ನಾಗರಾಜ್ ರೋಣೂರು
ಅದೊಂದು ಮೌನ ಭಾಷೆ
ವಿಸ್ತೃತದಲ್ಲಿ ಕಾವ್ಯವಾದದ್ದು
ಚರಿತ್ರೆ.
ಇಣುಕಿ ನೋಡಿದಾಗ
ಲೀನವಾದ ಹೆಜ್ಜೆಗಳು
ಒಂದರ ಹಿಂದೆ ಸಾಗುತ್ತಾ
ಭೂ ಸ್ಪರ್ಶಕೆ ಚಿಗುರೊಡೆದು
ಮೊಳೆತ ಪ್ರೀತಿ
ಹೆಮ್ಮರವಾಗುವ ಸೂಚನೆ
ಅಂದೇ
ಪ್ರತಿಪಲಿಸಿತ್ತು.
ಕಬ್ಬನ್ ರಸ್ತೆಯ
ವಾಹನ ಸಂಚಾರ ನೀರಸವಾಗಿದ್ದರೂ
ನಿನ್ನ ಉಸಿರಿನ
ಮೆಲುದನಿಯ ಸ್ಪರ್ಶ ತಾಕಿ

ನನ್ನ ಎದೆ ಬಡಿತದ ಶಬ್ದ
ಬುಲೆಟ್ ಇಂಜಿನ್ನಂತೆ
ಬಡಬಡಿಸುತ್ತಿತ್ತು,
ಅದೇ ರಿದಮ್ನಲ್ಲಿ
ಹಾದಿ ಸವೆಯುತಾ
ಹೆಜ್ಜೆಯುಡುತ್ತಿದ್ದರೆ..
ಜಗತ್ತೇ ಒಂದು ಇಕ್ಕಟ್ಟಾದ
ಕಾಲುದಾರಿಯಾದಂತೆ ಭಾಸ,
ಭೂಮಿಯ ಗುರುತ್ವಾಕರ್ಷಣೆಯೆಲ್ಲಾ ಒಟ್ಟುಗೂಡಿ ನನ್ನ ಮೈಮನಗಳಲಿ
ಸಂಚರಿಸಿ ಸೃಷ್ಟಿಸಿದ
ಆಯಸ್ಕಾಂತದ ಸೆಳೆತ.
ಹಸ್ತಾಂಗುಲಿಗಳ ಕಲರವಕೆ
ಸ್ವಯಂಚಾಲಿತ ಚುಂಬನ
ಬೆರಳುಗಳ ಸಮಾಗಮ.
ಹೌದು.!
ಅದೇ.. ಆಗಲೇ.. ಆದದ್ದು..!
ಕಾಲ ಸ್ಥಂಭನ
ಆಕಾಶಗಂಗೆಯ
ತಾರಾಗಣವೆಲ್ಲಾ
ಮಿಣುಕಿ – ಮಿಂಚಿ
ಕಣ್ಣು ಕೋರೈಸಿದಂತೆ
ಭ್ರಮಾಂಡವೇ ಸಂಚು ಮಾಡಿ
ಇಳಿಜಾರುತ್ತಿದ್ದ ಸೂರ್ಯನನ್ನು ಒಮ್ಮೆಲೇ
ಮರೆಮಾಚಿಸಿದಂತೆ
ಇಕ್ಕೆಲೆಯಿಂದ
ಪೂರ್ಣ ಚಂದ್ರ ಇಣುಕಿ
ದೃಷ್ಟಿಸಿದಂತೆ,
ಪಳಪಳಿಸುವ ನಕ್ಷತ್ರಗಳು
ಅಸ್ತು ಎಂದು
ಹೂಮಳೆ ಸುರಿಸಿದಂತೆ,
ಅಂತಿಮವಾಗಿ…
ಮೊದಲ.. ಮೊದಲ
‘ಸರಿಭಾವ’ದ ಅನುಭವ.

ನಮ್ಮೀರ್ವರ
ನವಿರಾದ
ಪ್ರಥಮ
ಸ್ಪರ್ಶ.!
ಒಮ್ಮೆಗೇ
ನನ್ನ ಒಂದಷ್ಟನ್ನು
ನಾನು ಕಳೆದುಕೊಂಡು
ಇಡಿಯಾಗಿ ನಿನ್ನ
ಪಡೆದ
ಹರ್ಷ






0 Comments