ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಶಿಶಿರದಲಿ ಉದುರುವ ಎಲೆಗಳೊಂದರಲಿ..

ಕಳೆದ ಶಿಶಿರಗಳಲಿ ಉದುರಿದ ಎಲೆಗಳು

ವಾಸುದೇವ ನಾಡಿಗ್

ಪ್ರತಿ ಬಿತ್ತನೆಗಳಲ್ಲೂ
ಹಳತರ ಸಾರ ಸೂರೆಗೊಂಡ
ಸಸಿಯುಸಿರು
ಮಣ್ಣಲಿ ಕರಗಿದ
ಬೆಂಕಿಯಲಿ ಬೆರೆತ
ಕೋಶಗಳ ಹೊಸ ವಿನ್ಯಾಸ
ಹಿಂದಕೆ ಸರಿದು ಹೋದ ಅದೆಷ್ಟು
ಹಾದಿಗಳು
ಗುರಿಗಳಲ್ಲಿ ವಿರಮಿಸಿಬಿಟ್ಟವು

ಸಂದು ಹೋದ ಅಪ್ಪ
ಪ್ರತಿ ವಸಂತಕ್ಕೂ ನೆನಪಾಗುತ್ತಾನೆ
ಹೊಲದ ಬದಿಯ
ಗಂಧ ತೇಗ ಬೀಟೆ ಹೊನ್ನೆಗಳು
ಕೊರಕಲುಗಳನ್ನು ಉಟ್ಟುಕೊಂಡು
ಸವೆತಗಳ ಕಟ್ಟಿಕೊಂಡು
ತಳದ ಹಸಿರನ್ನು ಸಲಹುವ ಹಾಗೆ
 
ನನ್ನ ಪ್ರತಿಕೂದಲೆಳೆಯ ತಡಕಿ
ಕಪ್ಪು ಹಚ್ಚಡ ಹೊದಿಸುವ
ಕಸರತ್ತು ಬಚ್ಚಲ ಮೋರಿಯಲ್ಲಿ
ನಕ್ಕು ತೇಲಿ ಹೋದಂತೇ
ಅವನು ಕೆಣಕುತ್ತಾನೆ.
ಹೇಗೋ..
ಪ್ರತಿಶಿಶಿರದಲಿ
ಉದುರುವ ಎಲೆಗಳೊಂದರಲಿ
ಅಪ್ಪನ ಸಹಿಯಿದೆ
ನನ್ನ ಬೇರು ಭದ್ರವಾದ ಭ್ರಮೆಯಲಿ
ಅವನ ನೆನಪುಗಳ
ಸ್ರೋತವಿದೆ.
 

‍ಲೇಖಕರು G

4 October, 2014

2 Comments

  1. smitha Amrithraj

    chendada kavite.

  2. mmshaik

    koneya saalugaLu manatattidavu…oLLeya kavite..sir!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading