ಅನ್ನದ ಕನಸಿನೊಳಗೆ ಬುಡ್ಡಿ ನಿಂಗಣ್ಣ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. 

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. 

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.


ಬದುಕು ಭಾರವಾದಾಗ ಅದನ್ನು ಹೊತ್ತು ನಡೆದುಬಿಡಬೇಕು ಬೆನ್ನ ಮೇಲಿನ ಬದುಕ ಬುತ್ತಿಯೊಳಗೆ ಏನಿದೆ ಎನ್ನುವುದನ್ನು ಅರಿಯದ ಕತ್ತೆಯ ಹಾಗೆ… ಬದುಕು ಜೀವಿಸುವವರ ಮುಂದೆಲ್ಲ ಹಲವು ರೂಪಗಳಲ್ಲಿ ಚೆಲ್ಲಿಕೊಂಡಿರುತ್ತದೆ. ಕನಸುಗಳು ಹಸಿವಿನ ಗರ್ಭಸೀಳಿ ಅನ್ನ ಹುಡುಕುತ್ತವೆ. ಎಷ್ಟೊಂದು ಕಣ್ಣುಗಳು ಈ ನೆಲದಲ್ಲಿ ಹಸಿವಿಗಾಗಿ ಮಣ್ಣು ನಂಬಿವೆ, ಶ್ರಮ ನಂಬಿವೆ, ಕನಸುಗಳ ನಂಬಿವೆ…

ನಿಯತ್ತಿನ ಚರ್ಮದೊಳಗಿನ ಜೀವ ದುಡಿದೇ ತಿನ್ನುವ ಹಠ ಧರಿಸಿರುತ್ತದೆ. ನನ್ನ ಊರಿನಲ್ಲಿ ಶ್ರಮಿಸಿಯೇ ಹಸಿವು ನೀಗಿಸಿಕೊಳ್ಳುವ ಹಿರಿಯರು, ಕಿರಿಯರು ಇದ್ದಾರೆ. ಊರೊಳಗಿನ ಕೊಟ್ಟಿಗೆಗಳ ಎಮ್ಮೆಗಳು ಬಯಲ ಹಸಿರಿನ ಕನಸಿಗೆ ಜೊತೆಯಾಗುವುದು ಹಿರಿಜೀವ ಬುಡ್ಡಿ ನಿಂಗಣ್ಣನಿಂದಲೇ.

ಬುಡ್ಡಿ ನಿಂಗಣ್ಣ ಉಸಿರಾಡುವುದು ಊರೊಳಗಿನ ಎಮ್ಮೆಗಳ ಜೊತೆಗೆ. ನನ್ನೂರು ಒಂದು ಕಾಲಕ್ಕೆ ಎಮ್ಮೆ ಹಸುಗಳನ್ನು ಮನುಷ್ಯರಿಗಿಂತಲೂ ಹೆಚ್ಚು ತುಂಬಿಕೊಂಡಿತ್ತು. ಇವುಗಳನ್ನು ಕಾಯಲೆಂದೇ ಒಬ್ಬರನ್ನು ನೇಮಿಸುತ್ತಿದ್ದರು. ಹಾಗೆ ಎಮ್ಮೆಗಳನ್ನು ಕಾಯಲು ಊರಿನವರೆಲ್ಲ ಸೇರಿ ನೇಮಿಸಲ್ಪಟ್ಟವರೆ ಬುಡ್ಡಿ ನಿಂಗಣ್ಣ.

ಈ ನಿಂಗಣ್ಣನಿಗೆ ಬುಡ್ಡಿ ಜೊತೆಯಾಗಿದ್ದು ಬೆಳಕಿಗಾಗಿ. ಊರ ಹೊರಗಿನ ಓಣಿಯ ಮಗ್ಗುಲಲ್ಲೇ ಸಣ್ಣದೊಂದು ಬಗ್ಗಡ ಬಳಿಯುವ ಮನೆ ಇವರದು. ಈ ಮನೆಯ ಗೋಡೆ ನೆಲಗಳು ಎಷ್ಟೋ ವರ್ಷಗಳ ಕಾಲ ವಿದ್ಯುತ್ ಕಾಣಲೇ ಇಲ್ಲ. ಬೈಗಾದರೆ ಸೀಮೆ ಎಣ್ಣೆ ಬುಡ್ಡಿಯ ಬೆಳಕಿನಲ್ಲಿ ಇವರ ಕನಸುಗಳು ಹರಿಯದೆ ನಿಂತಲ್ಲೇ ಸೊರಗಿ ಬಿಡುವುದನ್ನು ಕಂಡಿದ್ದೇನೆ.

ಈ ಬುಡ್ಡಿಯ ಬೆಳಕು ನಿಂಗಣ್ಣನ ಕಣ್ಣೊಳಗಿನ ಸ್ವಪ್ನಗಳಿಗೆ ಅನ್ನ ಸಿಗುವ ಧೈರ್ಯ ಕೊಟ್ಟಿದೆ. ಇವರ ಹೆಂಡತಿ ಹತ್ತಾರು ಜನ ಸ್ಥಿತಿವಂತರ ಮನೆಗಳಲ್ಲಿ ಕೂಲಿ ನಾಲಿ ಮಾಡುತ್ತಾ ಕಾಳು ಕಡ್ಡಿಗಳನ್ನು ಹಸನು ಮಾಡಿಕೊಡುವ ಕೆಲಸದಲ್ಲಿ ದಿನ ದೂಡುವುದು. ನಿಂಗಣ್ಣನಿಗೆ ವರ್ಷಕ್ಕೆ ಇಷ್ಟು ದವಸ ಧಾನ್ಯ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ಊರಿನ ಎಮ್ಮೆಗಳನ್ನು ಕಾಯುತ್ತಾರೆ.

ಪ್ರತಿದಿನವೂ ಬೆಳಗ್ಗೆ ರಾತ್ರಿ ಒಂದೊಂದು ಮನೆಗಳಲ್ಲಿ ಊಟಕೊಡುವುದಾಗಿ ಮಾತಾಗಿರುತ್ತದೆ. ಊರಿಂದ ಹೊರಗೆ ಎಮ್ಮೆಮಂದೆ, ಹಸುಗಳ ಮಂದೆಗಳು ಬೇರೆ ಬೇರೆ ಇವೆ. ಕರ ಬಿಟ್ಕಂಡ್ ಮೇಲೆ ಎಲ್ಲಾ ಮನೆಯವರು ದನ ಎಮ್ಮೆಗಳನ್ನು ಮಂದೆಗೆ ಕೂಡುವುದು ಪದ್ಧತಿ. ಬುಡ್ಡಿ ನಿಂಗಣ್ಣ ಹತ್ತು ಗಂಟೆಯ ಮೇಲೆ ಎಮ್ಮೆಗಳನ್ನು ಗಿಡಕ್ಕೆ ಮೇಯಲು ಹೊಡೆದುಕೊಂಡು ಹೋಗುವುದು. ನಮ್ಮ ಕಡೆ ಕಿರ್ಬಗಳು ಹೆಚ್ಚು. ಕೆಲವೊಮ್ಮೆ ಗಿಡಕ್ಕೆ ಹೋಗುವ ಎಮ್ಮೆ ಕಿರುಬನ ಪಾಲಾಗುತ್ತಿದ್ದವು.

ನಮ್ಮ ಗಿಡದಲ್ಲಿ (ಕಾಡು) ಅತಿ ಎತ್ತರಕ್ಕೆ ಬೆಳೆಯುವ ಪಚ್ಚಾಲಿ ಮರಗಳಿದ್ದವು. ದಟ್ಟವಾದ ಕಿರು ಅರಣ್ಯದಲ್ಲಿ ಇದ್ದ ಈ ಪಚ್ಚಾಲಿ ಮರಗಳು ಉದ್ದಕ್ಕೆ ಮುಗಿಲು ಮುಟ್ಟುವಂತೆ ಬೆಳೆದು ಗಟ್ಟಿಮುಟ್ಟಾದ ಮರಗಳೆನಿಸಿಕೊಂಡು ಹೆಸರು ಗಳಿಸಿದ್ದವು. ಇವುಗಳ ಸುತ್ತ ಮುತ್ತ ಬಲು ಸ್ಯಾದ್ರೆ. ಒಮ್ಮೆ ಮಳೆಗಾಲದಲ್ಲಿ ಜೋರು ಗಾಳಿ ಎದ್ದು ಎರಡು ಪಚ್ಚಾಲಿ ಮರಗಳು ಅರ್ಧಕ್ಕೆ ಮುರಿದು ಬಿದ್ದು ಒಣಗಿದ ಇನ್ನರ್ಧ ನೆಟ್ಟ ಕಂಬಗಳಂತೆ ಭದ್ರವಾಗಿ ಗಿಡದ ನಡುವೆ ಅಚಲವಾಗಿ ನಿಂತುಬಿಟ್ಟಿದ್ದವು.

ಗಿಡಕ್ಕೆ ಹೋದ ಎಮ್ಮೆ ದನ ಕರ ಕುರಿಮೇಕೆಗಳು ಕಳೆದುಹೋದರೆ ಈ ಪಚ್ಚಾಲಿ ಮರದ ಮೇಲೆ ಹತ್ತಿ ಕಣ್ಣಳತೆಗೆ ಕಾಣುವಷ್ಟು ನೆಲವನ್ನು ಹುಡುಕುವುದು ರೂಢಿಯಲ್ಲಿದೆ ಈಗಲೂ. ಈ ಜಾಗಕ್ಕೆ” ಪಚ್ಚಾಲಿ ಮರದ ಪಟ್ಟು” ಎಂಬ ಶಾಶ್ವತ ಹೆಸರು ಬಂದಿದೆ. ಇಲ್ಲಿ ದಟ್ಟ ಪೊದೆಯಂತೆ ಬೆಳೆದ ಮೈತುಂಬ ಮುಳ್ಳು ಹೊದ್ದ ಕಾರೇಗಿಡಗಳಿವೆ. ಇಲ್ಲಿಯೇ ಪೊದೆ ಮಾಡಿಕೊಂಡು ಸರಿಯಾದ ಕಿರ್ಬವೊಂದು ನೆಲೆಸಿತ್ತು. ದಿನವೂ ಒಂದು ಕರವೋ ಮರಿಯೋ ಹಸವೋ ಇದಕ್ಕೆ ಬಲಿಯಾಗುತ್ತಿದ್ದುದನ್ನು ತಪ್ಪಿಸಲು ಊರವರೆಲ್ಲ ಸಭೆ ಸೇರಿ ಒಂದು ತೀರ್ಮಾನಕ್ಕೆ ಬಂದರು.

ನನ್ನ ಅಜ್ಜ ಕುರಮದ್ದಿನ ಬಂದೂಕದಲ್ಲಿ ಇರುಳಿನಲ್ಲಿ ಬೇಟೆ ಆಡುವುದರಲ್ಲಿ ಪಳಗಿದವರು. ಇವರ ಜೊತೆಗಾರರಾದ ಮಗ್ಗಲು ಊರಿನ ಕಂಬಜ್ಜ ನಮ್ಮ ತಾತನಿಗೆ ಬೇಟೆಗೆ ಜೊತೆಯಾಗುತ್ತಿದ್ದವರು. ಇವರಿಬ್ಬರೂ ಬೆಳ್ದಿಂಗ್ಳು ಇದ್ದಾಗ ಈ ಕಿರ್ಬವನ್ನು ಹೊಡೆಯಲು ಮಾತಾಯ್ತು. ಹಗಲಿನಲ್ಲಿಯೇ ಈ ಪಚ್ಚಾಲಿ ಮರದ ಪಟ್ಟಿಗೆ ಹೋಗಿ ಒಂದು ಮಂಚಿಗೆ ಕಟ್ಟಿ ಅಲ್ಲಿ ಬಿಳಿಯ ಲುಂಗಿಯನ್ನು ಉದ್ದಕ್ಕೂ ಇಳಿಬಿಟ್ಟು ಕಾರೆಗಿಡದಲ್ಲಿ ಅಡಗಿ ಕುಳಿತು ನಡುರಾತ್ರಿಯವರೆಗೆ ಕಾದರಂತೆ.

ಬೆಳ್ಳಗೆ ಇಳಿಬಿದ್ದ ಲುಂಗಿಯನ್ನು ನೋಡಿ ಬೇಟೆ ಸಿಕ್ಕಿತೆಂದೇ ಮೆಲ್ಲಗೆ ಸಮೀಪಕ್ಕೆ ಸಾಗಿದ ಕಿರ್ಬ ರಭಸವಾಗಿ ಮಂಚಗೆಯ ಬಳಿನೆಗೆದ ಸಮಯಕ್ಕೆ ಸರಿಯಾಗಿ ನನ್ನಜ್ಜ ಗುಂಡು ಹಾರಿಸಿದರಂತೆ. ಎದೆಗೆ ಗುಂಡು ತಗುಲಿ ರೋಷಗೊಂಡ ಕಿರ್ಬ ಒಣಗಿ ನಿಂತ ಪಚ್ಚಾಲಿ ಮರಗಳನ್ನೆ ಪುಡಿಮಾಡುವಂತೆ ಮೇಲಕ್ಕೆ ಹಾರಿ ಕೆಳಗೆ ಬಿದ್ದು ಪ್ರಾಣಬಿಟ್ಟ ಘಟನೆ ಈಗಲೂ ರೋಚಕ ಸಾಹಸವಾಗಿ ಸಾಗುತ್ತಲೇ ಬಂದಿದೆ.

ಬೆಳದಿಂಗಳು ಮೆಚ್ಚಿ ಬುವಿಗಿಳಿದು ಈ ಅಜ್ಜಂದಿರಿಬ್ಬರನ್ನು ಅಭಿನಂದಿಸಿತೆಂಬಂತೆ ಈ ಸುದ್ದಿ ಊರಿನಲ್ಲಿದೆ.  ಊರಿನ ಜೀವಕುಲ ಉಳಿದದ್ದೆ ಈ ಮಹಾತ್ಮರು ಕಿರ್ಬವನ್ನು ಕೊಂದ ಮೇಲೆ ಎಂಬಂತೆ ಬುತ್ತಿ ತಗಂಡುಹೋಗಲು ಮನೆಗೆ ಬಂದಾಗ ಕಥೆ ಹೇಳೋರು. ನಿಂಗಣ್ಣನ ಮಾತು ಕೇಳಿದರೆ ಸಾಕು ಗ್ವಾಂದ್ಗೆಯಲ್ಲಿದ್ದ ಎಮ್ಮೆಗಳು ಅರ್ಸವು ಅಷ್ಟರ ಮಟ್ಟಿಗೆ ನಿಂಗಣ್ಣ ಈ ಜೀವಿಗಳಿಗೆ ಆಪ್ತ ಜೀವ.

ವರ್ಷೊಂಭತ್ತು ಕಾಲ ಎಮ್ಮೆಗಳಿಗೆ ಜೊತೆಗೂಡಿ ಆಡೊಂದಗ್ಲು ಇವುಗಳ ಹಿಂದೆ ತಿರುಗಿಯೇ ಬದುಕು ಸವೆಸಿದ ಜೀವ ಇವರದು. ಪ್ರತಿ ದಿನ ಮಂದೆಗೆ ಹೊಡೆಯುವ ಎಮ್ಮೆಗಳ ಗೊಬ್ಬರವು ಇವರಿಗೆ ಸೇರೋದು. ವರ್ಷದಲ್ಲಿ ಎರಡು ಬಾರಿ ಬೇಸಾಯ ಮಾಡುವವರಿಗೆ ಸಗಣಿಮಾರಿದ ಹಣವಷ್ಟೇ ಇವರ ಪಾಲಿಗೆ ದಕ್ಕುತ್ತಿತ್ತು.

ಬುಡ್ಡಿ ನಿಂಗಣ್ಣ ನ ಅಪ್ಪ ಕೂಡ ಊರ ದನಗಳನ್ನು ಕಾಯ್ದು  ಜೀವಿಸಿದವರು. ಇವರನ್ನು ಕುರಿತು ನಮ್ಮ ದೊಡ್ಡಪ್ಪ ಒಂದು ಕಥೆ ಹೇಳೋರು. ಇವರು ದನಗಳನ್ನು ಗಿಡಕ್ಕೆ ಹೊಡೆದು ಎಲ್ಲಾದರೊಂದು ಜಾಗ ಹಿಡಿದು ಮಲಗೋರಂತೆ, ಹೊತ್ತು ಮುಳುಗುವ ವೇಳೆಗೆ ದನಗಳೆಲ್ಲ ಇವರಿರುವ ಜಾಗಕ್ಕೆ ಬಂದ ಮೇಲೆ ಊರ್ಕಡಿಕೆ ಒಡ್ಕಂಬರರು… ಇವ ಒಂದು ಸಲಿ ಅದ್ಲುಸಿರೆ ಒಂದನನು ಎತ್ಲುಹೋಗಿ ತಪ್ಪಿಸ್ಕಮ್ತಿರ್ಲಿಲ್ಲ. ಬದುಕಿರುವವರೆಗೂ ದನಗಳ ರಾಜನಾಗಿ ಅವುಗಳ ಬಡ್ಡೆಯಲ್ಲೇ ಬಾಳುಕಳೆದ ಅಂತಾ ನಿಷ್ಠೆ.

ಎದೆಗೆ ಒಂದೀಟು ನಂಜಿರ್ಲಿಲ್ಲ ಅಂತಾ ನಿಯತ್ಗಾರ ಇವನು…ಮಗ ಬುಡ್ಡಿ ನಿಂಗನ್ಗು ಅದೇ ನಿಯತ್ತು. ಹೀಗೆ ಶುದ್ಧವಾಗಿ ಶ್ರಮಿಸಿ ಬದುಕಿದವರ ವಿಚಾರಗಳು ನಮಗೆ ಕಾಣ್ತಿದ್ವು ದಿನವೂ. ಇವರ ನಾಲ್ಕು ಮಕ್ಕಳು ಈಗಲೂ ಇದ್ದಾರೆ ಆದರೆ ದನ ಎಮ್ಮೆಗಳಿಲ್ಲ.. ಸೇಂಧಿವನ ಅಂತ ಊರಿಂದಾಚೆ ಇರುವ ಈಸ್ಲು ಬೀಳಿನ ಮಗ್ಲಗೆ ಎರಡು ಎಕರೆ ಗಿಡ ಕಡ್ದು ನೆಲ ಇಡ್ಕಂಡು ಕಾಳು ಕಡ್ಡಿ ಬೆಳ್ಕಮ್ತರೆ. ಬದುಕಿರುವವರೆಗೂ ಊರಿನೆಲ್ಲ ದನ ಎಮ್ಮೆಗಳನ್ನು ಕಾಯುತ್ತಲೇ  ಶ್ರಮಿಸಿದ ಇವರು ನಮಗೆ ಕಂಡ ಅತ್ಯಂತ ಪ್ರಾಮಾಣಿಕರು.

ಕಬ್ಬಾಳೆ ಮಾಲಿಂಗಣ್ಣ ಅಂತ ಇನ್ನೊಬ್ರು ಇದ್ರು. ಇವರು ಸುಗ್ಗಿ ಬಂದ್ರೆ ಮರ ಹಿಡ್ದು ಕಣ ಸೇರ್ತಿದ್ರು. ಊರಗಿರೋ ಯಾರೇ ಕೃಷಿಕರು ಕಣ ಇಕ್ಕಿರು ತೂರಕೆ ಬತ್ತಾ ಇದ್ದಿದ್ದು ಈ ಮಾಲಿಂಗಣ್ಣನೆ. ಹೊಲಕೊಯ್ದು ಕಣ್ಕಾಕಿ ದನತುಳ್ಸಿದ್ ಮೇಲೆ ಮಾಲಿಂಗಣ್ಣ ಅಲ್ಲಿ ಹಾಜರ್. ಎತ್ಲುದನ ಗಾಳಿ ಬೀಸಿರೆ ಸಾಕು ಮಾಲಿಂಗಣ್ಣ ಮರ ಹಿಡ್ದು “ಓಲಿಗ್ ಸಮಾಲಿಗ್ಗ ಬೋಲಿಗ್ಗ” ಅಂತ ಹೇಳ್ಕಂಡೇ ತೂರ್ತಿದ್ರು.

ತೂರದು ಕೇರದು ಮುಗ್ದು ರಾಶಿ ಪೂಜೆ ಆಗತಕ ಎಲ್ಲಾ ಕೆಲಸಗಳಲ್ಲು ಮನೆಯವರಿಗೆ ಜೊತೆಗೂಡ್ತಿದ್ದು ಇವರೆ. ಊರಿನಲ್ಲಿ ಎಲ್ಲಾ ಕಣಗಳು ಮುಗಿದು ಧಾನ್ಯಗಳೆಲ್ಲ ವಾಡೇವು ಸೇರತಕ ಇವರ ಕಣ್ಣಿಗೆ ನಿದ್ದೆ ಬರ್ತಿರ್ಲಿಲ್ಲ. ನೆಲನಂಬಿದ ಮನಸುಗಳೇ ಹೀಗೆ. ಊರಿನ ಹಲವು ಮನೆಗಳಲ್ಲಿ ಅನ್ನಬೇಯುವುದಕ್ಕೆ ಇವರ ಶ್ರಮ ಸೇರುತ್ತದೆ. ಮುಂಗಾರು, ಹಿಂಗಾರುಗಳ ಫಸಲಿನ ಜೊತೆಗೆ ಒಂದಾಗುವ ಅನೇಕರಲ್ಲಿ ಇವರು ಪ್ರಮುಖರು. ಎಲ್ಲವೂ ಮುಗಿದ ಮೇಲೆ ಯಾರು ಯಾರಿಗೆ ಎಷ್ಟೆಷ್ಟು ಪಲ್ಲ ದವಸಧಾನ್ಯ ಆದ್ವು ಅನ್ನೋ ಲೆಕ್ಕ ಇವರ ಬಾಯಲ್ಲಿ ನೆಲೆಸಿರುತ್ತದೆ.

ಕುಂಟೆ, ಕೂರ್ಗೆ, ಮಡ್ಕೆ, ಯಾವುದರ ರಿಪೇರಿ ಕೆಲಸವಿದ್ದರು ಇವರು ಜೊತೆಯಾಗೋರು. “ಬಡುಗ್ಲು ಗಾಳಿ ಬೀಸುದ್ರೆ ಬಡ್ದನ ಎದ್ ನಿಂತ್ಕಂಡ್ವಂತೆ” ಅನ್ನೋ ಗಾದೆ ಹೇಳುತ್ತಾರೆ ನಮ್ಮ ಕಡೆ. ಹಜಾರ್ದಗೆ ಕುಂತ್ಕಂಡು ಅಣಯ ಮೂಡ್ಗಡಿಕೆ ಮಿಂಚ್ತಾ ಐತೆ, ಎತ್ಲುದನ ಮಳೆ ಒಯ್ದು ಕೆರೆಕಟ್ಟೆ ತುಂಬಿರೆ ಈ ಬೇಸಿಗ್ನಗ ದನಕರ್ಗುಳ್ಗೆ ದಾವ್ರುದ್ ಚಿಂತಿಲ್ಲ ಅಂತ ಮಳೆ, ಗಾಳಿ, ಮಿಂಚು, ಗುಡುಗು, ಫಸಲು,ಕಣ ಇವುಗಳ ಸುತ್ತವೇ ಒಕ್ಕಲುತನದ ಮಾತುಕತೆ ವರ್ಷವೆಲ್ಲ ನಡೆಯೋದು. ತಮ್ಮ ಒಟ್ಟು ಕಾಲವನ್ನು ಕೃಷಿಧ್ಯಾನಕ್ಕೆ ಮೀಸಲಿಟ್ಟ ಮಹಾಮನಸಿದು. ಕಬ್ಬಾಳೆ ಮಾಲಿಂಗಣ್ಣನನ್ನು ನಾವು ಇವತ್ತಿಗೂ ನೋಡುವುದು ಮರ, ಗೂಡೆ, ಮಳೆಯ ಜೊತೆಗೆ.

ದಿನ ಬೆಳಗಾದರೆ ಈ ಮಾಲಿಂಗಣ್ಣ ಮಳೆಯೊಳಗೆ ಮಿಂದೆದ್ದವರಂತೆ ತೇವದ ಮಾತಾಡುತ್ತಿದ್ದರು… ದೊಡ್ಡಪ್ಪ, ಅಪ್ಪ ಇವರು ಸೇರಿದರೆಂದರೆ ಮನೆಯೊಳಗೂ ಮಳೆಸುರಿವ ಅನುಭಾವ ದಕ್ಕುತ್ತಿತ್ತು. ಭರಣಿ ಮಳೆ ಬಂದರೆ ಧರಣೆಲ್ಲ ಬೆಳೆ, ಅತ್ತುದ್ ಮಳೆ ಎತ್ಲುದಾದ್ರು ಬರುತ್ತೆ, ಉಬ್ಬೆಮಳೆ ಉಬ್ಬುಬ್ಕಂಡು ಬಂದ್ರು ಗುಬ್ಬಿ ಪೆಟ್ಗೆ ಅಂಗಿರೋ ನನ್ನ ಗೂಡು ನೆನ್ಯಲ್ಲ ಅಂತಂತೆ ಗೂಸೆಕ್ಕಿ, ಅತ್ತುದ್ಮಳೆ ಬರ್ದಿದ್ರೆ ಹೆತ್ತ ತಾಯಿ ಇಟ್ಟಿಕ್ಕಲ್ವಂತೆ, ಅನುರಾದ ಮಳೆ ಬಂದ್ರೆ ಮನೆ ರಾಗಿ ಒತ್ಕಂಡೋತು, ಸ್ವಾತಿ ಮಳೆ ಏತೆನಂದ್ರು ಬಿಡ್ದು, ಸ್ವಾತಿ ಮಳೆ ಸಾಕಿ ಕೊಡ್ತು,ವಿಶಾತಿ ಮಳೆ ವಿಷ ಹಾಕ್ತು….

ಹಳ್ಳಕ್ಕೆ ಹೋಗಬೇಡ
ಪಿಳ್ಳೆಯ ಮುರಿಬೇಡ
ಇತ್ತಾಲೆ ಬಾರೆ ಕುಲ್ಡ್ ಚಿತ್ತೆ…

ಹೀಗೆ ಮಳೆಮಳೆಗು ನಾಣ್ಣುಡಿಗಳನ್ನು ಹೇಳುತ್ತಾ ಮಳೆ ಬೆಳೆಯ ಅರ್ತೆ, ಕುಂಟೆ, ಕೂರ್ಗೆಯ ಮಾತಾಡ್ತಾ ಒಕ್ಕಲು ಉಳಿಯುವ ತಪಸ್ಸಿಗೆ ಇವರು ಮುಖಾಮುಖಿಯಾಗುತ್ತಿದ್ದುದನ್ನು ದರ್ಶನ ಮಾಡಿದ್ದೇನೆ.

ಕಿರಿಯರ ಕಣ್ಣುಗಳಲ್ಲಿ ಬಾಳಿನ ದಿಟ್ಟ ದಾರಿಗಳನ್ನು ನಿರ್ಮಿಸಿ ಹೋದ ಈ ಹಿರಿಜೀವಗಳ ಹಲವಾರು ಅನುಭವಗಳನ್ನು ನಮ್ಮ ಮೆದುಳು ಸೆರೆಹಿಡಿದು ಒಳಿತಿನೊಳಗೆ ಹುದುಗಿಕೊಳ್ಳುವ ಕುತೂಹಲವನ್ನು ನೆಟ್ಟು ಹೋಗಿದ್ದಾರೆ.

ನನ್ನೂರಿನ ಮಣ್ಣೊಳಗೆ ಮಾಗುತ್ತಿರುವ ಇವರೆಲ್ಲರ ಕಣ್ಣೊಳಗಿನ ಬೆಳಕು ಮಳೆಗಾಗಿ ಕಾತರಿಸಿ ಮಿಂಚೊಳಗೆ ಮೆದುವಾಗಿ, ತೂರುವ, ಕೇರುವ ಬಾಳಿ ಬದುಕುವ ಅರಿವನ್ನು ಕೂಡಿಟ್ಟು ಹೋಗಿದೆ.

November 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Kavishree

    ಆ ಕಾಲದಲ್ಲಿ ರಾಶಿ ಪೂಜೆ ಅಂದರೆ ಕಾಯ್ತಾ ಇರ್ತೀದವಿ ನೆನೆಸಿದ ಅಕ್ಕಿ ಕಾಯಿ ಬೆಲ್ಲದ ಪ್ರಸಾದಕ್ಕೆ ಎಷ್ಟು ಖುಷಿ ಯಿಂದ ಬಾಗಿಯಾಗುತಿದವಿ ಪೋಜೆಯಲಿ. ಈ ಕಾಲದಲ್ಲಿ ಕಣಗಳೆ ಇಲ್ಲ ಊರ ರಸ್ತೆಗಳೆ ಕಣಗಳಾಗಿವೆ ಕಾಳು ಹೊಕ್ಕಲು ಮಿಷನ್ ಗಳು ಬಂದಿವೆ ಕೆಲಸವೇನೋ ಸುಲಭವಾಗಿ ಮುಗಿಯುತ್ತದೆ ಆದರೆ ಅಂದಿನ ಖುಷಿ ಇಲ್ಲವಾಗಿದೆ

    ಪ್ರತಿಕ್ರಿಯೆ
  2. Chaitrashree R nayak

    ಊಟಕ್ಕಾಗಿ ಊರ ಎಮ್ಮೆ ದನಗಳನ್ನು ಕಾಯುತಾ ಅವುಗಳ ಪ್ರೀತಿಗೆ ಪಾತ್ರದಾರಿಯಾಗಿ ಯೋಗಕ್ಷೇಮಗಳನ್ನು ನೋಡುತ ಬಂದ ಇಡಿ ಕುಟುಂಬಕ್ಕೆ ನನ್ನ ಧನ್ಯವಾದಗಳು . ಹಳ್ಳಿಯ ಬೇಸಾಯವನ್ನು ಸುಗ್ಗಿಯ ಕಾಲವನ್ನು ಅನುಭವಿಸಿದಷ್ಟೇ ಖುಷಿಯಾಯಿತು ನಿಮ್ಮ ಅಂಕಣ ಓದಿದ ನಂತರ, ನಿಮ್ಮ ನೆನಪುಗಳ ಮೂಮ್ಬತಿಗೆ ಮುತ್ತುವ ಹುಳದ ಹಾಗೆ ಕಾಯುತಿರುವೆ.

    ಪ್ರತಿಕ್ರಿಯೆ
  3. Vishwas

    ‘ಪರಿಸರ ಸ್ನೇಹಿ’. ಈ ನುಡಿಗಟ್ಟಿಗೆ, ನಮಗೆಲ್ಲರಿಗೂ ತಿಳಿದಿರುವ ಅರ್ಥ, ಪರಿಸರಕ್ಕೆ ಯಾವುದೇ ಹಾನಿ ಮಾಡದಿರುವಂತಿರುವುವು ಎಂದು. ಅಕ್ಕನ ಲೇಖನ ಓದುತ್ತಾ ನನಗೆ ತೋಚಿದ್ದು, ಪರಿಸರವನ್ನೇ ಖುದ್ದಾಗಿ ಸ್ನೇಹಿತನನ್ನಾಗಿ ಸ್ವೀಕರಿಸುವವರನ್ನು ಕರೆಯಬಹುದು, ‘ಪರಿಸರ ಸ್ನೇಹಿ ಜೀವಿಗಳು’ ಎಂದು. ಅಕ್ಕನೂರಿನ‌ ಬುಡ್ಡಿ‌ ನಿಂಗಣ್ಣ, ಕಬ್ಬಾಳೆ‌ ಮಾಲಿಂಗಣ್ಣನಂತಹ ಹಿರಿಯರು, ಇದಕ್ಕೆ ಪ್ರಧಾನ ನಿದರ್ಶನಗಳೇ ಎನ್ನಬಹುದು.‌ ದವಸ, ಧಾನ್ಯ, ಬೆಳೆ ರಾಶಿಗಳು, ಕುಂಟೆ, ಕೂರ್ಗೆ, ಮಡಿಕಗಳ ಪೋಷಿಸುವ ಮಾಲಿಂಗಣ್ಣ. ಎಮ್ಮೆ,ಹಸು, ದನ, ಕುರಿ, ಕರುಗಳ ಮಂದೆಗಳನ್ನು ಕಾಯುವ ನಿಂಗಣ್ಣ, ಅವುಗಳನ್ನು ಕೇವಲ ಒಂದು, ಪ್ರಾಣಿ ಸಮುದಾಯವನ್ನು ಕಾಯುವ ಅಥವಾ ಕಣ ಸೇರಿ ತೂರೋ ಕಾರ್ಯಗಳನ್ನಾಗಿರಿಸಿಕೊಂಡಿರಲಿಲ್ಲ, ಬದಲಾಗಿ ಅವುಗಳ ಜೊತೆ ಸ್ನೇಹ, ಸಂಬಂಧ, ಬಾಂಧವ್ಯ ಗಳನ್ನು ಬೆಳಸಿಕೊಂಡು, ಅನ್ನದಾಧಾರವಾಗಿ ಮಾತ್ರ ನೋಡದೇ ಹೊರತಾಗಿ ಅದೊಂದು ‘ಜೀವನ ವಿಧಾನ’ ಎಂದು ಸಾಬೀತು ಪಡಿಸಿದವರು. ಕಾರ್ಯಸಿದ್ದಿಗೋಸ್ಕರ ಕಾರ್ಯವನ್ನೇ ಜೀವಿಸಬೇಕೆಂಬ ಪಾಠವೇ ಇಲ್ಲಿ ಅಕ್ಕನ ಲೇಖನಾ ಗುಹೆಯಲ್ಲಡಗಿರುವ “ನಿಧಿ”. ಈ ಲೇಖನ, ನಾವು ಮಾಡುವ ಕೆಲಸದೊಂದಿಗೆ ಬಾಂದವ್ಯ ಬೆಳೆಸೋ ಶ್ರೀಮಂತಿಕೆಯನ್ನು ಸ್ವಂತ ಮಾಡಿಕೊಳ್ಳುವ ವಿಧಾನಗಳ ಮಾರ್ಗದರ್ಶಿಯಂತೆ ಕಾಣುತ್ತಿದೆ ನನಗೆ‌.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: