ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞಾ ಮತ್ತಿಹಳ್ಳಿ ಕವಿತೆ- ಸೈಡ್‌ ವಿಂಗಲಿ ಹೊಸ ವರ್ಷ…

ಪ್ರಜ್ಞಾ ಮತ್ತಿಹಳ್ಳಿ

ಮುದ್ದುಮಗುವೊಂದು ಅಕ್ಕರೆಯಲಿ
ನಕ್ಕಂತೆ ಹಳೆಸೀರೆಯಲಿ ಸಂಡಿಗೆಯರಳಿಸಿ
ನೋವಿನ ಸೊಂಟ ನೀವುತ್ತಲೇ ದೂರದ
ಕಾಗೆಗೆ ಹುಶ್‌ ಅಂದಿದ್ದಾಳೆ ಶಕ್ಕೂಬಾಯಿ
ಮದುವೆ ಕಾಣದ ಬರಿಗೊರಳಲ್ಲಿ ಎರಡೆಳೆಸರ
ಗೋಡೆ ಮೇಲೆ ಒಂಟಿನರಸಿಂಹನಿಗೆ ಅಭಯದ
ಕುಂಕುಮವಿಟ್ಟು ಸಿಕ್ಕದ ದುಶ್ಯಂತನ
ಎಂದೂ ನೆನೆಸದೆ ಅಚ್ಚುಕಟ್ಟಾಗಿ ಅವಲಕ್ಕಿ
ಕಲೆಸಿ ಪಟ್ಟಗೆ ತಿಂದು ಗಟ್ಟಿಯಾಗಿ ನಕ್ಕಿದ್ದಾಳೆ

ಸುಕ್ಕು ಗಟ್ಟಿದ ಕೆನ್ನೆಯೂದುವಂತೆ
ನಾಭಿಯಾಳದ ಕೂಗು ಮೊಳಗಿಸುತ್ತಾನೆ
ನಡುಮದ್ಯಾಹ್ನದ ರಣಬಿಸಿಲನ್ನೂ
ಸೋಲಿಸುವ ಉಮೇದಿಯಲ್ಲಿ ಹೆಜ್ಜೆಯೂರುತ್ತ
ಏಳು ದಶಕದ ಕುಲ್ಫಿ ಗಾಡಿ ದಬ್ಬುತ್ತಾನೆ ಜಾನಿ

ಕೊವಿಶೀಲ್ಡಿನ ಕೊನೆಯ ಡೋಸಿಳಿದ
ರಟ್ಟೆಗೆ ಅಂಗಿಯಿಳಿಸಿ ಆಟೊ ಹತ್ತಿದ
ಪಾಟೀಲಜ್ಜನಿಗೆ ಕೈಯಾಸರೆ ಕೊಟ್ಟು
ಬಾಗಿದ ಬೆನ್ನಿಗೆ ಆರು ದಶಕದ ಬಿಸಿಲುಂಡ
ಖಾಕಿಯಂಗಿ ಹಾಕಿಕೊಂಡು
ಚಾಲೂ ಆಗಲೊಪ್ಪದ ಗಾಡಿಯ
ಇಳುಕಲಿನಲ್ಲಿ ದಬ್ಬಿ ಡುರ್‌ ಅನ್ನಿಸಿ
ನಗೆಯಾಡುತ್ತಲೇ ಬೈಯುವ ಹುಸೇನಿ

ಅಕ್ಕಯ್ಯ ಜೋ ಎಂದು ಐದು ಮನೆ ಬಾಗಿಲಲಿ
ಜೋಳಿಗೆಯೊಡ್ಡಿ ಉಳಿದಂತೆ ಭಾರದ ಚೀಲದಲಿ
ತಿಂಡಿ ತಿನಿಸು ತುಂಬಿ ಮಾರುತ್ತ ಮಗಳ ಶಾಲೆಗೆ
ಫೀಸು ಕಟ್ಟಿ ಬಾಡಿಗೆ ಹೆಚ್ಚಿಸಿದ ಮಾಲಿಕನೊಂದಿಗೆ
ಜಗಳವಾಡಿ ಸ್ವಾಟೆ ತಿರುವಿ ಜನ್ಮ ಜಾಲಾಡಿದ್ದಾಳೆ ರೇಣಿ

ಮಂದಿ ಮನೆ ಮುಸುರೆ ತಿಕ್ಕುವ ಅವ್ವನ ಕಣ್ಣು
ತಪ್ಪಿಸಿ ಲಿಪ್ಸಿಟಿಕ್‌ ಬಳಿದು ಸೆಲ್ಫಿ ತೆಗೆದು ಸ್ಟೇಟಸ್‌
ಏರಿಸಿ ಆಚೀಚೆ ಏನೂ ಆಗಿಲ್ಲವೆಂಬಂತೆ ಸುಳಿದು
ಮೆಲ್ಲಗೆ ಫೋನಲ್ಲಿಣುಕಿ ಅವನು ನೋಡಿದನೊ
ಇಲ್ಲವೊ ಚಿಂತಿಸುತ್ತಲೇ ರಂಗೋಲಿಯೆಳೆಯುವ ವೇಣಿ

ಮೈತುಂಬ ಚಿಗುರಿದ ಮಾಮರದ ಪೊಟರೆಯಲಿ
ಕೂತು ಮೊಟ್ಟೆಯಿಟ್ಟು ಕೂಗುತಿದೆ ಕೋಗಿಲೆ
ಹಚ್ಚಗೆ ಮೊಗ್ಗರಳಿಸಿದ ಕಸ್ತೂರಿ ಮಲ್ಲಿಗೆ ತೂಗಿದೆ ತಲೆ
ಬಣ್ಣ ಹಚ್ಚಿ ಕಾಯುತ್ತಿದೆ ಹೊಸವರ್ಷ ಸೈಡ್‌ ವಿಂಗಲೆ
ಧೀಗಣಕ್ಕೆ ಮೆಚ್ಚಿ ಶಿಳ್ಳೆ ಹಾಕುತ್ತಾರೆ ಭಲೆಭಲೆ

‍ಲೇಖಕರು Admin

22 December, 2022

1 Comment

  1. prathibha nandakumar

    ಚೆನ್ನಾಗಿದೆ ಪ್ರಜ್ಞಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading