ಪುಸ್ತಕದಂಗಡಿಯೊಳಗೆ ಸಿಕ್ಕ ದೇವರುಗಳು..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಅಲ್ಲೊಂದು ನೋಟೀಸ್ ಬೋರ್ಡ್.

ಅದೇನದು ಗೋಡೆಯ ಮೂಲೆಯಲ್ಲಿ ಚಿಕ್ಕ ಪೋಸ್ಟ್ ಕಾರ್ಡಿನಂತದ್ದು ಎಂದು ಗಮನವಿಟ್ಟು ನೋಡಿದರೆ ಚಿಕ್ಕದಾದ ಒಂದು ಕೈಬರಹದ ನೋಟ್. ಆಕರ್ಷಕವಲ್ಲದಿದ್ದರೂ ಒಮ್ಮೆ ಅನಾಯಾಸವಾಗಿ ಓದಿ ಮುಗಿಸಬಲ್ಲ, ನಾಲ್ಕೈದು ಸಾಲಿನ ಕೈಬರಹ. ‘ಪ್ರೀತಿಯ ಮಿಸ್ಟರ್ ರಾಜು, ನನ್ನ ಹುಡುಗಿಯನ್ನು ಪ್ರಪೋಸ್ ಮಾಡಲು ವಿಶೇಷ ಸ್ಥಳವಾಗಿ ನಿಮ್ಮ ಬುಕ್ ಶಾಪನ್ನು ಆರಿಸಿಕೊಂಡಿದ್ದೆ. ಅವಳು ಒಪ್ಪಿದ್ದಾಳೆ!! ನನ್ನ ಕೋರಿಕೆಯನ್ನು ಮನ್ನಿಸಿದ್ದಕ್ಕಾಗಿ ನಿಮಗೆ ಎಂದೆಂದಿಗೂ ಚಿರಋಣಿಯಾಗಿರುವೆ’, ಎಂದು ಅದರಲ್ಲಿ ಬರೆದಿತ್ತು. ಪಕ್ಕದಲ್ಲೇ ರೋಷನ್ ಜಾನ್ ಎಂಬ ನಾಮಧೇಯದ ಹಸ್ತಾಕ್ಷರ.

ವಾಹ್ ಎಂದಿತ್ತು ಮನಸ್ಸು. ಪುಸ್ತಕದಂಗಡಿಯೊಂದು ಗ್ರಾಹಕನ ಮನದಲ್ಲಿ, ಬದುಕಿನಲ್ಲಿ ಹೀಗೂ ಇಳಿಯಬಹುದು ಎಂಬ ಅರಿವು ನನಗಾಗಿದ್ದು ಆಗಲೇ!

ನಾನಂದು ಬೆರಗಾಗುತ್ತಾ ಕಣ್ಣರಳಿಸುತ್ತಿದ್ದಿದ್ದು ಹರಿಯಾಣಾದ ಗುರುಗ್ರಾಮದಲ್ಲಿರುವ ‘ಚಾಪ್ಟರ್ ೧೦೧’ ಎಂಬ ಹೆಸರಿನ ಪುಸ್ತಕದಂಗಡಿಯಲ್ಲಿ.

ಅಷ್ಟಕ್ಕೂ ಮಹಾನಗರಿಯ ಒಂದು ಪುಸ್ತಕದಂಗಡಿಯಲ್ಲಿ ನಾನು ಏನನ್ನಾದರೂ ನಿರೀಕ್ಷಿಸಬಹುದಿತ್ತು. ಪರವಾಗಿಲ್ಲ ಎಂಬಂತಹ ಸಂಗ್ರಹ, ಶಹರದ ಗತ್ತಿಗೆ ತಕ್ಕಷ್ಟು ಒಂಚೂರು ಲಕ್ಷುರಿ, ಗ್ರಾಹಕರನ್ನು ಸೆಳೆಯಲು ಆಕರ್ಷಕ ಆಫರ್… ಹೀಗೆ ಏನೋ ಒಂದು. ನಿಸ್ಸಂದೇಹವಾಗಿ, ಗ್ರಾಹಕನಿಂದ ಬರೆಯಲ್ಪಟ್ಟ ಮೇಲಿನ ಮಾದರಿಯ ನೋಟ್ ಒಂದನ್ನು ಬಿಟ್ಟು!

ಇದು ತೀರಾ ಸಿನಿಕ ಧಾಟಿಯ ಮಾತೇನಲ್ಲ. ಏಕೆಂದರೆ ಪಶ್ಚಿಮದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪುಸ್ತಕಪ್ರೀತಿಯ ಸಂಸ್ಕೃತಿಯು ಅಷ್ಟರಲ್ಲೇ ಇದೆ. ಕಾಫಿ ಶಾಪುಗಳಲ್ಲಿ, ಫ್ಯಾನ್ಸಿ ಬಾರುಗಳಲ್ಲಿ ಪುಸ್ತಕಗಳ ರ‍್ಯಾಕುಗಳು ಕಾಣಿಸತೊಡಗಿದ್ದು ತೀರಾ ಇತ್ತೀಚೆಗಿನ ವರ್ಷಗಳಲ್ಲೇ. ಇನ್ನು ಅಲ್ಲಿಟ್ಟಿರುವ ಪುಸ್ತಕಗಳನ್ನು ಕುತೂಹಲಕ್ಕಾದರೂ ತಿರುವಿ ಹಾಕುವವರ ಸಂಖ್ಯೆಯು ಅಷ್ಟಕ್ಕಷ್ಟೇ. ಉಡುಗೊರೆಯ ರೂಪದಲ್ಲಿ ಪುಸ್ತಕಗಳನ್ನು ನೀಡುವುದು ನಮ್ಮಲ್ಲಿ ಕೆಲವರಿಗಷ್ಟೇ ಇಷ್ಟ. ಉಳಿದವರಿಗೆ ಈ ಜಗತ್ತಿನಲ್ಲಿ ಇದಕ್ಕಿಂತ ಮಹಾ ನೀರಸ ಸಂಗತಿಯು ಬೇರೊಂದಿರಲಿಕ್ಕಿಲ್ಲ.

ನಮ್ಮ ಮಕ್ಕಳಲ್ಲಿ ಇಂದು ಓದುವ ಅಭಿರುಚಿಯನ್ನು ಬಿತ್ತಬೇಕು ಎನ್ನುವ ಬಹಳಷ್ಟು ಪೋಷಕರು ಸ್ವತಃ ಒಂದು ಪುಸ್ತಕವನ್ನು ಎತ್ತಿಕೊಳ್ಳಲು ಪ್ರಯತ್ನಿಸುವುದಿಲ್ಲ. ಇಲ್ಲದ ಕಸರತ್ತುಗಳನ್ನು ಮಾಡಿ ಲಕ್ಷಗಟ್ಟಲೆ ಡೊನೇಷನ್ ಕೇಳುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಈ ಮಂದಿ, ಮಗುವಿಗಾಗಿ ಐವತ್ತು ರೂಪಾಯಿಯ ಕತೆ ಪುಸ್ತಕವೊಂದನ್ನು ಖರೀದಿಸಲು ಮೀನಮೇಷ ಎಣಿಸುತ್ತಾರೆ. ಪಠ್ಯಪುಸ್ತಕಗಳನ್ನೋದಿದರೆ ಸಾಕಪ್ಪಾ ಎಂಬ ಹುಸಿ ಸಮಜಾಯಿಷಿಗಳನ್ನು ತಮಗೆ ತಾವೇ ನೀಡುತ್ತಾರೆ.

ಒಟ್ಟಿನಲ್ಲಿ ಓದಿನ ಅಭಿರುಚಿಗೆ ನಮ್ಮ ಸಮಾಜದಲ್ಲಿ ಇಂದಿಗೂ ‘ಕೂಲ್’ ಅಥವಾ ‘ಟ್ರೆಂಡಿಂಗ್’ ಎಂದು ಕರೆಸಿಕೊಳ್ಳುವ ಒಳ್ಳೆಯ ದಿನಗಳು ಪೂರ್ಣರೂಪದಲ್ಲಿ ಬಂದೇ ಇಲ್ಲ. ಹೀಗಿರುವಾಗ ಮಹಾನಗರಿಯ ಮೂಲೆಯೊಂದರಲ್ಲಿರುವ ಪುಸ್ತಕದಂಗಡಿಯಲ್ಲಿ ಇಂಥದ್ದೊಂದು ನೋಟ್ ಕಾಣಲು ಸಿಗುವುದೆಂದರೆ!?

ನಾನು ಭಾರತದಲ್ಲಿ ಈವರೆಗೆ ಕಂಡಿರುವ ಹಲವು ಪುಸ್ತಕದಂಗಡಿಗೂ, ಚಾಪ್ಟರ್ ೧೦೧ ಬುಕ್ ಸ್ಟಾಲಿಗೂ ಇರುವ ವ್ಯತ್ಯಾಸವು ಬಹಳ ದೊಡ್ಡದು ಎಂಬ ಸಂಗತಿಯನ್ನು ಅರಿಯಲು ಹೆಚ್ಚು ಹೊತ್ತೇನೂ ವ್ಯಯವಾಗಲಿಲ್ಲ. ಹಳೆಯ ಕಾಲದ ಬ್ರಿಟಿಷ್ ಬಂಗಲೆಯನ್ನು ನೆನಪಿಸುವಂತಿದ್ದ ಪುಸ್ತಕದಂಗಡಿಯ ಒಳಾಂಗಣವು, ಹೊರಗಿನ ಜಂಜಾಟಗಳನ್ನೆಲ್ಲಾ ಕ್ಷಣಕಾಲ ಮರೆತು ಈ ಪುಸ್ತಕಮನೆಯಲ್ಲಿ ಆರಾಮಾಗಿ ಕುಳಿತುಕೊಳ್ಳಿ ಎಂದು ಸೂಚ್ಯವಾಗಿ ಹೇಳುವಂತಿತ್ತು. ಅಲ್ಲೊಂದು ವೃತ್ತಾಕಾರದ ಮೇಜು. ಇಲ್ಲೊಂದು ಸುಂದರವಾದ ಕುರ್ಚಿ. ಬಂಗಲೆಯಂತಿದ್ದ ಒಳಾಂಗಣದ ವಿನ್ಯಾಸಕ್ಕೆ ತಕ್ಕದಾಗಿಯೇ ಇದ್ದ ಪೀಠೋಪಕರಣಗಳ ಅಲಂಕಾರ.

ಎಂದಿನಂತೆ ಕತೆ-ಕಾದಂಬರಿಗಳನ್ನು ಪಕ್ಕಕ್ಕಿಟ್ಟು, ನಾನ್-ಫಿಕ್ಷನ್ ಗಳ ವಿಭಾಗಕ್ಕೆ ತೆರಳಿದ ನಾನು ಚಿಕ್ಕ ಪುಸ್ತಕವೊಂದನ್ನು ಕೈಗೊತ್ತಿಕೊಂಡೆ. ಅದು ಮೋಡಗಳ ಬಗೆಗಿನ ಒಂದು ಪುಸ್ತಕವಾಗಿತ್ತು. ತಕ್ಷಣ ನನಗೆ ನೆನಪಾಗಿದ್ದು ಆತ್ಮೀಯರಾದ ಜಿ. ಎನ್. ಮೋಹನ್ ಸರ್ ಹಿಂದೊಮ್ಮೆ ಮೋಡಗಳ ಬಗ್ಗೆ ಬರೆದಿದ್ದ ಸೊಗಸಾದ ಒಂದು ಲೇಖನ. ಅದೆಷ್ಟು ಬಗೆಯ ಮೋಡಗಳು, ಅದೆಷ್ಟು ಬಗೆಯ ಕಥೆಗಳು! ಮೋಡಗಳನ್ನು ದಾಟಿ, ಮತ್ತೊಂದು ಪುಸ್ತಕವನ್ನೆತ್ತಿಕೊಂಡರೆ ಅದು ಈ ಜಗತ್ತಿನ ವಿಶಿಷ್ಟ ಪಕ್ಷಿಗಳ ಕುರಿತಾಗಿತ್ತು. ಪುಟಪುಟಗಳಲ್ಲೂ ಇಲ್ಲಿ ಅನಿಮಲ್ ಪ್ಲಾನೆಟ್ಟು.

ಅತ್ತ ಹಲವು ದೇಶಗಳಿಂದ ಎತ್ತಿಕೊಳ್ಳಲಾದ ಅತ್ಯುತ್ತಮ ನಗೆಚಟಾಕಿಗಳದ್ದೇ ಒಂದು ಪುಸ್ತಕವಾದರೆ, ಇತ್ತ ವಿವಿಧ ಬಗೆಯ ಸಾರಾಯಿಗಳ ಇತಿಹಾಸದ ಬಗ್ಗೆಯೇ ಒಂದು ಪುಸ್ತಕ. ಅಲ್ಲೊಂದು ಕಡೆ ಖ್ಯಾತ ಪತ್ರಿಕೆಯೊಂದರ ಸಂಪಾದಕೀಯ ಬರಹಗಳ ಸಂಕಲನ. ಇಲ್ಲೊಂದು ಕಡೆ ಈಜಿಪ್ಟಿನ ಸಂಸ್ಕೃತಿಯಲ್ಲಿ ಸಾವಿನ ಬಗ್ಗೆ ಎಂತೆಂಥಾ ವ್ಯಾಖ್ಯಾನಗಳಿವೆ ಎಂಬುದರ ಬಗ್ಗೆಯೂ ಒಂದು ಪುಸ್ತಕ. ಬೇರೆಲ್ಲಾ ಹಾಗಿರಲಿ! ಮರುಓದಿಗೆ ಸೂಕ್ತ ಎಂದು ಹೇಳಬಲ್ಲ ಜಗತ್ತಿನ ಉತ್ಕೃಷ್ಟ ಪುಸ್ತಕಗಳ ಬಗ್ಗೆಯೇ ಒಂದು ಪರಿಚಯಾತ್ಮಕ ಕೃತಿ.

ಸ್ವಲ್ಪ ಮುಂದೆ ಹೋಗಿ ನಿಂತರೆ ಖ್ಯಾತ ಅಮೆರಿಕನ್ ಕ್ರೈಂ ವರದಿಗಾರ್ತಿ, ಲೇಖಕಿ ಆನ್ ರೂಲ್ ಬರೆದ ‘ದ ಸ್ಟ್ರೇಂಜರ್ ಬಿಸೈಡ್ ಮಿ’ ಎಂಬ ಪುಸ್ತಕ. ಅಮೆರಿಕನ್ ಸೀರಿಯಲ್ ಕಿಲ್ಲರ್ ಟೆಡ್ ಬಂಡಿಯ ಜೀವನಚರಿತ್ರೆಯಾದ ಈ ಅದ್ಭುತ ಕೃತಿಯನ್ನು ಆನ್ಲೈನ್ ಮಾರ್ಗವಾಗಿ ತರಿಸಲು ನಾನು ಹಿಂದೊಮ್ಮೆ ಒಂದು ತಿಂಗಳು ಕಾದಿದ್ದೆ.

ವಿದೇಶಿ ಆವೃತ್ತಿ ಎಂಬ ಒಂದೇ ಒಂದು ಕಾರಣಕ್ಕಾಗಿ! ಇಂತಿಪ್ಪ ಪುಸ್ತಕವೊಂದು ಅಂದು ನನ್ನ ಕಣ್ಣ ಮುಂದಿತ್ತು. ಟೆಡ್ ಬಂಡಿಯೊಂದಿಗೆ ನಾನೂ ಇದ್ದೇನೆ ಎನ್ನುವಂತೆ ಬುಕ್ ರ‍್ಯಾಕಿನ ಇನ್ನೊಂದು ಬದಿಯಲ್ಲಿ ಮತ್ತೋರ್ವ ಕುಖ್ಯಾತ ಅಪರಾಧಿ ಚಾರ್ಲ್ಸ್ ಮ್ಯಾನ್ಸನ್ ಕೂಡ ಇದ್ದ. ಅತ್ತ ವಿಶ್ವಯುದ್ಧಗಳ ವಿಭಾಗಕ್ಕೇ ಒಂದು ಕಪಾಟು. ಇತ್ತ ಪಿಂಕ್ ಫ್ಲಾಯ್ಡ್ ಫಿಲಾಸಫಿಯನ್ನೂ, ಭೀಮಸೇನ ಜೋಷಿ ಆಲಾಪವನ್ನೂ, ಎಮ್.ಎಫ್. ಹುಸೇನ್ ಕುಂಚವನ್ನೂ ಓದುಗರಿಗೆ ಪರಿಚಯಿಸುವ ವಿಶಿಷ್ಟ ಪುಸ್ತಕಗಳ ಸಂಗ್ರಹ.

ಗುರುಗ್ರಾಮ ನಿವಾಸಿಯಾಗಿರುವ ರಾಜು ಸಿಂಗ್ ಮಾಲೀಕತ್ವದ ‘ಚಾಪ್ಟರ್ ೧೦೧’ ಪುಸ್ತಕದಂಗಡಿಯು ವಿಭಿನ್ನವಾಗಿ ನಿಲ್ಲುವುದು ಇಂಥಾ ಕಾರಣಕ್ಕಾಗಿಯೇ. ಇಲ್ಲಿ ಹುಡುಕಿದರೂ ನಿಮಗೆ ಚೇತನ್ ಭಗತ್, ಅಮೀಶ್ ತ್ರಿಪಾಠಿ ಕಾಣುವುದಿಲ್ಲ. ಬಹುತೇಕ ಪುಸ್ತಕದಂಗಡಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಅವೇ ಯಥಾವತ್ ಸಂಗ್ರಹಗಳಿಗೆ ಇಲ್ಲಿ ಜಾಗವೇ ಇಲ್ಲ.

ಚಾಪ್ಟರ್ ೧೦೧ ರಲ್ಲಿ ಓದುಗರಿಗೆ ಸಿಗುವುದು ಶೇಕ್ಸ್ ಪಿಯರ್, ಸೋರ‍್ಸೆಟ್ ಮಾಮ್, ಒಡಿಸ್ಸಿ ಖ್ಯಾತಿಯ ಹೋಮರ್, ಡಿಕನ್ಸ್, ಹೆಮಿಂಗ್ವೇ, ಎಡ್ಗರ್ ಅಲೆನ್ ಪೋ, ಆನ್ ರಾಂಡ್, ಬರ್ಟ್ರಾಂಡ್ ರಸ್ಸೆಲ್, ಮಲಿಕಾ ಅಮರ್ ಶೇಖ್, ಚಾರ್ಲ್ಸ್ ಬುಕೋವ್ಸ್ಕಿ, ಚರ್ಚಿಲ್, ರೂಮಿ, ಗಿಬ್ರಾನ್, ಓಮರ್ ಖಯ್ಯಾಮ್, ನಾಸ್ಟ್ರಡಾಮಸ್, ಬೀಟಲ್ಸ್… ಹೀಗೆ ಪಟ್ಟಿ ನಿಲ್ಲದೆ ಸಾಗುತ್ತದೆ. ವಿಶಿಷ್ಟ ಪುಸ್ತಕಗಳನ್ನು ಸಂಗ್ರಹಿಸುವ ಖಯಾಲಿಯು ಯಾರಿಗಾದರೂ ಇದ್ದರೆ, ಇಂಥವರಿಗೆ ‘ಚಾಪ್ಟರ್ ೧೦೧’ ಧರೆಗಿಳಿದ ಸ್ವರ್ಗವೇ ಹೌದು.

ಹಿರಿಯರಾದ ರಾಜು ಸಿಂಗ್ ಅದೆಷ್ಟು ಕಾಳಜಿಯಿಂದ ಈ ಪುಸ್ತಕಗಳ ಅಪೂರ್ವ ಸಂಗ್ರಹವನ್ನು ಪ್ರಸ್ತುತಪಡಿಸಿದ್ದಾರೆಂದರೆ, ಪುಸ್ತಕಗಳ ಬಗ್ಗೆ ಅವರಿಗಿರುವ ಅಪರಿಮಿತ ಪ್ರೀತಿಯು ನಮ್ಮ ಹುಬ್ಬೇರಿಸಬಲ್ಲದು. ನೂರಿನ್ನೂರು ವರ್ಷದ ಹಿಂದೆ ಮುದ್ರಣವನ್ನು ಕಂಡ ಹಳೆಯ ಪುಸ್ತಕಗಳು, ಮುದ್ರಣವೇ ನಿಂತು ಹೋಗಿ ಕಣ್ಮರೆಯಾದ ಅಪರೂಪದ ಪುಸ್ತಕಗಳು, ಲೇಖಕರ ಹಸ್ತಾಕ್ಷರವನ್ನೊಳಗೊಂಡ ಪುಸ್ತಕಗಳು, ಎಡಿರ‍್ಸ್ ಪಿಕ್ಸ್ ವಿಭಾಗದಲ್ಲಿ ಮಿ. ಸಿಂಗ್ ಸ್ವತಃ ಆರಿಸಿರುವ ಓದಲೇಬೇಕಾದ ಪುಸ್ತಕಗಳು, ದೇಶ-ವಿದೇಶಗಳಿಂದ ವಿಶೇಷ ಆಸಕ್ತಿಯಿಂದ ಸಂಗ್ರಹಿಸಿಟ್ಟುಕೊಂಡ ಅಪರೂಪದ ಪುಸ್ತಕಗಳು… ಇಲ್ಲಿ ಏನುಂಟು ಏನಿಲ್ಲ! ಮೊದಲೇ ಹೇಳಿದಂತೆ ಚಾಪ್ಟರ್ ೧೦೧ ಹೆಸರಿಗಷ್ಟೇ ಪುಸ್ತಕದಂಗಡಿ. ಅದಕ್ಕಿಂತ ಹೆಚ್ಚಾಗಿ ಇದನ್ನೊಂದು ಮ್ಯೂಸಿಯಮ್ ಅನ್ನುವುದೇ ಸೂಕ್ತ.

ಇನ್ನು ಅಪರೂಪದ ಪುಸ್ತಕಗಳನ್ನೇ ಇಲ್ಲಿ ಮಾರಾಟಕ್ಕಿಟ್ಟಿರುವ ಕಾರಣವಾಗಿ ಇಲ್ಲಿಯ ಬೆಲೆಗಳೂ ಕೂಡ ಕೊಂಚ ದುಬಾರಿಯೇ. ಪುಸ್ತಕದಂಗಡಿಯ ಸಂಗ್ರಹವನ್ನು ತೋರಿಸುತ್ತಾ ನನ್ನೊಂದಿಗೆ ಮಾತಾಡುತ್ತಿದ್ದ ಮೇಲ್ವಿಚಾರಕರಾದ ದೀನನಾಥ ಮಾಂಝಿ ಸುಮಾರು ನೂರೈವತ್ತು ವರ್ಷಕ್ಕೂ ಹಳೆಯದಾದ ಬೈಬಲ್ ಒಂದನ್ನು ತೆಗೆದು ನನ್ನ ಕೈಯಲ್ಲಿಟ್ಟಿದ್ದರು.

ಸಾಮಾನ್ಯವಾಗಿ ಹಾರರ್ ಚಲನಚಿತ್ರಗಳಲ್ಲಷ್ಟೇ ಕಾಣಸಿಗುವ, ಕಂದುಬಣ್ಣದ ತೆಳು ಹಾಳೆಗಳನ್ನು ಹೊಂದಿದ್ದ, ಸಾಕಷ್ಟು ಭಾರವಿದ್ದ ಆ ದೈತ್ಯಪುಸ್ತಕವನ್ನು ನಾನು ಜಾಗರೂಕತೆಯಿಂದ ಎತ್ತಿಕೊಂಡೆ. ಈಗಷ್ಟೇ ಹುಟ್ಟಿದ ನವಜಾತ ಶಿಶುವನ್ನು ಕಕ್ಕುಲಾತಿಯಿಂದ ಎತ್ತಿಕೊಂಡಂತೆ! ಆ ಹಳೆಯ ಪುಟಗಳನ್ನು ಹಗುರವಾಗಿ ತಿರುವಿದರೆ ರಹಸ್ಯವಾದ ಲೋಕವೊಂದನ್ನು ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವ. ಅಂದಹಾಗೆ ಈ ಸಂಗ್ರಹಯೋಗ್ಯ ಬೈಬಲ್ಲಿನ ಬೆಲೆ ಕೇವಲ ೬೦,೦೦೦ ರೂಪಾಯಿಗಳು ಮಾತ್ರ!

ಇಂಥಾ ಅಪರೂಪದ ಪುಸ್ತಕಗಳಿಗಾಗಿ ವಿಶೇಷವಾದ ಕಪಾಟನ್ನೇ ಮೀಸಲಾಗಿರಿಸಲಾದ ಇಲ್ಲಿಯ ಅಚ್ಚುಕಟ್ಟುತನವು ನಿಜಕ್ಕೂ ಪ್ರಶಂಸಾರ್ಹ. ಗಾಂಧಿ, ಹಿರೋಶಿಮಾ ದಾಳಿ, ಯುದ್ಧ ವರದಿ, ಪ್ರಾಚೀನ ಕಾವ್ಯ… ಹೀಗೆ ಇರುವ ಬೆರಳೆಣಿಕೆಯ, ಎತ್ತಿಟ್ಟ ಸಂಗ್ರಹದಲ್ಲೂ ಅತ್ಯುತ್ಕೃಷ್ಟ ಎಂಬಂತಹ ಆಯ್ಕೆಗಳು. ಸದ್ಯ ನಿಮ್ಮ ಸಂಗ್ರಹದಲ್ಲಿರುವ ಅತ್ಯಂತ ದುಬಾರಿ ಪುಸ್ತಕವನ್ನು ತೋರಿಸಿ ಎಂದಾಗ ಅದೋ ಅಲ್ಲಿ ನೋಡಿ ಎಂದು ತೋರಿಸಿದರು ಮಾಂಝಿ. ಖ್ಯಾತ ಕವಿ ಇಕ್ಬಾಲ್ ಬಗೆಗಿನ ಪಾಕಿಸ್ತಾನ ಮೂಲದ ಆ ಪುಸ್ತಕವು ಒಂದು ಲಕ್ಷ ರೂಪಾಯಿ ಬೆಲೆಬಾಳುವ ಗ್ರಂಥವಾಗಿತ್ತು.

ಈ ಕಾರಣಗಳಿಂದಾಗಿ ದಿಲ್ಲಿಯಲ್ಲಿ ಖರೀದಿಯೆಂದರೆ ಚೌಕಾಶಿಯಷ್ಟೇ ಎಂದು ಭಾವಿಸಿಕೊಂಡಿರುವ ಮಂದಿಗೆ ‘ಚಾಪ್ಟರ್ ೧೦೧’ ಖಂಡಿತವಾಗಿಯೂ ಸೂಕ್ತವಾದ ಸ್ಥಳವಲ್ಲ. ಏಕೆಂದರೆ ಇಲ್ಲಿರುವ ಪುಸ್ತಕದ ಬೆಲೆಗಳು ಶುರುವಾಗುವುದೇ ಮುನ್ನೂರು-ನಾಲ್ಕು ನೂರು ರೂಪಾಯಿಗಳಷ್ಟಿನ ದರದಲ್ಲಿ. ಹೀಗೆ ಸಾಗುವ ಪುಸ್ತಕಗಳ ದರಗಳು ಮುಂದೆ ನೂರು, ಸಾವಿರ, ಲಕ್ಷದವರೆಗೂ ಬರುತ್ತವೆ. ಅದೆಷ್ಟೋ ಜನಪ್ರಿಯ ಕ್ಲಾಸಿಕ್ ಪುಸ್ತಕಗಳನ್ನು ಇಲ್ಲಿ ವಿಶೇಷವಾಗಿ ದಪ್ಪನೆಯ ಚರ್ಮದ ಹೊದಿಕೆಗಳಲ್ಲಿ ಸಂರಕ್ಷಿಸಿಡಲಾಗಿದೆ. ಇನ್ನು ಸಂಗ್ರಹಯೋಗ್ಯ ಪುಸ್ತಕಗಳು ಅಪರೂಪದ್ದಾದಷ್ಟೂ, ದುಬಾರಿಯೂ ಆಗುವುದು ಸಹಜ.

ಹೆಚ್ಚಾಗಿ ಹಾರ್ಡ್ ಬೌಂಡ್ ಹೊದಿಕೆಯ ಪುಸ್ತಕಗಳನ್ನೇ ಇಟ್ಟಿರುವ ಇಲ್ಲಿ ಬಹುತೇಕ ಎಲ್ಲಾ ಪುಸ್ತಕಗಳಿಗೂ ಶುಭ್ರವಾದ, ಸುಂದರವಾದ ಪಾರದರ್ಶಕ ಜಾಕೀಟನ್ನು ಅಳವಡಿಸಲಾಗಿದೆ. ಇದು ಪುಸ್ತಕದ ಅಂದವನ್ನು ಹೆಚ್ಚಿಸುವುದಲ್ಲದೆ, ಅದರ ದೀರ್ಘಾವಧಿ ಬಾಳಿಕೆಯ ವಿಚಾರದಲ್ಲೂ ಬಲು ಉಪಯುಕ್ತ ಅಂಶ. ಸ್ಪರ್ಶಕ್ಕೂ ಸೊಗಸು. ಇಲ್ಲಿಯ ಪ್ರತಿಯೊಂದು ಶೆಲ್ಫಿನಲ್ಲಿರುವ ಒಂದೊಂದು ಪುಸ್ತಕಕ್ಕೂ ಇಂಥದ್ದೊಂದು ಕಾಳಜಿಸಹಿತವಾದ ಪ್ರೀತಿಯು ದೊರಕಿರುವುದು ವಿಶೇಷ. ಹೀಗಾಗಿ ಈ ಅದ್ದೂರಿ ಸಂಗ್ರಹವು ಶ್ರೀಮಂತ ಉದ್ಯಮಿಯೊಬ್ಬನ ಕೇವಲ ಶೋಕಿಯ ಪ್ರದರ್ಶನದಂತಷ್ಟೇ ಕಾಣದೆ ಆಸಕ್ತ ಓದುಗ, ಪುಸ್ತಕಪ್ರೇಮಿಯೊಬ್ಬನ ವರ್ಷಾನುಗಟ್ಟಲೆ ಕಾಲದ ಶ್ರಮದ ಘಮವೂ ಗ್ರಾಹಕನನ್ನು ಪರಿಣಾಮಕಾರಿಯಾಗಿ ತಲುಪುತ್ತಿರುವುದು ಸತ್ಯ.

ಗುರುಗ್ರಾಮದ ಚಾಪ್ಟರ್ ೧೦೧ ಪುಸ್ತಕದಂಗಡಿಯ ಬಗ್ಗೆ ಬ್ಲಾಗ್ ಲೇಖಕರೊಬ್ಬರು ಒಂದು ಕಡೆ ಹೀಗೆ ಬರೆಯುತ್ತಾರೆ: ‘ನಾನು ಆ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದೆ. ಟೈಮ್ ಮಷೀನಿನಲ್ಲಿ ಕುಳಿತುಕೊಂಡು ಅಚಾನಕ್ಕಾಗಿ ಬೇರೆಯದ್ದೇ ಲೋಕಕ್ಕೆ ಇಳಿದುಬಂದಂತಾಗಿತ್ತು. ಮೇಲ್ನೋಟಕ್ಕೆ ಅಂಥದ್ದೇನೂ ವಿಶೇಷವಾಗಿ ಕಾಣದ ಗಾಜಿನ ಬಾಗಿಲುಗಳ ಹಿಂದೆ ಇಂಥದ್ದೊಂದು ಅಪರೂಪದ ಲೋಕವು ಇದ್ದೀತೆಂಬುದನ್ನು ನಾನು ಊಹಿಸಿರಲೇ ಇಲ್ಲ!’. ಇತ್ತ ಬ್ರಿಟಿಷ್ ವಾಸ್ತುಶಿಲ್ಪ ವಿನ್ಯಾಸದ, ಮಹಾಗನಿ ಥೀಮಿನ ಕಪಾಟುಗಳಲ್ಲಿದ್ದ ಪುಸ್ತಕಗಳ ಸಂಗ್ರಹದಲ್ಲಿ ಕಳೆದುಹೋಗುತ್ತಿದ್ದ ನನಗಿದು ಉತ್ಪ್ರೆಕ್ಷೆಯಂತೇನೂ ಅನಿಸಲಿಲ್ಲ.

‘ರಾಜು ಸಿಂಗ್ ರವರ ವಿಶಿಷ್ಟ ಪುಸ್ತಕ ಸಂಗ್ರಹದ ಬಗ್ಗೆ ಎರಡು ಮಾತಿಲ್ಲ. ಹಾಗಂತ ನಿಮ್ಮ ಕತೆಯೂ ಕೂಡ ಸುಮ್ಮನೆ ಮರೆತು ಹೋಗುವಂಥದ್ದೇನಲ್ಲ ಬಿಡಿ’, ಎಂದು ಈ ಬಾರಿ ದೀನನಾಥ ಮಾಂಝಿಯವರನ್ನು ನಾನು ಮಾತಿಗೆಳೆದೆ. ನನ್ನ ಮಾತಿಗೆ ಮುಗುಳ್ನಕ್ಕ ಮಾಂಝಿ ‘ಪುಸ್ತಕಗಳನ್ನು ಬಿಟ್ಟು ನಾನು ಹೇಗಿರಲಿ ಸಾರ್!’ ಎನ್ನುತ್ತಾ ತಮ್ಮ ಸುತ್ತಲಿರುವ ಪುಸ್ತಕಗಳ ಸಾಲುಗಳನ್ನೇ ಆರಾಧನಾ ಭಾವದಿಂದ ನೋಡತೊಡಗಿದರು.

ಕತೆ ಕೇಳಲು ಆಸಕ್ತಿಯಷ್ಟೇ ಇದ್ದರೆ ಸಾಲದು, ತಾಳ್ಮೆಯೂ ಬೇಕು. ಪುಸ್ತಕಗಳೊಂದಿಗಿನ ಮಾಂಝಿಯವರ ಪಯಣದ ಕತೆಯನ್ನು ಅವರದ್ದೇ ಮಾತುಗಳಲ್ಲಿ ಕೇಳಲು ನಾನು ಕಾತರದಿಂದ ಕಾದೆ. ಮಾಂಝಿ ಈಗ ಕಾಲದ ಪುಟಗಳನ್ನು ತಿರುವುತ್ತಿದ್ದರು…

(ಮುಂದಿನ ಸಂಚಿಕೆಯಲ್ಲಿ)

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: