ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್ ರೈ ಎಂಬ ‘ಅಪ್ಪನೆಂಬ ಮಗು’

ಎಂ. ಎಸ್. ಪ್ರಸಾದ್

ಒಬ್ಬ ವ್ಯಕ್ತಿಯ ಸಾಮಾಜಿಕ ನಿಲುವಿಗೂ ಮತ್ತು ಹೃದಯವಂತಿಕೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ, ಇಂತಹ ಅನೇಕ ಗೆಳೆಯರು ನಮ್ಮ ಬದುಕಿನ ಮೇಲೆ ಮಾನವೀಯತೆಯ ಪ್ರತೀಕವಾಗಿ, ನಮ್ಮೊಳಗೇ ಶಾಶ್ವತವಾಗಿ ತಮ್ಮ ಛಾಪನ್ನು ಮೂಡಿಸಿರುತ್ತಾರೆ. ಇಂತಹ ಒಂದು ಪ್ರಸಂಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಕಿರು ತೆರೆಗೆ ಪ್ರಕೃತಿಯನ್ನು ಪರಿಚಯಿಸಿದ್ದು “ಚಂದನ” ವಾಹಿನಿ, ಅದರ ನಂತರ  ಗುರು ಸಮಾನರಾದ  ಟಿ ಎನ್ ಎಸ್ ಅವರ “ಮುಕ್ತ” ಧಾರಾವಾಹಿಯ “ಚಿನ್ನು”ವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದು ಗೆಳೆಯ ರಘು ಸಮರ್ಥ. ಆಕೆಯನ್ನು ತಮ್ಮ ಮನೆಯ ಮಗುವಿನಂತೆ ಬೆಳೆಸಿದ್ದು, ಗೆಳೆಯರಾದ ಬೀಸು ಸುರೇಶ, ಶೈಲಜಾ ನಾಗ್, ಎ ಜಿ ಶೇಷಾದ್ರಿ, ಪಿ.ಶೇಷಾದ್ರಿ ಮತ್ತು ಕಿರು ತೆರೆ ಹಾಗು ಚಿತ್ರರಂಗದ ತಂತ್ರಜ್ಞರು ಹಾಗು ಸಹ ಕಲಾವಿದರು.

 

ಪ್ರಕಾಶ್ ರೈ ಮತ್ತು ಪ್ರಕೃತಿ, ತಂದೆ ಮಗಳಾಗಿ  ಆನ್ ಸ್ಕ್ರೀನ್  ಜುಗಲ್ ಬಂದಿಯನ್ನು, ಎಲ್ಲರೂ ನೋಡಿದ್ದೀರಿ ಮತ್ತು ಮೆಚ್ಚಿಕೊಂಡಿದ್ದೀರಿ ಕೂಡ, ಆದರೆ ತೆರೆಯ ಮರೆಯ ಮಾನವ ಸಹಜ ಪ್ರೀತಿ, ಮಮಕಾರ, ವಾತ್ಸಲ್ಯ, ಅಕ್ಕರೆ ಎಲ್ಲರಿಗೂ ಗೊತ್ತಿರಲು ಸಾಧ್ಯವಿಲ್ಲ, ಅಂತಹ ಒಂದು ಪ್ರಸಂಗ ಇಲ್ಲಿದೆ.

“ನಾನು ನನ್ನ ಕನಸು” ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ, ಗೆಳೆಯ ಬೀಸು ಸುರೇಶ ಅವರ ನಿರ್ದೇಶನದಲ್ಲಿ “ಪುಟ್ಟಕ್ಕನ ಹೈವೇ” ಚಿತ್ರ ಶುರುವಾಯಿತು, ಮೈಸೂರಿನ ಸುತ್ತಮುತ್ತ ಹೊರಾಂಗಣದಲ್ಲೇ ಚಿತ್ರಿಸಲಾದ, ಈ ಚಿತ್ರದಲ್ಲಿ, ಕನ್ನಡದ ಮೇರು ಕಲಾವಿದರಾದ ಶೃತಿ, ಪ್ರಕಾಶ್ ರೈ, ಅಚ್ಯುತ ಕುಮಾರ್, ಮಂಡ್ಯ ರಮೇಶ್, ವೀಣಾ ಸುಂದರ್, ನೀನಾಸಂ ಸತೀಶ್, ಶ್ರೀನಿವಾಸ್ ಪ್ರಭು ಅಂತಹ ಹಿರಿಯ ಕಲಾವಿದರ  ಜೊತೆ ಪ್ರಕೃತಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಸುವರ್ಣವಕಾಶ ಒದಗಿ ಬಂದಿತ್ತು.

 

ಇಡೀ ತಂಡದಲ್ಲಿ ಪ್ರಕೃತಿ ಒಂದೇ ಮಗುವಾಗಿದ್ದರಿಂದ, ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದಳು, ಇದೇ ಸಂದರ್ಭದಲ್ಲಿ ವೀಣಾ ಸುಂದರ್ ಅವರಿಗೆ ‘ಮದ್ರಾಸ್ ಐ’ ಆದ ಕಾರಣ, ಅದು ಎಲ್ಲರಿಗೂ ಹರಡದಿರಲಿ ಎಂದು ಬೆಂಗಳೂರಿಗೆ ತೆರೆಳಿದ್ದರು. ಒಂದು ದಿನ ಹುಣಸೂರು ಹೊರವಲಯದಲ್ಲಿ ಶೂಟಿಂಗ್ ನಡೆಯುತ್ತಿತ್ತು, ಪ್ರಕೃತಿಗೆ ಕಣ್ಣು ಕೆಂಪಾಗಿರುವುದನ್ನು ಗಮನಿಸಿದ ಪ್ರಕಾಶ್ ರೈ ಅವರು, ವೀಣಾ ಅವರಿಗೆ ಕರೆ ಮಾಡಿ ಔಷದಿಯ ವಿವರವನ್ನು ಪಡೆದರು, ಅವರ ವಾಹನ ಚಾಲಕನಿಗೆ ಔಷದಿ ತರಲು ಕಳುಹಿಸಿದರು, ಹುಣಸೂರಲ್ಲಿ ಆ ಔಷದಿ ಲಭ್ಯವಿರಲಿಲ್ಲ, ಮುಂದೇನು ಎಂದು ನಾವು ಯೋಚಿಸುತ್ತಿರುವಾಗ, ಮೈಸೂರಿಗೆ ಹೋಗಿ ಔಷದಿ ತರಲು ಅವರ ಚಾಲಕನಿಗೆ ಸೂಚಿಸಿದರು.

ಔಷದಿ ಬಂದನಂತರ ಸಿಕ್ಕಾಪಟ್ಟೆ ಬಿಸಿಲು ಮತ್ತು ಹೊರಾಂಗಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದರಿಂದ ಪ್ರಕೃತಿಗೆ ವಿಶ್ರಮಿಸಲು ಜಾಗವಿರಲಿಲ್ಲ, ತಮ್ಮ ವಾಹನ ಚಾಲನೆಯಲ್ಲಿಟ್ಟು, ಎಸಿ ಆನ್ ಮಾಡಿ ವಿಶ್ರಮಿಸಲು ಅನುವು ಮಾಡಿಕೊಟ್ಟಿದ್ದು ಅಲ್ಲದೆ,  ಪ್ರಕೃತಿಯ ಕಣ್ಣಿಗೆ ಪ್ರತಿ ಘಂಟೆಗೊಮ್ಮೆ ತಾವೇ ಖುದ್ದಾಗಿ ಔಷದಿ ಹಾಕಿ, ಆಕೆಯನ್ನು ತಮ್ಮ ಮಗುವಿನಂತೆ ನೋಡಿಕೊಂಡದ್ದು, ನಮ್ಮ ಬದುಕಿನುದ್ದಕ್ಕೂ  ಮರೆಯಲಾಗದಂತಹ ಘಟನೆ. ಪ್ರಕೃತಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಗೆ, ಈ ಹೃದಯವಂತಿಕೆಯೇ ಸಾಕ್ಷಿ.

 

ಮನುಷ್ಯನ ಸ್ವರೂಪ ಮತ್ತು ಅವರ ವಯುಕ್ತಿಕ ನಿಲುವಿನ ಮೇಲೆ ನಾವು ಹಲವರನ್ನು, ನಾವು ಕಾಣದ  ತಕ್ಕಡಿಯಲ್ಲಿ ಹಾಕಿ ತೂಗುತ್ತೇವೆ, ಅವರು ಹೀಗೇ ಎಂದು ತೀರ್ಪನ್ನು ಸಹ ನೀಡುತ್ತೇವೆ, ಆದರಿಂದ  ಅವರ ಹೃದಯವಂತಿಕೆ ಮತ್ತು ಒಳ್ಳೆಯತನವನ್ನು ನಾವು ಕಲಿಯುವುದರಿಂದ ವಂಚಿತರಾಗುತ್ತೇವೆ.

As Dalai Lama says “Love and compassion are necessities, not luxuries. Without them Humanity cannot survive.

‍ಲೇಖಕರು Avadhi

24 October, 2018

3 Comments

  1. Srikanth Manjunath

    ಸುಂದರ ಅನುಭವ ಹಂಚಿಕೊಂಡಿದ್ದೀರಾ…ಬರಹವೂ ಸುಂದರವಾಗಿದೆ…ನಾವೆಲ್ಲಾ ನಾಣ್ಯಗಳಿದ್ದ‌‌ ಹಾಗೆ…ಒಂದರ ಮುಖ ಇನ್ನೊಂದಕ್ಕೆ ಕಾಣೋಲ್ಲ…ಕಲಾವಿದರೂ ಕಲಾವಿದರೇ..ಹೃದಯವಂತಿಕೆ ಇದ್ದವ ಕಲಾವಿದನಾಗಬಲ್ಲ…ಉತ್ತಮ ಉದಾಹರಣೆ ಈ ಲೇಖನ!

    ಸುಂದರ ಬರವಣಿಗೆ ಪ್ರಸಾದ್ ಮುಂದುವರೆಯಲಿ.

    ಜೊತೆಗೆ ಅಭಿನಂದನೆಗಳು

  2. Mudgal Venkatesh

    ಬರಹ ತುಂಬಾ ಹಿಡಿಸಿತು.

  3. Sangeetha sriSrikan

    ಮನುಷ್ಯ ಯಾವುದೊ ಘಟನೆಗೆ ನೀಡಿದ ಪ್ರತಿಕ್ರಿಯೆಯನ್ನು ನೋಡಿ/ ಓದಿ ( ಈ ಓದಿ ಏಕೆಂದರೆ ಅದೆಷ್ಟೋ ಬಾರಿ ಅವರು ಹೇಳಿದ್ದೆ ಒಂದಾದರೆ ಬರೆಯುವವರು ಬರೆಯುವುದು ಬೇರೆಯೆ ಆಗಿರುತ್ತದೆ) ಬಹಳಷ್ಟು ಜನ ವ್ಯಕ್ತಿಯನ್ನು ಒಳ್ಳೆಯವನು/ ಳು ಕೆಟ್ಟವನು/ ಳು ಎಂಬ ತಿರ್ಮಾನಕ್ಕೆ ಬಂದು ಬಿಡುತ್ತಾರೆ .. .. ಅವರ ಇನ್ನೊಂದು ಮಾನವಿಯ ಮುಖವಿರಬಹುದು ಎಂಬುದನ್ನು ಯೋಚಿಸುವುದಿಲ್ಲ… .. ( ಇದು ಕೇವಲ ಪ್ರಕಾಶ್ ರೈ ಮಾತ್ರವಲ್ಲ ಬಹಳಷ್ಟು ಜನರ ವಿಚಾರದಲ್ಲಿ ಹೀಗೆಯೇ ಆಗುತ್ತದೆ)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading