ಪ್ರತಿಭಾ ನಂದಕುಮಾರ್ ಹೊಸ ಕವಿತೆ: ಹುಚ್ಚು ಕಪಿ ಮತ್ತು ವಿಪರೀತ ಚೇಷ್ಟೆ

ಪ್ರತಿಭಾ ನಂದಕುಮಾರ್

ಎಚ್ಚರ, ಒಂದು ದೀಪ ಹಚ್ಚೆಂದರೆ
ಇಡೀ ನಗರವನ್ನು ಸುಟ್ಟು ಬೂದಿ ಮಾಡುವ
ಕೋತಿ ನಾನು.
ಹೆಂಡ ಕುಡಿದ ಕೋತಿಯ ಹೊಸ ರೂಪ ನಾನು.
ಡೋಲು ಬಡಿದ ಸದ್ದಿಗೆ ಕುಣಿವ ರೂಢಿಯಿದೆ ನನಗೆ.
ಇದೆಂಥಾ ಮಂಗನಾಟ ಎಂದು ಅಲಕ್ಷಿಸಬೇಡಿ
ಅತೀ ದಾಸ್ಯ ವೃತ್ತಿಯನ್ನು ಕರತಲ ಮಾಡಿಕೊಳ್ಳುವುದು
ಸುಲಭವಲ್ಲ ಕಲಿಯುವ ವಿದ್ಯೆಯಲ್ಲ.

ವಿವೇಕ ಮತ್ತು ಹುಚ್ಚುತನಗಳು, ನನ್ನ ಮಟ್ಟಿಗೆ,
ಸಮಾನ ಮತ್ತು ವಿರುದ್ಧವಲ್ಲ, ಮಾತಿನ ಬಗ್ಗೆ ಎಚ್ಚರವಿರಲಿ
ವಿಲಕ್ಷಣ ಅನ್ನಿ ಪರವಾಗಿಲ್ಲ ಆದರೆ
ವಿಚಿತ್ರ, ಅಪಾಯಕಾರೀ ಆಟಗಳನ್ನು ಆಡಲು
ನನ್ನ ಒಡೆಯ ಅಪ್ಪಣೆ ಮಾಡಿದ್ದಾನೆ.
ಸಹಜವೇ ಅಸಹಜ, ಗೊತ್ತೇ?
ಈಗಾಗಲೇ ಆ ಪೆಡಂಭೂತ ಹೊಸಿಲು ದಾಟಿ
ಒಳಗೆ ಒಂದು ಹೆಜ್ಜೆ ಇಟ್ಟಾಗಿದೆ,
ಆ ಹಗ್ಗ ಕೊಡಿ,
ಬೇಡಾ ಮಂತ್ರದಂಡವಲ್ಲ
ಹಗ್ಗ ಸಾಕು.

ಮತ್ತೆ ಈ ನಿರ್ಬಂಧಗಳನ್ನೆಲ್ಲ ಹಾಕಿದ್ದು
ನನ್ನ ಒಳಿತಿಗೇ. ಅವರು ಹೇಳಿದರು
ಅಡ್ಡಡ್ಡ ಸೀಳಿ ಹಾಕು.
ಒಂದು ಕೊಡಲಿಯೇಟು ಛಕ್ಕನೆ ಸೀಳಿತು
ಇಡೀ ದೇಶವನ್ನು ಉದ್ದುದ್ದ
ಹುಚ್ಚು ಕಪಿಯ ಶಕ್ತಿಯನ್ನು ಅಲ್ಲಗಳೆಯಬೇಡಿ
ಅದರಲ್ಲೂ ಪಾನಮತ್ತ ಕಲಾಕಾರ ಕಪಿ.

ನನ್ನ ಹುಚ್ಚಾಟಗಳನ್ನೆಲ್ಲ
ವಿಶ್ಲೇಷಿಸುವ ತೊಂದರೆ ತೆಗೆದುಕೊಳ್ಳಬೇಡಿ.
ಅದನ್ನೆಲ್ಲ ನಿಮ್ಮ ಪಿಕಾಸೋ ಅಥವಾ ಮೊದಿಲಿಯಾನಿ
ಅಥವಾ ನಮ್ಮವರೇ ತಿಕ್ಕಲು ಕಲಾವಿದರಿಗೆ ಮೀಸಲಿಡಿ.
ನಿಮ್ಮ ನೆಲದ ಕಾನೂನಿಗೆ ನಾನು ಬಾಧ್ಯನಲ್ಲ
ನಾನೊಬ್ಬ ಸೂಪರ್ ಹೀರೊ, ದೇವತಾಪುರುಷ
ಮತ್ತು ಕಾರಿನ ಮೇಲಿನ ಸ್ಟಿಕ್ಕರ್.
ಇತರರು ಅಂಜುವ ಕಡೆಗೆ ನೇರ ನುಗ್ಗುವ ಅಂಜನಾಪುತ್ರ
ಯಾರನ್ನಾದರೂ ಸರಿ ಮುಡಿ ಹಿಡಿದು ಹೊರಗೆಳೆದು
ತದುಕಿ ಮುಗಿಸುವ ಸವಲತ್ತು ನನಗಿದೆ.
ನನ್ನ ಬುದ್ಧಿಗೇನೂ ಆಗಿಲ್ಲ, ಸುಮ್ಮನೆ ತಲೆಕೆಡಿಸಿಕೊಳ್ಳಬೇಡಿ
ಏನಿದ್ದರೂ, ನನ್ನ ಅತಿರೇಕಕ್ಕೆ ಭಯ ಪಡಿ
ಮತ್ತು ನನ್ನ ಮುಂದಿನ ಆಟಕ್ಕೆ ಕಾದಿರಿ.
ಏನಂದ್ರಿ? ಹುಚ್ಚುತನಕ್ಕೂ ಒಂದು ರೀತಿನೀತಿಮಿತಿ ಇದೆಯೇ?

 

‍ಲೇಖಕರು avadhi

May 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಜೋಗಿ

    ಕಡಿಮೆ ಪದ್ಯ ಹೆಚ್ಚು ಸಿಟ್ಟು ಇರುವ ಸಾಲುಗಳು. ಪದ್ಯಕ್ಕೆ tranquillity ಬೇಕು. ಇದರಲ್ಲಿ ಅದಿಲ್ಲ. ಆರ್ಭಟವೇ ಹೆಚ್ಚಿದೆ.

    ಪ್ರತಿಕ್ರಿಯೆ
  2. Sumathi BK

    April 12 ರಂದು ಅವಧಿಯಲ್ಲಿ ನೆಗೆದು ಬಂದಿದ್ದ ಈ ಹುಚ್ಚು ಕಪಿ may 24 ಮತ್ತೆ ಕಾಣಿಸಿಕೊಂಡದ್ದು ಯಾವ ಯಾರ ಚೇಷ್ಟೆ..
    Corona ಕೃಪೆಯೇ..
    ಜೈ ಕಪೀಶ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: