‘ಪ್ರಣಯಂ’ ಎನ್ನುವ ಗ್ರೀಷ್ಮರಾಗ

ಬದುಕಿನ ವಸಂತದಲ್ಲಿ ದೇಹ, ಮನಸ್ಸು, ಆತ್ಮ ಎಲ್ಲಾ ಆಗಿದ್ದ ಪ್ರೇಮ ನಂತರ ಬದುಕಿನ ಗ್ರೀಷ್ಮ ಋತುವಿನಲ್ಲಿ ಎದುರಾದರೆ ಆಗುವ ಖುಷಿ, ಸಂಭ್ರಮ, ಮುಜುಗುರ ಬೇರೆ, ಆದರೆ ಆ ಗತಕಾಲದ ಪ್ರೇಮ ಗತಕಾಲದ ದಾಂಪತ್ಯವೂ ಆಗಿದ್ದರೆ ಅದು ತಂದೊಡ್ಡುವ ಪ್ರಶ್ನೆಗಳೇ ಬೇರೆ.

ಪ್ರೀತಿ ಒಂದು ಸಂಬಂಧವಾದಾಗ ಎಷ್ಟೆಲ್ಲಾ ಪ್ರಶ್ನೆಗಳು, ಎಷ್ಟೆಲ್ಲಾ ಮಿತಿಗಳು, ಎಷ್ಟೆಲ್ಲಾ ಗೋಡೆಗಳು. ಆದರೂ  ’ದೂರದೊಂದು ತೀರದಿಂದ, ತೇಲಿ ಪಾರಿಜಾತ ಗಂಧ, ದಾಟಿ ಬಂತು ಬೇಲಿಸಾಲ, ಮೀಟಿ ಹಳೆಯ ಮಧುರ ನೋವ’ ಎನ್ನುವ ಬೇಲಿಯಾಚೆಗಿನ ಪಾರಿಜಾತದ ಪರಿಮಳಕ್ಕೆ ಮಾರುಹೋದವರ ಕಥೆ ’ಪ್ರಣಯಂ’.

ಚಿತ್ರ ಪ್ರೇಮದ ಬಗೆಗಿನ ಕೊಟೇಶನ್ ಗಳೊಂದಿಗೆ ಪ್ರಾರಂಭವಾಗುತ್ತದೆ.  ಆದರೆ ಪ್ರೇಮ ಕವಿತೆಯ ಹಾಗೆ.  ಅದು ಇರುವುದು ಪದಗಳ ನಡುವಿನ ಮೌನದಲ್ಲಿ ಎನ್ನುವುದು ನನ್ನ ನಂಬಿಕೆ.  ಅದನ್ನು ಕುರಿತು ಓದುವುದಕ್ಕಿಂತ ಅದನ್ನು ಅನುಭವಿಸಬೇಕು.  ಅದು ಮೌನದ ಹಾಗೆ, ದಕ್ಕಿದವರಿಗೆ ದಕ್ಕಿದಷ್ಟು…

ಈ ಚಿತ್ರದ ಕಥೆ ನಿರ್ದೇಶಕ ಬ್ಲೆಸ್ಸಿಯ ಮನಸ್ಸಿನಲ್ಲಿ ಇಪ್ಪತ್ತೈದು ವರ್ಷಗಳು ಕಾವು ಪಡೆದುಕೊಂಡಿತ್ತಂತೆ.  ನನ್ನ ಅಭಿನಯದ ಏಳು ಅತ್ಯುತ್ತಮ ಚಿತ್ರಗಳನ್ನು ಆರಿಸಿದರೆ ’ಪ್ರಣಯಂ’ ಅವುಗಳಲ್ಲಿ ಒಂದು ಎಂದು ಅನುಪಮ್ ಖೇರ್ ಹೇಳಿದ್ದಾರೆ.  ನಿಜ ಹೇಳಬೇಕೆಂದರೆ ನಿರ್ದೇಶಕ ಗೆದ್ದಿರುವುದು ಚಿತ್ರಕಥೆಗಿಂತ ಹೆಚ್ಚಾಗಿ ಪಾತ್ರಧಾರಿಗಳನ್ನು ಆಯ್ಕೆ ಮಾಡುವುದರಲ್ಲಿ. ಅಚ್ಯುತ ಮೆನನ್ ಆಗಿ ಅನುಪಮ್, ಮ್ಯಾಥ್ಯೂ ಆಗಿ ಮೋಹನ್ ಲಾಲ್, ಗ್ರೇಸ್ ಆಗಿ ಜಯಪ್ರದ ಚಿತ್ರದ ಕಥೆಯನ್ನೂ ಮೀರಿ ನಮ್ಮನ್ನು ಕನ್ವಿನ್ಸ್ ಮಾಡಿಬಿಡುತ್ತಾರೆ.  ಒಳ್ಳೆ ಕಲಾವಿದರು ನಿರ್ದೇಶಕನನ್ನು ಗೆಲ್ಲಿಸುವುದಕ್ಕೆ ಈ ಚಿತ್ರ ಒಂದು ಉದಾಹರಣೆ.  ಅಷ್ಟೇ ಸೊಗಸಾಗಿರುವುದು ಚಿತ್ರದ ಛಾಯಾಗ್ರಹಣ, ಸಂಗೀತ ಮತ್ತು ಚಿತ್ರದಲ್ಲಿ ಶಾಲ್ಮಲೆಯಂತೆ ಹರಿಯುವ ಓ ಎನ್ ಕುರುಪ್ ಅವರ ಹಾಡುಗಳು. ಇವೆಲ್ಲಾ ಚಿತ್ರವನ್ನು ಇನ್ನೊಂದು ಆಯಾಮಕ್ಕೆ ಕರೆದುಕೊಂಡು ಹೋಗುತ್ತದೆ.

ಇಲ್ಲಿ ಅನುಪಮ್ ಗೆ ಭಾಷೆಯ ತೊಡಕಿದೆ, ಅವರ ದನಿ ಮತ್ತೊಬ್ಬರದು, ಹಾಗಾಗಿ ತುಟಿಗಳ ಚಲನೆ ಅಲ್ಲಲ್ಲಿ ಹೊಂದಿಕೆ ಆಗುವುದಿಲ್ಲ, ಆದರೆ ಅದನ್ನು ಮೀರಿ ಅನುಪಮ್ ನಮ್ಮ ಮನಸ್ಸಿನಲ್ಲಿ ನೆಲೆಸುತ್ತಾರೆ.  ಪಾರ್ಶ್ವವಾಯುವಿಗೆ ಒಳಗಾಗಿ ಇಡೀ ಚಿತ್ರದುದ್ದಕ್ಕೂ ವೀಲ್ ಚೇರ್ ಮೇಲೆ ಕುಳಿತ ಮೋಹನ್ ಲಾಲ್ ಗೆ ಇಲ್ಲಿ ಚಲನೆಯ ಸ್ವಾತಂತ್ರ್ಯ ಇಲ್ಲ.  ಜೊತೆಗೆ ಒಂದು ಕೈ, ಒಂದು ಕಾಲನ್ನು ಅವರು ಬಳಸುವಂತಿಲ್ಲ.  ಸ್ಪಷ್ಟವಾಗಿ ಮಾತನಾಡುವಂತಿಲ್ಲ. ತೆರೆಯ ಮೇಲೆ ಅವರಿಗೆ ಸಿಗುವ ಸಮಯ ಸಹ ಕಡಿಮೆ. ಈ ಎಲ್ಲಾ ಮಿತಿಗಳ ನಡುವೆಯೂ ಮ್ಯಾಥ್ಯೂವನ್ನು ಮೋಹನ್ ಲಾಲ್ ಒಬ್ಬ ಅದ್ಭುತ ಗಂಡ, ಸಂಗಾತಿ, ಗೆಳೆಯ, ಪ್ರೇಮಿಯನ್ನಾಗಿ ಕಟ್ಟಿಕೊಡುತ್ತಾರೆ. ಚಿತ್ರ ಮುಗಿಯುವಾಗ One can’t help falling in love with Mathew.

ಚಿತ್ರ ಪ್ರಾರಂಭವಾಗುವಾಗ ಅಚ್ಯುತ ಮೆನನ್ ಮಗನ ಮನೆಗೆ ಬಂದಿರುತ್ತಾನೆ.  ಅವನಿಗೆ ಒಂದು ಸಾರಿ ಹೃದಯಾಘಾತವಾಗಿದೆ.  ಮಗ ಶಾರ್ಜಾದಲ್ಲಿ ಕೆಲಸ ಮಾಡುತ್ತಿದ್ದಾನೆ. ಇಲ್ಲಿ ಅವನ ಹೆಂಡತಿ, ಮಗಳು ಇದ್ದಾರೆ.  ಹೆಂಡತಿಗೆ ವಯಸ್ಸಾದ ಮಾವ ಮನೆಗೆ ಬಂದಿರುವುದು ಸ್ವಲ್ಪ ಕಿರಿಕಿರಿ.  ಫೋನ್ ನಲ್ಲಿ ಮಾತನಾಡುವಾಗ ಅಪ್ಪನ ದನಿಯಲ್ಲಿ ಒಂದಿಷ್ಟು ಬದಲಾವಣೆ ಆದರೂ ಮಗನಿಗೆ ಗೊತ್ತಾಗುತ್ತದೆ.  ಅವರಿಬ್ಬರದೂ ಅದ್ಭುತವಾದ ಅನುಬಂಧ. ಫೋನಿನಲ್ಲಿ ಸೊಸೆ ಮಗನ ಜೊತೆ ಜಗಳವಾಡುತ್ತಿರುವುದು ನೋಡಿ ಅವನಿಗೆ ಹೆಂಡತಿಯ ನೆನಪಾಗುತ್ತದೆ.  ನೋಡುಗರ ಮನದಲ್ಲಿ ಹೆಂಡತಿಯ ಬಗ್ಗೆ ಪ್ರಶ್ನೆಗಳು. ಅವನ ನೆನಪುಗಳಿಂದ ಆತ ಫುಟ್ ಬಾಲ್ ಆಟಗಾರನಾಗಿದ್ದ ಎನ್ನುವುದು ನೋಡುಗರಿಗೆ ತಿಳಿಯುತ್ತದೆ.  ಹೀಗೆ ಕಥೆಯನ್ನು ನಿರ್ದೇಶಕ ನಿಧಾನವಾಗಿ ಅನಾವರಣಗೊಳಿಸುತ್ತಾನೆ.

ಮೊಮ್ಮಗಳ ಗೆಳೆಯನ ಫುಟ್ ಬಾಲ್ ಆಟ ನೋಡಲು ಹೋಗುವ ಮೆನನ್ ತಾನೂ ಆಡಲು ಹೋಗಿ ಕುಸಿಯುತ್ತಾನೆ, ’ನಲ್ವತ್ತು ವರ್ಷಗಳ ನಂತರ ಆಡಿದೆ’ ಎಂದು ನಿಟ್ಟುಸಿರಿಡುತ್ತಾನೆ.  ನಲ್ವತ್ತು ವರ್ಷಗಳು ಯಾಕೆ ಆಟ ಬಿಟ್ಟ??  ಅಲ್ಲಿಂದ ವಾಪಸ್ ಮನೆಗೆ ಬರುವಾಗ ಲಿಫ್ಟ್ ನಲ್ಲಿ ಒಬ್ಬ ಹೆಂಗಸು ಬರುತ್ತಾಳೆ.  ಆಕೆ ಗ್ರೇಸ್, ಆತನ ಹೆಂಡತಿ ಆಗಿದ್ದವಳು. ಒಬ್ಬರನ್ನೊಬ್ಬರು ನೋಡಿ ಅವರಿಗೆ ಆಘಾತ.  ಲಿಫ್ಟ್ ನಿಂದ ಆಕೆ ಹೊರಗೆ ಹೆಜ್ಜೆ ಇಡುತ್ತಾಳೆ, ನಡುಗುವ ಗಂಟಲಿನಲ್ಲಿ ಆತ ’ಗ್ರೇಸ್’ ಎಂದು ಕರೆಯುತ್ತಾನೆ.  ಆಯಾಚಿತವಾಗಿ ಅವಳ ಗಂಟಲಿನಿಂದ ’ಆ?’ ಎನ್ನುವ ಸ್ವರ ಬರುತ್ತದೆ.  ತಿರುಗಿ ನೋಡಿದರೆ ಅವನು ಕುಸಿದಿರುತ್ತಾನೆ. ಲಿಫ್ಟ್ ಒಳಗೆ ಬಂದವಳೇ ಅವನ ತಲೆಯನ್ನು ತೊಡೆಯ ಮೇಲೆ ಇಟ್ಟುಕೊಳ್ಳುತ್ತಾಳೆ.  ಅವಳ ತಲ್ಲಣ ಮೇರೆ ಮೀರುತ್ತದೆ, ’ಅಚ್ಚು’ ’ಅಚ್ಚು’ ಎಂದು ಕನವರಿಸುತ್ತಾಳೆ.

ಅಪಾರ್ಟ್ಮೆಂಟ್ ಕಾವಲುಗಾರನ ನೆರವಿನಿಂದ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾಳೆ.  ಅವರಿಗೆಲ್ಲಾ ಅಚ್ಚರಿಯಾಗುವಂತೆ ಅವನ ವಿವರಗಳನ್ನು ಕೊಡುತ್ತಾಳೆ.  ಆತನನ್ನು ಐಸಿಯು ಗೆ ಕರೆದುಕೊಂಡು ಹೋಗುತ್ತಾರೆ. ಅವನ ಚಷ್ಮಾ ಅವಳ ಕೈಯಲ್ಲೇ ಉಳಿಯುತ್ತದೆ.  ಆಸ್ಪತ್ರೆಯ ಕಿಟಕಿಯಿಂದ ಕಾಣಿಸುವ ರೈಲು ಅವಳೆಡೆಗೆ ನೆನಪುಗಳನ್ನು ಹೊತ್ತು ತರುತ್ತದೆ.  ರೈಲ್ವೇ ಸ್ಟೇಶನ್ನಿನಲ್ಲಿ ಕಂಡ ಹುಡುಗ ಅಚ್ಚು, ಅವಳ ಮೊದಲ ಪ್ರೇಮ, ಅವಳ  ಪತಿಯಾಗಿದ್ದವನು, ಅವಳ ಮಗುವಿನ ತಂದೆ.
ಆ ದಿನಗಳಲ್ಲಿ ಆಕೆ ನರ್ಸ್ ಟ್ರೇನಿಂಗ್ ಗೆಂದು ಹೊರಟಿರುತ್ತಾಳೆ.  ರೈಲಿಗೆ ಕಾಯುವಾಗ ಮಳೆ. ಮನೆಯವರು ತಂದ ಕೊಡೆಯ ಕೆಳಗೆ ನಿಂತ ಹುಡುಗಿಗೆ ಮಳೆಯಲ್ಲಿ ಮನಸ್ಸುಪೂರ್ತಿ ನೆನೆಯುತ್ತಾ ನಿಂತ ಹುಡುಗ ಆಕರ್ಷಣೀಯನಾಗುತ್ತಾನೆ.

ಮಳೆ ಎಂದು ಮುಚ್ಚಿದ್ದ ಟ್ರೇನು ಕಿಟಕಿಯನ್ನು ಹುಡುಗಿ ತೆರೆಯುತ್ತಾಳೆ. ಅವನ ಮೌತ್ ಆರ್ಗನ್ ಸದ್ದಿಗೆ ಮೈ ಎಲ್ಲಾ ಕಿವಿಯಾಗುತ್ತಾಳೆ.  ಮಳೆಗೂ, ಸಂಗೀತಕ್ಕೂ ಪ್ರೇಮಕ್ಕೂ ಇದೆಂತಹ ನಂಟು? ಪ್ರೇಮ ಬಂದಾಗ ಪನ್ನೀರಿನ ಸಿಂಚನದಂತೆ ಕಾಣುವ ಮಳೆ, ಪ್ರೇಮ ಹೊರಟಾಗ ಯಾಕೆ ಆಕಾಶದ ಕಣ್ಣೀರಿನಂತೆ ಕಾಣುತ್ತದೆ?  ಅದೇ ಅಚ್ಯುತ ಮುಂದೊಮ್ಮೆ ’ಒಂಟಿತನ ನನಗೆ ಅಭ್ಯಾಸವಾಗಿದೆ, ಆದರೆ ಆಕಾಶ ಮಳೆಯಾಗಲೆಂದು ಮೋಡ ಕಟ್ಟುವಾಗ ಎದೆಯಲ್ಲಿ ಉಸಿರು ಸಿಕ್ಕಿಹಾಕಿಕೊಂಡಂತೆ ಅನ್ನಿಸುತ್ತದೆ’ ಅನ್ನುತ್ತಾನೆ.  ಮಳೆಯನ್ನು ಈ ಚಿತ್ರದಲ್ಲಿ ಹಲವಾರು ಭಾವಗಳಿಗೆ ಪ್ರತಿಬಿಂಬವಾಗಿ ಬಳಸಿಕೊಳ್ಳಲಾಗಿದೆ. ಹುಡುಗ ಹುಡುಗಿ ಮೊದಲು ಭೇಟಿ ಆದಾಗ ಬರುವ ’ಮಳೆಯ ಹನಿಗಳ ಸದ್ದಿನಂತಹ ಗೆಜ್ಜೆ, ಲೋಲಾಕು ಧರಿಸಿದವಳೆ’ ಎನ್ನುವ ಕುರುಪ್ ಅವರ ಹಾಡು ಎಷ್ಟು ಮೋಹಕ…

ಅಷ್ಟರಲ್ಲಿ ಅಚ್ಯುತನ್ ಸೊಸೆ ಮತ್ತು ಮೊಮ್ಮಗಳು ಬರುತ್ತಾರೆ. ಗ್ರೇಸ್ ವಾಸ್ತವಕ್ಕೆ ಬರುತ್ತಾಳೆ. ಆತ ಐಸಿಯು ನಲ್ಲಿರುವವನು, ಮನೆಯವರು ಸಂಬಂಧಗಳ ಹಕ್ಕಿನಲ್ಲಿ ಒಳಗೆ ಹೋಗಿಬಿಡುತ್ತಾರೆ. ಆದರೆ ಇವಳು ಯಾವ ಸಂಬಂಧ ಹೇಳಿ ಒಳಗೆ ಹೋಗುವುದು? ಬಾಗಿಲಾಚೆ ನಿಲ್ಲಬೇಕಾದ ಸಂಬಂಧಗಳ ಸಂಕಟ ಇಂತಹ ಕ್ಷಣಗಳಲ್ಲಿಯೇ ಅರಿವಾಗುವುದು.  ಕಾಯುತ್ತಿರುವ ಅವಳ ಮುಖದ ಮೇಲೆ ನಿಧಾನವಾಗಿ ಬಾಗಿಲು ಮುಚ್ಚಿಕೊಳ್ಳುತ್ತವೆ.  ಒಂದು ಚಿತ್ರ ಮಾಡುವಾಗ ಒಂದೊಂದು ದೃಶ್ಯವನ್ನೂ ಒಂದೊಂದು ಚಿತ್ರದಂತೆಯೇ ಭಾವಿಸಿ ಶ್ರಮ ಹಾಕಿದಾಗ ಇಂತಹ ಚಿತ್ರಗಳು ಹುಟ್ಟಿಕೊಳ್ಳುತ್ತವೆ. ಆ ದೃಶ್ಯದಲ್ಲಿ ಜಯಪ್ರದ ಅಭಿನಯಕ್ಕೆ ಸಲಾಮು.

ಆಕೆ ಮನೆಗೆ ಹಿಂದಿರುಗುತ್ತಾಳೆ.  ವೀಲಿಂಗ್ ಚೇರಿನಲ್ಲಿ ಬಾಗಿಲಿಗೆ ಬೆನ್ನು ಮಾಡಿ ಕುಳಿತ ಮೋಹನ್ ಲಾಲ್, ’ಈಗ ಆತ ಹೇಗಿದ್ದಾನೆ’ ಎಂದು ಕೇಳುತ್ತಾನೆ. ’ಐಸಿಯು ನಲ್ಲಿದ್ದಾನೆ’ ಎಂದು ಅವಳು ಉತ್ತರಿಸುತ್ತಾಳೆ.  ಒಳ್ಳೆಯ ನಟ ಆ ಸಂದರ್ಭದಲ್ಲಿ ತನಗೆ ವಿಷಯ ಏನೂ ಗೊತ್ತಿಲ್ಲದಿರುವುದರಿಂದ ’ಸರಿ’ ಎಂದು ಸುಮ್ಮನಾಗಿಬಿಡುತ್ತಾನೆ.  ಆದರೆ ಮೋಹನ್ ಲಾಲ್ ಎನ್ನುವ ಕ್ಲಾಸಿಕ್ ನಟ ಅವಳ ದನಿ ಕೇಳಿದ ತಕ್ಷಣ ಕೊಡುವ ಒಂದು ಪಾಸ್, ಏರುವ ಹುಬ್ಬು ಅವಳ ಮುಖ ಕಾಣದಿದ್ದರೂ ಅವಳ ದನಿಯಿಂದಲೇ ಅವಳ ಮನಸ್ಸಿನ ತಲ್ಲಣ ಇವನನ್ನು ತಾಕುತ್ತದೆ ಎಂದು ತೋರಿಸಿಕೊಟ್ಟುಬಿಡುತ್ತದೆ.

ಅವನು ಎಲ್ಲೂ ಓಡಾಡಲಾರ.  ಕಿಟಕಿ ಬಳಿ ಕುಳಿತು ಸಮುದ್ರ ನೋಡುತ್ತಿದ್ದಾನೆ. ‘with each new wave sea looks different’ – ಎಂದು ಅವನೆಂದಾಗ ಅವನು ಹೇಳುವುದು ಕಡಲಿನ ಬಗ್ಗೆಯೋ ಅಥವಾ ಅವಳ ಬಗ್ಗೆಯೋ ತಿಳಿಯುವುದಿಲ್ಲ.  ಈಗ ಅವನ ಬದುಕು ಅಷ್ಟೇ, ಕಡಲು ಏನೇ ಆಗಿದ್ದರೂ ಅದು ಅವನಿಗೆ ಕಣ್ಣಳವಿಗೆ ಮಾತ್ರ ಸಿಗುವ ಸಂಭ್ರಮ…

Director Blessy

Director Blessy

ಅವಳ ಅನ್ಯಮನಸ್ಕತೆ ಗಂಡನಿಗೆ ಗೊತ್ತಾಗುತ್ತಲೇ ಇದೆ.  ದೀಪ ಆರಿಸಿ ಮಲಗಿದ ಮೇಲೆ ಗಂಡ ಕೇಳುತ್ತಾನೆ, ’ಎಂದಿನಂತೆ ಪ್ರಾರ್ಥನೆ ಇಲ್ಲ, ಗುಡ್ನೈಟ್ ಇಲ್ಲ, ಚುಂಬನವಿಲ್ಲ… ಏನಾಯ್ತು?’ ಈ ಒಂದು ವಾಕ್ಯದಲ್ಲೇ ಅವರಿಬ್ಬರ ಸಂಸಾರದ ಬಗ್ಗೆ ನಮಗೆ ಅರ್ಥವಾಗುತ್ತದೆ.  ಗಂಡನನ್ನು ಮುತ್ತಿಟ್ಟವಳೇ ಗ್ರೇಸ್ ಅವನ ಎದೆಗೊರಗಿ ಅಳಲಾರಂಭಿಸುತ್ತಾಳೆ.  ಲಿಫ್ಟ್ ನಲ್ಲಿ ಕುಸಿದ ವ್ಯಕ್ತಿ ಯಾರು ಎಂದು ಹೇಳಿ ಅವಳು ಹಗುರಾಗುತ್ತಾಳೆ.  ನಲ್ವತ್ತು ವರ್ಷಗಳ ನಂತರ ನೋಡಿದ ಆಘಾತ ಅದು ಎಂದವನು, ತಾನು ಉಸಿರುಕಟ್ಟಿದವನಂತೆ ಕೆಮ್ಮಲು ಪ್ರಾರಂಭಿಸುತ್ತಾನೆ, ನಲವತ್ತು ವರ್ಷಗಳ ನಂತರ ಸಹ ತನ್ನ ಹೆಂಡತಿಯ ಮನಸ್ಸಿನಲ್ಲಿ ಮೊದಲ ಗಂಡನಿಗಾಗಿ ಇಷ್ಟು ಪ್ರೀತಿ ಇದೆ ಎಂದು ತಿಳಿದಾಗ ಅದು ಇವನಿಗಾಗುವ ಆಘಾತವೆ? ’ಅವನನ್ನು ಎಂದೂ ಭೇಟಿಯಾಗಬಾರದು ಎನ್ನುವುದೇ ನನ್ನ ಪ್ರಾರ್ಥನೆ ಆಗಿತ್ತು,’

ಹೆಂಡತಿ ಹೇಳುತ್ತಾ ಹೋದಂತೆ ಮೋಹನ್ ಲಾಲ್ ಕಣ್ಣುಗಳಲ್ಲಿ ಕಂಬನಿಯೊಂದು ಮೂಡುತ್ತಾ ಹೋಗುತ್ತದೆ. ಎಲ್ಲೂ ಮೆಲೋಡ್ರಾಮವಿಲ್ಲ, ಜೋರಾದ ಸಂಗೀತವಿಲ್ಲ, ಆದರೆ ಸದ್ದಾಗದೆ ಮೂಡುವ ಆ ಕಂಬನಿ ಕಡಲಿಗಿಂತ ದೊಡ್ಡದು… ’ಡಿವೋರ್ಸ್ ಜೊತೆಗೇ ಎಲ್ಲಾ  ಸಂಬಂಧಗಳು ಮುಗಿದುಹೋಗಬೇಕು ಎಂದರೆ ಹೇಗೆ ಸಾಧ್ಯ’ ಎಂದು ಅವನು ಸಮಾಧಾನ ಹೇಳುತ್ತಿರುವನೋ ಹೇಳಿಕೊಳ್ಳುತ್ತಿರುವನೋ? ಅವಳ ಮನಸ್ಸಿನಲ್ಲಿ ಮೆನನ್ ಬಗ್ಗೆ ಪ್ರೀತಿಯಿದೆ ಎಂದು ಅರ್ಥವಾಗಿದೆ, ಅವನು ಅದನ್ನು ಜೀರ್ಣಿಸಿಕೊಳ್ಳುತ್ತಾನೆ, ಹೆಂಡತಿಯ ಮೇಲೆ ಅಧಿಕಾರ ಸ್ಥಾಪನೆಗೆ ಹೋಗುವುದಿಲ್ಲ.

ಅವಳು ನೆನಪುಗಳಿಗೆ ಜಾರುತ್ತಾಳೆ. ಆಕೆ ಕ್ರಿಶ್ಚಿಯನ್, ಮೆನನ್ ಹಿಂದು.  ಪ್ರೀತಿಸಿ ಮದುವೆ ಆಗಿರುತ್ತಾರೆ. ಇಲ್ಲಿ ಚಿತ್ರ ಕೆಲವು ದಿಟ್ಟತನದ ನಡೆಗಳನ್ನು ಕಟ್ಟಿಕೊಡುತ್ತದೆ.  ಗಂಡನ ಎದೆಯ ಮೇಲೆ ತಲೆಯಿಟ್ಟು ಮಲಗಿರುವಾಗ ಅವಳಿಗೆ ಮೊದಲ ಗಂಡನ ಜೊತೆ ಕಳೆದ ರಸನಿಮಿಷಗಳು ನೆನಪಾಗಬಲ್ಲದು ಎನ್ನುವುದರಲ್ಲೇ ಬ್ಲೆಸ್ಸಿ ಅನೇಕ ಚೌಕಟ್ಟುಗಳನ್ನು ಮುರಿದಿದ್ದಾರೆ. ಬೆಳಗ್ಗೆ ಅವನ ಆರೋಗ್ಯ ವಿಚಾರಿಸಲು ಹೋದವಳು ಸೊಸೆಗೆ ಸತ್ಯ ತಿಳಿಸುತ್ತಾಳೆ. ಸೊಸೆಗೂ ಆಘಾತ.

ಮರುದಿನ ಮೊಮ್ಮಗಳು ಅಜ್ಜನನ್ನು ನೋಡಲು ಗೆಳೆಯನೊಂದಿಗೆ ಆಸ್ಪತ್ರೆಗೆ ಬರುವಷ್ಟರಲ್ಲಿ ಗ್ರೇಸ್ ಕಾಯುತ್ತಾ ಕೂತಿದ್ದಾಳೆ. ಕೋರ್ಟಿನಲ್ಲಿ ವಿಚ್ಛೇದನಕ್ಕೆ ಸಹಿ ಹಾಕಿದಷ್ಟು ಸುಲಭವಾಗಿ ಅವನನ್ನು ನಿನ್ನೆಯ ಲೆಕ್ಕಕ್ಕೆ ಸೇರಿಸುವುದು ಅವಳಿಗೆ ಸಾಧ್ಯವಾಗುವುದಿಲ್ಲ. ಅವನ ಒಂಟಿತನ ಅವಳಿಗೆ ಅರ್ಥವಾಗುತ್ತದೆ. ಅವನಲ್ಲಿ ಆಕೆ ಕೇಳುವುದು ಒಂದೇ ಮಾತು, ’ನನ್ನನ್ನು ಕ್ಷಮಿಸಲಾರೆಯಾ?’  ಆತ ಈಗಾಗಲೇ ಕ್ಷಮಿಸಿ ಆಗಿದೆ.  ಅದಕ್ಕಿಂತಲೂ ಹೆಚ್ಚಾಗಿ ಅವನಲ್ಲಿ ಒಂದು ಗಿಲ್ಟ್ ಇದೆ, ಮಗನನ್ನು ಅಮ್ಮನಿಂದ, ಅಮ್ಮನನ್ನು ಮಗನಿಂದ ದೂರ ಮಾಡಿದೆ ಎನ್ನುವ ಗಿಲ್ಟ್, ಸಂಸಾರ ಉಳಿಸಿಕೊಳ್ಳಲು ತಾನು ಸರಿಯಾಗಿ ಪ್ರಯತ್ನಿಸಲಿಲ್ಲವೇನೋ ಎನ್ನುವ ಗಿಲ್ಟ್.

ಅದರ ಭಾರವನ್ನು ಆತ ನಲ್ವತ್ತು ವರ್ಷಗಳಿಂದ ಹೊರುತ್ತಲೇ ಇದ್ದಾನೆ.  ಅವಳು ಬಿಟ್ಟುಬಂದವಳು.  ಹಾಗಾಗಿ ಅವಳ ಮನಸ್ಸಿನಲ್ಲಿ ಮುಖ್ಯವಾಗಿ ಸಿಹಿನೆನಪುಗಳೇ ಇರುತ್ತವೆ.  ಆದರೆ ಅವನು ಬಿಡಲ್ಪಟ್ಟವನು, ಒಂಟಿಯಾಗಿಯೇ ಉಳಿದವನು, ಬದುಕಿನಲ್ಲಿ  ಇನ್ನೊಂದು ಜೀವವನ್ನು ಪಡೆಯದವನು. ಅವನ ಮನಸ್ಸಿನಲ್ಲಿ ನೋವು, ಅವಮಾನ, ಕೀಳರಿಮೆ ಎಲ್ಲಾ.

ಈಗ ಎದುರಾಗಿರುವ ಅವಳ ಸಾಂಗತ್ಯ ಅವನಿಗೊಂದು ಹೊಸ ಹುರುಪು ಕೊಡುತ್ತದೆ.  ಒಂಟಿಯಾಗಿರುವ ಅವನನ್ನು ಕಂಡರೆ ಇವಳಿಗೂ ಮರುಕ. ಆದರೆ ಎರಡೂ ಮನೆಯ ಮಕ್ಕಳು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.  ಅಚ್ಯುತನ್ ಮಗನಿಗೆ ಬಿಟ್ಟು ಹೋದ ಅಮ್ಮನನ್ನು ಕಂಡರೆ ಇನ್ನಿಲ್ಲದ ಕೋಪ.  ಗ್ರೇಸ್ ಮಗಳಿಗೆ ಅಮ್ಮ ತನ್ನ ಮೊದಲ ಪತಿಯನ್ನು ಮಾತನಾಡಿಸುವುದೇ ಅವಮಾನ.  ಆದರೆ ಮೋಹನ್ ಲಾಲ್ ಈ ಹೊಸ ಸನ್ನಿವೇಶವನ್ನು ನಿಭಾಯಿಸುವ ಬಗೆಯೇ ಅದ್ಭುತ.

ಸ್ವತಃ ಫಿಲಾಸಫಿ ಪ್ರೊಫೆಸರ್ ಆಗಿದ್ದ ಮ್ಯಾಥ್ಯೂ ಅದನ್ನು ಬದುಕಿಗೂ ಅಳವಡಿಸಿಕೊಂಡವನು.  ಹೆಂಡತಿಯೊಡನೆ ಮುಕ್ತವಾಗಿ ಮಾತನಾಡಬಲ್ಲರು. ಒಮ್ಮೆ ಅವನು ’ love enters when you casually open a door,.’ ಅನ್ನುತ್ತಾನೆ. ಹೆಂಡತಿ ನನ್ನ ಬಗ್ಗೆ ನಿಮಗೆ ಆ ಆತಂಕವಿದೆಯೇ ಎಂದಾಗ ಅವನು ಕೊಡುವ ಉತ್ತರ, ’ಅದು ನನ್ನ ಪ್ರೇಮಕ್ಕಿಂತ ದೊಡ್ಡದಾಗಿದ್ದರೆ ಮಾತ್ರ ನನಗೆ ಆತಂಕವಾಗಬೇಕು’ – ಇದು ಅವನ ಆತ್ಮವಿಶ್ವಾಸ. ಆದರೆ ಅವನೂ ಮನುಷ್ಯ,  ’ಈ ಎರಡು ದಿನಗಳಿಂದ ನೀನು ಮೊದಲಿಗಿಂತ ಹೆಚ್ಚು ನನ್ನನ್ನು ಪ್ರೀತಿಸುತ್ತಿರುವೆ. ಅವನನ್ನು ಕಂಡುಬಂದಾಗಿನಿಂದ ನನ್ನ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿರುವೆ.

ಪ್ರೀತಿಯ ಬಗ್ಗೆ ಎಲ್ಲರೂ ಸ್ವಾರ್ಥಿಗಳು ಕಣೆ, ನಾನೂ ಸಹ’ ಎನ್ನಬಲ್ಲ ಪ್ರಾಮಾಣಿಕತೆ, ಬಿಚ್ಚುಮನಸು ಅವನಿಗಿದೆ.
ಚಿತ್ರದುದ್ದಕ್ಕೂ ಇರುವ ಕಡಲು ಈ ಬದುಕಿನ ಪಯಣಕ್ಕೆ ಸಂವಾದಿಯಾಗಿ ಬಂದಿದೆ.  ತಲ್ಲಣ ತೋರಿಸಲು ಕಡಲಿನ ಮೇಲೆ ಬೀಳುವ ಮಳೆಹನಿ ಒಂದು ರೂಪಕದಂತೆ ಬಂದಿದೆ. ಇಲ್ಲಿ ಇನ್ನೊಂದು ಕುರುಪ್ ಹಾಡು, ’ಕಡಲನ್ನು ಸೇರಿದ ಸೂರ್ಯ ತಣ್ಣಗಾಗಿದ್ದಾನೆ, ಒಲವೇ ನಿನ್ನೆದೆಯಲ್ಲಿ ಉರಿಯುತ್ತಿರುವ ಸೂರ್ಯನ ಕಥೆ ಏನು?…’. ಹಾಡು, ಕಡಲು ಮತ್ತು ಅವರ ಅಭಿನಯ, ಎಂತಹ ಸಂಯೋಜನೆ.

ಈಗೀಗ ಬೆಳಗಿನ ವಾಕಿಂಗ್ ಈ ಮೂವರಿಗೂ ಭೇಟಿ ಮಾಡುವ ಸಮಯ.  ಅಚ್ಯುತನಲ್ಲಿ ಈಗ ಒಂದು ಸಣ್ಣ ಬದಲಾವಣೆ.  ಅವಳನ್ನು ಕಂಡ ಮೇಲೆ ಅವನ ನಡೆ, ನುಡಿ ಎಲ್ಲದರಲ್ಲೂ ಒಂದು ಚಿಮ್ಮುವಿಕೆ ಬಂದಿದೆ.  ಆಗವನು ಮೊದಲ ’ಸೋತ ಮುದುಕ’ ಅಲ್ಲ.

ಮೊದಲ ಸಲ ಮೆನನ್ ಮತ್ತು ಮ್ಯಾಥ್ಯೂ ಭೇಟಿ ಆಗುವ ಸನ್ನಿವೇಶ ಈ ಮೂವರ ನಟನೆಗೂ ಸಾಣೆಗಲ್ಲು.  ಅಲ್ಲಿ ಅಂತರ್ಗತವಾದ ಹಲವಾರು ಪ್ರವಾಹಗಳಿವೆ, ಸುಳಿಗಳಿವೆ.  ಮೆನನ್ ಗೆ ’ಇವಳು ಮೊದಲು ನನ್ನವಳು ಎನ್ನುವ ಭಾವ. ಜೊತೆಗೆ ವೀಲ್ ಚೇರ್ ಮೇಲೆ ಕೂತ ಮ್ಯಾಥ್ಯೂ ಎದುರು ಆರಾಮಾಗಿ ನಡೆಯಬಲ್ಲ ತಾನಿನ್ನೂ ಜೀವನವನ್ನು ಎರಡು ಕೈಗಳಲ್ಲೂ ಹಿಡಿಯಬಲ್ಲವನು ಎನ್ನುವ ಸಣ್ಣ ಹೆಮ್ಮೆ. ಮ್ಯಾಥ್ಯೂಗೆ ಅವನೆದುರಲ್ಲಿ ’ನೋಡು ಇವಳೀಗ ನನ್ನವಳು’ ಎಂದು ಹೇಳಿ ತನ್ನ ಬದುಕಿನ ಎಲ್ಲೆಗಳನ್ನು ಪುನಹ ಸ್ಥಾಪಿಸಿಕೊಳ್ಳುವ ಹಠ. ಹಾಗಾಗಿಯೇ ಹೆಂಡತಿಯೊಡನೆ ಹೆಚ್ಚಿನ ಸಲಿಗೆಯಿಂದ ವರ್ತಿಸುತ್ತಾನೆ, ಮತ್ತು ಗ್ರೇಸ್ ಅದಕ್ಕೆ ಪ್ರತಿಸ್ಪಂದಿಸುತ್ತಾಳೆ. ಅಲ್ಲೊಂದು ಕಡೆ ಏನೋ ತೋರಿಸಬೇಕು ಎಂದು ಮೆನನ್ ಕರೆದುಕೊಂಡು ಹೋಗುತ್ತಾನೆ.  ಆದರೆ ಅಲ್ಲಿ ರಸ್ತೆ ಕುಸಿದು ವೀಲ್ ಚೇರ್ ಹೋಗಲಾಗುವುದಿಲ್ಲ. ಹೋಗಲಿ ನೀನು ನೋಡು ಬಾ ಗ್ರೇಸ್ ಎಂದು ಮೆನನ್ ಕೈಚಾಚುತ್ತಾನೆ.  ಆದರೆ ಅವಳು, ಒಬ್ಬಳೇ ನೋಡುವ ಯಾವು ದೃಶ್ಯವೂ ನನಗೆ ಚಂದವಲ್ಲ ಎಂದು ಬಿಡುತ್ತಾಳೆ. ಹತ್ತುವಾಗ ಇದ್ದ ಹುಮ್ಮಸ್ಸು ಇಳಿಯುವಾಗ ಅಚ್ಯುತನ್ ಹೆಜ್ಜೆಗಳಲ್ಲಿ ಇರುವುದಿಲ್ಲ.  ಆದರೆ ಗ್ರೇಸ್ ಅವನನ್ನು ಕಂಡರೆ ತನಗೆ ಪ್ರೀತಿ ಇದ್ದರೂ ತನ್ನ ’ಇಂದು’ ಇರುವುದು ಮ್ಯಾಥ್ಯೂ ಜೊತೆಯಲ್ಲಿ ಎನ್ನುವುದನ್ನು ನಯವಾಗಿಯೇ ತೋರಿಸುತ್ತಾಳೆ.  ಹೀಗೆ ಚಿತ್ರದಲ್ಲಿ ಕಾಣುವ ಹಲವಾರು ಪದರಗಳಿಂದಲೇ ಚಿತ್ರ ಕ್ಲಾಸಿಕ್ ಆಗುತ್ತದೆ.

ಕಡೆಗೊಮ್ಮೆ ಕೂಲಿಯವರ ನೆರವಿನಿಂದ ಆ ವೀಲ್ ಚೇರ್ ಎತ್ತಿಸಿಕೊಂಡು ಬಂದು ಆ ಏರನ್ನು ಹತ್ತುತ್ತಾರೆ.  ಅಲ್ಲಿ ನೂರು ಚಿಟ್ಟೆಗಳು!  ಆ ಒಂದು ಘಳಿಗೆಯಿಂದ ಆ ಮೂವರಲ್ಲಿ ಒಂದು ಅವರ್ಣನೀಯವಾದ ಸಂಬಂಧ ಪ್ರಾರಂಭವಾಗುತ್ತದೆ.  ಅದೊಂದು ಚಿಟ್ಟೆ ಅವರ ಜೊತೆಯಲ್ಲೇ ಇರುತ್ತದೆ, ರೆಕ್ಕೆ ಪಟಪಟಿಸುತ್ತದೆ. ಬದುಕುವುದು ಹೇಗೆ ಎಂದು ಗೊತ್ತಿದ್ದರೆ, ಬದುಕು ಕನಸಿಗಿಂತ ಸುಂದರ ಎಂದು ಮ್ಯಾಥ್ಯೂ ಆಗಾಗ ಹೇಳುತ್ತಿರುತ್ತಾನೆ.  ಆ ಚಿಟ್ಟೆ ಅಂತಹ ಬದುಕಿನ ಪ್ರೀತಿಗೆ ಪ್ರತೀಕವಾಗುತ್ತದೆ.
ಮನೆಯಲ್ಲಿ ಮಕ್ಕಳ ಪ್ರತಿರೋಧ ಹೆಚ್ಚಾಗುತ್ತದೆ.  ಗ್ರೇಸ್ ಮಗಳಂತೂ ತಾಯಿಯನ್ನು ’ಪಾಂಚಾಲಿ’ ಎಂದು ಕರೆದುಬಿಡುತ್ತಾಳೆ.  ಮಗಳ ಸಿಟ್ಟು ಮ್ಯಾಥ್ಯೂಗೆ ಅರ್ಥವಾಗುತ್ತದೆ, ಆದರೆ ಅವನು ಹೆಂಡತಿಯೊಟ್ಟಿಗೆ ನಿಲ್ಲುತ್ತಾನೆ. ’ನೀನು ನನ್ನನ್ನು ನಿನ್ನ ತಂದೆಯಾಗಿ ಮಾತ್ರ ನೋಡುತ್ತಿರುವೆ ಮಗನೆ, ನನ್ನನ್ನು ಒಬ್ಬ ವ್ಯಕ್ತಿಯಾಗಿ ನೋಡು. ಕಳೆದುಕೊಂಡ ಅವಳನ್ನು ನೋಡುವುದು, ಕೇವಲ ಮಾತನಾಡುವುದೂ ಸಹ ನನಗೆ ಅದೃಷ್ಟ ಅನ್ನಿಸುತ್ತದೆ, ಅರ್ಥ ಮಾಡಿಕೋ’ ಎಂದು ಮೆನನ್ ಮಗನಿಗೆ ಹೇಳುತ್ತಾನೆ.
ಬದುಕಿನ ಎಲ್ಲಾ ಸಂಭ್ರಮ ವಾಪಸ್ ಪಡೆದ ಮೆನನ್ ಒಂದು ಸಣ್ಣ ಪ್ರವಾಸ ಎಂದು ಹೇಳಿ ಅವರಿಬ್ಬರನ್ನೂ ಹೊರಡಿಸುತ್ತಾನೆ.  ಐದು ವರ್ಷಗಳು ಕೂತಲ್ಲೇ ದಿನ ಕಳೆದ ಮ್ಯಾಥ್ಯೂ ಗೆ ಈಗ ಬದುಕು ಮತ್ತೆ ಸ್ಪರ್ಶಕ್ಕೆ ಸಿಗುತ್ತಿದೆ! ಅಲ್ಲಿ ಅವರು ಒಂದು ಹೋಟೆಲ್ ಗೆ ಹೋಗುತ್ತಾರೆ.  ಹೆಂಡತಿಗಾಗಿ ಮ್ಯಾಥ್ಯೂ ಒಂದು ಹಾಡು ಹಾಡುತ್ತಾನೆ.

I’m Your Man
If you want a lover
I’ll do anything you ask me to
And if you want another kind of love
I’ll wear a mask for you
If you want a partner
Take my hand
Or If you want to strike me down in anger
Here I stand
I am your man
ಎಂತಹ ಪ್ರೇಮಿ ಈತ!

ಇಡೀ ಚಿತ್ರದಲ್ಲಿ ಗ್ರೇಸ್ ಮತ್ತು ಮೆನನ್ ದಾಂಪತ್ಯ ಮುರಿಯಲು ಏನು ಕಾರಣ ಎನ್ನುವುದನ್ನು ಬ್ಲೆಸ್ಸಿ ತೋರಿಸುವುದಿಲ್ಲ.  ಬಹುಶಃ ಅದು ಬೇಕೆಂದೇ ಇರಬಹುದು ಒಂದು ಕಾಲಘಟ್ಟ ಕಳೆದ ಮೇಲೆ, ಪರಿಣಾಮಗಳೇ ದೊಡ್ಡದಾದ ಮೇಲೆ ಎಂತಹ ಕಾರಣಗಳಾದರೂ ಕ್ಷುಲ್ಲಕ ಅನ್ನಿಸಿಬಿಡುತ್ತದೆ.

ಆದರೆ ಚಿತ್ರದಲ್ಲಿ ಗತ ಮತ್ತು ವರ್ತಮಾನದ ನಡುವಿನ ಎಳೆ ಹಿಡಿಯಲು ಬ್ಲೆಸ್ಸಿ ಸೋತಿದ್ದಾರೆ, ಎರಡೂ ಪ್ರತ್ಯೇಕ ಘಟಕಗಳಾಗಿಯೇ ನಿಂತುಬಿಡುತ್ತವೆ.  ನಲ್ವತ್ತು ವರ್ಷಗಳ ನಂತರ ಸಿಕ್ಕರೂ ಆ ಪರಿ ಮಿಡಿಯಬೇಕಾದರೆ ಅವರ ನಡುವಿನ ಪ್ರೀತಿ ಎಷ್ಟು ಆಳವಾಗಿರಬೇಕು?  ಅದನ್ನು ಕಟ್ಟಿಕೊಡುವುದು ಬ್ಲೆಸ್ಸಿ ಯಿಂದ ಸಾಧ್ಯವಾಗಿಲ್ಲ.  ಮೊದಲೇ ಹೇಳಿದ ಹಾಗೆ ಅದ್ಭುತವಾದ ನಟನೆ ಚಿತ್ರವನ್ನು ಹೊಳೆ ದಾಟಿಸುತ್ತದೆ.

ಚಿತ್ರದ ಇನ್ನೊಂದು ವಿಶೇಷವಿದೆ. ಇಲ್ಲಿ ಇಬ್ಬರು ವಯಸ್ಕ ದಂಪತಿಗಳ ನಡುವಿನ ದೈಹಿಕ ಸಾಮರಸ್ಯವನ್ನು ಕಟ್ಟಿಕೊಟ್ಟಿರುವ ರೀತಿಯೇ ಅನನ್ಯ.  ಭಾರತೀಯ ಚಿತ್ರಗಳಲ್ಲಿ ಒಂದು ವಯಸ್ಸನ್ನು ದಾಟಿದವರಲ್ಲಿ ಪರಸ್ಪರರ ನಡುವೆ ಇರುವ ದೈಹಿಕ ಆಕರ್ಷಣೆ ಮತ್ತು ಸಾಮರಸ್ಯವನ್ನು ತೋರುವ ಚಿತ್ರಗಳು ವಿರಳ. ಆದರೆ ನಡುವಯಸ್ಸೆಂದರೆ ಜೊತೆಗಿರುವ ದೇಹದ ಬಗ್ಗೆ ಪರಿಚಯ ಹೆಚ್ಚಾಗಿರುತ್ತದೆಯೇ ಹೊರತು ಅದು ಬೇಡಾಗಿರುವುದಿಲ್ಲ.  ಕೆಲವರು ಪ್ರೀತಿ ಮತ್ತು ಪ್ರಣಯದ ಬಿಸುಪನ್ನು ಸಹ ಹಾಗೆಯೇ ಉಳಿಸಿಕೊಂಡಿರುತ್ತಾರೆ.

ಆದರೆ ಇಲ್ಲಿ ಅವಳ ಸ್ಪರ್ಶದಲ್ಲಿ ಅವನಿಗೆ ಇನ್ನೂ ಬಿಸುಪಿದೆ, ಅವನ ಸ್ಪರ್ಶ ಇನ್ನೂ ಅವಳಲ್ಲಿ ಒಂದು ಮಾರ್ದವತೆಯನ್ನು ತುಂಬುತ್ತದೆ. ಅವರಿಬ್ಬರೂ ಕಾಯಾ, ವಾಚಾ, ಮನಸಾ ದಾಂಪತ್ಯ ನಡೆಸುತ್ತಿರುವವರು.  ಒಮ್ಮೆ ಅವಳು ಪಾರ್ಶ್ವವಾಯು ಆದ ಮೋಹನ್ ಲಾಲ್ ಕೈ ಬಳಸಿ, ಸ್ಪರ್ಶ ಗೊತ್ತಾಗುತ್ತ ಅಂತ ಕೇಳುತ್ತಾಳೆ, ಅವನು ’ಸ್ಪರ್ಶ ಗೊತ್ತಾಗದಿದ್ದರೂ ಅದರ ಅನುಭವದ ಅರಿವಿದೆ, ನೀನು ಸ್ಪರ್ಶಿಸಿದಾಗೆಲ್ಲಾ ನನ್ನೆದಯಲ್ಲಿ ಒಂದು ಅಲೆ ಏಳುತ್ತದೆ’ ಎನ್ನುತ್ತಾನೆ.

ಚಿತ್ರದ ಹೆಸರು ’ಪ್ರಣಯಂ’, ಪ್ರೇಮಕ್ಕೆ ಅದೆಷ್ಟು ಆಯಾಮಗಳು.. ಇಲ್ಲಿ ಇಬ್ಬರು ಪ್ರೇಮಿಗಳ ಪ್ರೇಮ ಇದೆ, ಗಂಡ ಹೆಂಡತಿಯರ ನಡುವಿನ ಪ್ರೇಮ ಇದೆ, ಅಪ್ಪ ಮಗನ ಪ್ರೇಮ ಇದೆ, ಇಬ್ಬರು ವಯಸ್ಸಾದ ಗೆಳೆಯರ ನಡುವೆ ಹುಟ್ಟುವ ಪ್ರೇಮ ಇದೆ. ಪ್ರೇಮ ಎಂದರೆ ಏನು ಎಂದು ಹುಡುಕಾಟದಲ್ಲಿರುವ ಎಳೆಯ ಹುಡುಗರ ಪ್ರೇಮ ಇದೆ. ಪ್ರೇಮ, ಇಳಿವಯಸ್ಸು ಮತ್ತು ಸಾವಿನ ಸುತ್ತಲೂ ಸುತ್ತುವ ಚಿತ್ರ ಬದುಕಿನ ಬಗ್ಗೆ ಕಾಣ್ಕೆಯನ್ನು ಕಟ್ಟಿಕೊಡುವುದು ಚಿತ್ರದ ವಿಶೇಷ.

ಕಡೆಯದಾಗಿ ಒಂದು ಮಾತು, ಬ್ಲೆಸ್ಸಿ ಮೋಹನ್ ಲಾಲ್ ಮತ್ತು ಮುಮ್ಮುಟ್ಟಿ ಇಬ್ಬರಿಗೂ ಈ ಕಥೆಯನ್ನು ಹೇಳಿದಾಗ ಮುಮ್ಮುಟ್ಟಿ ಮೆನನ್ ಪಾತ್ರದ ಬಗ್ಗೆ ಆಸಕ್ತಿ ತೋರಿಸಿದರಂತೆ, ಮೋಹನ್ ಲಾಲ್ ಮ್ಯಾಥ್ಯೂ ಪಾತ್ರದ ಬಗ್ಗೆ.  ಹಾಗೊಂದು ವೇಳೆ ಅವರಿಬ್ಬರೂ ಈ ಪಾತ್ರಗಳನ್ನು ನಿಭಾಯಿಸಿದ್ದಿದ್ದರೆ…

‍ಲೇಖಕರು avadhi

July 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಭಾರತಿ ಬಿ ವಿ

    ನೋಡಬೇಕಾದ ಚಿತ್ರಗಳ ಸಾಲು ಬೆಳೆಯುತ್ತಲೇ ಇದೆ!
    ಎಷ್ಟು ಅದ್ಭುತವಾಗಿ ಕಟ್ಟಿಕೊಡುತ್ತೀಯಾ ಎಂದರೆ ಅದನ್ನು ನೋಡಬೇಕೋ ಅಥವಾ ಸುಮ್ಮನೆ ಓದಿಯೇ ಅದರ ಸ್ವಾರಸ್ಯ ಪೂರ್ತಿ ದಕ್ಕಿಯೇ ಬಿಟ್ಟಿದೆ, ಮತ್ತೇಕೆ ನೋಡಬೇಕು ಅಂತಲೂ ಅನ್ನಿಸಿಬಿಡುತ್ತದೆ ….

    ಪ್ರತಿಕ್ರಿಯೆ
  2. Prasad

    ಎಂದಿನಂತೆ ಅದೆಷ್ಟು ಸುಂದರವಾದ ಬರಹ… ಮಲಯಾಳಂ ಅರ್ಥವಾಗೋದಿಲ್ಲವಲ್ಲಾ ಎಂದು ಸಂಕಟವಾಗ್ತಿದೆ… ಸುಂದರ ಕವಿತೆಯಂತಿರುವ ಈ ಬರಹವು ಮನದಲ್ಲೂ ಹಲವು ತಲ್ಲಣಗಳನ್ನು ಹುಟ್ಟಿಸಿಬಿಟ್ಟಿತು… ಧನ್ಯವಾದಗಳು ಸಂಧ್ಯಾರಾಣಿಯವರೇ…
    – Prasad, Republic of Angola

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: