ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ!

ಸುಚಿತ್ರ ಹೆಗ್ಡೆ

ಮಹಾರಾಣಿಯ ಮ್ಯಾರಥಾನ್ ಪಯಣ ಕೊನೆಗೂ ಮುಗಿದಿದೆ.

ನನ್ನ ಪ್ರವಾಸ ಕಥನ ‘ಜಗವ ಸುತ್ತುವ ಮಾಯೆ’ಯ ಒಂದು ಲೇಖನದೊಂದಿಗೆ ಇಂಗ್ಲೆಂಡಿನ ಮಹಾರಾಣಿಗೆ ಶ್ರದ್ಧಾಂಜಲಿ…

ಇಂಗ್ಲೆಂಡಿನ ರಾಣಿ ನನ್ನ ಕಾಲೇಜು ದಿನದಿಂದಲೂ ಕಾಡುತ್ತಲೇ ಇದ್ದಾಳೆ. ಪ್ರಜಾಪ್ರಭುತ್ವದ ಕಾಲದಲ್ಲೂ ಆಂಗ್ಲ ಸಾಹಿತ್ಯ ಓದಿದ್ದಕ್ಕೋ ಏನೋ ಈ ಬ್ರಿಟಿಷ್ ಮಂಬೊ ಜಂಬೊಗಳ ಬಗೆಗೆ ಸ್ವಲ್ಪ ಜಾಸ್ತಿಯೇ ಮೋಹ ಅಂದರೂ ತಪ್ಪಿಲ್ಲ. ನನಗೆ ಮತ್ತು ಕನ್ಸಿಸ್ಟೆನ್ಸಿ ಎನ್ನುವ ಪದಕ್ಕೆ ಸದಾ ಎಣ್ಣೆ ಸೀಗೆಯ ಸಂಬಂಧವಿರುವದಕ್ಕೇ ಇರಬೇಕು ಈ ಬಂಡೆಗಲ್ಲಿನಷ್ಟೇ ಅಚಲವಾದ ಎಲಿಜಾಬೆತ್ ಅಲೆಕ್ಸಾಂಡ್ರಾ ಮೇರಿ ಎಂಬ ಹೆಣ್ಣುಮಗಳ ಅಸಾಮಾನ್ಯ ಪಯಣದ ಬಗ್ಗೆ ಮುಗಿಯದ ಆಕರ್ಷಣೆ ಶುರುವಾದದ್ದು ಅನಿಸುತ್ತದೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ದೊರೆಯಾದ ಐದನೆಯ ಜಾರ್ಜ್ ನ ಎರಡನೇ ಮಗನ ಹಿರಿಯ ಮಗಳಾದ ಎಲಿಜಾಬೆತ್ ರಾಣಿಯಾಗಲು ಹುಟ್ಟಿದವಳೇ ಅಲ್ಲ. ಅವಳ ಬದುಕು ಸಾಮಾನ್ಯವಾಗಿ ರಾಜಮನೆತನದ ಇತರ ಸದಸ್ಯರಂತೆ ನಾಯಿಗಳು, ಕುದುರೆಗಳು, ಒಂದು ಕಂಟ್ರಿ ಹೌಸ್, ಮದುವೆ, ಗಂಡ ಎಂದು ಸುಖಾಸುಮ್ಮನೆ ಕಳೆದುಹೋಗಬೇಕಾಗಿತ್ತು. ಆದರೆ ವಿಧಿಯಾಟವ ಬಲ್ಲವರಾರು? ಅವಳ ಚಿಕ್ಕಪ್ಪ ಎಂಟನೇ ಎಡ್ವರ್ಡ್ ಅಮೇರಿಕದ ವಿಚ್ಛೇದಿತೆ ವಾಲಿಸ್ ಸಿಂಪ್ಸನ್ ಳನ್ನು ಮದುವೆಯಾಗಲು ಸಿಂಹಾಸನವನ್ನು ತ್ಯಜಿಸಿದಾಗ ವಿಪರೀತ ಉಗ್ಗು ಬರುವ ಮಾತನಾಡಲು ತೊದಲುವ ಅವಳ ತಂದೆ ಆರನೆಯ ಜಾರ್ಜ್ ಆಗಿ ಪಟ್ಟಾಭಿಷೇಕಗೊಂಡು, ಎಲಿಜಾಬೆತ್ ಭವಿಷ್ಯದ ರಾಣಿಯಾಗುವಂತಾಯಿತು. ದೂರದ ಕೆನ್ಯಾದ ಪ್ರವಾಸದಲ್ಲಿದ್ದಾಗ ತಂದೆ ತೀರಿಕೊಂಡ ಸುದ್ದಿ ಬಂದಾಗ ಮಗಳು ಅಯಾಚಿತವಾಗಿ ರಾಣಿಯ ಕಿರೀಟಕ್ಕೆ ತಲೆಯೊಡ್ಡಬೇಕಾಯಿತು.

‘ನನ್ನ ಮುಂದಿನ ಇಡೀ ಬದುಕು, ಅದು ದೀರ್ಘವಾದರೂ, ಚಿಕ್ಕದಾದರೂ ಸರಿ.. ನಿಮ್ಮ ಸೇವೆಗೆ ಮೀಸಲು’ ಎಂದು ಎರಡನೆಯ ಎಲಿಜಾಬೆತ್ ಬಾನುಲಿ ಪ್ರಸಾರದ ಮೂಲಕ ಜಗತ್ತಿನಾದ್ಯಂತ ಉದ್ಘೋಷಿಸಿದಾಗ ಅವಳು ಸರಿಯಾಗಿ ತನ್ನ ಇಪ್ಪತ್ತೊಂದನೇ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಳು. ಅಂದಿನಿಂದ ಇಂದಿನವರೆಗೂ ಅಂದರೆ ಎಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಅಭದ್ರತೆ ಕಾಡುತ್ತಿರುವ ಯುನೈಟಡ್ ಕಿಂಗ್ಡಂನಲ್ಲಿ ಒಂದು ಸ್ಥಿರತೆಯ ಸಂಕೇತವಾಗಿ ಸೂರ್ಯ ಮುಳುಗದ ಸಿಂಹಾಸನದಲ್ಲಿ ದೃಡವಾಗಿ ಆಸೀನಳಾಗಿದ್ದಾಳೆ.

ತನ್ನ ಟಿಯಾರಾದಷ್ಟೇ ಹೊಳೆಯುವ ಕಣ್ಣಿನ ಹುಡುಗಿಯೊಬ್ಬಳು ದೇಶಕ್ಕೇ ಅಜ್ಜಿಯೆನಿಸಿಕೊಂಡದ್ದಲ್ಲದೇ ಬ್ರಿಟಿಷ್ ಸಾಮ್ರಾಜ್ಯದ ಪತನದಿಂದ ಹಿಡಿದು, ಬಹುಸಂಸ್ಕೃತಿಯ ಉದಯ, ಅಂತಾರಾಷ್ಟ್ರೀಯ ಭಯೋತ್ಪಾದನೆ, ಬ್ರೆಕ್ಸಿಟ್ ನ ಸಮಸ್ಯೆಗಳು, ಕೋವಿಡ್ ಪಾಂಡೆಮಿಕ್ ಮೊದಲಾದ ಮಹತ್ತರ ಘಟನೆಗಳಿಗೆ ಸಾಕ್ಷೀಭೂತವಾಗಿದ್ದಾಳೆ. ಸದಾ ಬದಲಾಗುತ್ತಿರುವ ಜಗತ್ತಿನಲ್ಲಿ ತಾನು ಮಾತ್ರ ಎಳ್ಳಷ್ಟೂ ಬದಲಾಗದೇ, ತನ್ನ ದೇಶ ಗೆದ್ದಾಗ ಬೀಗುತ್ತ, ಬಿದ್ದಾಗ ಎಚ್ಚರಿಸುತ್ತ, ಹದಿನಾಲ್ಕು ಪ್ರಧಾನ ಮಂತ್ರಿಗಳು ಬಂದು ಹೋದರೂ ಯಾವುದೇ ಕಾರಣಕ್ಕೂ ರಾಜಕೀಯದ ಸುಳಿಯಲ್ಲಿ ಸಿಲುಕಿಕೊಳ್ಳದೇ ಇನ್ನೂ ದೃಡವಾಗಿ ಮುಂದುವರಿಯುತ್ತಿದ್ದಾಳೆ. ಅಷ್ಟೇ ಅಲ್ಲ, ಬ್ರಿಟನ್ನಿನ ಅತಿದೀರ್ಘ ಕಾಲ ಆಳಿದ ರಾಣಿಯಾಗಿ ಪ್ಲಾಟಿನಂ ಜೂಬಿಲಿ ಆಚರಿಸಿಕೊಳ್ಳುತ್ತಿದ್ದಾಳೆ.

ವಿವಾದಗಳಿಂದ ದೂರವಾಗಿ, ಕರ್ತವ್ಯಪರತೆಗೆ ಹೆಸರಾಗಿ, ಸಾರ್ವಜನಿಕ ಜೀವನಕ್ಕೊಂದು ಮಾದರಿಯಾಗಿ ಅದೆಷ್ಟು ಘನತೆಯಿಂದ ಬಾಳಬಹುದು ಎನ್ನುವದನ್ನು ಲೋಕಕ್ಕೆ ತೋರಿಸಿಕೊಟ್ಟ ಹಿರಿಮೆ ಬ್ರಿಟಿಷ್ ರಾಣಿಯದು. ಎಪ್ಪತ್ತು ವರುಷಗಳಿಂದ ಅದೇ ದಿನಚರಿಯನ್ನು ಒಂದಿಷ್ಟೂ ಕುಂದಿಲ್ಲದೇ ಬೇಸರವಿಲ್ಲದೇ ಅದೇ ನಿಷ್ಠೆಯಿಂದ ಪಾಲಿಸುತ್ತಿರುವದೇ ಒಂದು ಹೆಗ್ಗಳಿಕೆಯೆಂದು ನನಗನ್ನಿಸುತ್ತದೆ. ಅದಕ್ಕೇ ಇರಬಹುದು ಬ್ರಿಟಿಷರಿಗೆ ಇಂದಿಗೂ ರಾಣಿಯೆಂದರೆ, ರಾಜಮನೆತನವೆಂದರೆ ಮುಗಿಯದ ಮೋಹ..ನನ್ನದೂ ಹಾಗೇ.

ತಲೆಮಾರುಗಳು ಕಳೆದರೂ ಕರಗದಷ್ಟು ಆಸ್ತಿ, ಚಿನ್ನಾಭರಣಗಳು, ಪ್ರತಿ ಋತುವಿಗೆೊಂದು ಆಚರಣೆಗೆೊಂದು ಇರುವ ಅರಮನೆಗಳು, ಎಷ್ಟು ನಡೆದರೂ ಮುಗಿಯದಷ್ಟು ಭೂಮಿ, ಎಸ್ಟೇಟುಗಳು ಇರುವ ರಾಣಿ ಈಗೀಗ ತನ್ನ ಮೊದಲ ನಿವಾಸ ಬಕಿಂಗ್ ಹ್ಯಾಮ್ ಅರಮನೆ ಬಿಟ್ಟು ಕಂಟ್ರಿ ಹೌಸ್ ಎನಿಸಿದ ವಿಂಡ್ಸರ್ ಕ್ಯಾಸಲಿನಲ್ಲೇ ಹೆಚ್ಚಾಗಿ ಇರತೊಡಗಿದ್ದಾಳೆ. ನನ್ನ ಇಂಗ್ಲೆಂಡ್ ಪ್ರವಾಸ ಈ ಎರಡೂ ಅರಮನೆಗಳನ್ನು ನೋಡದೇ ಪೂರ್ಣವಾಗುವ ಹಾಗೇ ಇರಲಿಲ್ಲ. ಮೊದಲಿಗೆ ರಾಣಿಯ ಆಭರಣಗಳ ಸಂಗ್ರಹವಿದ್ದ ಲಂಡನ್ ಟವರಿನ ಕ್ರೌನ್ ಜುವೆಲ್ಸ್ ನೋಡಿ ನಮ್ಮ ಕೊಹಿನೂರ್ ಸಹಿತ ಕೊಳ್ಳೆ ಹೊಡೆದ ಅಪಾರ ಸಂಪತ್ತಿನ ಪ್ರದರ್ಶನ ನೋಡಿ ದಂಗಾಗಿದ್ದೆ. ಮರುದಿನ ವೆಸ್ಟಮಿನಿಸ್ಟರಲ್ಲಿರುವ ರಾಣಿಯ ಅಧಿಕೃತ ನಿವಾಸವಾದ ಬಕಿಂಗ್ ಹ್ಯಾಮಿಗೆ ಕಾಲಿಟ್ಟಾಗ ಮೊದಲು ಕಂಡದ್ದು ಸುಂದರವಾದ ಸೇಂಟ್ ಜೇಮ್ಸ್ ಪಾರ್ಕು ಮತ್ತು ಚಿರಪರಿಚಿತ ರಾಣಿ ವಿಕ್ಟೋರಿಯಾ ಸ್ಮಾರಕ. ಆಗಾಗ ಟಿವಿಯಲ್ಲಿ ಕಾಣುವ ದೊಡ್ಡ ಕಬ್ಬಿಣದ ಗೇಟು ಮತ್ತು ಅಚ್ಚ ಬಿಳಿಯ ಅರಮನೆ ಕೂಡ ಪರಿಚಿತವೆನಿಸುತ್ತದೆ. ಬ್ರಿಟಿಷ್ ಸಂಸ್ಕೃತಿಯ ಬಹುದೊಡ್ಡ ಅಂಗವಾಗಿರುವ ಮೊದಲ ಮಹಡಿಯ ಭವ್ಯವಾದ ಬಾಲ್ಕನಿಯತ್ತ ನೋಡಿದಾಗ ರಾಣಿ ಮತ್ತು ಅವಳ ಪರಿವಾರದ ಸದಸ್ಯರು ಪ್ರತ್ಯಕ್ಷವಾಗಿ ಕೈಬೀಸಿ, ನಕ್ಕಂತೆ ಭಾಸವಾಯಿತು.

ಹೊರಗಡೆ ನಿಂತು ಚೇಂಜ್ ಆಫ್ ಗಾರ್ಡ್ಸ್ ನೋಡಿಕೊಂಡು ಮೂವತ್ತು ಪೌಂಡುಗಳ ದುಬಾರಿ ಟಿಕೆಟ್ ಖರೀದಿಸಿ ಒಳಗಡೆ ಹೋದಾಗ ಮೊಟ್ಟ ಮೊದಲು ನೋಡಲು ಸಿಕ್ಕಿದ್ದು ಅಪೂರ್ವ ಕಲಾಕೃತಿಗಳು ಹಾಗೂ ಪ್ರಾಚ್ಯ ವಸ್ತುಗಳಿಂದ ತುಂಬಿದ ಕ್ವೀನ್ಸ್ ಗ್ಯಾಲರಿ. ನಂತರದಲ್ಲಿ ವೈಭವೋಪೇತ ಸಾರೋಟುಗಳು ಹಾಗೂ ರಾಣಿಯ ಮೆಚ್ಚಿನ ಕುದುರೆಗಳಿರುವ ರಾಯಲ್ ಮ್ಯೂಸ್. ದೇಶ ವಿದೇಶಗಳ ಗಣ್ಯಾತಿಗಣ್ಯರನ್ನು ಸ್ವಾಗತಿಸುವ, ಔತಣಗಳನ್ನು ಏರ್ಪಡಿಸುವ ಸ್ಟೇಟ್ ರೂಮುಗಳನ್ನು ಬೇಸಿಗೆಯಲ್ಲಿ ಮಾತ್ರ ನೋಡಬಹುದು. ಅಲ್ಲಿ ನವೀಕರಣದ ಕಾರ್ಯ ನಡೆಯುತ್ತಿರುವದರಿಂದ ಬಹಳಷ್ಟು ಜಾಗಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರಲಿಲ್ಲ.

ಹಾಗೆ ನೋಡಿದರೆ ರಾಣಿಯ ನೆಚ್ಚಿನ ಆವಾಸವಾದ ವಿಂಡ್ಸರ್ ಅರಮನೆ ಬಕಿಂಗ್ ಹ್ಯಾಮ್ ಗಿಂತ ಆಕರ್ಷಣೀಯವಾಗಿ ಕಾಣುತ್ತದೆ. ಏಕೆಂದರೆ ಇಲ್ಲಿ ಅಲ್ಲಿಗಿಂತ ಹೆಚ್ಚು ಜಾಗಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಲಂಡನ್ನಿನಿಂದ ಇಪ್ಪತ್ತೊಂದು ಮೈಲಿಗಳ ದೂರದಲ್ಲಿರುವ ವಿಂಡ್ಸರ್ ಗೆ ರೈಲಿನಲ್ಲಿ ಅಥವಾ ಕಾರಿನಲ್ಲಿ ಅರ್ಧ ದಿನದಲ್ಲಿ ಹೋಗಿಬರಬಹುದು. ವಿಂಡ್ಸರ್ ಮ್ಯಾನರ್ ಎಂದೇ ಹೆಸರಾಗಿರುವ ಇದು ಜಗತ್ತಿನಲ್ಲೇ ಅತಿ ದೊಡ್ಡ ಮತ್ತು ರಾಜಮನೆತನದ ವಾಸ್ತವ್ಯವಿರುವ ಏಕೈಕ ಅರಮನೆ. ಸ್ವಾರಸ್ಯವೆಂದರೆ ಇದರ ವೃತ್ತಾಕಾರದ ಗೋಪುರದ ಮೇಲೆ ಹಾರುವ ಧ್ವಜವನ್ನು ನೋಡಿಯೇ ರಾಣಿಯ ಇರುವಿಕೆಯ ಬಗ್ಗೆ ಅರಿತುಕೊಳ್ಳಬಹುದಾಗಿದೆ.

ನೀವೇನಾದರೂ ಇತಿಹಾಸಪ್ರಿಯರಾದರೆ ಈ ಅರಮನೆಯ ಪ್ರತಿಯೊಂದು ಜಾಗವೂ ನಿಮ್ಮೊಂದಿಗೆ ತಮ್ಮ ಕಥೆಯನ್ನು ತಾವಾಗಿಯೇ ಪಿಸುಗುಡುತ್ತವೆ. ಸುತ್ತಲಿನ ವಿಶಾಲವಾದ ಉದ್ಯಾನಗಳು, ರಾಜಮನೆತನಕ್ಕೆ ಸೇರಿದ ಅದ್ಭುತವೆನ್ನಿಸುವ ಕಲಾಕೃತಿಗಳು, ಭಾವಚಿತ್ರಗಳು, ಗ್ರಂಥಾಲಯ, ಹಿಂದಿನ ರಾಜರ ಖಾಸಾ ನಿವಾಸಗಳು, ಮಲಗುವ ಕೋಣೆಗಳು, ಅತಿಥಿಗಳಿಗೆ ಮೀಸಲಾದ ಕೋಣೆಗಳು, ಔತಣಕೂಟ ನಡೆಯುವ ವಿಶಾಲವಾದ ಹಾಲುಗಳು, ಸಭಾಂಗಣ ಹೀಗೆ ವಿಂಡ್ಸರಿನಲ್ಲಿ ನೋಡಿದಷ್ಟೂ ಮುಗಿಯದ ಜಾಗಗಳಿವೆ. ಅಂದಹಾಗೆ ಹ್ಯಾರಿ ಮತ್ತು ಮೇಗನ್ ರ ಮದುವೆಯೇ ಮೊದಲಾದ ಅನೇಕ ಅತಿಮುಖ್ಯವಾದ ಸಂಭ್ರಮಾಚರಣೆಗಳು ಇಲ್ಲಿಯೇ ನಡೆದಿವೆ. ಭವ್ಯವಾದ ರಾಜಮಹಲಿನ ವೈಭವ ಮತ್ತು ಇತಿಹಾಸ ನಮ್ಮನ್ನು ದಟ್ಟವಾಗಿ ಆವರಿಸಿಕೊಳ್ಳುವದಲ್ಲದೇ ಆ ಕಾಲದ ಜನಜೀವನದ ಪರಿಚಯ ಮಾಡಿಕೊಡುತ್ತವೆ. ಹತ್ತಿರದಲ್ಲೇ ಇರುವ ಈಟನ್ ಕಾಲೇಜು, ಫ್ರಾಗ್ಮೋರ್ ಅರಮನೆಗಳನ್ನೂ ನೋಡಿಕೊಂಡು ಮರಳಿ ಲಂಡನ್ನಿಗೆ ಬಂದಾಗ ಸಂಜೆಯ ಹೊಂಬಣ್ಣ ಥೆಮ್ಸ್ ನದಿಯಲ್ಲಿ ಪ್ರತಿಫಲಿಸುತ್ತಿತ್ತು.

ಪ್ರಜಾಪ್ರಭುತ್ವದ ಕಟ್ಟಾ ಪ್ರತಿಪಾದಕರಾದ ಆಂಗ್ಲರು ತಮ್ಮ ರಾಜಮನೆತನವನ್ನು ಮತ್ತು ರಾಣಿಯನ್ನು ಪ್ರೀತಿಸುವುದು ಒಂದು ವಿರೋಧಾಭಾಸದಂತೆ ಕಂಡರೂ ತಮ್ಮ ಸಂಸ್ಕೃತಿ, ಪರಂಪರೆಯನ್ನು ಪ್ರಾಣದಷ್ಟೇ ಪ್ರೀತಿಸುವ ಅವರನ್ನು ನೋಡಿದಾಗ ಇದು ಸಾಮಾನ್ಯವೆನಿಸುತ್ತದೆ. ಬ್ರಿಟಿಷರು ಹೇಳುವಂತೆ ರಾಣಿ ದೇಶದ ಮುಖ್ಯಸ್ಥಳಾಗಿ ದೇಶವನ್ನಾಳಿದರೆ, ಸರಕಾರ ದೇಶದ ಆಡಳಿತವನ್ನು ನೋಡಿಕೊಳ್ಳುತ್ತದೆ ಒಂದಿಡೀ ದಿನ ರಾಣಿಯ ವೈಭವದಲ್ಲಿ ಕಳೆದುಹೋಗಿದ್ದ ನಾನು ಕೊನೆಯಲ್ಲಿ ಬ್ರಿಟಿಷರ ಜನಪ್ರಿಯ ಹಾರೈಕೆಯಾದ ‘ಲಾಂಗ್ ಲಿವ್ ಕ್ವೀನ್’ ಎಂದು ನನಗರಿವಿಲ್ಲದಂತೆ ಉಸುರಿದೆ.

‍ಲೇಖಕರು Admin

September 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: