ಪೆಟ್ಟಿಗೆಯಲ್ಲಿ ಪಪೆಟ್ರಿ..


ಯಸ್. ಅದೊಂದು ಪೆಟ್ಟಿಗೇನೇ. ಕಪ್ಪು ಪೆಟ್ಟಿಗೆ. ನಾಟ್ಕದ ಪೆಟ್ಟಿಗೆ. Black Box ಅನ್ನೋದು ಪೆಟ್ಟಿಗೆಯ ಹೆಸರು. ಆ ಪೆಟ್ಟಿಗೆಯ ಅರ್ಧ ಭಾಗ್ದಲ್ಲಿ ಸುಮಾರು ನೂರು ಜನ್ ಕೊತ್ಕೋಬಹುದು. ಇನ್ನರ್ಧ ಭಾಗ ನಾಟ್ಕದ ಅರೆನಾ. ಸೌಂಡ್ ಪ್ರೂಫ್. ಏರ್ ಕಂಡೀಶನ್ಡ್

ಇಂಥದೊಂದು Black Box ಇರೋದು ತ್ರಿಶೂರ್ ನಲ್ಲಿ. ಕೇರಳದ ಸಂಗೀತ ನಾಟಕ ಅಕಾಡಮಿಯ ಆವರಣದಲ್ಲಿ. ಇಂಟಿಮೇಟ್ ನಾಟ್ಕಗಳು, ಸೋಲೋಗಳು, ಪಪೆಟ್ರಿ ಗಳಿಗಾಗಿಯೇ ಕಟ್ಟಿರೋ Box ಇದು. ‘Itfok’ ನ ಹೊತ್ತಿಗೆ ಈ ಪೆಟ್ಟಿಗೆ ತುಂಬ ಬಿಸಿ. ಆಗ ಅಂತರ್ ರಾಷ್ಟ್ರೀಯ ಶೋ ಗಳಾಗೋದು ಇಲ್ಲೇ. ಅದಕ್ಕೇನೇ ನಾಟ್ಕ ಶುರುವಾಗೋ ಎರಡು ಗಂಟೆ ಮುಂಚೇನೇ ಕ್ಯೂ ಶುರುವಾಗಿರ್ತದೆ. On line booking ಶುರುವಾಗಿ ಐದೇ ನಿಮಿಷಕ್ಕೆ ಇಲ್ಲಿಯ ನಾಟ್ಕದ ಟಿಕೆಟ್ಟುಗಳು ಬುಕ್ ಆಗ್ಬಿಟ್ಟಿರ್ತವೆ.

ಇದೇ Box ನಲ್ಲಿ ನೋಡಿದ ಎರಡು ಗೊಂಬೆಯಾಟಗಳ ಬಗ್ಗೆ ಈ ವಾರ ಬರೀತಿದ್ದೇನೆ.
ಒಂದು ಗೊಂಬೆಯಾಟ ಮಕ್ಕಳಿಗಾಗಿ, ಇನ್ನೊಂದು ದೊಡ್ಡೋರ್ಗಾಗಿ.

‘ ಸವೆಂಬೋ ರಕ್ಕಸ’
Garbage Monster
Puppetry from Turkey

ಇದು ಟರ್ಕಿ ದೇಶದ ಒಂದು ಬೊಂಬೆಯಾಟ. ಮಕ್ಕಳಿಗಾಗೇ ಮಾಡಿರೋದು. ‘ನಮ್ಮ ಮನೆ’ ಎನ್ನೋ ಈ ಭೂಮಿಯನ್ನ, ನಮ್ಮ ಸುತ್ತನ ಪರಿಸರವನ್ನ ಚೆಂದವಾಗಿ, ಶುದ್ಧವಾಗಿ ಇಟ್ಕೋಬೇಕು ಅಂತ ಮಕ್ಕಳಿಗೆ ಹೇಳೋ ಕುತೂಹಲಕಾರೀ ಕಥೆಯ ಆಟ.

Kargoz ಮತ್ತು Hacivatಇಬ್ರೂ ಜೀವದ ಗೆಳೆಯರು. ಅದೊಂಥರಾ ವಿಚಿತ್ರ ಗೆಳೆತನ. ಅವರು ದಿನವಿಡೀ ಕಚ್ಚಾಡೋರು. ಯಾವ್ದೇ ವಿಷಯಕ್ಕೂ ಇಬ್ರೂ ಒಪ್ಕೊಂಡಿದ್ದು ಅನ್ನೋದೇ ಇಲ್ಲ. ಒಬ್ಬ ಏರಿಗೆಳೆದ್ರೆ ಇನ್ನೊಬ್ಬ ಕೇರಿಗೆ ಎಳಿಯೋನು. ಆದ್ರೂ ಇಬ್ರೂ ಗೆಳೆಯರು.

ಹೀಗಿರೋವಾಗ ಒಂದಿನ Hacivat ಗೆಳೆಯನನ್ನ “ಮೀನು ಹಿಡಿಯೋಕೆ ಹೋಗೋಣ ಬಾರೋ, ಈಗ ಒಳ್ಳೊಳ್ಳೇ ಮೀನುಗಳು ಸಿಕ್ಕತವೆ ” ಅಂತಾನೆ. ಆದ್ರೆ ಯಥಾಪ್ರಕಾರ Kargoz ಒಪ್ಪೋದಿಲ್ಲ. “ ಇದೇನು ಮೀನು ಹಿಡಿಯೋ ಕಾಲಾನಾ? ಶುಧ್ಧ ಮೂರ್ಖ ನೀನು. ನಾನು ಬರೋದಿಲ್ಲ, ನೀನು ಬೇಕಾದ್ರೆ ಹಿಡ್ಕೋ ಹೋಗು” ಅಂತ ಹಂಗಿಸ್ತಾನೆ.

‘ಇದು ದಿನಾ ಇರೋ ಕಥೇನೇ’ ಅಂದ್ಕೊಂಡು Hacivat ತನ್ನ ಸೇವಕನ ಜೊತೆ ಚಿಕ್ಕ ದೋಣಿ ಹತ್ಕೊಂಡು ಮೀನು ಹಿಡಿಯೋಕೆ ಹೋಗ್ತಾನೆ. ಆದ್ರೆ ತನ್ ಮನೇ ಪಕ್ದಲ್ಲೇ Hacivat ಮೀನು ಹಿಡೀತಿರೋದ ನೋಡಿKargoz ಗೆ ಹೊಟ್ಟಕಿಚ್ಚು. ಇನ್ನೇನು ಮೀನು Hacivat ನ ಗಾಳಕ್ಕೆ ಬೀಳ್ಬೇಕು ಅನ್ನೋವಾಗ್ಲೇ Kargoz ತನ್ನ ಮನೇಲಿರೋ ಹಳೇ ಕುರ್ಚಿ, ಬೂಟು ಇಂಥವನ್ನೆಲ್ಲ ಕೊಳಕ್ಕೆ ಎಸೀತಾ ಅವರಿಗೆ ಮೀನು ಸಿಗೋದನ್ನ ತಪ್ಪಿಸ್ತಾನೆ. Hacivat ಗೆ ತುಂಬ ನಿರಾಸೆಯಾಗ್ತದೆ.ಆದ್ರೆ ಅದೇ ಹೊತ್ತಿಗೆ ಆ ಕೊಳದಲ್ಲಿರೋ ಕಸದ ಭೂತ ಅದೇ ಕುರ್ಚಿ, ಬೂಟು, ಬ್ಯಾಟು. ಮ್ಯಾಟು ಗಳನ್ನೇಲ್ಲ ತಿಂದು ಬೆಳೀತದೆ….ಬೆಳೀತದೆ…ಬೆಳೀತದೆ, ದೊಡ್ಡ ರಾಕ್ಷಸಾಕಾರ ತಾಳ್ತದೆ.

ಮುಂದೊಂದು ದಿನKargoz ಅದೇ ಕೊಳದಲ್ಲಿ ಮೀನು ಹಿಡಿಯೋಕೆ ಹೋದಾಗ ಅದೇ, ಅವನೇ ಬೆಳೆಸಿದ ರಾಕ್ಷಸ ದೋಣಿ ಸಹಿತ ಅವನನ್ನೇ ತಿಂದ್ಬಿಡ್ತದೆ. ಕೂಗಾಡ್ತಾನೆ Kargoz. ಅಯ್ಯಯ್ಯೋ….. ಇನ್ನೆಂದೂ ಇಂಥ ಕೆಲಸ ಮಾಡೋದಿಲ್ಲ ಬಿಟ್ಬಿಡೋ ನನ್ನ” ಅಂತ ಅಳ್ತಾನೆ. ಅದು ಹೇಗೋ ಹೇಗೋ ಮಾಡಿ ಹೊರಬಂದ ಏಚಿಡಿgoz “ಅಯ್ಯಪ್ಪಾ…..ಇನ್ನು ಇಂಥ ತಪ್ಪು ಮಾಡೋದಿಲ್ಲ; ನೀವೂ ಮಾಡ್ಬೇಡ್ರೋ” ಅಂತ ಕುಗ್ತಾ ಕೂಗ್ತಾ ಇದ್ಯೋ ಬಿದ್ಯೋ ಅನ್ನೋ ಹಾಗೆ ಓಡಿಹೋಗ್ತಾನೆ.

ಎಷ್ಟು ಚಂದ ಕಥೆ ಅಲ್ವಾ?

ಇಷ್ಟೇ ಹೇಳಿದ್ರೆ ಮುಗೀಲಿಲ್ಲ. ಈ ಆಟದ ಬಗ್ಗೆ ಆಡಿಸೋನ ಬಗ್ಗೆ ಹೇಳಲೇಬೇಕು.ಇದೊಂದು ತೊಗಲು ಬೊಂಬೆಯಾಟ. ಟರ್ಕಿ ದೇಶದ್ದು. ಇಸ್ತಾನಬುಲ್ ನ Cengiz Ozec ಈ ಬೊಂಬೆಗಳನ್ನಾಡಿಸೋನು. ಪರದೆಯ ಹಿಂದೆ ನಿಂತ್ಕೊಂಡು ಒಬ್ಬನೇ ಹಲವಾರು ಬೊಂಬೆಗಳನ್ನ ಆಡಿಸೋದು, ಮಾತಾಡೋದು, ತೆಗೆಯೋ ಪರಿ ನಿಜಕ್ಕೂ ಬೆರಗು ಹುಟ್ಟಿಸ್ತದೆ.

ಇನ್ನು ದೊಡ್ಡೋರ ಗೊಂಬೆಯಾಟ:
Clowns’ Houses
‘Merlin Puppetry’ Germany
Director: Dimitris Stamaou
****
“ …Blind are those houses, paper thin
Old shadows hid therein,
With sly and crazy movements creep
Like marionettes and weep….”
( Edith Sitwell, ‘ Clowns’ houses’ 1918)


ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಬದುಕಿದ್ದ ಬ್ರಿಟಿಷ್ ಕವಿ Edith Sitwell. ನಿರಂತರವಾಗಿ ಆಕೆ ಪದ್ಯಗಳನ್ನ ಬರೆದಳು. ಒಂಥರಾ ವಿಚಿತ್ರ ಬದುಕು ಬದುಕಿದ ಆಕೆಯ ಬರಹಗಳಲ್ಲೆಲ್ಲ ಬದುಕಿನ ವಿಷಾದದ ಛಾಯೆ. ಅಪ್ಪ ಅಮ್ಮಂದಿರ ಪ್ರೀತಿಯಿಂದ ವಂಚಿತಳಾದ ಆಕೆ ತಂದೆ ತಾಯಿಯರನ್ನೂ ಅಣ್ಣನನ್ನೂ ದ್ವೇಷಿಸುತ್ತಲೇ ದೊಡ್ಡಾದೋಳು.

ಕುಟುಂಬದಿಂದ ದೂರಾಗಿ, ತನ್ನ Gay ಗೆಳೆಯ ರಶ್ಯನ್ ಚಿತ್ರಕಾರ pavel ನೊಡನೆ ಕೆಲ ವರ್ಷ ಬದುಕಿದ್ಲು . ನಂತರ ಹಲವು ವರ್ಷ ಒಂಟಿಯಾಗಿ ತನ್ನ ಸೇವಕಿಯೊಂದಿಗೆ ದೂರದ ಮನೆಯೊಂದರಲ್ಲಿ ವಾಸವಾಗಿದ್ಲು. ವಿಚಿತ್ರವಾಗಿ ಬಟ್ಟೆ, ಆಭರಣಗಳನ್ನ, ತೊಡ್ತಿದ್ದ ಆಕೇನ ಹಲವರು ‘ ಸೋಗಿನ ಹೆಂಗಸು’ ಅಂತ ಕುಹಕವಾಡಿದ್ರೂ ಆಕೆಯ ಕಾವ್ಯದ ಕುಸುರಿ ಆಕೆಯನ್ನ ಜಗತ್ತಿಗೆಲ್ಲ ಪರಿಚಯಿಸ್ತು.

ಈ ಬೊಂಬೆಯಾಟ ಆಕೆಯ ಒಂದು ಪದ್ಯ ‘Clowns’ houses’ ನ್ನ ಆಧರಿಸಿದ್ದು.

ಅದೊಂದು ದೊಡ್ಡ ಕಟ್ಟಡ. ಅದರಲ್ಲಿ ಐದು ಅಪಾರ್ಟಮೆಂಟ್ ಗಳು. ಆರು ಪಾತ್ರಗಳು. ಎಲ್ಲ ಒಂಥರಾ ದುರಂತದ ವಿಚಿತ್ರ ವ್ಯಕ್ತಿತ್ವಗಳು.ತುಂಬ ಕಷ್ಟದ ದಿನಗಳನ್ನ ಕಳೀತಿದ್ದಾರೆ ಅವರಿಗೆ ತಮ್ಮ ಬದುಕು ಮುಗಿಯೋದ್ರ ಕುರಿತ ಭಯವಿಲ್ಲ, ಬದುಕು ನಡೆಸೋದೇ ಭಯ. ತಮ್ಮ ಕನಸುಗಳಿಂದ ದೂರವಾಗಿ, ಜೈಲಿನಂಥ ಕೋಣೆಗಳಲ್ಲಿ ಅಸಹನೀಯ ಬದುಕು ಬದುಕ್ತಿದಾರೆ ಅವ್ರು. ಇಡಿಯ ಆಟದುದ್ದಕ್ಕೂ ನೋಡುಗ ಕತ್ತಲ ಕೋಣೆಗಳಲ್ಲಿ, ತಮ್ಮೆಲ್ಲ ಗೀಳುಗಳ ಜೊತೆ ಅವರು ನಡೆಸುತ್ತಿರೋ ಭಯದ, ಒಂಟಿತನದ ಬದುಕಿಗೆ ಸಾಕ್ಷಿಯಾಗ್ತಾ ಹೋಗ್ತಾನೆ.

ಇದಕ್ಕೆಲ್ಲ Dimitris Stamaou ಗೊಂಬೆಯಾಟದ ಎಲ್ಲ ಬಗೆಯ ಸಾಧ್ಯತೆಗಳನ್ನ ಬಳಸಿಕೊಳ್ತಾನೆ. ಟೇಬಲ್ ಟಾಪ್ ಗೊಂಬೆಗಳು. ನೆಳಲು ಬೆಳಕಿನಾಟ. ತಂತಿ ಗೊಂಬೆಗಳು..ಹೀಗೆ ಹಲವಾರು ಮಾದರಿಗಳನ್ನ ತೆರೆದಿಡ್ತಾನೆ. ‘ ಗೊಂಬೆಯಾದ ಕಲಾವಿದ ಆಟದ ಪರಿಕಲ್ಪನೆ, ವಿನ್ಯಾಸ, ಆಟದ ‘ಪಾತ್ರಗಳನ್ನ ಬೆಳೆಸೋ,ಮತ್ತು ಆಡಿಸೋ ಎಲ್ಲ ಹಂತಗಳಲ್ಲೂ ತನ್ನನ್ನ ಸಂಪೂರ್ಣವಾಗಿ ತೊಡಗಿಸಿಕೊಂಡಿರಬೇಕು” ಎಂದು ಬಲವಾಗಿ ವಾದಿಸುವ Dimitris ಜತನದಿಂದ ಹೊಂದಿಸಿಕೊಂಡ ತ್ಯಾಜ್ಯ ವಸ್ತುಗಳೇ ಪಾತ್ರಗಳಾಗಿ ನಮ್ಮೆದುರು ಬರ್ತವೆ. ಭಾವ ತುಂಬಿಕೊಂಡು ಕತೆಯಾಗ್ತವೆ.
ಊಹೆಗೂ ನಿಲುಕಲಾರದ ವಿಶಿಷ್ಟ ಶೈಲಿಯಲ್ಲಿ, ವೇಗದಲ್ಲಿ Dimitris, ಕವಿ Edith Sitwell ಯ ಕಾವ್ಯವನ್ನ ಎದೆಗಿಳಿಯುವಂತೆ ಕಟ್ಟಿಕೊಡ್ತಾನೆ.

ನಾನು ಇದುವರೆಗೂ ನೋಡಿದ ಅತ್ಯುತ್ತಮ ಗೊಂಬೆಯಾಟ ಇದು. ಕಾವ್ಯವನ್ನ ಕಟ್ಟಕಡೆಯ ವ್ಯಕ್ತಿಯವರೆಗೂ ಕೊಂಡೊಯ್ಯಬಹುದಾದ ಒಂದು ಅಪರೂಪದ ಮಾಧ್ಯಮ.

‍ಲೇಖಕರು Avadhi

January 6, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ahalya Ballal

    ಆಹಾ ಗೊಂಬೆಯಾಟವೇ.
    ITFok ಅನ್ನು ನೋಡಬೇಕೆಂಬ ಆಸೆ, ಕುತೂಹಲ ಈಗ!

    ಪ್ರತಿಕ್ರಿಯೆ
    • Kira Bhat.

      ಈ ವರ್ಷ ಜನವರಿ ೨೦ ರಿಂದ ೨೭. ಬನ್ನಿ ಮೇಡಮ್.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: