ಸುಧನ್ವ ದೇರಾಜೆ ತನ್ನ ಬ್ಲಾಗ್ ‘ಚಂಪಕಾವತಿ’ಯಲ್ಲಿ ಬರೆಯುತ್ತಿರುವ ಸಿಟಿ ಅನುಭವಗಳ ‘ಪೇಟೆಯ ಪಾಡ್ದನ’ ದ ಇನ್ನಷ್ಟು ಇಲ್ಲಿ-
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಈ ಅಕ್ಷರಗಳಲಿ ದುಃಖ ತುಂಬಿದ್ದೇವೆ
ಈ ಅಕ್ಷರಗಳಲಿ ದುಃಖ ತುಂಬಿದ್ದೇವೆ
ತುಳುಕದಂತೆ ನೋಡಿಕೊಳ್ಳಿ
ಕಣ್ಣೀರು.
***
ದಿನ ರಾತ್ರಿ ನಾಜೂಕು ನೇವರಿಸಿ
ತೆವಳುತ್ತಿದೆ ಈ ಪೇಟೆ ಹುಳ
ಕಾಲ್ಬೆರಳ ಹಿಡಿದು ನಿತಂಬ ಹೊಟ್ಟೆ ದಾಟಿ
ನಿನ್ನ ಹೊಕ್ಕಳು ಕಂಕಳೂ ಚೆಂದ ಅನ್ನುತ್ತಿದೆ
ಉದುರಿಸಿದ ರೆಕ್ಕೆಗಳ ನಮಗೆ ಅಂಟಿಸುತ್ತಿದೆ
ಅಂಗುಲ ಅಂಗುಲ ಮುಕ್ಕುತ್ತಿದೆ.
***
ತೆಂಕ ಕೋಣೆ, ಗೀಟು ಕೋಣೆ
ಮೂಡು ಜಗಲಿ, ತುಂಡು ಜಗಲಿ
ಗುಂಡಿ ಕೋಣೆ, ದೇವರ ಕೋಣೆ
ಈಗಷ್ಟೆ ಯಾರನ್ನೋ ಕಳುಹಿಸಿ ಅರೆ ತೆರೆದುಕೊಂಡಿವೆ.
***
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಇದೋ ಸುರಿದ್ದಿದ್ದೇವೆ ತುಪ್ಪ
ನಿಮ್ಮ ಬೆಂಕಿಗೆ, ತೃಪ್ತರಾಗಿ.
ಇದು ಇನ್ನೊಂದು ಪುತ್ರಕಾಮೇಷ್ಠಿ
ನಮ್ಮ ಮಕ್ಕಳ ನಮಗೆ ದಯಪಾಲಿಸಿ.
***
ಇದು ದ್ವಿಚಕ್ರ ನಗರ
ವೇಷ ಮರೆಸಿದವರಿಗೆ ಬಂಡಿ ಅನ್ನ
ಬಕಾಸುರರ ಸಾಕಿದವರಿಗಷ್ಟೇ ಅಭಯ.
ಕುಂಬಾರನ ಮನೆಯಲ್ಲಿ
ದೊಣ್ಣೆ ನಾಯಕರಿಗೇನು ಕೆಲಸ? ಗೊತ್ತಿಲ್ಲ
ಸದಾ ಹೊರಟು-ನಿಂತವರೇ ಎಲ್ಲ .
ಎಣ್ಣೆ ನೋಡುತ್ತ ಮೀನು ಕಚ್ಚಿ ಎಳೆವವರು
ಗುರುವಿಗಿದಿರು ಶಿಷ್ಯನನ್ನೇ ಹೆದೆಯೇರಿಸುವರು;
ಒಬ್ಬಳಿಗೆ ಐವರು ಹೆಚ್ಚಾಯಿತೆ ? ಇಲ್ಲ
ನೂರ ಐದಾದರೂ ಅಡ್ಡಿಯಿಲ್ಲ
ಕೃಷ್ಣನಂತೂ ಇತ್ತ ಬರುವುದಿಲ್ಲ .






0 Comments