ಮೂಲ : ದೀಪಕ್ ಬರ್ಖಡೆ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
1 ಹೊಸ ದಲಿತ ಕವಿ
ನನಗೆ ದೀರ್ಘ ಕವನ ಬರೆಯುವುದು ಇಷ್ಟವಿಲ್ಲ
ನಾನಿರುವುದು ದಲಿತರ ಸಣ್ಣ ಕೇರಿಯಲ್ಲಿ.
ನನ್ನ ಕವನ ವಿಸ್ತಾರಗೊಳ್ಳುತ್ತದೆ ಯಾಕೆಂದರೆ
ಈ ನಗರದ ಚರಂಡಿ ಅದರ
ಮ್ಯಾನ್ ಹೋಲ್ ಗಳನ್ನು ಆಳವಾಗಿಸುತ್ತದೆ
ನನ್ನ ಕೇರಿಯಂತೆಯೇ ನನ್ನ ಕವನ ವಿಸ್ತಾರಗೊಂಡು
ನನ್ನನ್ನು ಊರಿನ ಹೊಚ್ಚ ಹೊಸಾ ದಲಿತ ಕವಿಯಾಗಿಸುತ್ತದೆ
ಊರಾಚೆಯ ಕೇರಿಯ ನನ್ನ ಗೆಳೆಯರು,
ನನ್ನ ಸ್ಪರ್ಶವನ್ನಲ್ಲದಿದ್ದರೂ,
ನನ್ನ ಪದಗಳನ್ನು ಖರೀದಿಸುತ್ತಾರೆ
ನನ್ನ ನೆರಳನ್ನಲ್ಲದಿದ್ದರೂ
ನನ್ನ ಸೇವೆಯನ್ನು.

ನನ್ನ ಸೋದರನನ್ನು ನೋಡಿ,
ಮುನಿಸಿಪಾಲಿಟಿಯ ಗಾಡಿ ಓಡಿಸುತ್ತಾನೆ.
ಸಾಮಾಜಿಕ ಗಲೀಜನ್ನು ಅವನು ತನ್ನ
ಬೆನ್ನ ಮೇಲಿನ ಟ್ಯಾಂಕರಿನಲ್ಲಿ ಹೊತ್ತೊಯ್ಯುತ್ತಾನೆ
ಅದನ್ನವನು ಎಲ್ಲಿ ಇಳಿಸಿ ಹಗುರಾಗುತ್ತಾನೆ?
ಅವನ ಜಾತಿಯ ಹೊರೆ ಪ್ರತಿ ಸಿಗ್ನಲ್ ನಲ್ಲಿ
ಸಾಬೀತಾಗುತ್ತದೆ.
ಅವನ ಅಸ್ತಿತ್ವದ ಕುರುಹು
ನಗರದ ಹಿಂದೂ ವೃತ್ತಗಳಲ್ಲಿ
ನಿರ್ಣಯವಾಗುತ್ತದೆ.
2 ಮನುವಿನ ಮಕ್ಕಳು
ದ್ರೋಣಾಚಾರ್ಯ
ಮತ್ತವನ ಶಿಷ್ಯರಂತೆ
ಒಬ್ಬ ಆದಿವಾಸಿಯನ್ನು ಸುತ್ತುವರಿದರು.
ವಿಶ್ವವಿದ್ಯಾಲಯದ ಅರಣ್ಯದಲ್ಲಿ ಅವರು
ನನ್ನನ್ನು ಪತ್ತೆ ಹಚ್ಚಿದರು
ನನ್ನತ್ತ ತಮ್ಮ ದೃಷ್ಟಿ ನೆಡುವ ಕಪಟತನದಲ್ಲಿ
ಅವರು ತಮ್ಮ ವಿಚಾರ ವಿನಿಮಯ ಮಾಡಿಕೊಂಡರು.
ನನಗಿಂತ ಮೇಲ್ದರ್ಜೆಯ ಸ್ಥಾನ ಖಚಿತಪಡಿಸಲು
ಅವರು ತಮ್ಮ ಮೊಣಕೈಗಳನ್ನು ಚೆಲ್ಲಿದರು.
ಮೇಜಿನ ಕೆಳಗೆ ತಮ್ಮ ಉಂಗುಷ್ಠಗಳನ್ನು ಮೀಟಿ
ನನ್ನ ಸಂಕಟವನ್ನು ಸಂಭ್ರಮಿಸಿದರು.
ಬದಲಿಗೆ ಅವರು ಕೇಳಿದರು,
ನನ್ನ ಪ್ರೀತಿ-ಬೆರಳನ್ನು.
ಅವರು ಮನುವಿನ ಮಕ್ಕಳು.
ಅವರು ಜ್ಞಾನದ ಬಾಗಿಲಿಗೆ ಬೀಗ ಜಡಿಯುತ್ತಾರೆ.

ಆ ಬಾಗಿಲಾಚೆ ನಿಂತಿದ್ದೇನೆ ನಾನೊಂದು ಕವನ
ನನ್ನ ದಮನಿಗಳಲ್ಲಿ ಶಾಯಿ ತಣ್ಣಗಾಗಿದೆ
ನನ್ನ ಕೊರಳಲ್ಲಿ ಪೆನ್ನು ಒಣಗಿದೆ
ಮತ್ತು ನನ್ನ ಹೊಟ್ಟೆಯಲ್ಲಿ ಹಾಳೆ ಹಸಿದಿದೆ
ನಾನು ತಟ್ಟುವುದಿಲ್ಲ
ಮನುವಿನ ಬಾಗಿಲುಗಳಿಗೆ
ನನ್ನ ಪ್ರತಿರೋಧವಿದೆ.
ನಾನು ಸಾಗುವುದಿಲ್ಲ ಅದರೆಡೆಗೆ
ನನ್ನ ಕವನದ ನೆಲದಿಂದ
ವಲಸೆ ಹೋಗುತ್ತೇನೆ.
ನೆನಪಿಡಿ, ಮನುವಿನ ಮಕ್ಕಳೇ!
ಆದಿವಾಸಿ ಗಂಡಸರು
ಇಂಗ್ಲಿಷ್ ಮಾತನಾಡುವುದು
ವಲಸೆ ಹೋಗದ ತಮ್ಮ ಮನೆಗಳ ಹಕ್ಕಿಗಳಂತೆ.
ಅವರ ಕವನಗಳಲ್ಲಿ ಭೌತಶಾಸ್ತ್ರ ಮತ್ತು ವಿಜ್ಞಾನಗಳಿವೆ.
ದಲಿತ ಹುಡುಗರು ಆದಿವಾಸಿ ಒಡೆಯರ
ಬೂಟು ಪಾಲಿಶ್ ಮಾಡುವಾಗ ಅವರು
ತಮಗೆ ಪರಕೀಯವಾದ ಜಗತ್ತಿನಲ್ಲಿ
ತಮ್ಮ ಭಾಷೆಗಳನ್ನು ಪಾಲಿಶ್ ಮಾಡಲು ಕಲಿಯುತ್ತಾರೆ.
3 ಮಕ್ಕಳು
ನನ್ನ ಅಜ್ಜಿ
ವಿಧವೆ
ಚಪ್ಪಲಿ ಹೊಲಿಯುವವಳು
ತನ್ನ ಕೈಯಿಂದ
ಮಾನವತೆಯನ್ನು
ಹದಮಾಡಿದಳು.
ಈಗ, ಚರ್ಮ ಹದಮಾಡುವ
ತಾಯಿಯ ಮಕ್ಕಳಿಗೆ
ಚರ್ಮದ ವಾಸನೆ.
ಅವರು ಭೂತಕಾಲದ
ಶೋಷಣೆಯ
ಚರ್ಮ ಸುಲಿಯುತ್ತಾರೆ.
4 ವಾಸನೆ
ಮೊದಲಿಗೆ ನನ್ನವ್ವ ಕಾಣಲಿಲ್ಲ
ಅವಳ ಎದೆಯ ನಡುವೆ
ಅವಳ ವಾಸನೆ ಬಡಿದಿತ್ತು.
ಹಸುಗೂಸು ನಾನು
ಅವಳ ಮೊಲೆಹಾಲು ಕುಡಿದು ಬೆಳೆದು
ನಗರಕ್ಕೆ ಹೊರಟೆ ಅಲ್ಲಿ
ನನ್ನ ಮೇಲು ಜಾತಿಯ ಗೆಳೆಯರೊಡನೆ
ಬಣ್ಣಗಳನ್ನು ಹಂಚಿಕೊಂಡೆ.
ತಂಗಾಳಿಯ ಹೂಗಳಂತಹ
ಮೊಲೆಗಳಿಂದ ಹೀರಿದ
ಹಾಲಿನ ರುಚಿಯನ್ನು
ಬಣ್ಣಗಳು ಮಾಸಿದ್ದವು.

ಆದರೆ ಆ ದೀರ್ಘಕಾಲದ ವಾಸನೆ
ಸದಾ ನನ್ನನ್ನು ಕರೆಯುತ್ತಿತ್ತು.
ಒಮ್ಮೆ, ನಾನು
ಹಳ್ಳಿಗೆ ಮರಳಿದೆ
ಅಲ್ಲಿ ಶ್ರೀ ಭಾನು ಲುಹಾರ್ ಅವರು
ಹೀಗೆ ವರದಿ ಮಾಡಿದ್ದರು:
“ನಿನ್ನ ತಾಯಿ ಚಪ್ಪಲಿ ಅಂಗಡಿಯಲ್ಲಿ
ಕಬ್ಬಿಣದ ಸರಳುಗಳ ಮೇಲೆ
ಚಪ್ಪಲಿಗಳನ್ನು ಜೋಡಿಸಲು ಯತ್ನಿಸಿ,
ಅದರ ಅಸಮಾನ ಎತ್ತರವನ್ನು
ತಲುಪಲಾಗದೇ
ಸ್ಟ್ಯಾಂಡಿನಿಂದ ಬಿದ್ದುಬಿಟ್ಟಳು”
ಆ ಕಾಲ್ಪನಿಕ ಬೀಳುವಿಕೆಯ
ನೆನಪಿನಿಂದ
ನನ್ನ ಕಣ್ಣುಗಳ ಗಾಜು ಚೂರಾಯಿತು.
ನಗರದ ಬಣ್ಣಗಳ ಪ್ರಭಾವ ಮೀರಿ
ತಲ್ಲಣದಲ್ಲಿ, ನಾನು ನನ್ನ ಸ್ವಂತದರಿವಿಗೆ
ಮತ್ತೆ ಮತ್ತೆ
ಮರಳುತ್ತೇನೆ.
5 ಕಳೆದುಹೋದ ಬೆಳ್ಳಿ ಬಳೆಗಳು
ನನ್ನವ್ವ,
ಅಜ್ಜಿಯ ಬೆಳ್ಳಿ ಬಳೆಗಳನ್ನು
ಸೇಲಂಬದ ಅಕ್ಕಸಾಲಿಗನಿಗೆ
ಮಾರಿದಳು.
ತನ್ನ ಗುರುತಿಗೆ
ಗ್ರಹಣ ಹಿಡಿದಿದ್ದನ್ನು
ಆಕೆ ಸ್ವತಃ ಅನುಭವಿಸಿದ್ದಳು.
ಆದರದು ಅವಳಿಗೆ ಗೊತ್ತಾಗಲಿಲ್ಲ.
ಮೇಲ್ಜಾತಿಯ ರೂಢಿಗಳನ್ನು
ಅನುಕರಿಸುವ ಅನಿವಾರ್ಯ
ಬಡಿದಿತ್ತು ಅವಳಿಗೆ.

ಹೇಗಾದರೂ ಹಣ ಗಳಿಸಿ ತನ್ನ
ಮಕ್ಕಳಿಗೆ ತನ್ನ ಹುಟ್ಟು ಸಂಸ್ಕೃತಿಯಿಂದ
ಹೊರತಾದ ಭವಿಷ್ಯ ನೀಡಲು
ತಳಮಳಿಸಿದ್ದಳು.
ತನ್ನ ಮಕ್ಕಳು ಕ್ರಾಂತಿ ಗೀತೆಗಳನ್ನು
ಬರೆಯುವುದನ್ನು
ನೋಡುವವರೆಗೆ.






ಮಾರ್ಮಿಕವಾಗಿವೆ