ಪುಸ್ತಕ, ಬರಹಗಾರ, ಮಾರ್ಕೆಟಿಂಗ್ ಮತ್ತು ಸೆಲ್ಫ್ ಬ್ರಾಂಡಿಂಗ್..

ಜಯರಾಮಾಚಾರಿ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ.

ಇಲ್ಲಿನ ಬರಹ ನಮ್ಮ ತಾಣದ ಅಧಿಕೃತ ನಿಲುವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನೋಟವನ್ನು ರೂಪಿಸಲು ಇಲ್ಲಿ ಚರ್ಚೆಗೆ ತೆರೆದಿಡಲಾಗಿದೆ.

ಕತೆಗಳು ಮಾತಾಡಬೇಕು ಕತೆಗಾರರಲ್ಲ
ಪುಸ್ತಕಗಳು ಮಾತಾಡಬೇಕು ಬರಹಗಾರರಲ್ಲ
ಅನ್ನುವುದು ಸದ್ಯದ ಕಾಲಕ್ಕೆ ಅಪ್ರಸ್ತುತ.

ಬರಹಗಾರರು ಜಾಸ್ತಿಯಾಗುತ್ತಿದ್ದಾರೆ, ಪುಸ್ತಕಗಳು ಅಧಿಕವಾಗಿ ಬರುತ್ತಿವೆ, ಸ್ಪರ್ಧೆಗಳು ಅಲೆಗಳಂತೆ ಬರುತ್ತಿವೆ, ಇದೆಲ್ಲಕ್ಕಿಂತ ಹೆಚ್ಚಾಗಿ ಕಿರು ಬಹುಮಾನದ ಹಾವಳಿ ಹೆಚ್ಚಾಗಿದೆ.

ಇವತ್ತಿಗೆ ಒಂದು ಪುಸ್ತಕವನ್ನು ಹೆಚ್ಚು ಕಮ್ಮಿ ಒಂದು ಸಿನಿಮಾದಂತೆ ನೋಡುವುದು ರೂಢಿಯಾಗಿದೆ, ಬಿಡುಗಡೆಯಾದ ಪುಸ್ತಕ ಆ ವಾರದಲ್ಲೋ ಆ ತಿಂಗಳಲ್ಲೋ ಸದ್ದು ಮಾಡದೇ ಹೋದರೆ ಮುಂದಿನ ತಿಂಗಳಲ್ಲಿ ಬಿಡುಗಡೆಯಾಗುವ ಪುಸ್ತಕಗಳ ಭರಾಟೆಯಲ್ಲಿ ಅದು ಮಕಾಡೆ ಮಲಗಿಬಿಟ್ಟಿರುತ್ತದೆ.

ಇವತ್ತಿಗೆ ಬರಹದಲ್ಲಿ ಗಟ್ಟಿಯಾಗಿ ಬೇರೂರಿ ಮುದ್ರಣಗಳ ಸವಾರಿ ಮಾಡುವವವರು ಕೂಡ ಸೆಲ್ಫ್ ಬ್ರ್ಯಾಂಡಿಗ್ ಮಾಡಿಕೊಳ್ಳುವಾಗ ಆಗಷ್ಟೇ ಬರಹಕ್ಕೆ ಧುಮುಕಿದವರು ಮಾಡಿಕೊಳ್ಳುವುದರಲ್ಲಿ ಯಾವ ತಪ್ಪಿಲ್ಲ. ಇದು ವಾಲಿಡೆಶನ್ ಯುಗ. ಒಂದೋ ಹೊರಗಿನಿಂದ ಸಿಗಬೇಕು ಇಲ್ಲ ಸೃಷ್ಟಿಸಿಕೊಳ್ಳಬೇಕು.

ಈ ಪುಸ್ತಕಕ್ಕೂ ಮಾರ್ಕೆಟಿಂಗ್ ಪಬ್ಲಿಸಿಟಿ ರಿವ್ಯೂ ರೀಚ್ ಎಲ್ಲವೂ ಬೇಕಾಗಿದೆ. ಓದುಗನ ಮುಂದೆ ನೂರಾರು ಪುಸ್ತಕಗಳ ಆಯ್ಕೆ ಬಿದ್ದಿರುವಾಗ ಅವನು ಸದ್ದಿರುವ ಪುಸ್ತಕಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ತಳ್ಳಿಹಾಕುವ ಹಾಗಿಲ್ಲ, ಆದರೆ ತುಂಬಾ ಒಳ್ಳೆ ಪುಸ್ತಕ ಅಷ್ಟಾಗಿ ಸದ್ದು ಮಾಡದೇ, ಸಾಧಾರಣ ಅನಿಸುವ ಪುಸ್ತಕ ಸದ್ದು ಮಾಡಿ ಅದು ಬಿಕಾರಿಯಾಗುತ್ತಿದ್ದರೆ? ಇಂತಹುದೊಂದು ಸವಾಲು ಇದೆ ಈತರದ್ದು ಆಗುತ್ತಲಿವೆ ಕೂಡ.

ಒಂದು ಪುಸ್ತಕಕ್ಕೆ ಒಂದೋ ಬರಹಗಾರನ ಹೆಸರು, ಎರಡು ಪ್ರಕಾಶನದ ಹೆಸರು, ಮೂರು ಬರಹಕ್ಕೆ ಸಿಕ್ಕ ಮನ್ನಣೆ ಈ ಮೂರು ಪುಸ್ತಕ ಬಿಡುಗಡೆ ಆಗುವ ಮೊದಲು ಸದ್ದು ಮಾಡಲು ಮುಖ್ಯವಾಗುವ ಅಂಶಗಳು.

ತುಂಬಾ ಜನಪ್ರಿಯ ಬರಹಗಾರರು ಆಗಿದ್ದರೆ ಅವರ ಪುಸ್ತಕ ಬರುತ್ತಿದೆ ಎಂದು ಸುದ್ದಿ ಬರುತ್ತಿದ್ದಂತೆ ಪತ್ರಿಕೆಗಳು ವೆಬ್ ಮ್ಯಾಗಜೀನುಗಳು ನ್ಯೂಸ್ ಚಾನೆಲ್ ಗಳು ಅವರ ಹಿಂದೆ ಬಿದ್ದು ಆ ಕೃತಿ ಬಗ್ಗೆ ಎಕ್ಸ್ಕ್ಲೂಸಿವ್ ಆಗಿ ಮಾಹಿತಿ ನೀಡಲು ಮುಂದೆ ಬರುತ್ತವೆ, ಆ ಕೃತಿ ಏನು ಅದರ ಹಿಂದಿನ ಕತೆ ಹೀಗೆ ಮತ್ತೆ ಲೇಖಕ ಅಥವಾ ಪ್ರಕಾಶನ ಇಂತಹುದೊಂದು ಪುಸ್ತಕ ಬರುತ್ತದೆ ಎಂದು ಘೋಷಿಸುವ ಕ್ಷಣದಿಂದಲೇ ಸದ್ದು ಶುರುವಾಗುತ್ತದೆ.

ಬರಹಗಾರ ಅಷ್ಟೊಂದು ಜನಪ್ರಿಯನಾಗಿಲ್ಲದಿದ್ದರೆ ಅಥವಾ ಸ್ವಲ್ಪ ಅಷ್ಟೇ ಹೆಸರು ಮಾಡಿದ್ದಾರೆ ಪ್ರಕಾಶನ ತುಂಬಾ ಮುಖ್ಯವಾಗುತ್ತದೆ, ಬೆಸ್ಟ್ ಪ್ರಕಾಶನ ಮತ್ತು ಬೆಸ್ಟ್ ಬರಹಗಾರ ಸೇರಿಕೊಂಡರೆ ಅದು ಬ್ಲಾಕ್ ಬಸ್ಟರ್ ಆಗುವುದರಲ್ಲಿ ಸಂದೇಶವಿಲ್ಲ ಕೃತಿ ಹೇಗಿದ್ದರೂ ಅದಕ್ಕೆ ತೇಜೋ ತುಂಗಭದ್ರಾ, ಪ್ರಮೇಯ ಮತ್ತು ಸ್ವೈಪ್ ರೈಟ್ ಕೃತಿಗಳೇ ಸಾಕ್ಷಿ.

ಅಷ್ಟೊಂದು ಜನಪ್ರಿಯನಲ್ಲದ ಲೇಖಕನಿಗೆ ಪ್ರಕಾಶನವೇ ಶ್ರೀರಕ್ಷೆ, ಕನ್ನಡದ ಟಾಪ್ ೫ ಅಥವಾ ೧೦ ಪ್ರಕಾಶಕರನ್ನ ತೆಗೆದುಕೊಂಡರೆ ಅವರಿಂದ ಯಾವ ಪುಸ್ತಕವಾದರೂ ಬಂದರೂ ಕನಿಷ್ಠ ಇಷ್ಟು ಪುಸ್ತಕಗಳು ಬಿಕಾರಿಯಾಗುವುದರಲ್ಲಿ ಅನುಮಾನವಿಲ್ಲ. ಟಾಪ್ ೫ ಪ್ರಕಾಶಕರಲ್ಲಿ ಕನಿಷ್ಠ ೩೫೦ ಕಾಪಿಗಳು ಆರಾಮಾಗಿ ಸೇಲ್ ಆಗುತ್ತದೆ, ಅದು ಆ ಪ್ರಕಾಶನ ಕಾಯ್ದುಕೊಂಡಿರುವ ಗುಣಮಟ್ಟತೆಯಿಂದ ಅನ್ನುವುದು ಸುಳ್ಳಲ್ಲ.

ಮೂರನೆಯದು ಬರಹಕ್ಕೆ ಸಿಕ್ಕ ಮನ್ನಣೆ ಹಸ್ತಪ್ರತಿ ಸ್ಪರ್ಧೆ, ಸ್ಪರ್ಧೆಯಲ್ಲಿ ಗೆದ್ದ ಕವಿತೆಗಳು ಕತೆಗಳ ಸಂಕಲನ ಬಂದಾಗ ‘ಬಹುಮಾನ’ದ ಟ್ಯಾಗಿನಿಂದ ಸಾಹಿತ್ಯ ಪ್ರಿಯರನ್ನ ಪುಸ್ತಕ ಪ್ರಿಯರನ್ನ ತಲುಪುತ್ತದೆ, ಈ ಟ್ಯಾಗಿನಿಂದ ಬರುವ ಪುಸ್ತಕಗಳೆಲ್ಲ ಹೊಸ ಬರಹಗಾರರದೇ ಆಗಿರುತ್ತದೆ ಇಲ್ಲ ಜನಪ್ರಿಯತೆಯಿಂದ ದೂರ ಉಳಿದ ಗಟ್ಟಿ ಬರಹಗಾರರದೇ ಆಗಿರುತ್ತದೆ, ಈ ಪುಸ್ತಕಗಳು ಮೊದಲ ಮತ್ತು ಎರಡನೆಯ ಮುದ್ರಣ ಆರಾಮಾಗಿ ದಾಟಿಸಿಕೊಳ್ಳುತ್ತವೆ, ಕಾರಣ ಬರವಣಿಗೆಯ ಗುಣಮಟ್ಟ ಮತ್ತು ಪತ್ರಿಕೆಗಳ ಸಹಾಯ, ರಿವ್ಯೂ ಇತ್ಯಾದಿಗಳಿಂದ.

ಇದಕ್ಕೆ ಇತ್ತೀಚೆಗಿನ ಬೆಸ್ಟ್ ಉದಾಹರಣೆಯೆಂದರೆ ದಾದಾಪೀರ್ ಜೈಮನ್ ಅವರ ನೀಲಿಕುರಂಜಿ ಪುಸ್ತಕ, ಪುಸ್ತಕ ಬಿಡುಗಡೆ ಆಗಿ ಸೇಲ್ ಆದ ಸಂಖ್ಯೆಗಿಂತ ಆ ಪುಸ್ತಕ ಒಂದೊಂದರ ಮೇಲೊಂದು ಒಂದು ಪ್ರಶಸ್ತಿಗೆ ಭಾಜನವಾದ ಮೇಲೆ ಪುಸ್ತಕ ಸೇಲ್ ಆದದ್ದು ಜಾಸ್ತಿ, ಪ್ರಶಸ್ತಿ ಬಂದಾಗಲೆಲ್ಲ ಅದು ವಾರದ ಟಾಪ್ ೧೦ ಸೇಲ್ ಚಾರ್ಟಿನಲ್ಲಿರುತ್ತಿತ್ತು. ೨೦೨೨ ರಲ್ಲಿ ಜನಪ್ರಿಯತೆಯೊಂದಲೂ ಗುಣಮಟ್ಟದಿಂದಲೂ ಕ್ಲಿಕ್ ಆದ ಏಕೈಕ ಪುಸ್ತಕ ಮತ್ತು ಬರಹಗಾರ ದಾದಾಪೀರ್ ಜೈಮನ್ ಮತ್ತು ಅವರ ಎರಡು ಪುಸ್ತಕಗಳು. ಒಂದೇ ವರ್ಷದಲ್ಲಿ ಎರಡು ಪುಸ್ತಕಗಳಿಗೆ ಅಷ್ಟು ಮೊತ್ತದ ಪ್ರಶಸ್ತಿ ಅರಸಿ ಬಂದದ್ದು ಮತ್ತು ಇಡೀ ವರ್ಷ ಎರಡು ಪುಸ್ತಕಗಳು ಸದ್ದು ಮಾಡಿದ್ದೂ ತುಂಬಾ ವಿಶಿಷ್ಟ ಮತ್ತು ಖುಷಿಯ ಸಂಗತಿ.

ಜನಪ್ರಿಯತೆಯಿಲ್ಲದ
ಬ್ರ್ಯಾಂಡ್ ಪ್ರಕಾಶನ ಇಲ್ಲದ
ಬಹುಮಾನ ದಕ್ಕದ
ಬರಹಗಾರರ ಅದರಲ್ಲೂ ಹೊಸಬರ ಪಾಡೇನು ಮತ್ತೆ?

ಇವರಿಗಿರುವ ಏಕೈಕ ದಾರಿ ಸೆಲ್ಫ್ ಪಬ್ಲಿಶ್ ಮತ್ತು ಸೆಲ್ಫ್ ಪಬ್ಲಿಸಿಟಿ, ಬರೆಯೋದೆಲ್ಲ ಶ್ರೇಷ್ಠವಾಗಿರಬೇಕು ಓದೋದೆಲ್ಲ ಶ್ರೇಷ್ಠವಾಗಿರಬೇಕು ಎಂಬ ಒಂದು ವ್ಯಸನ ನಮ್ಮಲ್ಲಿ ಬೆಳೆದುಬಿಟ್ಟಿದೆ, ಈ ಪ್ರತಿಲಿಪಿ ಫೇಸ್ಬುಕ್ ಜೊತೆಗೆ ಒಂದಷ್ಟು ವಾಟ್ಸಾಪ್ ವೇದಿಕೆಗಳಿಂದ ಬರೆಯೋರು ಜಾಸ್ತಿ ಆಗಿದ್ದಾರೆ, ಅದರಲ್ಲೂ ರೋಚಕಕವಾಗಿ ಬರೆಯೋದು ಹೆಚ್ಚು ಅವಸರಕ್ಕೆ ಬಿದ್ದವರೇ ಹೆಚ್ಚು ಅವರ ಅವಸರಕ್ಕೆ ಇನ್ನು ಅವಸರ ಸೇರಿಸುವ ಕಾವ್ಯರತ್ನ ಸಾಹಿತ್ಯ ರತ್ನ ಕಥಾಕುವರ ಕಾವ್ಯಸಂಜೆ ಹೀಗೆ ಒಂದು ಫಲಕ ಒಂದು ಸರ್ಟಿಫಿಕೇಟು ಕುತ್ತಿಗೆಗೊಂದು ಹಾರ ಭುಜಕ್ಕೊಂದು ಶಲ್ಯ ಕೊಟ್ಟು ಪ್ರಶಸ್ತಿ ಸೃಷ್ಟಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿಬಿಟ್ಟಿದೆ, ಇದರ ರುಚಿಗೆ ಬಿದ್ದವರು ತಾನು ಅತ್ಯಂತ ಶೇಷ್ಠವಾದದನ್ನು ಬರೆಯುತ್ತಿದ್ದೇನೆ ಎಂದು ತೇಲಾಡುತ್ತಾರೆ, ಆದರೆ ಅವರ ಬರಹಗಳು ಪತ್ರಿಕೆಗಳಲ್ಲಿ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಮೊದಲ ಹಂತವೂ ದಾಟದೆ ಇದ್ದಾಗ ಇಲ್ಲಿ ಬರೀ ರಾಜಕೀಯ ಬಕೆಟುಗಿರಿ ಎಂದು ಹಳಿಯುತ್ತಾರೆ ವಿನಃ ತಮ್ಮ ಬರಹವನ್ನು ಸೆಲ್ಫ್ ಎವಲ್ಯೂಯೇಷನ್ ಮಾಡಿಕೊಳ್ಳುವುದೇ ಇಲ್ಲ.

ಸೆಲ್ಫ್ ಪಬ್ಲಿಶ್ ಗೆ ಹೋದಾಗ ನಮ್ಮ ತಮಟೆಯನ್ನು ನಾವೇ ಬಡಿಯಬೇಕಾಗುತ್ತದೆ, ಆದರೆ ಎಷ್ಟೇ ಬಡಿದುಕೊಂಡರು ಕಮ್ಮಿ ಓದುಗರನ್ನು ತಲುಪೋದು ಸುಳ್ಳಲ್ಲ. ಹೊಸಬರ ಚಿತ್ರಗಳ ನೋಡಲು ಎಷ್ಟು ಭಯಪಡುತ್ತಾರೋ ಅಷ್ಟೇ ಭಯ ಹೊಸಬರ ಓದು ಓದಲು ಇರುತ್ತದೆ, ಕೊಟ್ಟ ಕಾಸಿಗೆ ಮೋಸ ಆದರೆ ಎಂಬ ಸಂಶಯವಿರುತ್ತದೆ. ಹಾಗಾದರೆ ಹೊಸಬರು ಪುಸ್ತಕ ಹೇಗೆ ಸೇಲ್ ಮಾಡೋದು?

ಹೊಸಬರು ಪುಸ್ತಕ ಮಾಡಲು ಎರಡು ಕಾರಣವಿರುತ್ತದೆ ಒಂದು ಬರಹಕ್ಕೆ ಮನ್ನಣೆ ಎರಡು ದುಡ್ಡು ಮಾಡೋದು, ಬರಹಕ್ಕೆ ಮನ್ನಣೆ ಸಿಗಬೇಕಾದರೆ ೫೦೦ ಪ್ರತಿಗಳು ಬೇಕಿಲ್ಲ ಸೆಲ್ಫ್ ಪಬ್ಲಿಶಿಂಗ್ ಪ್ಲಾಟ್ಫಾರ್ಮ್ ಬಳಸಿಕೊಂಡು (ಕನ್ನಡದಲ್ಲಿ ಋತುಮಾನ ಟೆಕ್ ಫೀಜ್ , ಸಪ್ನಾ ಇಂಕ್ ಸದ್ಯದ ಬೆಸ್ಟ್ ಸೆಲ್ಫ್ ಪಬ್ಲಿಶಿಂಗ್ ಪ್ಲಾಟಫಾರ್ಮ್) ನೂರು ಪ್ರತಿ ಮಾಡಿಸಿಕೊಂಡು ಅದನ್ನು ಓದುಗರಿಗೆ ದೊಡ್ಡ ಬರಹಗಾರರಿಗೆ ವಿಮರ್ಶಕರಿಗೆ ಪತ್ರಿಕೆಗಳಿಗೆ ಕಳಿಸಿದರೆ ಸಾಕು, ಓದುಗರು ಒಂದು ರೀತಿ ಕಮರ್ಷಿಯಲ್ ಸಿನಿಮಾ ವೀಕ್ಷಕರು ಇದ್ದಂತೆ ಸ್ವಲ್ಪ ಹೆಚ್ಚು ಕಮ್ಮಿಯಲ್ಲೇ ಬರಹದ ಬಗ್ಗೆ ಫೀಡ್ ಬ್ಯಾಕ್ ಸಿಗುತ್ತದೆ, ಮುಖ್ಯಧಾರೆಯ ಬರಹಗಾರರು ಮತ್ತು ವಿಮರ್ಶಕರು ಸಾಹಿತ್ಯಿಕ ದೃಷ್ಟಿಯಿಂದ ಹೀಗಿದೆ ಹೀಗಿರಬೇಕಿತ್ತು ಎಂದು ನೇರವಾಗಿ ಹೇಳುತ್ತಾರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಇದ್ದಷ್ಟು ಒಳ್ಳೆಯದು ಯಾಕೆಂದರೆ ಅವರ ಮಾತು ಸತ್ಯವಾಗಿರುತ್ತದೆ, ಪತ್ರಿಕೆಯವರು ನಿಮ್ಮ ಪುಸ್ತಕ ಓದಿ ಪತ್ರಿಕೆಯ ಒಂದು ಮೂಲೇಲಿ ನಿಮ್ಮ ಪುಸ್ತಕದ ಬಗ್ಗೆ ಏನಾದರು ಬರೆದರೆ ನಿಮ್ಮ ಬರಹಕ್ಕೊಂದು ಶಕ್ತಿಯಿದೆ ಅಂತಲೇ ಅರ್ಥ, ಇದೆಲ್ಲದಕ್ಕೂ ಸಹನೆ ಮುಖ್ಯ, ಕಲಾವಿದರಿಗೆ ಇರುವ ಅಹಂ ಬೇರೆ ಯಾರಿಗೂ ಇಲ್ಲ ಆಗಾಗಿ ಒಮ್ಮೊಮ್ಮೆ ಕಟು ಅಭಿಪ್ರಾಯಗಳಿಗೆ ಕಟು ವಿಮರ್ಶಗಳಿಗೆ ಅಹಂ ಕೆಣಕಿ ನನ್ ಬುಕ್ ಬಗ್ಗೆ ಬರೆಯಕ್ಕೆ ಅವನ್ಯಾರು ಅನ್ನೋ ಧಿಮಾಕು ಬಂದುಬಿಟ್ಟರೆ ಅವನು ಆಗಲೇ ಅವನತಿಯ ಹಾದಿಯಲ್ಲಿದ್ದಾನೆ ಎಂದರ್ಥ.

ಹೊಸ ಬರಹಗಾರರು ದುಡ್ಡು ಮಾಡಕ್ಕಾಗಲ್ಲ. ಆದರೂ ಅದು ಒಬ್ರೊ ಇಬ್ರೊ ಅಷ್ಟೇ!

ಆದರೆ ಹೊಸಬರು ಮಾಡಿಕೊಳ್ಳುವ ದೊಡ್ಡ ಎಡವಟ್ಟು ಎಂದರೆ ಪುಸ್ತಕ ಬಿಡುಗಡೆ ಮುಂಚೆ ಮತ್ತು ಬಿಡುಗಡೆ ಆದಮೇಲೆ ಒಂದು ಸಲ ಹೇಳಿದರೆ ಸಾಕು ಅವರು ಅದಕ್ಕಾಗಿ ಇರೋ ಬರೋರನೆಲ್ಲ ಸೇರಿಸಿ ವಾಟ್ಸಾಪ್ ಗ್ರೂಪ್ ಮಾಡಿ ಪ್ರತಿ ದಿನ ಅವರ ಪುಸ್ತಕದ ಬಗ್ಗೆ ಅವರೇ ಡಿಸ್ಕೌಂಟ್ ಇದೆ ಎಂದು ಹೇಳಿ ನೆನಪಿಸಿ ಟ್ಯಾಗ್ ಮಾಡುತ್ತಲಿದ್ದರೆ ಅದೊಂದು ಹಿಂಸೆಯಾಗಿ ಮುಂದೆಂದೋ ಓದಬಹುದಾದ ಅವರ ಪುಸ್ತಕಕ ಓದುವುದು ಇರಲಿ ತೆಗೆದುಕೊಳ್ಳೋದು ಇಲ್ಲ ಅದೇನೋ ಅಂತಾರಲ್ಲ ಮೈ ಮೇಲೆ ಬಿದ್ದ.. ಆ ತರ ಆಗುತ್ತೆ, ಓದುಗರಿಗೆ ತಗೊಳ್ಳಿ ಓದಿ ತಗೊಳ್ಳಿ ಓದಿ ಅಂತ ಹಿಂಸೆ ಕೊಡುವಷ್ಟು ಒಬ್ಬ ಬರಹಗಾರ ಹೃದಯ ದರಿದ್ರತನ ಬೆಳೆಸಿಕೊಳ್ಳಬಾರದು.

ಈಗ ಮೇಲೆ ಹೇಳಿದ ಅಂಶಗಳಿಗೆ ಒಂದು ಸಣ್ಣ ಉದಾಹರಣೆ ಕೊಡೋಣ

ನನ್ನ ಮೊದಲ ಪುಸ್ತಕಕ್ಕೆ ನನ್ನ ಬರವಣಿಗೆಯ ಕಿಮ್ಮತ್ತು ಇರಲಿಲ್ಲ ನಾನೆ ಅನುಮಾನದಲ್ಲಿದ್ದೆ, ಪ್ರಕಾಶಕರು ಹೊಸಬರು, ಈಗಿನ ತರ ವಾಟ್ಸಾಪ್ ಇರಲಿಲ್ಲ ಆದರೆ ಅದೃಷ್ಟಕ್ಕೆ ಪ್ರಕ್ಷಕರಿಗೂ ನನಗೋ ಇರುವ ಗೆಳೆಯರ ಬಳಗದಿಂದ ಬಿಡುಗಡೆ ದಿನವೇ ಹಾಕಿದ ದುಡ್ಡು ಪ್ರಕಾಶಕರಿಗೆ ಬಂತು, ಆಮೇಲೆ ಅವ್ರು ಮಿಕ್ಕ ನೂರಾ ಐವತ್ತು ಪ್ರತಿ ನನ್ನ ಕೈಗೆ ಕೊಟ್ಟು ಬಾಯ್ ಎಂದರು, ನಾನು ಇರೋ ಬರೋ ಪುಸ್ತಕ ಸೇಲ್ ಮಾಡುವ ಅಂಗಡಿಗಳಿಗೆ ಹೋಗಿ ತಗೊಳ್ಳಿ ಅಂತ ಬೇಡಿಕೊಂಡೆ, ಇಂತಹುದೊಂದು ಹೆಸರು ಕೇಳದೆ ಇರೋ ಅವರು ಕೈ ಮುಗಿದರು, ನವಕರ್ನಾಟಕದಲ್ಲಿ ಅಂತೂ ನನ್ನ ಪುಸ್ತಕ ತಗೊಳ್ಳಿ ಅಂದ್ರೆ ಅದೇ ಸಮಯಕ್ಕೆ ಬಂದ ಕರಣಂ ಅವ್ರ ಬುಕ್ ತೋರಿಸಿ ಈ ತರ ಬರೀಬೇಕು ಕಣ್ರೀ ಅಂದ್ರು ಅವರ ತರ ನಾನು ಬರೆಯೋಕ್ಕೆ ಹೇಗೆ ಸಾಧ್ಯ? ಅವರ ಜಾಗದಲ್ಲಿ ನಾನು ಇದ್ರೂ ಹೊಸಬನ ಪುಸ್ತಕಗಳನ್ನ ಯಾವ ಧೈರ್ಯದ ಮೇಲೆ ಖರೀದಿಸಿ ಮಾರಲಿ?! ಅಷ್ಟು ಪ್ರತಿಗಳನ್ನ ನಾನೆ ಇಟ್ಟುಕೊಂಡು ಅಲ್ಲಿ ಇಲ್ಲಿ ಸಿಕ್ಕವರು ಪುಸ್ತಕದ ಬಗ್ಗೆ ಕೇಳಿದಾಗ ಕೊಟ್ಟು ಖಾಲಿ ಆಯ್ತು, ಆ ಪುಸ್ತಕ ಮೊದಲು ಮುನ್ನೂರು ನಾನೂರು ಪ್ರತಿ ಖಾಲಿ ಆಗಲು ಮುಖ್ಯ ಕಾರಣ ಪ್ರಕಾಶಕರ ಮತ್ತು ನನ್ನ ಸ್ನೇಹಿತರ ಬಳಗ ಮತ್ತು ಪುಸ್ತಕದ ಬಗ್ಗೆ ಜೋಗಿಯವರು ಬರೆದ ಪೋಸ್ಟ್.

ಇದು ಹೆಸರೇ ಗೊತ್ತಿಲ್ಲದ ಬರಹಗಾರ
ಹೆಸರೇ ಗೊತ್ತಿಲ್ಲದ ಪ್ರಕಾಶಕರು
ಪುಸ್ತಕ ಮಾಡಿದಾಗ ಆದದ್ದು.
ಎರಡನೇ ಪುಸ್ತಕ ಬರುವಶ್ಟರಲ್ಲಿ ಏನೇನೋ ಬದಲಾವಣೆ ಆಗಿತ್ತು ಪುಸ್ತಕ ಮಾರುವ ಸಿಸ್ಟಮ್ ಸಮೇತ.

ಎರಡನೇ ಪುಸ್ತಕ ಬರುವಷ್ಟರಲ್ಲಿ ಒಂದಷ್ಟು ಕತೆಗಳು ಅವಧಿಯಲ್ಲಿ ಬಂದು ಚೆನ್ನಾಗಿದೆ ಎಂಬ ಮಾತು ಬಂದಿತ್ತು, ಎರಡನೇ ಪುಸ್ತಕಕ್ಕೆ ನಿಂತಿದ್ದು ಪ್ರಕಾಶನದಲ್ಲಿ ಎಲ್ಲದರಲ್ಲೂ ಹೊಸತು ಇರುವ ತುಂಬಾ ಒಳ್ಳೆ ರೀಚ್ ಇರುವ ಜಿ ಎನ್ ಮೋಹನ್ ಅವರ ಬಹುರೂಪಿ, ಇದೊಂತರ ಒಳ್ಳೆ ಬ್ಯಾನರಿಗೆ ಭರವಸೆ ಇರುವ ಹೊಸ ನಿರ್ದೇಶಕ ಸಿನಿಮಾ ಮಾಡೋ ತರ, ಆ ಸಮಯಕ್ಕೆ ಮಾರ್ಕೆಂಟಿಗ್ ಪಬ್ಲಿಸಿಟಿ ಬಗ್ಗೆ ಸ್ವಲ್ಪ ಅರಿವಿದ್ದ ನಾನು ನನ್ನ ಪುಸ್ತಕಕ್ಕೆ ಪುಸ್ತಕದ ಥೀಮ್ ಗೆ ಹೋಲುವ ಕಾನ್ಸೆಪ್ಟ್ ಇಟ್ಟುಕೊಂಡು ಪುಸ್ತಕ ಬಿಡುಗಡೆ ಮುಂಚೆಯೇ ಹದಿನೈದು ಜನರನ್ನು ಭೇಟಿ ಆಗಿ ಅವರಿಂದ ವೀಡಿಯೊ ಮಾಡಿ ಅದನ್ನು ಎಲ್ಲರಿಗೂ ಹಂಚಿ ನನ್ನ ಪುಸ್ತಕ ಈ ವಿಷ್ಯ ಕುರಿತಾದದು ಎಂದು ಗೊತ್ತು ಮಾಡಿಸಿದೆ, ನಿಮ್ಮ ಪೋಸ್ಟ್ ಗಳಿಗೆ ಜನ ಲೈಕ್ ಮಾಡಿಲ್ಲ, ಶೇರ್ ಮಾಡಿಲ್ಲ, ರಿಯಾಕ್ಷನ್ ಹಾಕಿಲ್ಲ , ಕಾಮೆಂಟ್ ಹಾಕಿಲ್ಲ ಅಂದಾಕ್ಷಣ ಅವರು ನಿಮ್ಮನ್ನು ಗಮನಿಸುತ್ತಿಲ್ಲ ಎಂದು ಅರ್ಥವಲ್ಲ ನಿಮ್ಮ ಸುತ್ತಮುತ್ತಲಿನವರು ನಿಮ್ಮ ಎಲ್ಲವನ್ನು ಗಮನಿಸುತ್ತಾರೆ, ನಾನು ಹಾಕಿದ ವಿಡಿಯೋಗಳು ಪೂರ್ತಿ ಅಲ್ಲದಿದ್ದರೂ ಸ್ವಲ್ಪ ನೋಡಿದ್ದರು, ಪುಸ್ತಕಕ್ಕೆ ಬ್ರ್ಯಾಂಡ್ ಪ್ರಕಾಶನ ಸಿಕ್ಕ ಕಾರಣಕ್ಕೆ ಪುಸ್ತಕ ಬಿಡುಗಡೆ ಮುನ್ನವೇ ಪುಸ್ತಕದ ಬಗ್ಗೆ ಮಾತಾಡಲು ವೇದಿಕೆ ಸಿಗ್ತು, ಪುಸ್ತಕ ಬಿಡುಗಡೆಗೆ ವಿಜಯಮ್ಮ ಮಣಿಕಾಂತ್ ಸರ್ ಬಂದದ್ದು , ಪುಸ್ತಕ ಬಿಡುಗಡೆ ಸುದ್ದಿಯನ್ನ ಎಲ್ಲ ಪತ್ರಿಕೆಗಳು ಕವರ್ ಮಾಡಿದ್ದೂ ಎಲ್ಲವು ಪ್ಲಸ್ ಪಾಯಿಂಟುಗಳೇ, ಒಂದೊಳ್ಳೆ ಪ್ರಕಾಶನದಿಂದ ಅಷ್ಟೇ ಇವೆಲ್ಲ ಸಾಧ್ಯ, ಹೊಸಬರು ಇವೆಲ್ಲ ಮಾಡಲು ಅಸಾಧ್ಯ ಮಾಡಿದರು ಆರ್ಥಿಕ ಹೊರೆ. ಬಹುರೂಪಿ ಪ್ರಕಾಶನ ಆದ್ದರಿಂದ ನನ್ನ ಪರಿಚಯವೇ ಇಲ್ಲದ ಎಷ್ಟೋ ಜನರು ಈ ಪುಸ್ತಕ ಓದಿ ಅಭಿಪ್ರಾಯ ತಿಳಿಸಿದರು, ಆ ಅಭಿಪ್ರಾಯಗಳನ್ನು ಸ್ವಲ್ಪವೂ ಎಡಿಟ್ ಮಾಡದೇ ಹಾಗೆಯೇ ಪೋಸ್ಟ್ ಮಾಡಿದೆ ಅದರಿಂದ ಮತ್ತೆ ಓದುಗರು ಸಿಕ್ಕರು, ಹತ್ತೇ ದಿನಗಳಲ್ಲಿ ಮೊದಲ ಮುದ್ರಣ ಖಾಲಿ ಆಯಿತು.

ಮೊನ್ನೆ ಕಲ್ಬುರ್ಗಿಯಿಂದ ನಿವೃತ್ತ ಪ್ರೊಫೆಸರ್ ಕಾಲ್ ಮಾಡುದ್ರು ನಿಮ್ಮ ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಬುಕ್ ಓದಿದೆ ಐದು ಕಾಪಿ ತರಿಸಿಕೊಂಡೆ ಚೆನ್ನಾಗಿದೆ ಅಂತ, ಇದಕ್ಕೆ ಮುಖ್ಯ ಕಾರಣ ವೀರಲೋಕ ಬುಕ್ಸ್ ಎಂಬ ಹೆಸರು ಕರ್ನಾಟಕದ ಯಾವ ಮೂಲೆಗಾದರೂ ಪುಸ್ತಕ ತಲುಪಿಸುತ್ತಾರೆ.

ಒಂದೊಳ್ಳೆ ಪ್ರಕಾಶನ ಬೆನ್ನಿಗೆ ನಿಂತರೆ ಆಗುವ ಬೆರಗು ಇದು.

ಮೇಲೆ ಹೇಳಿದ ಎರಡು ಮುಖಗಳನ್ನು ನೋಡಿರುವ ನಾನು ಇದನ್ನ ಬರೆಯಬಹುದು ಅನಿಸಿ ಬರೆದೆ.

ಇಷ್ಟೆಲ್ಲಾ ಬರೆದ ಮೇಲೂ ನನ್ನ ಅಭಿಪ್ರಾಯ ಇಷ್ಟೇ

೧. ಸೆಲ್ಫ್ ಬ್ರಾಂಡಿಂಗ್ ಸೆಲ್ಫ್ ಮಾರ್ಕೆಟಿಂಗ್ ಇಸ್ ನಾಟ್ ಎ ಕ್ರೈಂ – ಬೇರೆಯವ್ರಿಗೆ ಮುಜುಗರ ಬಾರದಷ್ಟು ಮಾಡಿಕೊಳ್ಳಿ ತಪ್ಪಿಲ್ಲ
೨.ಹೊಸ ಬರಹಗಾರರು ಆದ್ರೆ ಮೊದಲು ಬರಹದ ಗುಣಮಟ್ಟದ ಫೀಡ್ ಬ್ಯಾಕ್ ಮುಖ್ಯ, ಆಮೇಲೆ ಅಬ್ಬರಿಸೋದು ಇಟ್ಟುಕೊಳ್ಳೋಣ
೩.ಹೆಸರಿಲ್ಲದ ಎರಡು ಪ್ರಶಸ್ತಿ ಸರ್ಟಿಫಿಕೇಟು ಸಿಕ್ಕ ಕ್ಷಣ ನಾವು ದೊಡ್ಡ ಬರಹಗಾರರು ಆಗೋಲ್ಲ
೪.ಬರಹದಿಂದಲೇ ದುಡ್ಡು ಮಾಡಕ್ಕೆ ಹೋಗೋದು ಒಳ್ಳೆಯದಲ್ಲ, ಆ ಕಾಲವು ಬರುತ್ತೆ ಅದಕ್ಕೆ ಪವಾಡದಂತ ಬರಹ ದಕ್ಕಿಸಿಕೊಳ್ಳಬೇಕು ಇಲ್ಲ ತುಂಬಾ ಕಾಲ ಬರೆಯಬೇಕು ಬರೀತಾ ಇರಿ

ಕೊನೆ ಮಾತು :

ನಿಮ್ಮ ತಮಟೆಯನ್ನ ನೀವೇ ಜಾಸ್ತಿ ಬಾರಿಸಿಕೊಂಡು ನಿಮ್ಮ ಕಿವಿಯೇ ಕಿವುಡಾಗಿ ಜಗತ್ತನ್ನೆಲ್ಲ ಬೈಯ್ದ್ಕೊಳ್ಳುವ ಹಂತಕ್ಕೆ ಹೋಗಬೇಡಿ ಕಣ್ಣು ಕಿವಿ ಬಾಯಿ ಎಲ್ಲ ನಿಯಂತ್ರಣದಲ್ಲಿ ಇರಲಿ

‍ಲೇಖಕರು avadhi

March 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: