
ಪ್ರಸನ್ನ ಸಂತೇಕಡೂರು
ಅಂತು ಛಂದ ಪ್ರಕಾಶನದಿಂದ ಈ ವರ್ಷ ಪ್ರಕಟವಾದ ಕಾದಂಬರಿ. ಇದಕ್ಕೆ ಕನ್ನಡದ ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ ಅವರು ಬೆನ್ನುಡಿ ಬರೆದಿದ್ದಾರೆ.
ಅಂತು ಎಂಬ ಪದಕ್ಕೆ ಅರ್ಥ ಕೊನೆ, ತುದಿ, ಗುಟ್ಟು, ಮರ್ಮ, ಅಂಗು ಎಂದು ಹೇಳಬಹುದು. ಹಾಗಾದರೆ ಯಾವುದರ ಕೊನೆ? ಯಾವುದರ ಮರ್ಮ? ಯಾವುದರ ಗುಟ್ಟು? ಹುಟ್ಟು ಸಾವಿನ ಗುಟ್ಟೇನು? ಮನುಷ್ಯ ಸತ್ತ ನಂತರ ಏನಾಗುವನು? ಅವನ ಬದುಕಿನ ಉದ್ದೇಶವೇನು?
ವಿಶ್ವದ ಹಲವು ದೇಶದ ಪುರಾಣಗಳಲ್ಲಿ ಫೀನಿಕ್ಸ್ ಎಂಬ ಹಕ್ಕಿಯ ಪ್ರಸ್ತಾಪ ಬರುತ್ತದೆ. ನಮ್ಮ ರಾಜಕಾರಣಿಗಳು ಚುನಾವಣೆಗಳಲ್ಲಿ ಸೋತಾಗ ಫೀನಿಕ್ಸ್ ಹಕ್ಕಿಯ ರೀತಿ ಬೂದಿಯಿಂದ ಎದ್ದು ಬರುತ್ತೇನೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಫೀನಿಕ್ಸ್ ಪಕ್ಷಿ ಒಂದು ಕಾಲ್ಪನಿಕ ಪಕ್ಷಿ, ಇದರ ಬಣ್ಣ ಬಂಗಾರ ಮತ್ತು ಕಡುಗೆಂಪು ಎಂದು ಪುರಾಣಗಳಲ್ಲಿ ವರ್ಣಿಸಲಾಗಿದೆ.
ಈ ಪಕ್ಷಿಯನ್ನು ಇದುವರೆಗೆ ಯಾರು ನೋಡಿಲ್ಲ. ಆ ಕಾರಣದಿಂದ ಇದೊಂದು ಕಾಲ್ಪನಿಕ ಪಕ್ಷಿ. ಅಗ್ನಿಜ್ವಾಲೆಯಲ್ಲಿ ಸುಟ್ಟುಹೋದರೂ ಕೂಡ ತನ್ನದೇ ಬೂದಿಯಿಂದ ಫೀನಿಕ್ಸ್ ಹಕ್ಕಿಯು ಮತ್ತೇ ಹುಟ್ಟಿ ಬರುತ್ತದೆ ಎಂದು ಹೇಳುತ್ತಾರೆ. ವಿಶ್ವದ ಪುರಾತನ ನಾಗರೀಕತೆಯ ಭಾರತ, ಗ್ರೀಸ್ ಮತ್ತು ಈಜಿಪ್ಟ್ ದೇಶಗಳಲ್ಲಿನ ಕಾಲ್ಪನಿಕ ಮತ್ತು ಪೌರಾಣಿಕ ಕಥೆಗಳಲ್ಲಿ ಈ ಹಕ್ಕಿಯ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಹೇಳುತ್ತಾರೆ.
ಕೆಲವೊಮ್ಮೆ ಇದನ್ನು ಲೈಂಗಿಕ ಶಕ್ತಿಯನ್ನು ಮತ್ತೇ ಪಡೆಯುವುದರ ಪ್ರತೀಕವಾಗಿ ಕಾಣುತ್ತಾರೆ ಈ ಪಕ್ಷಿಯ ಕಲ್ಪನೆಯನ್ನು ಮಾಡಲಾಗಿದೆ ಎಂದು ಹೇಳುತ್ತಾರೆ. ಕನ್ನಡದಲ್ಲಿ ಆಲನಹಳ್ಳಿ ಶ್ರೀಕೃಷ್ಣರ ಫೀನಿಕ್ಸ್ ಎಂಬ ಕತೆ ಚಲನಚಿತ್ರವಾಗಿದೆ. ಹೊಸ ತಲೆಮಾರಿನ ಲೇಖಕಿ ಅರ್ಪಣ ಎಚ್ ಎಸ್ ಅವರು ಕೂಡ ‘ಫೀನಿಕ್ಸ್’ ಎಂಬ ಕತೆ ಬರೆದಿದ್ದಾರೆ.
ಹೊಸತಲೆಮಾರಿನ ಇನ್ನೊಬ್ಬ ಲೇಖಕಿ ದೀಪಾ ಹಿರೇಗುತ್ತಿ “ಫೀನಿಕ್ಸ್” ಎಂಬ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧ ಪಟ್ಟ ಪುಸ್ತಕವನ್ನು ಬರೆದಿದ್ದಾರೆ. ಇವರುಗಳೆಲ್ಲಾ ಫೀನಿಕ್ಸ್ ಪದವನ್ನೇ ನೇರವಾಗಿ ಉಪಯೋಗಿಸಿದ್ದಾರೆ. ಇವರ ಜೊತೆಗೆ ಕನ್ನಡದಲ್ಲಿ ಹಲವು ಕವಿತೆ ಕತೆಗಳು ಈ ಹೆಸರಿನಲ್ಲಿ ಬಂದಿರುವ ಸಾಧ್ಯತೆ ಇದೆ.

ಆದರೆ ರಾಷ್ಟ್ರಕವಿ ಕುವೆಂಪು ಅವರು “ಅಗ್ನಿಹಂಸ” ಎಂಬ ಫೀನಿಕ್ಸ್ ಪದಕ್ಕೆ ಸಮನಾದ ಕನ್ನಡದ್ದೆ ಆದ ಪದವನ್ನು ಬಳಸಿದ್ದಾರೆ. ಇದರಲ್ಲಿ ಅವರ ೪೫ ಕವಿತೆಗಳನ್ನು ಕಾಣಬಹುದು. ಇಲ್ಲಿ ಅವರು “ಅಗ್ನಿಹಂಸ” ಪದವನ್ನು ಆಧ್ಯಾತ್ಮಿಕವಾಗಿ ಬಳಸಿದ್ದಾರೆ. ಇದೆ ರೀತಿ ಅಗ್ನಿ ಕ್ಷಿಪಣಿಗಳನ್ನು ಗಗನಕ್ಕೆ ಹಾರಿಸುವಲ್ಲಿ ಮಹತ್ವದ ಪಾತ್ರವಯಿಸಿದ್ದ ಭಾರತದ ಮಾಜಿ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ “ಅಗ್ನಿಯ ರೆಕ್ಕೆಗಳು” ಎಂಬ ಆತ್ಮಕತೆಯಲ್ಲಿ ಕೂಡ ಈ ಪಕ್ಷಿಯನ್ನು ರೂಪಕವಾಗಿ ಬಳಸಿಕೊಂಡಿದ್ದಾರೆ.
ಈ ಪಕ್ಷಿಗೂ ಪ್ರಕಾಶ್ ನಾಯಕರ ಕಾದಂಬರಿಗೂ ಏನು ಸಂಬಂಧ? ಸಂಬಂಧವಿದೆ ಅದನ್ನು ತಿಳಿಯಲು ಕಾದಂಬರಿಯನ್ನು ಓದಬೇಕು. ಪ್ರಕಾಶ್ ನಾಯಕರು ಮೂಲತಃ ಯಶವಂತ ಚಿತ್ತಾಲರ ಉತ್ತರಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಚಿತ್ತಾಲರ ಶಿಕಾರಿ ಕಾದಂಬರಿಯ ನಾಯಕ ನಾಗಪ್ಪ ಕೂಡ ಹನೇಹಳ್ಳಿಯವನು.
ಶಿಕಾರಿ ಕಾದಂಬರಿಯದು ಮುಂಬಯಿಯ ಕಾರ್ಪೊರೇಟ್ ಜಗತ್ತು. ಅಂತು ಕಾದಂಬರಿಯ ವಸ್ತು ಅಮೆರಿಕಾದ ಪಶ್ಚಿಮ ಕರಾವಳಿಯ ಕ್ಯಾಲಿಫೋರ್ನಿಯಾದಲ್ಲಿರುವ ಸಿಲಿಕಾನ್ ಕಣಿವೆಯ ಕಾರ್ಪೊರೇಟ್ ಜಗತ್ತು. ಅಂತು ಕಾದಂಬರಿಯ ನಿರೂಪಕ ಕೂಡ ಗೋಕರ್ಣ ಸೀಮೆಯವನು. ಇಲ್ಲಿ ಶಿಕಾರಿ ಕಾದಂಬರಿಯ ನೇರ ಪ್ರಭಾವ ಇರದಿದ್ದರೂ ಚಿತ್ತಾಲರ ಪ್ರಭಾವ ಅಂತುವಿನಲ್ಲಿ ಸ್ವಲ್ಪ ಕಾಣುತ್ತದೆ.
ಕಾದಂಬರಿ ಆರಂಭವಾಗುವುದು ಕ್ಯಾಲಿಫೋರ್ನಿಯಾದಲ್ಲಿರುವ ಸಿಲಿಕಾನ್ ಕಣಿವೆಯ ವೃತ್ತ ಪತ್ರಿಕೆಯಲ್ಲಿ ಬಂದಿರುವ ಒಂದು ಕ್ರೈಂ ನ್ಯೂಸ್ ಮೂಲಕ. ಅದರಲ್ಲಿ “ಪತ್ನಿಯ ಹತ್ಯೆಯ ಆರೋಪದ ಮೇರೆಗೆ ಭಾರತೀಯ ಮೂಲದ ವಿಜ್ಞಾನಿಯ ಬಂಧನ” ಎಂಬ ಸುದ್ದಿಯಿಂದ ಎಂದು ಹೇಳಬಹುದು.
ಆ ವಿಜ್ಞಾನಿ ನಿಜವಾಗಲೂ ತನ್ನ ಪತ್ನಿಯನ್ನು ಕೊಂದನೆ? ಹಾಗಾದರೆ ಏಕೆ ಕೊಂದ? ಆ ಘಟನೆಯ ಆಧಾರದ ಮೇಲೆ ನಿರೂಪಕ ಏಕೆ “ಆತ್ಮಹತ್ಯೆಯ ಹಿಂದಿನ ದಾರುಣ ಕಥೆ” ಎಂಬ ಕತೆ ಬರೆದ? ಅದನ್ನು ಸಾಮಾಜಿಕ ತಾಣಗಳಲ್ಲಿ ಏಕೆ ಹಂಚಿಕೊಂಡ? ಅದಕ್ಕೆ ಅಪರಿಚಿತ ವ್ಯಕ್ತಿ ದಿಗಂಬರ್ ಏಕೆ ಪ್ರತಿಕ್ರಿಯೆ ನೀಡಿದ?
ಈ ದಿಗಂಬರ್ ಯಾರು?
ಈ ದಿಗಂಬರ್ ಮತ್ತು ನಿರೂಪಕ ರೆಸ್ಟೋರೆಂಟ್ ಒಂದರಲ್ಲಿ ಏಕೆ ಭೇಟಿಮಾಡುತ್ತಾರೆ?
ಸಿಲಿಕಾನ್ ಕಣಿವೆಯ ನೂರಾರು ಕಂಪನಿಗಳ ನೂರಾರು ಪ್ರಾಜೆಕ್ಟ್ ಗಳಲ್ಲಿ ಈ “ಫೀನಿಕ್ಸ್” ಪ್ರಾಜೆಕ್ಟ್ ಯಾವುದರ ಬಗ್ಗೆ ಇದೆ? ಎಲ್ಲವು ಒಂದು ಪತ್ತೇದಾರಿ ಕಾದಂಬರಿಯ ಸರಕುಗಳು.
ನನಗೆ ಪ್ರಕಾಶ್ ನಾಯಕ್ ಎಂಬ ಅದ್ಭುತ ಲೇಖಕರ ಪರಿಚಯವಾಗಿದ್ದು ಹೀಗೆ ಐದು ವರ್ಷಗಳ ಹಿಂದೆ ಎಂದು ಹೇಳಬಹುದು. ಉತ್ತರ ಕನ್ನಡ ಜಿಲ್ಲೆಯವರೆ ಆಗಿರುವ ಶ್ರೀದೇವಿ ಕೆರೆಮನೆಯವರು ಪುಸ್ತಕ ಪರಿಚಯ ಮಾಡಿಕೊಡುವ ಈ ಅಂಕಣದ ರೀತಿಯೇ ಇದೆ ಅಂತರ್ಜಾಲ ಪತ್ರಿಕೆ ಅವಧಿಯಲ್ಲಿ ಬರೆದಿದ್ದ ಒಂದು ಅಂಕಣದಿಂದ ಎಂದು ಹೇಳಬಹುದು.
ಆ ಅಂಕಣದಲ್ಲಿ ಶ್ರೀದೇವಿಯವರು ಪ್ರಕಾಶ್ ನಾಯಕ್ ಅವರ “ಅಮೂರ್ತ ಚಿತ್ತ” ಎಂಬ ಕಥಾಸಂಕಲನದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದರು. ಇಂತಹ ಒಳ್ಳೆಯ ಕತೆಗಾರರ ಕತೆಗಳನ್ನು ನಾನು ಇದುವರೆಗೂ ಓದಿರಲಿಲ್ಲವಲ್ಲ ಎಂಬ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದರು. ಅದನ್ನು ಓದಿದ ನಾನು ಅಮೆರಿಕದಲ್ಲಿಯೇ ಇದ್ದುದ್ದರಿಂದ ತಕ್ಷಣವೇ ಪ್ರಕಾಶ್ ನಾಯಕರನ್ನು ಸಂಪರ್ಕಿಸಿ ನಿಮ್ಮ “ಅಮೂರ್ತ ಚಿತ್ತ” ಕಥಾಸಂಕಲನವನ್ನು ನಾನು ಓದಬೇಕು ಎಂದು ಕೇಳಿಕೊಂಡಾಗ ಅವರು ಅದನ್ನು ತಕ್ಷಣವೇ ನನ್ನ ವಿಳಾಸಕ್ಕೆ ಕಳಿಸಕೊಟ್ಟರು.

ಅಲ್ಲಿನ ಕತೆಗಳನ್ನು ಓದಿ ಮುಗಿಸಿದಾಗ ಇವರೊಬ್ಬ ಅದ್ಭುತ ಕತೆಗಾರ. ಅಮೆರಿಕಾದಲ್ಲಿ ಇರದೇ ಕನ್ನಡನಾಡಿನಲ್ಲಿ ಇದ್ದಿದ್ದರೆ ಇವರ ಕತೆಗಳಿಗೆ ಹೆಚ್ಚು ಮಹತ್ವ ಸಿಗುತಿತ್ತು ಎಂಬ ಭಾವನೆ ಆ ತಕ್ಷಣವೇ ಮೂಡಿತ್ತು. ಆಮೇಲೆ ಅವಧಿಯಲ್ಲಿಯೇ “ಅಮೇರಿಕಾದಲೊಬ್ಬರು ಕನ್ನಡದ ಅದ್ಭುತ ಕಥೆಗಾರ ಪ್ರಕಾಶ್ ನಾಯಕ್” ಎಂಬ ಚಿಕ್ಕ ಟಿಪ್ಪಣಿಯನ್ನು ಬರೆದಿದ್ದೆ. ಆ ಕತೆಗಳಲ್ಲಿ ಹೊಸತನವಿತ್ತು. ಓದಿಸಿಕೊಂಡು ಹೋಗುವ ಕುತೂಹಲಕಾರಿ ವಿಷಯಗಳಿದ್ದವು.
ಪ್ರಕಾಶ್ ನಾಯಕರು ಅಮೆರಿಕಾದಲ್ಲಿನ ಕನ್ನಡ ಕೂಟ, ಕನ್ನಡ ಸಾಹಿತ್ಯ ರಂಗ, ಅಕ್ಕ ಪ್ರಕಟಿಸಿರುವ ಹಲವು ಪುಸ್ತಕಗಳ ಸಂಪಾದಕರಾಗಿ ಕಾರ್ಯ ನಿರ್ವಯಿಸಿದ್ದಾರೆ. ಆಲ್ಬರ್ಟ್ ಕಮೂವಿನ “ದಿ ಸ್ಟ್ರೇಂಜರ್” ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದು ಧಾರವಾಹಿ ರೂಪದಲ್ಲಿ ಅವಧಿಯಲ್ಲಿಯೇ ಪ್ರಕಟವಾಗಿತ್ತು ಎಂದು ನೆನಪು. ಇಷ್ಟೇ ಅಲ್ಲದೆ ಇವರ ಹಲವಾರು ಕತೆಗಳು ಮಯೂರ, ಉದಯವಾಣಿಗಳಲ್ಲಿ ಪ್ರಕಟವಾಗಿವೆ. ಇವರ ಒಂದು ಕತೆ ಕಿರುಚಿತ್ರವಾಗಿಕೂಡ ಜನಪ್ರಿಯತೆಗಳಿಸಿದೆ.
ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಏರ್ಪಡಿಸುವ “ಸ್ವರ್ಣಸೇತು” ಕಥಾ ಸ್ಪರ್ಧೆಯಲ್ಲಿ ನನ್ನ ಮಾಯಾಪಂಜರ ಕಥಾಸಂಕಲನದ ಮೊದಲ ಕತೆ “ಒಲವೇ ಜೀವನ ಸಾಕ್ಷತ್ಕಾರ” (ಹೂಗುಚ್ಛ) ಕತೆಗೆ ಮೊದಲ ಬಹುಮಾನ ಬಂದಿತ್ತು. ಆ ಸ್ವರ್ಣಸೇತು ನೆನಪಿನ ಸಂಚಿಕೆಯ ಸಂಪಾದಕರು ಇದೆ ಪ್ರಕಾಶ್ ನಾಯಕರು.
ಇನ್ನು ಅಂತು ಕಾದಂಬರಿಗೆ ಬರುವುದಾದರೆ ಇದೊಂದು ತುಂಬಾ ಒಳ್ಳೆಯ ಕಾದಂಬರಿ. ಕಾದಂಬರಿಯ ವಸ್ತು ತುಂಬಾ ಸಂಕೀರ್ಣವಾದದ್ದು. ಒಂದೇ ಓದಿಗೆ ಸುಲಭವಾಗಿ ಅರ್ಥವಾಗಲೂ ಕಷ್ಟವಾದರೂ ಇಲ್ಲಿ ಹೊಸತನವಿದೆ. ಈ ಕಾದಂಬರಿಯ ಬೆನ್ನುಡಿಯಲ್ಲಿ ಟಿ. ಪಿ. ಅಶೋಕ ಅವರು ” ‘ಅಂತು’ ಎಂಬ ಶಬ್ದದ ಎಲ್ಲ ಸಾಧ್ಯತೆಗಳನ್ನೂ ಅರ್ಥಪೂರ್ಣವಾಗಿ ಧ್ವನಿಸುವ ಈ ಕಾದಂಬರಿಯು, ತನ್ನ ವಸ್ತು ಮತ್ತು ಕಥನತಂತ್ರ ಎರಡೂ ದೃಷ್ಟಿಗಳಿಂದ ಕನ್ನಡ ಕಾದಂಬರಿಲೋಕಕ್ಕೆ ಒಂದು ವಿಶಿಷ್ಟ, ಮೌಲಿಕ ಸೇರ್ಪಡೆ” ಎಂದು ಹೇಳಿದ್ದಾರೆ.
ಇದರ ಜೊತೆಗೆ “ಸದ್ಯದ ಅತ್ಯಾಧುನಿಕವಾದ ಕಾರ್ಪೊರೇಟ್ ಜಗತ್ತಿನ ರೋಚಕ ವಿದ್ಯಮಾನಗಳನ್ನು ಲವಲವಿಕೆಯಿಂದ ನಿರೂಪಿಸುತ್ತಲೇ, ಅವುಗಳನ್ನೂ ಮೀರಿದ ನಿತ್ಯಸತ್ಯಗಳನ್ನು ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಒಂದು ಕುತೂಹಲಕಾರೀ ಪ್ರಾಜೆಕ್ಟಿನ ಪೂರ್ವಾಪರಗಳನ್ನು ಪತ್ತೇದಾರೀ ಶೈಲಿಯಲ್ಲಿ ಶೋಧಿಸುವಂತೆ ಆರಂಭವಾಗುವ ಈ ಬರಹವು ಕ್ರಮೇಣ ಹುಟ್ಟು-ಸಾವು-ಪುನರ್ಜನ್ಮಗಳಂಥ ಗಂಭೀರ ಪ್ರಶ್ನೆಗಳಿಗೆ ಎದುರಾಗಿ ತಾತ್ವಿಕ ಎತ್ತರಗಳಿಗೆ ಬೆಳೆಯುವ ಪರಿ ಗಮನಾರ್ಹವಾಗಿದೆ” ಎಂದು ಹೇಳುತ್ತಾರೆ.
ಇಷ್ಟೇ ಅಲ್ಲದೆ “ಕನ್ನಡನಾಡಿನಿಂದ ಬಹುದೂರದ ಅಮೆರಿಕಾದಲ್ಲಿ, ತೀರಾ ಭಿನ್ನವಾದ ಪಾತ್ರ-ಭಾಷೆ-ಔದ್ಯಮಿಕ ಪರಿಸರದಲ್ಲಿ ಸೃಷ್ಟಿಯಾಗುವ ಅನುಭವವನ್ನು ಕನ್ನಡ ಭಾಷೆಯಲ್ಲಿ ಒಳಗೊಳ್ಳುವ ಈ ಸೃಜನಶೀಲ ಪ್ರಯೋಗವು ಕನ್ನಡ ಸಾಹಿತ್ಯವು ಹಿಗ್ಗುತ್ತಿರುವ ಬಗೆಯನ್ನೂ ಕಾಣಿಸುತ್ತ ಆಸಕ್ತಿ ಹುಟ್ಟಿಸುತ್ತದೆ.
ತನ್ನ ಸ್ಮೃತಿಗಳಲ್ಲಿ ಜತನದಿಂದ ಕಾಪಿಟ್ಟುಕೊಂಡಿರುವ ಸ್ಥಳೀಯ ತಿಳಿವಳಿಕೆಯನ್ನು ಆಧುನಿಕ ಲೋಕಕ್ಕೆ ಮುಖಾಮುಖಿಯಾಗಿಸಿ ಕಥನ ಪ್ರಕ್ರಿಯೆಯನ್ನು ಸತ್ಯದ ಶೋಧವಾಗಿ ವಿಸ್ತರಿಸುವ ಪ್ರಯತ್ನದಲ್ಲಿ ಪ್ರಕಾಶ್ ನಾಯಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ‘ಅಂತು’ ನಿಸ್ಸಂದೇಹವಾಗಿ ಈ ದಶಕದ ಮುಖ್ಯ ಕನ್ನಡ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂಥದ್ದು” ಎಂದು ಹೇಳಿದ್ದಾರೆ.
ಟಿ. ಪಿ. ಅಶೋಕರ ಈ ಮಾತುಗಳು ಸತ್ಯಕೂಡ. ಹೊಸತನವಿಲ್ಲದೆ ಇಂದಿಗೂ ನಿಂತ ನೀರಿನಂತಾಗಿದ್ದ ಕನ್ನಡ ಸಾಹಿತ್ಯದ ಕಾದಂಬರಿ ಲೋಕಕ್ಕೆ ಹೊಸತವನ್ನು ಅಮೆರಿಕಾದಿಂದಲೇ ಗುರುಪ್ರಸಾದ್ ಕಾಗಿನೆಲೆಯವರು ಹಿಜಾಬ್ ಕಾದಂಬರಿಯ ಮೂಲಕ ನೀಡಿದ್ದರು. ಈಗ ಅಂತು ಕೂಡ ಆ ಸಾಲಿಗೆ ಸೇರಿದೆ.
ಕಾದಂಬರಿಯಲ್ಲಿ ಬರುವ ಕೌಶಿಕ್ ಕೃಷ್ಣ ಎಂಬ ವಿಜ್ಞಾನಿ ಒಬ್ಬ ಚಿತ್ರಕಾರ ಕೂಡ ಹೌದು. ಅವನೇ ಈ ಕಾದಂಬರಿಯ ಟರ್ನಿಂಗ್ ಪಾಯಿಂಟ್ ಕೂಡ. ಅವನು ಮತ್ತು ಅವನ ಪತ್ನಿ ಎಡ್ರಿಯಾನ ಫೆರಿಸ್ ಇಬ್ಬರು ಸೇರಿ ರಾವಣ ತನ್ನ ಮಗ ಇಂದ್ರಜಿತನು ಯುದ್ಧದಲ್ಲಿ ಮಡಿದಾಗ ರುದ್ರವೀಣೆ ನುಡಿಸುತ್ತ ಅವನನ್ನು ಬದುಕಿಸು ಎಂದು ಶಿವನಲ್ಲಿ ಪ್ರಾರ್ಥಿಸುವ ಚಿತ್ರವನ್ನು ಬಿಡಿಸಿರುತ್ತಾರೆ.

ರಾವಣ ರುದ್ರವೀಣೆ ನುಡಿಸುವ ಚಿತ್ರ ರಾವಣನಿಗೆ ಪುನರ್ಜನ್ಮದಲ್ಲಿ ನಂಬಿಕೆ ಇದೆ ಎಂದು ತೋರಿಸುತ್ತದೆ. ಜೊತೆಗೆ ಆ ಚಿತ್ರವನ್ನು ಬಿಡಿಸಿದ್ದ ಕೌಶಿಕ್ ಕೃಷ್ಣ ಮತ್ತು ಅವನ ಪತ್ನಿ ಎಡ್ರಿಯಾನ ಫೆರಿಸ್ ಪುನರ್ಜನ್ಮವನ್ನು ನಂಬುತ್ತಿದ್ದರು ಎಂದು ತೋರಿಸುತ್ತದೆ.
ಕಾದಂಬರಿಯ ಕೊನೆಗೆ ಓದುಗನಿಗೆ ಸಾವು, ಪುನರ್ಜನ್ಮ ಮತ್ತು ಮರುಜನ್ಮಗಳ ಬಗ್ಗೆ ನಿಖರವಾದ ಉತ್ತರ ಸಿಗುವುದಿಲ್ಲ. ಕಾರ್ಪೊರೇಟ್ ಜಗತ್ತಿನ ವಿದ್ಯಮಾನಗಳಿಗೂ ಸರಿಯಾದ ಕೊನೆಯೆಂಬುದಿರುವುದಿಲ್ಲ. ಇಂದು ಅಮೆರಿಕಾದಲ್ಲಿ ಮಾತ್ರವಲ್ಲ ಭಾರತದಲ್ಲೂ ವಿಚಿತ್ರವಾದ ಕಾರ್ಪೊರೇಟ್ ಉದ್ಯಮಗಳು ತಲೆಯೆತ್ತಿವೆ.
ಮಗುವೊಂದು ಜನಿಸಿದಾಗ ಅದರ ತಾಯಿಯ ಗರ್ಭದಿಂದ ಬರುವ ಹೊಕ್ಕುಳದ ಬಳ್ಳಿಯಿಂದ ಸಿಗುವ ಅದರ ಕಾಂಡಕೋಶಗಳನ್ನು ಶೈತ್ಯಾಗಾರದಲ್ಲಿ ಸಂರಕ್ಷಿಸಿ ಮುಂದೆ ಮಗುವಿಗೆ ಏನಾದರೂ ವಂಶವಾಹಿ ಸಂಬಂಧಿ ಖಾಯಿಲೆಗಳು ಬಂದರೆ ವಾಸಿಮಾಡಲು ಆ ಕಾಂಡಕೋಶಗಳನ್ನು ಬಳಸಿಕೊಳ್ಳಬಹುದು ಎಂದು ಹೇಳುವ ಉದ್ಯಮ ಒಂದು ಕಡೆಯಾದರೆ ಇನ್ನೊಂದು ಕಡೆ ಸತ್ತ ದೇಹದ ಅಂಗಗಳನ್ನು ಸಂರಕ್ಷಿಸಿ ಮಾರಿಕೊಳ್ಳುತ್ತಿರುವ ಉದ್ಯಮಗಳು ಕೂಡ ಇನ್ನೊಂದು ಕಡೆ ತಲೆಯೆತ್ತಿವೆ.
ಕಾದಂಬರಿಯ ಕೊನೆಯಲ್ಲಿ ಲೇಖಕರು “ಅಗ್ನಿಹಂಸ”ವೇನೋ ತಯಾರಾಯಿತು ನಿಜ ಆದರೆ ಒಟ್ಟಾರೆಯಾಗಿ ಅದು ಪುನರ್ಜನ್ಮವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಯಿತೇ ಎಂಬ ಪ್ರಶ್ನೆ ಓದುಗರ ಮುಂದೆ ನೀಡುತ್ತಾರೆ. ಗಟ್ಟಿಯಾಗಿ ಹೌದೆನ್ನಲು ನನಗೆ ಯಾವ ಪುರಾವೆಯೂ ಕಾಣಲಿಲ್ಲ ಎಂಬ ಉತ್ತರವನ್ನು ಅವರೇ ನೀಡುತ್ತಾರೆ.
ಇಲ್ಲಿ ಹುಟ್ಟು ಸಾವಿಗೆ ಯಾವುದು ಮೊದಲು ಯಾವುದು ಕೊನೆ ಎಂಬ ಉತ್ತರವಿದ್ದರೂ ಸತ್ತನಂತರ ಪುನರ್ಜನ್ಮ ಮತ್ತು ಮರುಜನ್ಮಗಳ ಬಗ್ಗೆ ನಿಖರವಾದ ಉತ್ತರ ಸಿಗುವುದಿಲ್ಲ. ಯಾವುದೇ ಮನುಷ್ಯ ನಾನು ಫೀನಿಕ್ಸ್ ಹಕ್ಕಿಯಂತೆ ಸತ್ತು ಪುನರ್ಜನ್ಮ ಪಡೆದು ನಮ್ಮ ಮುಂದೆ ಬಂದು ಹೇಳಲು ಸಾಧ್ಯವಿಲ್ಲ.
ಅದು ಆಸ್ಪತ್ರೆಯಿಂದ ಹಿಂತಿರುಗಿ ಮನೆಗೆ ಬಂದ ರೋಗಿಗಳನ್ನು ಬಿಟ್ಟು. ಆಧುನಿಕ ಜಗತ್ತಿನ ಅಭಿಜಿತ್ ಕಿಮಾನಿಯ ಫೀನಿಕ್ಸ್ ಕಂಪನಿ ನಿಲ್ಲಿಸದೆ ಮುಂದುವರೆಸಿದ್ರೆ ಜಗತ್ತಿಗೆ ಸತ್ಯ ಗೊತ್ತಾಗಿರುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಇತಿಹಾಸದಲ್ಲಿ ಸಾವಿರಾರು ಜನ ಈ ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ಸೋತಿರುವುದಂತೂ ಸತ್ಯ.
ಈ ಎಲ್ಲಾ ಕಾರಣದಿಂದ ಅಂತು ಕಾದಂಬರಿ ನಮ್ಮ ಮುಂದೆ ಬಹುದೊಡ್ಡ ಪ್ರಶ್ನೆಯನ್ನು ಬಿಡುತ್ತದೆ. ಅದಕ್ಕೆ ಉತ್ತರವನ್ನು ಓದುಗರೆ ಕಂಡುಕೊಳ್ಳಬೇಕು. ಇದೊಂದು ತುಂಬಾ ಒಳ್ಳೆಯ ಪ್ರಯತ್ನ. ಅಮೆರಿಕಾದಲ್ಲಿದ್ದರೂ ಈ ಕಾದಂಬರಿ ಮೂಲಕ ಪ್ರಕಾಶ್ ನಾಯಕರಿಗೆ ಕನ್ನಡನಾಡಿನಲ್ಲೂ ಹೆಚ್ಚು ಓದುಗರು ಸಿಗುವುದಂತೂ ಖಂಡಿತ. ಉತ್ತಮ ಕಾದಂಬರಿಯ ಮೂಲಕ ಕತೆಗಳಿಗೆ ಮಾತ್ರ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದ ಪ್ರಕಾಶ್ ನಾಯಕರು ಕಾದಂಬರಿ ಪ್ರಪಂಚಕ್ಕೂ ಕಾಲಿಟ್ಟಂತಾಗಿದೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರಿಂದ ಇನ್ನು ಹೆಚ್ಚು ಕಾದಂಬರಿಗಳು ಮೂಡಿಬರಲಿ.






0 Comments