ಲಿ ಹುಟ್ಟಿದ ಮತ್ತೊಂದು ಆಧುನಿಕ ಕಾವ್ಯ “ದಕ್ಲಕಥಾ ದೇವಿ’ಯದು. ಪರಿಶಿಷ್ಟ ಜಾತಿಗೆ ಸೇರಿದ ದಕ್ಲರನ್ನು ಕುರಿತ ಕಾವ್ಯ ಇದು. ಇಡೀ ಕಾವ್ಯ ದಕ್ಲ‌ರ ಸಂಸ್ಕೃತಿಯ ಅನಾವರಣದ ಜೊತೆಗೆ ತಮ್ಮ ದೈವ, ತಮ್ಮ ಸಮುದಾಯದ ನಾಯಕನೇ ಈ ವಿಶ್ವದ ಸೃಷ್ಟಿಕರ್ತ ಎಂಬುದನ್ನು ಇದರಲ್ಲಿ ಕಾಣಬಹುದು. ‌

ಐತಿಹಾಸಿಕ‌ ಪಾತ್ರವೊಂದನ್ನು ಪುರಾಣಪಾತ್ರವನ್ನಾಗಿಸಿ‌ ನಡೆವ ಕಾವ್ಯಸೃಷ್ಟಿ ಬಹಳ ಹಿಂದಿನಿಂದಲೂ ನಡೆದು ಬಂದಿವೆ. ಅವು ಕಾವ್ಯ, ಲಾವಣಿ, ಖಂಡಕಾವ್ಯ, ಪ್ರಗಾಥ ಮುಂತಾದ ರೂಪಗಳಲ್ಲಿ ಓದುರಿಗೆ ಹಾಗೂ ಕೇಳುಗರಿಗೆ ತಲುಪಿವೆ. ಬುದ್ಧ, ಬಸವ, ಅಲ್ಲಮ, ಮಾದೇಶ್ವರ, ಮಂಟೇಸ್ವಾಮಿ, ಟಿಪ್ಪು, ಗಾಂಧಿ, ಅಂಬೇಡ್ಕರ್ ಮುಂತಾದವರು ಜನಮಾನಸದಲ್ಲಿ ಉಳಿದದ್ದು ಹೀಗೆಯೇ. ಇದೇ ಸಾಹಿತ್ಯದಲ್ಲೇ ವಿಶಿಷ್ಟವಾದ ಗದ್ಯಕಾವ್ಯ ರಚನಾ ಶೈಲಿಯಲ್ಲಿ ಹುಟ್ಟಿದ ದೇವನೂರರ “ಕುಸುಮಬಾಲೆ” ನಂಜನಗೂಡ ಪ್ರಾದೇಶಿಕ ಭಾಷೆಯಲ್ಲಿ ರಚಿತವಾಯಿತು. ಇದು ದಲಿತ ಸಾಹಿತ್ಯದಲ್ಲಿ ಹೊಸ ಸಂಚಲನವನ್ನು ಹುಟ್ಟುಹಾಕಿತು.

ಕುಸುಮಬಾಲೆಯ ದಲಿತರ ಹುಡುಗ “ಚೆನ್ನ” ಮೇಲ್ವರ್ಗದ ಕುಸುಮಾಳನ್ನು ಪ್ರೀತಿಸಿದ ಕಾರಣಕ್ಕೆ ಕೊಲೆಯಾಗಿರುತ್ತಾನೆ.‌ಆ ವಿಷಯ ತಿಳಿಯದ ತನ್ನ ಕುಟುಂಬದವರಿಗೆ ಹಾಗೂ ತನ್ನ ಸಮುದಾಯದ ಜನರಿಗೆ ಆತ ಬಾಂಬೆಯಲ್ಲಿ‌ ನೆಲೆಸಿರುವುದಾಗಿ ಕಲ್ಪಿತಗೊಂಡು ಕೊನೆಯಲ್ಲಿ ಪುರಾಣ ಪುರುಷನಾಗಿಯೇ ಉಳಿಯುವ ರೀತಿಯನ್ನು‌ ಗಮನಿಸಿಬೇಕು. ಜೊತೆಗೆ ಅಲ್ಲಿನ ಜೋತಮ್ಮಗಳು ಅಚೇತನವಾದ ಮಂಚಕ್ಕೂ ಚೇತನವನ್ನು ನೀಡುತ್ತವೆ. ಇಡೀ‌ ಕೃತಿಯನ್ನು ದೇವನೂರರು ಮಾದಿಗ ಸಮುದಾಯದ ನಾಯಕ, ಪೂರ್ವಿಕ ಮಲೆಮಹಾದೇಶ್ವರನಿಗೆ ಅರ್ಪಿಸಿರುವುದು ಆರಂಭದಲ್ಲಿ ನೋಡಬಹುದಾಗಿದೆ.

ಆ ನಂತರ ಬಂದ ಸಿದ್ದಯ್ಯನವರ ಕಾವ್ಯಗಳು ದಲಿತ ಸಂವೇದಬೆಗೆ ಹೊಸ‌ಮೆರಗನ್ನು ನೀಡಿದವು. ದಕ್ಕಮ್ಮನ ಈ‌‌ ಕಾವ್ಯದಲ್ಲಿ ಬರುವ ಬೇವಿನಮರದವ್ವ, ಯಕ್ಕಡದವ್ವ, ಮಾರವ್ವ ಮುಂತಾದ ಏಳು ದೈವಗಳನ್ನು ನರಹಳ್ಳಿ ಬಾಲಸುಬ್ರಹ್ಮಣ್ಯನವರು “ಸಪ್ತಮಾತೃಕೆ”ಯರೆಂದು ವಿವರಿಸುತ್ತಾರೆ. ಮುಂದುವರೆದು ಈ‌ ಕಾವ್ಯ ಕುರಿತು ‘ಈ‌ ಕಲ್ಪನೆಯೇ ಅಧ್ಬುತವಾಗಿದೆ.‌ಶ್ರೇಣಿಕೃತ ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ಜನಾಂಗವೊಂದು ಈ ಭೂಮಿಯ ಸೃಷ್ಟಿಕರ್ತ ತನ್ನ ಜನಾಂಗದ ಪುರುಷನೆಂದು ಗುರುತಿಸಿಕೊಳ್ಳುವುದು ನಮ್ಮ ಆಧುನಿಕ ಜೀವನಕ್ಕೆ ಸಿಕ್ಕದ ಅನೇಕ ಅರ್ಥಪರಂಪರೆಯನ್ನು ಒಳಗೊಂಡಿದೆ” ಎನ್ನುತ್ತಾರೆ. (ನೆಲ ಸಂಸ್ಕೃತಿ- ಪು.ಸಂ.೨೩೪)

ಈ‌ ಕಾವ್ಯದ ನಡುನಡುವೆ ಗ್ರೀಕ್ ದೇವತೆಗಳು, ಯೇಸು, ಬುದ್ಧ, ಬಸವ, ಅಲ್ಲಮ, ಗಾಂಧಿ, ಅಂಬೇಡ್ಕರ್ ಮುಂತಾದ ಪುರಾಣ ಹಾಗೂ ಐತಿಹಾಸಿಕ ನಾಯಕರುಗಳು ಬಂದುಹೋಗುತ್ತಾರೆ. ಗ್ರೀಕ್ ದೇಶದಿಂದ ಹಿಡಿದು ಆಫ್ರಿಕಾದ‌ ಇಥಿಯೋಫಿಯವನ್ನು ಸುತ್ತಾಡಿಸಿ ಕೊನೆಗೆ ದಕ್ಲರ ಕೇರಿಗೆ ತಂದು‌ ಓದುಗರನ್ನು ನಿಲ್ಲಿಸುವ ಸಿದ್ದಯ್ಯನವರ ಕಾವ್ಯ ಸೃಷ್ಟಿ ಅಧ್ಬುತ ಹಾಗೂ ಅಚ್ಚರಿ! ವಿಶ್ವದ ಸೃಷ್ಟಿಯನ್ನು ತಮ್ಮ ಸಾಮುದಾಯಿಕ‌ ನೆಲೆಯಲ್ಲಿ‌ ಕಟ್ಟಿಕೊಡುವ ರೀತಿ ಇಲ್ಲಿವರೆಗೂ ತಿಳಿದಿದ್ದ ವೈದಿಕಶಾಸ್ತ್ರೀಯ ನಂಬಿಕೆಗಳಿಗೆ ಪ್ರತಿರೋಧದ ಸೃಷ್ಟಿ ಎನ್ನಬಹುದು. ಈ ಭೂಮಿಯ ಸೃಷ್ಟಿಕರ್ತನು ಮಾದಿಗರ ಮೊದಲ ಪುರುಷನಾದ ಹೆಪ್ಪುಮುನಿ ಕಾರಣ ಪುರುಷನೆಂದು ಈ‌ ಕಾವ್ಯ ಹೇಳುತ್ತದೆ.

“ಲಿಂಗಸ್ಫೋಟವಾಗಿ‌ ನಿರ್ಲಿಂಗ ಹುಟ್ಟಿತ್ತಲ್ಲ”,
“ತಂದೆ ತಾಯಿ ಇಲ್ಲದ ಕಂದ ನಾನು,
ಬೆದೆಗೆಟ್ಟು ಬಸುರಿಲ್ಲದೆ ಹುಟ್ಟಿದ ಕಂದ ನಾನು,
ಹುಟ್ಟು ಮುಟ್ಟಿಲ್ಲದೆ ಹುಟ್ಟಿದ ಕಂದ ನಾನು…ಇಂತಹ ಮುಂತಾದ ಸಾಲುಗಳು ಅಲ್ಲಮನ ಬೆಡಗಿನ‌ ವಚನಗಳಂತೆ ಕಾಣುತ್ತವೆ. “ಮೊಳಕೆಯೊಡೆದ ನಕ್ಷತ್ರ”, “ಸೂರ್ಯನ ಶಾಖದಲಿ ಬೆಂದು ಅರಳುವ ಅನ್ನದ ಅಗಳು” ಎಂಬ ಸಾಲು‌ಗಳು ಯಾವ‌ ರಮ್ಯ‌ಕಾವ್ಯಕ್ಕೂ ಕಡಿಮೆ‌‌ ಇಲ್ಲ ಎನಿಸುತ್ತದೆ. ಜಲದೇವಿಯ ದಕ್ಕದ ಮಗನಾದ ದಕ್ಕದ ಮಹಾಮುನಿ, ದಕ್ಕರ ಗುರು, ದಕ್ಕದ ಕಲಿ ಹೆಂಡದ ಮಡಿಕೆ, ಬಾಡಿನ‌ಮಡಿಕೆ, ರುಂಡಮಾಲೆಯಿಂದ‌ ನಟರಾಜನ ನಾಟ್ಯವಾಡುವ ದೃಶ್ಯವು ಶಿವನನ್ನೆ ಹೋಲುತ್ತಾನೆ. ಇದೇ ಹೆಂಡ, ಸತ್ತ ಎಮ್ಮೆಕರುವಿನ ಮಾಂಸದೊಂದಿಗೆ ಮಂಟೇಸ್ವಾಮಿ ಕಲ್ಯಾಣ ಪ್ರವೇಶಿದ ಸನ್ನಿವೇಶವನ್ನು ಡಿ.ಆರ್.ನಾಗರಾಜ್ ಅವರು “ಆಧ್ಯಾತ್ಮಿಕ ದಂಗೆ” ಎಂದು ಕರೆಯುತ್ತಾರೆ. (ಸಂಸ್ಕತಿ ಕಥನ) ಗಂಡಸೆಂಬ ದರ್ಪದೊಂದಿಗೆ ಮರೆಯುತ್ತಿದ್ದ ದಕ್ಲನಿಗೆ ದೇವಿ ತನ್ನ ಮಾಂತ್ರಿಕ ಶಕ್ತಿಯಿಂದ‌ ದಕ್ಲನನ್ನು ಹೆಣ್ಣಿನ ರೂಪಕ್ಕೆ ಬದಲಾಯಿಸುವಳು.

ದಕ್ಲ ದೇವಿಯ ಬಳಿ ತನ್ನ ಪಾಪಕ್ಕೆ ಪ್ರಾಯಶ್ಚಿತ್ತಗೊಂಡು ದೇವಿಯ ಬಳಿ ಕ್ಷಮೆಕೇಳಿದ ಬಳಿಕ ದೇವಿ ಆತನನ್ನು ಪುನಃ ಗಂಡಸಿನ ರೂಪಕ್ಕೆ ತರುತ್ತಾಳೆ. ನಮ್ಮ ಜಾನಪದ ಮಹಾಕಾವ್ಯಗಳಲ್ಲಿ ಬರುವ ಶ್ರಣಣನ ಸಂಹಾರ, ಉರಿಚಮ್ಮಾಳಿಗೆ, ದೈವಗಳ ವೇಷಭೂಷಣ, ಶಿಶುಮಕ್ಕಳ ಕಲ್ಪನೆ ಮುಂತಾದ ಸಂಗತಿಗಳು ಈ ದಕ್ಲಕಥಾ ದೇವಿಕಾವ್ಯದಲ್ಲಿ ಕಾಣಸಿಗುತ್ತವೆ. ದಕ್ಲನು ದುಪ್ಪಟಿಗಂಟನ್ನು ತಲೆ ಮೇಲೆ ಹೊತ್ತುಕೊಂಡು ದೇವಿಯನ್ನು ಹೆತ್ತವ್ವನ‌ ಶಿಶು ಹಿಂಬಾಲಿಸುವಂತೆ ಹಿಂಬಾಲಿಸುವ ಮೂಲಕ ಕಾವ್ಯ ಕೊನೆಗೊಳ್ಳುತ್ತದೆ.

‍ಲೇಖಕರು Admin

January 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: