ಮೂಲ: ಅನ್ನಾ ಅಖ್ಮತೋವಾ
ಕನ್ನಡಕ್ಕೆ : ಪ್ರತಿಭಾ ನಂದಕುಮಾರ್
ಅನಾ ಅಖ್ಮತೋವಾ ಉಕ್ರೇನಿನವಳು. ಎಂಭತ್ತು ವರ್ಷಗಳ ಹಿಂದೆ ಬರೆದ ಕವನ ಇವತ್ತು ಬರೆದ ಹಾಗಿದೆ!!!
ಅನಾ ಅಖ್ಮತೋವಾ ಉಕ್ರೇನಿನ ಒಡೆಸಾದಲ್ಲಿ 1888ರಲ್ಲಿ ಹುಟ್ಟಿದಳು. ಅವಳ ಬದುಕಿನುದ್ದಕ್ಕೂ ಕಷ್ಟಕಾರ್ಪಣ್ಯಗಳನ್ನೇ ಉಂಡಳು. 1910ರಲ್ಲಿ ನಿಕೊಲಾಯ್ ಗುಮಿಲೆವ್ ಎನ್ನುವವನನ್ನು ಮದುವೆಯಾಗಿ ದಾಂಪತ್ಯದಲ್ಲೂ ದುಃಖವನ್ನೇ ಕಂಡಳು. ಒಬ್ಬ ಮಗ ಲೆವ್ ನನ್ನ ಹಡೆದಳು. ಮೊದಲ ಮಹಾಯುದ್ಧ, ವಿಚ್ಚೇದನ, ಅಕ್ಟೊಬರ್ ಕ್ರಾಂತಿ, ಅರಸೊತ್ತಿಗೆ ಕುಸಿದಿದ್ದು, ಸೋವಿಯತ್ ನಾಯಕರ ಆದೇಶದ ಮೇರೆಗೆ ಗುಮಿಲೆವ್ ನ ಮರಣದಂಡನೆ ಎಲ್ಲದರ ನಡುವೆಯೂ ಬರೆಯುತ್ತಿದ್ದಳು. ಆದರೆ ಸರ್ಕಾರ ಅವಳ ಬರಹವನ್ನು ಹತ್ತುವರ್ಷಗಳ ಕಾಲ ನಿಷೇಧಿಸಿತು.

1935ರಲ್ಲಿ ಅವಳ ಮಗ ಲೆವ್ ನನ್ನು ಸರ್ಕಾರ ಬಂಧನದಲ್ಲಿರಿಸಿತು. ಸ್ಟಾಲಿನ್ ನಡೆಸಿದ ನರಮೇಧದಲ್ಲಿ ಆರು ಲಕ್ಷ ಜನರ ಹತ್ಯೆಯಾಯಿತು. ಅವರಲ್ಲಿ ಅನ್ನಾಳ ಗೆಳೆಯರು, ಜೊತೆ ಸಾಹಿತಿಗಳೂ ಇದ್ದರು. ಬಿಡುಗಡೆಯಾಗಿದ್ದ ಅವಳ ಮಗನನ್ನು 1949ರಲ್ಲಿ ಮತ್ತೆ ಬಂಧಿಸಲಾಯಿತು. ಈ ಬಾರಿ ಹತ್ತುವರ್ಷಗಳ ಕಠಿಣ ಸಜೆ ನೀಡಿ ಅವನನ್ನು ಸೈಬೀರಿಯಾದ ಕ್ಯಾಂಪಿನಲ್ಲಿ ಹಾಕಲಾಯಿತು. ಮಗನನ್ನು ಬಿಡಿಸಿಕೊಳ್ಳುವ ಸಲುವಾಗಿ ಅವಳು ಸರ್ಕಾರದ ಪರವಾಗಿ ಬರೆಯಲು ತೊಡಗಿದಳು.
ಸೋವಿಯತ್ ಸಾಂಸ್ಕೃತಿಕ ಅಧಿಕಾರಿ ಅವಳನ್ನು “ಅರ್ಧ ಸೂಳೆ, ಅರ್ಧ ಸನ್ಯಾಸಿನಿ” ಎಂದು ಗೇಲಿ ಮಾಡಿದ್ದ. ಆದರೂ ಸ್ಟಾಲಿನ್ ಮರಣದ ನಂತರವೇ ಅವಳಿಗೆ ಸಾರ್ವಜನಿಕ ಮನ್ನಣೆ ದೊರಕಲು ಆರಂಭವಾಯಿತು. 1966ರಲ್ಲಿ ಹೃದಯಾಘಾತದಿಂದ ಅನಾ ಅಖ್ಮತೋವಾ ಮರಣ ಹೊಂದಿದಳು. ಅವಳ ಮರಣಾನಂತರ ಅವಳ ಕವನಗಳು ಬೇರೆ ಭಾಷೆಗಳಿಗೆ ಅನುವಾದಗೊಂಡು ವಿಶ್ವಪ್ರಸಿದ್ಧಿ ಪಡೆದವು.
1. ದೇಶ ಬಿಟ್ಟು ಹೋದವರಲ್ಲಿ ನಾನೊಬ್ಬಳಲ್ಲ
ತಮ್ಮ ನೆಲವನ್ನು ಶತ್ರುಗಳಿಗೆ ಬಿಟ್ಟು ಕೊಟ್ಟು
ಹೋದವರಲ್ಲಿ ನಾನೊಬ್ಬಳಲ್ಲ.
ಅವರ ಅಸಹ್ಯದ ಹೊಗಳಿಕೆಗಳಿಗೆ ನಾನು ಕಿವುಡಾಗಿದ್ದೆ
ನನ್ನ ಹಾಡುಗಳನ್ನು ನಾನವರಿಗೆ ಕೊಡುವುದಿಲ್ಲ.
ಆದರೆ ನನಗೆ ದೇಶಭ್ರಷ್ಟವಾಗುವುದೆಂದರೆ ಹತಭಾಗ್ಯ
ಖೈದಿಯೋ ರೋಗಿಯೋ ಆಗುವಂತೆ
ಅಲೆಮಾರಿಯೇ ನಿನ್ನ ಹಾದಿ ಕತ್ತಲಾಗಿದೆ
ಅಪರಿಚಿತರ ರೊಟ್ಟಿ ರುಚಿ ಕಹಿಯಾಗಿದೆ

ಆದರೆ ಕಣ್ಕತ್ತಲಾಗಿಸುವ ಹೊಗೆಯಲ್ಲಿ ದಳ್ಳುರಿ
ನಮ್ಮ ಯೌವನದ ಉಳಿದ ದಿನಗಳನ್ನು ಸುಟ್ಟುಹಾಕಿತು
ನಮ್ಮ ಮೇಲೆ ಬೀಳುವ ಒಂದೇ ಒಂದು
ಏಟನ್ನೂ ತಪ್ಪಿಸಿಕೊಳ್ಳಲು ನಿರಾಕರಿಸಿದೆವು.
ಮತ್ತು ನಮಗೆ ಗೊತ್ತು ಅಂತಿಮ ಲೆಕ್ಕಾಚಾರದಲ್ಲಿ
ಪ್ರತಿಯೊಂದು ಗಂಟೆಗೂ ಸಮರ್ಥನೆಯಿದೆ
ಲೋಕದಲ್ಲಿ ನಮಗಿಂತ ಕಡಿಮೆ ಕಣ್ಣೀರು ಹರಿಸಿದವರಿಲ್ಲ
ಸರಳವಾಗಿರುವವರಿಲ್ಲ ಅಥವಾ ನಮಗಿಂತ ಹೆಚ್ಚು ಹೆಮ್ಮೆ ಪಟ್ಟವರಿಲ್ಲ.
2. ಅವನ ಹೆಂಡತಿ
ಆ ಸತ್ಯವಂತ ಮನುಷ್ಯ ದೇವರ ಮಿಂಚಿನ ಏಜೇಂಟಿನಂತೆ
ಕಪ್ಪು ಪರ್ವತದ ದಾಪುಗಾಲಿನಲ್ಲಿ ಧಾವಿಸುತ್ತಾ
ಆತುರದ ದನಿಯಲ್ಲಿ ಹೆಂಡತಿಗೆ ಒತ್ತಾಯಿಸುತ್ತಿದ್ದ
“ಈಗಲೂ ಕಾಲ ಮಿಂಚಿಲ್ಲ, ಈಗಲೂ ನೀನು ಹಿಂತಿರುಗಿ ನೋಡಬಹುದು
ನಿನ್ನೂರು ಸೋಡಮ್ ನ ಕೆಂಪು ಗೋಪುರಗಳನ್ನು ನೋಡಬಹುದು,
ನೀನೊಮ್ಮೆ ಹಾಡಿದ್ದ ಆ ಚೌಕವನ್ನು, ನೇಯುವ ಶೆಡ್ಡನ್ನು,
ಗಂಡು ಮತ್ತು ಹೆಣ್ಣುಮಕ್ಕಳು ನಿನ್ನ ಮದುವೆಯ ಮಂಚ ಹರಸಿದ
ಆ ಎತ್ತರದ ಮನೆಗಳ ಖಾಲಿ ಕಿಟಕಿಗಳನ್ನು”

ಒಂದು ಒಂಟಿ ನೋಟ: ಹಠಾತ್ ನೋವಿನ ಬಾಣವೊಂದು
ಅವಳು ಸದ್ದು ಮಾಡುವ ಮುನ್ನ ಅವಳ ಕಣ್ಣು ಹೊಲಿದು..
ಅವಳ ದೇಹ ಪಾರದರ್ಶಕ ಉಪ್ಪಿನ ಹರಳಾಗಿ
ಅವಳ ಚುರುಕು ಕಾಲುಗಳು ನೆಲದಲ್ಲಿ ಬೇರುಬಿಟ್ಟು
ಯಾರು ಶೋಕಿಸುತ್ತಾರೆ ಈ ಹೆಣ್ಣಿನ ದುಸ್ಥಿತಿಗೆ? ನಾವು
ಕಾಳಜಿಪಡಲು ಅವಳು ಬಹಳ ಕ್ಷುಲ್ಲಕಳಲ್ಲವೇ?
ಆದರೂ ನನ್ನ ಹೃದಯದಲ್ಲಿ ನಾನೆಂದಿಗೂ ಅವಳನ್ನು ಅಲ್ಲಗಳೆಯಲಾರೆ
ತಿರುಗಿ ನೋಡಲಿಚ್ಚಿಸಿ ಸಾವು ಪಡೆದವಳನ್ನು.
3. ಈ ಕಾಲ ಯಾಕಿಷ್ಟು ಕೆಟ್ಟದಾಗಿದೆ?
ಹಿಂದಿನ ಕಾಲಗಳಿಗಿಂತ ಈ ಕಾಲ ಯಾಕಿಷ್ಟು ಕೆಟ್ಟದಾಗಿದೆ?
ದುಃಖ ಮತ್ತು ದಿಗಿಲಿನ ಕಂಗೆಟ್ಟ ಸ್ಥಿತಿಯಲ್ಲಿ
ನಾವು ನಮ್ಮ ಅತಿ ಭೀಕರ ಗಾಯಗಳನ್ನು ಬೆರಳಿಟ್ಟು ಕೆದಕಿ
ನಮ್ಮದೇ ಕೈಗಳಿಂದ ವಾಸಿಯಾಗದಂತೆ ಬಿಟ್ಟಿಲ್ಲವೇ?
ಪಶ್ಚಿಮದಲ್ಲಿ ಮುಸ್ಸಂಜೆಯ ಬೆಳಕಿನ್ನೂ ಮಿನುಗುತ್ತಿದೆ
ಮನೆಗಳ ತಾರಸಿಗಳಲ್ಲಿ ಮುಳುಗುವ ಸೂರ್ಯನ ಪ್ರತಿಫಲನವಿದೆ
ಆದರೆ ಇಲ್ಲಿ ಸಾವು ಅದಾಗಲೇ ಬಾಗಿಲುಗಳ ಮೇಲೆ ಶಿಲುಬೆಯಾಕಾರವನ್ನು ಬರೆಯುತ್ತಿದೆ
ಜೊತೆಗೆ ಕಪ್ಪು ಕಾಗೆಗಳನ್ನು ಕೂಗುತ್ತಿದೆ ಮತ್ತು ಕಾಗೆಗಳು ಹಾರಿಕೊಂಡು ಬರುತ್ತಿವೆ.
4. ಅತಿಥಿ
ಯಾವುದೂ ಬದಲಾಗಿಲ್ಲ. ಊಟದ ಮನೆಯ ಕಿಟಕಿಗಳಿಗೆ
ತೂರಿಬರುವ ಮಂಜಿನ ಕಣಗಳು ಬಂದು ಬಡಿಯುತ್ತಲೇ ಇವೆ.
ನಾನು ನಾನಾಗಿಯೇ ಇದ್ದೇನೆ
ಆದರೆ ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದ.
“ಏನು ಬೇಕು ನಿನಗೆ?” ನಾನು ಕೇಳಿದೆ.
“ನಿನ್ನ ಜೊತೆ ನರಕದಲ್ಲಿರಬೇಕು” ಎಂದ ಅವನು.
ನಕ್ಕೆ ನಾನು. “ಗೊತ್ತಾಯಿತು ನಮ್ಮಿಬ್ಬರನ್ನೂ
ನಾಶಮಾಡುವುದು ನಿನ್ನ ಉದ್ದೇಶ,” ಎಂದೆ.

ತನ್ನ ಸಣ್ಣ ಕೈಯೆತ್ತಿ ಅವನು
ಹೂಗಳನ್ನು ಮೃದುವಾಗಿ ನೇವರಿಸಿದ.
“ಹೇಳು, ಗಂಡಸರು ನಿನ್ನನ್ನು ಹೇಗೆ ಚುಂಬಿಸುತ್ತಾರೆ
ಹೇಳು, ನೀನು ಹೇಗೆ ಚುಂಬಿಸುತ್ತೀ”
ಅವನ ನಿಶ್ಚಲ ಕಣ್ಣುಗಳು ಮಿಟುಕಿಸದೇ
ನನ್ನ ಉಂಗುರದ ಕಡೆಗೇ ನೆಟ್ಟಿದ್ದವು.
ಅವನ ಸ್ಪಷ್ಟ, ವ್ಯಂಗ್ಯ ಮುಖದಲ್ಲಿ
ಒಂದೇ ಒಂದು ಖಂಡವೂ ಅಲುಗಾಡಲಿಲ್ಲ.
ಓಹ್ ಹೀಗಾ: ಅವನ ಆಟವೆಂದರೆ, ಅವನಿಗೆ
ಚೆನ್ನಾಗಿ, ತೀವ್ರವಾಗಿ ಗೊತ್ತು
ನನ್ನಿಂದ ಅವನು ಬಯಸುವುದೇನೂ ಇಲ್ಲ
ನಿರಾಕರಿಸಲು ನನ್ನಲ್ಲೇನೂ ಇಲ್ಲ.
5. ಕೊನೆಯ ಟೋಸ್ಟ್
ನಮ್ಮ ಮುರಿದುಬಿದ್ದ ಮನೆಗಾಗಿ ಕುಡಿಯುತ್ತೇನೆ
ನನ್ನ ಬದುಕಿನ ದುಷ್ಟತೆಗೆ
ಜೊತೆಗಿರುವ ನಮ್ಮ ಒಂಟಿತನಕ್ಕೆ
ಮತ್ತು ನಿನಗಾಗಿ ಕುಡಿಯುತ್ತೇನೆ –

ನಮಗೆ ದ್ರೋಹ ಬಗೆದ ನಿನ್ನ ಸುಳ್ಳು ಹೇಳುವ ತುಟಿಗಳಿಗೆ
ಮರಣಶೀತಲ ಕಣ್ಣುಗಳಿಗೆ
ಜಗತ್ತು ಕ್ರೂರಿ ಮತ್ತು ಒರಟೆನ್ನುವ ವಾಸ್ತವಕ್ಕೆ
ದೇವರು ನಮ್ಮನ್ನು ಉಳಿಸಲಿಲ್ಲ ಎನ್ನುವ ವಾಸ್ತವಕ್ಕೆ.






0 Comments