ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ನಂದಕುಮಾರ್ ಕವಿತೆ- ಇದು ಕೇಳುವ ಸಮಯವಲ್ಲ…

ಪ್ರತಿಭಾ ನಂದಕುಮಾರ್

ಇದು ಕೇಳುವ ಸಮಯವಲ್ಲ
ಹೇಳುವ ಸಮಯ

ಹೀಗಿರಬೇಕು
ಹೀಗೇ ಇರಬೇಕು
ಹೀಗಂತೂ ಇರಲೇಬಾರದು

ಹೀಗಿದ್ದರೆ
ಹಾಗಾಗಬಹುದು
ಹಾಗಾದರೆ
ಹಾಗಾಗಿದ್ದಕ್ಕೆ ಹೊಣೆ
ನಾವಲ್ಲ
ನೀವೇ

ಹಾಗಂತ ನಿಮ್ಮ ಹಣೆಬರಹ
ನಿಮ್ಮದಲ್ಲ, ಸುಮ್ಮನಿರಲ್ಲ
ನಾವು ಅದನ್ನು ತಿದ್ದಬಹುದು
ತಿದ್ದಲೇಬೇಕು. ನಮ್ಮ ಹಕ್ಕು

ನಿಮ್ಮ ಬಿಕ್ಕು
ನಮ್ಮ ಕುಕ್ಕು ಕೊಕ್ಕು
ಪ್ರಾಸಾನುಪ್ರಾಸದ ಸಿಕ್ಕು

ಪೆಂಡಾಲುಗಳ ಪ್ಯಾರಾಚೂಟ್
ಮಡಿಕೆಗಳಲ್ಲಿ
ಸಾಲುಗಳು ಉಸಿರುಗಟ್ಟಿ
ಹಗ್ಗ ಮಗ್ಗಗಳಲ್ಲಿ ಸಿಕ್ಕಿ ಸತ್ತರೆ
ಅದು ಸಾಯುವ ರೀತಿಯಲ್ಲ
ಹಾಗೆ ಸಾಯಬಾರದು ನೀವು
ಹಾಗೆ ಸತ್ತರೆ
ಸಂಸ್ಕಾರದ ಸೂತಕ.
ಬದಲಿಸಿಕೊಳ್ಳಬೇಕು
ಜನಿವಾರ ಶಿವದಾರ ಉಡುದಾರ
ಅಥವಾ ಬೇರೆ ಕಳ್ಳು ಬಳ್ಳಿ
ಕಳಚಿಕೊಂಡು

ಬರೆಯುವ ತವಕ
ವಿರುವವರೆಗೆ
ನಿಮ್ಮ ಕೈಗಳಿಗೆ ಮಸಿ ಹತ್ತುವ
ಅಥವಾ ಕೀಬೋರ್ಡ್ ಕುಟ್ಟುವ
ಶಾಪ

ನಾವು ಪರಂಪರೆಯ ವಾರಸುದಾರರು
ಹಿರಿಯರ ಹೆಸರಿನಲ್ಲಿ ಹೇಳುತ್ತೇವೆ
ಕೇಳಬೇಕು ನೀವು
ಅಮಲಿನಲ್ಲಿ ಮಲವಿದೆ
ಮಲದಲ್ಲಿ
ಏನಿದೆ?

‍ಲೇಖಕರು Admin

3 January, 2023

2 Comments

  1. DIVAKAR N

    ಅದ್ಭುತವಾದ ಕವಿತೆ ಮೇಡಂ ಕೊನೆಯ ಸಾಲುಗಳು ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ

  2. praveenbm

    super.poem

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading