ಪುಸ್ತಕಗಳು ಸಾಯುತ್ತಿವೆಯೇ?

 

 

 

 

ರಹಮತ್ ತರೀಕೆರೆ

 

 

 

 

ನಮ್ಮೊಬ್ಬ ಮೇಷ್ಟ್ರು ಆಗಾಗ್ಗೆ ಹೇಳುತ್ತಿದ್ದರು: ಕೆಲವು ಅಧ್ಯಾಪಕರ ಮನೆಯಲ್ಲಿ ಟಿವಿ ಫ್ರಿಜ್ಜು ವಾಶಿಂಗ್‍ಮಶಿನ್ ಎಸಿ ಇತ್ಯಾದಿ ಆಧುನಿಕ ಸಲಕರಣೆಗಳೆಲ್ಲ ಇರುತ್ತವೆ, ಪುಸ್ತಕದ ಕಪಾಟು ಇರುವುದಿಲ್ಲ ಎಂದು. ಇದಕ್ಕೆ ಪ್ರತಿಯಾದ ಇನ್ನೊಂದು ಅವಸ್ಥೆಯೂ ಇದೆ. ಕೆಲವರಲ್ಲಿ ಪುಸ್ತಕ ಸಂಗ್ರಹ ಚೆನ್ನಾಗಿರುತ್ತದೆ. ಈ ಬಗ್ಗೆ ಅವರು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಲೂ ಇರುತ್ತಾರೆ. ಆದರೆ ಓದಿರುವುದಿಲ್ಲ. ಅವು ಅವರ ಪಾಲಿಗೆ ಪ್ರದರ್ಶನ ಸರಕುಗಳು, ಶೋಕೇಸಿನ ಬೊಂಬೆಗಳಂತೆ. ಅವೀಗ ವಾರಸುದಾರರಲ್ಲಿದ ಅಮೂಲ್ಯ ಆಸ್ತಿಯಂತೆ.

ಎರಡನೆಯ ಈ ಅವಸ್ಥೆ ಅನೇಕ ಸಾರ್ವಜನಿಕ ಗ್ರಂಥಾಲಯಗಳ ಮಟ್ಟಿಗೂ ಅನ್ವಯವಾಗುತ್ತದೆ. ಗ್ರಂಥಪಾಲಕರು ನಮ್ಮಲ್ಲಿ ಇಷ್ಟು ಸಾವಿರ ಪುಸ್ತಕಗಳಿವೆ, ಪುಸ್ತಕದ ಅಥವಾ ಲೇಖಕರ ಹೆಸರನ್ನು ಕಂಪ್ಯೂಟರಿನಲ್ಲಿ ಟೈಪುಮಾಡಿದರೆ ಅದು ಇದೆಯೊ ಇಲ್ಲವೊ, ಕೊಂಡೊಯ್ದಿದ್ದರೆ ಯಾವಾಗ ಮರಳುತ್ತದೆ ಎಂದೆಲ್ಲ ಗೊತ್ತಾಗುತ್ತದೆ ಎಂದು ಅಗ್ಗಳಿಕೆಯಿಂದ ಹೇಳುವರು. ಯುಜಿಸಿ ತಪಾಸಣ ಸಮಿತಿಗಳಿಗಾಗಿಯೂ ಈ ತಾಂತ್ರಿಕತೆ ವಿಶ್ವವಿದ್ಯಾಲಯ, ಕಾಲೇಜು ಗ್ರಂಥಾಲಯಗಳಲ್ಲಿ ಬಂದಿದೆ. ಈ ತಾಂತ್ರಿಕ ಸೌಲಭ್ಯದ ಮೂಲಕ ಎಷ್ಟು ಓದುಗರು ಪುಸ್ತಕ ಪಡೆದುಕೊಂಡರು ಮತ್ತು ಓದಿದರು, ಓದಿದ್ದರ ಪರಿಣಾಮ ಏನು ಎಂದು ಹುಡುಕಿದರೆ ಸಿಗುವ ಉತ್ತರ ನಿರಾಶೆ ತರುತ್ತದೆ.

ಈ ಅನುಭವ ಮುಂಬೈನ ಏಶಿಯಾಟಿಕ್ ಸೊಸೈಟಿ, ಮುಂಬೈ ವಿಶ್ವವಿದ್ಯಾಲಯದ ಲೈಬ್ರರಿ, ಪುಣೆಯ ಭಂಡಾರ್ಕರ್ ಲೈಬ್ರರಿ, ದೆಹಲಿಯ ತೀನ್‍ಮೂರ್ತಿ ಭವನದ ಗ್ರಂಥಾಲಯ, ಉಸ್ಮಾನಿಯ ವಿಶ್ವವಿದ್ಯಾಲಯದ ಗ್ರಂಥಾಲಯ, ಕೊಲ್ಕತ್ತೆಯ ನ್ಯಾಶನಲ್ ಲೈಬ್ರರಿ- ಮುಂತಾದ ಹಳೆಯ ಗ್ರಂಥಾಲಯಗಳಿಗೆ ಹೋದಾಗ ಆಗಿದೆ. ಈಚೆಗೆ ಬೆಳಗಾವಿಯ ಒಂದು ಹಳೇ ಕಾಲೇಜಿಗೆ ಹೋದೆ. ಎಂಥ ದೊಡ್ಡ ಗ್ರಂಥಸಂಗ್ರಹ. ಇಡೀ ಗ್ರಂಥಾಲಯದಲ್ಲಿ ನಾಲ್ಕು ಜನ. ಅವರಲ್ಲಿ ಒಂದು ಪ್ರೇಮಿಗಳ ಜೋಡಿ. ಕೊಲ್ಕತ್ತೆಯ ನ್ಯಾಶನಲ್ ಲೈಬ್ರರಿಯಲ್ಲೂ ಪ್ರೇಮಿಗಳೇ. ಅಲ್ಲಿನ ಕನ್ನಡ ವಿಭಾಗದಲ್ಲಿದ್ದ ಕುಮಾರಪ್ಪನವರು ಬಂದವರಿಗೆಲ್ಲ ಕರ್ನಾಟಕ ಸಂಬಂಧಿ ಗ್ರಂಥಗಳನ್ನು ತೋರಿಸುವ ಪರಿಪಾಠ ಇರಿಸಿಕೊಂಡಿದ್ದರು. ಹೆಚ್ಚಿನವು ಧೂಳುಹಿಡಿದು, ಮುಟ್ಟಿದರೆ ಮುರಿವಂತೆ ಕೆಂಬಣ್ಣಪಡೆದು, ಜೋಲುಮುಖ ಹಾಕಿಕೊಂಡು ಮೃತ್ಯುಧ್ಯಾನದಲ್ಲಿರುವ ಮುದುಕರಂತೆ ಕಪಾಟಿನಲ್ಲಿ, ಕೂತಿರುತ್ತಿದ್ದವು. ಇವನ್ನು ಕರ್ನಾಟಕದ ಎಷ್ಟು ಜನ ಬಳಸಿದ್ದಾರೆ ಎಂದು ಕೇಳಿದರೆ, ಕುಮಾರಪ್ಪ ಹುಳ್ಳನಗೆ ನಗುತ್ತಿದ್ದರು. ನ್ಯಾಶನಲ್ ಲೈಬ್ರರಿಯ ಈ ಅವಸ್ಥೆ, ನಮ್ಮ ನಾಗರಿಕ ಸಮಾಜದ ಅಥವಾ ವಿಶ್ವವಿದ್ಯಾಲಯಗಳ ವಿದ್ವತ್ತೆಯ ಅವಸ್ಥೆಯನ್ನು ಕನ್ನಡಿಸುವಂತಿದೆ. ಈ ಪ್ರತಿಷ್ಠಿತ ಸಾರ್ವಜನಿಕ ಗ್ರಂಥಾಲಯಳಿಗೆ ಓದುಗರೇ ಬರುವುದಿಲ್ಲ ಎಂತಲ್ಲ. ವಿಷಯದ ಹುಡುಕಾಟದ ಹುಚ್ಚಿದ್ದವರು, ನಿವೃತ್ತರಾದ ಕೆಲವರು ಹಾಜರಾಗುತ್ತಾರೆ. ಆದರೆ ಆ ಗ್ರಂಥಾಲಯದ ಬೃಹತ್ ವ್ಯವಸ್ಥೆಗೂ ಅದರ ಓದುಗರಿಗೂ ತಾಳೆಯಾಗುವುದಿಲ್ಲ.

ಇದಕ್ಕೆ ಹೋಲಿಸಿದರೆ, ಜನಪ್ರಿಯ ಕಾದಂಬರಿ ಓದಲು ಜನ ಬರುವ ಸ್ಥಳೀಯ ಗ್ರಂಥಾಲಯಗಳೇ ವಾಸಿ. ಈಗೀಗ ಗ್ರಾಮಮಟ್ಟದಲ್ಲೂ ಅವಿದ್ದು ಅಲ್ಲಿ ಓದುಗರ ಹಾಜರಾತಿ ಚೆನ್ನಾಗಿಯೇ ಇದೆಯೆಂದು ಕೇಳಿರುವೆ. ಪ್ರತಿಷ್ಠಿತ ಗ್ರಂಥಾಲಯಗಳು ಓದುಗರಿಂದ ಗಿಜಿಗುಡುತ್ತಿರಬೇಕು ಎಂಬ ನಿರೀಕ್ಷೆಯೇ ಬಹುಶಃ ತಪ್ಪು. `ಒಂದು ಗ್ರಂಥ ತನ್ನ ಓದುಗರಿಗಾಗಿ ವರುಷಗಟ್ಟಲೆ ಕಾಯುತ್ತಿರುತ್ತದೆ. ಅಂತಹ ಒಬ್ಬ ಓದುಗರಿಗೆ ಉಪಯುಕ್ತವಾದರೆ ಸಾಕು, ಸಾರ್ಥಕವಾದಂತೆ’ ಎಂಬ ವಾದವನ್ನು ಯಾರಾದರೂ ಹೂಡಬಹುದು. ಆದರೆ ಪುಸ್ತಕಗಳಿದ್ದೂ ಅವು ಹೆಚ್ಚು ಜನರಿಗೆ ಉಪಯೋಗವಾಗದಿದ್ದರೆ ಅಂತಹ ಗ್ರಂಥಾಲಯ ಶವಾಗಾರವಿದ್ದಂತೆ. ಶವಾಗಾರದಲ್ಲಿ ದೇಹಗಳಿರುತ್ತವೆ. ಅವು ಚಲಿಸುವುದಿಲ್ಲ. ಮಾತಾಡುವುದಿಲ್ಲ. ಮಾತಾಡಿದವರಿಗೆ ಪ್ರತಿಕ್ರಿಯಿಸುವುದಿಲ್ಲ. ಕೆಲವೊಮ್ಮೆ ಗ್ರಂಥಾಲಯದಲ್ಲಿ ಕಳುವು ಮಾಡಿದ ವರದಿ ಬರುವುದುಂಟು. ಅದು ಅಪರಾಧ. ಆದರೆ ಪುಸ್ತಕಗಳನ್ನು ಕೇಳುವವರಿಲ್ಲದ ದಿನಗಳಲ್ಲಿ ಅವನ್ನು ಕದ್ದು ಕೊಂಡೊಯ್ಯುವವರೂ ಇದ್ದಾರೆಯೇ ಎಂದು ವಿಸ್ಮಯವಾಗುತ್ತದೆ.

ಯಾಕೆ ಹೀಗೆ? ಗ್ರಂಥಾಲಯಗಳನ್ನು ಓದುಗಸ್ನೇಹಿಯಾಗಿಸದೆ ಯಾಂತ್ರಿಕ ನಿಯಮಗಳಿಂದ ನಿಯಂತ್ರಿಸುತ್ತಿರುವ ವ್ಯವಸ್ಥೆಯ ದೋಷವೇ? ಪುಸ್ತಕವಿದ್ದರೂ ಕೂಡಲೇ ಸಿಗುವಂತೆ ಮಾಡಲಾಗದ ಗ್ರಂಥಾಲಯಗಳ ಸೋಮಾರಿತನವೇ? ಬೇಕಾದ್ದು ಬೇಡಾದ್ದು ತುಂಬಿಕೊಂಡು ಗೋದಾಮು ಆಗಿವೆಯೇ ಅವು? ಪುಸ್ತಕಗಳ ಬಗ್ಗೆ ಕನಿಷ್ಠ ಆಸಕ್ತಿಯಿರದ ಸಿಬ್ಬಂದಿಗಳು ತುಂಬಿಕೊಂಡಿದ್ದಾರೆಯೇ? ಓದಿನ ಹುಚ್ಚುಳ್ಳ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆಯೇ? ಪರ್ಯಾಯ ಗ್ರಂಥಾಲಯಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ಹಾಲಿ ಗ್ರಂಥಾಲಯಗಳು ಅಪ್ರಸ್ತುತ ಆಗುತ್ತಿವೆಯೇ?

ಕೊನೆಯ ಪ್ರಶ್ನೆ ಕೆಲಮಟ್ಟಿಗೆ ನಿಜವಿದೆ. ಸಾಮಾನ್ಯ ಜ್ಞಾನದ ವಿಷಯದಲ್ಲಿ ಕೋಶಗಳಿಂದ ಪಡೆಯಬೇಕಾದ ತಿಳಿವನ್ನು ಅಂತರ್‍ಜಾಲದಲ್ಲಿ ಸುಲಭವಾಗಿ ಪಡೆಯುವ ವ್ಯವಸ್ಥೆ ಈಗಾಗಲೇ ಬಂದುಬಿಟ್ಟಿದೆ. ಯಾವುದಾದರೂ ಘಟನೆಯ ಸ್ಥಳದ ಕೃತಿಯ ಅಥವಾ ವ್ಯಕ್ತಿಯ ಬಗ್ಗೆ ಮಾಹಿತಿ ಬೇಕಾದರೆ, ಗ್ರಂಥಾಲಯಕ್ಕೆ ಹೋಗಿ, ಸಾಲಾಗಿ ಜೋಡಿಸಿರುವ ವಿಶ್ವಕೋಶಗಳನ್ನು ಕಪಾಟಿನಿಂದ ಮೆಲ್ಲಗೆ ಇಳಿಸಿ, ಅವುಗಳ ಮೇಲಿನ ಧೂಳನ್ನು ಕೊಡವಿ, ಪುಟ ತಿರುಗಿಸಿ, ಅಕ್ಷರಾನುಕ್ರಮದಲ್ಲಿ ಸಂಬಂಧಪಟ್ಟ ನಮೂದಿಗೆ ಹೋಗಿ, ಓದಿ ಟಿಪ್ಪಣಿ ಮಾಡಿಕೊಳ್ಳುವ ದಿನಗಳು ಕಡಿಮೆಯಾಗುತ್ತಿವೆ. (ಬ್ರಿಟಾನಿಕಾ ವಿಶ್ವಕೋಶ ಸಂಸ್ಥೆ ಮುದ್ರಣ ನಿಲ್ಲಿಸಿದೆ ಕೂಡ.) ಸರಕ್ಕನೆ ಗೂಗಲ್ ಸರ್ಚಿಗೆ ಹೋಗಿ, ಬೇಕಾದ ಸಂಗತಿಯ ಹೆಸರನ್ನು ಟೈಪುಮಾಡಿ ಬ್ರೌಸಿಸುವರು ಹೆಚ್ಚುತ್ತಿದ್ದಾರೆ. ಇದಕ್ಕೆ ಬೇಕಾದ ಕಂಪ್ಯೂಟರುಗಳೂ ಲೈಬ್ರರಿಗಳಲ್ಲಿವೆ. ಈಗ ಮುದ್ರಿತಕೋಶಗಳು ಮಾಹಿತಿ ಶೋಧಿಸಲು ಅನಿವಾರ್ಯವಲ್ಲ.

ಆದರೆ ಕಾವ್ಯ ಕತೆ ಕಾದಂಬರಿಗಳ ವಿಷಯದಲ್ಲಿ ಹಾಗಲ್ಲ. ಅವನ್ನು ತೆರೆಯ ಮೇಲೆ ಬಹಳ ಹೊತ್ತು ಓದಲಾಗುವುದಿಲ್ಲ. ಮುದ್ರಿತರೂಪವೇ ಹೆಚ್ಚು ಉಚಿತ. ಈಗೀಗ ಅವು ಕೂಡ ವೆಬ್‍ಸೈಟುಗಳಲ್ಲಿ ಸಿಗುತ್ತಿವೆ. ದೂರಪಯಣದಲ್ಲಿ ಕಣ್ಣಿಗೆ ಶ್ರಮಕೊಡದ ಕಿಂಡಲ್ಲು- ಟ್ಯಾಬುಗಳಲ್ಲಿ ದೊಡ್ಡ ಕೃತಿಗಳನ್ನು ಸಹ ಓದಬಹುದು. ಜರೂರಿದ್ದವರು ಡೌನ್‍ಲೋಡ್ ಮಾಡಿಕೊಳ್ಳಬಹುದು. ಕನ್ನಡದಲ್ಲಿ ವಿಶ್ವಕೋಶಗಳು, ಗದುಗಿನ ಭಾರತದಂತಹ ಮಹಾಕಾವ್ಯಗಳು, ನಿಘಂಟುಗಳು, ಸಿಡಿ ರೂಪದಲ್ಲಿ ಲಭ್ಯವಿವೆ. ಸಿಡಿ ವಿಭಾಗವೂ ಗ್ರಂಥಾಲಯಗಳಲ್ಲಿ ಸ್ಥಾಪನೆಯಾಗುತ್ತಿದೆ. ಒಟ್ಟಿನಲ್ಲಿ ತಂತ್ರಜ್ಞಾನವು ಮುದ್ರಿತ ಪುಸ್ತಕಕ್ಕೆ ಹೋಗುವ ಅವಕಾಶಗಳನ್ನು ದಿನೇದಿನೇ ಕ್ಷೀಣಗೊಳಿಸುತ್ತಿದೆ. ಇಷ್ಟಾದರೂ ಎಲ್ಲಕ್ಕೂ ವೆಬ್‍ಸೈಟುಗಳನ್ನು, ಇ-ಪಠ್ಯ, ಇ-ಗ್ರಂಥಾಲಯಗಳನ್ನು ಪೂರ್ತಿ ಅವಲಂಬಿಸಲು ಸಾಧ್ಯವಿಲ್ಲ. ಕಪಾಟಿನಲ್ಲಿ ಪುಸ್ತಕ ಜೋಡಿಸಿಟ್ಟ ಗ್ರಂಥಾಲಯಗಳು ಸದ್ಯಕ್ಕಂತೂ ಅಪ್ರಸ್ತುತವಾಗುವುದಿಲ್ಲ. ಕನ್ನಡದಲ್ಲಿ ಈಗ ಸಾಲಿಯಾನ 8000 ಪುಸ್ತಕ ಅಚ್ಚಾಗುತ್ತಿವೆ. ಖರೀದಿಸುವವರೂ ಹೆಚ್ಚುತ್ತಿದ್ದಾರೆ. ವಿಶ್ವವಿದ್ಯಾಲಯಗಳು, ಸಂಸ್ಕೃತಿ ಇಲಾಖೆ, ಅಕಾಡಮಿಗಳು, ಪುಸ್ತಕ ಪ್ರಾಧಿಕಾರ ರಿಯಾಯಿತಿ ದರದಲ್ಲಿ ಪ್ರಕಟಿಸುವ ಪುಸ್ತಕಗಳು ಖಾಸಗಿ ಗ್ರಂಥಾಲಯ ಸಂಸ್ಕೃತಿಯನ್ನು ಬೆಳೆಸುತ್ತಿವೆ.

ಸಾರ್ವಜನಿಕ ಗ್ರಂಥಾಲಯಗಳಲ್ಲಿ ನಿರ್ವಹಣೆಯದೇ ಸಮಸ್ಯೆ. ಈ ಸಮಸ್ಯೆ ಸಾರ್ವಜನಿಕ ಉಪಯೋಗಕ್ಕಾಗಿ ಹುಟ್ಟಿರುವ ಖಾಸಗಿ ಪುಸ್ತಕ ಸಂಗ್ರಾಹಕರಲ್ಲೂ ಇದೆ. ಪಾಂಡವಪುರದ ಅಂಕೇಗೌಡರರು ನೂರಾರು ಮೂಲದಿಂದ ಗ್ರಂಥ ಸಂಗ್ರಹ ಮಾಡಿದ್ದಾರೆ. ಗಂಡ-ಹೆಂಡತಿ ಅದರ ನಿರ್ವಹಣೆಗಾಗಿ ತೆತ್ತುಕೊಂಡಿದ್ದಾರೆ. ಆದರೆ ಅಲ್ಲಿಗೆ ಬಹಳ ಓದುಗರು ಬರುತ್ತಿಲ್ಲ. ಅಂಕೆಯಿಲ್ಲದೆ ಬಿದ್ದಿರುವ ಅಲ್ಲಿನ ಪುಸ್ತಕ ರಾಶಿಯಲ್ಲಿ ಬೇಕಾದ ಕೃತಿ ಹುಡುಕುವುದು ಬಣವೆಯಲ್ಲಿ ಸೂಜಿ ಹುಡುಕಿದಂತೆ. ಅಂಕೇಗೌಡರಿಗೆ ಪುಸ್ತಕ ತಂದು ಗೊತ್ತು. ಉಪಯೋಗವಾಗುವಂತೆ ಕೊಡುವುದು ಗೊತ್ತಿಲ್ಲ.

ಇದಕ್ಕೆ ಹೋಲಿಸಿದರೆ ಕ್ಷೇತ್ರ ಅಥವಾ ವಿಷಯಾಧರಿತ ಗ್ರಂಥಾಲಯಗಳ ಕಲ್ಪನೆ ಉಪಯುಕ್ತ. ಅಲ್ಲಿ ಪುಸ್ತಕಗಳ ಸಂಖ್ಯೆಗೆ ಮಹತ್ವ ಇರುವುದಿಲ್ಲ. ಮುಂಬೈನ ನಾರಿಮನ್ ಪಾಯಿಂಟಿನಲ್ಲಿರುವ ಪ್ರದರ್ಶನ ಕಲೆಗಳ ಗ್ರಂಥಾಲಯ, ಪುಣೆಯ ಫಿಲ್ಮ್ ಆರ್ಕೈವ್ಸ್ ನ ಗ್ರಂಥಾಲಯಗಳು ಬೃಹತ್ತಾಗಿಲ್ಲ. ಇವು ನಿರ್ದಿಷ್ಟ ಕ್ಷೇತ್ರಕ್ಕೆ ತಮ್ಮನ್ನು ಮಿತಿಗೊಳಿಸಿಕೊಂಡಿರುವವು. ಆದರೆ ಅಲ್ಲಿ ಪ್ರತಿಪುಸ್ತಕವೂ ಬಳಕೆಯಾಗುತ್ತಿದೆ. ಹಿರಿಯ ಲೇಖಕರ ಹೆಸರಲ್ಲಿ ಅಥವಾ ಹೆಸರಾಂತ ಸಂಸ್ಥೆಗಳ ಹೆಸರಲ್ಲಿ ಕೆಲವು ಗ್ರಂಥಾಲಯಗಳಿವೆ. ಅಚ್ಚುಕಟ್ಟುತನವಿದೆ. ಪುಸ್ತಕ ಖರೀದಿಗೆ ತಕ್ಕ ಸಂಪನ್ಮೂಲವಿದೆ. ಆದರೆ ಪುಸ್ತಕ ತರಿಸುವ ವಿಷಯದಲ್ಲಿ ತೆರೆದ ಮನಸ್ಸಿಲ್ಲ. ಯಾವುದೊ ಸಿದ್ಧಾಂತಕ್ಕೆ ಬದ್ಧವಾದ ಕೃತಿಗಳನಷ್ಟೆ ಇಟ್ಟುಕೊಂಡು ಅವು ಕುಬ್ಜವಾಗಿವೆ. ವಾಸಿಯಾಗದ ರೋಗಿಗಳಿರುವ ವಾರ್ಡುಗಳ ಹಾಗೆ ಅವು ಕಾಣುತ್ತವೆ.

ಪುಸ್ತಕ ರಚನೆ, ಪ್ರಕಾಶನ, ವಿತರಣೆ ಹಾಗೂ ಸಂಗ್ರಹಗಳ ತರ್ಕದ ತುದಿಯಲ್ಲಿ, ಅವು ಎಲ್ಲಿಗೆ ಹೋಗುತ್ತವೆ, ಯಾರು ಓದುತ್ತಾರೆ, ಎಷ್ಟು ಮಂದಿ ಓದುತ್ತಾರೆ ಎನ್ನುವ ಪ್ರಶ್ನೆಗಳೂ ಮುಖ್ಯವಾದವು. ಗ್ರಂಥಾಲಯಗಳಲ್ಲಿ ಪುಸ್ತಕ ತುಳುಕುತ್ತಿದ್ದರೆ ಅಥವಾ ಜನ ಅವನ್ನು ಓದುತ್ತಿದ್ದರೆ, ಅವು ಎಂಥ ಪುಸ್ತಕಗಳು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು. ನಮ್ಮ ಗ್ರಂಥಾಲಯಗಳಲ್ಲಿ ಯಾವ ಬಗೆಯ ಪುಸ್ತಕಗಳನ್ನು ತುಂಬಿಸಲಾಗಿದೆ ಎಂದು ಸಮನಾದ ಬುದ್ಧಿಯುಳ್ಳ ಯಾರಾದರೂ ತಪಾಸಣೆ ಮಾಡಿದರೆ ಆಘಾತಕರ ಫಲಿತಗಳು ಸಿಕ್ಕಿಯಾವು.

ಒಂದು ನಾಡಿನ ಸಾಂಸ್ಕøತಿಕ ಹದುಳವನ್ನು ಪರೀಕ್ಷಿಸಲು ಅಲ್ಲಿರುವ ಗ್ರಂಥಾಲಯಗಳೂ ಮಾನದಂಡ. ಅವು ಬಿಕೊ ಎನಿಸಿದರೂ ಪರವಾಗಿಲ್ಲ, ಲೋಕದ ಹದುಳ ಕದಡುವ ಪುಸ್ತಕಗಳಿಂದ ಕೂಡಿರಬಾರದು. ಪುಸ್ತಕಗಳು ಓದುಗರ ಸಂವೇದನೆಯನ್ನು ಸೂಕ್ಷ್ಮಗೊಳಿಸಬೇಕು, ಬದುಕಿನ ಪ್ರೀತಿಯನ್ನು ಹೆಚ್ಚಿಸಬೇಕು, ಪ್ರಶ್ನೆಗಳನ್ನು ಹುಟ್ಟಿಸಬೇಕು, ಆದರೆ ಮನುಷ್ಯತ್ವವನ್ನು ಸಾಯಿಸಬಾರದು. ಯಾಕೆಂದರೆ ಮನುಷ್ಯತ್ವವನ್ನೇ ಮುಕ್ಕುಮಾಡುವಂತಹ ಪುಸ್ತಕಗಳೂ ಪ್ರಕಟವಾಗಿವೆ. ಮಾರುಕಟ್ಟೆಯಲ್ಲಿಯೂ ಲಭ್ಯವಿವೆ.

ಬೆಂಗಳೂರಿನ ಕೆಂಪೇಗೌಡ ಬಸ್ಸುನಿಲ್ದಾಣಕ್ಕೆ ಪ್ರವೇಶಿಸುವ ಸುರಂಗಮಾರ್ಗದಲ್ಲಿ ಈಚೆಗೆ ಬರುವಾಗ ನೋಡಿದೆ. ಆಟಿಗೆ ಮಾರುವವನೂ ಕನ್ನಡ ಪುಸ್ತಕಗಳನ್ನು ಇರಿಸಿಕೊಂಡಿದ್ದ. ರೋಮಾಂಚನಗೊಂಡು ನೋಡಿದೆ. ಪ್ರಸಿದ್ದರು ರೋಚಕವಾಗಿ ಬರೆದ ಮನಸ್ಸನ್ನು ಕೆಡಿಸುವ ಹೊತ್ತಗೆಗಳು. ಹಾಗೆಂದು ನಾನು ನಿರಾಶಾವಾದಿಯಲ್ಲ. ಭವಿಷ್ಯದಲ್ಲಿ ನಂಬಿಕೆಯುಳ್ಳವ, ಅನಾಥ ಗ್ರಂಥಾಲಯದಲ್ಲಿದ್ದ ಪ್ರೇಮಿಗಳ ಜೀವಂತಿಕೆಯ ಹಾಗೆ.

‍ಲೇಖಕರು Avadhi GK

January 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: