ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನ..

-ನಾ ದಿವಾಕರ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಪ್ರಭುಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನು ನಿರ್ಧರಿಸುವುದು ಸಾಂವಿಧಾನಿಕ ಮೌಲ್ಯಗಳ ಪರಿಪಾಲನೆ ಮಾತ್ರ. ಸಂವಿಧಾನ ಕೇವಲ ಒಂದು ಮಾರ್ಗದರ್ಶಕ ಗ್ರಂಥವಲ್ಲ. ಅಥವಾ ಇಂತಹುದೇ ನಿಯಮಗಳನ್ನು ಪಾಲಿಸಬೇಕೆಂದು ನಿಗದಿಪಡಿಸುವ ಒಂದು ಸಂಹಿತೆಯೂ ಅಲ್ಲ. ಪ್ರಜೆಗಳಿಂದ ಚುನಾಯಿತರಾದ ಪ್ರಜಾ ಪ್ರತಿನಿಧಿಗಳು ದೇಶದ ಅಭ್ಯುದಯಕ್ಕಾಗಿ, ಜನಸಾಮಾನ್ಯರ ಏಳಿಗೆಗಾಗಿ ಮತ್ತು ಉತ್ತಮ ಸಮಾಜದ ನಿಮರ್ಾಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಯಾವ ದಿಕ್ಕಿನಲ್ಲಿ ನಡೆಸಬೇಕು ಎಂದು ಸಲಹೆ ನೀಡುವ ಒಂದು ಅದ್ಭುತ ಗ್ರಂಥ ಸಂವಿಧಾನ. ಭಾರತದ ಸಂವಿಧಾನವನ್ನು ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ರೂಪಿಸಲು 299 ಸದಸ್ಯರ ಸಮಿತಿ ವರ್ಷಗಟ್ಟಲೆ ಶ್ರಮ ವಹಿಸಿದೆ. ರಾಜಕೀಯ, ಆಥರ್ಿಕ, ಸಾಮಾಜಿಕ ವಲಯದ ಸಾವಿರಾರು ಮುತ್ಸದ್ದಿಗಳು ಭಾರತದ ಕೋಟ್ಯಾಂತರ ಜನಗಳ ಮೂಲ ಆಶಯಗಳನ್ನು ಪರಿಗಣಿಸಿ,  ಈ ಆಶಯಗಳನ್ನು ಸಾಕಾರಗೊಳಿಸಲು ಪೂರಕವಾಗುವಂತಹ ಕಾಯ್ದೆ ಕಾನೂನುಗಳನ್ನು ರಚಿಸಲು ನೆರವಾಗುವಂತೆ ಭಾರತದ ಸಂವಿಧಾನವನ್ನು ರಚಿಸಿದ್ದಾರೆ. ಈ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಷ್ಠೆ, ಬದ್ಧತೆ ಮತ್ತು ಶ್ರದ್ಧೆ ಇಲ್ಲದ ಯಾವುದೇ ವ್ಯಕ್ತಿ ಭಾರತದ ಪ್ರಜೆಗಳನ್ನು ಪ್ರತಿನಿಧಿಸಲು ಅರ್ಹನಲ್ಲ ಎಂಬ ಒಂದು ಕಟ್ಟು ನಿಟ್ಟಿನ ಕಾಯ್ದೆಯನ್ನು  ಜಾರಿಗೊಳಿಸುವುದು  ಇಂದಿನ ತುರ್ತು ಅಗತ್ಯತೆ ಎನಿಸುತ್ತದೆ. ಕಾರಣ ಸ್ಪಷ್ಟ. ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಸಾಂವಿಧಾನಿಕ ಕರ್ತವ್ಯ ಪ್ರಜ್ಞೆಯೇ ಇಲ್ಲವಾಗಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಭಾರತ ಆರು ದಶಕಗಳ ಗಣತಂತ್ರವನ್ನು ಪೂರೈಸಿದ್ದರೂ ಇನ್ನೂ ಅದೇ ರಾಜಪ್ರಭುತ್ವದ ಮನೋಭಾವವನ್ನೇ ತೋರುತ್ತಿರುವ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಊಳಿಗಮಾನ್ಯ ಧೋರಣೆ ಇನ್ನೂ ಪಕ್ವವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಶಾಶ್ವತವಲ್ಲ ಎಂದು ನಂಬಲಾಗಿದೆಯಾದರೂ, ಭಾರತದ ರಾಜಕಾರಣದಲ್ಲಿ ಕುಟುಂಬ ಪ್ರಜ್ಞೆಯೇ ಮೇಲುಗೈ ಸಾಧಿಸಿರುವುದರಿಂದ ಅಧಿಕಾರ ಕೇಂದ್ರೀಕರಣ ಕೌಟುಂಬಿಕ ಸ್ವರೂಪ ಪಡೆದಿದೆ.  ಮಾಜಿಯಾಗಲಿ, ಹಾಲಿಯಾಗಲಿ ಅಧಿಕಾರಸ್ಥ ರಾಜಕಾರಣ ಮಾತ್ರ ಒಂದೇ ರೀತಿಯಲ್ಲಿ ವತರ್ಿಸುವುದನ್ನು ಕಾಣುತ್ತಿದ್ದೇವೆ.

ಪ್ರಜೆಗಳು-ಪ್ರಭುಗಳು ಮತ್ತು ಪ್ರಜಾತಂತ್ರ

ಪ್ರಜೆಗಳ ದೃಷ್ಟಿಯಲ್ಲಿ ಕಾಣುವ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳೆಂಬ ಎರಡು ಬಣಗಳು ಬಾಹ್ಯ ಲೋಕಕ್ಕೆ ಭಿನ್ನವಾಗಿ ಕಂಡರೂ ಆಂತರಿಕವಾಗಿ ಎರಡೂ ಬಣಗಳು ಪ್ರಭುತ್ವವನ್ನೇ ಪ್ರತಿನಿಧಿಸುವುದು ಸತ್ಯ. ಹಾಗಾಗಿ ಈ ಎರಡೂ ಬಣಗಳ ಮೂಲ ಉದ್ದೇಶ ಪ್ರಭುತ್ವದ ಹಿತಾಸಕ್ತಿಗಳನ್ನು ರಕ್ಷಿಸುವುದರ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದೇ ಆಗಿರುತ್ತದೆ. ಹಾಗಾಗಿಯೇ ರಾಜಕಾರಣದಲ್ಲಿ ಶಾಶ್ವತ ವೈರಿಗಳಿಲ್ಲ ಎಂಬ ನಾಣ್ಣುಡಿ ಇಂದಿಗೂ ತನ್ನ ಗೂಡಾರ್ಥವನ್ನು ಉಳಿಸಿಕೊಂಡಿದೆ. ಇದರ ಪ್ರತ್ಯಕ್ಷ ನಿದರ್ಶನವನ್ನು ಕನರ್ಾಟಕದ ರಾಜಕಾರಣದಲ್ಲಿ ಕಾಣಬಹುದಾಗಿದೆ.  ತನ್ನ ರಾಜಕೀಯ ಪ್ರಾಬಲ್ಯ ಸ್ಥಾಪಿಸಲು ಗಣಿ ಧಣಿಗಳನ್ನು ಯಥೇಚ್ಚವಾಗಿ ಬಳಸಿಕೊಂಡ ಬಿಜೆಪಿಗೆ ನಾಯಕತ್ವ ನೀಡಿದ ಯಡಿಯೂರಪ್ಪ ಇಂದು ತಮ್ಮ ಮೂಲವನ್ನೇ ತಿರಸ್ಕರಿಸಿ ಸ್ವಾರ್ಥ ರಾಜಕಾರಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ಬೆಳವಣಿಗೆಗೆ ನೆರವು ನೀಡಿದ ಗಣಿ ಧಣಿಗಳು ಇಂದು ಯಡಿಯೂರಪ್ಪನವರ ವೈಯ್ಯಕ್ತಿಕ ಏಳಿಗೆಯ ಮೆಟ್ಟಿಲುಗಳಾಗಿ ಪರಿಣಮಿಸುತ್ತಾರೆ. ಮತ್ತೊಂದೆಡೆ ಅಕ್ರಮ ಗಣಿಗಾರಿಕೆಯ ವಿರುದ್ಧ ದನಿ ಏರಿಸಿ ಬಳ್ಳಾರಿ ಗಣಿಧಣಿಗಳ ವಿರುದ್ಧ ರಣಕಹಳೆ ಊದಿದ ದೇವೇಗೌಡ ಅಂಡ್ ಸನ್ಸ್ ಈಗ ಬಿಜೆಪಿಯಿಂದ ಹೊರಬಂದಿರುವ ಶ್ರೀರಾಮುಲು ಪರವಾಗಿ ತುತ್ತೂರಿ ಊದಲು ಸಿದ್ಧವಾಗುತ್ತಿದ್ದಾರೆ. ಈ ವಿದ್ಯಮಾನಗಳ ನಡುವೆ ಬಲಿಪಶುವಾಗಿರುವುದು ಯಾವ ರಾಜಕೀಯ ಪಕ್ಷವೂ ಅಲ್ಲ, ರಾಜಕಾರಣಿಯೂ ಅಲ್ಲ, ಬದಲಾಗಿ ಈ ರಾಜಕೀಯ ನಾಯಕರ ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಸಾರ್ವಜನಿಕರ ಮುಂದೆ ಬಿಚ್ಚಿಟ್ಟ ಒಂದು ಸಾಂವಿಧಾನಿಕ ಸಂಸ್ಥೆ. ಆಡಳಿತದಲ್ಲಾಗಲೀ ವ್ಯಕ್ತಿಗತ ನೆಲೆಯಲ್ಲಾಗಲೀ ಭ್ರಷ್ಟಾಚಾರ ಉದ್ಭವಿಸುವುದೇ ದುರಾಸೆಯ ಪರಿಣಾಮವಾಗಿ. ತನ್ನ ಅಧಿಕಾರ, ಪ್ರಾಬಲ್ಯ, ಅಧಿಪತ್ಯ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಅಧಿಕಾರಸ್ಥ ಶಕ್ತಿಗಳು ಉಪಯೋಗಿಸುವ ಅನೇಕ ತಂತ್ರಗಳಲ್ಲಿ ಭ್ರಷ್ಟಾಚಾರವೂ ಒಂದು. ರಾಜಕೀಯ ಪಕ್ಷಗಳು ಈ ತಂತ್ರವನ್ನು ಅನೇಕ ಸ್ವರೂಪಗಳಲ್ಲಿ ಅನುಸರಿಸಿದರೆ, ರಾಜಕಾರಣಿಗಳು ಈ ಸ್ವರೂಪಗಳನ್ನು ಮತ್ತಷ್ಟು ವಿಕೃತಗೊಳಿಸಿ ತಮ್ಮ ವೈಯ್ಯಕ್ತಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಾರೆ. ಈ ಒಂದು ವಿಶಿಷ್ಟ ವಿದ್ಯಮಾನವನ್ನು ಕನರ್ಾಟಕದ ಇತ್ತೀಚಿನ ರಾಜಕಾರಣ, ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣಗಳಲ್ಲಿ ಕಾಣಬಹುದು. ರಾಜಕೀಯ ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಅನಾವರಣಗೊಳಿಸಿದ ಲೋಕಾಯುಕ್ತವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿರುವುದನ್ನು ನೋಡಿದರೆ, ಭಾರತದ ಪ್ರಜಾತಂತ್ರಕ್ಕೆ ಭವಿಷ್ಯವೇ ಇಲ್ಲವೇನೋ ಎಂದು ಆತಂಕವಾಗುತ್ತದೆ.

ಮಾಜಿ ಪ್ರಧಾನಮಂತ್ರಿ ದೇವೇಗೌಡರು, ಲೋಕಾಯುಕ್ತದ ಅಧಿಕಾರಿಗೆ ದೂರವಾಣಿಯ ಮೂಲಕ ಬೆದರಿಕೆ ಹಾಕುವುದು ಸಂವಿಧಾನಕ್ಕೆ ಎಸಗಿದ ಅಪಚಾರವಲ್ಲದೆ ಮತ್ತೇನು ? ಶಾಲೆಗಳನ್ನು ಮುಚ್ಚುವುದಿಲ್ಲ ವಿಲೀನಗೊಳಿಸುತ್ತೇವೆ ಎಂದು ಶಿಕ್ಷಣ ಮಂತ್ರಿ ಹೇಳಿದಂತೆ  ತಾವು ಕೇವಲ ಎಚ್ಚರಿಕೆ ನೀಡಿದ್ದೇವೆ ಬೆದರಿಕೆ ಹಾಕಿಲ್ಲ ಎಂಬ ಸಬೂಬುಗಳನ್ನು ನಂಬಲು ಕನರ್ಾಟಕದ ಜನತೆ ಅಬ್ಬೇಪಾರಿಗಳಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸುವ ಪದಪುಂಜಗಳಿಗಿಂತಲೂ ಅವುಗಳ ಹಿಂದಿನ ಗೂಡಾರ್ಥವನ್ನು ಗ್ರಹಿಸುವ ಮಟ್ಟಿಗೆ ಕನರ್ಾಟಕದ ಜನತೆ ಪ್ರಜ್ಞಾವಂತರಾಗಿದ್ದಾರೆಂಬ ಸತ್ಯವನ್ನು ದೇವೇಗೌಡ ಮತ್ತು ಅವರ ಪುತ್ರರು ಗ್ರಹಿಸಬೇಕಿದೆ. ಆದರೆ ದೇವೇಗೌಡರಿಗಾಗಲಿ, ಯಡಿಯೂರಪ್ಪನವರಿಗಾಗಲೀ ತಮ್ಮ ಸ್ವಹಿತಾಸಕ್ತಿಗಳೇ ಪ್ರಧಾನವಾಗುತ್ತದೆಯೇ ಹೊರತು ಸಾಂವಿಧಾನಿಕ ಮೌಲ್ಯಗಳಲ್ಲ. ಹಾಗಾಗಿಯೇ ರಾಜಕಾರಣಿಗಳ ದೃಷ್ಟಿಯಲ್ಲಿ ಒಮ್ಮೆ ಹೀರೋ ಆಗಿ ಕಾಣುವ ಸಂತೋಷ್ ಹೆಗ್ಡೆ ಮರುಕ್ಷಣದಲ್ಲಿ ವಿಲನ್ ಆಗಿಯೂ ಕಾಣುತ್ತಾರೆ. ಕುಟುಂಬ ರಾಜಕಾರಣದಲ್ಲಿ ಹಾಸು ಹೊಕ್ಕಾಗಿರುವ ದೃತರಾಷ್ಟ್ರ ಪ್ರೇಮ ಕೇವಲ ದೇವೇಗೌಡರಿಗೆ ಸೀಮಿತವಲ್ಲ. ಕರುಣಾನಿಧಿಯನ್ನೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ತಮ್ಮ ಕೌಟುಂಬಿಕ ರಾಜಕಾರಣದ ರಕ್ಷಣೆಗಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ. ಕೇಂದ್ರ ಯುಪಿಎ ಸಕರ್ಾರದ ಭ್ರಷ್ಟಾಚಾರ ಹಗರಣಗಳನ್ನು ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸುವ ಬಿಜೆಪಿಯ ಕನರ್ಾಟಕದ ನಾಯಕರು, ತಮಗೆ ಸಿಬಿಐನಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾರೆ. ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ ಲೋಕಾಯುಕ್ತವನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿದ ದೇವೇಗೌಡರು, ತಮ್ಮ ಪುತ್ರನ ವಿರುದ್ಧ ಸೊಲ್ಲೆತ್ತಿದ ಕೂಡಲೇ ಲೋಕಾಯುಕ್ತ ಸಂಸ್ಥೆಯ ಪ್ರಸ್ತುತತೆಯನ್ನೇ ಪ್ರಶ್ನಿಸುತ್ತಾರೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಣುತ್ತಿರುವ ಕಟು ವಾಸ್ತವ. ಹಾಗಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವ ನಿರಂತರ ಯತ್ನ ನಡೆಯುತ್ತಲೇ ಇರುತ್ತದೆ.
ಸಂವಿಧಾನ ಬದ್ಧತೆ ಮತ್ತು ಆಳ್ವಿಕರ ಹಿತಾಸಕ್ತಿ
ಲೋಕಾಯುಕ್ತ ಸಂಸ್ಥೆಯಲ್ಲೇ ಭ್ರಷ್ಟರಿದ್ದಾರೆ ಎಂದು ಮಧುಕರ ಶೆಟ್ಟಿ ಎಂಬ ಒಬ್ಬ  ಅಧಿಕಾರಿ ಹೇಳಿದ ಮಾತ್ರಕ್ಕೆ ಸಂಸ್ಥೆಯ ಪ್ರಸ್ತುತತೆಯನ್ನೇ ಪ್ರಶ್ನಿಸುವ ರಾಜಕಾರಣಿಗಳು ಇಂತಹ ಅಧಿಕಾರಿಗಳನ್ನೇ ಏಕೆ ಖರೀದಿಸಬಾರದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಿಜ, ಭಾರತದಲ್ಲಿ ಸ್ಥಾಪಿಸಲಾಗಿರುವ ಅನೇಕ ಸಾಂವಿಧಾನಿಕ ಸಂಸ್ಥೆಗಳಲ್ಲಿ, ನ್ಯಾಯಾಂಗವನ್ನೂ ಸೇರಿದಂತೆ, ಭ್ರಷ್ಟರಿದ್ದಾರೆ, ಭ್ರಷ್ಟಾಚಾರವೂ ಇದೆ. ಹಾಗೆಂದ ಮಾತ್ರಕ್ಕೆ ಈ ಸಂಸ್ಥೆಗಳ ಪ್ರಸ್ತುತತೆಯನ್ನೇ ಪ್ರಶ್ನಿಸುವುದು ಪ್ರಜಾತಂತ್ರಕ್ಕೆ ದ್ರೋಹ ಬಗೆದಂತಾಗುತ್ತದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಕೇವಲ ರಾಜಕಾರಣಿಗಳದ್ದಲ್ಲ. ಪ್ರತಿಯೊಬ್ಬ ಪ್ರಜೆಯೂ ಈ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಈ ಸತ್ಯಾಂಶವನ್ನು ಅಧಿಕಾರಸ್ಥ ರಾಜಕಾರಣಿಗಳೂ ಅರಿತಿರಲಿ. ಯಾವುದೇ ಸಾಂವಿಧಾನಿಕ ಸಂಸ್ಥೆಯಲ್ಲಿನ ನ್ಯೂನತೆಗಳನ್ನು, ಲೋಪದೋಷಗಳನ್ನು ಸರಿಪಡಿಸುವ ಮೂಲಕವೇ ಭ್ರಷ್ಟ ರಾಜಕಾರಣಿಗಳನ್ನು ಮಟ್ಟಹಾಕುವುದು ಇಂದಿನ ಅಗತ್ಯತೆ. ಇದು ಪ್ರಜೆಗಳ ಆಶಯವೂ ಹೌದು. ಇಲ್ಲಿ ಪ್ರಶ್ನೆ ಉದ್ಭವಿಸುವುದು ಸಾಂವಿಧಾನಿಕ ಸಂಸ್ಥೆಗಳ ಪ್ರಸ್ತುತತೆಯ ಬಗ್ಗೆ ಅಲ್ಲ. ಬದಲಾಗಿ ಈ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸುವ ಪ್ರಭುತ್ವದ ಆಡಳಿತ ನೀತಿಗಳ ಬಗ್ಗೆ. ಲೋಕಾಯುಕ್ತವಾಗಲಿ, ನ್ಯಾಯಾಂವಾಗಲಿ, ಪೊಲೀಸ್ ಇಲಾಖೆಯಾಗಲಿ, ಇಲ್ಲಿ ಭ್ರಷ್ಟ ಅಧಿಕಾರಿಗಳನ್ನು ನೇಮಿಸುವ ಅಧಿಕಾರ ಇರುವುದು ಆಳ್ವಿಕರಿಗೇ ಅಲ್ಲವೇ ? ಪ್ರತಿಯೊಂದು ಆಡಳಿತಾರೂಢ ಪಕ್ಷವೂ ಎಲ್ಲ ಸಾಂವಿಧಾನಿಕ ಸಂಸ್ಥೆಗಳಲ್ಲಿ ತಮಗೆ ಬೇಕಾದವರನ್ನು, ತಮ್ಮ ನಿಲುವಿಗೆ ಸ್ಪಂದಿಸುವವರನ್ನು ನೇಮಿಸುವುದು ಭಾರತರ ರಾಜಕಾರಣದಲ್ಲಿ ಪರಂಪರೆಯಾಗಿಯೇ ಬೆಳೆದುಬಂದಿದೆ.

ಈ ನಿಟ್ಟಿನಲ್ಲಿ ಯಾವ ಪಕ್ಷವೂ ಭಿನ್ನವಾಗಿಲ್ಲ. ಹೀಗಿರುವಾಗ ಇಂತಹ ಸಂಸ್ಥೆಗಳಲ್ಲಿ ನುಸುಳಿರುವ ಭ್ರಷ್ಟ ಅಧಿಕಾರಿಗಳ ಹೇಳಿಕೆಗಳನ್ನೇ ಆಧರಿಸಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಸಾಧ್ಯವೇ ? ನ್ಯಾಯಾಂಗದಲ್ಲಿ ಭ್ರಷ್ಟರಿದ್ದ ಮಾತ್ರಕ್ಕೆ ನ್ಯಾಯಾಂಗದ ಸಿಂಧುತ್ವವನ್ನೇ ಪ್ರಶ್ನಿಸುವುದು ಸಾಧ್ಯವೇ ? ಈ ಪ್ರಶ್ನೆಗಳಿಗೆ ಆಳ್ವಿಕರು ಉತ್ತರ ನೀಡಬೇಕಿದೆ. ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜೆಗಳ ಕೈಗೇ ಅಧಿಕಾರ ನೀಡುವ ಉದಾತ್ತ ಚಿಂತನೆಯಿಂದ ರೂಪಿಸಿದ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಮುಂದಾಗಿರುವ ಭಾರತೀಯ ಪ್ರಭುತ್ವದ ಪ್ರತಿನಿಧಿಗಳು ಈಗ ದೇಶದ ಆಂತರಿಕ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡಲು ರಚಿಸಲಾಗಿರುವ ಸಾಂವಿಧಾನಿಕ ಸಂಸ್ಥೆಗಳನ್ನೂ ಬುಡಮೇಲು ಮಾಡಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಒಂದೆಡೆ ಭ್ರಷ್ಟಾಚಾರ ನಿಮರ್ೂಲನೆಗಾಗಿ ಲೋಕಪಾಲ್ ಮಸೂದೆ ಮಂಡಿಸಲು ಮುಂದಾಗುತ್ತಿರುವ ಜನಪ್ರತಿನಿಧಿಗಳು ಮತ್ತೊಂದೆಡೆ ಭ್ರಷ್ಟಾಚಾರವನ್ನು ನಿಗ್ರಹಿಸುವ ಸಾಧನಗಳಂತಿರುವ ಸಾಂವಿಧಾನಿಕ ಸಂಸ್ಥೆಗಳನ್ನೇ ನಾಶಪಡಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇದು ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನವೆಂದೇ ಹೇಳಬೇಕಾಗಿದೆ. ಲೋಕಾಯುಕ್ತ, ಲೋಕಪಾಲ್, ಸಿಬಿಐ, ನ್ಯಾಯಾಂಗ ಈ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಅವಶ್ಯಕತೆ ಇರುವುದು ಈ ದೇಶದ ಪ್ರಜೆಗಳಿಗೆ, ಅವರ ಹಿತಾಸಕ್ತಿಗಳ ರಕ್ಷಣೆಗೆ. ಇವುಗಳನ್ನು ರಕ್ಷಿಸುವ ಹೊಣೆಗಾರಿಕೆಯೂ ಪ್ರಜೆಗಳದ್ದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಭಾರತದ ಪ್ರಜೆಗಳು ಜಾಗೃತರಾಗದಿದ್ದಲ್ಲಿ ಮುಂದೊಂದು ದಿನ ರಾಜಕೀಯ ಭ್ರಷ್ಟಾಚಾರ ಅನಿರ್ಬಂಧಿತ ವಿದ್ಯಮಾನವಾಗಿ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ನುಂಗಿಹಾಕಬಹುದು.

ಚಿತ್ರಕೃಪೆ-Praja .in

‍ಲೇಖಕರು sreejavn

November 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. A P BHAT

    ನೂರಕ್ಕೆ ನೂರು ಸತ್ಯ . ಈಗಿನ ಸನ್ನಿವೇಶ ಭಯ ಮತ್ತು ವಾಕರಿಕೆ ತರಿಸುತ್ತಿದೆ
    ಸಂತೋಷ್ ಹೆಗ್ಡೆ ಯವರು ಅಭಿಮನ್ಯುವಿನಂತೆ ಆಗಿ ಹೋಗಿದ್ದಾರೆ. ನಮ್ಮಲ್ಲಿ ಒಬ್ಬ ಹಜಾರೆ
    ಹುಟ್ಟಿ ಬರಲಿ

    ಪ್ರತಿಕ್ರಿಯೆ
    • ದಿವಾಕರ

      It is not the question of individuals like hegde or hazare. We the people, who form the preamble of our constitution should be more vigilant, specially the learned, educated and elite. We have failed the masses to a large extent and given too much of powers to the powers that be to suppress the voices of dissent. That is the reason for this situation.

      Divakar

      ಪ್ರತಿಕ್ರಿಯೆ
    • K.Usha P. Rai

      nijakkoo sathya. indina raajakaarana holasaagi hogide. horaginavarellaa naguvanthaagide. raajakaaranigalalli aathmaprajneye illavaagide. ivaru namma raajyaada nishtaavantha raajakaarani endu hemmeyinda heluvahaage yaaraadaroo iddaareye? ivarellara holasu raajakeeyadalli badukuvudu namma krama allade innenu?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: