ಸರೋಜಿನಿ ಪಡಸಲಗಿ
ಕಡಿವಾಣ ಕಿತ್ತು ಅತ್ತಿತ್ತ ಓಲಾಡೋ
ಹುಚ್ಚು ಆಸೆ ಕುದುರೆ ಏರಿ ಸವಾರಿ
ಆಗ ಮನದ ರಂಗಪಟದ ಮೇಲೆ
ಎದೆಯಾಸೆ ಗೀಚಿದ ಅಸಂಖ್ಯ ಚಿತ್ರ ಪ್ರದರ್ಶನ
ಮನ ಮತ್ತೇರಿ ರಂಗೇರಿ ಜಗವೆಲ್ಲ ಸುತ್ತಿ
ಜೀವ ಹತ್ತಿಯಂತೆ ಹಗುರ
ಅರಿಯದ ಅನಂತ ಸಂತೃಪ್ತಿ
ತುಟಿಯಂಚಿನಲ್ಲಿ ಮಿರುಗೋ ಮಂದಹಾಸ
ಸುಳಿದಾಡೋ ಗಾಳಿಯೊಡನೆ ತೇಲಾಡಿ
ಹಾರೋ ಹಕ್ಕಿ ರೆಕ್ಕೆ ಏರಿ ಹಾರಾಡಿ
ಸುಂಯ್ಯಂತ ಕೆಳಗಿಳಿದು ಅತ್ತಿತ್ತ ಅಲೆದಾಡಿ
ಕುಣಿವ ಅಲೆಯೊಡನೆ ಏರಿಳಿದು ಆಡಿ
ಜುಂ ಅಂತ ಬೆಟ್ಟದ ತುದಿಯಲ್ಲಿ ನಿಂತು
ನೀಲಾಗಸದ ಸೀರೆಯುಟ್ಟು ಬಿಳಿ ಮೋಡ ದಂಡೆ
ಮುಡಿದು
ನಕ್ಷತ್ರಹಾರ ಕೊರಳತುಂಬ ಧರಿಸಿ
ತಿಂಗಳನ ಅಂಗಳದಿ ಕಾಲನ ಹಂಗಿಲ್ಲದೇ
ಮೆರೆಯುವಾಸೆ ಮೊಳೆತು ಕೂಗಿ ಹೇಳಲೆಳೆಸೆ
ಮನದ ಉಲಿತ ಮರುಳೇ ನೀನಿರುವೆ
ಲೋಕದಿ ತೆಪ್ಪಗಿರು
ಥಟ್ಟನೇ ಸರಿದು ಆ ಚಿತ್ರ ಬಯಲಾಯಿತಾಗ ರಂಗ

ಭುವಿಯಾಗಸದ ನಡುವಣ ಸೇತುವೆಯೊಲು
ಹಸಿರು ತುಂಬಿ ಆ ಉದ್ದಗಲಕ್ಕೂ ಹರಡಿ
ಮೇಲೆ ಕವಿದ ಮಂಜಿನ್ಹೊದಿಕೆಯಲಿ ಮುಳುಗಿ
ಬಾನ ಚುಂಬಿಸುವ ಆ ಗಿರಿಯ ತುದಿಯಂಚು
ಚಲಿಸುವ ಮೋಡಗಳೊಡನೆ ಓಡುವುದ ಕಂಡು
ಆ ಮಾಟಗಾರ ಎನಗೊಂದು ಪುಟ್ಟ ಠಾವನಲ್ಲಿ
ನೀಡಬಾರದೆ
ಮೋಡದೊಡನೆ ಓಡಿ ಓಡಿ ದಣಿವ ಮರೆತು
ಜರ್ರನೆ ಜಾರುವಾಸೆ ಕಾಡಿ ಬೇಡಿದಾಗ
ಕೂಗಿ ಹೇಳುವಾಸೆ ಮೊಳೆತು ಮೈಮರೆತಾಗ
ಮನದ ಉಲಿತ ಮರುಳೇ ನೀನಿರುವೆ ಲೋಕದಿ
ತೆಪ್ಪಗಿರು
ಥಟ್ಟನೇ ಸರಿದು ಆ ಚಿತ್ರ ಬಯಲಾಯಿತಾಗ ರಂಗ
ಪ್ರತಿ ಕ್ಷಣದ ಪ್ರತಿ ಗಳಿಗೆಯ ಹೊಸ ಹುಟ್ಟಿನೊಡನೆ
ಚಲಿಸೋ ಸಮಯದ ಪ್ರತಿ ಬಡಿತೊಡನೆ
ಎದೆ ಗೂಡ ತುಂಬ ಹೊಸ ಆಸೆ ನಿರೀಕ್ಷೆಗಳ
ಹೊಸ ಕನಸು ಕಲ್ಪನೆಗಳ ಅವಿರತ ಸಮ್ಮಿಲನ
ಒಂದು ಕಿರಣದ ಕೊನೆಯೊಡನೆ ಆಸೆ ಹುಸಿಯಾದೀತು ನಿರೀಕ್ಷೆ ಅಂತ್ಯ ಕಂಡೀತು
ಎಂದಿಗೂ ಸರಿದು ಹೋಗದು ಕಣ್ಣತುಂಬಿದ
ಕನಸು ಕಲ್ಪನೆ
ಕ್ಷಣ ಬಯಲಾದೀತು ಮನದ ರಂಗಪಟ
ಆದರಲ್ಲಿ ಚಿತ್ರ ಪ್ರದರ್ಶನ ನಿರಂತರ
ಯಾರೂ ಕದಿಯರು ಕಸಿಯರದನ ಆ ಅಮೂಲ್ಯ ಸೊತ್ತು ನನ್ನದೇ ಅದು ನನ್ನದೇ
ನನ್ನ ಪ್ರತಿ ಉಸುರಿನಾಸರೆ






0 Comments