ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ಅನುವಾದಿಸಿದ ಖಲೀಲ್ ಗಿಬ್ರಾನ್

ಐದು ಖಲೀಲ್ ಗಿಬ್ರಾನ್ ಕವನಗಳು

ಕನ್ನಡಕ್ಕೆ : ಪ್ರತಿಭಾ ನಂದಕುಮಾರ್ 
-1-

ನೀಡುವ ಮತ್ತು ಸ್ವೀಕರಿಸುವ ಬಗ್ಗೆ (On Giving and Taking)

ಒಂದೂರಲ್ಲಿ ಒಬ್ಬನಿದ್ದ. ಅವನ ಬಳಿ ಕಣಿವೆ ತುಂಬಾ ಸೂಜಿಗಳಿದ್ದವು.
ಒಂದು ದಿನ ಯೇಸುವಿನ ತಾಯಿ ಅವನ ಬಳಿಗೆ ಬಂದು ಕೇಳಿದಳು
“ಗೆಳೆಯಾ, ನನ್ನ ಮಗನ ಉಡುಪು ಹರಿದಿದೆ, ಅವನು ದೇವಸ್ಥಾನಕ್ಕೆ ಹೋಗುವ ಮುನ್ನ
ಅದನ್ನು ಹೊಲಿದುಕೊಡಬೇಕು. ಒಂದು ಸೂಜಿ ಕೊಡುತ್ತೀಯಾ?”

ಅವನು ಅವಳಿಗೆ ಸೂಜಿಯನ್ನೇನೂ ಕೊಡಲಿಲ್ಲ ಬದಲಿಗೆ
ದೇವಸ್ಥಾನಕ್ಕೆ ಹೋಗುವ ಮೊದಲು ಅವಳ ಮಗನಿಗೆ ತಿಳಿಸಿ ಹೇಳಲು
ನೀಡುವ ಮತ್ತು ಸ್ವೀಕರಿಸುವ ಬಗ್ಗೆ ಒಂದು ವಿದ್ವತ್ಪೂರ್ಣ ಪ್ರವಚನ ಕೊಟ್ಟ.

-2-

ದಾಳಿಂಬೆ (The Pomegranate)

ಒಂದು ಸಲ ನಾನೊಂದು ದಾಳಿಂಬೆ ಹಣ್ಣಿನ ಹೃದಯದೊಳಗೆ ವಾಸಿಸುತ್ತಿದ್ದಾಗ
ಒಂದು ಬೀಜ ಹೇಳುತ್ತಿದ್ದುದು ಕೇಳಿಸಿತು.”ಒಂದು ದಿನ ನಾನು ಒಂದು ಮರವಾಗುತ್ತೇನೆ.
ಗಾಳಿ ನನ್ನ ಕೊಂಬೆಗಳಲ್ಲಿ ಹಾಡುತ್ತದೆ. ನನ್ನ ಎಲೆಗಳಲ್ಲಿ ಸೂರ್ಯಕಿರಣ ಕುಣಿಯುತ್ತದೆ.
ಎಲ್ಲಾ ಋತುಗಳಲ್ಲೂ ನಾನು ಬಲಶಾಲಿಯಾಗಿ ಸುಂದರವಾಗಿರುತ್ತೇನೆ.”

ಇನ್ನೊಂದು ಬೀಜ ಹೇಳಿತು “ನಾನು ನಿನ್ನಷ್ಟು ಚಿಕ್ಕವನಾಗಿದ್ದಾಗ
ನಾನು ಹೀಗೆಯೇ ಅಂದುಕೊಂಡಿದ್ದೆ ಆದರೆ ಈಗ ವ್ಯವಹಾರ ಜ್ಞಾನ ಬಂದ ಮೇಲೆ
ಗೊತ್ತಾಗಿದೆ ಅಂತಹ ಆಸೆಗಳೆಲ್ಲ ವ್ಯರ್ಥ ಎಂದು”

ಮೂರನೇ ಬೀಜವೂ ಮಾತಾಡಿತು “ನಮಗೆ ಅಂತಹ ಭವ್ಯ ಭವಿಷ್ಯ ಇರುವ ಯಾವ ಲಕ್ಷಣವೂ ನನಗೆ ಕಾಣುತ್ತಿಲ್ಲ”

ನಾಲ್ಕನೇ ಬೀಜ ನುಡಿಯಿತು “ಭವ್ಯ ಭವಿಷ್ಯವಿಲ್ಲದೇ ನಮ್ಮ ಬದುಕು ಎಂಥ ವ್ಯರ್ಥ!”

ಐದನೆಯದು ಹೇಳಿತು “ನಮ್ಮ ಸಧ್ಯದ ಸ್ಥಿತಿಯೇ ನಮಗೆ ತಿಳಿಯದಿರುವಾಗ ಭವಿಷ್ಯದ ಬಗ್ಗೆ ಯಾಕೆ ಮಾತು?”

ಆರನೆಯದು ಉತ್ತರಿಸಿತು “ನಾವು ಹೇಗಿರುವೆಯೋ ಹಾಗೇ ಇರುತ್ತೇವೆ”

ಏಳನೆಯದು ಹೇಳಿತು “ಎಲ್ಲದರ ಬಗ್ಗೆಯೂ ನನಗೆ ಬಹಳ ಸ್ಪಷ್ಟತೆ ಇದೆ ಆದರೆ ಅದನ್ನು ಪದಗಳಲ್ಲಿ ವರ್ಣಿಸಲು ನನಗೆ ಸಾಧ್ಯವಾಗುತ್ತಿಲ್ಲ.”

ಆಮೇಲೆ ಎಂಟನೆಯದು, ಒಂಭತ್ತನೆಯದು, ಹತ್ತನೆಯದು ಇನ್ನೂ ಅನೇಕ ಮಾತನಾಡಲು ತೊಡಗಿ
ಯಾರು ಏನು ಹೇಳುತ್ತಿದ್ದಾರೆಂದು ಪ್ರತ್ಯೇಕಿಸಲು ನನಗೆ ಸಾಧ್ಯವಾಗಲಿಲ್ಲ.

ಹಾಗಾಗಿ ನಾನು ಅವತ್ತೇ ಅಲ್ಲಿಂದೆದ್ದು ಒಂದು ಮರಸೇಬಿನ ಹೃದಯದಲ್ಲಿ ಹೋಗಿ ಕೂತುಕೊಂಡೆ
ಅಲ್ಲಿ ಕೆಲವೇ ಬೀಜಗಳಿದ್ದವು ಮತ್ತು ಅವು ಮೌನವಾಗಿದ್ದವು.

**
-3

ಕಣ್ಣು (The Eye)

ಒಂದು ದಿನ ಕಣ್ಣು ಹೇಳಿತು “ಈ ಎಲ್ಲ ಕಣಿವೆ ದಾಟಿ ದೂರದಲ್ಲಿ ಒಂದು ಪರ್ವತ ಕಾಣಿಸುತ್ತಿದೆ
ನೀಲಿ ಹಿಮದಿಂದ ಆವರಿಸಿ ಎಷ್ಟು ಸುಂದರವಾಗಿದೆಯಲ್ಲವೇ?”
ಕಿವಿ ಸ್ವಲ್ಪ ಹೊತ್ತು ಲಕ್ಷ್ಯಗೊಟ್ಟು ಆಲಿಸಿ ನುಡಿಯಿತು ” ಆದರೆ ಪರ್ವತ ಎಲ್ಲಿದೆ? ನನಗೇನೂ ಕೇಳಿಸುತ್ತಿಲ್ಲ.”
ನಂತರ ಕೈ ಮಾತನಾಡಿತು “ಆಗಿನಿಂದ ನಾನು ಮುಟ್ಟಿ ಸ್ಪರ್ಶಿಸಲು ಯತ್ನಿಸುತ್ತಿದ್ದೇನೆ, ಪರ್ವತಗಿರ್ವತ ಏನೂ ಇಲ್ಲ.”
ಆಗ ಮೂಗು ಹೇಳಿತು “ಪರ್ವತ ಇಲ್ಲ, ನನಗೆ ಅದರ ವಾಸನೆ ಬರುತ್ತಿಲ್ಲ.”
ಆಗ ಕಣ್ಣು ಬೇರೆಡೆಗೆ ತಿರುಗಿತು. ಉಳಿದವರೆಲ್ಲ ಕಣ್ಣಿನ ವಿಚಿತ್ರ ನಡವಳಿಕೆ ಬಗ್ಗೆ ಮಾತಾಡತೊಡಗಿದರು
“ಈ ಕಣ್ಣಿಗೇನೋ ಆಗಿದೆ , ಸರಿಯಿಲ್ಲ ಅದು”

**
-4-

ಒಳ್ಳೆ ದೇವರು ಕೆಟ್ಟ ದೇವರು (The Good God and the Evil God)

ಒಂದು ಸಲ ಒಳ್ಳೆ ದೇವರು ಮತ್ತು ಕೆಟ್ಟ ದೇವರು
ಬೆಟ್ಟದ ತುದಿಯಲ್ಲಿ ಭೇಟಿ ಮಾಡಿದರು.
ಒಳ್ಳೆ ದೇವರು ನುಡಿದ “ಚೆನ್ನಾಗಿದ್ದೀಯಾ ಅಣ್ಣ?”
ಕೆಟ್ಟ ದೇವರು ಉತ್ತರಿಸಲಿಲ್ಲ.
ಅದಕ್ಕೆ ಒಳ್ಳೆ ದೇವರೆಂದ “ಯಾಕೋ ಇವತ್ತು ನೀನು ಒಳ್ಳೆ ಮೂಡಿನಲ್ಲಿಲ್ಲ”
“ಹೌದು” ಕೆಟ್ಟ ದೇವರು ನುಡಿದ “ಇತ್ತೀಚಿಗೆ ಜನ್ನ ನನ್ನನ್ನು ನೀನು ಅಂತ ತಪ್ಪು ತಿಳಿಯುತ್ತಿದ್ದಾರೆ
ನಿನ್ನ ಹೆಸರು ಹಿಡಿದು ಕರೆಯುತ್ತಿದ್ದಾರೆ, ಜೊತೆಗೆ ನನ್ನನ್ನು ನಿನ್ನಂತೆ ನಡೆಸಿಕೊಳ್ಳುತ್ತಿದ್ದಾರೆ,
ಇದು ನನಗೆ ಸ್ವಲ್ಪ ಕೂಡಾ ಹಿಡಿಸುತ್ತಿಲ್ಲ.”
ಅದಕ್ಕೆ ಒಳ್ಳೆ ದೇವರೆಂದ “ಆದರೆ ನನ್ನನ್ನೂ ಜನಂ ನೀನೆಂದು ತಪ್ಪು ತಿಳಿಯುತ್ತಿದ್ದಾರೆ
ನಿನ್ನ ಹೆಸರು ಹಿಡಿದು ಕರೆಯುತ್ತಿದ್ದಾರೆ”
ಕೆಟ್ಟ ದೇವರಿಗೆ ಕೋಪ ಬಂದು ಮನುಷ್ಯನ ಮೂರ್ಖತನದ ಬಗ್ಗೆ ಬೈದುಕೊಳ್ಳುತ್ತಾ ಹೊರಟುಹೋದ.
**
-5-

ಬೆರ್ಚಪ್ಪ (The Scarecrow)

ಒಂದು ಬೆರ್ಚಪ್ಪನಿಗೆ ಒಮ್ಮೆ ಹೇಳಿದೆ “ಈ ನಿರ್ಜನ ಗದ್ದೆಯಲ್ಲಿ ನಿಂತು ನಿಂತು ನಿನಗೆ ದಣಿವಾಗಿರಬಹುದು”
ಅವನೆಂದ “ಇತರರನ್ನು ಹೆದರಿಸುವುದಲ್ಲಿ ಎಂತಹ ಪರಮಾನಂದವಿದೆ ಎಂದರೆ ನನಗೆ ಅದರಿಂದ ಎಂದಿಗೂ ದಣಿವಾಗುವುದಿಲ್ಲ.”
ಕ್ಷಣ ಚಿಂತಿಸಿ ನಾನು ನುಡಿದೆ “ಅದು ನಿಜ, ನಾನೂ ಆ ಆನಂದವನ್ನು ಅನುಭವಿಸಿದ್ದೇನೆ”
ಅವನಂದ “ಒಳಗೆ ಹುಲ್ಲು ತುಂಬಿಕೊಂಡವರಿಗೆ ಮಾತ್ರ ಅದು ಗೊತ್ತಿರುತ್ತದೆ”
ಅವನು ನನ್ನನ್ನು ಮೆಚ್ಚಿಕೊಂಡನೋ ಅಥವಾ ಅವಮಾನಿಸಿದನೋ ತಿಳಿಯದೆ ನಾನು ಅಲ್ಲಿಂದ ಹೊರಟೆ.
ಒಂದು ವರ್ಷ ಕಳೆಯಿತು. ಅಷ್ಟರಲ್ಲಿ ಬೆರ್ಚಪ್ಪ ತತ್ವಜ್ಞಾನಿಯಾಗಿಬಿಟ್ಟಿತ್ತು.
ನಾನು ಮತ್ತೆ ಅವನನ್ನು ಹಾದು ಹೋದಾಗ ಕಂಡೆ, ಅವನ ಟೋಪಿಯೊಳಗೆ ಎರಡು ಕಾಗೆಗಳು ಗೂಡು ಕಟ್ಟುತ್ತಿದ್ದವು.
**

‍ಲೇಖಕರು avadhi

15 October, 2018

5 Comments

  1. prathibha nandakumar

    thank you

  2. Ajay Varma alluri

    ನಿಮ್ಮ ಅನುವಾದ ಇಷ್ಟವಾಯಿತು ಮೇಡಂ.

    • prathibha nandakumar

      thank you

  3. N.Ravikumr

    ಚೆಂದ ಇವೆ ಮೇಡಂ

  4. nizampj23

    ತುಂಬಾ ಚೆಂದದ ಅನುವಾದ ಪ್ರತಿಭಾ ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading