
ಮೂಲ: ಸಂತ ಕಬೀರ್
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಅದು ಹೇಗೆ?
ಕೇಳುತ್ತಾನೆ ಕೊತ್ವಾಲ
ಅದು ಹೇಗೆ ಸಾಧ್ಯ
ಈ ನಗರ ಕಾವಲು ಕಾಯುವುದು,
ಇಲ್ಲಿ
ಮಾಂಸದಂಗಡಿಗಳಿಗೆ
ರಣಹದ್ದುಗಳು ಕಾವಲಿವೆ
ಗೂಳಿ ಬಸಿರಾಗುತ್ತದೆ
ಹಸುಗಳು ಬಂಜೆ
ಕರುಗಳು ಮೂರು ಹೊತ್ತು
ಹಾಲು ಕೊಡುತ್ತವೆ

ಹೆಗ್ಗಣವೇ ಅಂಬಿಗನಾಗಿ
ಗಡವ ಬೆಕ್ಕುಗಳು ಹುಟ್ಟು ಹಾಕುತ್ತವೆ
ಕಪ್ಪೆಗಳು ಹಾವನ್ನು ಕಾವಲಿಗೆ ನೇಮಿಸಿ
ನರಿಗಳು ಸಿಂಹಗಳ ಬೇಟೆಯಾಡುತ್ತವೆ
ಕಬೀರ ಕೇಳುತ್ತಿದ್ದಾನೆ
ನಾನೇನು ಹೇಳುತ್ತಿದ್ದೇನೆ ಎಂದು
ಯಾರಿಗಾದರೂ ತಿಳಿಯಿತೇ?






0 Comments